Poem

ನಿ-ವೃತ್ತ

ಈಗ ಎಲ್ಲ ದಿನಗಳೂ ಭಾನುವಾರ
ಆದರೆ ಯಾವ ದಿನವೂ ಇಲ್ಲ ರಜೆ
ಸಮಯದ ಅಧೀನತೆ ನಾಪತ್ತೆ
ಮತ್ತೆ ಹಂಗಿಲ್ಲದ ವೃತ್ತಿ
ಊರೂರಿನ ಸುತ್ತಾಟ ನಿಂತು
ಸ್ಥಾವರವಾಗುವುದೂ ಚಡಪಡಿಕೆ
ಹೊಂದಾಣಿಕೆ ಅನಿವಾರ್ಯ
ವಯೋಸಹಜವೆಂದು ತಟಸ್ಥರಾದರೆ
ಅದರಲ್ಲೇ ಇರಬಹುದು ನೆಮ್ಮದಿ
ಮೊದಲಿನಂತೆ ಮಾತಾಡಿಸುವವರಿಲ್ಲ
ಬಂದು-ಹೋಗುವವರಿಲ್ಲ
ಚಲಾವಣೆಯಲ್ಲಿರದ ನೋಟಂತೆ
ರದ್ದುಗೊಳಿಸಿದ ನೋಟಿನಂತೆ
ಕೇಳಿದರೆ ಇಷ್ಟರ ನೋಟು ಅಷ್ಟೆ
ಉಪಯೋಗಕ್ಕೆ ಬಾರದ್ದು
ಆದೀತು ಅಲಂಕಾರಕ್ಕೆ!
ಪುಣ್ಯಕ್ಕೆ ಕೊರೋನಾ ಬಂತು
ಮನೆಯೊಳಗೇ ಇರುವುದು
ಕಡ್ಡಾಯ
ರೂಢಿಮಾಡಿಸಿಕೊಟ್ಟದ್ದು ಉಪಕಾರ
ಆರೋಗ್ಯಕ್ಕೆ - ಹೊರಗಿನ ಚಪಲವಿಲ್ಲ!
ಹೊರಗಡೆ ಹೊರಟರೆ ಮಾಸ್ಕ್
ಯಾರೂ ಗುರುತಿಸಲಿಲ್ಲ ಎನ್ನುವಂತಿಲ್ಲ
ಹಾಗಲ್ಲವಾದಲ್ಲಿ ಕಂಡೂ-ಕಾಣದಂತೆ
ಹೋದವರ ಕುರಿತು ಕಾಡುವುದಿಲ್ಲ
ನೆನಪು-ನೋವು-ನಿಟ್ಟುಸಿರು!
ದುಡಿದದ್ದರಲ್ಲಿ - ಬರುವ ಪಿಂಚಣಿಯಲ್ಲಿ
ಕಂಡುಕೊಳ್ಳಬೇಕು - ಖುಷಿ ಖಂಡಿತ
ಪದೇ ಪದೆ ನೋಡದಿದ್ದರೆ ಸಾಕು
ಬ್ಯಾಂಕಿನ ಪಾಸ್‍ಬುಕ್ಕು!
ಜವಾಬ್ದಾರಿಗಳನ್ನು ಅಷ್ಟಷ್ಟಾಗಿ
ಕಳೆದುಕೊಳ್ಳುತ್ತ
ಕಾಲದಲ್ಲಿ ಲೀನವಾಗುವ ಧ್ಯಾನ
ನಿಜದ ನಿವೃತ್ತಿ.

- ರವೀಂದ್ರ ಭಟ್ಟ ಕುಳಿಬೀಡು

ರವೀಂದ್ರ ಭಟ್ಟ ಕುಳಿಬೀಡು

ರವೀಂದ್ರ ಭಟ್ಟ ಕುಳಿಬೀಡು ಅವರು ಮೂಲತಃ ಸಾಗರದ ಅಗ್ರಹಾರದವರು. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ. ಅವರ ಹಲವಾರು ವಿಮರ್ಶಾ  ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಯಾವುದೇ ಕೃತಿಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬಲ್ಲ, ಹೊಸ ಹೊಳಹನ್ನು ಕೊಡಬಲ್ಲ ನೋಟ ಅವರದು. ಕವಿತೆಗಳ ರಚನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. 

More About Author