
ಆಕೆ ಆತ ಭಾಷೆ
ಅವಳೆಂದದ್ದು ಹಸಿವೆ ಮತ್ತು ಬಾಯಾರಿಕೆ
ಆತನೆಂದ ಚೆನ್ನಾಗಿ ಉಣ್ಣು ಕುಡಿ
—
ಆಕೆ ಅತ್ತಳು ಆಗ ಆತ ನಕ್ಕ
ಮೊನ್ನೆ ಅವನೆಂದದ್ದು ಕಿಟಕಿ ಎಂದು
ಅವಳು ತಿಳಕೊಂಡಂತೆ ಬಾಗಿಲು ಅಲ್ಲಾ
—
ಗೋಡೆ ಎಂದರೆ ಆತ ಬಯಲೆಂದುಕೊಂಡಳು
ಗೋಡೆ ಒಡೆದರೆ ಎಲ್ಲಾ ಬಯಲು ಎಂದೆ
—
ಆಕೆ ಮಾಡಿದ್ದು ಅವನಿಗಿಷ್ಟವಾದ ಕಾಯಿ ರಸ
ಅವನು ಉಂಡದ್ದು ಮಜ್ಜಿಗೆ ಹುಳಿ ಎಂತ
ಯಾಕಾಗಿ ಹೀಗೆಲ್ಲ ಉಪರಾಟೆ ಪದಾರ್ಥ
ಗಾಳಿ ಇರಲಿಲ್ಲವೆ ಅವರ ನಡುವೆ ಹಾಗಾಗಿ ಅಲೆಗಳು
—
ಶಬ್ದಕಲೆಯಡಿಯಾಗಿ ಏಕಾಂಗಿ ಕೂಗುತಿದೆ ನಡು ನೀರಿನಲ್ಲಿ
ಅಲ್ಲೆ ಎದ್ದದ್ದು ಆತ್ಮಹತ್ಯೆಯ ಮಾತು
ಏನೆಂದ ಆತ ತಮಾಷೆ ಎಂದೆ
ಹೀಗೇಯೇ ನೋಡುವ ಒಮ್ಮೊಮ್ಮೆ ಏನೇನೊ ಆಗುವುದು
—
ಸಮುದ್ರವೆಂದರೆ ಸಮುದ್ರವಲ್ಲಾ
ದಡ ಎಂದುಕೊಂಡರೆ ನೀನು ಬೆನ್ನು
ಒಂದೆಂದರೆ ಇನ್ನೊಂದೇ ವಾರ್ಗರ್ಥ ಮೋಜು
ನಿನಗು ಗೊತ್ತೆ ಇರುವುದು
—
ಅವಳು ಕೇಳಿದಳು ಹೇಳು ಕೊನೆಗು ಸರಿಯಾಗಿ
ಹೆಚ್ಚು ಹುಚ್ಚರು ಯಾರು ನಮ್ಮಿಬರಲ್ಲಿ
ಆತ ಏನೆಂದೆ ಮೊದಲು ಸಾಯುವ ಆಸೆಯೇ ಹೇಳು಼
ಅವಳು ಸೆಕೆ ಕಿಟಕಿ ತೆರೆಯಲೆ ನಡುವೆ ಗಾಳಿಗೆ
ಆತ ಏನೆಂದೆ ಹಸಿವೆ ಮತ್ತು ಬಾಯಾರಿಕೆ
ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)
ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ.
ಮರಗಿಡಬಳ್ಳಿ ಅಂತರಂಗದ ಪುಟಗಳು ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು. ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ಬಡಗಿ, ಹರಿವ ನೀರು (ಪ್ರಬಂಧ ಸಂಕಲನಗಳು), ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಸೇಡಿಯಾಪು ನೆನಪುಗಳು, ಮುಂತಾದ ಕೆಲ ಪುಟಗಳು (ಆತ್ಮಚರಿತ್ರ ನಿರೂಪಣೆ), ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ, ಬೆಳ್ಳಿಯ ಸಂಕೋಲೆಗಳು, ಮೂವರು ಅಕ್ಕತಂಗಿಯರು, ಸಂಗೀತ ಸಂವಾದ, ಸೂರ್ಯ ಕಿನ್ನರಿಯರು (ಅನುವಾದ), ಜಾತ್ರೆ (ಸ್ಕೃತಿಕಥನ) ಅವರ ಪ್ರಕಟಿತ ಕೃತಿಗಳು. ಇವಲ್ಲದೆ 15 ಮಕ್ಕಳ ನಾಟಕಗಳು, ಮಕ್ಕಳ ಕಥಾ ಸಂಗ್ರಹ, ಮಕ್ಕಳ ಕಥೆಗಳ ಸಂಪಾದಿತ ಸಂಗ್ರಹ ಪ್ರಕಟಿಸಿದ್ದಾರೆ.
ಗೀತಾ ದೇಸಾಯಿ ದತ್ತಿ ನಿಧಿ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಎಂಕೆ.ಇಂದಿರಾ ಪ್ರಶಸ್ತಿ, ಎರಡು ಬಾರಿ ದೆಹಲಿಯ ’ಕಥಾ’ ಪ್ರಶಸ್ತಿ, ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಕರ್ಣಾಟಕ ರಾಜ್ಯದ ದಾನ ಚಿಂತಾಮಣಿ ಪ್ರಶಸ್ತಿ, ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
More About Author