ಯೋಗ ತಂದ ಯೋಗ...

Date: 07-05-2023

Location: ಬೆಂಗಳೂರು


“ನಾವು ಅಭ್ಯಾಸ ಮಾಡುವ ಯೋಗದ ಭಂಗಿಗಳನ್ನು ಫೇಸ್ಬುಕ್ಕಿನಲ್ಲಿ ಹಾಕುತ್ತ ಬಂದೆವು. ಅದನ್ನು ನೋಡಿದ ಜನರು ನಮ್ಮ ಮಕ್ಕಳಿಗೆ ಯೋಗ ಹೇಳಿಕೊಡಿ ಎಂದಾಗ ನಾನು ನನ್ನ ತಂಗಿ ಆನ್ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆವು. ಆನ್ಲೈನ್ ತರಗತಿಗಳಲ್ಲಿ ಹತ್ತು ವರ್ಷದ ಮಕ್ಕಳಿಂದ ವಯಸ್ಸಾದವರೂ ಕೂಡ ಕಲಿಯುತ್ತಿದ್ದಾರೆ,” ಎನ್ನುತ್ತಾರೆ ಯೋಗಪಟುಗಳಾದ ಚೈತ್ರ ಮತ್ತು ನಂದಿನಿ. ಅಂಕಣಗಾರ್ತಿ ಜ್ಯೋತಿ ಎಸ್. ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ‘ಯೋಗ ತಂದ ಯೋಗ...’ಬರಹದಲ್ಲಿ ಯೋಗಿಣಿಯರ ಬದುಕಿನ ಚಿತ್ರಣವನ್ನು ತೆರೆದಿಟ್ಟಿದ್ದಾರೆ.

ಯೋಗ ಜಗತ್ತಿಗೆ ಕೊಡಮಾಡಲಾದ ಭಾರತದ ಬಹುದೊಡ್ಡ ಕೊಡುಗೆ. ಇದು ಮನುಷ್ಯನ ದೈಹಿಕ ಮಾನಸಿಕ ಶಕ್ತಿ ಮತ್ತು ಅಂತರಂಗದ ಸಾಮರ್ಥ್ಯವನ್ನು ಸರಿಯಾದ ಕ್ರಮದಲ್ಲಿ ವೃದ್ಧಿಸುವ ಒಂದು ಸುಲಭ ಮತ್ತು ಪ್ರಮುಖವಾದ ವಿಧಾನ. ಗಡಿ, ಭಾಷೆ, ಧರ್ಮ, ಜಾತಿ, ಮತ, ಎಲ್ಲ ಸಿದ್ಧಾಂತಗಳನ್ನು ಮೀರಿದ ಸಾರ್ವತ್ರಿಕ ಪ್ರಕ್ರಿಯೆ. ಮಾನವನ ಪ್ರಜ್ಞೆಯನ್ನು ವಿದ್ವತ್ಪೂರ್ಣವಾಗಿ ಬೆಳೆಸಿ ಸದಾ ಸ್ಥಿಮಿತದಲ್ಲಿಡುವ ವಿಶಿಷ್ಟ ಸಾಧನೆ. ಇಂತಹ ಸಾಧನೆಯನ್ನು ನಿರಂತರ ಅಭ್ಯಾಸದಿಂದ ಸಿದ್ಧಿಸಿಕೊಂಡು ಕಿತ್ತು ತಿನ್ನುವ ಬಡತನದಲ್ಲೂ ಅರಳಿ ನಿಂತ ಒಂದೇ ಗಿಡದ ಎರಡು ಹೂವುಗಳ ಹಾದಿ ಇವತ್ತಿನ ನಮ್ಮ ಹಾದಿಯೇ ತೋರಿದ ಹಾದಿಯಲ್ಲಿ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಂಡಿಹಳ್ಳಿ ಎಂಬ ಗ್ರಾಮದ ಯೋಗಿಣಿಯರಾದ ಚೈತ್ರ ಮತ್ತು ನಂದಿನಿಯವರ ಈವರೆಗಿನ ಹಾದಿಯನ್ನು ಅವರ ಮಾತುಗಳಲ್ಲಿ ಓದಿಕೊಳ್ಳಿ.

