Date: 02-01-2025
Location: ಬೆಂಗಳೂರು
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತಲ್ಲಣಗಳು ಆಸೆ ಕನಸುಗಳು ಭಗ್ನಗೊಂಡು ವಿರೂಪ ತಾಳಿರುವುದನ್ನು ಕಾಣುತ್ತವೆ. ಈ ಕಾಣಿಯ ಪರಿಸ್ಥಿತಿಗೆ ಕೌಟುಂಬಿಕ ವ್ಯವಸ್ಥೆಯಲ್ಲಿ ಉಂಟಾದ ಪದಃಪತನ, ಹಾಗೂ ಯೌವ್ವನದ ಬಯಕೆಗಳು ಇವೆಲ್ಲವೂ ಕೂಡ ಹೆಣ್ಣನ್ನು ಭಾಗಶಃ ಬೇರೊಂದು ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಆಯ್ದ ನಿರಂಜನ ಅವರ “ಕೊನೆಯ ಗಿರಾಕಿ" ಕಥೆಯ ಬಗ್ಗೆ ವಿಮರ್ಶಿಸಿದ್ದಾರೆ.
ಪ್ರಗತಿಶೀಲ ಸಾಹಿತ್ಯ ಸಂದರ್ಭದಲ್ಲಿ ಕಾದಂಬರಿಕಾರರು ಕಥೆಗಾರರು ಆದ ನಿರಂಜನ ಅವರ ಹೆಸರು ವಿಶೇಷವಾಗಿ ಕೇಳಿಬರುವಂತದ್ದು. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಳಕುಂದ ಎಂಬ ಚಿಕ್ಕ ಹಳ್ಳಿಯಲ್ಲಿ. ತಂದೆ ತಾಯಿ ಇಟ್ಟಿರುವ ಹೆಸರು “ಶಿವರಾಯ” ಚಿಕ್ಕಂದಿನಿಂದಲೇ ತಂದೆಯನ್ನು ಕಳೆದುಕೊಂಡು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಬೆಳೆಯಬೇಕಾದ ಪರಿಸ್ಥಿತಿ ಶಿವರಾಯರದು. ಬಾಲ್ಯದ ಸುಖ ಸಂತೋಷವನ್ನು ಸವಿಯಲಾರದ ಬದುಕನ್ನು ಕಷ್ಟದಿಂದಲೇ ಕಂಡುಂಡವರು. ಬದುಕೆಂದರೆ ಹಾಗೆ ಒಬ್ಬೊಬ್ಬರ ಬದುಕಿನ ತಿರುವು ಒಂದೊಂದು ರೀತಿಯಲ್ಲಿ ತನ್ನ ಗತಿಯನ್ನು ಪಥವನ್ನು ಆಕ್ರಮಿಸಿಕೊಂಡು ಸಾಗುತ್ತದೆ. ಹೈಸ್ಕೂಲು ವಿದ್ಯಾಭ್ಯಾಸದ ಸಂದರ್ಭದಲ್ಲಿ “ಕಿಶೋರ” ಎಂಬ ಕಾವ್ಯನಾಮದಲ್ಲಿ ಸುಮಾರು 15 ಕಥೆಗಳನ್ನು ಬರೆದು ಪ್ರಕಟಿಸಿದವರು. ವಿದ್ಯಾರ್ಥಿ ದೆಸೆಯಿಂದಲೇ ಪತ್ರಿಕೋದ್ಯಮದ ಆಸೆಯನ್ನು ಬೆಳೆಸಿಕೊಂಡ ಯುವಕ ಶಿವರಾಯರು ಕೆಲಸವನ್ನು ಹುಡುಕುತ್ತಾ ಮಂಗಳೂರಿನಿಂದ ಬೆಂಗಳೂರಿಗೆ ಬಂದ ಇವರ ಬದುಕು ಕಾಠಿಣ್ಯದ ಹಾದಿಯಾಗಿತ್ತು. ವೈದ್ಯೆ ಆದ ಅನುಪಮ ಅವರನ್ನು ಪ್ರೀತಿಸಿ ಮದುವೆ ಆದ ಇವರ ಬದುಕಿನ ಬಂಡಿಗೆ ಮಧ್ಯ ವಯಸ್ಸಿನಲ್ಲಿ ಬರ ಸಿಡಿಲು ಬಡಿದಂತೆ 1971 ರಲ್ಲಿ ತೀವ್ರ ಪಾರ್ಶ್ವವಾಯುಗೆ ತುತ್ತಾದರೂ ಸಹ ಬದುಕಿನ ಸಂಕಷ್ಟದಲ್ಲಿ ಅವರ ಎದೆಗಾರಿಕೆ ಧೈರ್ಯ ಹಠವಾದಿತನ ಅವರನ್ನು ಹಲವಾರು ಸಾಹಿತ್ಯ ಕೃತಿಗಳನ್ನು ಮತ್ತೆ ಬರಿಯುವಂತೆ ಪ್ರೇರೇಪಿಸಿದವು. ಈ ಹಂತದಲ್ಲಿಯೇ “ಮೃತ್ಯುಂಜಯ” ಎಂಬ ಅಪೂರ್ವವಾದ ಕಾದಂಬರಿ ಕೂಡ ರಚನೆಯಾಗಿದ್ದು ವಿಶೇಷವೇ.
ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ನಿರಂಜನ ಅವರು ಇದುವರೆಗೂ ಸುಮಾರು 88 ಕೃತಿಗಳನ್ನು ಪ್ರಕಟಿಸಿದ್ದಾರೆ ಕಥಾ ಸಂಗ್ರಹಗಳು-9 ಕಾದಂಬರಿಗಳು- 25, ನಾಟಕಗಳು 3, ಜೀವನ ಚರಿತ್ರೆ-1, ಅಂಕಣ ಬರಹ ಸಂಕಲನಗಳು- 7, ಹಾಗೂ ರಾಜಕೀಯ ಚರ್ಚೆ, ಭಾಷಾಂತರ ಕೃತಿಗಳು, ಜ್ಞಾನಗಂಗೋತ್ರಿ ಸಂಪುಟಗಳು, ವಿಶ್ವಕಥ ಕೋಶ ಸಂಪುಟಗಳು, ಹೀಗೆ ಇದರ ಜೊತೆಗೆ ಹಲವಾರು ಉಪನ್ಯಾಸಗಳು ಮೂರು ಸಾವಿರಕ್ಕೂ ಹೆಚ್ಚು ಪುಟಗಳುಳ್ಳ ಅಪ್ರಕಟಿತ ಬಿಡಿ ಬರಹಗಳು ಇರುವುದು ತಿಳಿದಾಗ ಇವರ ಮಹತ್ವಾಕಾಂಕ್ಷೆಯ ಚೈತನ್ಯ ಒಂದು ರೀತಿಯಲ್ಲಿ ಎಲ್ಲರಿಗೂ ಮಾದರಿ ಎನಿಸುತ್ತದೆ.
ಇವರ “ಕೊನೆಯ ಗಿರಾಕಿ” ಎಂಬ ಕಥೆ ಮನೋಜ್ಞ ಅರ್ಥವನ್ನು ಹಾಗೂ ಚಿಂತನೆಗೆ ಹಚ್ಚುವ ಕಥೆಯಾಗಿದೆ. ಈ ಕಥೆಯಲ್ಲಿ ‘ಕಾಣೆ’ ಎಂಬ ಮೂಗಿ ಮೊಂಡು ಕೈ ನ ಹುಡುಗನೊಂದಿಗೆ ರಾತ್ರೋರಾತ್ರಿ ಊರು ಬಿಟ್ಟು ಬಂದ ಆಕೆಗೆ ಆತಂಕ ಸಂಕಟ ನಿರಾಸೆ ಕಾಡುವುದು. ಒಂದೇ ಒಂದು ರಾತ್ರಿ ಮೊಂಡು ಕೈಯಿನ ಗರಿಬ ಆಕೆಯನ್ನು ಬಳಸಿ ಬರ ಸೆಳೆದಿದ್ದ. ಆದರೆ ಬೆಳಿಗ್ಗೆ ಎದ್ದು ನೋಡುವಾಗ ಜೊತೆಯಲ್ಲಿ ಮಲಗಿದ್ದ ಆತ ಇಲ್ಲ. ತನ್ನನ್ನು ಬಿಟ್ಟು ಓಡಿ ಹೋಗಿದ್ದಾನೆ ಎಂಬ ಸತ್ಯ ಅರಿವಿಗೆ ಬಂದಾಗ ಆಕೆ ಪರಿತಪಿಸುತ್ತಾಳೆ. ತಂದೆ ತಾಯಿಯಂದಿರಿಗೆ ಒಕ್ಕಲುತನದ ಒಂದಿಷ್ಟು ಜಮೀನು ಇದ್ದದ್ದು ಕೂಡ ಗೇಣಿ ಕೊಡದೆ ಇರುವುದರ ಪ್ರಯುಕ್ತ ಜಮೀನನ್ನು ಕಳೆದುಕೊಂಡು ಗುಳೆ ಹೊರಟು ಬದುಕು ಸಾಗಿಸುವಂತ ದೈನ್ಯ ಸ್ಥಿತಿ ಎದುರಾಗಿತ್ತು. ಇದೆಲ್ಲವನ್ನು ನೆನೆಸಿಕೊಂಡಾಗ ಮೂಗಿಯಾದ ಕಾಣಿಯ ಕಣ್ಣಲ್ಲಿ ನೀರು ಚಿನುಗಿತ್ತು. ಮಾತುಬಾರದ, ದಿಕ್ಕು ಕಾಣದ ಊರಿನಲ್ಲಿ ಹಸಿವನ್ನು ಇಂಗಿಸಿಕೊಳ್ಳಲು ಅವಳಿಗಿದ್ದಿದ್ದು ಒಂದೇ ಒಂದು ದಾರಿ. ತನ್ನ ದೇಹವನ್ನು ಮಾರಿಕೊಳ್ಳುವುದು. ಹೊಟ್ಟೆಗೆ ಅನ್ನ ಸಿಕ್ಕರೆ ಸಾಕು ಎನ್ನುವ ಸನ್ನಿವೇಶದಲ್ಲಿ ಅವಳನ್ನೇ ದಾಳವಾಗಿ ಇರಿಸಿಕೊಂಡು ತಲೆ ಹಿಡಿಕನೊಬ್ಬ ಆಕೆಯನ್ನು ಹಿಂಸಿಸಿ ಪುಡಿಗಾಸು ನೀಡುವುದು ಈ ಕಥೆಯಲ್ಲಿ ಬರುವ ಒಂದು ಪಾತ್ರವಾದರೆ,ಕಾಣಿಯನ್ನು ಪಾರ್ಕಿನ ಕತ್ತಲೆಯ ತಾಣ,ಗುಡಿಸಲಿನ ಕತ್ತಲಿನ ಜಾಗಗಳೆಲ್ಲ ಕಡೆ ಕೆಡವಿ ಭೋಗಿಸಿದವರೇ ಹೆಚ್ಚು. ಒಂದು ದಿನ ಆಶ್ರಯ ನೀಡಿ ಊಟ ಹಾಕಿದ ಬಿಕ್ಷುಕ ಸಹ ಈಕೆಯನ್ನು ಆಸೆಯ ಹಸಿವಿನಿಂದ ನೋಡುವನು. ತುತ್ತಾನ್ನಕ್ಕಾಗಿ ಯಾರ ಯಾರ ಬಳಿಯೋ ಮಲಗುವ ಸ್ಥಿತಿ.ಕೊನೆ ಕೊನೆ ಇವಳ ದೇಹ ಕೃಶವಾಗಿದ್ದನ್ನು ಕಂಡು ಇವಳ ಹತ್ತಿರ ಯಾರು ಬರದೆ ಇದ್ದಾಗ,, ಈಕೆಯೆ ಅವರ ಬಳಿ ಸುಳಿದಾಡುವ ಸನ್ನಿವೇಶವಂತು ನರಕ ಸದೃಶ್ಯ ಎನಿಸುವಷ್ಟು ಮರುಕು ತರಿಸುತ್ತದೆ.ಹಸಿವಿಗಾಗಿ ತನ್ನನ್ನೇ ತಾನು ನೀಗಿ ಕೊಂಡ ಕಾಣಿಗೆ ಕೊನೆಯ ಗಿರಾಕಿಯಾಗಿ ಹದ್ದು ಆಕಾಶದಲ್ಲಿ ಸುತ್ತಾಡುವ ಸನ್ನಿವೇಶದೊಂದಿಗೆ ಕಥೆ ಮುಕ್ತಾಯಗೊಳ್ಳುತ್ತದೆ.
ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತಲ್ಲಣಗಳು ಆಸೆ ಕನಸುಗಳು ಭಗ್ನಗೊಂಡು ವಿರೂಪ ತಾಳಿರುವುದನ್ನು ಕಾಣುತ್ತವೆ. ಈ ಕಾಣಿಯ ಪರಿಸ್ಥಿತಿಗೆ ಕೌಟುಂಬಿಕ ವ್ಯವಸ್ಥೆಯಲ್ಲಿ ಉಂಟಾದ ಪದಃಪತನ, ಹಾಗೂ ಯೌವ್ವನದ ಬಯಕೆಗಳು ಇವೆಲ್ಲವೂ ಕೂಡ ಹೆಣ್ಣನ್ನು ಭಾಗಶಃ ಬೇರೊಂದು ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ. ಆದರ ಜೊತೆಗೆ ಇಲ್ಲಿ ನಡೆದಿದ್ದು ಒಂದು ನಂಬಿಕೆಯ ಹರಣ. ಕಾಣಿ ಆ ಮೊಂಡು ಕೈ ಗರಿಬನನ್ನು ನಂಬಿ ಹೊರಟಿದ್ದಳು ಆ ನಂಬಿಕೆಯ ಕೊಲೆಯನ್ನು ಜೀರ್ಣಿಸಿಕೊಳ್ಳಲಾರದೆ ಇದ್ದ ಹಸಿವನ್ನು ನೀಗಿ ಕೊಳ್ಳಲಾರದೆ ತನ್ನ ಒಡೆತನದ ದೇಹವನ್ನು ಕಾಮುಕರಿಗೆ ಅರ್ಪಿಸುವುದು ಅನಿವಾರ್ಯವಾಗಿತ್ತು. ಇಂತಹ ಅನಿವಾರ್ಯತೆಯನ್ನು ತಂದೊಡ್ಡುವ ಈ ಜಗತ್ತು ಆಕೆಗೆ ನ್ಯಾಯವನ್ನು ನೀಡುತ್ತದೇಯೆ ಎಂಬ ಪ್ರಶ್ನೆ ಏಳುತ್ತದೆ. ನಿರಂಜನ ಅವರು ಕಟ್ಟಿಕೊಟ್ಟಂತಹ ಈ ಕಥೆಯು ಚರ್ಚೆಗೆ ತಲ್ಲಣಕೆ ಎಡೆ ಮಾಡಿಕೊಡುತ್ತದೆ.
