ಪ್ರಸಾದ ಅವರು ಅಸೋಡು ಕುಂದಾಪುರ ತಾಲೂಕಿನವರು. ಓದು, ಪುಸ್ತಕಗಳ ವಿಮರ್ಶೆ ಸೇರಿದಂತೆ ಕತೆ ಬರೆಯುದು ಇವರ ಹವ್ಯಾಸವಾಗಿದೆ. ಪ್ರಸ್ತುತ ಅವರ "ಅಂಚು" ಕತೆ ನಿಮ್ಮ ಓದಿಗಾಗಿ...
ಇಸ್ರೋದವರ ಪ್ರಕಾರ ಆವತ್ತು ಬಂದಿದ್ದು ಸಾಧಾರಣವಾಗಿ ಪ್ರತಿಸಲ ಬರುವಂತಹ ಅಂತ ವಿಶ್ವದ ರೇಡಿಯೊ ಸಿಗ್ನಲಾಗಿರಲಿಲ್ಲ. ಇದು ಮಾತ್ರ ಒಂದಿಷ್ಟು ಡಿಸೈಪ್ ಅಥವಾ ಒಡೆದು ನೋಡುವಂತಹ ಸಿಗ್ನಲಾಗಿತ್ತು. ಆದರೊಂದು ಸಮಸ್ಯೆಯೇನೆಂದರೆ ಅದನ್ನು ಒಡೆದು ನೋಡುವ, ಅರ್ಥೈಸಿಕೊಳ್ಳುವ, ಓದುವ ಭಾಷೆ ನಮ್ಮ ಪ್ರಥ್ವಿಯ ಅಸ್ತಿತ್ವದಲ್ಲಿರಲೇ ಇಲ್ಲ. ಒಂದು ಲೆಕ್ಕದಲ್ಲಿ ಮಾನವನ ಯೋಚನೆ ಮತ್ತು ಅರಿತ ವಿಜ್ಞಾನಕ್ಕೆ ಮೀರಿದ ವಿಷಯವಾಗಿದ್ದರಿಂದ ಹೊರಗೆಲ್ಲು ತಿಳಿಯದಿದ್ದರು ನಾಸಾ ಮತ್ತು ಸ್ಪೇಸ್ ಎಕ್ಸ್ ಸಂಸ್ಥೆಗಳು ಅದನ್ನ ಅರ್ಥ ಮಾಡಿಕೊಳ್ಳುವ ಪರಿಗೆ ಹುಡುಕಾಟ ನಡೆಸುತ್ತಿದ್ದವು. ಆದರೆ ಪ್ರತಿಸಲದ ಪ್ರಯತ್ನದ ಫಲ ಶೂನ್ಯವಾಗಿತ್ತು. ನುರಿತ ವಿಜ್ಞಾನಿಗಳು ಯಾವುದೋ ವಸ್ತು ಬೆಳಕಿನವರ್ಷದ ವೇಗದಲ್ಲಿ ಚಲಿಸುತ್ತಾ ಇದೆ ಅನ್ನೋದು ಸಿಗ್ನಲನ್ನು ಹಿಡಿದ 'ಯುನಿರೀಡರ್ ಸ್ಕೋಪ್' ನ ವೇಗದ ಪಟ್ಟಿಯಲ್ಲಿದ್ದ ಅಂಕೆಸಂಖ್ಯೆಗಳಿಂದ ಊಹಿಸಿದ್ದರು. ಆದರೇನು ಮಾಡೋದು ನಮಗೆ 'ಏನು ಗೊತ್ತಿಲ್ಲನ್ನೋದೆ ಗೊತ್ತಿಲ್ಲದಿರುವ ಮೂರನೇ ಆಲೋಚನೆ ಎಲ್ಲರ ಮೈಯನ್ನು ನಡುಗಿಸುತಿತ್ತು. ಅದು ಸಹ ಈಗ ಅನುಭವಕ್ಕೆ ಬರುತ್ತಿರೋದು ಭಯವನ್ನು ಇನ್ನಷ್ಟು ಜಾಸ್ತಿಯೇ ಮಾಡುತ್ತಿತ್ತು. ಭಯ ಅನ್ನೋದು ಒಂದು ವಿಚಿತ್ರ ಅನುಭವ ಕ. ಒಮ್ಮೊಮ್ಮೆ ಎಚ್ಚರಿಕೆ ನೀಡಿದರೆ ಕೆಲವೊಮ್ಮೆ ಅನ್ವೇಷಣೆ ಮಾಡೋ ಹುಚ್ಚು ಹಿಡಿಸುತ್ತದೆ.
