ನಾಗರಹಾವೇ ಹಾವೊಳು ಹೂವೇ
ಬಾಗಿಲ ಬಿಲದಲಿ ನಿನ್ನಯ ಠಾವೆ
ಕೈಯನು ಮುಗಿವೆ ಹಾಲನೀವೆ
ಬಾ ಬಾ ಬಾ
ಹಳದಿಯ ಹೆಡೆಯನು ಬಿಚ್ಚೋ ಬೇಗ
ಒಳಗಿನಿಂದಲೆ ಕೂಗೋ ರಾಗ
ಕೊಳಲನೂದುವೆ ಆಲಿಸು ರಾಗ
ನೀ ನೀ ನೀ ನೀ
ಎಲೆ ನಾಗಣ್ಣ ಹೇಳೆಲೋ ನಿನ್ನ
ತಲೆಯಲ್ಲಿರುವ ನಿಜವನ್ನ
ಬಡುಬಗ್ಗರಿಗೆ ಕೊಪ್ಪರಿಗೆಯ ಚಿನ್ನ
ತಾ ತಾ ತಾ ತಾ ತಾ
ಬರೀ ಮೈ ಸಣ್ಣಗೆ ಮೊಗದಲಿ ಬಿಸಿ ಹಗೆ
ಎರಡಲೆ ನಾಲಗೆ ಇದ್ದರೂ ಸುಮ್ಮಗೆ
ಎರಗುವೆ ನಿನಗೆ ಈಗಲೆ ಹೊರಗೆ
ಪೋ ಪೋ ಪೋ ಪೋ ಪೋ
-ಪಂಜೆ ಮಂಗೇಶರಾಯ
ಪಂಜೆ ಮಂಗೇಶರಾಯ
ಪಂಜೆ ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ 1874 ಫೆಬ್ರುವರಿ 22 ರಂದು ಜನಿಸಿದರು. ತಾಯಿ ಸೀತಮ್ಮ. ತಂದೆ ರಾಮಪಯ್ಯ. ಬಂಟ್ವಾಳದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮಂಗಳೂರಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ ಪಡೆದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಹರಟೇಮಲ್ಲ, ರಾಮಪಂ, ಕವಿಶಿಷ್ಯ ಮುಂತಾದ ಹೆಸರುಗಳಲ್ಲಿ ಬರಹಗಳನ್ನು ರಚಿಸಿದ್ದರು. ಇವರು ಬರೆದ ಹುತ್ತರಿ ಹಾಡು ಕೊಡಗಿನ ನಾಡಗೀತೆಯಾಯಿತು.
ಮಕ್ಕಳ ಸಾಹಿತ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದ ಇವರು ಬಾಲ ಸಾಹಿತ್ಯಮಂಡಲ ಸಂಸ್ಥೆಯನ್ನು ರಚಿಸಿ ಬಾಲಸಾಹಿತ್ಯ ಪ್ರಕಟಣೆಯಲ್ಲಿ ತೊಡಗಿದರು. ಮಂಗೇಶರಾಯರ ಪ್ರಮುಖ ಕೃತಿಗಳೆಂದರೆ ಪಂಚಕಜ್ಜಾಯ, ತೂಗುವ ತೊಟ್ಟಿಲು, ಜೋಗುಳ, ಸಂಜೆಯ ಹಾಡು, ಆಡಿನಾಮರಿ, ಹೊಗೆಯ ಬಂಡಿ ಮುಂತಾದ ಉಕ್ತಿಗೀತೆಗಳು. ಚಮದ್ರೋದಯ, ಭೀಷ್ಮ, ನಿರ್‍ಯಾಣ, ಕಮಲ, ಲಕ್ಷ್ಮೀಶಕವಿ ಹಳಗನ್ನಡ ಕಾವ್ಯಗಳು, ಹುತ್ತರಿಹಾಡು, ತೆಂಕಣಗಾಳಿಯಾಟ (ಕವನ ಸಂಕಲನ), ಐತಿಹಾಸಿಕ ಕಥಾವಳಿ, ಕೋಟಿ ಚನ್ನಯ, ಅಜ್ಜಿ ಸಾಕಿದ ಮಗ, ಕೋಟಿ ಚೆನ್ನಯ, ವೈದ್ಯರ ಒಗ್ಗರಣೆ (ಹಾಸ್ಯ ಪ್ರಧಾನ ಕತೆ)ಶಬ್ದಮಣಿ ದರ್ಪಣ (ಸಂಪಾದಿತ ಕೃತಿ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿ
ರಾಯಚೂರಿನಲ್ಲಿ ನಡೆದ 20ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಇವರು 1937 ಅಕ್ಟೋಬರ್ 24 ರಂದು ನಿಧನರಾದರು.
More About Author