Poem

ಬಾಯ್ ಫ್ರೆಂಡ್ ಬಾಡಿಗೆಗೆ ಸಿಗುತ್ತಾರೆ!

 

ಕ್ಯಾಂಡಿಕ್ರಷ್ ಆಟದಂತೆ ಹೊಸ ಆ್ಯಪ್!
ಬಾಯ್ ಫ್ರೆಂಡ್ ಬಾಡಿಗೆಗೆ ಸಿಗುತ್ತಾರಂತೆ.
ಅದಕ್ಕೇ ನನಗೀಗ ಅರ್ಜೆಂಟಾಗಿ ಬಾಯ್ ಫ್ರೆಂಡ್ ಬೇಕಾಗಿದೆ.

ಇಂಥ ಜಾತಿ ಗೋತ್ರ,
ಇಷ್ಟು ವರಮಾನ ಸೂತ್ರ,
ಇವೆಲ್ಲಾ ಹಸೆಮಣೆಗೆ ಮಾತ್ರ.
ಇದು ಬಾಯ್ ಫ್ರೆಂಡ್ ಜ಼ಮಾನ
ಬಿಂಕ ಬಿಗುಮಾನ ಬೇಡ
ಸ್ಟಾಕ್ ಮುಗಿಯುವ ಮೊದಲೇ
ಬೇಗ ಆರ್ಡರ್ ಮಾಡಿಬಿಡಿ
ಥೇಟ್, ನಿಮ್ಮ ಅಳತೆಯ ಬ್ರಾ
ಆನ್ ಲೈನ್ ನಲ್ಲಿ ಸಿಕ್ಕಷ್ಟೇ ಸುಲಭ ವ್ಯವಹಾರ.

ಖರ್ಚೂ ಕಡಿಮೆ, ಡಿಸ್ಕೊಂಟೂ ಇದೆ.
ಬಾಳಿಕೆ ತಾಳಿಕೆ, ಬಳಕೆಗೆ ತಕ್ಕಂತೆ.
ಗೋರಂಟಿಯಷ್ಟೇ ಗ್ಯಾರಂಟಿ, ನೋ ವಾರಂಟಿ.
ಆಂಟಿಯರಿಗೆ ಟರ್ಮ್ಸ್ ಅಂಡ್ ಕಂಡೀಷನ್ಸ್ ಅಪ್ಲೈ!

ಯಾವ ದೇಶದ ರಮಣನೋ?
ಮೋಸ ಅರಿಯದವನೋ
ದ್ವೇಷ ಸಾಧಿಸುವವನೋ?
ಮಲ್ಲಿಗೆ ಮುಡಿಸುವವನೋ
ಹಿಂಡಿ ಹೊಸಕುವವನೋ?
ಕದ್ದು ನೋಡುವವನೋ
ಕುದ್ದು ಕಂಪಿಸುವವನೋ?
ಕರಗಿ ಮರುಗುವವನೋ
ಎರಗಿ ಸಿಡಿಯುವವನೋ?
ನೋ ನೋ ನೋ!!!

ಅಯ್ಯೋ, ಸರಿ ಹೋಗಲಿಲ್ಲವಾ?
ಬದಲಾಯಿಸಿಬಿಡಿ.
ಥರಾವರಿ ಎಕ್ಸೆಂಜ್ ಆಫರ್,
ಜೊತೆಗೆ
ಟ್ರಯಲ್ ಫ್ರೀ ಕಣ್ರೀ.

ಅವರ್ ಬಿಟ್, ಇವರ್ ಬಿಟ್
ಅವರ್ಯಾರು!?
ಇವರ್ಯಾರು!?

ತಿರುಗಣೆಗೆ ಸಿಕ್ಕವಳು,
ವರ್ಚುಯಲ್ ಜಗತ್ತಿನ
ಚಡಪಡಿಕೆ ಹೊದ್ದವಳು,
ಆಫರ್ ಸುರಿಮಳೆಗೆ ತತ್ತರಿಸುತ್ತಿರುವವಳು,
ಆ ಅವಳು
ಈ ಇವಳು
ಪದ ಪದಗಳ ಅಂಗಿ ಕಳಚಿ,
ಇರದವನ ಎದೆಗೊರಗಿ,
ಉಗುರ ತಾಗಿಸಿ
ಉಸಿರ ಹೊದೆಸಿ...