ಇವತ್ತು ಕುಂದಾಪುರದಲ್ಲಿ ಹುಚ್ಚು ಮಳೆ. ಸಾಧರಣವಾಗಿ ಬಂದು-ಬಂದು ಹೋಗುತ್ತಿದ್ದ ಮಳೆ ನಿನ್ನೆಯಿಂದ ಹುಚ್ಚು ಹಿಡಿದವರ ಹಾಗೆ ಪುರುಸೊತ್ತು ಕೊಡದೆ ಬಂದೂ-ಬಂದೂ ಬಡಿಯುತಿತ್ತು. ಬೈಂದೂರು ಹೊಳೆಯಲ್ಲಿ ನೀರು ತುಂಬಿ ನೆರೆ ಬರುವ ಎಲ್ಲಾ ಸನ್ನಿವೇಶಗಳು ಎದುರಾಗಿದ್ದವು. ಅದಕ್ಕಾಗಿನೆ ಜಿಲ್ಲಾಧಿಕಾರಿ ಹೊಳೆ ಮತ್ತು ಸಮುದ್ರಕ್ಕೆ ಮೀನು ಹಿಡಿಯಲು ಇಳಿಯಬಾರದೆಂದು ನಿಯಮ ಜಾರಿ ಮಾಡಿದ್ದ. ಈಗ ಮಳೆ ಗಂಟೆ ರಾತ್ರಿ ೧೧ರ ಹೊತ್ತಿಗೆ ಸ್ವಲ್ಪ ಬಿಡುವು ಕೊಟ್ಟಿದೆಯಲ್ಲವ ಅದಕ್ಕೆ ಅಂತಾನೆ ಶಂಕರ ಮಗೇರ ಬಲೆ ಹಿಡಿದು ರಾತ್ರಿ ಮೀನು ಶಿಕಾರಿಗೆ ಹೊರಟ. ರಾತ್ರಿ ಚಂದ್ರನ ಬೆಳಕಿಗೆ ಹೊಳೆಯಡಿಯಿರುವ ಮೀನುಗಳು ಆಹಾರನ್ವೇಷಣೆಗೋಸ್ಕರ ಮೇಲೆ ಬರುತ್ತದೆ ಅನ್ನೋ ಯೋಚನೆಯಿಂದ, ನಾಲ್ಕು ಅಥವಾ ಐದು ಜನ ಕೂರುವಂತಹ, ಕೆಲವೊಮ್ಮೆ ಬೆಳಗಿನ ಜಾವ ಮರಳು ಕದಿಯಲು ಸೂಕ್ತವಾಗುವಂತಹ ದೋಣಿಯದು. ಶಂಕರ ತಲೆಗೆ ಒಂದು ರುಮಾಲು ಸುತ್ತಿಕೊಂಡು ಎಲೆ ಅಡಿಕೆ ಜಗಿಯುತ್ತ ಹುಟ್ಟು ಹಾಕುತ್ತ ಹೊಳೆಗೆ ಇಳಿದ. ಚಳಿ ಜೋರಾಗಿನೆ ಇದೆ ಆದರೆ ಇವನಿಗೆ ಅದು ಅಭ್ಯಾಸವಾಗಿದೆ. ಹೊಳೆಯ ಮೇಲೆ ಬಿಸಿ ಗಾಳಿ ಬೀಸುತ್ತಿದೆ ಆದರೆ ಚಳಿಯ ಎದುರು ಅದರ ಶಕ್ತಿ ಕುಂದಿ ಚಳಿಯೇ ಮೇಲುಗೈ ಸಾಧಿಸುತ್ತಿದೆ ಪರೀಕ್ಷಾ ಫಲಿತಾಂಶದಲ್ಲಿ ಮಹಿಳೆಯರದೆ ಮೇಲುಗೈ ಅನ್ನೋ ಹಾಗೆ.
ಹುಟ್ಟುಹಾಕುತ್ತ ಹೊಳೆ ಆಳವಾಗಿದ್ದ ಕಡೆ ಬಂದು ನಿಲ್ಲುತ್ತಾನೆ ಶಂಕರ. ದೋಣಿ ಆಕಡೆ ಈಕಡೆ ವಾಲಾಡುತ್ತಿದ್ದರೆ ಇವನು ಅದಕ್ಕೆ ಹೊಂದಿಕೊಂಡು ಕಾಲನ್ನು ಎರಡು ಕಡೆ ಸರಿಸಿ ಗಟ್ಟಿಯಾಗಿ
ಉರುಹಾಕಿ ನಿಂತು ಬಲೆ ಬಿಡಿಸಿ ಎಸೆದ. ಚಳಿ ಗಾಳಿಗೆ ಒಮ್ಮೆ ನಗ್ನ ಬೆನ್ನನು ಒಡ್ಡಿ ಮಳೆಬರುವ ಸೂಚನೆ ಮತ್ತು ಚಂದ್ರ ಕಾಣುತ್ತಾನಾ ಅಂತ ಮೇಲೆನೋಡಿ ಬರಿ ಅಂಧಕಾರ ಕಂಡು "ಇವತ್ ಚಳಿ ಚೂರ್ ಜಾಸ್ತಿಯಿದ್ದಂಗೆ ಇತ್ತೆ' ಅಂದು ಗೋಣಗುತ್ತ ತಲೆಗೆ ಸುತ್ತಿದ್ದ ರುಮಾಲೆಯನ್ನು ಬಿಡಿಸಿ ಮಯಿಗೆ ಸುತ್ತಿಕೊಂಡು ಬಲೆಗೆ ಕಟ್ಟಿದ ಹಗ್ಗ ಗಟ್ಟಿ ಕೂತಿದೆಯ ಅಂತ ಪರೀಕ್ಷಿಸಿ ಬೀಡಿ ಹಚ್ಚಿ, ಅರಶಿನ ಶಾಸ್ತ್ರಕ್ಕೆ ಹೆಂಗಸರು ಕೂರುವಂತೆ ಮುಂಗಾಲು ಗೆಂಟನ್ನು