ಐದು ಕೃಷಿ ಸಂಬಂಧಿ ಪುಸ್ತಕಗಳು

Date: 20-09-2022

Location: ಬೆಂಗಳೂರು


ರೈತಜನ ಬಳಕೆಗೆ ಅನುಕೂಲವಾಗಬಲ್ಲ ರೀತಿಯಲ್ಲಿ ಕೃಷಿ ಸಂಬಂಧಿ ಪುಸ್ತಕಗಳು ಪ್ರಕಟವಾಗುವುದು ಕಡಿಮೆ ಎನ್ನುತ್ತಾರೆ ಲೇಖಕ ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ನೀರು ನೆರಳು ಅಂಕಣದಲ್ಲಿ ರೈತರಿಗೆ ಉಪಯುಕ್ತವಾಗಬಲ್ಲ ಬಗೆಯಲ್ಲಿರುವ ಐದು ಪುಸ್ತಕಗಳ ಬಗ್ಗೆ ಬರೆದಿದ್ದಾರೆ.

ಕೃಷಿ ಸಂಬಂಧಿ ಪುಸ್ತಕಗಳು ನಮ್ಮಲ್ಲಿ ಪ್ರಕಟ ಆಗುವುದೆ ಅಪುರೂಪ. ಪ್ರಕಟವಾದರೂ ಅವು ತಾಂತ್ರಿಕವಾಗಿ, ತಾತ್ವಿಕವಾಗಿ ಕೃಷಿ ವಿಜ್ಞಾನದ ಹಿನ್ನೆಲೆಯಲ್ಲಿ ಪ್ರಕಟ ಆಗುತ್ತವೆ. ಹಾಗಾಗಿ ಅವು ರೈತಜನ ಬಳಕೆಯಿಂದ ದೂರವೆ ಉಳಿದುಬಿಡುವ ಸಾಧ್ಯತೆ ಹೆಚ್ಚು. 2021ರಲ್ಲಿ ಪ್ರಕಟವಾದ ಐದು ಆಯ್ದ ಕೃಷಿ ಪುಸ್ತಕಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡಲಾಗಿದೆ. ಪುಸ್ತಕಗಳನ್ನು ವಿಮರ್ಶೆ ಮಾಡುವುದು, ಅಲ್ಲಿನ ತಾಂತ್ರಿಕ ವಿವರಗಳ ವ್ಯಾಲಿಡಿಟಿ ಪರಿಶೀಲಿಸುವುದು ಇಲ್ಲಿನ ಬರಹದ ಉದ್ದೇಶವಲ್ಲ.

ಅನ್ನದ ಮರ:
ಕೃಷಿ ಕಾರ್ಯ, ರೈತಸಂಪರ್ಕ ಕಾರ್ಯಗಳು, ಬೀಜ ಪ್ರಸರಣ, ಕೃಷಿ ಮಾರುಕಟ್ಟೆ ವಿಸ್ತರಣೆ, ಕೃಷಿಸಂಬಂಧಿ ಆಂದೋಲನಗಳು ಮತ್ತು ಕೃಷಿ ಕುರಿತ ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕೆಲವೆ ಜನರಲ್ಲಿ ನಾ. ಕಾರಂತ ಪೆರಾಜೆ ಕೂಡ ಒಬ್ಬರು. ಇವರು ತಮ್ಮ ಒಡನಾಟ ಮತ್ತು ಸ್ವಾನುಭವಗಳನ್ನೆ ಆಧರಿಸಿ ಹಲಸಿನ ಕೃಷಿ ಬಗ್ಗೆ ಅನ್ನದ ಮರ ಎಂಬ ಒಂದು ಸುಂದರ ಹೊತ್ತಿಗೆ ಸಿದ್ಧಪಡಿಸಿದ್ದಾರೆ. ಹಲಸಿನ ಹಬ್ಬ, ಹಲಸಿನ ಮೇಳ, ಕಸಿ ವಿಧಾನ, ಹಲಸು ಬೆಳೆಯುವ ಕ್ರಮ, ವಿವಿಧ ಬಗೆಯ ಹಲಸು ಸಂಬಂಧಿ ತಿನಿಸು ತಯಾರಿ ವಿವರಗಳು, ಅದರ ಮಾರುಕಟ್ಟೆ ಸಾಧ್ಯತೆಗಳು, ತೋಟ ಮಾಡುವ ಸಾಧ್ಯತೆಗಳು, ಕೀಟ ಮತ್ತು ರೋಗ ನಿಯಂತ್ರಣ ಕ್ರಮಗಳು ಹೀಗೆ ಹಲಸು ಸಂಬಂಧಿಯಾದ ಹಲವು ವಿವರಗಳು ಈ ಪುಸ್ತಕದಲ್ಲಿವೆ.

೨೦೧೦ರಿಂದ ಈಚೆಗೆ ಕರ್ನಾಟಕದಲ್ಲಿ ಸುಮಾರು ಎರಡು ಸಾವಿರ ಹೆಕ್ಟೇರಿನಲ್ಲಿ ಹಲಸಿನ ತೋಟಗಳನ್ನು ಬೆಳೆಯಲಾಗಿದೆ. ಹಲಸು ಬೆಳೆಯುವುದನ್ನು ಕೃಷಿ ಆಂಧೋಲನದ ಒಂದು ಭಾಗವಾಗಿ, ಒಂದು ಪ್ರತ್ಯೇಕ ಆಂಧೋಲನವನ್ನಾಗಿ ರೂಪಿಸಲಾಗಿದೆ. ಹಲಸು ಆಧಾರಿತ ಉತ್ಪನ್ನಗಳ ಬ್ರಾಂಡಿಂಗ್‌ ಕೆಲಸ ಮಾಡಲಾಗಿದೆ. ಇದೆ ಹಿನ್ನೆಲೆಯಲ್ಲಿ ಇಲ್ಲಿ ಹಲವು ಕಿರು ಉದ್ಯಮಗಳು, ನವೋದ್ಯಮಗಳು ಆರಂಭವಾಗಿವೆ. ಇವೆಲ್ಲ ವಿವರಗಳನ್ನೂ ಒಳಗೊಂಡಂತೆ ಒಟ್ಟು ೨೩ ಅಧ್ಯಾಯಗಳಲ್ಲಿ ಇಲ್ಲಿ ಹಲಸು ಹೇಗೆ ನಂಬಿದರೆ ಕೈಬಿಡದೆ ಅನ್ನ ನೀಡಬಲ್ಲುದು; ಸಿರಿಯನ್ನೂ ತಂದುಕೊಡಬಲ್ಲುದು ಎಂದು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

ಹಲಸನ್ನು ಹಲಸಿನ ಅಭಿಮಾನವನ್ನು ಮೈಮೇಲೆ ಆವಾಹಿಸಿಕೊಂಡಂತೆ ಪೆರಾಜೆಯವರು ಇಲ್ಲಿ ಬರೆದಿದ್ದಾರೆ. ಒಂದು ದಶಕಕ್ಕು ಹೆಚ್ಚಿನ ಕಾಲದ ಹಲಸು ಸಂಬಂಧಿ ಒಡನಾಟದ ಅನುಭವಗಳನ್ನು ಪೆರಾಜೆ ಅವರು ಆಕರ್ಷಕವಾಗಿ ಇಲ್ಲಿ ದಾಖಲಿಸಿದ್ದಾರೆ. ಹಾಗಾಗಿ ಇದೊಂದು ಹಲಸಿನ ಕುರಿತ ಭವಿಷ್ಯವಾಣಿ ಅಲ್ಲ; ಆದುದರ ಚಾರಿತ್ರಿಕ ದಾಖಲೀಕರಣ. ಅತಿಯಾದ ತಾಂತ್ರಿಕ ವಿವರಗಳಿಲ್ಲದ, ವೈಜ್ಞಾನಿಕ ಹೊರೆಗಳಿಲ್ಲದ ಇಲ್ಲಿನ ಸರಳ, ನೇರ ಬರವಣಿಗೆ ಎಲ್ಲರಿಗು ಆಪ್ತ ಎನ್ನಿಸುತ್ತದೆ.

ಹಲಸಿನ ಉದ್ಯಮವನ್ನೆ ಆರಂಭ ಮಾಡುವ ಹಲವು ಸಾಧ್ಯತೆಗಳನ್ನೂ ಇಲ್ಲಿ ಚರ್ಚಿಸಲಾಗಿದೆ. ವಿವಿಧ ಪ್ರದೇಶದಲ್ಲಿ ಇರುವ ಉದ್ಯಮಗಳು, ಮಾರಾಟಗಾರರು, ರೈತರು ಮೊದಲಾದವರ ಫೋನ್‌ ನಂಬರುಗಳನ್ನೂ ಅಲ್ಲಲ್ಲಿ ನೀಡಲಾಗಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಾಸಂಗಿಕವಾಗಿ ಬರೆದ ಹಲವು ಲೇಖನಗಳನ್ನು ಇಲ್ಲಿ ಸಂಕಲಿಸಿ ನೀಡಲಾಗಿದೆ. ಹಾಗಾಗಿ ಇಲ್ಲಿನ ಬರಹಗಳಿಗೆ ಅವುಗಳದ್ದೆ ಆದ ಸಾಂದರ್ಬಿಕತೆ ಇದೆ. ಹಾಗೆಯೆ ಅಲ್ಲಲ್ಲಿ ವಿಚಾರಗಳ ಪುನಾರಾವರ್ತನೆ ಕೂಡ ಇದೆ.

