Date: 10-01-2025
Location: ಬೆಂಗಳೂರು
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ಮತ್ತು ಪೆರಮಾತಿನ ಶಿಕ್ಶಣವೆ ಹೆಚ್ಚು ವ್ಯಾಪಿಸಿಕೊಂಡಿರುವ ಬಾರತ, ಇತರ ಹಲವು ಏಸಿಯಾದ ಮತ್ತು ಆಪ್ರಿಕಾದ ದೇಶಗಳ ಆರ‍್ತಿಕ ಬೆಳವಣಿಗೆಯನ್ನು ಹೋಲಿಸಿ ನೋಡಿದಾಗ ದೊಡ್ಡ ಪ್ರಮಾಣದಲ್ಲಿ ಈ ಚಿತ್ರಣ ಕಣ್ಣಿಗೆ ರಾಚುತ್ತದೆ," ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ’ ಕುರಿತು ಬರೆದಿರುವ ಲೇಖನ.
ಶಿಕ್ಶಣ ಪಡೆದ ಇಂದಿನ ಮಕ್ಕಳೆ ನಾಳಿನ ದೇಶವನ್ನು ಕಟ್ಟುವ ಯುವಕರು. ಹಾಗಾಗಿ ದೇಶ ನಿರ‍್ಮಾಣದ ಪ್ರಕ್ರಿಯೆಗೆ ಈ ಶಿಕ್ಶಣ ಮಾದ್ಯಮ ನೇರವಾಗಿ ತಾಕುತ್ತದೆ. ದೇಶದ ಅಬಿರುದ್ದಿ ಸಾದನೆಯಲ್ಲಿ ತಾಯ್ಮಾತಿನ ಶಿಕ್ಶಣ ಹೆಚ್ಚು ಪೂರಕವಾಗಿರುತ್ತದೆ. ಈ ಮೇಲೆ ಚರ‍್ಚಿಸಿದಂತೆ ತಾಯ್ಮಾತಿನ ಶಿಕ್ಶಣವು ಮಗುವಿನ ದೇಹಿಕ ಮತ್ತು ಮಾನಸಿಕ ಸೂಕ್ತ ಬೆಳವಣಿಗೆಗೆ ಪೂರಕವಾಗಿರುತ್ತದೆ. ಹೀಗೆ ದೇಹಿಕ ಮತ್ತು ಮಾನಸಿಕವಾದ ಸೂಕ್ತ ಮತ್ತು ಸದ್ರುಡ ಬೆಳವಣಿಗೆಗಳು ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಬೆಳೆಸುವುದಕ್ಕೆ ಬೇಕಿರುವಂತಾ ಮುಕ್ಯವಾದ ಎರಡು ಅಂಶಗಳು. ಇದನ್ನು ತಾಯ್ಮಾತಿನ ಶಿಕ್ಶಣ ಒದಗಿಸುತ್ತದೆ. ಆದರೆ, ಪೆರಮಾತಿನ ಶಿಕ್ಶಣದ ಮಕ್ಕಳು ಇದರಲ್ಲಿ ಹೆಚ್ಚು ಸೋಲುವುದನ್ನು ಕಾಣಬಹುದು. ಮಕ್ಕಳ ಸೂಕ್ತ ಬೆಳವಣಿಗೆ ಎಂದರೆ ದೇಶದ ಅಬಿರುದ್ದಿ ಎಂದೆ ಅರ‍್ತ. ಇದರಿಂದಾಗಿ ನೇರವಾಗಿ ದೇಶದ ಅಬಿರುದ್ದಿಯ ಮೇಲೆ ಇದು ಪ್ರಬಾವವನ್ನು ಬೀರುತ್ತದೆ. ಹಿಂದುಳಿದ ಮತ್ತು ಮುಂದುವರೆಯುತ್ತಿರುವ ಹಲವಾರು ದೇಶಗಳಲ್ಲಿ ಇಂತಾ ಹೆಚ್ಚಿನ ಅದ್ಯಯನಗಳು ಬಂದಿದ್ದು ತಾಯ್ಮಾತಿನ ಶಿಕ್ಶಣ ಇಲ್ಲದಿರುವುದು ದೇಶದ ಅಬಿರುದ್ದಿಯ ಹಿನ್ನಡೆಗೆ ಮಹತ್ವದ ಕಾರಣಗಳಲ್ಲೊಂದು. ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ಮತ್ತು ಪೆರಮಾತಿನ ಶಿಕ್ಶಣವೆ ಹೆಚ್ಚು ವ್ಯಾಪಿಸಿಕೊಂಡಿರುವ ಬಾರತ, ಇತರ ಹಲವು ಏಸಿಯಾದ ಮತ್ತು ಆಪ್ರಿಕಾದ ದೇಶಗಳ ಆರ‍್ತಿಕ ಬೆಳವಣಿಗೆಯನ್ನು ಹೋಲಿಸಿ ನೋಡಿದಾಗ ದೊಡ್ಡ ಪ್ರಮಾಣದಲ್ಲಿ ಈ ಚಿತ್ರಣ ಕಣ್ಣಿಗೆ ರಾಚುತ್ತದೆ. ಅಬಿರುದ್ದಿಯ ಅಂಕಿಸಂಕೆಗಳನ್ನು ಹೀಗೆ ಎತ್ತಿಕೊಂಡು ಹಲವು ದೇಶದ ಶಿಕ್ಶಣ ವ್ಯವಸ್ತೆಗಳನ್ನು ಗಮನಿಸಿ ವಿಶ್ಲೇಶಣೆ ಮಾಡಲಾಗಿದೆ. ಇಲ್ಲೆಲ್ಲ ತಾಯ್ಮಾತಿನ ಶಿಕ್ಶಣದ ಕೊರತೆಯನ್ನು ಮಹತ್ವದ ಕಾರಣವಾಗಿ ಕಂಡುಕೊಳ್ಳಲಾಗಿದೆ.
ವಸಾಹತು ನಂತರದ ದಿನಗಳಲ್ಲಿ ವಸಾಹತುವಿನ ಪ್ರಬಾವದಿಂದ ಸಮಾಜದ ಎಲ್ಲ ಆಯಾಮಗಳಲ್ಲಿ ಹಳೆಯ ವಸಾಹತುಗಳು ಹೊರಬರಲು ಸಾದ್ಯವಾಗಲಿಲ್ಲ. ಹೆಚ್ಚೂ ಕಡಿಮೆ ಹೊರಗಿನವರ ಕಯ್ಯಲ್ಲಿದ್ದ ಆಡಳಿತವನ್ನು ಇನ್ನು ಮುಂದೆ ಒಳಗಿನವರು ನಡೆಸತೊಡಗಿದರು ಎನ್ನುವ ಸ್ತಿತಿ ಒದಗಿತು. ಆಡಳಿತವನ್ನೊಳಗೊಂಡು ಎಲ್ಲ ವಲಯಗಳಲ್ಲಿಯೂ ವಸಾಹತು ರಚನೆ ಮತ್ತು ತಾತ್ವಿಕತೆ ಮುಂದುವರೆಯಿತು. ಇದು ಶಿಕ್ಶಣ ರಂಗದಲ್ಲಿಯೂ ಕೂಡ ಮುಂದುವರೆಯಿತು. ಇದರಿಂದಾಗಿ ಹೆಚ್ಚಿನ ವಸಾಹತು ದೇಶಗಳು ವಸಾಹತುಗಳ ಬಾಶೆಯಲ್ಲಿ ಶಿಕ್ಶಣವನ್ನು ಮುಂದುವರೆಸಿದವು. ಆಪ್ರಿಕಾದ ಹೆಚ್ಚಾನುಹೆಚ್ಚು ದೇಶಗಳಲ್ಲಿ ನೂರಾರು ಬಿನ್ನವಾದ ಮತ್ತು ಲಕ್ಶ, ಕೋಟಿ ಸಂಕೆಯ ಮಾತುಗರು ಮಾತನಾಡುವ ಬಾಶೆಗಳು ಇವೆ. ಆದರೆ ಹಲವಾರು ಆಪ್ರಿಕಾದ ದೇಶಗಳಲ್ಲಿ ಇಂಗ್ಲೀಶ್, ಪ್ರೆಂಚ್, ತುಸು ಹಿಂದಿನ ಹೊರಗಿನ ಬಾಶೆಯಾದ ಅರಾಬಿಕ್ ಮೊದಲಾದವು ಇಡಿಯಾಗಿ ಶಿಕ್ಶಣವನ್ನು ಆವರಿಸಿಕೊಂಡಿದ್ದವು. ಆರ‍್ತಿಕ ಹಿಂದುಳಿಯುವಿಕೆಯ ಗಂಬೀರ ಸಮಸ್ಯೆಯಿಂದ ಹೊರಬರುವುದಕ್ಕೆ ಮಾಡಿಕೊಂಡ ಹಲವಾರು ಬದಲಾವಣೆಗಳಲ್ಲಿ ಪೆರಮಾತಿನ ಶಿಕ್ಶಣದಿಂದ ತಾಯ್ಮಾತಿನ ಶಿಕ್ಶಣಕ್ಕೆ ಬದಲಾದದ್ದು ಕೂಡ ಒಂದು. ಕುತೂಹಲದ ಅಂಕಿಸಂಕೆಗಳನ್ನು ಹಲವು ಆಪ್ರಿಕಾದ ದೇಶಗಳಿಂದ ನೋಡಬಹುದು. ಪೆರಮಾತಿನ ಶಿಕ್ಶಣ ವ್ಯವಸ್ತೆ ಇರುವ ಕಾಲ ಮತ್ತು ತಾಯ್ಮಾತಿನ ಶಿಕ್ಶಣಕ್ಕೆ ಮರಳಿದ ಕಾಲ ಇವುಗಳ ನಡುವೆ ಅಂಕಿಸಂಕಿಗಳನ್ನು ಇಟ್ಟುಕೊಂಡು ಹೋಲಿಸಿ ನೋಡಿದಾಗ ಮಹತ್ವದ ಬದಲಾವಣೆಗಳನ್ನು ಗಮನಿಸಲು ಸಾದ್ಯವಾಯಿತು. ಶಿಕ್ಶಣದಲ್ಲಿ ಪರಿಗಣಿಸುವಶ್ಟು ಸುದಾರಣೆ, ಶಿಕ್ಶಣದ ಗುರಿ ಮುಟ್ಟುವಲ್ಲಿ ಹೆಚ್ಚಿನ ಯಶಸ್ಸು ದೊರೆತವು. ಆರ‍್ತಿಕ ಅಬಿರುದ್ದಿಯನ್ನೂ ಈ ದೇಶದಲ್ಲಿ ಗಮನಿಸಲು ಸಾದ್ಯವಾಯಿತು. ಹೀಗೆ ತಾಯ್ಮಾತಿನ ಶಿಕ್ಶಣ ದೇಶದ ಒಟ್ಟು ಬೆಳವಣಿಗೆಗೆ ಹೆಚ್ಚು ಪೂರಕ ಎಂಬುದನ್ನು ಇಂತಾ ಸ್ತಿತಿಗಳಲ್ಲಿ ಕಾಣಬಹುದು. ಇಂತಾ ಹಲವು ಬೆಳವಣಿಗೆಗಳನ್ನು ವಿಶ್ವಸಂಸ್ತೆ ನಿರಂತರ ಅದ್ಯಯನ ಮಾಡುತ್ತಿದೆ ಮತ್ತು ಈ ಅದ್ಯಯನಗಳ ವರದಿಗಳನ್ನು ನಿರಂತರ ಪ್ರಕಟಿಸುತ್ತಿದೆ.