“ಪ್ರಗತಿಶೀಲರಲ್ಲಿ ಒಬ್ಬರಾದ ನಿರಂಜನರು ಕೊನೆಯ ಗಿರಾಕಿ ಸಣ್ಣ ಕಥೆಯಲ್ಲಿ ಸಾಧಿಸಿದ್ದನ್ನು ಒಟ್ಟಿನಲ್ಲಿ ಪ್ರಗತಿಶೀಲ ಸಾಹಿತ್ಯ ಸಾಧಿಸಲಾರದೆ ಹೋಯಿತು”( ಹೊಸಗನ್ನಡ ಸಾಹಿತ್ಯ ಚರಿತ್ರೆ- ಪ್ರೊ. ಎಲ್.ಎಸ್ ಶೇಷಗಿರಿ ರಾವ್) ಅಷ್ಟರ ಮಟ್ಟಿಗೆ ಪ್ರಭಾವವನ್ನು, ತಂತ್ರವನ್ನು, ತಾರ್ಕಿಕವಾಗಿ ವಿವೇಚನೆಗೆ ಎಡೆ ಮಾಡುತ್ತದೆ. ಇಡೀ ಪ್ರಗತಿಶೀಲ ಕಾಲಘಟ್ಟದ ಬಹುದೊಡ್ಡ ಆಯಾಮವನ್ನು ಈ ಕತೆಗೆ ನೀಡಲಾಗಿದೆ. ಆದರೆ ಕಾಲಮಾನ ಬದಲಾಗಿರಬಹುದು. ಪರಿಸ್ಥಿತಿಯಲ್ಲಿ ಏನಾದರೂ ಬದಲಾವಣೆ ಬಂದಿರಬಹುದೇ ಎಂಬ ಪ್ರಶ್ನೆಗೆ ಉತ್ತರ ರೂಪದಲ್ಲಿ ಶೂನ್ಯ ದೊರಕುತ್ತದೆ.
“ಪ್ರಗತಿಶೀಲ ಚಳುವಳಿಯ ಸಂದರ್ಭದಲ್ಲಿ ಕಾದಂಬರಿಗಳಿಗೆ ನೀಡಿರುವ ಮಹತ್ವವನ್ನು ಸಣ್ಣ ಕಥೆಗಳಿಗೆ ನೀಡಿದಂತೆ ಕಾಣಲಾರೆವು. ಆದರೆ ಇದನ್ನು ಮೀರಿಯೂ ಕೂಡ ಚದುರಂಗ, ಕಟ್ಟಿಮನಿ,ನಿರಂಜನ, ಅಂಥವರು ಅತ್ಯುತ್ತಮ ಕಥೆಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುತ್ತಾರೆ. ಇಪ್ಪತ್ತನೆಯ ಶತಮಾನದ ಸಾಹಿತ್ಯ ಘಟ್ಟಗಳು). ಈ ಕಥೆಯನ್ನು ಆಳವಾಗಿ ವಿವೇಚಿಸಿದಾಗ ಕಾಣಿ ಎಡವಿದ್ದು ಎಲ್ಲಿ? ಎಕೆ? ಹೇಗೆ? ಎಂಬ ಪ್ರಶ್ನೆಗಳು ಬೃಹದಾಕಾರವಾಗಿ ನಿಲ್ಲಲಾರದೆ ಬಿದ್ದು ಹೋಗುತ್ತವೆ. ಕಾರಣ ಆಕೆಯ ಹಿನ್ನೆಲೆ. ಹಾಗಂತ ಆ ತರದ ಹಿನ್ನೆಲೆ ಇರುವ ಎಲ್ಲರೂ ಹೀಗೆ ಆಹುತಿ ಆಗುವರೇ ಎಂಬ ಪ್ರಶ್ನೆಗೂ ಇಲ್ಲ; ಹೌದು ಎಂಬ ಉತ್ತರಗಳು ಸಿಗುತ್ತವೆ. ಅವಳು ರಾತ್ರೋರಾತ್ರಿ ಆತನನ್ನು ನಂಬಿ ಬರುವಾಗ ಇದ್ದ ಧೈರ್ಯ ಆತ ಬಿಟ್ಟು ಹೋದ ಮೇಲೆ ಆಕೆಯಲ್ಲಿ ಇರಲಿಲ್ಲ. ಆಕೆಗೆ ಆದ ನಂಬಿಕೆ ದ್ರೋಹಕ್ಕೆ ಉಂಟಾದ ಫಲವೇನು? ಇದೆಲ್ಲದರ ನಡುವೆ ಕೇವಲ ನಾವು ಹೆಣ್ಣನ್ನು ಅಷ್ಟೇ ಪ್ರಶ್ನಿಸುತ್ತೇವೆ ದೂಷಿಸುತ್ತೇವೆ. ಏಕೆಂದರೆ ಹೆಣ್ಣು ಸದಾ ಪ್ರಶ್ನೆಗೆ ಆಳ್ವಿಕೆಗೆ ಒಳಪಟ್ಟವಳು ಎಂಬುದು ಪರಂಪರೆಯ ವಾದ.ಈ ಹಿನ್ನೆಲೆಯಿಂದ ಪ್ರಶ್ನೆಗೆ ಒಳಪಡುವಂತೆ ಮಾಡುವ ಹೆಣ್ಣಿನ ಆ ಪರಂಪರೆಯನ್ನು ಸೃಷ್ಟಿ ಮಾಡಿರುವ ನಾವು ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುತ್ತೇವೆ. ಪುರುಷ ಪ್ರಾಬಲ್ಯದ ಹಿನ್ನೆಲೆಯಲ್ಲಿ ಹೆಣ್ಣು ಸೇವೆಗೆ ಒಳಪಡುವವಳು ಭೋಗಕ್ಕೆ ಮಾತ್ರ ಸೀಮಿತ ಹಾಗೂ ನೋವು ಸಂಕಷ್ಟ ತಲ್ಲಣ ಇವೆಲ್ಲವೂ ಕೂಡ ಹೆಣ್ಣಿನ ಸ್ವತ್ತು ಎಂಬಂತೆ ಬಿಂಬಿಸುವ ಈ ಸಮಾಜದ ನಿರ್ಧಾರಗಳು, ನಿಯಮಗಳು, ಬಾಧ್ಯತೆಗಳು ಇವೆಲ್ಲವನ್ನು ಅಳವಡಿಸಿಕೊಂಡು ಬಂದಿರುವ ಈ ಪರಂಪರೆಯನ್ನು ಧಿಕ್ಕರಿಸುವ ದೂಷಿಸುವ ಪುರುಷ ಯಜಮಾನವ್ಯನ್ನು ಆರೋಪಿಸುವ ಮನೋಧೈರ್ಯವನ್ನು ಹೆಣ್ಣು ಪಡೆದುಕೊಳ್ಳುವುದು ಯಾವ ಸಂದರ್ಭದಲ್ಲಿ ಎಂಬ ಚಿಂತನೆ ಕಾಡುತ್ತದೆ.
