Poem

ಇಲ್ಲೆಲ್ಲೂ ಇಲ್ಲ ಸವನ್ನಾ ಹುಲ್ಲುಗಾವಲು

ಅದು
ಎರಡು ದಶಕದಷ್ಟು ಬಿಸಿಲು
ನುಂಗಿಕೊಂಡು
ತಂಪು ಹೂತ ಮುಷ್ಟಿ ಕೆಸರು
ಕಾಪಿಟ್ಟುಕೊಂಡು
ಮುರುಕು ಸೊಂಟದಲ್ಲಿ
ಬದುಕುವ ಪಾಳು ಬಾವಿ

ಒಂದು ಶುನಕವಿರಲಿ ಸಣ್ಣ ಹಲ್ಲಿ
ಕೂಡ ಜಾರಿ ಬಿದ್ದು ಮಿಡುಕಿ ಚಕ್ರಮಂಡಿ
ಹಾಕಿ ಕೂಗಿ ಎತ್ತಿಕೊಳ್ಳಿರೋ..
ಎನ್ನದ ಬರಡು ಬಾವಿ

ಹಂಗಾಮಿ ಹೊತ್ತಿನಲ್ಲಿ ಮಾತ್ರ ಬದುಕಿದ್ದ
ಒಂದಷ್ಟು ಒಣಗಿದೆಲೆಗಳು
ಹಾರಿ ತೇಲಿ ಆಚೀಚೆ ಬೀಳುವಾಗ
ಬಾವಿಗೆ ಗಟಗಟ ನೀರಿನ ಕನಸು
ತನ್ನ ನಸೀಬು ಒಪ್ಪಿ
ಬಾಳಬೇಕು ಅದು ಎಂದು ಬಯಸಿದ ಮಂದಿ
ನಲ್ಲೆ ಕೊಟ್ಟ ಒಣಹೂವು ಇಟ್ಟುಕೊಂಡು
ದಿನ ಸವೆಸುತ್ತಿರುವರು

ಋತುಗಳು ಬದಲಾಗದ ಆ ಪಾಸಲೆಯಲ್ಲಿ
ಕಾಡು ಕಣಿವೆ ಕಂದರಗಳೆಲ್ಲ ಎದೆ
ಒಡೆದುಕೊಂಡು ಬಿದ್ದು ಎಷ್ಟು ಕಾಲವಾಯಿತು
ಧೂಳೆಬ್ಬಿಸಿಕೊಂಡೇ ಇರುವ ಹತ್ತಿರದ
ರಸ್ತೆಗೂ ಆಗಾಗ ಗುಲಾಬದಾನಿಯ ಕನಸು
ಇಲ್ಲೆಲ್ಲೂ ಇಲ್ಲವಂತೆ ಸವನ್ನಾ
ಹುಲ್ಲುಗಾವಲು
ಇಲ್ಲಾ ಧೋ ಸುರಿವ ಮಳೆಗಾಲಕ್ಕೆ
ಒಜ್ಜೆಯಾಗಿ ಮುರಿದುಬೀಳುವ ಕಾಡು

ಈ ಮುಂಗಾರು ಹಿಂಗಾರು ಎಂಬವುಗಳದ್ದೆಲ್ಲ
ಕತ್ತು ಹಿಚುಕಿ ಕೊಂದವರು ಯಾರು ಯಾಕೆ
ಎಂದು ಕೇಳದ ಜನ
ನಿದ್ದೆಯಲ್ಲೆ ಎದ್ದು ಗುಳೆ ಹೊರಟರೂ
ಕಾಲು ಕಳೆದುಕೊಂಡ ಗಂಗಾವಳಿ ನಿಂತೇ ಇದೆ
ಸೇರಬಲ್ಲೆನೆ ಒಂದು ದಿನ ಎಂಬುದು
ಮೀನುಮರಿಯ ಕನಸು
ಕೂಡಬಲ್ಲ ಕನಸು ಸಮುದ್ರದ್ದು

