Date: 25-02-2023
Location: ಬೆಂಗಳೂರು
''ಕನ್ನಡದ ಅಂಕಿಗಳ ರಚನೆಯನ್ನು ಪರಿಚಯ ಮಾಡಿಕೊಳ್ಳುವ ಮೊದಲು ಕೆಲವು ಅಂಶಗಳನ್ನು ಮಾತನಾಡಬೇಕು. ಎಲ್ಲರಿಗೂ ತಿಳಿದಿರುವಂತೆ, ಈ ಮೇಲೆ ಹೇಳಿದಂತೆ ಕನ್ನಡದಲ್ಲಿ ಮೂಲಬೂತ ಅಂಕಿಗಳು ಹತ್ತರವರೆಗೆ ಇವೆ. ಆನಂತರದ ಅಂಕಿಗಳನ್ನು ಹತ್ತಕ್ಕೆ ಬೇರೆ ಬೇರೆ ರೂಪಗಳನ್ನು ಸೇರಿಸುವ ಮೂಲಕ ಮಾಡಲಾಗಿದೆ,'' ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಎಣಿಸುವ ಕಲೆ’ ವಿಚಾರದ ಕುರಿತು ಬರೆದಿದ್ದಾರೆ.
ಮನುಶ್ಯರಿಗೆ ಬಾಶೆ ಬೆಳೆದಾಗ ಎಣಿಸುವ ಕಲೆ ಹೇಗೆ ಬೆಳೆದಿರಬಹುದು ಎಂಬುದು ಅತ್ಯಂತ ಕುತೂಹಲಕರವಾದ ಪ್ರಶ್ನೆ. ಗಣಿತವನ್ನು ಕಲೆ ಎಂದು ಓದುವುದಿಲ್ಲವಲ್ಲ, ಆದರೆ ಎಣಿಸುವುದನ್ನು ಕಲೆ ಎಂದು ಕರೆದಿರುವುದು ಏಕೆ ಎಂಬ ಪ್ರಶ್ನೆ ಮೊದಲಿಗೆ ಬರಬಹುದು. ನಿಜ. ಗಣಿತ ಒಂದು ವಿಗ್ನಾನ, ಆದರೆ, ಎಣಿಸುವುದು ಒಂದು ಕಲೆ. ಹೇಗೆ ಎಣಿಸುತ್ತೇವೆ ಎಂಬುದು ಮಹತ್ವದ ಪ್ರಶ್ನೆ. ಇಲ್ಲಿ, ಕನ್ನಡದ ಅಂಕಿಗಳು ಹೇಗಿವೆ ಎಂಬುದನ್ನು ತುಸು ಅವಲೋಕಿಸೋಣ.
ಕನ್ನಡದಲ್ಲಿ ಸಾಮಾನ್ಯವಾಗಿ ಒಂದರಿಂದ ಹತ್ತರವರೆಗೆ ಬಿಡಿ ಬಿಡಿ ಅಂಕಿಗಳು ಕಾಣಿಸುತ್ತವೆ. ಆನಂತರದ ಅಂಕಿಗಳು ಸಮಾಸದಂತೆ ಕಾಣಿಸುತ್ತವೆ. ಇಲ್ಲಿನ ಮುಕ್ಯ ಪ್ರಶ್ನೆ ಎಂದರೆ, ಈ ಸಮಾಸವನ್ನು ಯಾವ ಆದಾರದ ಮೇಲೆ ಮಾಡಲಾಗಿದೆ ಎಂಬುದು. ಮನುಶ್ಯ ಜಗತ್ತಿನಲ್ಲಿ ಗಣಿತದ ಇತಿಹಾಸವನ್ನು ಹುಡುಕುವಾಗ ಕಾಣಿಸುವ ಅತ್ಯಂತ ಮಹತ್ವದ ಆದಾರವೆ ಈ ಅಂಕಿಪದಗಳು. ಮನುಶ್ಯರು ಒಂದು, ಎರಡು, ಮೂರು ಎಂದು ಎಣಿಸುವುದು ಸರಿ. ಇದನ್ನು ಎಲ್ಲಿಯವರೆಗೆ ತೆಗೆದುಕೊಂಡು ಹೋಗಲು ಸಾದ್ಯ? ಇಂತಾ ಅನುಮಾನ ಬಂದಾಗ ಮಾನವ ಎಣಿಕೆಯ ಕಲೆಯನ್ನು ಬೆಳೆಸಿಕೊಂಡಿರುವಂತಿದೆ. ಇದನ್ನು ಇಲ್ಲಿ ತುಸು ಪರಿಚಯ ಮಾಡಿಕೊಳ್ಳಬಹುದು.