ಆದುನಿಕ ಕಾಲದಲ್ಲಿ ಮೊದಮೊದಲು ಯುರೋಪಿನಲ್ಲಿ ಆನಂತರ ಅಮೆರಿಕಾದಲ್ಲಿ ಬೆಳೆದ ಹಲವಾರು ಸಿದ್ದಾಂತಗಳು ತಮ್ಮ ಪರಿಸ್ತಿತಿಗೆ ಹೊಂದುವಂತಾ ಏಕಬಾಶಿಕ ಮತ್ತು ಏಕದರ‍್ಮಿಕ ಸ್ತಿತಿಯನ್ನು ಇಟ್ಟುಕೊಂಡು ಬಂದಂತವುಗಳು. ಆ ಸಿದ್ದಾಂತಗಳನ್ನು ಇನ್ನಿತರ ದೇಶಗಳನ್ನು ಅರ‍್ತ ಮಾಡಿಕೊಳ್ಳುವುದಕ್ಕೂ, ಇಡಿಯ ಜಗತ್ತನ್ನು ತಿಳಿಸುವುದಕ್ಕೂ ಸಾಮಾನ್ಯವಾಗಿ ಬಳಸಲಾಯಿತು. ವಸಾಹತು ಕಾಲದಲ್ಲಿ ಯುರೋಪನ್ನು, ಮುಕ್ಯವಾಗಿ ಇಂಗ್ಲೆಂಡನ್ನು ಮಾದರಿಯಾಗಿ ರೂಡಿಸಿಕೊಂಡ ಬಾರತ ಈ ಯುರೋಪು ಕೇಂದ್ರಿತ ಸಿದ್ದಾಂತಗಳನ್ನು ಆನಂತರ ಅಮೆರಿಕಾ ಕೇಂದ್ರಿತ ಸಿದ್ದಾಂತಗಳನ್ನು ವಿಚಾರವಿಲ್ಲದೆಯೆ ಒಪ್ಪಿಕೊಳ್ಳುವುದನ್ನೂ ರೂಡಿಸಿಕೊಂಡಿತು. ಹೀಗಾಗಿ ಬಹುಬಾಶಿಕತೆ ಪರಿಚಯವೆ ಇಲ್ಲದ ಪಶ್ಚಿಮದವರಿಗೆ ಸಹಜವಾಗಿ ಅದು ಬಾರವಾಗಿ ಕಂಡಿದ್ದಿರಬಹುದು. ಹಾಗಾಗಿ ಬಹುಬಾಶಿಕತೆಯನ್ನು ಬಾರವೆಂದು ಬಣ್ಣಿಸಿದರು. ಮುಂದುವರೆದು ಇದು ಆರ‍್ತಿಕ ಬೆಳವಣಿಗೆಗೆ ಎರವಾಗುತ್ತದೆ ಎಂದೂ ವಿವರಿಸಿದರು. ಈ ಅಬಿಪ್ರಾಯಗಳು ಬಾರತದ ಒಳಗೂ ಹರಿದಾಡಿದವು. ಯುರೋಪು ಮತ್ತು ಅಮೆರಿಕಾ ದೇಶಗಳನ್ನು ಏಕಬಾಶಿಕ ಎಂದು ಹೇಳಲಾಗುತ್ತಿದೆಯಾದರೂ ಇಂದು ಅವಾವೂ ಏಕಬಾಶಿಕ ದೇಶಗಳು ಅಲ್ಲ. ಇಂದು ಹೆಚ್ಚಿನ ದೇಶಗಳು ಬಹುಬಾಶಿಕ ದೇಶಗಳಾಗಿ ಬೆಳೆದಿವೆ, ಬೆಳೆಯುತ್ತಿವೆ.
ವಾಸ್ತವ ಬಿನ್ನವಾಗಿದೆ. ಬಹುಬಾಶಿಕತೆಯನ್ನು ಸಾವಿರಾರು ವರುಶಗಳಿಂದ ಅನುಬವಿಸುತ್ತಾ ಬದುಕಿರುವ ಬಾರತಕ್ಕೆ ಅದು ಹೇಗೆ ತಾನೆ ಬಾರವಾದೀತು. ವಾಸ್ತವದಲ್ಲಿ ಬಹುಬಾಶಿಕತೆಯೆ ಬಾರತದ ಸತ್ವ. ಈ ಬಾಶಿಕ ಬಹುತ್ವ ಸಮಾಜದ ಎಲ್ಲ ನೆಲೆಯಲ್ಲಿಯೂ ಬಹುತ್ವ ಇರುವುದಕ್ಕೆ ಕಾರಣವಾಗಿದೆ. ಹೀಗಾಗಿ ಬಹುಬಾಶಿಕತೆ ಬಾರತಕ್ಕೆ ವರವಾಗಿದೆಯೆ ಹೊರತು ಇನ್ನೊಂದು ಆಗಲಾರದು. ಬದುಕಿನ ಮತ್ತು ಸಮಾಜದ ಎಲ್ಲ ವಲಯಗಳಲ್ಲಿ ಬಹುತ್ವವೆ ಉಸಿರಾಡುತ್ತಿದೆ. ಹಾಗೆ ನೋಡಿದರೆ ಬಾರತದ ಆತ್ಮವೆ ಈ ಬಹುತ್ವವಾಗಿದೆ.
ಇಲ್ಲಿ ಆರ‍್ತಿಕ ಬೆಳವಣಿಗೆಗೆ ಬಹುಬಾಶಿಕತೆ ಬೇಕಾದಶ್ಟು ಪೂರಕವಾಗಿರಬಲ್ಲದು. ತಾಯ್ಮಾತಿನ ಶಿಕ್ಶಣದಿಂದ ಮಾನಸಿಕ ವಿಕಸನ ಮತ್ತು ಪ್ರತಿಬೆಯ ಬೆಳವಣಿಗೆ ಸಹಜವಾಗುತ್ತದೆ. ಈ ಎರಡೂ ನೆಲೆಯಲ್ಲಿ ಹೇಗೆ ತಾಯ್ಮಾತಿನ ಶಿಕ್ಶಣ ಆರ‍್ತಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು.
ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುವುದರಿಂದ ಹೆಚ್ಚು ಮಕ್ಕಳು ಸಹಜವಾಗಿ ಶಿಕ್ಶಣವನ್ನು ಪಡೆದು ಮುಂದುವರೆಯುತ್ತಾರೆ. ಶಾಲೆ ಬಿಡುವವರ ಸಂಕೆ ಕಡಿಮೆಯಾಗುತ್ತದೆ. ಕಂಟಪಾಟ ಮಾಡುವ, ನೆನಪಿಟ್ಟುಕೊಳ್ಳುವ ಪ್ರಕ್ರಿಯೆ ಕಡಿಮೆಯಾಗುತ್ತದೆ. ಕಂಟಪಾಟ ಮಾಡುವುದರಿಂದ ಪರಿಕ್ಶೆಯಲ್ಲಿ ಹೆಚ್ಚು ಅಂಕ ಪಡೆದುಕೊಳ್ಳುವುದಕ್ಕೆ ಸಾದ್ಯವಾದರೂ ವಿಶಯವನ್ನು ಅರಿತುಕೊಳ್ಳುವಲ್ಲಿ ಹೆಚ್ಚು ಸಮಸ್ಯೆ ಇರುತ್ತದೆ. ಇದರಿಂದ ಮಕ್ಕಳಲ್ಲಿ ಹೆಚ್ಚಿನ ಕ್ರಿಯಾತ್ಮಕತೆ ಬೆಳೆಯುವುದಿಲ್ಲ. ಇವೆಲ್ಲವೂ ಮಕ್ಕಳ ಪ್ರತಿಬಾ ವಿಕಾಸಕ್ಕೆ ಅವಕಾಶವನ್ನು ಕಡಿಮೆ ಮಾಡುತ್ತವೆ. ಹೀಗೆ ಮಕ್ಕಳಲ್ಲಿ ಇರುವ ಪ್ರತಿಬೆಗಳು ದೇಶಕ್ಕೆ ದಕ್ಕದೆ ಹೋಗುವುದು ತಾಯ್ಮಾತಿನ ಶಿಕ್ಶಣದ ಮೂಲಕ ಕಡಿಮೆಯಾಗುತ್ತದೆ. ಇಂತಾ ಮಕ್ಕಳು ಮುಂದೆ ವಿವಿದ ಸೇವಾವಲಯ, ಬೋದನಾ ವಲಯ, ಉತ್ಪಾದಕ ವಲಯ ಹೀಗೆ ಸಮಾಜದ ವಿವಿದ ಕಡೆಗಳಲ್ಲಿ ಕೆಲಸಕ್ಕೆ ತೊಡಗಿದಾಗ ಅವರು ಬೆಳೆಸಿಕೊಂಡಿರುವ ಕ್ರೀಯಾಶೀಲತೆ ಅವರ ಕೆಲಸಗಳಲ್ಲಿ ಹೆಚ್ಚು ಸಹಾಯಕವಾಗುತ್ತದೆ. ಇದರಿಂದ ಅವರು ತಮ್ಮ ಕೆಲಸಗಳಲ್ಲಿ ಹೆಚ್ಚು ಉತ್ಪಾದಕವಾಗಿ ತೊಡಗಿಕೊಳ್ಳಬಹುದು. ಇದರಿಂದ ಅಂತಿಮವಾಗಿ ದೇಶದ ಬೆಳವಣಿಗೆಗೆ ಕಾರಣವಾಗುತ್ತದೆ.
- ಬಸವರಾಜ ಕೋಡಗುಂಟಿ
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...
©2025 Book Brahma Private Limited.