ಎದೆಗೆ ಒತ್ತಿ ಹಿಡಿದು ಕೂತ, ತಲೆಯ ಮೇಲೆ ಕಣ್ಣು ಹಾಯಿಸಿದಷ್ಟೂ ಕತ್ತಲು, ಕೆಳಗೆ ನೀಲಿ ಬೆಳಕ ಹೊಳೆನೀರಲ್ಲಿ ಏನಾದರೂ ಸಿಗುತ್ತೆ ಅನ್ನುವ ಆಸೆಯ ನಡುವೆ ದರಿದ್ರ ಮೋಡ ಮುಸುಕಿ ನಕ್ಷತ್ರ ಸಹ ಕಾಯ್ತಾ ಇಲ್ಲ ಅಂತ ಬಯ್ದುಕೊಳ್ಳುತ್ತ ಕೂತಿರುವ ಶಂಕರ, ಅಪ್ಪನ ಜೊತೆ ಹೊಳೆಗೆ ಬಲೆ ಹಾಕಲು ಹೋದಾಗ ಮೋಡ ಮುಸುಕಿದ ಕತ್ತಲಲ್ಲಿ ಮೀನು ಹಿಡಿದ ಅನುಭವವಿರೋದರಿಂದ ಕತ್ತಲು ಮೋಡದಿಂದ ಆಗಿರೋದಲ್ಲ ಅನ್ನುವ ಒಂದು ಅನುಮಾನ ಸಹ ಅವನಿಗೆ ಬರದು. ಈಗ ಹೆಂಡತಿ ಮಕ್ಕಳ ಜೊತೆ ಸಂಸಾರ ನಡೆಸುತ್ತಾ ಹುಟ್ಟು ಹಾಕುತ್ತಿದ್ದಾನೆ. ಕಣ್ಣಂಚಿನ ದೂರದಲ್ಲಿ ನದಿಯ ದಡದಲ್ಲಿ ಮನೆಯೊಳಗೆ ಉರಿಯುತ್ತಿದ್ದ ಚಿಕ್ಕಬೆಳಕೆನ್ನುವ ಛಾಯೆ ನಾವು ನಿನಗಾಗಿಯೇ ಕಾಯುತ್ತಿದ್ದೇವೆ ಅನ್ನೋದನ್ನ ಅವನಿಗೆ ಪ್ರತಿಸಾರಿ ನೋಡಿದಾಗಲು ಹೇಳುತ್ತಿತ್ತು. ಸಮಯ ಸಾಗುತ್ತಿದೆ. ಕತ್ತಲು ಮತ್ತಷ್ಟು ಕಪ್ಪಾಗುತ್ತಿದೆ. ಎದೆ ಭಾರವಾಗುತ್ತಿದೆ. ಎಲ್ಲೋ ಒಂದು ಕಡೆ ಮಳೆ ಬಂದರೆ ಅಂತ ಭಯವೇಳುತ್ತಿದೆ. ಆಯ್ತು ಇನ್ನೇನು ಕೆಲವೇ ಕ್ಷಣಗಳಲಿ ಬಲೆಯೆತ್ತಬೇಕು. ಅದೃಷ್ಟ ಪರೀಕ್ಷೆಯ ಫಲ ನೋಡಬೇಕು. ನಾಳೆ ಆದರೆ ಒಮ್ಮೆಊರಕಡೆ ಹೋಗಿ ಬಂದ ಬೆಲೆಗೆ ಮೀನು ಕೊಟ್ಟು ಮಗನ ಶಾಲೆಗೆ ಪೀಸು ಕಟ್ಟಬೇಕು. ನೀಲಿ ಬಣ್ಣದ ಬೆಳಕು ಇನ್ನಷ್ಟು ಗಾಡ ನೀಲಿಯಾಗಿ ಮಳೆಯೇ ಅಥವಾ ಚಂದ್ರನೇ ಅನ್ನೋ ಅನುಮಾನ ಹುಟ್ಟಿಸುತ್ತಿದೆ. ಮುಚ್ಚಿ ಹಾಕಿರೋ ಆಸೆ ಸಾವಿರವಿದೆ. ಹಸಿವು ಮತ್ತು ಪರಿಸ್ಥಿತಿ ಆಸೆಗೆ ತಣ್ಣೀರ ಎರಚುತ್ತಿದೆ. ಕೈ ನಡಗುತ್ತಿದೆ, ಉಸಿರು ಭಿಗಿಯಾಗುತ್ತಿದೆ. ದೋಣಿಗೆ ಕಟ್ಟಿದ ಬಲೆ ಬಿಚ್ಚುತ್ತಿದ್ದಾನೆ. ಬಲೆ ಭಾರವಾಗಿದೆ ಮೀನು ಬಿದ್ದಿರಬೇಕು! ಉಸಿರು ಗಟ್ಟಿ ಹಿಡಿದು ಬಲೆ ಎತ್ತುತ್ತಾನೆ. ಒಂದೊಂದೆ ಬಲೆಯ ಕಣ್ಣುಗಳು ನಾಳಿನ ಭವಿಷ್ಯವನ್ನು ನಿರ್ಧಾರ ಮಾಡುತ್ತಿವೆ. ಕಾಣುತ್ತಿದೆ ಮೀನುಗಳು ಆಕಡೆ ಈಕಡೆ ಜೀವ ಉಳಿಸಿಕೊಳ್ಳಲು ಓಡಾಡುತ್ತಿರೋದು. ಬಂತು ಇನ್ನೇನು ಮೇಲೆ ಬಂತು ಬಲೆಯೆನ್ನಬೇಕು 'ಛಟೀಲ್!' ಅಂತ ಶಬ್ದ ಹಿಂದೆಯೇ ಬಂದು ಬಡಿಯಿತು. ಕೈಯಲ್ಲಿ ಇದ್ದ ಬಲೆ ಜಾರಿತು ಸೀದಾ ಹೊಳೆಯೊಳಗೆ ಸ್ಮಶಾನವಾಗಿ.