ಇನ್ನೂ ಈ ಕಥೆಯನ್ನು ಸಮಕಾಲಿನ ಸಂದರ್ಭದಲ್ಲಿ ವಿವೇಚಿಸುವುದಾದರೆ ಪ್ರಗತಿಶೀಲ ಸಂದರ್ಭಕ್ಕೂ ಸಮಕಾಲಿನ ಸಂದರ್ಭಕ್ಕೂ ತೌಲನಿಕ ಅಧ್ಯಯನಕ್ಕೆ ಒಳಪಡಿಸಿದಾಗ ವ್ಯತ್ಯಾಸಗಳು ಏನೆಂಬುದರ ಅರಿವಾಗುತ್ತದೆ. ಅಂದು ಕಾಣಿಯಂತಹ ಮುಗ್ದ ಮಹಿಳೆಯರ ಹೆಣ ಬೀದಿ ಪಾಲಾಗುತ್ತಿತ್ತು. ಯಾವುದೋ ಪ್ರಾಣಿ ಪಕ್ಷಿಗಳಿಗೆ ಆಹಾರವಾಗಿರುತ್ತಿತ್ತು. ಆದರೆ ಇಂದಿನ ಆಧುನಿಕ ಯಂತ್ರ ತಂತ್ರಜ್ಞಾನದ ಯುಗದಲ್ಲಿ ಪ್ರೀತಿಯ ಅಮಲಿಗೆ ಆಮಿಷಕ್ಕೆ ಒಳಗಾಗಿ ಹೆಣ್ಣು ಕೊನೆಗೆ ತಾತ್ಸಾರಗೊಂಡು ಕೊಲೆಯಾಗಿ ದೇಹವು ತುಂಡು ತುಂಡಾಗಿ ಫ್ರಿಜ್ಜಿನ ಒಳಗೊ ಅಥವಾ ಮೋರಿ ಕೆಳಗೊ ಅಥವಾ ತುಂಬಿ ಹರಿವ ನೀರಿಗೊ,ಹಾಗೂ ಉರಿವ ಒಲೆಯೊಂದಿಗೆ ದಹನಗೊಳ್ಳುವ ಸ್ಥಿತಿ ಎದುರಾಗಿದೆ. ಆಶ್ರಿತ ಮಹಿಳೆ ಪ್ರೀತಿ ಎಂಬ ಹೆಸರಿನಲ್ಲಿ ಭೋಗ್ಯಕ್ಕೆ ಒಳಪಟ್ಟು ತದನಂತರದಲ್ಲಿ ತಿರಸ್ಕೃತಗೊಂಡು ನಿರಾಶ್ರಿತಳಾಗುವ ಹೀನಾಯ ಸನ್ನಿವೇಶ ಎದುರಿಸುತ್ತಿರುವ ಸ್ತ್ರೀಯರ ಪರಿಸ್ಥಿತಿ ಬದಲಾಗಿಲ್ಲ. ಕಾಲ ದೇಶ ಸ್ಥಳ ಬದಲಾಗಿರಬಹುದಷ್ಟೆ ಹೊರತು ಸನ್ನಿವೇಶಗಳು ಬೇರೊಂದು ರೂಪದಲ್ಲಿ ಬಲಿ ತೆಗೆದುಕೊಳ್ಳುತ್ತಿವೆ. ಕೇವಲ ಭೋಗಕಷ್ಟೇ ಸೀಮಿತವಾದ ಹೆಣ್ಣು ಸೌಂದರ್ಯವತಿ ಆಗಿರಬೇಕೆಂಬ ನಿಯಮಯೂ ಇಲ್ಲ. ಇಲ್ಲಿ ಕಾಣಿಯೇನು ಸ್ಪರದ್ರೂಪಿ ಚಲುವೆಯೇನಲ್ಲ. ಆದರೆ ಆಸೆ ಕನಸು ಬಯಕೆಗಳನ್ನು ಹೊತ್ತಾ ಹೆಣ್ಣಷ್ಟೇ. ಆಕೆಯ ಆಸೆ ಕನಸುಗಳು ಈ ಸಮಾಜದ ಮಾಯಾಜಾಲದೊಳಗೆ ಅವಳನ್ನು ನುಂಗಿಬಿಡುವುದಕ್ಕೆ ಕಾರಣವಾಗುತ್ತವೆ. ಇಂತಹ ಕಾರಣಗಳು ಈ ಸಮಾಜದ ಇನ್ನೊಂದು ಮುಖದ ಕ್ರೂರ ನೋಟವಷ್ಟೆ.