'ನಮ್ಮ ಗ್ರಾಮದಲ್ಲಿ ಕೃಷಿ, ಗಾರೆ ಕೆಲಸ ಹೊರತು ಪಡಿಸಿ ಬೇರೆ ಯಾವ ಉದ್ಯೋಗವೂ ಸಿಗುವುದಿಲ್ಲ. ಒಂದು ಕಾಲಕ್ಕೆ ತುತ್ತು ಅನ್ನಕ್ಕೂ ಪರದಾಡುತ್ತಿದ್ದ ಕುಟುಂಬ ನಮ್ಮದು. ಅಪ್ಪ ಹಂಪಿನಕಟ್ಟೆ ಬರಮಪ್ಪ ಅಮ್ಮ ಲಲಿತಮ್ಮನಿಗೆ ನಾವು ಮೂರು ಜನರು ಮಕ್ಕಳು. ನಾನು ತಂಗಿ ಮತ್ತು ಒಬ್ಬ ಅಣ್ಣ. ನಾವು ಮೂರು ಜನರು ನಮ್ಮೂರಿನಿಂದ ಹಗರಿಬೊಮ್ಮನಹಳ್ಳಿಯಲ್ಲಿದ್ದ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದೆವು. ಆಗ ಕಾಲಿಗೆ ಚಪ್ಪಲಿ, ಪುಸ್ತಕ ಇಟ್ಟುಕೊಳ್ಳಲು ಒಂದು ಬ್ಯಾಗ್ ಕೂಡ ಇರುತ್ತಿರಲಿಲ್ಲ. ಬೇರೆಯವರ ಹೊಲದಲ್ಲಿ ಕಳೆ ಕೀಳುವ ಕೆಲಸ ಮಾಡುವುದು, ಮಲ್ಲಿಗೆ ಮೊಗ್ಗು ಬಿಡಿಸುವುದು ಮಾಡುತ್ತಿದ್ದೆವು. ಒಂದು ಕೆಜಿ ಬಿಡಿಸಿದರೆ ಇಪ್ಪತ್ತು ರೂಪಾಯಿ ಕೊಡುತ್ತಿದ್ದರು. ನಾವು ಚಿಕ್ಕವರಾದ್ದರಿಂದ ಅರ್ಧ ಕೆಜಿ ಬಿಡಿಸುವಷ್ಟರಲ್ಲಿ ಸಾಕಾಗಿಬಿಡುತ್ತಿತ್ತು. ಶಾಲೆ ಇರುವಾಗ ಬೆಳಗ್ಗೆ 6 ರಿಂದ 8 ಗಂಟೆಯ ತನಕ ಹೋಗಿ ಮೊಗ್ಗು ಬಿಡಿಸುತ್ತಿದ್ದೆವು. ನಂತರ ಶಾಲೆಯಿಂದ ಬಂದಮೇಲೆ ಹೋಗಿ ಉಳಿದ ಮೊಗ್ಗು ಬಿಡಿಸುತ್ತಿದ್ದೆವು. ಐದನೇ ತರಗತಿ ಓದುವಾಗಿನಿಂದಲೇ ಹೀಗೆ ಕೂಲಿ ಮಾಡಿ ನಮ್ಮ ಶಾಲೆಯ ಖರ್ಚನ್ನು ನಿಭಾಯಿಸಿ ವಿದ್ಯಾಭ್ಯಾಸ ಮಾಡುತ್ತಿದ್ದೆವು' ಎಂದು ತಮ್ಮ ಬಾಲ್ಯದ ಬಗ್ಗೆ ಹೇಳಿದರು ಚೈತ್ರ.