ಹಲಸು: ಭವಿಷ್ಯದ ಆರ್ಥಿಕ ಹಣ್ಣಿನ ಬೆಳೆ
ಹಲಸಿನ ಬಗ್ಗೆ ಅಧ್ಯಯನ, ಸಂಶೋಧನೆ ನಡೆಸಿ ಬರೆದಿರುವ ೦೮ ಅಧ್ಯಾಯಗಳ ಕಿರು ಹೊತ್ತಿಗೆ ಇದು. ಬೆಂಗಳೂರು ಕೃಷಿ ವಿವಿಯ ನಾಲ್ಕು ಮಂದಿ ಪ್ರಾಧ್ಯಾಪಕರಾದ ಡಾ. ಶ್ಯಾಮಲಮ್ಮ ಎಸ್.‌, ಡಾ. ಕಲ್ಪನಾ ಬಿ., ಡಾ. ಮುನಿಶಾಮಣ್ಣ ಮತ್ತು ಡಾ. ಪಳನಿಮುತ್ತು ಇವರು ಇದನ್ನು ಬರೆದಿದ್ದಾರೆ. ಆದರೆ ಯಾರು ಯಾವ ಅಧ್ಯಾಯಗಳನ್ನು ಬರೆದಿದ್ದಾರೆ ಎಂಬ ವಿವರಗಳು ಇಲ್ಲಿಲ್ಲ.

ಹಲಸಿನ ಕುಟುಂಬ ವಿವರ, ಅದರ ಕಸಿ ವಿಧಾನಗಳು, ಹಲವು ರೀತಿಯ ಉತ್ಪಾದನಾ ವಿಧಾನಗಳು, ಬೇಸಾಯ ಕ್ರಮಗಳು, ರೋಗ ಮತ್ತು ಕೀಟ ನಿಯಂತ್ರಣ ಕ್ರಮಗಳು, ಹಲಸಿನ ವಿವಿಧ ಉತ್ಪನ್ನಗಳ ವಿವರ ಹಾಗೂ ಭಾರತದಲ್ಲಿನ ಹಲಸು ಸಂಬಂಧಿ ಮಾರಾಟ ವ್ಯವಸ್ಥಗಳ ಬಗ್ಗೆ ಇಲ್ಲಿ ಸಂಕ್ಷಿಪ್ರತವಾಗಿ ನಿರೂಪಿಸಲಾಗಿದೆ. ಇಲ್ಲಿನ ಕೆಲವು ವಿವರಗಳು ತಾಂತ್ರಿಕವಾಗಿವೆ. ಇಲ್ಲಿನ ಎಲ್ಲ ಬರಹಗಳೂ ಕೃಷಿ ವೈಜ್ಞಾನಿಕ ಹಿನ್ನೆಲೆಯ ಬರವಣಿಗೆಗಳು. ಕನ್ನಡದ ಅಭ್ಯಾಸಿಗಳಿಗೆ ಇದೊಂದು ಆಕರ ಗ್ರಂಥ ಆಗಬಲ್ಲುದು.

ವಿವಿಧ ತಳಿಗಳ ಹಣ್ಣು, ಕಾಯಿ, ಮರಗಳು, ತೊಳೆ, ಬೀಜಗಳ ಬಣ್ಣದ ಚಿತ್ರಗಳನ್ನು ಪುಸ್ತಕದಲ್ಲಿ ನೀಡಲಾಗಿದೆ. ಹಾಗಾಗಿ ಈ ಚಿತ್ರಗಳು ಪುಸ್ತಕದ ಅಂದ ಮತ್ತು ಮೌಲ್ಯವನ್ನು ಹೆಚ್ಚಿಸಿವೆ. ಹಲಸಿನ ಬಗ್ಗೆ ಅಷ್ಟಾಗಿ ಸ್ವಾನುಭವ ಇಲ್ಲದವರಿಗು ಇವು ಈ ಬಗ್ಗೆ ಆಮೂಲಾಗ್ರವಾಗಿ ವಿಚಾರ ತಿಳಿಸಬಲ್ಲವು.

ಕಾರಂತ ಪೆರಾಜೆಯವರ ಅನ್ನದ ಮರ ಕರ್ನಾಟಕದ ಮತ್ತು ವಿ‍ಶ್ವದ ವಿವಿಧ ಪ್ರದೇಶಗಳ ವಿವಿಧ ಬಗೆಯ ತಳಿಗಳ ಬಗ್ಗೆ, ಆ ಮರಗಳನ್ನು ಬೆಳೆಯುವ ಬಗ್ಗೆ, ಉತ್ಪಾದಿತವಾದ ಹಣ್ಣಿನ ಮಾರಾಟದ ಬಗ್ಗೆ (ವಿವಿಧ ಬಗೆಯ ಉದ್ಯಮಗಳ ಬಗ್ಗೆ) ನಮ್ಮಲ್ಲಿ ಇರುವ ಆಚಾರಗಳ ಮೂಲಕವೆ ಮಾತಾಡಿದರೆ ಕೃಷಿ ವಿವಿಯ ಈ ಪುಸ್ತಕ ಜಾರಿ ಸಾಧ್ಯ ಬೇಸಾಯ ಕ್ರಮ, ಮತ್ತು ಭವಿಷ್ಯತ್ತಿನ ಆರ್ಥಿಕ ವಹಿವಾಟಾಗಿ ಹಲಸು ಉದ್ಯಮ ವಿಸ್ತರಣೆ ಆಗುವ ಸಾಧ್ಯತೆಗಳ ಬಗ್ಗೆ ವೈಜ್ಞಾನಿಕವಾಗಿ ಮತ್ತು ಸಸ್ಯಶಾಸ್ತ್ರೀಯವಾಗಿ ಮಾತಾಡುತ್ತದೆ.

ಹಲಸಿನ ಕುಟುಂಬದ ವಿವಿಧ ಬಗೆಯ ವರ್ಗಗಳು; ಹಲಸಿನ ಹೂವುಗಳ ಜೀವಶಾಸ್ತ್ರೀಯ ವಿವರಗಳು ಹಾಗೂ ಫಲ ಕಚ್ಚುವ ಬಗೆ ಈ ಪುಸ್ತಕದ ಒಂದು ನೆಲೆಯಾದರೆ ಬೇಸಾಯ ಕ್ರಮಗಳು, ಕೀಟ ಮತ್ತು ರೋಗಬಾಧೆಯ ನಿಯಂತ್ರಣ ಕ್ರಮಗಳು, ಹಲಸಿನ ಉತ್ಪನ್ನಗಳು, ಮಾರಾಟ ವ್ಯವಸ್ಥೆಯ ವಿವರಗಳು ಇನ್ನೊಂದು ನೆಲೆಯಾಗಿದೆ.

ಕಾರಂತ ಪೆರಾಜೆ ಅವರ ಪುಸ್ತಕ ಸಂಪೂರ್ಣ ಕ್ಷೇತ್ರಕಾರ್ಯದ ಮತ್ತು ಸ್ವಾನುಭವದ ಫಲಿತ ಆಗಿದ್ದರೆ ಈ ಪುಸ್ತಕವು ಅಧ್ಯಯನ, ಸಂಶೋಧನೆ ಹಾಗೂ ಚಿಂತನೆಗಳ ಫಲಿತ ಆಗಿದೆ. ಅದೊಂದು ವಯಕ್ತಿಕ ಪ್ರಯತ್ನ ಆದರೆ ಇದೊಂದು ಸಾಂಸ್ಥಿಕ ಉಪಕ್ರಮ ಆಗಿದೆ. ಒಟ್ಟಾರೆ ಎರಡೂ ಪುಸ್ತಕಗಳು ಹಲಸಿನ ಭೂತ, ವರ್ತಮಾನ, ಭವಿಷ್ಯತ್ತುಗಳ ಬಗ್ಗೆ ಭಿನ್ನ ಆಯಾಮಗಳಲ್ಲಿ ತಲಸ್ಪರ್ಶಿ ವಿವರಗಳನ್ನು ಒಳಗೊಂಡಿವೆ.

ನೆಲದ ನಂಟು
ತೋಟ, ಕೈತೋಟ ಎಂದು ಎರಡು ಭಾಗಗಳಿರುವ ಈ ಪುಸ್ತಕದಲ್ಲಿ ತೋಟಗಳ ಕುರಿತ ೨೧ ಬರಹಗಳೂ ಕೈತೋಟಗಳ ಕುರಿತ ೧೪ ಬರಹಗಳೂ ಇವೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಇರುವ ತೋಟ ಮತ್ತು ಕೈತೋಟಗಳಿಗೆ ಖುದ್ದು ಕ್ಷೇತ್ರ ಭೇಟಿ ನೀಡಿ ಬರೆದಿರುವ ಬರಹಗಳಿವು. ಆದರೂ ಧಾರವಾಡದ ಸುತ್ತಮುತ್ತಲ ಪ್ರದೇಶಗಳಿಗೆ ಸಂಬಂಧಿಸಿದ ಬರಹಗಳು ಇಲ್ಲಿ ಹೆಚ್ಚಿಗೆ ಇವೆ.

ಸಂಯುಕ್ತ ಕರ್ನಾಟಕ, ಪ್ರಜಾವಾಣಿಯ ಕರ್ನಾಟಕ ದರ್ಶನ, ಕೃಷಿ ಅಂಕಣಗಳಿಗೆ ಬರೆದ ಪತ್ರಿಕಾ ಲೇಖನಗಳು ಇವು. ಹಾಗಾಗಿ ಇವುಗಳಲ್ಲಿ ಪತ್ರಿಕಾ ಓದುಗರಿಗೆ ಬರೆಯುವ ಕೃಷಿ ಪತ್ರಕರ್ತರ ಧಾಟಿ ಇದೆ. ನಾವೂ ತೋಟ ತುಡಿಕೆ ಮಾಡಬೇಕು ಎಂಬ ಸ್ಪೂರ್ತಿ ನೀಡುವ ಬರಹಗಳಿವು. ಆದರೆ ತೋಟಗಾರಿಕೆಯ, ತೋಟಗಾರರ ಯಶಸ್ಸಿನ ಯಶೋಗಾಥೆಗಳೆ ಇವಾಗಿರುವುದರಿಂದ ತೋಟಗಾರಿಕೆ ಕ್ಷೇತ್ರದಲ್ಲಿನ ಸವಾಲು - ಸಮಸ್ಯೆಗಳು ಇಲ್ಲಿ ಕಾಣುವುದಿಲ್ಲ. ತೋಟಗಾರರ, ಕೃಷಿಕರ ಸಂಪರ್ಕ ಸಂಖ್ಯೆಗಳನ್ನೂ ಇಲ್ಲಿ ನೀಡಲಾಗಿದೆ. ಹಾಗಾಗಿ ಇವು ಸ್ವಲ್ಪಮಟ್ಟಿಗೆ ಆಸಕ್ತರಿಗೆ ಕ್ಷೇತ್ರ ಭೇಟಿ ಮಾಡುವ ಮತ್ತು ಸಲಹೆ ಸೂಚನೆಗಳನ್ನು ಪಡೆದು ತಾವೂ ಕೃಷಿಕರಾಗುವ ಅವಕಾಶ ನೀಡಿವೆ.