ಹಿಂದಿನಿಂದ ಸಿಡಿಲು ಹೊಡೆದ ಕಡೆ ಬೆನ್ನು ಸಂಪೂರ್ಣವಾಗಿ ವದ್ದೆಯಾಗಿದೆ. ನೀರು ದೈತ್ಯ ದೆವ್ವದ ಆಕಾರದಲ್ಲಿ ಮೇಲೆದ್ದು ಇವನ ಮೇಲೆ ಬಿದ್ದಿದೆ. ದೋಣಿಯಲ್ಲಿ ಅರ್ಧಕ್ಕೆ ನೀರೇ ತುಂಬಿದೆ. ಶಂಕರನ ಕೈ ಸೋತಿದೆ. ಕಾಲು ನಿಶ್ಚಲವಾಗಿದೆ. ಕಣ್ಣು ಮನೆಕಡೆ ತಿರುಗಿದೆ. ಮನೆಯ ಬೆಳಕಿನಲ್ಲಿ ಜೀವವಿದೆ ಆದರೆ ಶಂಕರನ ದೇಹದಲ್ಲಲ್ಲ, ದೋಣಿ ವಾಲಿ ಒಂದು ಕಡೆಯಿಂದ ಮುಳುಗುತ್ತ ಬರುತ್ತಿದೆ. ಇನ್ನೊಂದು ತುದಿಯಲ್ಲಿ ಶಂಕರ ದಿಕ್ಕು ತೋಚದವನ ಹಾಗೆ ಕೂತಿದ್ದಾನೆ. "ಅಗೋ! ಜೋರಾದ ಗಾಳಿ ಮೈಗೆ ಸುತ್ತಿಕೊಂಡ ರುಮಾಲನ್ನು ಕಿತ್ತೆಸಿದಿದೆ. ಕಣ್ಣಲ್ಲಿ ನೀರು ಜಿನುಗಿ ಹೊರಬಂದು ಗಾಳಿಗೆ ಮೇಲೆಯೇ ಹಾರುತ್ತಿದೆ. ಇದೇನಿದು ಬೆಳಕು ಸೂರ್ಯ ಉದಯಿಸಿದ ಹಾಗೆ, ಯಾಕೆ ಕತ್ತಲು ಮರೆಯಾಗುತ್ತಿದೆ, ಇಷ್ಟು ಬೇಗ ಬೆಳಗಾಯಿತ? ಸಾಧ್ಯಾನೆ ಇಲ್ಲ. ಮುಳುಗುತ್ತಿದೆ ಒಂದು ಕಡೆ ದೋಣಿ, ಇನ್ನೊಂದು ಕಡೆಯಲ್ಲಿ ಕಂಡ ಆಸೆ ಕನಸುಗಳು. ದಡದಲ್ಲಿ ಹೆಂಡತಿ ಮಕ್ಕಳು ಏನು ಮಾಡುತ್ತಿದ್ದಾರೆ. ಇದೇನಿದು ಜೀವ ಸಂಚಾರವಾದ ಅನುಭವ. ಅವರ್ಯಾಕೆ ದಡಕ್ಕೆ ಬಂದರು? ಬೇಡ ಬೇಡ ಬರದಿರಿ. ಇಲ್ಲೆನೋ ಆಗುತ್ತಿದೆ. ಮಗ ಹೆದರಬಹುದು?” ಎಂದೆಲ್ಲಾ ಮನದೊಳಗೆ ಓಡಿದ ಶಂಕರನಿಗೆ ಕಣ್ಣು ಮುಚ್ಚಿದ್ದೇ ಕೊನೆ ನೆನಪು. ಕಣ್ಣು ತೆರೆದಾಗ ಶಂಕರನಿಗೆ ಕಾಣಿಸಿತು ಎದುರಿದ್ದ ದೋಣಿ ಮತ್ತದೇ ಹೊಳೆ, ಚಳಿಯಿಲ್ಲ ಆದರೆ ಗಾಳಿ ಬೀಸುತ್ತಿದೆ. ಏನೋ ಒಂದು ಬಗೆಯ ದೇಹವೆಲ್ಲ ಒಮ್ಮೆ ಛಿದ್ರಛಿದ್ರವಾಗಿ ಮತ್ತೆ ಕೂಡಿದ ಹಾಗಿನ ಗಾಡ ನೋವು, ಕಣ್ಣಿಗೆ ನೀರು ತುಂಬಿಕೊಂಡು ಬಿಡೋಕೆ ಕಷ್ಟವಾಗುವ ಹಾಗೆ ಏನೂ ಸರಿಯಾಗಿ ಕಾಣುತ್ತಿಲ್ಲ. ಸುಸ್ತು! ಬರೀ ಸುಸ್ತು ದೇಹವ ಅಲುಗಿಸಲು ಆಗದಷ್ಟು ಸುಸ್ತು. ಯೋಚನೆಗಳ ಮಾಡೋಕೆ ಆಗದಷ್ಟು ಸುಸ್ತು, ಬಗ್ಗಿ ಹೊಳೆಯ ತಣ್ಣೀರು ತೆಗೆದು ಮುಖಕ್ಕೆ ಹಾಕಿಕೊಂಡ ಶಂಕರ ದೋಣಿಗೆ ಕಟ್ಟಿದ ಹಗ್ಗ ನೋಡಿದರೆ ಅದರ ಸುಳಿವಿಲ್ಲ. "ಎಂತಾರು ಸಾಯ್ಲಿ ಪಸ್ಟ್ ಮನಿ ಕಡಿಗೆ ಹೋಪ ಕಡಿಕೆ ಕಂಡ್ರೆ ಆಯ್' ಅಂತ ಗೋಣಗುತ್ತ ಹುಟ್ಟಿಗೆ ಕೈ ಹಾಕಿದರೆ ಅದು ಸಹ ಇಲ್ಲ ಬಳಿದುಕೊಂಡು ಹೋಗಿರಬೇಕು ಅಂತ ಯೋಚಿಸುತ್ತ, ದಡ ಅಷ್ಟು ದೂರವಿರದ್ದರಿಂದ ಚಂದ್ರನ ಬೆಳಕಿಗೆ ದಡದತ್ತ ತಿರುಗಿದರೆ ಮನೆಯ ಬೆಳಕು ಕಾಣುತ್ತಿಲ್ಲ. ಗಾಳಿಗೆ ಆರಿರಬೇಕು ಅಂದು ಕಯ್ಯಲ್ಲಿನ ನೀರು ಹಿಂದಕ್ಕೆ ತಳ್ಳುತ್ತ ದಡದತ್ತ ಸಾಗುತ್ತಾನೆ. ಏದುಸಿರು ಬಿಡುತ್ತ ದಡಕ್ಕೆ ಬಂದು ದೋಣಿಯನ್ನು ಮಮೂಲಾಗಿ ಕಟ್ಟುವ ಲ ಆಕಾರದಲ್ಲಿ ತಲೆಕೆಳಗಾಗಿ ಬಾಗಿದ ತೆಂಗಿನ ಮರಕ್ಕೆ ಕಟ್ಟಲು