ತೊದಲುವುದು ವೈಕಲ್ಯವಲ್ಲ,
ಅದು ಮಾತಿನ ಬಗೆ.
ಪದ ಮತ್ತದರ ಅರ್ಥದ ನಡುವಿಗೆ
ಒದಗುವ ಮೌನ ಈ ತೊದಲು,
ಹೇಗೆ ಕುಂಟುತನವು
ಮಾತು ಮತ್ತು ಕ್ರಿಯೆಯ ನಡುವೆ
ಇರುವ ಮೌನವೋ ಹಾಗೆ ಇದು.
ತೊದಲುವಿಕೆಯು ಭಾಷೆಗಿಂತ ಮೊದಲು ಬಂತೋ
ಅಥವಾ ಭಾಷೆಯ ನಂತರವೊ?
ಅದು ಕೇವಲ ಒಳನುಡಿಯೋ
ಅಥವಾ ತಾನೇ ಒಂದು ಭಾಷೆಯೊ?
ಭಾಷಾಪಂಡಿತರು ತೊದಲುವಂತೆ ಮಾಡುತ್ತವೆ
ಈ ಪ್ರಶ್ನೆಗಳು.
ಪ್ರತಿ ಬಾರಿ ತೊದಲಿದಾಗ ನಾವು
ಅರ್ಥಗಳ ದೇವರಿಗೆ ಒಪ್ಪಿಸುತ್ತಿರುತ್ತೇವೆ
ಆಹುತಿ.
ಲೋಕದ ಜನರೆಲ್ಲ ತೊದಲತೊಡಗಿದಾಗ
ತೊದಲುವಿಕೆಯಾಗುತ್ತದೆ ಅವರ ತಾಯಿನುಡಿ:
ಈಗಿರುವ ಹಾಗೆ.
ಆ ದೇವರೂ ತೊದಲಿರಬೇಕು
ಮನುಷ್ಯನನ್ನು ಸೃಷ್ಟಿಸಿದಾಗ.
ಆದ್ದರಿಂದಲೇ, ಮನುಷ್ಯ ಸೃಜಿಸಿದ ಎಲ್ಲ ಪದಗಳಿಗೂ
ನಾನಾರ್ಥಗಳು.
ಅದಕ್ಕೆಂದೇ, ಪ್ರಾರ್ಥನೆಯಿಂದ ಆಜ್ಞೆವರೆಗೆ
ಅವನುಚ್ಚರಿಸುವ ಎಲ್ಲ ಮಾತುಗಳೂ
ತೊದಲುಗಳು,
ಕವಿತೆಯಂತೆ.
*
ಮಲಯಾಳಂ ಮೂಲ: ಕೆ.ಸಚ್ಚಿದಾನಂದನ್
ಅನುವಾದ: ಜ.ನಾ.ತೇಜಶ್ರೀ
ಜ.ನಾ. ತೇಜಶ್ರೀ
ಎಂ.ಎ. (ಇಂಗ್ಲಿಷ್) ಮತ್ತು ಭಾಷಾಂತರ ಡಿಪ್ಲೊಮಾ ಪದವೀಧರೆ ಆಗಿರುವ ತೇಜಶ್ರೀ ಅವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ವರ್ಷ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 'ಟ್ಯಾಗೋರ್ ಪೀಠ'ದಲ್ಲಿ ಸಂಶೋಧನಾ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಉಸುಬುಂಡೆ, ಮಾಗಿಕಾಲದ ಸಾಲುಗಳು (ಕವನ ಸಂಕಲನಗಳು) ಭಾರತ ರಾಷ್ಟ್ರೀಯ ಚಳುವಳಿ, ಚೀನಿ ತತ್ವಶಾಸ್ತ್ರದ ಕತೆ, ಕಡಲ ತಡಿಯ ಗುಡಾರ, ಬೆತ್ತಲೆ ಫಕೀರ, ಇರುವೆ ಮತ್ತು ಪಾರಿವಾಳ (ಅನುವಾದಿತ ಕೃತಿಗಳು) ’ನೀನಾಸಂ'ಗಾಗಿ ವೋಲೆ ಸೋಯಿಂಕಾನ ಸಾವು ಮತ್ತು ರಾಜನ ಕುದುರೆ ಸವಾರ' ನಾಟಕದ ಅನುವಾದ. ಕವಿ ರವೀಂದ್ರ, ಬೆಟ್ಟದ ಮೇಲಿನ ಬೆಳಕು (ಸಂಪಾದಿತ) ಅವರ ಪ್ರಕಟಿತ ಕೃತಿಗಳು.
ಯು.ಆರ್.ಅನಂತಮೂರ್ತಿಯವರ 'ಸುರಗಿ' ಆತ್ಮಕತೆಯ ಸಂಯೋಜನೆ ಮತ್ತು ನಿರೂಪಣೆ ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಟಿ.ಎಸ್.ರಂಗರಾವ್ ದತ್ತಿ ಬಹುಮಾನ, ನೀಲಗಂಗಾ ದತ್ತಿ, ವಸುದೇವಭೂಪಾಲಂ ದತ್ತಿ, ಡಿ.ಸಿ.ಅನಂತಸ್ವಾಮಿ ದತ್ತಿ ಪ್ರಶಸ್ತಿ, ಮುಂಬೈನ ಸುಶೀಲ ಎಸ್.ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಅಮ್ಮ ಪ್ರಶಸ್ತಿ, ಜಿ.ಎಸ್.ಎಸ್.ಕಾವ್ಯ ಪ್ರಶಸ್ತಿ ಮತ್ತು ’ಶ್ರೀವಿಜಯ ಸಾಹಿತ್ಯ ಪ್ರಶಸ್ತಿ'ಗಳು ಅವರಿಗೆ ಸಂದಿವೆ.
More About Author