Poem

ಅವ್ವನ ಕೌದಿ

ಅವ್ವ ಹಚ್ಚಿಟ್ಟು ಹೋದ ಕೌದಿಯ
ತೇಪೆಚಿತ್ರಗಳು ನಾವು
ಬಲು ಬೇತಿನಿಂದ ಹಾಕುತ್ತಿದ್ದಳು ಹೊಲಿಗೆ
ಸೂಜಿ ಚುಚ್ಚದ ಹಾಗೆ ಚಿತ್ತಾರ ತಪ್ಪದ ಹಾಗೆ
ಅವಳ ಕತೆ ಕಟ್ಟಬೇಕೆಂದರೆ ಕೌದಿಯ ಮೇಲೆ
ಹತ್ತಾದವು ನೂರಾದವು
ಹೊದ್ದು ಮಲಗಿರೆಂದಳು ಬೆಚ್ಚಗೆ

ಅರ್ಧಸ್ತಂಭಾಕಾರದ ಕರಿ ಹಂಚುಗಳು
ಬೋರಲಾಗಿ ಬಿದ್ದಿದ್ದವು ವಿಶಾಲವಾದ ಮಾಳಿಗೆಯ ಮೇಲೆ
ಬಲು ಚಾಲಾಕಿ ಅವ್ವ ಬಂಗಾರದ ನೀರು ಹೊಯ್ದುಬಿಟ್ಟಳು
ಸೂರಿನ ಕೆಳಗೆ ಎರೆದುಕೊಂಡವರೆಷ್ಟು ಲೆಕ್ಕವಿಲ್ಲ

ಬೆಳ್ಳಿ ಚುಕ್ಕಿ ಮೂಡುವುದರೊಳಗೆ
ಹರದಾರಿ ದೂರ ನಡೆದು ನೀರೊಳೆಯಿಂದ
ಹೊತ್ತು ತಂದ ತಿಳಿ ನೀರಿನ ಹನಿ
ತಾಕಿದಲ್ಲೆಲ್ಲ ಹಸಿರೊಡೆದು ಚಿಗಿತವು ಬಳ್ಳಿಗಳು
ಹಂದರದ ತುಂಬೆಲ್ಲ ಜೋಕಾಲಿಯಾಡುವ ಮಿಡಿಗಳು

ಬೆಳಗಾದರೆ ಬೀಸುಕಲ್ಲಿನಲಿ ಹಿಟ್ಟು ಬೀಸುತ್ತ
ಗರಗರನೆ ತಿರುಗುವ ಕಲ್ಲಿನೊಂದಿಗೆ
ಜಿದ್ದಿಗೆ ಬಿದ್ದವಳಂತೆ ಅದೇ ಲಯದಲ್ಲಿ
ತಾನೇ ಕಟ್ಟಿದ ಪದ ಹಾಡುತ್ತಿದ್ದಳು

ಬದುಕಿಬಿಟ್ಟಳು ಅನುಭಾವವನೆಲ್ಲ
ಒಂದೇ ಉಸಿರಿನಲಿ
ಸವೆಸಿಬಿಟ್ಟಳು ಬದುಕ ಕಲ್ಲ ಪಾಳಿಯಂತೆ
ಅವ್ವ ಕೈಚಾಚಿದರೆ ಕೈಲಾಸ
ಅವಳು ಸಲಿಕೆ ಹಿಡಿದು
ಬೆಳೆಗೆ ನೀರು ಹಾಯಿಸುತ್ತಿದ್ದರೆ
ಬೆಳ್ಳಕ್ಕಿಯ ಹಿಂಡು ಉಗುರ
ಕಣ್ಣುಗಳ ಮೇಲೆ ಇತಿಹಾಸ ಗೀಚುತ್ತಿದ್ದವು
ಹೊನ್ನ ಬಿತ್ತಿದಳು ಹೊಳಿಸಾಲ ಗುಂಟ
ಮಣ್ಣಿನ ಮಗಳವಳು
ಮಣ್ಣೇ ಅವಳ ಧರ್ಮ ಕರ್ಮ

ಅವ್ವನ ನಗೆಮಾರಿಯೊಂದು ಬೆಳದಿಂಗಳಂತೆ
ಸುತ್ತಲೂ ಬೆಳಕೇ ಬೆಳಕಿನ ಹಾಲು
ಆ ಹಾಲಿನಲೇ ತೊಳೆದುಕೊಂಡೆವು
ನಮ್ಮ ನಮ್ಮ ದುಗುಡ ದುಮ್ಮಾನ
ಮಾಸಲಿಲ್ಲ ಅವಳ ನಗೆಯ ಅರಿವೆ
ಲೀನವಾಯಿತು ಬೆಳಕು ಹಾಲುಹಾದಿಯೊಳಗೆ

ಅಪ್ಪ ಮಾರುದ್ದ ಹೆಜ್ಜೆಗಳನಿಟ್ಟು ಮುಂದೆ ನಡೆದರೆ
ಅವ್ವ ಮಾರು ದೂರ ನಿಂತು |
ಹಣೆಗೆ ಕೈ ಹಚ್ಚಿ ಇರುವೆ ಸಾಲಿನಂಥ
ಅಪ್ಪನ ಹೆಜ್ಜೆ ಗುರುತುಗಳನೇ ಕಣ್ತುಂಬಿಕೊಂಡಳು
ಅವ್ವನ ಸೆರಗಿನ ನೆರಳಲಿ
ಮಡಿಲ ಕಂಪಿನಲಿ
ಮೈಮರೆತೆವು ಅಪ್ಪನನೆ ಧೇನಿಸುತ
ತಲೆ ಸವರುತ್ತಾ ಸವರುತ್ತಾ
ರಮಿಸಿ ಏರಿಯೇ ಬಿಟ್ಟಳು ಪುಷ್ಪಕವಿಮಾನ
ಅಪ್ಪ ಪದೇ ಪದೇ ಹೇಳುತ್ತಿದ್ದ
'ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ'

-ಭುವನಾ ಹಿರೇಮಠ

 

ಭುವನಾ ಹಿರೇಮಠ

ಭುವನಾ ಹಿರೇಮಠ ಅವರ ಪೂರ್ಣ ಹೆಸರು ಭುವನೇಶ್ವರಿ ರಾಚಯ್ಯ ಹಿರೇಮಠ. ಹುಟ್ಟೂರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಎಂಬ ಪುಟ್ಟ ಹಳ್ಳಿ. ತಂದೆ- ರಾಚಯ್ಯ (ಪ್ರವಚನಕಾರರು), ತಾಯಿ - ಶಿವಗಂಗಾ. ಸದ್ಯ ಬೆಳಗಾವಿ ಜಿಲ್ಲೆಯ ಹಿರೇನಂದಿಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯ ಹವ್ಯಾಸವಿರುವ ಭುವನಾ ಹಿರೇಮಠರ ಮೊದಲ ಕವನ ಸಂಕಲನ ಟ್ರಯಲ್ ರೂಮಿನ ಅಪ್ಸರೆಯರು ಕೃತಿ ಪ್ರಕಟಣೆಗೊಂಡಿದೆ. 2020ರಲ್ಲಿ  ಅವರ 'ಹಸಿರು ಪೈಠಣ ಸೀರಿ' ಕಥೆಗೆ ವಿಜಯ ಕರ್ನಾಟಕ ಯುಗಾದಿ ಕತಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ದೊರೆತಿದೆ. 


 

More About Author