ಜಗತ್ತಿನ ಹಲವು ಬಾಶೆಗಳಲ್ಲಿ ಮೂಲಬೂತ ಅಂಕಿಗಳು ಇವೆ. ಒಂದು, ಎರಡು, ಮೂರು ಇಂತವು. ಕನ್ನಡದಲ್ಲಿ ಹೀಗೆ ಹತ್ತರವರೆಗೆ ಇರುವಂತೆ ಕಾಣಿಸುತ್ತವೆ. ಇವುಗಳಲ್ಲಿನ ರಚನೆಯನ್ನು ಆನಂತರ ಮಾತಾಡಬಹುದು. ಆದರೆ, ಆನಂತರದ ಅಂದರೆ, ಹತ್ತರ ನಂತರದ ಅಂಕಿಗಳು ಈ ಮೇಲೆ ಹೇಳಿದಂತೆ ಸಮಾಸ ರೂಪದಲ್ಲಿ ಇವೆ. ಹಾಗಾದರೆ ಈ ಸಮಾಸಗಳನ್ನು ಹೇಗೆ ರೂಪಿಸಿದೆ ಎಂಬುದು ಪ್ರಶ್ನೆ. ಇಂತಾ ನಂತರದ ಅಂಕಿಗಳು ಜಗತ್ತಿನ ವಿವಿದ ಬಾಶೆಗಳಲ್ಲಿ ವಿಬಿನ್ನ ಗಣಿತೀಯ ಎಣಿಕೆಯಲ್ಲಿ ಇವೆ. ಕೆಲವು ಬಾಶೆಗಳಲ್ಲಿ ಕೂಡಿಸುವ ಮತ್ತು/ಇಲ್ಲವೆ ಕಳೆಯುವ ಮೂಲಕ ಅಂಕಿಗಳನ್ನು ಮಾಡಿದೆ. ಇನ್ನು ಕೆಲವು ಬಾಶೆಗಳಲ್ಲಿ ಗುಣಿಸುವ ಮತ್ತು/ಇಲ್ಲವೆ ಬಾಗಿಸುವ ಮೂಲಕ ಈ ಅಂಕಿಗಳನ್ನು ರೂಪಿಸಿದೆ. ಮನುಶ್ಯ ಬಾಶೆಯಲ್ಲಿ ಅಂಕಿಗಳು ರೂಪುಗೊಂಡ ಕಾಲವನ್ನು ಹಲವು ಸಾವಿರ ವರುಶಗಳ ಹಿಂದಕ್ಕೆ ತೆಗೆದುಕೊಂಡು ಹೋಗಬಹುದು. ಅತ್ಯಂತ ವ್ಯವಸ್ತಿತವಾಗಿ ಅಂಕಿಗಳ ವ್ಯವಸ್ತೆ ರೂಪುಗೊಳ್ಳುವುದು ಎಂದರೆ ವ್ಯವಸ್ತಿತವಾದ ಗಣಿತದ ಅರಿವು ಬೆಳೆದಿದ್ದಿತು ಎಂದು ಹೇಳಲು ಸಾದ್ಯ.
