“ನಮ್ಮ ದೇಶದ ಈಶಾನ್ಯ ಭಾಗದಲ್ಲಿರುವ ಹಾಗೂ ಬಾಂಗ್ಲಾದೇಶ ಚೀನಾ ಮಯನ್ಮಾರ್ ಮತ್ತು ಭೂತಾನ ದೇಶಗಳೊಡನೆ ಗಡಿಗಳನ್ನು ಹೊಂದಿರುವ ರಾಜ್ಯಗಳನ್ನು 'ಸೆವೆನ್ ಸಿಸ್ಟರ್ಸ್' ಎಂದು ಏಕೆ ಕರೆಯುತ್ತಾರೆ ಎಂಬ ಪ್ರಶ್ನೆಗೆ ಈ ಪುಸ್ತಕವನ್ನು ಓದಿದರೆ ಉತ್ತರ ಸಿಕ್ಕುತ್ತದೆ,” ಎನ್ನುತ್ತಾರೆ ಚೇತನ ಭಾರ್ಗವ. ಅವರು ಹೆಚ್. ಶ್ರೀಧರ ರಾವ್ ಅವರ “ಏಳು ಸಹೋದರಿಯರು ಇಪ್ಪತ್ತೊಂದು ದಿನಗಳು” ಕೃತಿ ಕುರಿತು ಬರೆದ ವಿಮರ್ಶೆ.
'ಏಳು ಸಹೋದರಿಯರು ಇಪ್ಪತ್ತೊಂದು ದಿನಗಳು' ಈಶಾನ್ಯ ರಾಜ್ಯಗಳ ಪ್ರವಾಸ ಕಥನ ಎಂಬ ಪುಸ್ತಕವನ್ನು ಶ್ರೀಯುತ ಎಚ್ ಶ್ರೀಧರ ರಾವ್ ರವರು ಬರೆದಿದ್ದಾರೆ
ಲೇಖಕರು ಹೊಸನಗರ ತಾಲ್ಲೂಕಿನ ಹುಲುಗಾರು ಎಂಬ ಪುಟ್ಟ ಹಳ್ಳಿಯವರು . ಅವರು ಬೆಳೆದದ್ದು ಹಾಗೂ ಶಿಕ್ಷಣವನ್ನು ಮುಗಿಸಿದ್ದು ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗದಲ್ಲಿ. ಬ್ಯಾಂಕ್ ಉದ್ಯೋಗಿ ಆಗಿರುವ ಇವರು ಬ್ಯಾಂಕ್ ಆಫ್ ಮೈಸೂರಿನ ಬೆಂಗಳೂರು ವಲಯ ಕಚೇರಿಯ ಮುಖ್ಯಸ್ಥರಾಗಿ ನಿವೃತ್ತಿಯನ್ನು ಹೊಂದಿದರು. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾದ ಆಸಕ್ತಿ ಇರುವ ಶ್ರೀಯುತರು ತಮ್ಮ ಬಿಡುವಿನ ವೇಳೆಯಲ್ಲಿ ಸಣ್ಣ ಕಥೆಗಳ ಸಂಗ್ರಹ, ಸ್ವಾನುಭವದ ಕಥನ ಹೀಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. 'ಏಳು ಸಹೋದರಿಯರು ಮತ್ತು ಇಪ್ಪತ್ತೊಂದು ದಿನಗಳು' ಎಂಬ ಪುಸ್ತಕವು ಈಶಾನ್ಯ ರಾಜ್ಯಗಳ ಅವರ ಸ್ವ ಅನುಭವದ ಪ್ರವಾಸ ಕಥನವಾಗಿದೆ.
