ತುಳು ಭಾಷೆಯ ನುಡಿಗಟ್ಟುಗಳು ಉದ್ದಕ್ಕೂ ಎದುರಾಗುತ್ತವೆ


“ನಾಯಕನ ಪರಿಸ್ಥಿತಿ 'ಕಾಂತಾರ' ಚಲನಚಿತ್ರವನ್ನು ನೋಡಿ, ಈಗ ಅದರ ಚಿತ್ರೀಕರಣ ನಡೆದ ಜಾಗಕ್ಕೆ ಹೋಗಿ ನೋಡಿದಾಗಿನ ಅನುಭವವನ್ನು ಹೋಲುತ್ತದೆ,” ಎನ್ನುತ್ತಾರೆ ಬಿ. ಜನಾರ್ಧನ ಭಟ್‌ ಅವರು ರಾಜೇಶ್‌ ಕುಮಾರ್‌ ಕಲ್ಯಾ ಅವರ “ಈಗಲ್ಸ್‌ ಲೈನ್‌” ಕೃತಿ ಕುರಿತು ಬರೆದ ವಿಮರ್ಶೆ.

ರಾಜೇಶ್ ಕುಮಾರ್ ಕಲ್ಯಾ ಅವರು ವೃತ್ತಿಯಲ್ಲಿ ಇಂಜಿನಿಯರ್. ಪರಿಸರ ಪ್ರಿಯರು. ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿ. ಅವರು ತಮ್ಮ ಪ್ರಥಮ ಕಾದಂಬರಿ 'ಈಗಲ್ ಲೈನ್' ಅನ್ನು ತೇಜಸ್ವಿಯವರಿಗೆ ಅರ್ಪಿಸಿದ್ದಾರೆ. ಅವರ ಈ ಕಾದಂಬರಿಯೂ ದಟ್ಟವಾಗಿ ತೇಜಸ್ವಿಯವರ ಪ್ರಭಾವವನ್ನು ತೋರಿಸುತ್ತದೆ.

ಕಾದಂಬರಿಯ ನಾಯಕ ಪರಿಸರಾಸಕ್ತ. ತನ್ನ ಹಿರಿಯರು ಆಸ್ತಿಯನ್ನು ಹೊಂದಿದ್ದ ಮಾಳದ ಸಮೀಪದ (ಉಡುಪಿ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಕ್ಕೆ ತಾಗಿಕೊಂಡಂತಿದೆ) ಹಳ್ಳಿಗೆ ಅಧ್ಯಯನಕ್ಕೆಂದು ಬರುತ್ತಾನೆ. ಪಶ್ಚಿಮ ಘಟ್ಟಗಳ ಉಪಯುಕ್ತ ಸಸ್ಯಗಳ ಕುರಿತಾದ ಪಿಎಚ್ಚಿ ಅಧ್ಯಯನ ಅವನದು. ಊರಲ್ಲಿ ಅವನಿಗೆ ಆಳುಗಳಾಗಿ ದೊರಕುವ ಮೊರೋಣಿ ಮತ್ತು ಮಾಣಿಗ ಎಂಬ ಹಳ್ಳಿಗರು ಹಳ್ಳಿಯ ಬದುಕಿನ ಅಗಾಧ ಜ್ಞಾನ ಹೊಂದಿರುವವರು. - ಬೇಟೆಯಲ್ಲಿ ನುರಿತವರು ಮತ್ತು ಕಾಡಿನ ಸಂಪತ್ತುಗಳ ಗುಟ್ಟುಗಳನ್ನು ಅರಿತವರು.