ರಾತೋರಾತ್
ನಾಲ್ಕು ಊರುಗಳ ಧಗೆ ಉಬ್ಬರಿಸಿ
ಹಾಳಾದ ಮೋಡಕ್ಕೆ ದಮ್ಮುಕಟ್ಟಿ
ಒಂದು ಕುಂಟ ಮಳೆಯು ಕುಣಿಯುತ್ತ ಊರ
ಮೇಲಿಂದ ಹಾದು ಹೋದರೆ
ಗುಂದೆಯ ಮುರ್ಕುಂಡೀ..
ಮುಂದೊಮ್ಮೆ ಕಾಚಕ್ಕಿ ಕುದಿಸಿ
ಪಾಯಸ ಮಾಡಿ ಹಾಕುತ್ತೇನೆ
ತಪ್ಪಿದರೆ ಉಕ್ಕರಿಸಿ
ತಕರಾರು ಇಡುತ್ತೇನೆ
ಸೂಟೆ ತಿವಿದು ಕೆನ್ನೆಗೆರಡು ಬಾರಿಸಿ
ನಿನ್ನ ಮೆರವಣಿಗೆ ಹಾದು ಹೋಗುವ ದಿನ
ಮುಂಗಾಲು ಮುಕ್ಕರಿಸಿ ಬೀಳಿಸುತ್ತೇನೆ

ಹೆದರಿಕೊಂಡೆಯಾ..? ಬಾ ದಾರಿಗೆ..!
ಆಗ
ಅರಲು ಗದ್ದೆಯಲ್ಲಿ ಊಳಲಿಟ್ಟ
ಜೋಡಿ ಕೋಣ ಮಾರಿ ಅಕ್ಕಿ ಮೆಣಸು ಕೊಂಡು
ಬದುಕ ಹಿಡಿದುಕೊಂಡವರೂ
ಬರುತ್ತಾರೆ
ತರುವಾಯ ಉಕ್ಕಿದರೂ ಮಲ್ಲಿಗೆಯೇ
ಬಿಕ್ಕಿದರೂ ಜಾಜಿಯೇ
ಅಷ್ಟು ಹೃದ್ಯವಾದ ವಿದ್ಯಮಾನ
ಕುರುಳು ಕೂದಲಿನವಳು.. ಇದೇ ಊರಿನವಳು
ಸೀಮೆಯಾಚೆ ಸಿಹಿ ಹಂಚಿ
ತರಂಗಾಂತರ

ಆಹಾ.. ಇಲ್ಲಿ ನೋಡಿ
ತಂಪು ತೂತು ಅಂಗಳ , ಮೊಳಕೆ ಹುಲ್ಲು ವಖಾರಿ
ಹರೆಯ ಮರಳಿ ಸುಮ್ಮಾನವಾಗಿ
ಹಾಡುತ್ತಿದೆ ಒದ್ದೆ ನೀಲ ಹಕ್ಕಿ
ಇನ್ನು ನೀವುಂಟು.. ತುಳುಕುವ ಬಾವಿಯುಂಟು
ಲಂಗರು ಬಿಟ್ಟ ಮಚವೆಯೂ ಉಂಟು
ಕಾಂಕ್ರೀಟು ನಸೆ ಹತ್ತಿದ ನಾವು ಹೊರಗಿನವರು
ಬಂದ ದಾರಿಯಲ್ಲಿ ಸುಂಕವಿದ್ದರೂ
ಹೊರಟುಹೋಗುವೆವು
ಅನ್ನಬಾರದೇನು ಯಾರಾದರೂ

ಆಗ
ಕವಿತೆಯಲ್ಲಿ ಮಾತ್ರ ಬತ್ತಿದ ನದಿಯ ಪಾತ್ರ
ಉಡಿಗೆ ಬಂದ ತೆವರಿಯಲ್ಲಿ
ಮೆಕ್ಕಲುಮಣ್ಣು ಕಲಸುತ್ತ
ಕೂತ ಬೆಸ್ತರ ಪೋರ
ಬೆರಳು ಚೀಪುತ್ತ ಕೂಗಿ ಕರೆವ ಚಿತ್ರ