ಶ್ರೀ ಎಚ್ ಶ್ರೀಧರ ರಾವ್ ರವರು ಏಳು ಸಹೋದರಿಯರು 21 ದಿನಗಳು ಎಂಬ ಪುಸ್ತಕದಲ್ಲಿ ಭಾರತದ 'ಸೆವೆನ್ ಸಿಸ್ಟರ್ಸ್'ಎಂದೇ ಪ್ರಖ್ಯಾತವಾದ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ ತ್ರಿಪುರ ಮಣಿಪುರ ಮೇಘಾಲಯ ನಾಗಾಲ್ಯಾಂಡ್ ಮತ್ತು ಮಿಜೋರಾಂನ ವಿವಿಧ ತಾಣಗಳಿಗೆ ತಮ್ಮ ಗೆಳೆಯರು ಹಾಗೂ ಅವರ ಕುಟುಂಬದವರೊಂದಿಗೆ 21 ದಿನಗಳ ಕಾಲ ಕೈಗೊಂಡ ಪ್ರವಾಸದ ಅನುಭವದೊಂದಿಗೆ ಅಲ್ಲಿನ ಪರಿಸರ, ಐತಿಹಾಸಿಕ, ಭೌಗೋಳಿಕ, ಜನಜೀವನ ಪರಿಚಯ ಅಲ್ಲಿಯ ಜಾನಪದ ಸಂಸ್ಕೃತಿ ಗುಡ್ಡಗಾಡು ಬುಡಕಟ್ಟು ಜನಾಂಗಗಳ ಬಗ್ಗೆ ಧಾರ್ಮಿಕ ಹಬ್ಬಗಳ ಆಚರಣೆಗಳ ಬಗ್ಗೆ ರಸವತ್ತಾಗಿ ವಿವರಿಸಿದ್ದಾರೆ.
ನಮ್ಮ ದೇಶದ ಈಶಾನ್ಯ ಭಾಗದಲ್ಲಿರುವ ಹಾಗೂ ಬಾಂಗ್ಲಾದೇಶ ಚೀನಾ ಮಯನ್ಮಾರ್ ಮತ್ತು ಭೂತಾನ ದೇಶಗಳೊಡನೆ ಗಡಿಗಳನ್ನು ಹೊಂದಿರುವ ರಾಜ್ಯಗಳನ್ನು 'ಸೆವೆನ್ ಸಿಸ್ಟರ್ಸ್' ಎಂದು ಏಕೆ ಕರೆಯುತ್ತಾರೆ ಎಂಬ ಪ್ರಶ್ನೆಗೆ ಈ ಪುಸ್ತಕವನ್ನು ಓದಿದರೆ ಉತ್ತರ ಸಿಕ್ಕುತ್ತದೆ.
ತ್ರಿಪುರ ಭಾರತದ ರಾಜ್ಯಗಳಲ್ಲಿ ಮೂರನೆಯ ಸಣ್ಣ ರಾಜ್ಯ. ಈ ರಾಜ್ಯದ ಮೂರು ದಿಕ್ಕಿನಲ್ಲಿ ಬಾಂಗ್ಲಾದೇಶದ ಗಡಿ ಇದೆ. ಈ ರಾಜ್ಯದ ರಾಜಧಾನಿ ಅಗರ್ತಲಾ, ಅಗರು ಎಂಬ ಸುಗಂಧಕ್ಕೆ ಉಪಯೋಗಿಸುವ ಮರ ಈ ಪ್ರದೇಶದಲ್ಲಿರುವುದರಿಂದ ಈ ಪ್ರದೇಶಕ್ಕೆ ಅಗರ್ತಲಾ ಎಂದು ಕರೆಯುತ್ತಾರೆ. ಈ ರಾಜ್ಯದಲ್ಲಿನ ವಿವಿಧ ಬುಡಕಟ್ಟು ಮತ್ತು ಪಂಗಡಗಳ ಸಂಸ್ಕೃತಿ ಪದ್ಧತಿಯ ಬಗ್ಗೆ, ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳಿರುವ ಈ ರಾಜ್ಯದಲ್ಲಿ ಪ್ರಕೃತಿಯ ಆರಾಧನೆಯ ಪ್ರಾಧಾನ್ಯತೆಯ ಬಗ್ಗೆ, ಇಲ್ಲಿರುವ ತ್ರಿಪುರ ಸುಂದರಿ ದೇವಾಲಯ, ನೀರ್ ಮಹಲ್ ಅರಮನೆ, ಸಿಪಾಯಿ ಜಲವನ್ಯ ಪ್ರಾಣಿ ಅಭಯ ಅಭಯಾರಣ್ಯ, ಮಹಾರಾಜ ರಾಧಾಕ ಕಿಶೋರ್ ಮಾಣಿಕ್ಯನ ಆಡಳಿತದಲ್ಲಿದ್ದ ಆಂಗ್ಲರ ಪ್ರಭಾವದಿಂದ ಯುರೋಪಿಯನ್ ವಿನ್ಯಾಸದಲ್ಲಿ ನಿರ್ಮಿಸಿದ ಉಜ್ಜಯಂಥ ಅರಮನೆಯ ಬಗ್ಗೆ, ಬಾಂಗ್ಲಾದೇಶ ವಿಮೋಚನೆಯಲ್ಲಿ ಮಹತ್ತರ ಪಾತ್ರ ವಹಿಸಿದ 'ಲಾನ್ಸ್ ನಾಯಕ್ ಆಲ್ಬರ್ಟ್ ಎಕ್ಕ'ನ ಸ್ಮಾರಕ, ಪರಾಕ್ರಮ ಹಾಗೂ ಅವನ ದೇಶಭಕ್ತಿಯ ಬಗ್ಗೆ, ಒಂದು ಕೋಟಿಗೆ ಒಂದು ಕಡಿಮೆ ಕಲ್ಲಿನಿಂದ ಕೆತ್ತಿದ ಕೆತ್ತನೆಯಿಂದ ಕೂಡಿರುವ ಶೈವ ಸಂಪ್ರದಾಯಕ್ಕೆ ಸೇರಿದ ಉನಕೋಟಿ ಪುಣ್ಯ ಸ್ಥಳದ ಬಗ್ಗೆ ಅದಕ್ಕಿರುವ ಪುರಾಣ ಕಥೆಗಳೊಂದಿಗೆ ತ್ರಿಪುರದ ಪ್ರಸಿದ್ಧ ಸ್ಥಳಗಳ ಚಂದದ ವಿವರಣೆಯನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ.
ಒಂಬತ್ತು ಪರ್ವತಗಳಿಂದ ಆವರಿಸಲ್ಪಟ್ಟು ಮಧ್ಯದಲ್ಲಿರುವ ರತ್ನ ಹವಳಗಳ ಭೂಭಾಗ ಹೊಂದಿರುವ ಮಣಿಪುರ ರಾಜ್ಯವು 'ಲ್ಯಾಂಡ್ ಆಫ್ ಜೇಮ್ಸ್' ಎಂದೇ ಪ್ರಖ್ಯಾತವಾಗಿದೆ. ಇದನ್ನು ರತ್ನ ಹವಳ ಭೂಭಾಗ ಎನ್ನುತ್ತಾರೆ. ಈ ರಾಜ್ಯವು ತ್ರಿಪುರ ಮಿಜೋರಾಂ ನಾಗಾಲ್ಯಾಂಡ್ ಮೂರು ದಿಕ್ಕುಗಳಿಂದ ಆವೃತವಾಗಿದೆ. ಪೂರ್ವ ಭಾಗದಲ್ಲಿ ಮಯನ್ಮಾರ್ ದೇಶದ ಗಡಿಯನ್ನು ಹೊಂದಿದೆ. ಮಣಿಪುರದ ಚಿತ್ರಣವನ್ನು ಹಾಗೂ ನಾಗಕುಕಿಗಳ ನಡುವಿನ ಜನಾಂಗೀಯ ಹೋರಾಟದಿಂದಾಗಿ ರಣರಂಗವಾಗಿದರ ಬಗ್ಗೆ ರತ್ನ ಹವಳ ಎಂಬ ಅನ್ವರ್ಥನಾಮಕ್ಕೂ ಶಾಂತಿ ಪ್ರಿಯರು ಎಂಬ ಹೆಸರಿಗೂ ಕಳಂಕ ಉಂಟಾಗಿದರ ಬಗ್ಗೆ ಲೇಖಕರು ಇಲ್ಲಿ ಸೂಕ್ಷ್ಮವಾಗಿ ಹಲವು ಮಜಲುಗಳಲ್ಲಿ ವಿಶ್ಲೇಷಿಸಿದ್ದಾರೆ.
