ಜರೆದು ದೂರ ಸರಿದವರಿಗೆ ಕರೆದು ಕೂಡುವುದು
ಅದ್ರ ಪಡಿಗಲ್ಲ ಮೇಲೆ ನಿಂತು
ಜಾಡಿ ಜಾಡಿಸುತೊಗೆದಂತೆ ಬಾವಿಯಲ್ಲಿ.
ನಾಳೆ ಹಬ್ಬ-ಹಬ್ಬಕ್ಕೊಂದು ವರ್ಷವಾಯ್ತು
ಈ ಹೊಸಿಲೊಳಡಿಯಿಟ್ಟು. ಬಿಳಿಗುಡಿಗೆ ಸಂದವು
ನಾಲ್ಕು ಪರುವ: ಐದನೆ ಪರುವ ಮಡೀಲೆ
ಹೊತ್ತು ಗುಡಿಗೆ ಸಲಿಸಲು ಹಿರಿಯನಿಲ್ಲ.
ನಾಡಿದ್ದರ ಮಾತು ಹಾಗಿರಲಿ, ಇಂದಿನದೆಂತು ಹಿಂಜಿ
ಹೊಸೆಯಬೇಕು ದೀಪಕೆ ಬತ್ತಿಯ! ಒತ್ತರಿಸಿ ಬರುವ
ನೆನಪುಗಳನೆ ಕಣ್ಣ ಎಣ್ಣೆಯಲದ್ದಿ ಮುಡಿಸಲೆ ದೀಪವ!
ನಾಳೆ-ನಾಡಿದ್ದರ ನಡುವೆ ಹಬ್ಬುವ
ಇಂದಿನೀ ಬೆಳಕು ಬಳ್ಳಿಗೆ ಹತ್ತಾರು ಕುಡಿ;
ಕೈಕೊಟ್ಟ ಅವನು ನೆಟ್ಟ ಬೀಜಕೆ ಒಂದೆರಡು ಮಿಡಿ.
ಸಂಜೆ ಮುಗಿಲಿನ ಮಬ್ಬು ಮುಂಜಾವಿನೀ
ಚಿಗುರು ಹೊದರಿನ ಮೇಲಾಡುವಾಗ ನಿನ್ನ ನೆನಪು.
ಅವನಿಲ್ಲದೆಯೂ ಹಬ್ಬ ಮಾಡಬಲ್ಲೆ, ಗೆಳತೀ;
ಗೆಳೆಯನಂತರಂಗದ ಬಗೆಯ ನಿನ್ನ ನಗೆಯಲಿ
ಬೆರೆಸಿ ಉಣಿಸಿದ ರಸಗವಳದಾs ಮಾತಿಲ್ಲದಿರೆ-
ಅಟ್ಟ ಪರುವ ಹೊಟ್ಟೆಯಲ್ಲಿ ಮಗುಚಿದ ಸಂಕಟ.
ಇಲ್ಲಿ, ನನ್ನ ಹಿರಿಯ ಬೆಸಗೊಂಡು ಬಯಲಾದ;
ಅಲ್ಲಿ, ನೀನು ಬದುಕಿನ ಬಳಸು ತೋಳಲಿ ಬೆಟ್ಟವಾದೆ,
ಶಬ್ಧ, ಸ್ಪರ್ಶ, ರೂಪ, ರಸ, ಗಂಧಗಳಲಿ ಮೀಯುವೀ
ದೇಹಕೆ ಈಗ ಅಂಚು ತಾಕಿದ ಅನುಭಾವ.
ಕಲಕಿದೊಳ ಈಜಿಗೆ ನುಡಿಗೊಡುತಿದೆ
ಅರಿವಿನ ತಂತು ತರಂಗ: ಹೆಣ್ಣೆಂದರೆ ನೀರೆ-
ನೀರಿನಂತೆಯೇ ದ್ರವ: ‘ಅಕ್ಕ’ನಂತೆಯೆ ಘನ.
ಇನ್ನಾವ ‘ಮೇಘಸಂದೇಶ’ ಕಳಿಸಲಿ ಅವಗೆ!
ಹಾದಿಗೆ ಹಗಲುಗನಸು ಹಾಸಿ ಕಾಯಲಿ ಎಲ್ಲಿವರೆಗೆ!!
- ಗೀತಯೋಗಿ
ವಿಡಿಯೋ
ವಿಡಿಯೋ
ಗೀತಯೋಗಿ (ಸೋಮನಾಥ ಎಂ. ದೊಡ್ಡಿ)
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಗೀತಯೋಗಿ (ಸೋಮನಾಥ ಎಂ. ದೊಡ್ಡಿ) ಶಿಕ್ಷಣದಲ್ಲಿ ಎಂ.ಫಿಲ್ ಪದವೀಧರರು. ತಂದೆ ಮಲ್ಲಿಕಾರ್ಜುನ, ತಾಯಿ: ರುಕ್ಮಿಣಿ. ಮೈಸೂರಿನ ಮಾನಸಗಂಗೋತ್ರಿಯಿಂದ ಸ್ನಾತಕೋತ್ತರ ಪದವಿ ಪಡೆದ ನಂತರ ಅವರು ಇಂಡಿ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಐತಿಹಾಸಿಕ ತಾಣಗಳ ವೀಕ್ಷಣೆ ಹಾಗೂ ಅಧ್ಯಯನ ಇವರ ಹವ್ಯಾಸ. ಈಗಾಗಲೇ ’ಪದಗಳ ಕದ ಹಾಗೂ ’ಗಂಧದೌತಣ’ ಈ ಎರಡೂ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.