ನೋಡಿದರೆ ತೆಂಗಿನ ಮರವು ಸಹ ಕಣ್ಮರೆಯಾಗಿದೆ. ಸುತ್ತಮುತ್ತ ನೋಡಿದರೆ ಇವನ ನೆನಪಲಿ ಇರುವ ಯಾವ ಮರಗಿಡಗಳು ಕಾಣುತ್ತಿಲ್ಲ, ಎಲ್ಲವೂ ವಿಚಿತ್ರವಾಗಿದೆ. ಏನು ನೋಡಿದರೂ ಹೊಸದಾಗಿ ನೋಡಿದ ಅನುಭವವಾಗುತ್ತಿದೆ. ಆ ಮರ, ಈ ಗಿಡ, ಆ ದಂಡೆ, ಅಲ್ಲಿದ್ದ ಗೂಡು, ಏರು ಎಲ್ಲವೂ ಕಣ್ಮರೆಯಾಗಿ ಹುಲ್ಲು ಮುಳ್ಳುಗಿಡಗಳು ಬೆಳೆದು ಹಳುವಾಗಿದೆ. ದಡದಲ್ಲಿಯೇ ಇದ್ದ ಮರದ ಬುಡಕ್ಕೆ ದೋಣಿ ಕಟ್ಟಿ ಎಲ್ಲೋ ಏನೋ ಒಂದು ತರಹದ ಭಯ ಹುಟ್ಟಿ ಶಂಕರ ಬಿರುಸಾಗಿ ಮನೆಕಡೆ ಕಾಲು ಬೀಸುತ್ತಾನೆ. ಏನಾಗುತ್ತಿದೆ ಅಂತ ಗೊತ್ತಾಗದೆ ಭಯದಲ್ಲಿ ಮನೆಕಡೆ ಅಂದಾಜಿನಲ್ಲಿ ಕಾಲು ಹಾಕುತ್ತಾ ಹೋದರೆ ಮನೆ ಸಿಗುತ್ತಿಲ್ಲ. ಆಕಡೆ-ಈಕಡೆ, ಹಿಂದೆ-ಮುಂದೆ, ಮತ್ತೆ ಬಂದಲ್ಲಿಗೆ ಎಲ್ಲಿ ಹುಡುಕಿದರೂ ಮನೆ ಕಾಣುತ್ತಿಲ್ಲ. ಮನೆಯಿದ್ದ ಜಾಗ ಇವನಿಗೆ ಸರಿಯಾಗಿ ನೆನಪಿದೆ. ಆದರೆ ಅಲ್ಲೇನು ಇಲ್ಲ, ನೆನಪಿದ್ದ ಜಾಗದಲ್ಲಿ ಹಳು ಬೆಳೆದು ಹೊಳೆದಂಡೆ ಸಂಪೂರ್ಣ ಹಸಿರಿನಿಂದ ಮುಚ್ಚಿ ಹೋಗಿದೆ.
ಶಂಕರನಿಗೆ ತಲೆಹಾಳಾಗಿ ಏನಾಗುತ್ತಿದೆ ಅಂತ ಗೊತ್ತಾಗದೆ ಸ್ವಲ್ಪ ಮುಂದೆ ನಡೆದು ಒಂದು ಕಡೆ ಮೀನು ಹಿಡಿಯಲು ಬಲೆ ಬಿಡಿಸುತ್ತಿದ್ದ ಹುಡುಗನ ಬಳಿ ಹೋಗಿ "ಹೊಯ್ ಇಲ್ ಮಗೇರ್ ಶಂಕರನ್ ಮನಿ ಇದಿತ್ ಅಲ್ಲೆ. ಎಲ್ಲಿತ್ ಅಂತ ಗೊತ್ತೆ ನಿಮ್ಮೆ" ಅದಕ್ಕೆ ಹುಡುಗ "ಹೋ ನೀವ್ ಅವ್ರ ಮನಿ ಹುಡ್ಕಂಡ್ ಬಂದದ್ದ ನಾನ್ ಯಾರೋ ಮರ್ಲ ಇರ್ಕ್ ಅಂಕಂಡಿದೆ. ಶಂಕರಣ್ಣ ಎಂಟ್ ವರ್ಷದ್ ಹಿಂದೆ ಹೊಳಿಗೆ ಮೀನ್ ಹಿಡುಕೆ ಹೊಯಿ ಮಿಂಚ್ ಅರ್ಗಿ ತೀರಿ ಹೋರ್ಮೇಲೆ ಅಬ್ಬಿ ಮಗ ಮನಿ ಬಿಟ್ ಅಜ್ಜಿ ಮನಿಗ್ ಹೊಯ್ ಅಂತ ಕೆಂಡದ್ ನೆನಪ್. ಅದಿರ್ಲಿ ನಿಮ್ಮ ಅವ್ರ ಎಂತ ಆಯ್" ಅನ್ನುತ್ತಾನೆ. ಶಂಕರನಿಗೆ ಭಯದಲ್ಲಿ ಉಸಿರುಗಟ್ಟಿ ಗಂಟಲು ತುಂಬಿಬಂದು ಏನಾಗುತ್ತಿದೆ ಅಂತ ಅರ್ಥವಾಗದೆ ಮಾತಾಡೋಕೆ ಬರದೆ ಅಲ್ಲಿಂದ ಸೀದಾ ಅಳುತ್ತಾ ಅವನ ಹೆಂಡತಿ ಅಮ್ಮನ ಮನೆ ಕಡೆ ಓಡೋಕೆ ಶುರುಮಾಡುತ್ತಾನೆ ನಡುರಾತ್ರಿಯಲಿ, ಅಲ್ಲಿದ್ದ ಹುಡುಗ ಕೃಷ್ಣ 'ಇವರನ್ನ ಕಂಡ್ರೆ ನಮ್ ಭರತನ ಅಪ್ಪಯ್ಯ ಶಂಕರಣ್ಣನ ಕಂಡಂಗೆ ಆತಲ?' ಅನ್ನುತ್ತ ಬಲೆ ಬಿಡಿಸೋದರಲ್ಲಿ ಮಗ್ನನಾಗುತ್ತಾನೆ.
ಬಿಜೂರಿಗೆ ಓಡಿದ ಶಂಕರ ಹೆಂಡತಿ ಅಮ್ಮನ ಮನೆಯೆದುರು ನಿಂತಾಗ ಮನೆಯಲ್ಲಿ ಒಳಗಿಂದ ಬಾಗಿಲು ಹಾಕಿಕೊಂಡಿತ್ತು. ಪೂರ್ವದಿಂದ ಸೂರ್ಯ ಉದಯಿಸುವ ಎಲ್ಲಾ ಸನ್ನೆಗಳು ಕಾಣುತಿದ್ದರಿಂದ ಒಳಗೆ ಮಲಗಿರಬೇಕು ಅಂದುಕೊಂಡು ಮನೆಯ ಎದುರಿನ ಚಿಟ್ಟೆಯ ಮೇಲೆ ತಲೆ ಊರುತ್ತಾನೆ. ತಲೆ ಊರಿದ ಕೂಡಲೆ ಆದ ಸುಸ್ತಿಗೆ ನಿದ್ದೆ ಬಂದುಬಿಡುತ್ತದೆ.