ಸಾವಿ, ಮಲ್ಲಿಗೆ, ರೇಷ್ಮೆ, ನರ್ಸರಿ, ಈರುಳ್ಳಿ, ಶೇಂಗಾ, ಭತ್ತ, ಮಿಶ್ರಬೆಳೆ, ಮರ ಆಧಾರಿತ ಬೇಸಾಯ, ಸಹಜ ಕೃಷಿ ಹೀಗೆ ಹತ್ತು ಹಲವು ಬಗೆಯ ಬೆಳೆ, ಬೇಸಾಯ ಪದ್ಧತಿಗಳ ಯಶೋಗಾಥೆಗಳು ಇಲ್ಲಿವೆ. ಜೊತೆಗೆ ನೈಸರ್ಗಿಕ ಬಣ್ಣ ತಯಾರಿಕೆ, ಉತ್ಸವ್‌ ರಾಕ್‌ ಗಾರ್ಡನ್‌ನ ಕೃಷಿ ಶಿಲ್ಪಕೃತಿಗಳ ಕುರಿತ ಬರಹಗಳೂ ಇಲ್ಲಿವೆ. ಅಲ್ಲಲ್ಲಿ ಚಿಕ್ಕ ಚಿಕ್ಕ ಬಾಕ್ಸ್‌ಗಳಲ್ಲಿ ಕಾರ್ಯಸಾಧ್ಯ ಸಲಹೆಗಳನ್ನು ನೀಡಲಾಗಿದೆ. ಸ್ವಯಂ ತೋಟಗಾರಿಕೆಯಲ್ಲಿ ತೊಡಗುವವರಿಗೆ, ಕೈತೋಟ ಮಾಡುವವರಿಗೆ ಟಿಪ್ಸ್‌ ರೀತಿಯಲ್ಲಿ ಇವು ಕೆಲಸ ಮಾಡುತ್ತವೆ.

ಇಲ್ಲಿನ ಕೈತೋಟದ ಭಾಗದಲ್ಲಿ ಒಂದೆರಡು ಗುಂಟೆ, ಹತ್ತಾರು ಗುಂಟೆಗಳಲ್ಲಿ ಕೈತೋಟ ಮಾಡಿದ ಉದಾಹರಣೆಗಳ ಜೊತೆ ಮನೆ ಛಾವಣಿ, ಅಂಗಳಗಳಲ್ಲು ಕೈತೋಟ ಮಾಡಿದ ವಿವರಗಳಿವೆ. ಇಲ್ಲಿನ ಕೈತೋಟಗಳನ್ನು ಮಾಡಿದವರಲ್ಲಿ ಗೃಹಿಣಿಯರು, ಉದ್ಯಮಿಗಳು, ಡಾಕ್ಟರರು, ಮಾಸ್ತರರು ಹೀಗೆ ಹಲವು ಬಗೆಯ ಮಂದಿ ಇದ್ದಾರೆ. ಗಿನ್ನೆಸ್‌ ದಾಖಲೆ, ಲಿಮ್ಕಾ ದಾಖಲೆ ಮಾಡಿದ ಉದಾಹರಣಗಳೂ ಇಲ್ಲಿವೆ. ಸಮುದಾಯ ಸಹಭಾಗಿತ್ವದಲ್ಲಿ ನಿರ್ಮಿಸಿದ ರಾಕ್‌ ಗಾರ್ಡನ್ನಿನ ಒಂದು ಉದಾಹರಣೆಯೂ ಈ ಪುಸ್ತಕದ ಕೊನೆಗಿದೆ. ತೋಟಗಾರರಿಗೆ, ಕೈತೋಟಗಾರರಿಗೆ ಇದೊಂದು ಸ್ಪೂರ್ತಿದಾಯಕ ಪುಸ್ತಕ.