ಕನ್ನಡದಾಗ ಅಂಕಿಗಳು ಎಶ್ಟು ಹಿಂದಿನಿಂದ ಇವೆ ಎಂಬುದು ಒಂದು ಸಹಜ ಪ್ರಶ್ನೆಯಾಗಲಾರದು. ಯಾಕೆಂದರೆ ಕನ್ನಡದ ಇತಿಹಾಸ ಬರಿಯ ನಾಲ್ಕಯ್ದು ಸಾವಿರ ವರುಶ ಮಾತ್ರ ಆದೀತು. ಅಂಕಿಗಳ ಇತಿಹಾಸ ಹತ್ತಾರು ಸಾವಿರ ವರುಶಗಳವರೆಗೆ ಹೋಗುತ್ತದೆ. ಮೂಲದ್ರಾವಿಡದ ಹಂತದಲ್ಲಿಯೆ ಅಂಕಿಗಳು ಅತ್ಯಂತ ವ್ಯವಸ್ತಿತ ರೀತಿಯಲ್ಲಿ ಬೆಳೆದಿದ್ದವು. ಆನಂತರ, ದ್ರಾವಿಡದ ವಿವಿದ ಬಾಶೆಗಳಲ್ಲಿ ಅಂಕಿಗಳ ರೂಪಗಳು ಮಾತ್ರ ಬದಲಾಗುತ್ತಾ ಬೆಳೆಯುತ್ತಾ ಬರುತ್ತಿವೆ.
ಕನ್ನಡದ ಅಂಕಿಗಳ ರಚನೆಯನ್ನು ಪರಿಚಯ ಮಾಡಿಕೊಳ್ಳುವ ಮೊದಲು ಕೆಲವು ಅಂಶಗಳನ್ನು ಮಾತನಾಡಬೇಕು. ಎಲ್ಲರಿಗೂ ತಿಳಿದಿರುವಂತೆ, ಈ ಮೇಲೆ ಹೇಳಿದಂತೆ ಕನ್ನಡದಲ್ಲಿ ಮೂಲಬೂತ ಅಂಕಿಗಳು ಹತ್ತರವರೆಗೆ ಇವೆ. ಆನಂತರದ ಅಂಕಿಗಳನ್ನು ಹತ್ತಕ್ಕೆ ಬೇರೆ ಬೇರೆ ರೂಪಗಳನ್ನು ಸೇರಿಸುವ ಮೂಲಕ ಮಾಡಲಾಗಿದೆ.
ಅಂದರೆ ಇಲ್ಲಿ ಒಂದು ಅಂಶ ತಿಳಿದುಕೊಳ್ಳಬೇಕು. ಹತ್ತರ ನಂತರದ ಅಂಕಿಗಳನ್ನು ಸಮಾಸ ರೂಪದಲ್ಲಿ ಸಾದಿಸಿದೆ ಮತ್ತು ಆನಂತರದ ಅಂಕಿಗಳನ್ನು ರೂಪಿಸಲು ಹತ್ತನ್ನು ಮೂಲ ಅಂಕಿಯಾಗಿ ಇಟ್ಟುಕೊಳ್ಳಲಾಗಿದೆ ಎಂಬುದು. ಇದನ್ನು ಇಂದಿನ ಗಣಿತದಲ್ಲಿ ದಶಮಾಂಶ ಪದ್ದತಿ ಎಂದು ಹೇಳಲಾಗುತ್ತದೆ. ಅಂದರೆ, ಹತ್ತನ್ನು ಗಣಿತಕ್ಕೆ ಆದಾರ ಸಂಕೆಯಾಗಿ ಇಟ್ಟುಕೊಳ್ಳುವುದು. ಇಲ್ಲಿ ಇರುವ ಪ್ರಶ್ನೆಯೆಂದರೆ ಕನ್ನಡದಲ್ಲಿ ಇದು ಮೊದಲಿಂದಲೂ ಹೀಗೆಯೆ ಇದೆಯೆ ಎಂಬುದು.
