Poem

ವಿಹ್ವಲ

ಅಮ್ಮನಿಲ್ಲ ಮಗ್ಗುಲಲ್ಲಿ ಭಯವಾಗುತ್ತಿದೆ
ಸುತ್ತ ಕ್ರೂರ ದೃಷ್ಟಿಗಳು ಇರಿಯುತಾ ಇದೆ

ಎದೆಯೆ ಕವಚ ಕಿತ್ತು ಹೋಗಿ ಕಾಲವಾಗಿದೆ
ಕಾಲವೆಂಬ ಸುಳಿಗೆ ಸಿಲುಕಿ ಮುಳುಗಿ ಹೋಗಿದೆ

ಹಸಿವಾಗಿದೆ ಅಮ್ಮ ಮಮ್ಮು ಯಾರು ಕೊಡುವರೇ?
ಹಸಿ ಗಾಯಕೆ ಗಾಳಿ ಊದಿ ಹಳದಿ ಬಳಿವರೇ?

ಕೈಯ ಪೆಟ್ಟು ತಿನದೆ ಮಗ್ಗಿ ಹೇಗೆ ಹೇಳಲಿ?
ಇಷ್ಟು ದೊಡ್ಡ ಬದುಕ ಗಣಿತ ಹೇಗೆ ಬಿಡಿಸಲಿ?

ಮನದ ಮೂಲೆ ಮೂಲೆಯಲ್ಲಿ ಜೇಡ ಕಟ್ಟಿದೆ
ಆಮ್ಮನೆಂಬ ಹಣತೆ ಇರದೆ ಮಸುಕು ಮುಸುಕಿದೆ

ಅಮ್ಮ ನಿನ್ನ ಸ್ಪರ್ಶವಿರದೆ ಜಡ್ಡುಗಟ್ಟಿಹೆ
ಲಾಲಿ ಹಾಡು ಕೇಳುತಿಲ್ಲ ನಿದ್ದೆ ಮರೆತಿಹೆ

ಪ್ರತಿ ಜನ್ಮಕೂ ನಿನ್ನ ಮಡಿಲನೆ ನಾನು ಬೇಡುವೆ
ಸೆರಗ ಹಿಂದೆ ಅವಿತು ನಿಂತು ಜಗವ ನೋಡುವೆ

✍️ಸುಮತಿ ಕೃಷ್ಣಮೂರ್ತಿ

ವಿಡಿಯೋ
ವಿಡಿಯೋ

ಸುಮತಿ ಕೃಷ್ಣಮೂರ್ತಿ

ಸುಮತಿ ಕೃಷ್ಣಮೂರ್ತಿ ಅವರು ಬಳ್ಳಾರಿ ಜಿಲ್ಲೆ ನಿವಾಸಿ. ತಾಂತ್ರಿಕ ಶಿಕ್ಷಣದಲ್ಲಿ ಡಿಪ್ಲೊಮಾ ಪಡೆದಿರುತ್ತಾರೆ. ಹವ್ಯಾಸಿ ಕವಯಿತ್ರಿ. ಕಾರ್ಯಕ್ರಮ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

More About Author