ಏಕದಳ, ದ್ವಿದಳ ಮತ್ತು ಮೇವಿನ ಬೆಳೆಗಳ ಉತ್ಪಾದನಾ ತಾಂತ್ರಿಕತೆಗಳು
ಕೃಷಿ ಡಿಪ್ಲೊಮಾ ವಿದ್ಯಾರ್ಥಿಗಳಿಗಾಗಿ ರಚಿಸಿರುವ ಪಠ್ಯಪುಸ್ತಕವಿದು. ಬೋಧಕರು, ರೈತರು ಹಾಗೂ ಇತರ ಆಸಕ್ತ ಓದುಗರಿಗು ಇದೊಂದು ಉಪಯುಕ್ತವಾದ ಪುಸ್ತಕ. ಇದರಲ್ಲಿ ಒಟ್ಟು ಐದು ಭಾಗಗಳಿದ್ದು, ಒಂದೊಂದರಲ್ಲು ಭಿನ್ನ ವಿವರಗಳಿವೆ. ಡಾ. ಕೆ.ಎಸ್.‌ ಶುಭಶ್ರೀ, ಡಾ. ಬಿ.ಎಸ್.‌ ಸೌಮ್ಯಲತಾ, ಡಾ. ಎಸ್.‌ ಬಿ. ಯೋಗಾನಂದ, ಡಾ. ಬಿ.ಜಿ. ಶೇಖರ ಈ ನಾಲ್ವರೂ ಇಲ್ಲಿನ ಬರಹಗಳನ್ನು ಬರೆದಿದ್ದಾರೆ. ಡಾ. ಜೆ. ಬಾಲಕೃಷ್ಣ ಇವುಗಳನ್ನು ಸಂಪಾದಿಸಿದ್ದಾರೆ. ಇಲ್ಲಿಯು ಯಾರ್ಯಾರು ಯಾವ್ಯಾವ ಅಧ್ಯಾಯಗಳನ್ನು ಬರೆದಿದ್ದಾರೆ ಎಂಬ ವಿವರಗಳಿಲ್ಲ. ಭತ್ತ, ಮುಸುಕಿನ ಜೋಳ, ಗೋವಿನ ಜೋಳ, ಗೋಧಿ, ಸಜ್ಜೆ, ರಾಗಿ ಹೀಗೆ ಹಲವು ಧಾನ್ಯಗಳ ಉತ್ಪಾದನೆ ಮತ್ತು ಅವುಗಳ ಬಳಕೆಯ ಪ್ರಮಾಣದ ಹಿನ್ನೆಯಲ್ಲಿ ಆಯಾ ಧಾನ್ಯಗಳ ಬಗ್ಗೆ ಒಂದೊಂದು ಅಧ್ಯಾಯಗಳಲ್ಲಿ ಇಲ್ಲಿ ತಿಳಿಸಲಾಗಿದೆ. ಏಕದಳ, ದ್ವಿದಳ, ಮೇವಿನ ಬೆಳೆಗಳ ಮೂರು ವಿಭಾಗಗಳು ಇಲ್ಲಿವೆ.

ಗ್ರಂಥದ ಹೆಸರು ಉತ್ಪಾದನಾ ತಾಂತ್ರಿಕತೆಗಳು ಎಂದು ಇದೆಯಾದರೂ ಧಾನ್ಯಗಳ ಮೂಲಸ್ಥಾನ, ವ್ಯಾಪ್ತಿ, ಪೌಷ್ಠಿಕ ಮೌಲ್ಯ, ಸಸ್ಯಶಾಸ್ತ್ರೀಯ ವಿವರಣೆ, ತಳಿಗಳು, ಬೆಳೆಯ ಅವಧಿ, ಬೇಸಾಯದ ವಿಧಾನ, ಕೀಟ-ಕಳೆ-ರೋಗಗಳ ನಿಯಂತ್ರಣ ವಿಧಾನಗಳು, ಇಳುವರಿ ನಿರ್ವಹಣೆ ಇತ್ಯಾದಿ ವಿವರಗಳ ಅನುಕ್ರಮಗಳನ್ನು ಇಲ್ಲಿನ ಎಲ್ಲ ಅಧ್ಯಾಯ ರಚನೆಯಲ್ಲು ಅನುಸರಿಸಲಾಗಿದೆ. ಸಾಮಾನ್ಯ ಚೌಕಟ್ಟಿನಂತೆ ಇದನ್ನು ಎಲ್ಲ ಅಧ್ಯಾಗಳಲ್ಲು ಅನುಸರಿಸಲಾಗಿದೆ. ಕೆಲವೆಡೆ ಅಲ್ಲಲ್ಲಿ ಅಂತರಬೆಳೆ ಸಾಧ್ಯತೆ, ಬೀಜೋಪಚಾರ ವಿಧಾನ, ಮಣ್ಣು ಮತ್ತು ಹವಾಗುಣದ ಹಿನ್ನೆಲೆ, ಒಕ್ಕಣೆ ವಿವರಗಳನ್ನೂ ನೀಡಲಾಗಿದೆ. ಗ್ರಂಥದ ಭಾಗಗಳ ಕೊನೆಯಲ್ಲಿ ಬೆಳೆಗಳ ಛಾಯಾಚಿತ್ರಗಳನ್ನೂ ನೀಡಲಾಗಿದೆ. ಬೆಳೆಯ ಚಿತ್ರಗಳ ಜೊತೆಗೆ ಒಕ್ಕಿದ ಧಾನ್ಯಗಳ ಚಿತ್ರಗಳೂ ಇದ್ದಿದ್ದರೆ ಪುಸ್ತಕ ಇನ್ನಷ್ಟು ಚೆಂದವಿರುತ್ತಿತ್ತು.

ಕರ್ನಾಟಕವನ್ನು ಕೇಂದ್ರೀಕರಿಸದೆ ಇಂಗ್ಲಿಶ್‌ ಮತ್ತು ವಿ‍ಶ್ವವನ್ನು ಕೇಂದ್ರೀಕರಿಸಿ ಧಾನ್ಯಗಳ ಮತ್ತೆ ಬೆಳೆಗಳ ವಿವರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಭಾಷೆ ಕನ್ನಡವಾದರೂ ಇಲ್ಲಿನ ಬರಹಗಳ ಹಿಂದಿನ ಆಲೋಚನಾ ಕ್ರಮ, ನಿರೂಪಣಾ ಕ್ರಮ ಮತ್ತು ಅಧ್ಯಯನ ವಿವರಗಳು ಎಲ್ಲವೂ ಆಂಗ್ಲ ಶಿಕ್ಷಣಕ್ರಮದಿಂದ ಪ್ರೇರಿತ ಆಗಿವೆ. ಹಾಗಾಗಿ ಈ ಪುಸ್ತಕ ಸ್ಥಳೀಯ ಅನುಭವಗಳ ನಿರೂಪಣೆ ಅನ್ನಿಸುವುದಿಲ್ಲ. ಸ್ಥಳೀಯ ಜ್ಞಾನ, ಕೃಷಿ ಆಚಾರಗಳನ್ನು ದಾಖಲಿಸಲು ಈ ಪುಸ್ತಕ ಹೆಚ್ಚಿನ ಒತ್ತು ನೀಡುವುದಿಲ್ಲ; ಸಿದ್ಧ ಮಾದರಿಯ ಕೃಷಿ ವಿಜ್ಞಾನ ಶಿಕ್ಷಣ ಪದ್ಧತಿಯ ನಿರೂಪಣಾ ಧಾಟಿ ಇಲ್ಲಿದೆ. ಕೊನೆಯಲ್ಲಿ ಪರಾಮರ್ಶನ ಆಕರಗಳನ್ನೂ ಇಲ್ಲಿ ನೀಡಿಲ್ಲ. ವಿದ್ಯಾರ್ಥಿಗಳಿಗಾಗಿ ಸಿದ್ಧ ಮಾಡಿರುವ ಪಠ್ಯ ಪುಸ್ತಕ ಇದಾಗಿರುವುದರಿಂದ ಇದರಲ್ಲಿ (ಇದರ ಹೆಸರೆ ಹೇಳುವಂತೆ) ತಾಂತ್ರಿಕ ವಿವರಗಳು ಹೆಚ್ಚಿಗೆ ಇವೆ. ಸ್ಥಳೀಯ ಬೇಸಾಯ ಪದ್ಧತಿಯ ವಿವರಗಳು; ಮಾರುಕಟ್ಟೆ ಸಾಧ್ಯತೆಗಳು, ಉಪ ಉತ್ಪನ್ನಗಳು, ಸ್ಥಳೀಯ ಹವಾಗುಣದ ಪರಿಣಾಮಗಳು ಮೊದಲಾದ ರೈತಪೂರಕ ವಿವರಗಳು ಇಲ್ಲಿಲ್ಲ. ಹಾಗಾಗಿ ಇದೊಂದು ಆಂಗ್ಲಪ್ರಣೀತ ಶೈಕ್ಷಣಿಕ ಪೆಡಗಾಜಿಯನ್ನು ಅನುಸರಿಸಿದ ಗ್ರಂಥ.