ನಾಗಾಲ್ಯಾಂಡ್ ಅನ್ನು ಪೂರ್ವದ ಸ್ವಿಡ್ಜರ್ಲ್ಯಾಂಡ್ ಎಂದು ಹೇಳುತ್ತಾರೆ. ಇಲ್ಲಿನ ವೈವಿಧ್ಯಮಯ ಪ್ರಾಕೃತಿಕ ಸಾಂಸ್ಕೃತಿಕ ಪರಿಸರ ಸಂಪನ್ಮೂಲಗಳ ಬಗ್ಗೆ ಹಾಗೂ ಕಾಡು ಬೆಟ್ಟ ಕಣಿವೆ ಮತ್ತು ಜಲಪಾತಗಳ ಸೌಂದರ್ಯದ ಚಿತ್ರಣವನ್ನು ಲೇಖಕರು ಮನಮೋಹಕವಾಗಿ ಈ ಪುಸ್ತಕದಲ್ಲಿ ತಿಳಿಸಿದ್ದಾರೆ.
ನಾಗ ಸಾಧುಗಳ ಮೂಲ ಸ್ಥಳ ನಾಗಾಲ್ಯಾಂಡ್. ಲ್ಯಾಂಡ್ ಆಫ್ ಫೆಸ್ಟಿವಲ್ಸ್ ಎಂದು ಕರೆಯಲ್ಪಡುವ ನಾಗಾಲ್ಯಾಂಡ್ ನಲ್ಲಿ ಶೇಕಡ 88 ಭಾಗ ಈಗ ಕ್ರೈಸ್ತ ಧರ್ಮೀಯರು ವಾಸಿಸುತ್ತಿದ್ದಾರೆ. ನಾಗ ಸಾಧುಗಳು ನಾಗಾಲ್ಯಾಂಡ್ ಗೆ ಬರುವಂತಿಲ್ಲ. ಭಾರತದೊಳಗೆ ಭಾರತದ ನಾಗರಿಕರು ಬರುವಂತಿಲ್ಲ ಎಂಬ ಕಾನೂನು ಏಕೆ ಬಂತು ಅದರ ಹಿನ್ನೆಲೆಯ ಬಗ್ಗೆ ಲೇಖಕರು ಅರಿವು ಮೂಡಿಸಿದ್ದಾರೆ.
'ಲ್ಯಾಂಡ್ ಆಫ್ ದಿ ರೈಸಿಂಗ್ ಸನ್' ಎಂದೇ ಪ್ರಸಿದ್ಧಿ ಹೊಂದಿದ ಅರುಣಾಚಲ ಪ್ರದೇಶದ ಅರಣ್ಯ ಸಂಪತ್ತು, ಜಲ ಸಂಪತ್ತು ಮನಮೋಹಕವಾದ ಪ್ರಾಕೃತಿಕ ಸಂಪತ್ತು, ಸಸ್ಯ ರಾಶಿ ಅವುಗಳ ಸೌಂದರ್ಯ ಇಲ್ಲಿನ ವಿವಿಧ ಬುಡಕಟ್ಟು ಜನಾಂಗಗಳ ಬಗ್ಗೆ, ಆ ರಾಜ್ಯದಲ್ಲಿ ಆಡುವ 50ಕ್ಕೂ ಮಿಗಿಲಾದ ಭಾಷೆಯ ಬಗ್ಗೆ ಅಲ್ಲಿಯ ರಿವಾಜು ಹಾಗೂ ಸಂಸ್ಕೃತಿಯ ಬಗ್ಗೆ ಅರುಣಾಚಲ ಪ್ರದೇಶದ ಪ್ರಮುಖ ಪ್ರವಾಸ ಸ್ಥಳಗಳ ಬಗ್ಗೆ ಚಂದದ ಚಿತ್ರಣವು ಈ ಪುಸ್ತಕದಲ್ಲಿ ಕಾಣ ಸಿಗುತ್ತದೆ.
