
ಕಾಮದೇವನ
ಕಂಡ ಮೇಲಿನ್ನಾರನು ಕಾಣುವುದೇ
ಹೇಳು ಸಖೀ, ಉಂಟೆಲ್ಲೆ ಜಗದೊಳು
ಟಿಂವ್ವಟಿಂವ್ವನೆ ಎದೆ ಮೀಂಟಿದವನಂಥ
ಪುರುಷ !
ಕಂಡೇನೇ ಆ ಕಣ್ಣು
ಹಾಲ ಗಡಿಗೆಯೊಳು ಚಲಚಲಿಪ
ಗುಂಡು ನೇರಳೆಹಣ್ಣು
ಅದೆಂತಹ ಹಣೆಯೇ ಅದು
ಸಣ್ಣದಲ್ಲ ದೊಡ್ಡದಲ್ಲ
ಬೆಣ್ಣೆ ಸವರಿದಂಗೆ ರೇಸಿಮೆಯ ಮೇಲೆ
ನುಣ್ಣಗೆ ಮಿನುಗುವುದಲ್ಲೆ
ಆ ತಿಲಕವೊ ಒಂಟಿ ಎಳೆ ಮಾವಿನಕಾಯಿ
ಗೊನೆ ಕಳಚಿ ಕೂತಂಗೆ ಕೆನೆಮೊಸರ ಮೇಗೆ
ಪಳಗಿದ ಕೈ ಬರೆದ ಚಿತ್ರದೊಳು
ತಿದ್ದಿದಂತಿದ್ದಾವೆ ಏರಿಯೇರಿಳಿವ
ಆ ಜೋಡುಹುಬ್ಬು
ಮೂಗು ಸಂಪಿಗೆ ಎಸಳಲ್ಲ ಸಖೀ
ಗರುಡ ಕೊಕ್ಕಿನ ಸಿಕ್ಕುಗೂಟವೂ ಅಲ್ಲವೆ
ನಡುಮನೇ ಕಂಭ ಕೊರೆದಂಗೆ ನೇರ ಗೀಟು
ಎಳೆಗರಿಕೆ ಮಟ್ಟಸದಿ ಕತ್ತರಿ
ಯಾಡಿದ ಗೆರೆಮೀಸೆ
ಸಾಟಿ ಆ ಮಾಟಕ್ಕೆ
ಆ ಮಾಟವೇ!
ಬೆದರುಬೊಂಬೆ
ಗೆ ಬಣ್ಣ ಬಳಿದಂಗಲ್ಲವೇ ಅವನ ಕದಪು
ಅಲ್ಲವೇ ಅವನ ತುಟಿ ಹೊಗೆಬತ್ತಿ ಸೇದಿದ್ಹಾಂಗೆ
ಮುದ್ದೆ ಗಲ್ಲವಲ್ಲವೇ ಅವನವು ಕಿವಿ ಮುತ್ತುಗವಲ್ಲ
ಮುತ್ತು ಆರಿಸಿ ಚಿತ್ತ ಒತ್ತೆಯಿರಿಸಿ ಕೆತ್ತಿಟ್ಟ
ಚಿತ್ತಿಲ್ಲದ ಚೆದುರನೇ ಎನ್ನ ಕಾಮದೇವ
ಯಾರ ಆಸ್ತಿಯನು ತಿರುವಿಕೊಂಡಿದ್ದನೇ
ಯಾರ ಮಸ್ತಿಯನು ಕೆಡಿಸಿ ಕೇಕೆಯಿಟ್ಟಿದ್ದನೇ
ಏನು ಮಾಡಿದ್ದನೇ ಅಂಥದ್ದೇನು ಮಾಡಿದ್ದನೇ
ಮಾಡಬಾರದ್ದೇನು ಮಾಡಿದ್ದನೇ ನನ್ನ
ಮನ್ಮಥರಾಯ , ಸುಟ್ಟರಲ್ಲೇ ಅವನ
ನಿಂತ ನಿಲುವಿಗೆ ಸುಟ್ಟರೇ
ಗಿಣಿಯೊಳಾಡುವ ಹುಡುಗ
ಹೂಬಾಣ ರಚಿಸಿ ಚುಚ್ಚದ ಹಾಗೆ ಹೊಡೆವ
ಮೆದು ಮನಸಿಗ; ರತಿಹುಡುಗಿಯ ಹೊರತು
ಮತ್ತೊಬ್ಬಳಲಿ ಕಣ್ಣು ನೆಡದಂತಪ್ಪಟ ಗೆಣೆಕಾರ
ತನ್ನ ಪಾಡಿಗೆ ತಾನಿದ್ದ ಲಕ್ಷ್ಮೀಕುವರ
ನ ಕರೆಸಿಕೊಂಡು ಕೊಲ್ಲಿಸಿದರಲ್ಲೆ
ದೇವಾನುದೇವರು ಮನೆಹಾಳರು
ಜಗವ ಮರೆತು ಕುಂತ
ಮಾದೇವನೆಚ್ಚರಿಸಲು ಕೆಚ್ಚೆದೆ
ಯ ಭೂಪರು ಇರಲಿಲ್ಲವೇನೇ ದೇವರೊಳು ಹೇಳೇ
ಮಾದೇವನೆದ್ದಿದ್ದರೇನೆ ಮಲಗಿದ್ದರೇನೇ
ಎನ್ನ ಮುದ್ದುಮಾರಯ್ಯನಿಗೇನೇ ಅವನ ನದರು
ವಸಂತನೊಡಗೂಡಿ ಮಳೆಹುಯ್ದ ವನ
ದೊಳಗಡ್ಡಾಡಿ ರಭಸರಹಿತದ ತೊರೆ
ಯೊಳಗೀಸಾಡಿ ಮಾಗಿದ ಫಲವುಂಡು
