ಅವಳನ್ನು ನದಿ ಎಂದರು
ಎಲ್ಲ ಹೊಲಸನ್ನೂ ಸುರಿದರು
ಪೂಜಿಸುತ್ತೇವೆ ಎಂದು ಕಸ ಒಕ್ಕಿದರು
ಅವಳು ಹರಿಯುತ್ತಲೇ ಉಳಿದಳು
ಕಸ - ಕಡ್ಡಿಗಳನೂ ಬಾಚಿ ಅಪ್ಪಿ ದಡಕ್ಕೊತ್ತಿ
ಪಾಚಿಗಟ್ಟದಂತೆ ತನ್ನೊಳಗೆ ತಾನುಕ್ಕಿ
ಅವಳನ್ನು ನೆಲವೆಂದರು
ತುಳಿದರು, ಕೊಚ್ಚಿದರು, ಹಂಚಿದರು
ಪಾಲು ಹಾಕಿ ಮುಳ್ಳು ನೆಟ್ಟರು
ರಕ್ತದ ಕೆಸರು, ಕೆಡುಕಿನ ಕಸ ತುಂಬಿದರು
ಅವಳು ಮೈ ಬಿಗಿದೂ ಮೆತ್ತಗಾಗಿ
ತೊಡೆ ತೊಟ್ಟಿಲಲಿ ಜೀವ ತೂಗಿದಳು
ಸದಾ ಸುತ್ತುತ್ತ , ಸೂರ್ಯನ ಬೆನ್ಹತ್ತಿ
ಅವಳನ್ನು ಪ್ರಕೃತಿ ಎಂದರು
ಹುಲಿತನವ ಕೊಂದರು, ಮೆರೆದರು
ಹಸುತನವ ಸಾಕಿದರು , ತಿಂದರು ತೇಗಿದರು
ಒಂದೊಂದು ಉಸುರಿಗೊಂದೊಂದು ಸರಪಳಿ
ಮೈಯಿಡೀ ತಡಕಾಡಿ ಮೆಲುಕಿದರು
ಉಳಿದದ್ದೇನೆಂದು ಹುಡುಕಿದರು
ಅವಳು ಉಡಿಕಟ್ಟಿ ಸಂಭಾಳಿಸಿದಳು
ಮೈಯಿಡೀ ಹರಿವ ಇರುವೆ, ಗೊದ್ದ, ಚೇಳು, ಹಾವುಗಳ
ಮತ್ತೂ ಅರಳಿಸಿದಳು ಜಾಜಿ, ಮಲ್ಲಿಗೆ, ಸುಗಂಧರಾಜ
ಗರಿಕೆಯ ಬೇರಾದಳು ಮರವಾದಳು
ಅವಳನ್ನು ದೇವಿಯೆಂದರು
ಅಷ್ಟಲಕ್ಷ್ಮಿಯರೆಂದು ಸ್ತೋತ್ರಪಠಿಸಿದರು
ಘಟ್ಟ ಇಕ್ಕಿದರು, ಫಲ ಬೇಡಿದರು
ಅವಳು ಭಾರ ಹೊತ್ತಳು ಹೊರಲಾಗದೆಯೂ...
ಕಾವು ಕೂತಳು ಚಡಪಡಿಸಿದಳು
ಕೈ ಮುಗಿದರೆ ನಾಚಿದಳು ತಳಮಳಿಸಿದಳು
ಕಡೆಗೊಮ್ಮೆ ನಾನು ದೇವಿ, ನಾನು ಮಾಯಿ
ನದಿ , ನೆಲ !!! ನಾನು ನಾನೇ - ಎಂದು ನಕ್ಕಳು .
-ನಭಾ ಒಕ್ಕುಂದ
ವಿಡಿಯೋ
ವಿಡಿಯೋ
ನಭಾ ಒಕ್ಕುಂದ
ಯುವ ಕವಯತ್ರಿ, ಕಲಾವಿದೆ ನಭಾ ಎಂ. ಒಕ್ಕುಂದ ಮೂಲತಃ ಧಾರವಾಡ ತಾಲೂಕಿನ ಅಮ್ಮಿನಭಾವಿಯವರು. ತಂದೆ- ಎಂ.ಡಿ.ಒಕ್ಕುಂದ, ತಾಯಿ- ವಿನಯಾ ಒಕ್ಕುಂದ. ಧಾರವಾಡದ ಪ್ರೆಜೆಂಟೇಶನ್ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ , ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದ್ದಾರೆ. ಸಾಹಿತ್ಯ, ಚಿತ್ರಕಲೆ ಹಾಗೂ ಸಿನೆಮಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ. ಹೈಸ್ಕೂಲಿನಲ್ಲಿದ್ದಾಗಲೇ ‘ಚಿಟ್ಟೆ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಈ ಕೃತಿಗೆ ‘ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ಮಕ್ಕಳ ಚಂದಿರ ಪ್ರಶಸ್ತಿ' ಲಭಿಸಿದೆ. ಪ್ರಜಾವಾಣಿ ಮಕ್ಕಳ ವರ್ಣಚಿತ್ರ ಸ್ಪರ್ಧೆ ಯಲ್ಲಿ ಇವರು ಬಹುಮಾನ ಪಡೆದಿದ್ದಾರೆ.