- ರೇಣುಕಾ ರಮಾನಂದ

 

ರೇಣುಕಾ ರಮಾನಂದ

ರೇಣುಕಾ ರಮಾನಂದ ಅವರು ತಲೆಮಾರಿನ ಭರವಸೆಯ ಕವಯತ್ರಿ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ವಂದಿಗೆ ಹುಟ್ಟೂರು. ತಂದೆ ಹೊನ್ನಪ್ಪ ನಾಯಕ ಮತ್ತು ತಾಯಿ ಮಾಣು.

ತವರೂರಿನ ಸರ್ಕಾರಿ ಶಾಲೆಯಲ್ಲಿ ಆರಂಭದ ಅಕ್ಷರಾಭ್ಯಾಸ, ಅಂಕೋಲಾದ ಟೀಚರ್ ಟ್ರೈನಿಂಗ್ ಕಾಲೇಜಿನಲ್ಲಿ ಟಿಸಿಎಚ್ ಪೂರ್ಣಗೊಳಿಸಿರುವ ರೇಣುಕಾ ಅವರು ಕನ್ನಡ ಎಂ.ಎ.ಪದವಿಧರೆ. ರೇಣುಕಾ ಅವರು ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜೀವನ ಸಂಗಾತಿ ರಮಾನಂದ ಪಿ.ನಾಯಕ್ ರವರು ಕೂಡ ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಮಾನಂದ ದಂಪತಿಯ ಬಾಳು ಬೆಳಗಿಸಲು ಗುಲಾಬಿಗಳಾದ ತ್ರಿಭುವನ ಮತ್ತು ಪ್ರಾರ್ಥನ ಬಂದಿದ್ದಾರೆ.

ವೃತ್ತಿಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕಿ, ಪ್ರವೃತ್ತಿಯಲ್ಲಿ ಕವಯತ್ರಿ- ಲೇಖಕಿ. ಬದುಕಿನ ಅನುಭವ, ಮಾಗಿದ ಭಾವಗಳೇ ಕಾವ್ಯದ ವಸ್ತುಗಳು, ಏಕಾಂಗಿತನವೇ ಕಾವ್ಯಕಟ್ಟುವ ಗೋಪುರ. ಕರಾವಳಿ ಮುಂಜಾವು ಪತ್ರಿಕೆಯಲ್ಲಿ ರೇಣುಕಾ ಅವರ ಪ್ರಬಂಧ-ಲೇಖನಗಳು ಪ್ರಕಟವಾಗಿವೆ. ಕಡಲಿನ ಮೊರೆತ-ಕಡಲಿನ ಮೌನವೆರಡರ ಸಮ್ಮಿಳಿತದಂತ ಅಭಿವ್ಯಕ್ತಿಯ ರೇಣುಕಾ ಅವರು ನನ್ನಿಷ್ಟದಂತೆ ಬರೆಯುತ್ತೇನೆ, ತಿಂಗಳುಗಟ್ಟಲೆ ಮಾಗಿಸಿಯೇ ಕಾವ್ಯಕಟ್ಟುತ್ತೇನೆ ಎನ್ನುತ್ತಾರೆ.

'ಮೀನುಪೇಟೆಯ ತಿರುವು' ಚೊಚ್ಚಲ ಕವನ ಸಂಕಲನ. ರಾಜ್ಯ ಮಟ್ಟದ ಕವಿಗೋಷ್ಠಿಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ ರೇಣುಕಾ ಅವರಿಗೆ ಸಂಕ್ರಮಣ ಕಾವ್ಯ ಪ್ರಶಸ್ತಿ, ಕಸಾಪ ದತ್ತಿನಿಧಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ದೊರೆತಿವೆ.


 

More About Author