ನಮ್ಮ ಪುರಾತನರ ವಚನಗಳ
ನಿಮ್ಮ ಪಾಖಂಡಿ ಅರ್ಥಾನ್ವಯಕ್ಕೆ
ತಿರುಚಲು ಬಂದ ತಿರುಬೋಕಿಗಳೇ
ಕೇಳಿಭೋ ಕೇಳಿಭೋ
ಇದು ಹರನ ನೊಸಲ ವಿಭೂತಿ
ನಿಮ್ಮ ಕರ್ಮಸಿದ್ಧಾಂತದ
ಬೆನ್ನ ಬಾರನ್ನೆತ್ತಿದ ದನಿ ಚಾವಟಿ.
ವರ್ಣಶ್ರೇಷ್ಠತೆಯ ವ್ಯಸನಿಗರನು
ನಮ್ಮ ಹರಗೇರಿಯ ಗಲ್ಲೆ ಬಾನಿಯಲಿ
ಉಜ್ಜಿತೊಳೆದರು ಶರಣ ಶರಣೆಯರು
ಆದರೂ ಕೊಳೆ ಹೋಗಲಿಲ್ಲ
ನಿಮ್ಮ ಕರ್ಮದ ಹಂಗು ಕಳೆಯಲಿಲ್ಲ.
ಕಾಣಿಭೋ ಕಾಣಿಭೋ.
ಇಂದು ಬಂದಿಹಿರಿ ನಮ್ಮ ವಚನಗೇರಿಗೆ
ಸೂಳ್ನುಡಿಗಳ ಅನುಭಾವಿಕ ಅರ್ಥ ಹನನಕ್ಕೆ
ಪಂಡಿತ ವೇಷದಲಿ ಬಂದ ಪಾಖಂಡಿಗಳೇ
ಬಲ್ಲೆವು ನಾವು ನಿಮ್ಮ ಹಳೆಚಾಳಿಯ
ವರ್ಣಬುದ್ದಿಯ ಭಾಷಾಗೂಳಿನ ಭಟರೇ
ಕೇಳಿಭೋ ಕೇಳಿಭೋ
ನಮ್ಮ ಶರಣರ ಸೂಳ್ನುಡಿಗಳು
ನುಡಿಯ ಮುತ್ತಿನ ಹಾರಗಳು
ನಡೆಯ ಮಾಣಿಕ್ಯದ ದೀಪ್ತಿಗಳು
ನಡೆನುಡಿಗಳೊಂದಾದ ಬೆವರ ಹನಿಗಳು
ಜ್ಯೋತಿರ್ಲಿಂಗ ಸ್ವರೂಪಿಗಳು .
- ಎಸ್ ಜಿ ಎಸ್.
ಎಸ್.ಜಿ. ಸಿದ್ಧರಾಮಯ್ಯ
ಹಿರಿಯ ಸಾಹಿತಿಗಳಾದ ಎಸ್.ಜಿ. ಸಿದ್ಧರಾಮಯ್ಯನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ. ತಂದೆ-ಗುರುಭಕ್ತಯ್ಯ, ತಾಯಿ-ರೇವಮ್ಮ. ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದ ಅವರು ಪ್ರೌಢಶಾಲೆ ಚಿಕ್ಕನಾಯಕನಹಳ್ಳಿ ಪೂರ್ಣಗೊಳಿಸಿದರು. ಕಾಲೇಜು ವಿದ್ಯಾಭ್ಯಾಸವನ್ನು ತುಮಕೂರಿನಲ್ಲಿ ಆರಂಭಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಆನಂತರ ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ಮಡಿಕೇರಿ, ಸಿಂಧನೂರು, ತುಮಕೂರು, ಕೊರಟಗೆರೆ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ತುಮಕೂರು, ಚಿಕ್ಕನಾಯಕನ ಹಳ್ಳಿ, ಹೊಸದುರ್ಗ, ಮಧುಗಿರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಹುದ್ದೆ ನಿರ್ವಹಿಸಿದ್ದಾರೆ. ಅಲ್ಲದೇ ದುಃಸ್ಥಿತಿಯಲ್ಲಿದ್ದ ಕಾಲೇಜುಗಳಿಗೆ ಶೈಕ್ಷಣಿಕ ಕಾಯಕಲ್ಪ ಕಲ್ಪಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ವಾಚನಾಭಿವೃದ್ಧಿಗಾಗಿ ಹಲವು ಕಮ್ಮಣಗಳನ್ನು ನಡೆಸಿದ್ದಾರೆ. ಜೊತೆಗೆ ವನಮಹೋತ್ಸವದಂತಹ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಾವಿರಾರು ಸಸಿಗಳನ್ನು ನೆಟ್ಟಿದ್ದಾರೆ. ಜೊತೆಗೆ ರಾಷ್ಟ್ರೀಯ ಸೇವಾಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯದತ್ತ ಆಸಕ್ತರಾಗಿದ್ದ ಅವರಿಗೆ ಮೊದಲಿನಿಂದಲೂ ನಾಟಕ ರಚನೆಯಲ್ಲಿ ವಿಶೇಷ ಒಲವು. ಕರ್ಣನಂತಹ ದುರಂತ ಪಾತ್ರಗಳಲ್ಲಿ ತಲ್ಲೀನತೆ. ವಿದ್ಯಾರ್ಥಿಯಾಗಿದ್ದಾಗಲೇ ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡಿದ್ದ ಅವರಿಗೆ ಎಚ್.ಜಿ. ಸಣ್ಣಗುಡ್ಡಯ್ಯ ಮುಂತಾದವರ ಮಾರ್ಗದರ್ಶನ ದೊರೆತಿತ್ತು. ‘ಗಾಲ್ ಉಬ್ಬಿನ ಮೇಲೆ’, ‘ಕಾಡುವ ಬೇಲಿ ಹೂ’, ‘ಅವಳೆದೆಯ ಜಂಗಮ’, ‘ಸೊಲ್ಲು ಫಲವಾಗಿ’, ‘ಮರು ಜೇವಣಿ’, ‘ಕರೆಬಳಗ’ ಕಾವ್ಯ ಸಂಕನಗಳು. ಸಾಲಾವಳಿ, ಕೇಡಿಲ್ಲವಾಗಿ, ಎಡೆಕುಂಟೆ ಗೆಣೆಸಾಲು, ನಿಶ್ಯಬ್ದದ ಜಾಡು, ಅಂಬಿಗರ ಚೌಡಯ್ಯ ಒಂದು ಅಧ್ಯಯನ ಎಂಬ ವಿಮರ್ಶಾಕೃತಿಗಳು. ದಂಡೆ, ನೆತ್ತಮನಾಡಿ ಎಂಬ ನಾಟಕಗಳನ್ನು ರಚಿಸಿರುವ ಅವರು ಕುರುಬರ ಮದುವೆಯ ಪದಗಳು ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ 1996 ಮತ್ತು 2000ದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಸೊಲ್ಲು ಫಲವಾಗಿ ಕೃತಿಗೆ ಪು.ತಿ.ನ ಕಾವ್ಯ ಪ್ರಶಸ್ತಿ, ಕರೆಬಳಗ ಕೃತಿಗೆ ಜಿ.ಎಸ್.ಎಸ್ ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂಧಿವೆ. ಅಲ್ಲದೇ 2016ರಿಂದ 2019ರವರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
More About Author