"ಹೊಯ್ ಹೊಯ್ ಯಾ ಮರೆ ನೀವ್. ಇಲ್ಯಾಕ್ ಮನಿಕಂಡಿರಿ. ಹೊಯ್ ಏಳಿ ಮರ್ರೆ. ಮನಿ ಮುಂದ್ ಯಾಕ್ ಇದ್ರಿ. ಏಳ್ಳಾ ಇಲ್ಯಾ ಈಗ' ಅಂತ ಮನೆಯಿಂದ ಹೊರಬಂದವ ಜೋರಾಗಿ ಎಬ್ಬಿಸಿದಾಗ ಎಚ್ಚರವಾಗಿದ್ದು ಶಂಕರನಿಗೆ. ಶಂಕರ ತೆರೆಯಲು ಆಗದ ಗಾಡ ನಿದ್ದೆಗಣ್ಣಿನಲ್ಲಿ ಯಾರದು ಅಂತ ತೆರೆಯುತ್ತ ಎದ್ದು ಕೂತು ನೋಡಿದರೆ ಎಲ್ಲೋ ನೋಡಿದ ಮುಖ ಪರಿಚಯ ಅನಿಸುತ್ತಿದೆ, ತೀರ ಹತ್ತಿರದ ಸಂಬಂಧವಿರುವ ಪರಿಚಯ ಅನಿಸುತ್ತಿದೆ ಶಂಕರನಿಗೆ, ಯಾರದು ಅಂತ ಒಳಗಿಂದ ಅಜ್ಜಿ ಬಂದದ್ದು ನೋಡಿದರೆ ಅದು ಶಂಕರನ ಅತ್ತೆ, ಬಹಳ ವ್ಯಯಸ್ಸಾಗಿ ಮುಖ ಸುಕ್ಕು ಕಟ್ಟಿ ಬೆನ್ನು ಬೆಂಡಾಗಿದೆ. ಕೋಲು ಹಿಡಿದು ನಡೆದುಕೊಂಡು ಬಂದು ನಿಂತಾಗ ನೆನಪು ಆಗುತ್ತೆ ಅವನ ಮಗ ಭರತನೇ ಅವನ ಬಂದು ಎಬ್ಬಿಸಿದ್ದು ಅಂತ. ಉಕ್ಕಿ ಬರುತ್ತಿದ್ದ ಅಳು ಜೊತೆಗೆ ಏನಾಗುತ್ತಿದೆ ಅಂತ ಗೊತ್ತಿಲ್ಲದೆ ತಲೆ ಹುಚ್ಚು ಹಿಡಿಯಲ್ಲಿಕೆ ಶುರುವಾಗಿ ಮಾತು ಒಂದು ಹೊರಬರುತ್ತಿಲ್ಲ. ಇವನ ಗಡ್ಡ ಮೀಸೆ ಬೆಳೆದ ವೇಷ ನೋಡಿ ಅವರಿಗೂ ಇವನ ಗುರುತು ಸಿಗದಿರುವುದು ಶಂಕರನ ದುಖವನ್ನು ಇಮ್ಮಡಿಸುತ್ತಿದೆ. ಶಂಕರ ಕೈಸನ್ನೆ ಬಾಯಿ ಸನ್ನೆ ಮಾಡುತ್ತಿರೋದು ನೋಡಿ ಅಜ್ಜಿ "ಅವಂಗೆ ಚಿಟ್ಟಿ ಮೇಲೆ ತಿಂಡಿ ಹಾಕ್. ತಿಂಡಿ ತಿಂಕ ಹೊಯ್ಲಿ. ಭರತ "ಹೊಯ್ ಅಲ್ ಬಾಣಿಯಗೆ ನೀರ್ ಇತ್ ಲಾಯ್ಕ ಮುಖ ತೊಳಕಂಡ ಬನ್ನಿ ತಿಂಡಿ ಕೊಟ್ಟೆ.
ಮಧ್ಯಾಹ್ನ ನಮ್ ಮನ್ಯಗೆ ಊಟ ಇತ್ ಬನ್ನಿ ಉಂಡ ಹೊಯ್ಲಿ” ಅನ್ನುತ್ತ ಮನೆಯೊಳಗೆ ಹೋಗುತ್ತಾನೆ.