ಚಿಕ್ಕವಳಿದ್ದಾಗ ಒಮ್ಮೆ ಆಟ ಆಡಲು ನನ್ನ ತಂಗಿ ನಂದಿನಿ ಗುಡ್ಡದ ಮೇಲೆ ಹೋಗಿದ್ದಳು. ಅಲ್ಲಿ ಎಷ್ಟೊಂದು ಜನರು ಯೋಗ ಮಾಡುತ್ತಿದ್ದರಂತೆ. ಅದರಲ್ಲಿದ್ದ ಒಬ್ಬ ಅಣ್ಣ ಇವಳನ್ನು ಯೋಗ ಮಾಡಲು ಕರೆದಿದ್ದಾನೆ. ಯೋಗ ಎಂದರೆ ಏನಂತಲೇ ಗೊತ್ತಿಲ್ಲದ ನನ್ನ ತಂಗಿಗೆ ಮಹಾಂತೇಶ್ ಗುರುಗಳು ಒಂದೆರಡು ಆಸನಗಳನ್ನು ಮಾಡಿಸಿದ್ದಾರೆ. ಹಾಗೆ ತಿನ್ನಲು ಏನಾದರೂ ಕೊಟ್ಟು ಪ್ರತಿದಿನ ಬರುವಂತೆ ಮಾಡಿ ಒಂದೊಂದೇ ಆಸನಗಳನ್ನು ಹೇಳಿಕೊಟ್ಟು ತರಬೇತಿ ಕೊಡುತ್ತ ಬಂದಿದ್ದಾರೆ. ಹಾಗೆ ಒಂದು ವರ್ಷ ಅವರ ಹತ್ತಿರ ಯೋಗ ಕಲಿತಿದ್ದಾಳೆ. ತದನಂತರ ಬೇಸಿಗೆ ರಜೆಯಲ್ಲಿ ಹಗರಿಬೊಮ್ಮನಹಳ್ಳಿಯ ಒಂದು ದೊಡ್ಡ ಕಾರ್ಯಕ್ರಮದಲ್ಲಿ ಡೆಮೋ ಕೊಡಲು ಕರೆದುಕೊಂಡು ಹೋಗಿದ್ದರು. ನಾವೆಲ್ಲರೂ ನೋಡೋಣ ಅಂತ ಹೋಗಿದ್ವಿ. ಆ ಕಾರ್ಯಕ್ರಮ ನೋಡಲು ಸುಮಾರು ಎರಡು ಸಾವಿರ ಜನ ಸೇರಿದ್ದರು. ಅಲ್ಲಿ ನಾಲ್ಕೈದು ಜನರು ಸೇರಿಕೊಂಡು ಯೋಗಾಸನದ ಗ್ರೂಪ್ ಡೆಮೋ ಕೊಟ್ಟರು. ಆಮೇಲೆ ಸ್ಟೇಜ್ ಮೇಲೆ ನಂದಿನಿಯನ್ನು ನೋಡಿ ನಮಗೆ ಬಹಳ ಖುಷಿ ಮತ್ತು ಆಶ್ಚರ್ಯ ಎರಡೂ ಆಯ್ತು. ಇವಳು ಇಷ್ಟೆಲ್ಲ ಮಾಡುತ್ತಾಳೆ ಎನ್ನುವುದು ನಮಗೆ ಗೊತ್ತೇ ಇರಲಿಲ್ಲ. ಕಾರ್ಯಕ್ರಮ ನೋಡಲು ಬಂದಿದ್ದ ಅಕ್ಕಪಕ್ಕದ ಹಳ್ಳಿ ಜನರೆಲ್ಲಾ ಯಾರ ಮಗಳೋ ಇವಳು ಎಷ್ಟ್ ಚಂದ ಯೋಗ ಮಾಡ್ತಾಳೆ. ನಮ್ ಹೊಟ್ಟೆಯಾಗಾದ್ರೂ ಹುಟ್ಟಬಾರದಿತ್ತಾ ಎನ್ನುತ್ತಿದ್ದರು. ಅಮ್ಮ ನಾನು ಅವರು ಹಾಗೆ ಮಾತನಾಡುವುದೆಲ್ಲವನ್ನು ಅಲ್ಲೇ ಕುಳಿತು ಕೇಳಿಸಿಕೊಂಡೆವು. ಅಮ್ಮ ಆಕೆ ನನ್ನ ಮಗಳು ಅಂತ ಹೇಳಿದಾಗ ಅಲ್ಲಿದ್ದವರೆಲ್ಲ ನಮ್ಮನ್ನು ಹೊಗಳಿ ತುಂಬ ಖುಷಿಪಟ್ಟರು. ಆಗ ನನಗೂ ಕಲಿಯಬೇಕು ಎಂಬ ಆಸಕ್ತಿ ಹುಟ್ಟಿ ಗುರೂಜಿಯನ್ನು ಕೇಳಿಕೊಂಡೆ. ಗುರೂಜಿ ಕಲಿಯುವ ಮನಸ್ಸು ಇಚ್ಛೆ ಇರುವ ಯಾರು ಬೇಕಾದರೂ ಕಲಿಯಬಹುದು ಅಂತ ಹೇಳಿದ್ರು. ನಂತರ ಪ್ರತಿದಿನ ನಾನು ತಂಗಿ ಇಬ್ಬರೂ ಯೋಗಾಭ್ಯಾಸ ಮಾಡಲು ಹೋಗುತ್ತಿದ್ದೆವು. ಗುರೂಜಿ ಆಗಾಗ ಬೇರೆ ಬೇರೆ ಹಳ್ಳಿಗಳಲ್ಲಿ ಡೆಮೋ ಕೊಡಿಸುತ್ತಿದ್ದರು. ಕ್ಯಾಂಪುಗಳನ್ನು ಮಾಡುತ್ತಿದ್ದರು. ಬಂದ ಹಣದಿಂದ ನಮ್ಮನ್ನು ಸ್ಪರ್ಧೆಗಳಿಗೆ ಕಳುಹಿಸುತ್ತಿದ್ದರು. ಅಕ್ಕಪಕ್ಕದ ಜನರೆಲ್ಲ ಇವರು ಹೆಣ್ಣುಮಕ್ಕಳು ಇವರೇನು ಮಾಡ್ತಾರೆ? ಋತುಮತಿಯಾಗಿದ್ದರೂ ಗಂಡುಬೀರಿಯರ ಹಾಗೆ ಹೋಗ್ತಾರೆ... ಎಂಬ ಕುಹಕದ ಮಾತುಗಳನ್ನಾಡುತ್ತಿದ್ದರು. ಮನೆಯಲ್ಲಿ ಅಮ್ಮನ ಪ್ರೋತ್ಸಾಹ ತುಂಬ ಇದ್ದುದರಿಂದ
ಯಾರು ಏನೇ ಹೇಳಿದರೂ ನಾವು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಎಂದು ತಾವು ಯೋಗ ಕಲಿತ ಬಗೆಯನ್ನು ಹೇಳಿದರು.