'ಸ್ಕಾಟ್ಲೆಂಡ್ ಆಫ್ ದಿ ಈಸ್ಟ್' ಬ್ರಿಟಿಷರು ಕರೆಯುತ್ತಿದ್ದ ಮೇಘಾಲಯವು ಬೆಟ್ಟ ಗುಡ್ಡಗಳಿಂದ ಖನಿಜ ಸಂಪತ್ತಿನಿಂದ ಕೂಡಿದೆ. ಮೇಘಾಲಯವು ದಕ್ಷಿಣ ಮತ್ತು ಪಶ್ಚಿಮ ಗಡಿಯನ್ನು ಬಾಂಗ್ಲಾದೇಶದೊಂದಿಗೆ ಹಂಚಿಕೊಂಡಿದೆ. ಶೇಕಡ 70ಕ್ಕೂ ಹೆಚ್ಚಿನ ಅರಣ್ಯ ಪ್ರದೇಶವನ್ನು ಹೊಂದಿದೆ. ಇಲ್ಲಿನ ಬುಡಕಟ್ಟು ಜನಾಂಗದವರು ಅರಣ್ಯ ರಕ್ಷಿಸುತ್ತಿರುವ ರೀತಿ ಇವರ ಪ್ರಕೃತಿ ಪ್ರೇಮ ವನ್ನು ಲೇಖಕರು ಖುದ್ದಾಗಿ ನೋಡಿ ವಿಮರ್ಶಿಸಿದ್ದಾರೆ. ಹಾಗೆಯೇ ಅವರು ಇಲ್ಲಿ ನೋಡಿದ ಪ್ರಸಿದ್ಧ ಸ್ಥಳಗಳ ಬಗ್ಗೆ ವಿವರಣೆ ನೀಡುತ್ತಾ ಒಮ್ಮೆಯಾದರೂ ಈ ಭಾಗಗಳಿಗೆ ಭೇಟಿ ನೀಡಬೇಕು ಎನಿಸುವ ಹಾಗೆ ಈ ಪ್ರದೇಶಗಳ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.
ಇನ್ನು ಏಳು ಸಹೋದರಿಯರಲ್ಲಿ ಕೊನೆಯ ಸಹೋದರಿಯಾದ ಮಿಜೋರಾಂ ನ ದಟ್ಟ ಕಾಡು ಆಕರ್ಷಣೀಯವಾದ ನದಿ ಜಲಪಾತಗಳು ಸುಮಾರು 650 ಜಾತಿಯ ವಿವಿಧ ಪಕ್ಷಿಗಳ ಬಗ್ಗೆ ಪ್ರಾಕೃತಿಕ ಹರಿದ್ವರ್ಣದ ಬಗ್ಗೆ ಅಲ್ಲಿಯ ಜನರ ಜೀವನ, ಅಡಿಗೆ, ಉಡುಗೆ ತೊಡುಗೆ ,ಸಂಪ್ರದಾಯ, ಗುಡಿ ಕೈಗಾರಿಕೆಗಳ ಬಗ್ಗೆ ಪರಿಚಯಿಸಿದ್ದಾರೆ
ಅಸ್ಸಾಂನ ಕಾಮಾಕ್ಯ ದೇವಸ್ಥಾನ ಅದರ ಪೌರಾಣಿಕ ಹಿನ್ನೆಲೆ ಅಲ್ಲಿಯ ಆಚರಣೆ ಬಗ್ಗೆ ಹಾಗೂ ಬ್ರಹ್ಮಪುತ್ರ ನದಿಯ ನಡುಗಡ್ಡೆಯಲ್ಲಿರುವ 'ಉಮಾನಂದ ' ದೇವಾಲಯಕ್ಕೆ ಹೋಗಲು ನದಿ ದಾಟಲು ಸರ್ಕಾರವೇ ನಿಯಮಿತ ದರದಲ್ಲಿ ದೋಣಿ ಪ್ರಯಾಣವನ್ನು ಏರ್ಪಡಿಸಿದ್ದರೂ, ಪ್ರೈವೇಟ್ ಬೋಟ್ ನವರು ದುಬಾರಿಯ ಹಣವನ್ನು ಬೇಡಿಕೆ ಇಟ್ಟು ಕಾಡಿಸಿದ ಪರಿಯನ್ನು, ಹಣಕ್ಕಾಗಿ ಬ್ರಹ್ಮಪುತ್ರ ನದಿಯಷ್ಟೇ ವಿಶಾಲವಾಗಿ ಮೋಸದ ಜಾಲ ಹಬ್ಬಿರಬಹುದೋ ಏನೋ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರವಾಸ ದುದ್ದಕ್ಕೂ ಲೇಖಕರು ಕಂಡಂತಹ ಜಾಗತಿಕ ಮಹಾಯುದ್ಧ ಗಳಲ್ಲಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ವೀರ ಯೋಧರ ಸ್ಮಾರಕ, ಸಿದ್ಧಾಂತ ಸಂಘಟನೆಗೆ ಸೇರಿದ ವಾಹನಗಳ ಕಿರಿಕಿರಿ, ಪ್ರವಾಸಿ ಏಜೆನ್ಸಿಗಳ ಕಾರ್ಯನಿರ್ವಹತೆ, ಪ್ರಾಮಾಣಿಕತೆ ಆಯಾ ಪ್ರದೇಶದ ಆಹಾರ ವೈವಿಧ್ಯತೆ, ಪ್ರವಾಸದ ಉದ್ದಕ್ಕೂ ತಮಗಾದ ಅನುಭವ ತಾವು ಸುಖಮಯವಾಗಿ ಪ್ರವಾಸವನ್ನು ಮುಗಿಸಿದ ವಿವರಗಳನ್ನು ಸುಂದರ ಚಿತ್ರದೊಂದಿಗೆ ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
'ಸೆವೆನ್ ಸಿಸ್ಟರ್ಸ್ ' ಎನಿಸಿಕೊಂಡ ಈಶಾನ್ಯ ರಾಜ್ಯಗಳಿಗೆ ಪ್ರವಾಸ ಹೋಗಲು ಇಚ್ಛಿಸುವವರಿಗೆ ಈ ಪುಸ್ತಕವು ಬಹಳ ಉಪಯೋಗವಾಗುತ್ತದೆ ಎಂದು ನನ್ನ ಅನಿಸಿಕೆ.
ಈಶಾನ್ಯ ರಾಜ್ಯಗಳ ಬಗ್ಗೆ ತಿಳಿದುಕೊಳ್ಳಲು ಇದು ಒಂದು ಒಳ್ಳೆಯ ಪುಸ್ತಕ ಈ ಭಾಗಕ್ಕೆ ಪ್ರವಾಸ ಹೋಗುವವರು ಇಲ್ಲಿಯ ವಿಚಾರಧಾರೆಯನ್ನು ತಿಳಿದುಕೊಳ್ಳಲು ಈ ಪುಸ್ತಕವು ಉತ್ತಮವಾದ ಕೈಪಿಡಿ ಯಾಗಬಲ್ಲದು. ನಿಮ್ಮೆಲ್ಲರ ಗ್ರಂಥಾಲಯದಲ್ಲಿ ಈ ಹೊತ್ತಗೆ ಇರಲಿ.
ತಮ್ಮ ಪ್ರವಾಸ ಸ್ಮರಣೀಯಯವಾಗಿರಬೇಕೆಂದು ಬಯಸುವ ಪ್ರವಾಸಿಗರಿಗೆ ಶ್ರೀಧರ ರಾವ್ ರವರ ಪ್ರವಾಸದ ಒಡನಾಡಿಗಳ ನಡುವಣ ಸಾಮರಸ್ಯ ಸೌಹಾರ್ದತೆ ಒಂದು ಅನನ್ಯ ಮಾದರಿ.
“ಪ್ರತಿಯೊಬ್ಬನಲ್ಲೂ ಶಿವ ಇದ್ದಾನೆ ಅವನನ್ನು ಜಾಗೃತ ಗೊಳಿಸಬೇಕೆಂಬುದೇ ಕಾದಂಬರಿಯ ಮೂಲ ಉದ್ದೇಶ. ಸತ್ಕರ್ಮಗಳಿಂದ ದೈ...
“ನಾಯಕನ ಪರಿಸ್ಥಿತಿ 'ಕಾಂತಾರ' ಚಲನಚಿತ್ರವನ್ನು ನೋಡಿ, ಈಗ ಅದರ ಚಿತ್ರೀಕರಣ ನಡೆದ ಜಾಗಕ್ಕೆ ಹೋಗಿ ನೋಡಿದ...
“ಹೆಣ್ಣುತನವನ್ನು ಗಂಡುತನದ ದ್ವಂದ್ವವಾಗಿ ನೋಡಲಾಗುತ್ತದೆ. ಆದರೆ ನಿಜವಾದ ಭೇದಗಳಿವೆಯೇ ಎಂಬುದಕ್ಕೆ ಆಧ್ಯಾತ್ಮಿಕವಾ...
©2025 Book Brahma Private Limited.