“ಕೊನೆಯ ಗಿರಾಕಿ” ಕಥೆಯ ಕಥಾತಂತ್ರದ ವಿಚಾರಕ್ಕೆ ಬಂದಾಗ ಪ್ರಗತಿಶೀಲ ಸಂದರ್ಭಕ್ಕೇ ತಂತ್ರಯೋಜನೆ ಹೊಸತನದಿಂದ ಕೂಡಿದೆ. ಈ ಕೊನೆ ಗಿರಾಕಿ ಕತೆಗೆ ಒಂದು ಚಾರಿತ್ರಿಕ ನೋಟವು ಇದೆ. ಅಲ್ಲಿಯ ಪಾರ್ಕ್ಗಳು, ಸರ್ಕಲ್ಲು, ಗುಡಿಸಲು, ಅಲ್ಲಿ ಓಡಾಡುವ ಹತ್ತಾರು ಜನರು ಹಾದು ಹೋಗುವ ಸನ್ನಿವೇಶಗಳು ಎಲ್ಲವೂ ಕೂಡ ಆ ಸಂದರ್ಭದ ಪರಿಸರವನ್ನು ಅಲ್ಲಿಯ ಜೀವಂತಿಕೆಯನ್ನು ನಮಗೆ ತೋರಿಸಿಕೊಡುತ್ತದೆ. ಒಂದು ದಿನ ಪರದೇಸಿಯಾಗಿ ಬಿದ್ದ ಕಾಣಿ ದೇಹದತ್ತ ನೋಡುವವರೇ ಇಲ್ಲ.
“ಕಾಣಿಯ ದೇಹದ ಮೇಲೆ ಎತ್ತರದಲ್ಲಿ ಗಿಡುಗವೊಂದು ಸುತ್ತು ಸುತ್ತು ಬರುತ್ತಿತ್ತು. ಅದನ್ನೆ ನೋಡುತ್ತಿದ್ದ ಹಾಗೆ ಕಣ್ಣರಳಿಸಿ ಕಾಣಿ ಮಲಗಿದ್ದಳು”.ಮನುಷ್ಯರು ಅಂದು ಅವಳ ಸುತ್ತ ಸುತ್ತು ಬಂದು ಮುಕ್ಕಿದಂತೆ ಇಂದು ಗಿಡುಗ ಸಹ ಆಕೆಯನ್ನು ಮುಕ್ಕಲು ಹವಣಿಸುವ ಪ್ರತಿಮೆಯನ್ನು ಕತೆಗಾರರು ಮನೋಜ್ಞವಾಗಿ ನಿರೂಪಿಸಿದ್ದಾರೆ.
ಆಕೆ ಕೊನೆ ಕೊನೆಗೆ ತನ್ನ ಹಸಿವನ್ನು ನೀಗಿಕೊಳ್ಳಲು ಗಿರಾಕಿಗಳು ಬರದಿದ್ದ ಸಮಯದಲ್ಲಿ ಅವಳೇ ಗಿರಾಕಿಗಳ ಹತ್ತಿರ ಹೋದಾಗಲೂ ಕೂಡ ಇವಳ ಕಡೆ ತಿರುಗಿ ನೋಡುವವರು ಇರುತ್ತಿರಲಿಲ್ಲ. ಈಗ ಹೆಣ ದುರ್ಗಂಧ ಬರುತ್ತಿದೆ. ಆಗ ಸರಿಯಾದ ಬಟ್ಟೆ ಸ್ನಾನವಿರದೆ ನೋವಿಂದ ಹಸಿವಿಂದ ಎಲ್ಲರ ಬಳಿ ತೆರಳಿದಾಗಲೂ ಆಕೆಗೆ ಯಮ ಯಾತನೆ ನೀಡಿದ ಈ ಸಮಾಜಕ್ಕೆ ಕರುಣೆ ಇಲ್ಲದೆ ಹೋಯಿತಲ್ಲ. ಈ ಸಮಾಜ ಇಲ್ಲಿಯ ಪರಿಸರ ಚಿತ್ರಣ ಎಲ್ಲವೂ ಕೂಡ ದುರಂತ ಚಿತ್ರಣವನ್ನು ತಂದುಕೊಡುತ್ತದೆ. ದಬ್ಬಾಳಿಕೆಗೆ ಒಳಪಟ್ಟು ನೀಗಿಕೊಂಡದ್ದು ನೋವು ತಿಂದದ್ದು ಓಡಿಬಂದದ್ದು ಎಲ್ಲವೂ ಆಕೆಯ ಅಪಕ್ವ ಚಿಂತನೆಯ ತಿಳಿವು, ಕನಸು ಆಸೆಯಾದರೆ, ಮತ್ತು ಪೋಷಕರ ಅಸಹಾಯಕತೆ ಒಂದೆಡೆಯಾಗಿ ನಿಂತರೇ, ಸಮಾಜದ ಶೋಷಕತೆ ಇನ್ನೊಂದು ಬಹು ದೊಡ್ಡ ಮಗ್ಗುಲಾಗಿ ಆಕೆಯನ್ನು ಬಲಿ ತೆಗೆದುಕೊಳ್ಳುತ್ತದೆ. ಕೊನೆಯದಾಗಿ ಬರುವ ಗಿಡುಗ ಕೂಡ ಒಂದು ಶಕ್ತಿಶಾಲಿಯಾದ ಪ್ರತಿಮಾ ರೂಪಕವಾಗಿ ಕಾಣುತ್ತದೆ. ಮನುಷ್ಯತ್ವ ಮಾರಿಕೊಂಡ, ಪುರುಷ ಯಾಜಮಾನ್ಯದ ನಿಲುವು, ಈ ಸಮಾಜದ ನಡುವೆ ಆಕೆಯ ಬದುಕನ್ನು ನೀರಿನ ಸೆಳವಿಗೆ ಬಿಟ್ಟ ಬಾಲೆಯೆಂಬಂತೆ ಆಯಿತು.