ನಾನು ಬಿಜಾಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಯೋಗದಲ್ಲಿ ಡಿಪ್ಲೋಮ ಓದಿದೆ. ಓದಲು ಬೇಕಾಗುವ ಫೀಸನ್ನು ನಮ್ಮ ಗುರೂಜಿಯವರೇ ಕಟ್ಟಿದ್ದರು. ನಮ್ಮ ಬಡತನ ಹಿನ್ನಲೆಯ ಬಗ್ಗೆ ತಿಳಿದುಕೊಂಡಿದ್ದರಿಂದ ಮೆಸ್ಸ್ ಬಿಲ್ ಕಟ್ಟಲು ಯೋಗ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಜ್ಯೋತಿ ಉಪಾಧ್ಯೆ ಅವರು ಸಹಾಯ ಮಾಡುತ್ತಿದ್ದರು. ವಿಶ್ವವಿದ್ಯಾನಿಲಯದ ಯಾವುದೇ ಕಾರ್ಯಕ್ರಮವಾಗಲಿ ನಮ್ಮದೊಂದು ಪ್ರದರ್ಶನ ಇರುತ್ತಿತ್ತು. ನಂತರ ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಯೋಗದಲ್ಲಿ M.Sc. ಪದವಿಯನ್ನು ಪಡೆದೆ. ಹನ್ನೆರಡು ವರ್ಷದಿಂದ ನಿರಂತರವಾಗಿ ಯೋಗಾಭ್ಯಾಸ ಮಾಡಿಕೊಂಡು ಈಗ ನಾಲ್ಕು ವರ್ಷದಿಂದ ತರಗತಿಗಳನ್ನು ತೆಗೆದುಕೊಳುತ್ತಿದ್ದೇವೆ. ಮೊದಲೆಲ್ಲ ಸೀಗನಹಳ್ಳಿ, ಬೊಮ್ಮನಹಳ್ಳಿ, ಸಮುದಾಯ ಭವನ ಇತ್ಯಾದಿ ಕಡೆಗಳಲ್ಲೆಲ್ಲ ಹೋಗಿ ಹದಿನೈದು ದಿನಗಳ ಶಿಬಿರವನ್ನು ಏರ್ಪಡಿಸಿ ಮಕ್ಕಳಿಗೆ, ಹೆಂಗಸರಿಗೆ, ಗಂಡಸರಿಗೆ ಉಚಿತವಾಗಿ ಯೋಗ ಹೇಳಿಕೊಡುತ್ತಿದ್ದೆವು. ಕೋವಿಡ್ ಸಮಯದಲ್ಲಿ ಕೆಲವು ಆಸ್ಪತ್ರೆಗಳ ಸಿಬ್ಬಂದಿಗೆ ಹೇಳಿಕೊಟ್ಟಿದ್ದೇವೆ.

