Poem

ನನ್ನವ್ವ

ಸಣ್ಣವಳಿದ್ದಾಗ ಕೂಲಿ ಮಾಡಿ
ತಾಯಿ ಜೊತೆಗೂಡಿ
ತಂದೆ ಪ್ರೀತಿಯಿಲ್ಲದೆ
ಹಾಯಿ ಬೆಚ್ಚನೆ ಹಚ್ಚಹಸಿರಿನಲಿ
ಹೊಚ್ಚ ಹೊಸ ಕನಸುಗಳ
ಉಸುರಿನಲಿ ಬದುಕಿದಳು ನನ್ನವ್ವ.

ಯೌವನದಿ, ಕನಸಿನ ಪುರುಷನಿಗೆ
ಹಾಸಿದಳು ಹಸೆಮಣೆಗೆ ಮೈ
ತಕರಾರಿಲ್ಲದೆ ಮುಗ್ಧೆ
ಹೆಣೆದ ಕನಸುಗಳು ಅವರಿಸಿ
ನೆಲ-ಮುಗಿಲ ಹಾಸಿ ಹೊದ್ದಳು
ಮನದುಂಬಿ ಕನಸುಗಳೆಲ್ಲ
ಹರಡಿ ಹಾರುತಿರುವಾಗ
ಹಿಡಿಯ ಬಯಸಿದಳು ನನ್ನವ್ವ.

ನನಸಾದ ಕನಸುಗಳು ಬೆರಳೆಣಿಕೆ
ಈಡೇರದವು ಭೂಮಿಯಷ್ಟು
ಎಲ್ಲವೂ ಹಾಸಿಹೊದ್ದು, ಅದರಿಂದೇಳದಾದಳು
ಕೊರಕೊರಗಿ ಸೊರಗಿದಳು ನನ್ನವ್ವ.

ಮೈಮೂಳೆ ಸವೆಸಿ, ನೆತ್ತರು ಇಂಗಿಸಿ
ಬೆಳಗಿದ ಕಣ್ಣಗಳು ಮನೆ ಬೆಳಕಾಗಿಸಿ
ಮನ ಮಂಕಾಗದವಳ ದುಡಿತ
ಈಗಲೂ ತಪ್ಪಲಿಲ್ಲ
ಹತ್ತು ಹೆತ್ತು ಆರು ಉಳಿದು
ಅತ್ತತ್ತು ಉಸಿರು ಬಿಸಿಯಾದರೂ
ಕಂಗಳಲಿ ಭರವಸೆಯ ತಣ್ಣನೆ ಬೆಳಕು
ಮೊಗದ ತುಂಬೆಲ್ಲ ಪೂರ್ಣ

- ಹೇಮಲತಾ ವಡ್ಡೆ

ಹೇಮಲತಾ ವಡ್ಡೆ

ಬರಹಗಾರ್ತಿ ಹೇಮಲತಾ ವಡ್ಡೆ ಅವರು ಕನ್ನಡ ಪ್ರಾಧ್ಯಾಪಕಿ. 1967 ರ ಆಗಸ್ಟ್ 4 ರಂದು ಜನಿಸಿದರು. ’ಪ್ರತಿಫಲನ’ ಅವರ ಕೃತಿ 2012 ರಲ್ಲಿ ಪ್ರಕಟಣೆ ಕಂಡಿತು. ಕರ್ನಾಟಕ ಲೇಖಕಿಯರ ಸಂಘದ ಬೀದರ್ ಜಿಲ್ಲಾ ಶಾಖೆಗೆ 2 ಬಾರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

More About Author