ಆಮೇಲೆ?
ಆಮೇಲೇನು?!
ಕಲಿಗಾಲವಿದು ಕಣ್ರೀ.
ಕಡುಎಚ್ಚರಿಕೆಯಲ್ಲಿ
ನಿಯಮದ ಪರಿಧಿ ಮೀರದಂತೆ ಲಾಗೌಟಾಗಿ
ಗಂಡ ಮಕ್ಕಳಿಗೆ
ಉಣ ಬಡಿಸುತ್ತೇನೆ!

ಆಡಿಯೋ
ವಿಡಿಯೋ

ಎಚ್. ಎನ್. ಆರತಿ

ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್‌.ಎನ್‌. ಆರತಿ ಅವರು ಕವಿ, ಪತ್ರಕರ್ತೆ. ಅವರು 1966ರ ನವೆಂಬರ್ 13 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಖ್ಯಾತ ಸಂಶೋಧಕ ಹಂಪ ನಾಗರಾಜಯ್ಯ, ತಾಯಿ ಲೇಖಕಿ ಕಮಲಾ ಹಂಪನಾ.  ಬೆಂಗಳೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಅವರು 2 ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪೂರೈಸಿದರು. ದೂರದರ್ಶನದಲ್ಲಿ ಜನಪ್ರಿಯವಾಗಿರುವ ‘ಥಟ್ ಅಂತ ಹೇಳಿ!?’ ರಸಪ್ರಶ್ನೆ ಕಾರ್ಯಕ್ರಮವನ್ನು ಆರಂಭಿಸಿ, 2500 ಸಂಚಿಕೆಗಳನ್ನು ನಿರ್ದೇಶಿಸಿದ ಕೀರ್ತಿ ಆರತಿ ಅವರಿಗೆ ಸಲ್ಲುತ್ತದೆ.

ಸಮಕಾಲೀನಕ್ಕೆ ತಮ್ಮ ಕಾವ್ಯದ ಮೂಲಕ ಸ್ಪಂದಿಸುವ ಇವರು ಅನುವಾದಕ್ಕೂ ಆಗಾಗ ಭೇಟಿ ನೀಡುತ್ತಾರೆ. ಪ್ರವಾಸ, ನಾಟಕ ಅವರ ಮತ್ತಷ್ಟು ಆಸಕ್ತಿಯ ವಿಸ್ತಾರಗಳು. ಸಾಹಿತ್ಯ, ವೃತ್ತಿಯ ಹಾದಿಯಲ್ಲಿ ಏಳು ಕೃತಿಗಳನ್ನು ಹೊರತಂದಿದ್ದಾರೆ. ‘ಓಕುಳಿ, ಬಾ ಹೇಳಿಕಳಿಸೋಣ ಹಗಲಿಗೆ, ಸ್ಮೋಕಿಂಗ್ ಝೋನ್’ ಅವರ ಕವನ ಸಂಕಲನ. ‘ಬೆಟ್ಟದಡಿಯ ಬಿದಿರ ಹೂ’ - ಪ್ರವಾಸ ಕಥನ. ಅವರ ಹಲವಾರು ಕವನಗಳು ಇಂಗ್ಲಿಷ್, ಸ್ಲೊವೆನಿಯನ್ ಒಳಗೊಂಡಂತೆ ಇತರ 6 ಭಾಷೆಗಳಿಗೆ ಅನುವಾದಗೊಂಡಿವೆ. 

‘ಓಕುಳಿ’ ಕವನ ಸಂಕಲನಕ್ಕೆ ಲೇಖಕಿಯರ ಪರಿಷತ್ತಿನ ರಾಜ್ಯಮಟ್ಟದ ಪ್ರಶಸ್ತಿ, ‘ಬಾ ಹೇಳಿಕಳಿಸೋಣ ಹಗಲಿಗೆ’ ಕರ್ನಾಟಕ ಲೇಖಕಿಯರ ಸಂಘದ 1997ರ ‘ಅತ್ಯುತ್ತಮ ಕೃತಿ’ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿ, 2022ನೇ ಸಾಲಿನ ‘ಸಾಹಿತ್ಯಶ್ರೀ’ ಪ್ರಶಸ್ತಿ ಲಭಿಸಿದೆ. ಅಷ್ಟು ಮಾತ್ರವಲ್ಲದೆ ಆರತಿ ಅವರು ಅಂತರರಾಷ್ಟ್ರೀಯ ಮಟ್ಟದ ಕವಿ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ಧರು. 

 

More About Author