ನಾವು ಅಭ್ಯಾಸ ಮಾಡುವ ಯೋಗದ ಭಂಗಿಗಳನ್ನು ಫೇಸ್ಬುಕ್ಕಿನಲ್ಲಿ ಹಾಕುತ್ತ ಬಂದೆವು. ಅದನ್ನು ನೋಡಿದ ಜನರು ನಮ್ಮ ಮಕ್ಕಳಿಗೆ ಯೋಗ ಹೇಳಿಕೊಡಿ ಎಂದಾಗ ನಾನು ನನ್ನ ತಂಗಿ ಆನ್ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆವು. ಆನ್ಲೈನ್ ತರಗತಿಗಳಲ್ಲಿ ಹತ್ತು ವರ್ಷದ ಮಕ್ಕಳಿಂದ ವಯಸ್ಸಾದವರೂ ಕೂಡ ಕಲಿಯುತ್ತಿದ್ದಾರೆ. ಜೊತೆಗೆ ಸೊಂಟನೋವು, ಹೈಪರ್ ಟೆನ್ಶನ್, obeysity, ಬಿಪಿ, ಶುಗರ್ ಇದ್ದವರು ನಮ್ಮಲ್ಲಿ ಯೋಗ ಕಲಿತು ಚೇತರಿಸಿಕೊಂಡವರು ಇದ್ದಾರೆ. ನನ್ನ ತಂಗಿ ನಂದಿನಿ ಬಿ. ಎ. ಪದವಿ ಮುಗಿಸಿ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ M.Sc. in ಯೋಗ ಮಾಡುತ್ತಿದ್ದಾಳೆ. ನಾನು ಪ್ರಸ್ತುತ ಬೆಂಗಳೂರಿನ ಕಾಡುಗೋಡಿಯಲ್ಲಿ ಶಾರದಾ ವಿದ್ಯಾ ಮಂದಿರದ ಯೋಗ ಶಿಕ್ಷಕಿಯಾಗಿದ್ದೇನೆ. ಬೆಂಗಳೂರು, ಮೈಸೂರು, ಗುಲ್ಬರ್ಗ, ಚೆನ್ನೈ, ಒರಿಸ್ಸಾ, ವಿಜಯವಾಡ, ಪಾಂಡಿಚೆರಿ ಇನ್ನೂ ಹಲವಾರು ಕಡೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದೇವೆ. ಕಾಂಪಿಟೇಷನ್ ಫೀಸ್ ಕಟ್ಟಲು ಹಣವಿಲ್ಲದೆ ಎಷ್ಟೋ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದರು.

