ಕವಿತೆ ಓದಿದ ತಕ್ಷಣವೇ
ಇರಿವ ಮೊನಚಾದ ಕತ್ತಿಯಂತ್ತಿರಬೇಕು
ಅಂತಿಂಥ ಕತ್ತಿಯಲ್ಲ
ಇತಿಹಾಸದ ಪುಟಗಳ ಮೇಲೆಲ್ಲಾ
ಪದಗಳ ಕತ್ತರಿಸಿ ಬಿಸಾಕಿ
ಭಾವದ ರಣಕಹಳೆ ಊದಬೇಕು
ಕವಿತೆ ಮೊನಚಾದ ಚಾಕುವಿನಂತ್ತಿರಬೇಕು
ಬೆಟ್ಟದ ಹೊಳೆಯ ನೀರ
ಮುಖದ ಮೇಲೆ ಚಿಮುಕಿಸಿ
ಬೆಳೆದಿರುವ ಟೀಕೆಯ ಗಡ್ಡವನ್ನೆಲ್ಲ
ಒಂದೇ ಹರತದಲಿ ಇಲ್ಲವಾಗಿಸಿ
ಖುಷಿಯ ನಗುವನ್ನು ಬೀರಬೇಕು
ಕವಿತೆ ಬಂಡೆಗೆ ಚಾಕುವನ್ನು
ತಿಕ್ಕಿ ತಿಕ್ಕಿ ಸೃಷ್ಟಿಸಿದ ಕಿಡಿಯಂತ್ತಿರಬೇಕು
ಬೆಂಕಿಯಾಗಿ ಆತ್ಮವನು ಬೇಯಿಸಿ
ಎಲ್ಲವನು ಬೆತ್ತಲಾಗಿಸಬೇಕು
ಈ ಕವಿತೆ ನಿಮ್ಮ ಎದೆಯಲ್ಲಿರುವ
ನೋವ ಬಗೆಯಬೇಕೆಂದು ಬಯಸುತ್ತೇನೆ
ನೆನಪಿನ ಕಾಡುಗಳಲ್ಲಿ
ನಿಧಾನವಾಗಿ ಹೆಜ್ಜೆ ಹಾಕುತ್ತ
ಸತ್ತು ನಾರುತ್ತಿರುವ ಕಣ್ಣೀರಿನ
ಶವಗಳನ್ನೆಲ್ಲ ಕತ್ತರಿಸಿ
ಕಲವು ಕನಸುಗಳನ್ನು
ಮುಂದಿನ ದಿನಗಳಿಗಿರಿಸಿ
ಗಾಯದ ಗುರುತುಗಳನ್ನು
ಸಾವಿನ ಹದ್ದಿಗೆ
ವಯಸ್ಸಿನ ಹಂಗಿಗೆ ಸಿಲುಕಿಸಿಬಿಡಬೇಕು
ಒಳ್ಳೆಯ ಕವಿತೆಗೆ
ಎದೆಯಾಳದ ನೋವನು ಹುಡುಕಿ
ಹೊರಹಾಕುವ ಕಲೆ ಗೊತ್ತು
ಹೂ, ಕವಿತೆ ಮುಗಿಯುತ್ತ ಬಂದಿದೆ
ಕವಿತೆಯ ಎದೆಯಲ್ಲೂ ನೋವು ಹೊಕ್ಕಾಗಿದೆ
ಹೋಗಿ ಚಾಕುವಿಗೆ ಮೆತ್ತಿಕೊಂಡಿರುವ
ರಕ್ತವನ್ನು ತೊಳೆಯಿರಿ !
- ಆಕರ್ಷ್ ಕಮಲ
ಆಕರ್ಷ ರಮೇಶ್ ಕಮಲ
ಆಕರ್ಷ ರಮೇಶ್ ಕಮಲ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ತಂದೆ ಎಸ್. ರಮೇಶ್ ವಕೀಲರು. ತಾಯಿ - ಎಂ.ಆರ್. ಕಮಲ ಕನ್ನಡದ ಪ್ರಸಿದ್ದ ಕವಯತ್ರಿ, ಲೇಖಕಿ. ಅಮೆರಿಕಾದ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ವ್ಯಾಸಂಗವನ್ನು ಮಾಡಿ ಕೆಲಕಾಲ ಅಮೆರಿಕಾ, ಸ್ವಿಟ್ಸರ್ಲ್ಯಾಂಡ್, ಮತ್ತು ಫ್ರಾನ್ಸ್, ದೇಶಗಳಲ್ಲಿ ನೆಲೆಸಿದ್ದರು.