ಮನಸಿಚ್ಛೆಗೊಲಿದು ಬಾಳುವೆನ್ನ
ಸುಂದರನ ಎಳೆದೊಯ್ದರೇ
ಬೇಡ ಬರಲೊಲ್ಲೆನೆಂದರೂ
ಬಿಡದೆಳೆದೊಯ್ದರೇ
ನನ್ನ ಹುಡುಗನ
ಸುಟ್ಟು ಬೂದಿಗುಡ್ಡೆಯ ಮಾಡಿ
ಹಬ್ಬ ಮಾಡುವರಲ್ಲೆ ಸಖಿ
ಹಬ್ಬ ಮಾಡುವರೇ ಲೋಕದೊಳು
ಆ ಮಾದೇವ
ನ ಮಗನಿಗಾರೂ ಹೆಣ್ಣು ಕೊಡದಿರಲಿ
ಅವನ ವಂಶ ನಿರ್ವಂಶವಾಗಲಿ
ಆ ದೇವೇಂದ್ರ ಗದ್ದುಗೆ ಕಳಕೊಂಡು
ಊರೂರ ಬೀದಿಯಲಿ ತಿರಿಯಲಿ
ಗಂಗೆನೀರಂಥ ತಿಳಿಮನದ ಹುಡುಗನ ಕೊಂದ
ಭೂಖಂಡವೆ ಹೊತ್ತಿ ಉರಿಯಲಿ
ಇಲ್ಲಿ ಚೆಲುವ ಕಾಣುವ ಕಣ್ಣು ಹಿಂಗಿ
ಧರೆ ಒದ್ದಾಡಲೆಂದು ಶಾಪ
ವನೀಯಲು ಬಾಯ್ದೆರೆದೆ
ಸಖೀ
ಏನೆಂದು ಹೇಳಲೇ ನಡೆದ ಸೋಜಿಗ
ಸಖೀ ಏನೆಂದು ಹೇಳಲೇ ನಡೆದ ಸೋಜಿಗ
ಅದೆತ್ತಲಿಂದಲೋ ಬಂತಲ್ಲೆ ಸುಳಿದು ನರುಗಂಧ
ಮೆದುಚಂದ್ರನಂಥ ಅಂಗೈ ನನ್ನ ಬಾಯದುಮಿ
ಮೈಯಿಲ್ಲ ಮನಸುಂಟೆಂದು ಪಿಸುಗುಟ್ಟಿದನೆ ಅನಂಗರಾಯ! ಶಪಿಸದಿರೆನ್ನ ಗೆಳತಿ ಲೋಕವನು
ಪ್ರೀತಿಸಲೆಂದೆ ಹುಟ್ಟಿದವ ನಾನು
ಎಂದೆನ್ನ ತಡೆದನೇ!!
ಎಂಥ ಹುಡುಗನೇ ಕಾಮದೇವ
ನೆಂಥಾ ಹುಡುಗನೇ ನನ್ನ ಮಾರನು
ಸುಟ್ಟರೂ ಹುಟ್ಟಿ
ದನೇ ಪ್ರೀತಿಗೊಂಡು !
- ಲಲಿತಾ ಸಿದ್ಧಬಸವಯ್ಯ
ಲಲಿತಾ ಸಿದ್ದಬಸವಯ್ಯ
ಕವಯತ್ರಿ ಲಲಿತಾ ಸಿದ್ದಬಸವಯ್ಯ ಅವರು ಬಿ.ಎಸ್ಸಿ. ಪದವೀಧರೆ. 27-02-1955 ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಯ್ಯ, ತಾಯಿ ಪುಟ್ಟಮ್ಮಣ್ಣಿ.
‘ಮೊದಲ ಸಿರಿ, ಇಹದ ಸ್ವರ, ಬಿಡಿಹರಳು (ಹನಿಗವನಗಳು), ಕಬ್ಬಿನೆಲ, ದಾರಿನೆಂಟ, ಇನ್ನೊಂದು ಸಭಾಪರ್ವ’ ಕವನ ಸಂಕಲನಗಳನ್ನು ಹೊರತಂದಿದ್ದಾರೆ.
‘ಮಿ. ಛತ್ರಪತಿ ಆನೆಘಟ್ಟ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಬಿ.ಎಂ.ಶ್ರೀ. ಕಾವ್ಯ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಮಾಣಿಕಬಾಯಿ ಕಾವ್ಯ ಪ್ರಶಸ್ತಿ, ಕಾವ್ಯಾನಂದ ಮುಂಬೈ ಹೊರನಾಡು ಪ್ರಶಸ್ತಿ, ಅಂಜೂರ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ’ ಲಭಿಸಿವೆ.
More About Author