ಕನ್ನಡದಾಗ, ಇಲ್ಲವೆ ದ್ರಾವಿಡದಾಗ, ಬಹುಶಾ ದಶಮಾಂಶ ಪದ್ದತಿ ಇರಲಿಲ್ಲ ಎನಿಸುತ್ತದೆ. ಇದಕ್ಕೆ ಹಲವು ಆದಾರಗಳು ದೊರೆಯುತ್ತವೆ. ಅಂಕಿಗಳ ರಚನೆಯಲ್ಲಿಯೆ ಇದಕ್ಕೆ ಒಂದು ಮುಕ್ಯವಾದ ಆದಾರ ದೊರೆಯುತ್ತದೆ. ಅದೆಂದರೆ, ಇದುವರೆಗೆ ಹೇಳಿದಂತೆ ಕನ್ನಡದಲ್ಲಿ ಒಂದರಿಂದ ಹತ್ತರವರೆಗಿನ ಅಂಕಿಗಳು ಮೂಲಬೂತ ಅಂಕಿಗಳು ಮತ್ತು ಇವುಗಳು ಒಂಟಿರಚನೆಗಳಂತೆ ಇವೆ ಎಂಬುದು. ವಾಸ್ತವದಲ್ಲಿ ಇವು ಕೂಡ ರಚನೆ ಅಂದರೆ ಸಮಾಸರೂಪಗಳಾಗಿವೆ. ಇವುಗಳಲ್ಲಿ ಒಂದರಿಂದ ಎಂಟರವರೆಗಿನ ಅಂಕಿಗಳ ರಚನೆ ಒಂದು ರೀತಿಯಲ್ಲಿದೆ. ಇವುಗಳಲ್ಲಿ ಗಣಿತೀಯ ಲೆಕ್ಕಾಚಾರ ಇಲ್ಲ. ಸಹಜವಾಗಿ ಎರಡು ಪದಗಳು ಸೇರಿ ಬೆಳೆಯುವ ಪ್ರಕ್ರಮದಲ್ಲಿ ಈ ಅಂಕಿಗಳು ಬೆಳೆದಿವೆ. ಆದರೆ ಒಂಬತ್ತು ಅಂಕಿ ಮಾತ್ರ ತುಂಬಾ ಬಿನ್ನವಾದ ರಚನೆಯಾಗಿದೆ. ಇದು ಸಮಾಸವಾಗಿದೆ ಮತ್ತು ಈ ಸಮಾಸದಲ್ಲಿ ಗಣಿತೀಯ ಲೆಕ್ಕಾಚಾರ ಇರುವುದು ಕಾಣಿಸುತ್ತದೆ. ವಾಸ್ತವದಲ್ಲಿ ಒಂಬತ್ತು ಎಂದರೆ 'ಹತ್ತರಲ್ಲಿ ಒಂದನ್ನು ಕಳೆ' ಎಂದು ಅರ‍್ತ. ಇದರ ರಚನೆ ಒನ್+ಪತ್ತು ಎಂದಾಗಿದೆ. ಈ ರಚನೆ ನಮಗೆ ಸ್ಪಶ್ಟವಾಗಿ ತಿಳಿಸುವುದೇನೆಂದರೆ ಕನ್ನಡದಲ್ಲಿ, ದ್ರಾವಿಡದಲ್ಲಿ ಒಂಬತ್ತು ಇದು ಮೂಲಬೂತ ಅಂಕಿಗಳಲ್ಲಿ ಮೊದಮೊದಲು ಸೇರಿರಲಿಲ್ಲ ಇಲ್ಲವೆ ಅಂತದೊಂದು ಅಂಕಿ ಇರಲಿಲ್ಲ. ಆನಂತರ ಇದನ್ನು ಮೂಲಬೂತ ಅಂಕಿಯಾಗಿ ಬೆಳೆಸಿದೆ. ಇದು ನಮಗೆ ತಿಳಿಸುವ ಮುಕ್ಯವಾದ ಒಂದು ವಿಚಾರವೆಂದರೆ ಕನ್ನಡದಲ್ಲಿ ದಶಮಾಂಶ ಪದ್ದತಿ ಇರಲಿಲ್ಲ ಎಂದಾಗುತ್ತದೆ. ಇದಕ್ಕೆ ಬೇರೆ ಏನಾದರೂ ಆದಾರಗಳು ಇವೆಯೆ ಎಂದು ಹುಡುಕುವುದು ಒಳ್ಳೆಯದು. ಯಾಕೆಂದರೆ ಇದು ಬಾಶೆಯೊಂದರ ರಚನೆ, ಇತಿಹಾಸಕ್ಕೆ ಸಂಬಂದಿಸಿದ ಮತ್ತು ಆ ಮಾತುಗ ಸಮುದಾಯದ ಇತಿಹಾಸ, ಅರಿವು-ವಿಗ್ನಾನ-ತತ್ವಗ್ನಾನದ ಇತಿಹಾಸಕ್ಕೆ ಸಂಬಂದಿಸಿದ ಅತ್ಯಂತ ಮಹತ್ವದ ಪ್ರಶ್ನೆಯಾಗುತ್ತದೆ.