ಇವರ ಯೋಗ ಗುರುಗಳಾದ ಮಹಾಂತೇಶ್ ಗುರೂಜಿಯವರು ಮಾತನಾಡಿ 'ನನ್ನೂರು ಮೂಲತಃ ಬೆಳಗಾವಿ. ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಡಿಪಾರ್ಟ್ಮೆಂಟಿನಲ್ಲಿ ಸರ್ಕಾರಿ ನೌಕರನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಯೋಗವನ್ನು ಚಿಕ್ಕ ವಯಸ್ಸಿನಲ್ಲೇ ಕಲಿತಿದ್ದೆ. ಕೆಲಸದ ನಿಮಿತ್ತ ಹಗರಿಬೊಮ್ಮನಹಳ್ಳಿಯಲ್ಲಿ ವಾಸವಿದ್ದೆ. ಬಂಡೀಹಳ್ಳಿಯಲ್ಲಿ ಬೆಟ್ಟದ ಮೇಲೊಂದು ದೇವಸ್ಥಾನವಿದೆ. ಅಲ್ಲಿ ಪ್ರತಿದಿನ ಸ್ವಲ್ಪ ಹೊತ್ತು ಕುಳಿತುಕೊಂಡು ಯೋಗ ಮಾಡಿ ವಾಕಿಂಗ್ ಮಾಡಿ ಹೋಗುತ್ತಿದ್ದೆ. ಮೊದಲು ಬೇರೆ ಬೇರೆ ಹುಡುಗರು ಬರುತ್ತಿದ್ದರು. ನನ್ನನ್ನು ನೋಡಿ ಅವರೂ ಯೋಗ ಮಾಡುತ್ತಿದ್ದರು. ಕ್ರಮೇಣ ಅವರೆಲ್ಲ ಬಂದು ಕಲಿಯತೊಡಗಿದರು. ಯಾರೆಲ್ಲ ಕಲಿಯಲು ಆಸಕ್ತಿಯಿಂದ ಬರುತ್ತಾರೋ ಅವರಿಗೆಲ್ಲ ಯೋಗ ಹೇಳಿಕೊಟ್ಟು ಯೋಗದಲ್ಲಿಯೇ ವಿದ್ಯಾಭ್ಯಾಸವನ್ನು ಮುಂದುವರೆಸಿ ಯೋಗದಲ್ಲಿ M.Sc. ಶಿಕ್ಷಣ ಕೊಡಿಸಿ ಅವರಿಗೆಲ್ಲ ಯಾವುದಾದರು ಯೂನಿವರ್ಸಿಟಿಗಳಲ್ಲಿ ಕೆಲಸಕ್ಕೆ ಸೇರಿಸುತ್ತಿದ್ದೆ. ಅತ್ಯಂತ ಬಡಕುಟುಂಬದ ಅಕ್ಕ ತಂಗಿಯರು ಚೈತ್ರ ಮತ್ತು ನಂದಿನಿ. ಆಗೆಲ್ಲ ಇವರು ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಇನ್ನೂ ಬೇರೆ ಹುಡುಗರೆಲ್ಲ ಬರುತ್ತಿದ್ದರು. ಅವರು ಗಾರೆ ಕೆಲಸ ಮಾಡುತ್ತಿದ್ದರು. ನಾನು ಇಂತಹ ಮಕ್ಕಳನ್ನು ಆಯ್ಕೆ ಮಾಡಿಕೊಂಡೆ. ಅವರಿಗೆ ಯೋಗದ ಮಹತ್ವವನ್ನು ತಿಳಿಸಿ ಯೋಗದಲ್ಲಿ ತರಬೇತಿ ಮಾಡಿದೆ. ನಂತರ ತರಗತಿಗಳನ್ನು ಹೇಗೆ ಮಾಡಬೇಕು ಅಂತ ಹೇಳಿಕೊಡುತ್ತ ಹೋದೆ. ನನ್ನಲ್ಲಿ ಯೋಗ ಕಲಿತ ಮಕ್ಕಳು ಈಗ ಬೆಂಗಳೂರು, ಹೈದರಾಬಾದ್ ಸೇರಿದಂತೆ ವಿದೇಶದಲ್ಲೂ. ಕೆಲಸ ಗಿಟ್ಟಿಸಿ ಸ್ಮಾರ್ಟ್ ಲೈಫ್ ಸಾಗಿಸುತ್ತಿದ್ದಾರೆ' ಎನ್ನುತ್ತಾರೆ.