ಹೊರಗೆ ಚಿಟ್ಟೆಯ ಮೇಲೆ ಕೂತು ಬಾಳೆ ಎಲೆಯ ತುಂಡಿನಮೇಲೆ ಆರು ಇಡ್ಲಿ ಹಾಕಿಸಿಕೊಂಡು ತಿನ್ನುತ್ತ ಒಳಗಡೆ ಎಲ್ಲಾದರು ನನ್ನ ಹೆಂಡತಿ ನೋಡೋಕೆ ಸಿಗುತ್ತಾಳ ಅನ್ನುತ್ತ ನೋಡುತ್ತಿದ್ದಾಗ ಹೊರಗೆ ಅವನ ಅತ್ತೆ ಪಕ್ಕದಮನೆ ಜಲಜಳ ಜೊತೆ "ಇವತ್ ಹೆಚ್ಚಿನರಿಗೆ ಹೇಳ್ತ ಎಲ್ಲಾ ಮನೆಯರೊಳಗೆ ಅಷ್ಟೆ, ನೀನ್ ನನಗೆ ಮಗ್ಗಿದ್ದಂಗೆ, ನೀನು ಮಕ್ಕಳನ್ ಕರ್ಕ ಬಾ ಮಧ್ಯಾಹ್ನ. ಬೇರೆಯರಿಗೆ ಹೇಳ ಅನ್ನ ಬರ್ದೆ ಇರ್ಬೇಡ" ಅನ್ನುತ್ತಾರೆ. ಶಂಕರನಿಗೆ ಮನೆಯಲ್ಲಿ ಏನು ಸಮಾಚಾರವಿದೆ ಅಂತ ಗೊತ್ತಾಗದಿದ್ದರು ಮಧ್ಯಾಹ್ನ ಬಂದು ಮನೆಯವರನೆಲ್ಲ ನೋಡಿಕೊಂಡು ಹೋಗಬೇಕು ಹೆಂಡತಿ ಸಹಿತವಾಗಿ ಅಂತ ಯೋಚಿಸುತ್ತಾನೆ. ಭರತ ಮತ್ನಾಲ್ಕು ಇಡ್ಲಿ ತಂದು ಶಂಕರ ಬೇಡ ಅನ್ನುತ್ತ ಕೈ ಅಡ್ಡ ಹಾಕಿದರು ಹಾಕಿ ಅಜ್ಜಿ ಬಳಿ ಹೋಗಿ "ಮಾಣ್ಯರಿಗೆ ಹೇಳಿದೆ ಮಧ್ಯಾಹ್ನ ಒಂದ್ ೨೫ ಊಟಕೆ. ಸುಮ್ಮೆ ಎಲ್ಲಾ ಕೆಲಸ ಮುಗುಕೆ ಆತಿಲ್ಲ ನಮಿಬ್ರಿಗೇ, "ಏನೋ ಮಗ ನಿಂಗ್ ಒಂದ್ ಕೆಲ್ಸ ಅಂತ ಆದಕ್ಕೆ ಹೇಗೋ ಜೀವ ನಡೀತಾ ಇತ್. ಇಲ್ಲಿದೆ ನಿನ್ ಅಪ್ಪ ಅಬ್ಬಿ ತರ ದೇವ್ ಕಾಲಿಗೆ ಸೇರ್ಕಿದಿತ್. ನಿನಪ್ಪಂದ್ ಸಮಾರಾಧನೆ ಅವ್ಯಾಂಗೋ ಮಾಡ್ಸ್ ನಿನಗಾರು ಅಮ್ಮನದ್ ಮಾಡುವಷ್ಟೆ ದೇವ್ ಕೈ ಗಟ್ಟಿಕೊಟ್ಟ ಕಾಣ್ ಅದೇ ಸಾಕ್. ನಾನ್ ಇನ್ ನೆಮ್ಮದಿಯಂಗೆ ಕಣ್ ಮುಚ್ಚೆ" "ನೀನ್ ಸುಮ್ನ ಆಯ್ಕೆಂತ್ಯ ಅಮ್ಮಂಗೆ ಹುಷಾ ಇಲ್ಲೇ ಹೋ. ಅಪ್ಪ ಎಂಟ್ ವರ್ಷದ್ ಹಿಂದೆ ಹೊಳಿಯಂಗೆ ಮಳ್ಯಲ್. ದೇವ್ ಎಂತ ಸುಟ್ಟದ್ ಕೊಟ್ಟಿದ್ದೆ. ಎಲ್ಲಾ ಕಿತ್ಕಂಡದ್ದೆ" ಅಂತ ಶಂಕರನಿಗೆ ಇಡ್ಲಿ ಹಾಕಲು ತಿರುಗಿದರೆ ಶಂಕರ ಅಲ್ಲಿರದೆ ಮನೆಯಿಂದ ದೂರದಲ್ಲಿ ನಡೆಯುತ್ತಿದ್ದ. ಶಂಕರನ ನೋವು ಭರತನಿಗೆ ಕಾಣೋದಾದರೂ ಹೇಗೆ? ಬೆನ್ನು ಹಾಕಿ ಹೊಳೆಯಕಡೆ ಹೋಗಬೇಕೆಂದು ಓಡುವಾಗ, ಶಂಕರನಿಗೆ ಎಲ್ಲಿಂದ ಬಂತೋ ಅಷ್ಟೊಂದು ಶಕ್ತಿ ಗೊತ್ತಿಲ್ಲ. ಕಣ್ಣಲ್ಲಿ ನೀರು ಹರಿಯುತ್ತಿರೆ, ಆಲೋಚಿಸದಿರೆ, ಹೊಳೆಯತ್ತ ಸಾಗಿ ಅಲ್ಲಿ ಕಟ್ಟಿದ್ದ ದೋಣಿಯ ಹಿಡಿದು ಮತ್ತದೇ ಜಾಗದಿ ಹೋಗಬಯಸಿದ. ಏನೊಂದು ಅರ್ಥವಾಗದೆ ಶಂಕರ ದೋಣಿಯಲ್ಲಿ ಕಾಲನ್ನು ಎದೆಗವುಚಿ ಕೂತು ಕಣ್ಣು ಮುಚ್ಚಿ ಅಳುತ್ತಿದ್ದಾನೆ. ಅವನ ಜೀವನದಲಿ ಏನಾಗುತ್ತಿದೆಯಂತ ಗೊತ್ತಾಗದೆ ಕಣ್ಣಲ್ಲಿ ನೀರು ದಾರಕಾರವಾಗಿ ಹರಿಯುತ್ತಿದೆ. ಸಮಯ ೧೧ ಆಗಿರಬಹದು ಇನ್ನೂ ಸಹ ಅಳು ನಿಂತಿಲ್ಲ. 'ಇದೇನೋ ಮನೆಯಲಿ ಮಲಗಿ ಕನಸು ಕಾಣುತ್ತಿರಬೇಕು? ಎದ್ರೆ ಎಲ್ಲಾ ಸರಿ ಆತ್' ಅಂದುಕೊಂಡು ಶಂಕರ ಏನೋ ಗಟ್ಟಿ ಹೃದಯ ಮಾಡಿದವನ ಹಾಗೆ ಒಮ್ಮೆ ಬಿಗಿಯಾಗಿ ಉಸಿರು ತೆಗೆದುಕೊಂಡು ಆಕಾಶ ನೋಡಿ, ಒಮ್ಮೆ ಮನೆಯಿದ್ದ ದಿಕ್ಕಿನತ್ತ ಕಣ್ಣು ಹಾಯಿಸಿ ಉಸಿರು ಬಿಟ್ಟು, ಕಣ್ಣು ಮುಚ್ಚಿ ಹಾಗೆಯೇ ದೋಣಿಯಿಂದ ನೀರಿಗೆ ಜಾರುತ್ತಾನೆ.