ಹಸಿವಿಗೆ ನಾಯಿ ಅಡ್ಡಾಡುವಂತೆ ಆಕೆ ಕೂಡ ಅಲ್ಲಿಂದಿಲ್ಲಿಗೆ ಅಡ್ಡಾಡುತ್ತಾ ಮೂಗಳಾಗಿ ಬಾಯಿ ಕೈ ಅಡಿಸುತ್ತಾ ರೋಧಿಸುವ ಆಕೆಯ ಸ್ಥಿತಿ ನಾಯಿಗಿಂತ ಕಡೆಯಾದ ಸನ್ನಿವೇಶವನ್ನು ಪ್ರತಿನಿಧಿಸುತ್ತದೆ. ಅನಾದಿಕಾಲದ ನಮ್ಮ ಪರಂಪರೆ ಯಾವಾಗಲೂ ಹೆಣ್ಣಿಗೆ ಶಿಕ್ಷೆಯನ್ನು ಅಂತಿಮವಾಗಿ ನೀಡುತ್ತದೆ. ಆಕೆಯದು ತಪ್ಪಿರಲಿ ಸರಿ ಇರಲಿ ಶಿಕ್ಷೆ ಮಾತ್ರ ಹೆಣ್ಣಿಗೆ. “ಅವನಿಗೊಂತು ಬುದ್ಧಿ ಇರಲಿಲ್ಲ; ಆದರೆ ಇವಳ ಬುದ್ಧಿಗೆ ಏನಾಗಿತ್ತು”? ಎಂಬ ಹಾರಿಕೆಯ ಮಾತುಗಳು ಈ ಸಮಾಜದಲ್ಲಿ ಇಂದಿಗೂ ಕೇಳಿ ಬರುತ್ತವೆ. ಮೊಂಡು ಕೈ ಹುಡುಗನಿಗೆ ಕರೆದುಕೊಂಡು ಬರುವಾಗ ಇದ್ದ ವಿವೇಚನೆ, ಆಕೆಯನ್ನು ಬಿಡುವಾಗ ಆತನಿಗೆ ಇರಲಿಲ್ಲ.
ಆತನಿಗೆ ಬೇಕಾಗಿದ್ದು ಕೇವಲ ಆಕೆಯ ದೇಹವಷ್ಡೆ, ಅವಳ ಪ್ರೀತಿಯಲ್ಲ. ಆದರೆ ಆತನ ತಪ್ಪಿಗೆ ಆತ ಯಾವ ಶಿಕ್ಷೆಯನ್ನು ಅನುಭವಿಸಲಿಲ್ಲ. ಕಾರಣ ಆತ ಪುರುಷ ಎಂಬ ಹಣೆಪಟ್ಟಿಕಟ್ಟಿಕೊಂಡು ಬೀಗುವಾಗ ಪ್ರಾಬಲ್ಯಕ್ಕೆ ನೂರಾರು ಕೈ ಗಳು ಬಲ ನೀಡುತ್ತವೆ. ಈ ಸಮಾಜ ಇಂತಹ ತಪ್ಪನ್ನು ಎಸೆಗಿದರು ಕೂಡ ಅದನ್ನು ಈ ಪರಂಪರೆ ಒಪ್ಪಿಕೊಳ್ಳುತ್ತದೆ. ಗಂಡಾಳ್ವಿಕೆಯ ಹಿನ್ನೆಲೆಯಲ್ಲಿ ಯಜಮಾನ್ಯವನ್ನು ಪೋಷಿಸುತ್ತಲೇ ಬಂದಿದೆ. ಆ ಪೋಷಣೆಯಲ್ಲಿ ಹೆಣ್ಣು ಗುಲಾಮಳಾಗಿ ಸೇವಕಳಾಗಿ ಭೋಗಕಷ್ಟೇ ಸೀಮಿತವಾಗಿ ನೆಲೆಗೊಳ್ಳುವುದು ಹೊಸತೇನಲ್ಲ. ಚರಿತ್ರೆಯ ಪುಟಗಳನ್ನು ಮತ್ತೆ ಮತ್ತೆ ತೆರೆದಾಗ ಕಾಣುವುದು ಮಹಿಳೆಯ ಆರ್ತನಾದವೆ ಹೊರತು ಬೇರೆನಲ್ಲ. ಪೌರುಷ್ಯದ ದಬ್ಬಾಳಿಕೆಗೆ ಹೆಣ್ಣು ನಗುತ್ತಲೇ ಬಂದಿರುವುದು ಹಾಗೂ ಪ್ರೀತಿಯ ಹೆಸರಿನಲ್ಲಿ ಎಷ್ಟೋ ಮುಗ್ಧ ಮನಸ್ಸುಗಳು ಪ್ರಾಣತ್ಯಾಗವನ್ನು ಮಾಡಿರುವುದು ಹೊಸತೇನಲ್ಲ.
