ಕಟ್ಟೆಯ ಮೇಲೆ ಕುಕ್ಕಿಸಿಕೊಂಡು
ಕೊರಳು ಸೊಂಟವೆಲ್ಲ
ನೆಗ್ಗು ಗುಳಿ ಸಣ್ಣಗೆ ಒಸರುವ ಕಾಣದ ಸೀಳು
ನೆರೆಯವರ ಜೊತೆಗೆ ನಾಲ್ಕು ಮಾತಾಡುವಂತಿಲ್ಲ
ಬಿಂದಿಗೆ ಖಾಲಿ ಮತ್ತೆ ಆಳಕ್ಕೆ ಬಿದ್ದು
ನೀರಿಗೆ ಬಾಯಿಕೊಡದ ಬಿಂದಿಗೆ
ಅತ್ತಿತ್ತ ಓಲಾಟ ವಯ್ಯಾರ ತುಂಬಿಸಿಕೊಳ್ಳಲು
ಏನಿಂತಹ ಬಿನ್ನಾಣ ಬಿಂಕ
ಸರಿಯಾಗಿ ಮತ್ಮತ್ತೆ ಎಸೆಯಬೇಕು
ಕಸ ಕಡ್ದಿ ಎಲೆಸರಿಸಿಕೊಂಡು
ಇದು ಹೀಗೆಯೇ ಗತಕ್ಕೆ ಬಿದ್ದ ಮನ ಬಿಂದಿಗೆ
ಒಳ ತಳಮನೆಯಿಂದ ಸೇದುತ್ತ ನೆಗ್ಗು
ವರ್ತಮಾನದಲಿ ಸುರಿತ ಸ್ನಾನ
ಚಳಿಗೆ ಕೊರಳು ಬಿಕ್ಕಿ ಉಸಿರ ಪೀಕು
ನಿನ್ನೆಯನ್ನೆ ಮತ್ತೆ ಬೆನ್ನಿಗೆ ಸುತ್ತಿಕೊಂಡು
ಹಗ್ಗ ನುಂಗಿ ಕರ್ರೆನ್ನುವ ರಾಟೆ
ಉರಿ ಅಂಟಿಸಿಕೊಂಡ ಹಗ್ಗ
ಕುಕ್ಕಿಸಿಕೊಂಡ ಕಟ್ಟೆಯಲ್ಲಿ ನೀರು ಪಾಚಿ
ನಿಶಬ್ದದಿಂದ ನೀರ ಬಗೆಯಲಾಗುವುದಿಲ್ಲ
ಇರುಳು ಕರ್ರೋ ಎನ್ನುವ ಶಬ್ದ
ಗತದ ಬಾವಿಯಿಂದ ಎತ್ತಿದ ನೀರು
ಕಣ್ಣ ತುಂಬೆಲ್ಲ ತರಾವರಿ ಬಕೆಟ್ಟು ಟಬ್ಬು
ಗಾತ್ರಕ್ಕೆ ತಕ್ಕ ಪಾತ್ರ ಸುತ್ತಿಕೊಳ್ಳುವ ಹಳವಂಡ
ಹಠಮಾರಿ ನೆನಪು ಕುಂಟು ನೆಪ
ಸುಮ್ಮನಿರದ ಜೀವದ ಹಪಾಹಪಿ
ತಳದ ಆಳದಿಂದ ನೀರು ಸೇದುವುದಕೆ
ಬೇಕಲ್ಲ ತಾಕತ್ತು ಅದೇ ನೆಗ್ಗಿದ ಬಿಂದಿಗೆ ಕತ್ತು
ಹೊಡೆಯ ಸೀಳು ಆಗಾಗ
ತುಂಬಿದ ಬಿಂದಿಯಲ್ಲೂ ಚಂದಿರನ ಕಂಪು
ಬೆಳಕ ತಾರಕೆಗಳ ಸೋಬಾನೆ
ಗತಕ್ಕೆ ಬೀಳುವುದೆಂದರೆ
ಒಮ್ಮೆ ಕಾದ ಸಲಾಕೆಯ ಕೂಡ ಸರಸ
ಒಮ್ಮೆ ಸಂಪಿಗೆ ತೋಟದಲಿ ಯಾನ
ಬಾವಿ ಮಾತ್ರ ಮೌನ
ತುಂಬಿಸಿಟ್ಟ ಬಿಂದಿಗೆ ಸಣ್ಣಗೆ ಸೋರುತ್ತಲೇ ಇದೆ
- ವಾಸುದೇವ ನಾಡಿಗ್
ವಾಸುದೇವ ನಾಡಿಗ್
ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. 20 ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ಪ್ರಶಸ್ತಿ ಇವರಿಗೆ ದೊರೆತಿವೆ.
More About Author