Story

ನಿಶ್ಯಬ್ಧ

‘ಆರ್ಡರ್, ಆರ್ಡರ್’, ಕೋರ್ಟ್ ಹಾಲಿನ ತುಂಬಾ ಜನ. ಮಾಧ್ಯಮದವರು, ಪೊಲೀಸರು, ಕೆಲಸ ಇಲ್ಲದೆ ತಮಾಷೆ ನೋಡಲು ಬಂದವರು, ಏನಾಗುವುದೋ ಎಂದು ಕುತೂಹಲಕ್ಕೆ ಬಂದು ಕುಳಿತಿದ್ದ, ನಿಂತಿದ್ದ ಮರಿ ಲಾಯರ್‌‌‌‌‌‌‌‌‌‌‌‌‌‌‌‌ಗಳು, ಮಾಧ್ಯಮದ ವಿದ್ಯಾರ್ಥಿಗಳು, ಎನ್‌‌‍ಜಿಓ ಪ್ರತಿನಿಧಿಗಳು, ಮಾನವ ಹಕ್ಕುಗಳ ಹೋರಾಟಗಾರರು... ಜಡ್ಜ್ ಶಂಕರಯ್ಯನವರಿಗೆ ತಲೆ ಚಿಟ್ಟು ಹಿಡಿಯುತ್ತಿತ್ತು. ಹೈ ಪ್ರೊಫೈಲ್ ಕೇಸುಗಳೆಂದರೆ ಅವರಿಗೆ ಮೊದಲಿನಿಂದಲೂ ಕಿರಿಕಿರಿ. ನ್ಯಾಯಾಧೀಶರು ಅನಗತ್ಯವಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳಬಾರದು ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ. ಜಗತ್ತಿನ ಆಗುಹೋಗುಗಳಿಗೆಲ್ಲಾ ತಾವೇ ಬಾದ್ಯಸ್ಥರು ಎನ್ನುವಂತೆ ಮೈಕ್ ಮುಖಕ್ಕೆ ಹಿಡಿದು, ’ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು’ ಎಂದು ವಿಶ್ವಸಂಸ್ಥೆಯ ವೇದಿಕೆ ಕಲ್ಪಿಸಿಕೊಟ್ಟಂತೆ ಓಡಾಡುವ ದೃಶ್ಯ ಮಾಧ್ಯಮದವರನ್ನು ಕಂಡರಂತೂ ಅವರಿಗೆ ಮೈ ಉರಿದುಹೋಗುತ್ತಿತ್ತು. 24 ಗಂಟೆಗಳೂ ಬಾಯಿಬಡಿದುಕೊಳ್ಳುವ ನ್ಯೂಸ್ ಚಾನಲ್‌‌‌‌‌‌‌‌‌‌‍ಗಳು ಬಂದ ಮೇಲಂತೂ ಆ ನಿರೂಪಕರು ಮೈಮೇಲೆ ಅಣ್ಣಮ್ಮ ಬಂದಂತೆ ಎಗರಾಡಿ, ಕಿರುಚಾಡಿ, ಕೇಸು ಕೋರ್ಟಿಗೆ ಬರುವ ಮೊದಲೇ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವುದನ್ನು ಕಂಡರಂತೂ ಅವರೆಲ್ಲರನ್ನೂ ಕರೆಸಿ, ಸಾಲಾಗಿ ನಿಲ್ಲಿಸಿ, ಒಬ್ಬೊಬ್ಬರಿಗೂ ನಾಲ್ಕು ವರ್ಷ ಮಾತೇ ಆಡದಂತೆ ಶಿಕ್ಷೆ ವಿಧಿಸಿಬಿಡಬೇಕು ಅನ್ನಿಸಿಬಿಡುತ್ತಿತ್ತು. ಈಗ ಅವರ ಮುಂದೆ ಇರುವ ಕೇಸ್ ಸಹ ಅಂತಹುದೆ, ಕರ್ನಾಟಕದ ಅರ್ಧ ಚಾನೆಲ್‌‌‌‌‌ಗಳು ಆತನನ್ನು ಅಪರಾಧಿಯನ್ನಾಗಿಸಿದ್ದರೆ, ಇನ್ನುಳಿದವುಗಳಲ್ಲಿ ಕೆಲವು ನಿರಪರಾಧಿ ಅಂತಾಗಿಸಿ, ಮಿಕ್ಕವು ಅಪರಾಧಿಯಾಗಿದ್ದರೂ, ಬದುಕುವ ಹಕ್ಕಿದೆ ಎಂದು ವಾದಿಸಿ, ದಿನಕ್ಕೊಂದು ಸ್ಟೋರಿ ಮಾಡಿ, ಪ್ಯಾನೆಲ್ ಚರ್ಚೆ ಮಾಡಿ ಜನಗಳ ಮನೆಗಳನ್ನು ಕೋರ್ಟ್ ಹಾಲ್ ಮಾಡಿಟ್ಟಿದ್ದರು. ಇಂದು ಕೇಸ್‌‌‌‌‌‌‌‌‌‍ನ ಮೊದಲ ದಿನ, ಕೋರ್ಟ್ ಹಾಲ್ ಅನ್ನ ಬೆಂದ ಮಡಕೆಯ ಹಾಗೆ ಕುದಿಯುತ್ತಿತ್ತು. ಕೋರ್ಟ್ ಹೊರಗೆ ಎರಡು ಗುಂಪುಗಳು ಪರ ವಿರೋಧ ಘೋಷಣೆಗಳನ್ನು ಕೂಗಿ, ಟಿವಿ ಕ್ಯಾಮೆರಾಗಳ ಗಮನ ಸೆಳೆಯಲು ಪ್ರಯತ್ನ ನಡೆಸಿದ್ದವು. ’ಆರ್ಡರ್, ಆರ್ಡರ್’ ಶಂಕರಯ್ಯನವರು ಮತ್ತೆ ಇನ್ನಷ್ಟು ಬಲಬಿಟ್ಟು ಸುತ್ತಿಗೆ ಕುಟ್ಟಿದರು.