ಇಸ್ರೋದ ಒಂದಿಷ್ಟು ವಿಜ್ಞಾನಿಗಳು ಬೈಂದೂರು ಹೊಳೆಯನ್ನು ಸಂಪೂರ್ಣವಾಗಿ ಜನರ ಆಗಮನಕ್ಕೆ ನಿಷೇಧಿಸಿ ಏನೇನೋ ಯಂತ್ರಗಳ ಹಿಡಿದು ಹೊಳೆಯಲ್ಲಿ ಆಕಡೆಯಿಂದ ಈಕಡೆ ಸುತ್ತುತ್ತಿದ್ದಾರೆ. ವಿಜ್ಞಾನಿಗಳು ತರಂಗವನ್ನು ಒಡೆದು ಮಾಹಿತಿ ತೆಗೆಯೋಕೆ ಆಗದಿದ್ದರು, ಅದು ಭೂಮಿಯ ಯಾವ ಕಡೆ ಅಪ್ಪಳಿಸಿದೆ ಅಂತ ಕಂಡುಹಿಡಿದು ಬೈಂದೂರು ಹೊಳೆಗೆ ಬಂದಿದ್ದಾರೆ. ಹೊಳೆಯಮೇಲೆ ಬಿದ್ದ ತರಂಗಗಳು ಚಿಮ್ಮಿ ಇಸ್ರೋದವರ ಯಂತ್ರಕ್ಕೆ ಸಿಕ್ಕಿ ಬಿದ್ದಿತ್ತು. ಆ ಜಾಗದಲ್ಲಿ ಈಗ ಯಾವ ತರಂಗ ಮತ್ತು ಅದರ ಸುಳಿವು ಸಿಗುತ್ತಿಲ್ಲ, ಆದರೆ ಅವರ ಪ್ರಕಾರ ಅದು ಕಪ್ಪುರಂದ್ರ ಅಥವಾ ಬ್ಲಾಕ್ಟೋಲ್ ಒಳಯೆಳೆದುಕೊಂಡು ಹೊರ ಬಿಸಾಡುವ ಬಿಸಿರಂದ್ರ ಅಥವಾ ವಾರ್ನ್ಹೋಲ್ ಎಂಬುದೊಂದು ಅಸ್ತಿತ್ವದಲ್ಲಿದೆ ಅನ್ನಲಾಗುವ, ಇದುವರೆಗೂ ಕೇವಲ ವೈಜ್ಞಾನಿಕ ಸಿದ್ಧಾಂತವಾಗಿರುವುದರಿಂದ ಬಂದಿದೆ ಅನ್ನೋದು. ವಾರ್ಮೋಲ್ ಅಲ್ಲಿ ಸಮಯದ ಅಸ್ತಿತ್ವ ಅಲ್ಲೋಲ ಕಲ್ಲೋಲವಾಗಿರುತ್ತೆ ಅನ್ನುವ ಮಾತು ಸಹ ಇದೆ. ಆದರೆ ಇಲ್ಲಿಯವರೆಗೂ ಅದರ ಕುರುಹು ಸಿಕ್ಕಿರದೆ ಏನು ಸಹ ನೇರವಾಗಿ ಹೇಳಲು ಆಗದೆ ಹೊಳೆಯಲ್ಲಿ ಒದ್ದಾಡುತ್ತಿದ್ದಾರೆ ಇಸ್ರೋ ವಿಜ್ಞಾನಿಗಳು.
ದೂರದ ದಡದಲ್ಲಿ ನಿಂತು ಭರತ ತನ್ನ ತಾಯಿಯ ಜೊತೆ ವಿಜ್ಞಾನಿಗಳ ಆಟ ನೋಡುತ್ತಿದ್ದರೆ ಹಿಂದಿನಿಂದ "ನಿನ್ನೆ ಸಿಕ್ಕದ್ ಮೀನ್ ಸ್ವಲ್ಪ ಜಾಸ್ತಿಯೇ ಇತ್ ಕಾಣ್. ದೋಣಿ ಎರಡ್ ದಿನಕ್ಕೆ ಹೊಳಿಗೆ ತಕ ಹೊಪುಕೆ ಆತಿಲ್ಲ ನಿನ್ನೆ ನೀರ್ ನುಗ್ಗಿದ್ದಕ್ಕೆ ನಾನ್ ಊರ್ ಸೈಡ್ ಹೊಯಿ ಮೀನ್ ಮಾರಿ ಬತ್ತೆ ಬಂದ್ ಅವನ್ನ ಪೀಸ್ ಕಟ್ಟ" ಅನ್ನುತ್ತ ಶಂಕರ ನೀರು ನುಗ್ಗಿ ಹಾಳಾಗಿದ್ದ ದೋಣಿಯ ಕಡೆ ಒಮ್ಮೆ ನೋಡಿ ತನ್ನ ಸೈಕಲ್ಲು ಹತ್ತಿ ಬಿಜೂರ ಕಡೆ ನಡೆದ.
-ಪ್ರಸಾದ
ಪ್ರಸಾದ ಅಸೋಡು
ಪ್ರಸಾದ ಅವರು ಅಸೋಡು ಕುಂದಾಪುರ ತಾಲೂಕಿನವರು. ಡಿಪ್ಲೊಮಾದಲ್ಲಿ ಸಿವಿಲ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದಿದ್ದಾರೆ. ಪ್ರಸ್ತುತ್ತ ಅನಿಮೇಶನ್ ಕಲಿಯುತ್ತಿದ್ದು, ಓದು, ಪುಸ್ತಕಗಳ ವಿಮರ್ಶೆ ಸೇರಿದಂತೆ ಕತೆ ಬರೆಯುದು ಇವರ ಹವ್ಯಾಸವಾಗಿದೆ.
More About Author