ಸಿರಿಧಾನ್ಯಗಳು
ರಮ್ಯ ಎಚ್.‌ ಎನ್.‌ ಮತ್ತು ಭಾರತಿ ಮಿರಾಜಕರ ಅವರು ಬರೆದಿರುವ ಕರ್ನಾಟಕದಲ್ಲಿ ಬಳಸುವ ಕಿರುಧಾನ್ಯಗಳನ್ನು ಪರಿಚಯಿಸುವ ಕಿರು ಪುಸ್ತಕವಿದು. ಇದರಲ್ಲಿ ಊದಲು, ಬರಗು, ಕೊರಲೆ, ಹಾರಕ, ಸಜ್ಜೆ, ನವಣೆ, ಸಾಮೆ, ಜೋಳ, ರಾಗಿ ಹೀಗೆ ಒಂಬತ್ತು ಬಗೆಯ ಸಿರಿಧಾನ್ಯಗಳನ್ನು (ನವವಿಧ ಸಿರಿಧಾನ್ಯ-ನವಧಾನ್ಯಗಳನ್ನು) ಪರಿಚಯಿಸಲಾಗಿದೆ. ಬಳಕೆಯ ನೆಲೆಯಿಂದ ಪ್ರತಿಯೊಂದು ಧಾನ್ಯಗಳ ಸ್ವರೂಪ, ಲಕ್ಷಣ, ಅವುಗಳಲ್ಲಿರುವ ಪ್ರತಿ ನೂರು ಗ್ರಾಮ್‌ನಲ್ಲಿನ ಪೌಷ್ಠಿಕ ಮೌಲ್ಯಗಳನ್ನು ಇಲ್ಲಿ ಪರಿಚಯ ಮಾಡಿಕೊಡಲಾಗಿದೆ. ಜೊತೆಗೆ ಪ್ರತಿಯೊಂದು ಸಿರಿಧಾನ್ಯದಿಂದಲೂ ತಯಾರಿಸಬಹುದಾದ ಐದೈದು ರೆಸಿಪಿಗಳನ್ನು – ಖಾದ್ಯ ತಯಾರಿ ವಿವರಗಳನ್ನು ಮತ್ತು ಆರೋಗ್ಯಕರ ಜೀವನಕ್ಕೆ ಅವುಗಳಿಂದ ಆಗಬಹುದಾದ ಪ್ರಯೋಜನಗಳನ್ನು ಕುರಿತು ತಿಳಿಸಲಾಗಿದೆ.

ಸಿರಿಧಾನ್ಯಗಳ ಬಗ್ಗೆ ಪರಿಚಯಾತ್ಮಕ ಮಾಹಿತಿ ಬೇಕಾದವರು; ಅವುಗಳನ್ನು ಬಳಸಿ ಯಾವೆಲ್ಲ ಅಡಿಗೆ ಖಾದ್ಯಗಳನ್ನು ಹೇಗೆಲ್ಲ ತಯಾರಿಸಬಹುದು ಎಂಬ ಪ್ರಾಥಮಿಕ ಮಾಹಿತಿ ಬೇಕಾದವರು ಈ ಕಿರು ಪುಸ್ತಕವನ್ನು ಕೈಪಿಡಿಯಾಗಿ ಬಳಸಬಹುದು. ಒಂದು-ಒಂದೂವರೆ ಪುಟಕ್ಕಿಂತ ಹೆಚ್ಚಿನ ತಾಂತ್ರಿಕ ವಿವರಗಳು ಇಲ್ಲಿ ಯಾವ ಧಾನ್ಯಗಳ ಬಗೆಗು ಇಲ್ಲ. ಇದೊಂದು ಕೃಷಿ ವೈಜ್ಞಾನಿಕ ಕೃತಿ ಅಲ್ಲ; ಧಾನ್ಯಗಳನ್ನು ಬೆಳೆಯುವ, ರೋಗ-ಕೀಟ ನಿಯಂತ್ರಿಸುವ, ಸಂಸ್ಕರಿಸುವ ಯಾವ ವಿವರಗಳೂ ಇಲ್ಲಿಲ್ಲ. ಬಳಕೆಯ ನೆಲೆಯನ್ನು ಆಧರಿಸಿದ ಮತ್ತು ಮಾರ್ಕೆಟಿಂಗ್‌ ಸ್ಟ್ರಾಟಜಿ ಹಾಗೂ ಮಾರಾಟ ವಿಸ್ತರಣಾ ಟಿಪ್ಪಣಿಗಳ ಪುಸ್ತಕವಿದು.

ಎಂಬತ್ತು ಪುಟಗಳ ಚಿಕ್ಕ ಸೈಜಿನ ಪುಸ್ತಕಕ್ಕೆ ೬೫ ರೂಪಾಯಿ ಬೆಲೆ ಇರಿಸಿರುವುದು ತುಂಬಾ ಹೆಚ್ಚಾಯಿತು ಅನ್ನಿಸುತ್ತದೆ. ಕರಡು ತಿದ್ದುವಲ್ಲಿ ಇನ್ನಷ್ಟು ಮುತುವರ್ಜಿ ವಹಿಸಬಹುದಿತ್ತು. ಪುಸ್ತಕದ ಒಳಗಡೆ ಬೆಳೆಗಳ, ಧಾನ್ಯಗಳ ಮತ್ತು ಖಾದ್ಯಗಳ ಚಿತ್ರಗಳನ್ನು ಕೊಟ್ಟಿದ್ದರೆ ಪುಸ್ತಕದ ಅಂದ ಮತ್ತು ಮೌಲ್ಯ ಇನ್ನಷ್ಟು ಹೆಚ್ಚುತ್ತಿತ್ತು.

-ಡಾ. ರಾಮಲಿಂಗಪ್ಪ ಟಿ. ಬೇಗೂರು

ಈ ಅಂಕಣದ ಹಿಂದಿನ ಬರೆಹಗಳು:
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ

ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...