ಕಟಕಟೆಯಲ್ಲಿದ್ದ ವೆಂಕಟೇಶ ಮುಖಕಿವುಚಿ ಎರಡೂ ಕೈಗಳಿಂದ ಕಿವಿ ಮುಚ್ಚಿಕೊಂಡ. ರಕ್ತ ಸುರಿಯುವಂತೆ ಕಣ್ಣು ಕೆಂಪಾಗಿ, ಎದುರಿನ ಚಿತ್ರಗಳೆಲ್ಲಾ ಮಸುಕು ಮಸುಕಾಗಿತ್ತು. ಗಾಯಗೊಂಡ ಪ್ರಾಣಿಯಂತೆ ಕಟೆಕಟೆಯೊಳಗೆ ವ್ಯಗ್ರನಾಗಿ ಹರಿದಾಡುತ್ತಿದ್ದ. ಶಬ್ಧ ಎಂದರೆ ಅವನ ಕಿವಿಗಳು ಕೆಂಪೇರಿ, ಎದೆ ಧಡ ಧಡ ಎಂದು ಹೊಡೆದುಕೊಳ್ಳುತ್ತಿತ್ತು. ಅದು ಇಂದಿನ ಕಾಯಿಲೆಯಲ್ಲ. ಹುಟ್ಟಿದಾಗ ಅವನೂ ಎಲ್ಲರಂತೆ ಆರಾಮಾಗೆ ಅತ್ತು ನಕ್ಕು ಸುಖವಾಗಿದ್ದ, ಐದು ವರ್ಷದವನಿದ್ದಾಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆ ಘಟನೆ ನಡೆಯುವವರೆಗೂ. ಅವರದು ಒಟ್ಟು ಮನೆ, ದೇವಾಂಗದವರ ರಾಜಪ್ಪ ಎಂದರೆ ನಾಲ್ಕು ತಮ್ಮಂದಿರು, ಮೂವರು ತಂಗಿಯರ ದೊಡ್ಡಣ್ಣ. ಹಬ್ಬ ವಾರ ಎಂದರೆ ಅವರು, ಅವರನ್ನು ಮದುವೆ ಆದವರು, ಅವರ ಮಕ್ಕಳು, ಬೀಗರು ಎಲ್ಲಾ ರಾಜಪ್ಪನ ಮನೆಯಲ್ಲೇ ಸೇರಬೇಕು. ಖರ್ಚು ಮಾಡುವುದೆಂದರೆ ದುಡ್ಡಿನ ಮುಖ ನೋಡಿದವನಲ್ಲ ರಾಜಪ್ಪ. ವ್ಯವಹಾರವೂ ಜೋರಾಗೇ ನಡೆಯುತ್ತಿತ್ತು. ಸಾಲು ಸಾಲು ಮಗ್ಗಗಳು, ಅಲ್ಲಿ ನೇಯ್ದ ಸೀರೆಗಳು ಸೂಕ್ಷ್ಮವಾದ ಚಿತ್ರಗಳಿಗೆ ಹೆಸರುವಾಸಿ. ದೇಶದ ನಾನಾ ಕಡೆಗೆ ಅಲ್ಲಿನ ಮಾಲು ಹೋಗುತ್ತಿತ್ತು. ಎಲ್ಲಾ ಹಬ್ಬಗಳಿಗಿಂತಲೂ ದೀಪಾವಳಿ ಎಂದರೆ ಇನ್ನೂ ಸಂಭ್ರಮ. ಅಂದೂ ಹಾಗೇ ಮಕ್ಕಳಿಗೆಲ್ಲಾ ಸೇರಿ ಒಂದು ರಾಶಿ ಪಟಾಕಿ ತಂದಿದ್ದ. ಮುಂದೆ ನಡೆಯಬಹುದಾದ ದುರಂತದ ಯಾವುದೇ ಮುನ್ಸೂಚನೆ ಇಲ್ಲದೆ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಪಟಾಕಿ ಹೊಡೆಯುತ್ತಿದ್ದರು. ಹೆಂಗಸರೆಲ್ಲಾ ಸುರುಸುರು ಬತ್ತಿ ಹಚ್ಚುತ್ತಿದ್ದರೆ, ಗಂಡಸರು ಕಿವಿ ಸಿಡಿಯುವ ಆಟಂಬಾಂಬ್ ಗಳಿಗೆ ಕಿಡಿ ಹಚ್ಚುವುದೇ ತಮ್ಮ ಗಂಡಸುತನಕ್ಕಿಟ್ಟ ಕಿರೀಟ ಎನ್ನುವಂತೆ, ಹೆಣ್ಣುಮಕ್ಕಳ ಕಡೆಗೊಂದು ಮುಸಿನಗು ಬಿಸಾಕಿ ದೀಪಸಾಲಿನ ತಂಪನ್ನು, ಶಬ್ಧದ ಬಿಸಿಯಿಂದ ಕದಡುತ್ತಿದ್ದರು. ಮಕ್ಕಳು ನಿಂತಲ್ಲಿ ನಿಲ್ಲದೆ, ಕುಣಿಯುತ್ತಾ, ಓಡುತ್ತಾ, ’ಹುಷಾರು, ಬಿಸಿ ತುಳಿದೀರಾ’ ಎಂದು ಕೂಗುತ್ತಿದ್ದ ಅಮ್ಮ, ಅತ್ತೆ, ಚಿಕ್ಕಮ್ಮಂದಿರ ಮಾತುಗಳನ್ನು ಕಿವಿಯಾಚೆಗೆ ಅಲ್ಲೇ ಕೊಡವಿ ಹಾಕುತ್ತಿದ್ದರು. ಅಷ್ಟರಲ್ಲಿ ಯಾವುದೋ ಪುಟಾಣಿ ಹಚ್ಚಿದ ರಾಕೆಟ್ ಇಟ್ಟ ಬಾಟೆಲ್ ಸೊಟ್ಟಗಿದ್ದದ್ದರಿಂದ ರಾಕೆಟ್ ಸುಂಯ್ ಎಂದು ತಲೆ ಬಗ್ಗಿಸಿಕೊಂಡು ಹಾರಿ ತಲೆಬಾಗಿಲ ಪಕ್ಕದಲ್ಲಿದ್ದ ಪಟಾಕಿ ರಾಶಿಯ ಒಳಗೇ ನುಗ್ಗಿ ಬಿಟ್ಟಿತು. ಪಕ್ಕದಲ್ಲೇ ಕೂತು, ಬೆರಗುಗಣ್ಣುಗಳಿಂದ ಬೆಳಕು ಚಿಮ್ಮುವ ಪರಿಯನ್ನು ನೋಡುತ್ತಿದ್ದ ವೆಂಕಟೇಶನನ್ನು ಅವನ ಚಿಕ್ಕಪ್ಪ ಎಳೆದುಕೊಂಡು ಬೆಂಕಿಯಿಂದ ತಪ್ಪಿಸಿದ್ದರೂ ಪಟಾಕಿಗಳ ಸದ್ದಿನಿಂದ ಪಾರು ಮಾಡಲು ಆಗಿರಲಿಲ್ಲ. ಸರಿಸುಮಾರು ಕಾಲು ಗಂಟೆ ಅದೇ ಶಬ್ಧ, ಢಂ, ಡಮಾರ್, ಡಢಂ, ಪಟ್..... ಐದು ವರುಷದ ಹುಡುಗ ಓಡಬೇಕು ಎನ್ನುವುದೂ ತೋಚದೆ ಕಾಲುಗಳು ನೆಲಕ್ಕೆ ಹೂತಂತೆ ನಿಂತುಬಿಟ್ಟಿದ್ದ, ಕಣ್ಣುಗಳ ತುಂಬಾ ಬೆಂಕಿಯ ಚಿತ್ರ ಕುಣಿಯುತ್ತಿದ್ದರೆ, ಕಿವಿಗಳಲ್ಲಿ ಒಂದೇ ಸದ್ದು. ಪಟಾಕಿ ಸಿಡಿದು, ಆಗೀಗ ಫಟ್ ಫಟ್ ಎಂದು ಮಳೆನಿಂತ ಮೇಲಿನ ಮರದ ಹನಿಯಂತೆ ಸದ್ದು ನಿಲ್ಲುವ ಸಮಯಕ್ಕೆ, ನಿಂತವನು ನಿಂತಂತಯೇ ಕುಸಿದುಬಿದ್ದ. ಯಾರೋ ಎತ್ತಿಕೊಂಡರು, ಯಾರೋ ನೀರು ಚುಮುಕಿಸಿದರು, ಯಾರೋ ಓಡಿಹೋಗಿ ಆಂಜನೇಯನ ಗುಡಿಯಿಂದ ಬಂಡಾರ ತಂದು ಹಣೆತುಂಬಾ ಹಚ್ಚಿದರು. ಎಚ್ಚರಾದ ಮಗುವಿಗೆ ಮರು ದಿನದಿಂದ ಒಂದು ವಾರ ಸುಡುವ ಜ್ವರ. ಆಮೇಲೆ ಎದ್ದ ಹುಡುಗನ ಮಂಕು ಕಳೆಯಲೇ ಇಲ್ಲ. ಸಣ್ಣ ಸದ್ದಿಗೂ ಬೆಚ್ಚಿ ಬೀಳುತ್ತಿದ್ದ. ಆಂಜನೇಯನ ತಾಯತ, ಮಸೀದಿಯ ನವಿಲುಗರಿ, ಕರಡಿ ಕೂದಲ ತಾಯತ, ಮಾರಮ್ಮನ ಬೇವಿನ ಎಲೆ ಪೂಜೆ ಎಲ್ಲಾ ಆಯಿತು. ಕಡೆಗೆ ಗೋರ್ಮೆಂಟ್ ಆಸ್ಪತ್ರೆ ಡಾಕ್ಟರ ಹತ್ತಿರ ತೋರಿಸಿದ್ದೂ ಆಯಿತು. ಉಹೂ ಏನೂ ಪ್ರಯೋಜನ ಆಗಲಿಲ್ಲ.

ಅದೇ ಕಡೆ ಹಬ್ಬ ರಾಜಣ್ಣನ ಮನೆಯಲ್ಲಿ ಎಲ್ಲರೂ ಸೇರಿ ಮಾಡಿದ್ದು, ಆಮೇಲೆ ಯಾರದೋ ಕಣ್ಣೆಸರು ಆದ ಹಾಗೆ ಎಲ್ಲವೂ ಕರಗುತ್ತಲೇ ಹೋಯಿತು. ಅವರ ಮಾಲು ಹೋಗುತ್ತಿದ್ದ ಎರಡು ಲಾರಿಗಳು ಘಾಟ್‌‍ನಲ್ಲಿ ಕಮರಿಗೆ ಉರುಳಿ ಆಕ್ಸಿಡೆಂಟ್ ಆಗಿದ್ದು ಶುರುವಾತು ಮಾತ್ರ. ಮನೆಯಲ್ಲಿ ಜಗಳ, ಆಸ್ತಿ ಪಾಲಾಯಿತು. ಮನೆಯಲ್ಲಿದ್ದ ಮಗ್ಗಗಳು, ಎಂಟು ನಾಲ್ಕಾಗಿ, ನಾಲ್ಕು ಎರಡಾಗಿ, ಕಡೆಗೆ ರಾಜಪ್ಪ ಒಬ್ಬನೇ ಕೂತು ಆರು ಕಟ್ಟುವ ಸಮಯದಿಂದ ಕರಾವು ಮನೆಗೆ ಹಿಂದಿರುಗುವವರೆಗೂ ಲಾಳಿ ಎಳೆಯುತ್ತಾ, ಮಗ್ಗದ ಹಗ್ಗ ಜಗ್ಗುತ್ತಾ ಟರ್ ಟರ್ ಟಕ್ ಎಂದು ಮಗ್ಗ ಆಡಿಸುತ್ತಾ ಕುಳಿತಿರುತ್ತಿದ್ದ. ಅವನು ಮಗ್ಗ ಶುರು ಮಾಡಿದನೆಂದರೆ ಸಾಕು ವೆಂಕಟೇಶ ಕಿವಿ ಮುಚ್ಚಿಕೊಂಡು ಮನೆಯಿಂದ ಓಡಿಬಿಡುತ್ತಿದ್ದ. ಸದ್ದು ಎಂದರೆ ಅವನೆದೆ ಹೊಡೆದುಕೊಳ್ಳುತ್ತಿತ್ತು, ಮೈಬೆವರಿ, ಕಣ್ಣುಗಳಲ್ಲಿ ಮತ್ತೆ ಬೆಂಕಿ ಕುಣಿದು, ಕಿವಿಯೊಳಗೆ ಕೂತು ಯಾರೋ ತಮಟೆ ಬಡಿದಂತಾಗುತ್ತಿತ್ತು. ಮನೆಯಿಂದ ಹೊರಗೆ ಓಡಲು ಅವನು ಕೊಡಬಹುದಾಗಿದ್ದ ಒಂದೇ ಕಾರಣ ಶಾಲೆ. ಹಾಗಾಗಿ ದಿನ ತಪ್ಪಿಸದಂತೆ ಶಾಲೆಗೆ ಹೋಗಿ ಹೇಗೋ ಎಸ್ ಎಸ್ ಎಲ್ ಸಿ ಮುಗಿಸಿದ. ಮನೆಯಲ್ಲಿದ್ದರೆ ಮಗ್ಗದ ಮುಂದೆ ಕೂರಿಸುತ್ತಾರೆ ಎಂದು ಹೆದರಿ ಅಂದು ಬೆಂಗಳೂರಿಗೆ ಓಡಿ ಬಂದ ವೆಂಕಟೇಶನಿಗೆ ಊರಿನ ಋಣ ಅಂದೇ ತೀರಿತು.