ಮೊದಲು ಇಂತಹದ್ದೆಲ್ಲಾ ಸನ್ಯಾಸಿಗಳಿಗೆ, ಸಾಧು ಸಂತರಿಗೆ ನಮಗಲ್ಲ ಎನ್ನುತ್ತಿದ್ದ ಜನರು ಕೋವಿಡ್ ಬಂದ ನಂತರ ಯೋಗದ ಮಹತ್ವ, ಅಗತ್ಯಗಳನ್ನು ತಿಳಿದುಕೊಂಡು ಯಾವುದೇ ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಕಲಿಯುಲು ಮುಂದಾಗಿದ್ದಾರೆ. ನಾವು ಚಿಕ್ಕ ವಯಸ್ಸಿನಲ್ಲಿ ಪಟ್ಟ ಕಷ್ಟಗಳನ್ನು ನೆನಪಿಸಿಕೊಂಡರೆ ಯೋಗದಿಂದ ಬದುಕು ಇಷ್ಟು ಭವ್ಯವಾಗುತ್ತದೆ ಎಂದುಕೊಂಡಿರಲಿಲ್ಲ. ಮುಂದೆ ವಿದೇಶಗಳಿಗೆ ಹೋಗಿ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂಬ ಮಹದಾಸೆಯಿದೆ. ಔಷಧಿ ಇಲ್ಲದೆಯೇ ಯೋಗದಿಂದಲೇ ಎಷ್ಟೋ ಖಾಯಿಲೆಗಳನ್ನು ಗುಣಪಡಿಸಬಹುದು. ಆದ್ದರಿಂದ
therapetic yoga ಇನ್ಸ್ಟಿಟ್ಯೂಟನ್ನು ತೆರೆಯಬೇಕು. ನಮ್ಮಿಂದಾದಷ್ಟು ಸಮಾಜಸೇವೆ ಮಾಡಬೇಕು ಎಂಬ ಹಂಬಲವಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಇನ್ನೊಬ್ಬ ಯೋಗಿಣಿ ನಂದಿನಿ.

ಬಡತನ ಮೆಟ್ಟಿ ನಿಂತು ಆಕಸ್ಮಿಕವಾಗಿ ಯೋಗ ಕಲಿತು ಅದರಿಂದಲೇ ಬದುಕನ್ನು ಬೆಳಕಾಗಿಸಿಕೊಂಡ ಈ ಯೋಗ ದೀಪಗಳು ಇನ್ನಷ್ಟು ಮತ್ತಷ್ಟು ಪ್ರಜ್ವಲಿಸಲಿ. ಇವರ ಕನಸುಗಳೆಲ್ಲ ನನಸಾಗಲಿ ಎಂಬ ಹಾರೈಕೆ ನಮ್ಮದು.

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ​​​ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್

ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ

MORE NEWS

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ

10-01-2025 ಬೆಂಗಳೂರು

"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...

ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...

01-01-2025 ಬೆಂಗಳೂರು

"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...