ಈ ಕತೆಯಲ್ಲಿ ಸನ್ನಿವೇಶಗಳು ಪರಿಸರ ಚಿತ್ರಣಗಳು ಕಣ್ಣಿಗೆ ಕಟ್ಟುವಂತೆ ಕಾಣುತ್ತವೆ. ಈ ಕಥೆ ತೀರ ಸರಳ ಹೂರಣವೇ ಆದರೂ ಭಾವ ತೀವ್ರತೆಯ ಅಂಶದಲ್ಲಿ ಕಲೆಗಾರಿಕೆ ಹೆಚ್ಚಿದಂತೆ ಮನಸ್ಸಿಗೆ ತೀರ ತೀವ್ರವಾಗಿ ಕಾಡುತ್ತಲೇ ಸಾಗುತ್ತದೆ. ನಮ್ಮ ಸಮಾಜದ ಜನರನ್ನು ಈ ಕತೆ ವಿಡಂಬಿಸುತ್ತದೆ. ಈ ಪುರುಷ ಜಗತ್ತು ಪ್ರತಿ ಹಂತದಲ್ಲೂ ಕೂಡ ಆಕೆಯ ದೇಹದ ಮೇಲೆ ಕಾಮಾಲೆ ಕಣ್ಣನ್ನು ಇರಿಸುತ್ತದೇಯೊ ಹೊರತು ಮಾನವೀಯ ಮೌಲ್ಯದ ಕಣ್ಣನ್ನು, ಹೃದಯವನ್ನು ತೆರೆದು ನೋಡುವುದಿಲ್ಲ. ನಿಕೃಷ್ಟ ಸಮಾಜವನ್ನು ಕತೆಗಾರರು ತೆರೆದಿಡುತ್ತಾರೆ. ಶಕ್ತಿಶಾಲಿಯಾದ ಗಿಡುಗದ ಪ್ರತಿಮೆಯ ಮೂಲಕ ಸಮಾಜದ ಅನಾಗರಿಕ ವ್ಯವಸ್ಥೆಯ ಚಿತ್ರಣವು ನಮಗೆ ತೋರುತ್ತಾರೆ. ಹೀನಾಯ ಜನ್ಮದ ಸ್ಥಿತಿಯನ್ನು ಕಾಣಿಯ ಜೀವಗಾತೆಗೆ ಕವಿ ಹೋಲಿಸಿದ್ದಾರೆ. ಹಿಂದಿನಿಂದಲೂ ಇಂತಹ ಬರ್ಬರ ಘಟನೆಗಳು ಜರಗುವುದರ ಹಿನ್ನೆಲೆ ಪುರುಷ. ನಂಬಿ ಬಂದವರನ್ನು ಕೈಹಿಡಿದು ನಡೆಸಬೇಕೇ ವಿನಃ ಅರ್ಧದಾರಿಯಲ್ಲಿ ಕೈ ಕೊಟ್ಟು ಹೋಗುವ ಪುರುಷನ ಯಜಮಾನ್ಯತೆ ಮತ್ತೆ ಮತ್ತೆ ಅನುರಣಿಸುತ್ತದೆ. ಯಾಕೆ ಇಂತಹ ಯಜಮಾನ್ಯತನವನ್ನು ಪೋಷಿಸಬೇಕು ಸ್ತ್ರೀಕುಲ?. ಹೆಣ್ಣು ಕೇವಲ ಭೋಗಕ್ಕೆ ಸೀಮಿತವಾದರೆ ತಾಯಿ ತಂಗಿ ಈ ಎಲ್ಲ ಸಂಬಂಧಗಳಿಗೆ ಅರ್ಥವಾದರೂ ಏನು? ಎಂಬ ಪ್ರಶ್ನೆ ಬೃಹದಾಕಾರವಾಗಿ ಎದ್ದು ನಿಲ್ಲುತ್ತದೆ.
- ವಾಣಿ ಭಂಡಾರಿ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ್ತಿಕ ಪ್ರಗತಿಯನ್ನು ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...
©2025 Book Brahma Private Limited.