ಬೆಂಗಳೂರಿಗೆ ಬಂದ ನಾಲ್ಕು ದಿನಕ್ಕೆ ಕೈಲಿದ್ದ ಕಾಸು ಕರಗುತ್ತಾ ಬಂತು. ಇವನ ಓದಿಗೆ ಯಾವ ಕೆಲಸ ಸಿಕ್ಕಾತು, ಅದಕ್ಕಿಂತ ಹೆಚ್ಚಾಗಿ ಒಬ್ಬರ ಮುಂದೆ ತಲೆ ಎತ್ತಿ ಮಾತನಾಡುವ ಛಾತಿ ಅವನಿಗಿರಲಿಲ್ಲ. ಉಣ್ಣಲು ಊಟ, ಇರಲು ಜಾಗ ಎರಡೂ ಸಿಗುತ್ತದೆ ಎನ್ನುವ ಒಂದೇ ಕಾರಣಕ್ಕೆ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿದ. ಕೆಲಸಕ್ಕೆ ಹೆದರುವವನಲ್ಲವಾದರೂ,  ಇಲ್ಲೂ ಅವನನ್ನು ಕಾಡುತ್ತಿದ್ದ ಒಂದೇ ಸಮಸ್ಯೆ ಶಬ್ಧ. ಬೆಳ್ಳಂಬೆಳಗ್ಗೆ ಶಟರ್ ಬಾಗಿಲು ಎಳೆಯುವುದರೊಂದಿಗೆ ಶುರುವಾಗುತ್ತಿದ್ದ ಶಬ್ಧದ ಹುಳ ನಿಧಾನವಾಗಿ ಅವನನ್ನು ಕೊರೆಯಲು ಶುರು ಮಾಡುತ್ತಿತ್ತು. ಗ್ರೈಂಡರ್, ಮಿಕ್ಸರ್, ಧಡ ಧಡ ಎಂದು ಬಚ್ಚಲಿನಲ್ಲಿ ಬೀಳುತ್ತಿದ್ದ ಪಾತ್ರೆಗಳು, ಕುಕ್ಕರ್ ಸೀಟಿ, ಬೆಳಗ್ಗೆ ತಿಂಡಿಯ ಸಮಯ ಮುಗಿಯುವುದರೊಳಗೆ ಅವನು ಹುಚ್ಚನಂತಾಗಿರುತ್ತಿದ್ದ. ಒಮ್ಮೆ ಪಾತ್ರೆ ತೊಳೆಯುತ್ತಿದ್ದಾಗ, ಕ್ಲೀನರ್ ಒಬ್ಬ ಪಾತ್ರೆಗಳನ್ನು ತಂದು ಇವನ ಕಿವಿಯ ಪಕ್ಕಕ್ಕೇ ಧಡ್ ಧಡಾರ್ ಪಟ ಪಠಾರ್ ಟಟ್ಟಟ್ ಎಂದು ಸುರಿದ ಪರಿಣಾಮ ಇವನಿಗೇ ಗೊತ್ತಿಲ್ಲದಂತೆ ಸಿಟ್ಟು ನೆತ್ತಿಗೇರಿ ಅವನನ್ನು ಧಬ ಧಭ ಎಂದು ಬಡಿದು ಹಾಕಿದ್ದ. ಮಾತೇ ಆಡದ ವೆಂಕಟೇಶ ಹೀಗೆ ರುದ್ರ ರೂಪ ತಾಳಿದ್ದು ನೋಡಿ ಎಲ್ಲರಿಗೂ ಇವನ ಮೈಮೇಲೆ ಯಾವುದೋ ಪಿಶಾಚಿ ಮೆಟ್ಟಿರಬೇಕು ಅನ್ನಿಸಿ ಅಂದೇ ಇವನನ್ನು ಹೋಟೆಲ್ ಹಿತ್ತಲಿನಿಂದ ಅಲ್ಲಿಂದ ಹಾಗೆ ಓಡಿಸಿದ್ದರು. ಅಷ್ಟರಲ್ಲಿ ಅವನ ಪುಣ್ಯವೋ ಏನೋ, ಯಾವುದೋ ಸೆಕ್ಯುರಿಟಿ ಏಜೆನ್ಸಿಯಲ್ಲಿ ಅವನಿಗೆ ಕೆಲಸ ಸಿಕ್ಕಿತು. ಊರೆಲ್ಲಾ ಮಲಗಿದ ಮೇಲೆ ಡ್ಯೂಟಿ ಜಾಯಿನ್ ಆದರೆ ಊರು ಏಳುವಾಗ ಬಂದು ಮನೆ ಸೇರಿಕೊಳ್ಳುತ್ತಿದ್ದ. ಅವನ ಮನೆಯಾದರೂ ಎಲ್ಲಿ, ಬೇಕೆಂದೇ ಸೊಂದಿ ಗೊಂದಿ ಸೋಸಿ, ದೊಡ್ಡ ರಸ್ತೆಯ ಒಳಗಿನ ಸಣ್ಣ ಗಲ್ಲಿಗಳಲ್ಲಿ, ದೊಡ್ಡದೊಡ್ಡ ಗಾಡಿಗಳು ಬರದ ಗಲ್ಲಿಗಳ ಗೂಡುಗಳಲ್ಲಿ ಒಂದು ಅನಾಮಿಕ ಬಿಲದಲ್ಲಿ. ರಾತ್ರಿ ಡ್ಯೂಟಿ ಮುಗಿಸಿ ಬೆಳಗ್ಗೆ ಬಂದು ಸ್ನಾನ ಮಾಡಿ, ಟೀ ಬನ್ನು ತಿನ್ನುವ ಹೊತ್ತಿಗೆ ಓಣಿಯ ಮಕ್ಕಳೆಲ್ಲಾ ಶಾಲೆಗೆ ಹೋಗಿ, ಗಂಡಸರು ಫ್ಯಾಕ್ಟರಿಗಳಿಗೆ, ಹೆಂಗಸರು ಗಾರ್ಮೆಂಟ್ ಕೆಲಸಕ್ಕೆ, ಮನೆಕೆಲಸಕ್ಕೆ ಹೋಗಿ, ಓಣಿಯೆನ್ನುವ ಓಣಿ ನಿಶ್ಯಬ್ಧ ಎನ್ನುವ ಹೆಪ್ಪು ಹಾಕಿದ ಹಾಲಿನಂತೆ ನಿಧಾನವಾಗಿ ಹರಳುಗಟ್ಟುತ್ತಿತ್ತು. ವೆಂಕಟೇಶ ತಣ್ಣಗೆ ಮಲಗುತ್ತಿದ್ದ. ಮತ್ತೆ ಸಂಜೆ ಮಕ್ಕಳೆಲ್ಲಾ ಮನೆಗೆ ಬಂದು, ಆಟಕ್ಕೆ ಬೀದಿಗಿಳಿಯುವಾಗ ಅವನ ನಿದ್ದೆ ತೇಲಿ ಎಚ್ಚರಾಗುತ್ತಿತ್ತು. ಜೀವನದಲ್ಲಿ ನೆಮ್ಮದಿ ಎನ್ನುವುದನ್ನು ಅವನು ಕಂಡಿದ್ದೇ ಆವಾಗ. 

