Poem

ಆತ್ಮ ಸಖ

ಯಾರವನು ಸಖೀ ಯಾರು ಹೇಳೇ?
ನಿನ್ನಿನಿರುಳಲಿ ಬಂದೆನ್ನ ಸೂರೆಗೊಂಡವನು?
ಗುರುತು ಪರಿಚಯವಿರದ ಗದ್ದಲದ ಸಂತೆಯೊಳು
ಮುಗುಳು ನಗೆಯಲಿ ಸೆಳೆದು ಕಟ್ಟಿದವನು!
ಯಾರವನು ಗೆಳತೀ ಯಾರು ಹೇಳೇ?
ನಲ್ಲನಿಲ್ಲದ ಶೂನ್ಯಸಂಜೆಗಳಲಿ, ಸೊಲ್ಲಡಗಿ ನಾ ಮೌನಿಯಾಗಿರಲು
ಬಂದು ನನ್ನೆದೆ ಮೀಟಿ ಸಪ್ತಸ್ವರಗಳ ಮೇಲೆ ತೇಲಿಸುವವನು
ಯಾರವನು ಇಂದುಮುಖಿ ಬಂದು ಹೇಳೇ?
ನೆರೆಹೊರೆಯ ಕಣ್ಣುಗಳು ಪಿಸುಗುಡುತಲಿರುವಾಗ
ರಾಜಠೀವಿಯಲಿವನು ಕದವ ಬಡಿಯುವನು
ಯಾರವನು ಹಮ್ಮೀರ ಯಾವೂರ ಸರದಾರ?
ಏನಂಥ ಅವರಸರವು ಬಂದು ಕೇಳೇ?
ಇರುಳು ಭೋರ್ಗರೆವ ಮಳೆ ಕರುಳು ಸೀಳುವ ಗಾಳಿ
ಬಂದ ಬಂದವನೇ ಮೈಯ ಚಳಿಬಿಡಿಸಿ ತಲ್ಲಣಗಳ ನೇವರಿಸಿ
ನನ್ನೆದೆಯ ಹಕ್ಕಿಯನು ಬೆಚ್ಚಗಿಟ್ಟವನು
ಯಾರವನು ಚೆಲುವ? ಕದ್ದವನು ನನ್ನೊಲವ?
ಯಾರು ಹೇಳೇ ಸಖಿ ಬೇಗ ಹೇಳೇ?
ಸಂಜೆಗಾವಳದಲ್ಲಿ ನಾ ಹಾಲು ಕರೆವಾಗ
ಮೆತ್ತಗೆ ಬಂದವನು ನನ್ನತ್ತೆ ಹಾಕಿರುವ
ಹೊನ್ನಕಾಲಂದುಗೆಯ ನಗುನಗುತ ತೆಗೆಯುವನು
ಯಾರವನು ಮನಗಳ್ಳ ಹೇಳೆ ಸಖಿ ಯಾರವನು?
ಭೂಮಿ ಚಂಡನು ಒದ್ದು ನನ್ನ ಗೆದ್ದವನು
ಸೂರ್‍ಯ ಬಿಂಬವ ಕಿತ್ತು ಹಣೆಗೆ ತಿಲಕವನಿಟ್ಟು
ನನ್ನ ಎದೆಯಂಗಳದಿ ಚಂದಿರನ ಪದಕವನು ತೂಗಿದವನು
ಯಾರವನು ಹೇಳೆ ಸಖಿ ಕೈಯ ಮುಗಿಯುವೆನು
ನೆತ್ತರಿನ ಕಣಕಣವೂ ತಳಮಳದಿ ಕುದಿವಾಗ
ಭೋರಿಡುವ ಸೊಕ್ಕಿಗೆ ಉಕ್ಕೇರಿದವನು
ಯಾರಿವನು? ಬಂದೆನ್ನ ಬಯಲು ಮಾಡಿದವನು
ಹಸುಗೂಸನೆರೆದು ಹಾಲನೆರೆದಂತೆ
ಕಣ್ಣುತೊಟ್ಟಿಲೊಳಿಟ್ಟು ಲಾಲಿ ಹಾಡುವನು
ಹೌದೇನೇ ಸಖಿ? ಇವನು ಅವನೇ ಏನೇ?
ಇಂದಿನಿರುಳೂ ಇವನು ಬರುವನೇನೇ?
ಕೈಲಾಸಪುರಕೆ ಇವ ಕರೆದೊಯ್ಯನೇನೇ?
ಬಂದಾನೋ, ಬಾರನೋ ನನ್ನಾತ್ಮ ಸಖನು?
ಬಂದಾನೋ.. ಬಾರನೋ... ಬಂದಾನೋ... ಬಾ...ರ...ನೋ...

- ಶಶಿಕಲಾ ವೀರಯ್ಯಸ್ವಾಮಿ

ಶಶಿಕಲಾ ವಸ್ತ್ರದ

ಕವಯತ್ರಿ ಶಶಿಕಲಾ ವಸ್ತ್ರದ 1948 ಜನವರಿ 23ರಂದು ಜನಿಸಿದರು. ವಿಜಯಪುರ ಜಿಲ್ಲೆ ಸಿಂದಗಿ ಇವರ ಹುಟ್ಟೂರು. ತಾಯಿ ಅನ್ನಪೂರ್ಣದೇವಿ. ತಂದೆ ಸಿದ್ದಲಿಂಗಯ್ಯ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಉಪನ್ಯಾಸಕಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಬೀದರ್‌ನಲ್ಲಿ ನೆಲೆಸಿದ್ದಾರೆ. 

ಕಥೆ, ಕವನ ರಚನೆ ಹಾಗೂ ಸಂಪಾದನೆಯಲ್ಲಿ ತೊಡಗಿಸಿಕೊಂಡಿರುವ ಇವರ ಪ್ರಮುಖ ಕೃತಿಗಳೆಂದರೆ ಗುಬ್ಬಿಮನೆ, ಪ್ರಶ್ನೆ, ಜೀವ ಸಾವುಗಳ ನಡುವೆ, ಹೆಂಗ ಹೇಳಲಿ ಗೆಳತಿ (ಕವನ ಸಂಕಲನ) ಶ್ರೀ ಗುರುಸಿದ್ದೇಶ್ವರ ಚರಿತ್ರೆ (ಜೀವನ ಚರಿತ್ರೆ), ಅಪ್ಪ ಮತ್ತು ಮಣ್ಣು (ಅನುಭವ ಕಥನ), ಸಂವೇದನೆ, ಪ್ರಣಯಿನಿ, ಸಮೂಹ(ಸಂಪಾದನೆ), ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರು ಬರೆದ ಹಲವು ಕವಿತೆಗಳು ಇಂಗ್ಲಿಷ್‌ ಹಾಗೂ ಉರ್ದು ಭಾಷೆಗೆ ಅನುವಾದಗೊಂಡಿವೆ. ಉರ್ದು ಭಾಷೆಯ ಹಲವು ಕವಿತೆಗಳನ್ನು ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. 

ಕನ್ನಡ ಸಾಹಿತ್ಯಕ್ಕೆ ಇವರು ನೀಡಿದ ಕೊಡುಗೆಗೆ ಸರೋಜಾದೇವಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಕರ್ನಾಟಕ ಸರ್ಕಾರದ ದಾನ ಚಿಂತಾಮಣಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ, ದೂರದರ್ಶನ ಆಉಕೆ ಸಮಿತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪದವಿಪೂರ್ವ ಶಿಕ್ಷಣ ಸಮಿತಿ ಮಂಡಳಿಗಳ ಸದಸ್ಯರಾಗಿದ್ದರು.

More About Author