ಅನ್ನಯಿಕ್ಕಿದವರದೆಯ ಮನೆಯ ಸೂರು
ಹೆಬ್ಬೆಟ್ಟಿನ ಮಂದಿಯ ಅಕ್ಷರ ತೇರು
ಹರಿವ ನೀರು ದೀಪದ ಸಾಲು
ಯಂತ್ರ ತಂತ್ರಗಳ ಸದ್ದಲ್ಲು
ನಾಲ್ವಡಿಯೆಂಬ ನಲುಮೆಯ ನಾದವು
ಸಿಂಹಾಸನದ ಹಂಗನು ತೊರೆದ ಸಮತೆಯ ಸಂತ
ಓಣಿ ಬದಿಯಲ್ಲಿ ಆಳುವ ಮಾನಿನಿಯರ
ಕಂಡು ಕರಗಿ ನಿಂತ ಸಂತ
ಬಹುತ್ವದ ದೃಷ್ಟಿಯ ಸೃಜನಶೀಲತೆಯ ಸ್ವಪ್ನಗಾರ
ದೊರೆತನಕ್ಕೊಂದು ಅಳಿಯದ ಕಿರೀಟವ ತಂದ
ಬಾಪೂಜಿಯ ಗೆಣೆಕಾರ
ಕವಿಯ ಕಾವ್ಯಕ್ಕೆ ಕಲೆಯ ನಾಟ್ಯಕೆ
ರಂಗವ ಕಟ್ಟಿದ ಶ್ರೀ ಗಂಧದ ತವರಿನ ಮಹಾತೇಜ
ಸರಿಯೋ ಕಾಲದ ಹಾಡಿನ ಜಾಡಲ್ಲಿ ಮರೆಯದೆ
ಪಲ್ಲವಿಸೋ ಪದಗಳಲ್ಲಿ ನೆಲೆನಿಂತ
ಬರೆವ ಕಾಗದ ತೊಡುವ ಕನಕ
ನೊಂದು ರಸವಾದ ಕಬ್ಬಿನ ಭಾವ
ಚಾಮುಂಡಾಂಬೆಯ ಕೃಪೆಯ ಬೆಳಗಿನ
ಮಣ್ಣಿನ ಫಲದ ಮಮತೆಯ ತೆನೆಯ ಅನ್ನದೇವ
ನಮೋ ನಮಃ
- ದೊ.ಚಿ.ಗೌಡ ರೈತಕವಿ
ವಿಡಿಯೋ
ವಿಡಿಯೋ
ದೊ.ಚಿ ಗೌಡ
ರೈತಕವಿ ದೊ.ಚಿ ಗೌಡ ಅವರು ಮೂಲತಃ ಮದ್ದೂರು ತಾಲ್ಲೂಕಿನ ಮಂಡ್ಯ ಜಿಲ್ಲೆಯವರು. ಅವರ ಅನೇಕ ಕವನಗಳು ನಿಯತಕಾಲಿಕೆಗಳಲ್ಲಿ, ವಿಶೇಷ ಸಂಚಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ. ಧಾರವಾಹಿಯ ಶೀರ್ಷಿಕೆಗೀತೆ ಮತ್ತು ಸಿನಿಮಾಗಿತೇಗಳ ರಚನೆಯಲ್ಲಿಯೂ ತೊಡಗಿಕೊಂಡಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿಯೂ ಭಾಗವಹಿಸಿರುತ್ತಾರೆ. ಕುವೆಂಪುಶ್ರೀ, ಕುವೆಂಪು ಸಾಹಿತ್ಯ ರತ್ನ, ಸಾಹಿತ್ಯ ಸಿಂಧು ಸೇರಿದಂತೆ ಹಲವಾರು ಗೌರವ ಪುರಸ್ಕಾರಗಳು ಸಂದಿರುತ್ತದೆ.