ಹೀಗೆ ಮಾಡು ಸಂದಿಯ ಪಾರಿವಾಳದಂತೆ ಸಾಗುತ್ತಿದ್ದ ಅವನ ಜೀವಕ್ಕೆ ಸಿಡಿಲು ಬಡಿಯಲು ಎರಡು ಕಾರಣಗಳು : ಇವನ ಮನೆ ಇದ್ದ ಮಾರೇನಹಳ್ಳಿಯ ಪಕ್ಕದ ರಸ್ತೆಯಲ್ಲಿ ಮೆಟ್ರೋ ಕೆಲಸ ಶುರುವಾಗಿ, ಇವನು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಅಲ್ಲಿ ಹಗಲು ರಾತ್ರಿಗಳು ಏಕವಾಗಿಬಿಟ್ಟಿದ್ದವು. ಸದ್ದು ಸದ್ದು.. ಅರ್ಧ ಇಂಚಿನ ಪೈಪಿನಲ್ಲಿ ಒಂದು ಇಂಚು ದಪ್ಪದ ನೀರ ಧಾರೆ ನಿರಂತರವಾಗಿ ಒತ್ತೊತ್ತಿ ನಡೆದರೆ ಅಂಚುಗಳೆಲ್ಲ ಬಿರಿಯುವ ಹಾಗೆ, ಮೊದಲೇ ತನ್ನ ಒಡಲುದ್ದಕ್ಕೂ ಗಾಡಿಗಳನ್ನು ತುಂಬಿಕೊಂಡಿದ್ದ ರಸ್ತೆಗಳಲ್ಲಿ ಈಗ ಮೆಟ್ರೋಗೆಂದು ಅರ್ಧ ರಸ್ತೆ ಕಿತ್ತುಕೊಂಡ ಮೇಲೆ, ಸರಾಗವಾಗಿ ಹರಿಯುತ್ತಿದ್ದ ಗಾಡಿಗಳು ನಿಲ್ಲಲಾರದೆ ಒರಲುತ್ತಾ ಕೂಗಾಡುತ್ತಿದ್ದವು. ಟೂ ವೀಲರ್ಗಳು ಫುಟ್ಪಾತ್ ಹತ್ತುತ್ತಿದ್ದವು, ಗಾಡಿಯಲ್ಲಿದ್ದವರ ಅಸಹನೆ ಸುಮ್ಮಸುಮ್ಮನೆ ಹಾರನ್ ಒತ್ತುವಂತೆ ಮಾಡುತ್ತಿತ್ತು. ವೆಂಕಟೇಶನಿಗೆ ಒಂದು ವಾರದಲ್ಲೇ ನರಕದ ಅನುಭವ ಆಗಿ ನಿಂತ ನಿಲುವಿನಲ್ಲಿ ಇವನು ಮನೆ ಖಾಲಿ ಮಾಡಬೇಕಾಗಿ ಬಂತು. ಕಡೆಗೆ ತಿಲಕ್ ನಗರದ ಒಳರಸ್ತೆಯಲ್ಲಿ, ರಾಜೀವ್ ಗಾಂಧಿ ಆಸ್ಪತ್ರೆಯ ಎದುರುಗಡೆಯ ಓಣಿಯಲ್ಲಿ, ಮಸೀದಿ ಹಾದು, ಅರ್ಧ ಮುಕ್ಕಾಲು ಕಿಮೀ ಒಳಕ್ಕೆ ಹೋದರೆ, ಬನ್ನೇರುಘಟ್ಟ ಮುಖ್ಯ ರಸ್ತೆಗೆ ಸೇರುವ ಒಂದು ಕಿರು ಓಣಿಯಲ್ಲಿ ಒಂದು ರೂಂ ಸಿಕ್ಕಿತು. ಅಲ್ಲಿ ಮೆಟ್ರೋ ಬರುವ ಛಾನ್ಸೇ ಇರಲಿಲ್ಲ. ಎರಡೂ ಕಡೆಯಿಂದಲೂ ಮೇನ್ ರೋಡ್ ದೂರ. ಹತ್ತಿರದಲ್ಲೆಲ್ಲೂ ಶಾಲೆ, ಮಾರುಕಟ್ಟೆ ಇರಲಿಲ್ಲ. ಎಲ್ಲ ರೀತಿಯಿಂದಲೂ ವೆಂಕಟೇಶನಿಗೆ ಅನುಕೂಲವಾಗಿದ್ದ ಜಾಗ ಅದು. ಓನರ್ ಹಾಕಿದ್ದು ಒಂದೇ ಕಂಡಿಶನ್, ಹನ್ನೊಂದು ತಿಂಗಳಿಗೆ ಮೊದಲು ಮನೆ ಖಾಲಿ ಮಾಡಿದರೆ ಅಡ್ವಾನ್ಸ್ ವಾಪಸ್ ಕೊಡುವುದಿಲ್ಲ. ಒಪ್ಪಲೇಬೇಕಾದ ಅನಿವಾರ್ಯತೆಗೆ ವೆಂಕಟೇಶ ತಲೆ ಆಡಿಸಿದ್ದ. ಬಂದು ಮನೆ ಸೇರಿಕೊಂಡವನು ಸುಖದ ನಿಟ್ಟುಸಿರು ಬಿಟ್ಟಿದ್ದ. 

ಮೊದಲ ಸಮಸ್ಯೆಯನ್ನು ಹೇಗೋ ಪರಿಹರಿಸಿಕೊಂಡ. ಆದರೆ ಆ ಎರಡನೆಯ ಸಮಸ್ಯೆಯ ಹೆಸರನ್ನೂ ಇವನು ಕಿವಿಗಳಲ್ಲಿ ಕೇಳಿರಲಿಲ್ಲ, ಕಣ್ಣುಗಳಲ್ಲಿ ನೋಡಿರಲಿಲ್ಲ. ಆ ಸಮಸ್ಯೆಯ ಹೆಸರು ಗೂಗಲ್ ಮ್ಯಾಪ್. ಮಳೆ ಬಂದರೆ ಉಟ್ಟ ಬಟ್ಟೆಯ ಒಳಗೆಲ್ಲಾ ಬೆತ್ತಲಾಗುವಂತೆ, ಇದರಿಂದ ಬೆಂಗಳೂರಿನ ಒಳಗಲ್ಲಿಗಳೆಲ್ಲಾ ಇದ್ದಕ್ಕಿದ್ದಂತೆ ಬೆತ್ತಲಾಗಿ ಬೀದಿಗೆ ಬಿದ್ದಿದ್ದವು. ಅಲ್ಲಿ ನೆಲೆಸಿರುವವರು ಬಿಟ್ಟು ಮತ್ಯಾರೂ ಸುಳಿಯದ ರಸ್ತೆಗಳಲ್ಲಿ ಈಗ ಕಂಡು ಕೇಳಿಲ್ಲದ ವಾಹನಗಳು ನುಗ್ಗುತ್ತಿದ್ದವು. ಎಲ್ಲೋ ಟ್ರಾಫಿಕ್ ಜಾಮ್ ಆದರೆ ಮಾಯಾವಿಯ ಕೈನ ದೊಂದಿಯಂತೆ ಗೂಗಲ್ ಮರ್ಯಾದೆಯಿಂದ ಮಾನ ಮುಚ್ಚಿಕೊಂಡಿರುತ್ತಿದ್ದ ಓಣಿಗಳ ಒಳ ಮೈನ ಏರು ಇಳಿತ, ತಿರುವುಗಳ ದಿಕ್ಕು ತೋರಿಸುತ್ತಿತ್ತು. ಟ್ರಾಫಿಕ್ ಜಾಮಿನಲ್ಲಿ ಇರುವೆಗಳಂತೆ ಸಿಕ್ಕಿಹಾಕಿಕೊಂಡಿದ್ದ ಗಾಡಿಗಳೆಲ್ಲಾ ರೇಸಿಗೆ ಬಿದ್ದ ಮಕ್ಕಳಂತೆ ಅಲ್ಲಿ ನುಗ್ಗುತ್ತಿದ್ದವು. ಇವನು ಬಂದ ತಿಂಗಳಲ್ಲಿ ಈ ಸಮಸ್ಯೆ ಶುರು ಆಗಿತ್ತು. ಡೈರಿ ಸರ್ಕಲ್‌‌ನಲ್ಲಿ ಯಾವುದೋ ರಸ್ತೆ ಕಾಮಗಾರಿ ಶುರುವಾಗಿ, ಇದ್ದಕ್ಕಿದ್ದಂತೆ ಅಕ್ಕಪಕ್ಕದ ರಸ್ತೆಗಳು ಗೂಗಲ್ ಮ್ಯಾಪ್ ಕಣ್ಣಿಗೆ ಲಗ್ಗೆ ಹಾಕಿದ್ದವು. ಹಗಲಿಡಿ ಸದ್ದು, ಪೊಂಯ್ ಪೊಂಯ್, ಪೀಪೀಪೀ, ಕೊಂಯ್ ಕೊಂಯ್ ಹಾರನ್, ಜೊತೆಗೆ ಇಕ್ಕಟ್ಟು ಓಣಿಗಳಲ್ಲಿ ಗೇರ್ ಬದಲಾಯಿಸಿ, ಆಕ್ಸಿಲರೇಟರ್ ಒತ್ತುವ ಧಡ್ ಧಡ್ ಡರ್ ಸದ್ದು. ಎಲ್ಲವೂ ಸೇರಿ ವೆಂಕಟೇಶನ ನಿದ್ದೆಯನ್ನು ನುಂಗಿ ಹಾಕಿದ್ದವು. ಹಗಲು ಎಂಟು ಗಂಟೆಗೆ ಶುರುವಾದ ಯಕ್ಷಗಾನ ಇವನು ಮನೆಯಲ್ಲಿದ್ದಷ್ಟು ಹೊತ್ತೂ ನಿಲ್ಲುತ್ತಿರಲಿಲ್ಲ. ಕಿವಿಗೆ ಹತ್ತಿ ತುರುಕಿಕೊಂಡ, ತಲೆ ಸುತ್ತಲೂ ಬಟ್ಟೆ ಕಟ್ಟಿಕೊಂಡ ಉಹೂ ಕಣ್ಣ ರೆಪ್ಪೆಗೆ ಕಣ್ಣು ಕೂಡಿದ್ದರೆ ಅಣ್ಣಮ್ಮನ ಮೇಲಾಣೆ. ಹಗಲಿಡೀ ನಿದ್ದೆ ತಪ್ಪಿ, ರಾತ್ರಿ ಅವನು ಕೆಲಸದ ಮೇಲಿರುವಾಗ ತೂಕಡಿಸುತ್ತಿದ್ದಾಗಲೇ ಒಮ್ಮೆ ಸೂಪರ್ವೈಸರ್ ಬಂದು ನಾಯಿಗೆ ಬೈದ ಹಾಗೆ ಬೈದಿದ್ದರು. ಇನ್ನೊಮ್ಮೆ ಹೀಗಾದರೆ ನಿಂತ ನಿಲುವಿನಲ್ಲಿ ಯೂನಿಫಾರಂ, ಶೂ ಬಿಚ್ಚಿಸಿಕೊಂಡು ಕಳಿಸುತ್ತೇವೆ ಎಂದು ಎಚ್ಚರಿಸಿದ್ದರು. ಇಡೀ ರಾತ್ರಿ ಗಂಟೆಗೊಮ್ಮೆ ತಣ್ಣೀರಿನಲ್ಲಿ ಮುಖ ತೊಳೆದುಕೊಂಡು ಕಾಲ ಹಾಕುತ್ತಿದ್ದ. ಒಂದಲ್ಲ ಎರಡಲ್ಲ ನಿದ್ದೆಯಿಲ್ಲದ ಪರದಾಟ. ಅಂದಿಗೆ ಹದಿನೈದು ದಿನಗಳಾಗಿದ್ದವು. ಕಣ್ಣುರಿ, ಅಜೀರ್ಣ, ಗ್ಯಾಸ್ಟ್ರಿಕ್, ಮಲಬದ್ದತೆ, ಅರೆ ಎಚ್ಚರ ಅವನನ್ನು ಹಣ್ಣು ಮಾಡಿದ್ದವು. ಏನನ್ನೂ ತಿನ್ನಬೇಕು ಅಂತ ಅನ್ನಿಸುತ್ತಲೇ ಇರಲಿಲ್ಲ, ಹುಳಿತೇಗು, ಎದೆ ಉರಿ. ಅಂದು ಕೆಲಸ ಮಾಡುವಾಗ ಒಂದು ಘಳಿಗೆ ಜೋಂಪು ಹತ್ತಿರಬಹುದು ಅಷ್ಟೆ. ಅವನ ಗ್ರಹಚಾರಕ್ಕೆ ಅದೇ ಸೂಪರ್ವೈಸರ್ ಮತ್ತೆ ಬಂದಿದ್ದರು. ಅಲ್ಲಿಂದಲ್ಲಿಗೇ ಇವನನ್ನು ಮನೆಗೆ ಹೋಗು ಎಂದಿದ್ದರು. ತಪ್ಪಾಯಿತು ಎನ್ನಬೇಕು, ಅವರ ಕೈಕಾಲು ಹಿಡಿಯಬೇಕು ಎಂದೂ ತೋಚಲಿಲ್ಲ ವೆಂಕಟೇಶನಿಗೆ. ತೂರಾಡುತ್ತಿದ್ದವನಿಗೆ ಒಂದು ಹೊತ್ತು ಕಣ್ತುಂಬಾ ನಿದ್ದೆ ಬಂದರೆ ಸಾಕು ಅನ್ನಿಸುತ್ತಿತ್ತು.  ಸುರಿಮಳೆ, ಗುಡುಗು, ಮಧ್ಯರಾತ್ರಿ ತೂರಾಡುತ್ತಾ ಬಂದವನಿಗೆ ಮನೆ ಮುಂದಿನ ರಸ್ತೆಯನ್ನು ನೋಡುತ್ತಾ ನೋಡುತ್ತಾ ಸಿಟ್ಟು ರುಮ್ಮನೆ ಏರಿತ್ತು. ವಠಾರದ ಮೂಲೆಯಲ್ಲಿದ್ದ ಗಡಾರಿ ತಂದವನು ಹುಚ್ಚು ಹಿಡಿದಂತೆ ಮನೆ ಎದುರಿನ ರಸ್ತೆಯನ್ನು ಅಗೆಯತೊಡಗಿದ. ಗುಡುಗು ಮಳೆ ಏರುತ್ತಾ ಹೋದಷ್ಟು ಇವನ ರೊಚ್ಚು ಹೆಚ್ಚಾಗುತ್ತಾ ಇತ್ತು. ಯಾವುದೋ ಗಲ್ಲಿಯ ರಸ್ತೆ, ಜನ ಓಡಿಯಾಡಲೆಂದು, ಅಲ್ಲಿನವರ ದ್ವಿಚಕ್ರ ವಾಹನಗಳು ಓಡಾಡಲೆಂದು ಕಾಟಾಚಾರಕ್ಕೆ ಟಾರು ಸುರಿದು ಮಾಡಿದ್ದ ರಸ್ತೆ. ಇತ್ತೀಚಿನ ಗಾಡಿಗಳ ಓಡಾಟದಿಂದ ಮೊದಲೇ ತಗ್ಗುಬಿದ್ದಿತ್ತು. ಮಳೆಗೆ ಇನ್ನೂ ಲಾಚಾರಾಗಿತ್ತು. ಮನೆಯ ಎದುರಿನ ರಸ್ತೆಯ ಉದ್ದಗಲಕ್ಕೂ ಅಲ್ಲಲ್ಲಿ ಅಲ್ಲಲ್ಲಿ ಅಗೆದು ರಸ್ತೆಯನ್ನು ಕುಲಗೆಡಿಸಿ ಬಂದು ಚಾಪೆಯ ಮೇಲೆ ಬಿದ್ದುಕೊಂಡ. ಅವನಿದ್ದ ಪರಿಸ್ಥಿತಿಯಲ್ಲಿ ಅದನ್ನು ಮರೆತೂ ಬಿಟ್ಟಿದ್ದ. ಆದರೆ ಅಲ್ಲೇ ಇದ್ದ ಎಟಿಎಂ ಕ್ಯಾಮೆರಾದಲ್ಲಿ ಅದೆಲ್ಲವೂ ಸೆರೆಯಾಗಿತ್ತು. ಬೆಳಗೆದ್ದು ನೋಡಿದ ರಸ್ತೆ ಜನಕ್ಕೆ ಅಚ್ಚರಿ. ಎಷ್ಟೇ ಮಳೆ ಬಂದರೂ ಹೀಗೆ ಇಷ್ಟೇ ಜಾಗ ಹೇಗೆ ಹೊಂಡ ಬೀಳಲು ಸಾಧ್ಯ? ಪಾಪ ವೆಂಕಟೇಶನ ಪ್ರತಾಪ ಗೂಗಲ್ಲಿಗೆ ಹೇಗೆ ಗೊತ್ತಾಗಬೇಕು? ಅದು ಮಾಮೂಲಿನಂತೆ ಈ ರಸ್ತೆ ಸರಾಗವಾಗಿದೆ ಬನ್ನಿ ಎಂದು ಹೇಳಿ, ಗಾಡಿಗಳು ಬಂದು, ಅತ್ತಲಿನ ಗಾಡಿಗಳು ಅತ್ತ, ಇತ್ತಲಿನ ಗಾಡಿಗಳು ಇತ್ತ ಎನ್ನುವಂತಾಗಿತ್ತು. ಯಾರೋ ಹೋಗಿ ಕಂಪ್ಲೇಂಟ್ ಕೊಟ್ಟರು. ವಿಚಾರಣೆಗೆ ಎಂದು ಬಂದ ಕಾನಸ್ಟೇಬಲ್ ಒಬ್ಬ, ಏಟಿಎಂ ಕ್ಯಾಮೆರಾದ ಫೂಟೇಜ್ ತೆಗೆದುಕೊಂಡು ಹೋದ. ಅದನ್ನು ಅವನು ಕ್ರೈಮ್ ಬೀಟ್‌‌‌‌‍ ಜರ್ನಲಿಸ್ಟ್ ಒಬ್ಬನಿಗೆ ಹೇಳಿ, ಅವನು ಅಂದಿನ ದಿನಕ್ಕೆ ಯಾವುದೂ ಸುದ್ದಿ ಇಲ್ಲ ಎನ್ನುವ ಅವಸರಕ್ಕೆ, ’ನಗರದ ಪ್ರಾರ್ಥನಾ ಸ್ಥಳವೊಂದರ ಸುತ್ತ ಮುತ್ತ ಉಗ್ರರ ಕೃತ್ಯ ನಡೆದ ಶಂಕೆ’ ಎಂದು ಒಂದು ಗಂಟೆ ಪ್ರೋಗ್ರಾಂ ಮಾಡಿ, ಚಾನೆಲ್ ಆ ರೀಲನ್ನು ಹಿಂದಕ್ಕೂ ಮುಂದಕ್ಕೂ ಹತ್ತು ಸಲ ಓಡಿಸಿತ್ತು. ಆ ಬಡಾವಣೆಯ ಜನ ಬೆಚ್ಚಿ ಬಿದ್ದಿದ್ದರು. ನಮ್ಮ ನಡುವೆಯೇ ಒಬ್ಬ ಉಗ್ರಗಾಮಿ ಇದ್ದ ಎಂದರೆ ಏನರ್ಥ? ಅದೇ ಬಡಾವಣೆಯಲ್ಲಿ ಒಂದು ಮಸೀದಿ ಇದ್ದದ್ದರಿಂದ ಅದು ಇನ್ನೂ ದೊಡ್ಡ ಸುದ್ದಿ ಆಯಿತು. ’ಬಲ್ಲ ಮೂಲಗಳ ಪ್ರಕಾರ’, ’ಹೆಸರು ಹೇಳಲು ಇಚ್ಚಿಸದ ಮೂಲಗಳು’ ಎಂದೆಲ್ಲಾ ಸುದ್ದಿ ಮಾಡಿ, ಕೊನೆಗೊಂದು ಪ್ರಶ್ನಾರ್ಥಕ ಚಿಹ್ನೆ ಸೇರಿಸಿ ಒಂದು ಚಾನೆಲ್ ಭರ್ಜರಿ ಬ್ಯಾಟಿಂಗ್ ಮಾಡಿತ್ತು. ಅಷ್ಟರಲ್ಲಿ ಇನ್ನೊಂದು ಚಾನೆಲ್ ಇವನ ಊರು ಯಾವುದು ಎಂದು ಪತ್ತೆ ಹಚ್ಚಿ, ಅವನ ಹೆಸರು ಹುಡುಕಿ, ಅದಕ್ಕೆ ಬೇರೆ ಇನ್ನೊಂದು ಆಯಾಮ ಕೊಡಲು ಹೋರಾಡುತ್ತಿದ್ದರು. ಏಟಿಎಂ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಇವನ ಮುಖವನ್ನು ಚಾ ಅಂಗಡಿಯ ಕ್ಲೀನರ್ ಒಬ್ಬ ಗುರುತು ಹಿಡಿದು, ಪೊಲೀಸರು ಹುಡುಕಿಕೊಂಡು ಬಂದಿದ್ದರು.  ಅಂದು ಪೋಲೀಸರು ಕರೆದುಕೊಂಡು ಹೋಗಿದ್ದು, ವೆಂಕಟೇಶನಿಗೆ ನಿದ್ದೆ ಮಾಡಲು ಬಿಟ್ಟಿರಲೇ ಇಲ್ಲ. ಮುಖಕ್ಕೆ ತಣ್ಣೀರೆರಚಿ ವಿಚಾರಣೆ ಮಾಡುತ್ತಲೇ ಇದ್ದರು. ಇವನು ಬಾಯಿಬಿಟ್ಟು ಏನೇ ಹೇಳಿದರೂ ಅವರಿಗೆ ಸಮಾಧಾನವಾಗಲೇ ಇಲ್ಲ. ಇವನೂ ಗೊಣಗೊಣ ಎಂದೇನೋ ಗೊಣಗುತ್ತಿದ್ದ. ಕೆಂಪು ಕಣ್ಣುಗಳು, ದಾಡಿ, ಮೀಸೆ, ಸಣಕಲ ಶರೀರ, ಅಸ್ಪಷ್ಟ ಮಾತುಗಳು ಎಚ್ಚರವಿದ್ದಿದ್ದರೆ ಅವನಿಗೇ ಅವನು ಉಗ್ರವಾದಿಯ ಹಾಗೆ ಕಾಣುತ್ತಿದ್ದನೋ ಏನೋ.