ವೃತ್ತಿಯಲ್ಲಿ ಬೆಂಗಳೂರಿನ ಖಾಸಗೀ ಕಂಪೆನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಹಲವಾರು ಆಸಕ್ತಿಗಳತ್ತ ಮುಖ ಮಾಡಿರುವ ಆಕರ್ಷ ಪ್ರೆಸೆಂಟ್ ಸರ್, ಮರೀಚಿ ಎಂಬ ಕಿರುಚಿತ್ರಗಳನ್ನು ನಿರ್ದೇಶಿಸಿ ಸಿನೆಮಾ ರಂಗಕ್ಕೆ ಪ್ರವೇಶಿಸಿದ್ದಾರೆ. ಇವರ ಈ ಕಿರುಚಿತ್ರಗಳು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿಯೂ ಪ್ರದರ್ಶನಗೊಂಡಿವೆ. ಸ್ವತಃ ನಿರ್ದೇಶನವಲ್ಲದೇ ಕೆಂಪಿರ್ವೆ, ಬೀರಬಲ್ ಟ್ರೆಲಜಿ, ಉನರ್ ವು, ಮತ್ತು ಹೆಸರಾಂತ ಕಿರುತೆರೆ ಧಾರವಾಹಿ ನಿರ್ದೇಶಕರಾದ ಟಿ.ಎನ್ ಸೀತಾರಾಮ್ ಅವರ ಮಗಳು ಜಾನಕಿ ಧಾರವಾಹಿಯಲ್ಲಿ ನಟಿಸಿದ್ದಾರೆ. ಕನ್ನಡದ ಕೆಲವು ಚಿತ್ರಗಳಿಗೆ , ಕಿರುಚಿತ್ರಗಳಿಗೆ ಅಡಿನುಡಿ (subtitle) ಬರೆದಿದ್ದಾರೆ.
ಆಕರ್ಷರವರ ಮತ್ತೊಂದು ಆಕರ್ಷಣೀಯ ಆಸಕ್ತಿಯ ಕ್ಷೇತ್ರ ಕಾವ್ಯ ಪ್ರಪಂಚ. ಅನೇಕ ಕವನಗಳನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸಿದ್ದಾರೆ. ಕೆಲವು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಕವನ ವಾಚನ ಮಾಡುವ ಮೂಲಕ , ಕಥೆಗಳನ್ನು ಓದುವ ಮೂಲಕ ಅನೇಕ ಸಾಹಿತ್ಯ ಗೆಳೆಯರಿಗೆ ಹತ್ತಿರವಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಮೊಗಹೊತ್ತಿಗೆಯಲ್ಲಿ ಕವನಗಳನ್ನು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ರಚಿಸುತ್ತಾ ತಮ್ಮ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದ್ಧಾರೆ. ಇವರ ಕೆಲವು ಕವನಗಳು ’ಅವಧಿ’ ಮತ್ತು ಅನೇಕ ಸುದ್ದಿಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
’ವಿಭಾ’ ಪ್ರಶಸ್ತಿಯ ಅಂತಿಮ ಹಂತಕ್ಕೆ ಕವನದ ಹಸ್ತಪ್ರತಿ ಆಯ್ಕೆಗೊಂಡಿತ್ತು. ಇವರು ಇಂಗ್ಲಿಷ್ ಭಾಷೆಯಲ್ಲಿ ಬರೆದ ಕಥೆಯೊಂದು ’Anthology of shorts Stories' ನಲ್ಲಿ ಪ್ರಕಟಗೊಂಡಿದೆ. 'The Great Indian Poetry Content ನಲ್ಲಿ ಭಾಗವಹಿಸಿ, ಇದರ ತೀರ್ಪುಗಾರರಾಗಿದ್ದ ಜಾವೇದ್ ಅಕ್ತರ್ ಮತ್ತು ಕಲ್ಕಿ ಅವರಿಂದ ಮೆಚ್ಚುಗೆ ಪಡೆದ ಕವನ Aatish (ಆತಿಶ್) ಸದ್ಯದಲ್ಲೇ ಪ್ರಕಟಣೆಗೆ ಸಿದ್ದವಾಗುತ್ತಿದೆ.
’ಗ್ರಾಫಿಟಿಯ ಹೂವು’ ಕವಿತೆಗಳ ಗುಚ್ಛ ಮೊದಲನೇ ಕವನ ಸಂಕಲನವಾಗಿದೆ.
ನಗರ ಜೀವನದ ತಳಮಳ, ತಲ್ಲಣಗಳನ್ನು ಕವನಗಳಲ್ಲಿ ಕಟ್ಟಿಕೊಡುವ ಆಕರ್ಷ ಫ್ರೆಂಚ್ ಭಾಷೆಯನ್ನೂ ಬಲ್ಲರು. ಬೋದಿಲೇರ್, ರೂಮಿ ಮತ್ತು ಅರಬ್ ಯುವಕವಿಗಳ ದಟ್ಟವಾದ ಕಾವ್ಯ ಪ್ರಭಾವ ಆಕರ್ಷ ಅವರಿಗೆ ಪ್ರೇರಣೆಯಾಗಿದೆ.
More About Author