Poem

ಅವಳು ಸೋತು ನಿಂತಿದ್ದಾಳೆ....

ಅವಳು ಸೋತು ನಿಂತಿದ್ದಾಳೆ
ಹುಟ್ಟಿ ಹರಿದು ಕೊನೆಗೆ ಕಡಲು ಸೇರುವ ನದಿ
ಅಖಂಡ ಗರ್ಭ ಬಗೆದರೂ ಭೇದಿಸದ
ಉತ್ಕಟ ರಹಸ್ಯದೆದುರಲ್ಲಿ ಮಂಡಿಯೂರಿ....!
ತುಂಟತನಕೆರಗುವ ಕಡಲಲೆಯಂತಲ್ಲ..
ಕಂಬನಿಯ ಒಟ್ಟು ಕ್ರೋಢೀಕೃತ ಮೊತ್ತ..!!

ಅವನು ಅವಳನ್ನೇಕೆ ಪ್ರೇಮಿಸಿದ..?
ಕಾಡುವ ಕಡುಕ್ರೂರಿ ಪ್ರಶ್ನೆಗಳ
ಸರಪಳಿಯ ಬಿಗಿದು ಉಸಿರುಕಟ್ಟಿ
ಅಪ್ಪಟ ಭಗ್ನ ಪ್ರೇಮಿಯ ತೆರನೆ
ಸದ್ದಿಲ್ಲ, ಮೌನ ಬ್ರಹ್ಮಾಂಡವ ಸೇರಿ
ಆತ್ಮ ಜೀವಗಳೆರಡಕೂ ದೊರಕದ
ಉಪಶಮನ ಕೋರಿ ತಡಕಾಡಿ..!

ಶಾಕುಂತಲೆಯಂದು ಪ್ರೇಮಿಸಿ
ರಮಿಸಿ ತನ್ನದೇನು ಉಳಿಸದೆ
ಎಲ್ಲವನರ್ಪಿಸಿ, ಗಾಂಧರ್ವದಲಿ ವರಿಸಿ
ಪಡೆದ ಒಲವ ಮಾಣಿಕ್ಯವ
ತನ್ನದಲ್ಲವೆಂದಾಗ, ಅನಾಮಿಕಳಂತೆ ಕಂಡಾಗ..,
ಅವಳನು ಖಂಡಿಸಿ, ತಿರಸ್ಕರಿಸಿದಾಗಿತ್ತಲ್ಲ ಅದೇ
ನೋವಿದ್ದಿರಬೇಕು ಇದುವೂ...!

ರಾಕ್ಷಸ ಕನ್ನೆ ದಶಕಂಠನ ಮನದನ್ನೆ
ರೂಪ ಲಾವಣ್ಯದಲಿ ದೇವತೆಗೆ ಸಾಟಿ..
ನಿತ್ಯನೂತನ ಒಲವ ಸಂಜೆಯ ತಂತಿ ಮೀಟಿ..!!
ಲಂಕಾಧೀಶ ನಿದ್ದೆಗೆಟ್ಟು,ಲಜ್ಜೆಗೆಟ್ಟು
ಹಗಲಿರಳು ಅಶೋಕವನಕೆ‌
ವರಿಸೆಂದು ಪೀಡಿಸುತ ಪರಿತಪಿಸಿ
ಅನ್ಯಳಾರಿಗೋ ವ್ಯಾಕುಲಿಸಿ
ಸೀತೆಯೆಂಬ ಕಿಚ್ಚು ತಾಗಿ
ಲಂಕೆಯೇ ಸುಟ್ಟು ದಹನವಾದ
ಸಂಕಟವಿರಬಹುದೇ ಇದುವೂ...!?

ಅದಕ್ಕಿಂತ ಮೇಲಿನದೇನೋ..!
ಇತಿಹಾಸದಲಿ ಗತವಾದ ವ್ಯಥೆ..!
ಹುಡುಕಾಟದಲೂ ಅರಳದ ಕಥೆ
ಖಡ್ಗದ ಮೊನೆ ಎದೆ ಸೀಳಿದಷ್ಟು
ಕೆಂಡಕೆಂಪಲಿ ಓಕುಳಿಯಾಡಿದಷ್ಟು..!?
ಯಮಯಾತನೆಯೇ ಸರಿ..!
ಉಹುಂ! ಅದಕ್ಕೂ ಮೀರಿದ್ದೇನೋ ನೋವು..!
ನರ ನಾಡಿಗಳೆಳೆದು ರಕ್ತ ಬಸಿದಷ್ಟು
ಖಂಡ ಖಂಡವ ತುಂಡರಿಸಿದಷ್ಟು..!?

ಅರ್ಚನಾ ಎಚ್ ಬೆಂಗಳೂರು

ಅರ್ಚನಾ ಎಚ್

ಕ‌ವಯತ್ರಿ ಅರ್ಚನಾ ಎಚ್.‌ ಅವರು ಮೂಲತಃ  ಬೆಂಗಳೂರಿನವರು. ಎಂಸಿಎ ಪದವಿ ಪಡೆದಿದ್ದಾರೆ. ಕಥೆ, ಕವನಗಳನ್ನು ರಚಿಸಿರುವ ಇವರು,  "ಬಾಳ ಬಾನ ಚಂದಿರ" ಕೃತಿಯನ್ನು ಹೊರತಂದಿದ್ದು,  ಅವರ ಮೊದಲ ಕವನ ಸಂಕಲನವಾಗಿದೆ. 

ಪ್ರೇಮಕವಿ ಕೆ.ಎಸ್.ನ ಕಾವ್ಯ ಪುರಸ್ಕಾರ",  ಶುದ್ಧ ಬರಹ ಪ್ರಶಸ್ತಿ ", ಸಿರಿಗನ್ನಡ ಸೌರಭ ಪ್ರಶಸ್ತಿ,  
ಕನ್ನಡ ರಾಜ್ಯೋತ್ಸವ ಹಾಗೂ ದಸರಾ ಕಾವ್ಯ ಪುರಸ್ಕಾರ " ಲಭಿಸಿವೆ.

More About Author