’ಆರ್ಡರ್, ಆರ್ಡರ್’ ಶಂಕರಯ್ಯನವರು ಮತ್ತೊಮ್ಮೆ ಸುತ್ತಿಗೆ ಕುಟ್ಟಿದರು. ಏನೇ ಪ್ರಶ್ನೆ ಕೇಳಿದರೂ ಆರೋಪಿ ಉತ್ತರಿಸುತ್ತಿಲ್ಲ. ಅವರ ತಾಳ್ಮೆಯೂ ತೀರುತ್ತಾ ಬಂದಿತ್ತು. ನೋಡಿದರೆ ಹುಚ್ಚನಂತೆ, ಡ್ರಗ್ ಅಡಿಕ್ಟ್‌‌‌ನಂತೆ ಕಾಣುತ್ತಿದ್ದ ಇವನ ಬಗ್ಗೆ ಒಂದು ಎಳ್ಳುಮೊನೆಯಷ್ಟೂ ಕನಿಕರ ಯಾರಲ್ಲೂ ಹುಟ್ಟುತ್ತಿರಲಿಲ್ಲ. ವಿಚಾರಣೆ ನಡೆಯುವಷ್ಟು ಕಾಲ ನ್ಯಾಯಾಂಗ ಬಂಧನಕ್ಕೆ ಎಂದು ಅವರು ಆದೇಶವಿತ್ತರು. ಯಾರೋ ಎಳೆದರು, ವ್ಯಾನ್ ಒಳಗೆ ತಳ್ಳಿದರು, ವೆಂಕಟೇಶನಿಗೆ ಈಚೆಯ ಧ್ಯಾಸವೇ ಇಲ್ಲ. ವ್ಯಾನ್ ದೊಡ್ಡ ಕಟ್ಟಡದ ಒಳಗೆ ಹೋಯಿತು. ಅವನಿಗೆ ಅರ್ಧ ಎಚ್ಚರ, ಅರ್ಧ ತೂರಾಟ, ಕಡೆಗೊಮ್ಮೆ ಒಂದು ಕೊಳಕು ಸೆಲ್ ಒಳಗೆ ಅವನನ್ನು ತಳ್ಳಿ ಬಾಗಿಲು ಹಾಕಿಕೊಂಡರು. ಯಾವುದೋ ಕಾಲದ ನಂತರ ವೆಂಕಟೇಶ ಒಂಟಿಯಾಗಿದ್ದ, ನಾಲ್ಕಾರು ನಿಮಿಷಗಳು ಕಳೆದವು. ನಿಧಾನವಾಗಿ ಅವನ ಮುಖದ ಗಂಟುಗಳು ಸಡಿಲಾದವು, ಬೆನ್ನುಮೂಳೆಯಲ್ಲಿದ್ದ ಒತ್ತಡದ ಗಂಟು ಬಿಟ್ಟುಕೊಂಡಿತು, ಧೀರ್ಘವಾಗಿ ಉಸಿರೆಳೆದುಕೊಂಡ. ತಲೆಯ ಮೇಲಿದ್ದ ಬಂಡೆಗಲ್ಲನ್ನು ಯಾರೋ ತೆಗೆದಿಟ್ಟಂತಾಯಿತು. ಧೀರ್ಘವಾಗಿ ನಿಟ್ಟುಸಿರಿಟ್ಟ ಅವನು ಅಲ್ಲೇ ಮೂಲೆಗೆ ಸರಿದ. ಆಚೀಚೆ ನೋಡಿದ ವೆಂಕಟೇಶ ಮಗುವಿನಂತೆ ಮಲಗಿ, ಕೈಕಾಲುಗಳನ್ನು ಮುದುರಿಕೊಂಡು ದೇವರಂತೆ ನಿದ್ರಿಸತೊಡಗಿದ.   

ಚಿತ್ರಗಳು: ಬಿ.ಕೆ. ಬಡಿಗೇರ, ಬೀದರ್‌

ಸಂಧ್ಯಾರಾಣಿ

ಪತ್ರಕರ್ತೆ, ಲೇಖಕಿ, ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಚಿನ್ನದ ಗಣಿ ಕೆ.ಜೆ.ಎಫ್‌ನಲ್ಲಿ ಪದವಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಹವ್ಯಾಸಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.

ಕನ್ನಡದ ಕೆಲವು ಇ-ಪತ್ರಿಕೆಗಳ ಅಂಕಣಕಾರ್ತಿಯಾಗಿರುವ ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ಯಾಕೆ ಕಾಡುತಿದೆ ಸುಮ್ಮನೆ(ಅಂಕಣ ಬರಹಗಳು), ತುಂಬೆ ಹೂ (ಜೀವನ ಚರಿತ್ರೆ), ಪೂರ್ವಿ ಕಲ್ಯಾಣಿ  (ನಾಟಕ) ಮುಂತಾದವು. ರಾಷ್ಟ್ರ ಪ್ರಶಸ್ತಿ ವಿಜೇತ ನಾತೀಚರಾಮಿ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದರು.

More About Author