ಕನ್ನಡದವರು ಇಂದು ದಶಮಾಂಶ ಪದ್ದತಿಯಲ್ಲಿ ಎಣಿಸುವುದು ಸಾಮಾನ್ಯ. ಆದರೆ, ಹಳ್ಳಿಗಳಲ್ಲಿನ ಹೆಚ್ಚು ವಯಸ್ಸಾಗಿರುವವರು ಎಣಿಸುವ ಪದ್ದತಿಯನ್ನು ತುಸು ಅವಲೋಕಿಸಬಹುದು. ದಶಮಾಂಶ ಪದ್ದತಿ ಆನಂತರ ಕನ್ನಡಕ್ಕೆ, ದ್ರಾವಿಡಕ್ಕೆ ಬಂದದ್ದು ಎನ್ನುವುದಕ್ಕೆ ಆದಾರವನ್ನು ಹಳ್ಳಿ ಮಂದಿ ಇನ್ನೂ ಉಳಿಸಿಕೊಂಡಿದ್ದಾರೆ. ಆದರೆ, ಶಿಕ್ಶಣದ ಕಾರಣದಿಂದ ನಮ್ಮ ಬದುಕಿನ ಹಲವು ಬಗೆಯ ಬಹುತ್ವವನ್ನು ಅಳಿಸಿಹಾಕುತ್ತಿರುವ ನಾವು ಈ ಬಳಕೆಯಿಂದ ದೂರ ಬರುತ್ತಿದ್ದೇವೆ. ಈ ವಿಬಿನ್ನವಾಗಿ ಎಣಿಸುವ ಕ್ರಮವೆಂದರೆ ಒಂಬತ್ತನ್ನು ಎಣಿಸುವಲ್ಲಿನ ವಿಬಿನ್ನತೆ. ಒಂಬತ್ತಕ್ಕೆ 'ಒಂದು ಕಮ್ಮಿ ಹತ್ತು' ಎಂದು ಹೇಳಲಾಗುತ್ತದೆ. ಒಂಬತ್ತು ಒಂದು ಸಾಮಾನ್ಯ ಪದ ಎಂಬ ಒಪ್ಪಂದಕ್ಕೆ ಮಾತುಗ ಸಮುದಾಯ ಬಂದಿರುವುದರಿಂದ ಒಂಬತ್ತು ಎಂದು ಹೇಳುವುದು ಕೇಳಿಸಿದರೂ ಆನಂತರದ ಒಂಬತ್ತನ್ನು ಎಣಿಸುವ ಕ್ರಮದಲ್ಲಿ ಇದು ಕಾಣಿಸುವುದಿಲ್ಲ. ಹತ್ತೊಂಬತ್ತು, ಇಪ್ಪತ್ತೊಂಬತ್ತು ಮೊದಲಾದವನ್ನು 'ಒಂದು ಕಮ್ಮಿ ಇಪ್ಪತ್ತು', 'ಒಂದು ಕಮ್ಮಿ ಮೂವತ್ತು' ಎಂದು ಮೊದಲಾಗಿ ಎಣಿಸಲಾಗುತ್ತದೆ. ಅಂದರೆ, ಹತ್ತೊಂಬತ್ತು, ಇಪ್ಪತ್ತೊಂಬತ್ತು ಎಂಬ ಅಂಕಿಗಳನ್ನು ಬಳಸುವುದಿಲ್ಲ. ಗಮನಿಸಿ, ಕನ್ನಡದಲ್ಲಿ ಒಂಬತ್ತು ಅಂಕಿಯ ರಚನೆ 'ಒಂದು ಕಮ್ಮಿ ಹತ್ತು' ಎಂಬ ಕಳೆಯುವ ಕ್ರಮದಲ್ಲಿ ಇದೆ ಎಂಬುದನ್ನು ಮೇಲೆ ಹೇಳಿದೆ. ಈ ಕಳೆಯುವ ಕ್ರಮವನ್ನು ಮಾತುಗ ಸಮುದಾಯ ತನ್ನ ಅರಿವಿನ ಬಾಗವಾಗಿ ಉಳಿಸಿಕೊಂಡಿದೆ. ಹಾಗಾಗಿ, ಆ ಅಂಕಿಯನ್ನು ಹೇಳದೆ, ಎಣಿಸುವ ಕ್ರಮವನ್ನು ಎಣಿಸುವದರ ಬಾಗವಾಗಿ ಬಳಸುತ್ತಿದೆ.
ಹಾಗಾದರೆ, ಕನ್ನಡ, ದ್ರಾವಿದಡಲ್ಲಿ ದಶಮಾಂಶ ಪದ್ದತಿ ಇರಲಿಲ್ಲ ಎಂಬುದಕ್ಕೆ ಇದು ಆದಾರ ಒದಗಿಸುತ್ತದೆ. ಇನ್ನೂ ಕೆಲವು ಬಳಕೆಗಳು ಇನ್ನೂ ಹೆಚ್ಚಿನ ಅಂಶಗಳ ಕಡೆ ಬೆಳಕನ್ನು ಚೆಲ್ಲುತ್ತವೆ. ನಲವತ್ತು ಎಂಬುದಕ್ಕೆ 'ಎರಡಿಪ್ಪತ್ತು' ಎಂಬುದು, ಅಯವತ್ತು ಎಂಬುದಕ್ಕೆ 'ಎರಡಿಪ್ಪತ್ತು (ಒಂದು) ಹತ್ತು' ಎಂದು ಹೇಳುವ ಕ್ರಮವೂ ಇದೆ. ಇದು ಅಂದರೆ, ದಶಮಾಂಶ ಪದ್ದತಿಗೆ ಪ್ರತಿಯಾಗಿ ಇನ್ನೊಂದು ಪದ್ದತಿ ಇದ್ದಿತೆ ಎಂಬ ಅನುಮಾನ ತರುತ್ತದೆ. ನಿಜ. ಕನ್ನಡದಲ್ಲಿ, ದ್ರಾವಿಡದಲ್ಲಿ ದಶಮಾಂಶ ಪದ್ದತಿ ಆನಂತರದ್ದು. ಹಾಗಾದರೆ, ಅದಕ್ಕಿಂತ ಮೊದಲು ಬೇರೆ ಪದ್ದತಿ ಇದ್ದಿತೆ ಎಂಬ ಪ್ರಶ್ನೆ. ಸಹಜ. ಎಂಟನ್ನು ಮೂಲಬೂತವಾಗಿ ಗುಣಿಸುವುದಕ್ಕೆ ಬಳಸುವ ಪದ್ದತಿ ಇದ್ದಿರಬಹುದು ಎಂದೆನಿಸುತ್ತದೆ. ಇದಕ್ಕೆ ಇನ್ನೂ ಹೆಚ್ಚಿನ ಅದ್ಯಯನಗಳು ಬೇಕು.
ಅಂಕಿಗಳ ಅವಲೋಕನೆ ಬಾಶೆಯ ಬಹುದೊಡ್ಡ ಇತಿಹಾಸವನ್ನು ತೆರೆಯುತ್ತದೆ. ಕನ್ನಡವನ್ನು ತಿಳಿದುಕೊಳ್ಳುವುದಕ್ಕೆ ಇಂತ ಪ್ರಯತ್ನಗಳು ಅವಶ್ಯ. ಮುಂದಿನ ಬರಹದಲ್ಲಿ ಕನ್ನಡ ಅಂಕಿಗಳ ರಚನೆಯನ್ನು ಪರಿಚಯ ಮಾಡಿಕೊಳ್ಳೋಣ.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.