ನಾಯಕನ ದಿನಚರಿಯಲ್ಲಿ ಹಳ್ಳಿಯ ಮತ್ತು ಕಾಡಿನ ವಿಸ್ಮಯಗಳು ತೆರೆದುಕೊಳ್ಳುವುದೇ ಕಥಾನಕದ ಪ್ರಯಾಣಕ್ಕೆ ಇಂಧನವಾಗಿದೆ. ಮಾಳ ಪರಿಸರದ ಕಾಡು, ಹಳ್ಳಿಗರ ಮುಗ್ಧತೆ, ಅವರ ಸರಳ ಬದುಕು, ಕುಡಿತ, ಹುಂಬತನ, ಒಂದೆರಡು ದಶಕಗಳ ಹಿಂದಿನದೆನ್ನಬಹುದಾದ ಜನರ ಜೀವನ ಕ್ರಮ, ನಂಬಿಕೆಗಳಿಗೆ ಕಥಾನಾಯಕ ಎದುರಾಗುತ್ತಾ ಹೋಗುತ್ತಾನೆ. ಅವನ ಮೂಲಕ ಆಧುನಿಕ ಪರಿಸರಪ್ರೇಮಿ ಮನಕ್ಕೊಂದು ಹಳೆಯ ಬದುಕಿಗೆ ಮುಖಾಮುಖಿಯಾಗುತ್ತದೆ.

ಇಲ್ಲಿ ಚಿತ್ರಿಸಿರುವ ಕೆಲವು ವೈಚಿತ್ರ್ಯಗಳು ನಿಜವಾಗಿ ಇವೆಯೆಂದು ಲೇಖಕರು ನನ್ನ ಮಾಹಿತಿಗಾಗಿ ತಿಳಿಸಿದ್ದಾರೆ. ಉದಾಹರಣೆಗೆ- ಹುಲಿಯನ್ನು ಖೆಡ್ಡದಂತಹ ಬೇಟೆಯಲ್ಲಿ ಬೋನಿನಂತಹ ಕಲ್ಲಿನ ರಚನೆಯೊಳಗೆ ಕೆಡವಿ ಕೊಲ್ಲುವ ಕ್ರಮ. ಇದರ ಕುರುಹು ಇನ್ನೂ ಕಾಡಿನ ನಡುವೆ ಇದೆಯಂತೆ. ಹುಲಿಕೊಂದ ಹಳ್ಳಿಗರು ಅದರ ಚರ್ಮ ಮತ್ತು ಉಗುರುಗಳನ್ನು ತಮಿಳುನಾಡಿನ ಮಧ್ಯವರ್ತಿಗಳಿಗೆ ಮಾರುತ್ತಾರೆ. ಈ ಹಳ್ಳಿಗರು ಹುಲಿನಾಶ ಮಾಡಿ ಮೂರು ಕಾಸು ಪಡೆದು ಹಿಂದಿನಂತೆಯೆ ಗುಡಿಸಲುಗಳಲ್ಲಿ ಬಡವರಾಗಿ ಬಾಳುತ್ತಿರುವುದನ್ನು ನಾಯಕ ಗಮನಿಸುವುದು ಒಟ್ಟು ಕಾದಂಬರಿಯ ಆಶಯವನ್ನೂ ಸೂಚಿಸುವಂತಿದೆ.

ಕಾದಂಬರಿಯ ಕೊನೆಯಲ್ಲಿ ಪಿಎಚ್ಚಿ ಪಡೆದ ನಾಲ್ಕು ವರ್ಷಗಳ ನಂತರ ನಾಯಕ ಮತ್ತೊಮ್ಮೆ ಆ ಊರಿಗೆ ಬಂದಾಗ ಆ ಪ್ರದೇಶವೂ ಆಧುನಿಕ ತೋಟಗಾರಿಕೆಗೆ ಬಲಿಯಾಗಿದೆ ಮತ್ತು ಮೊರೋಣಿಯಾಗಲಿ, ಮಾಣಿಗನಾಗಲಿ ಆ ಪರಿಸರದಲ್ಲಿ ಉಳಿದಿಲ್ಲ. ನಾಯಕನ ಪರಿಸ್ಥಿತಿ 'ಕಾಂತಾರ' ಚಲನಚಿತ್ರವನ್ನು ನೋಡಿ, ಈಗ ಅದರ ಚಿತ್ರೀಕರಣ ನಡೆದ ಜಾಗಕ್ಕೆ ಹೋಗಿ ನೋಡಿದಾಗಿನ ಅನುಭವವನ್ನು ಹೋಲುತ್ತದೆ!

ನಿರೂಪಣೆ ಆಕರ್ಷಕವಾಗಿದೆ. ತುಳು ಭಾಷೆಯ ನುಡಿಗಟ್ಟುಗಳು ಉದ್ದಕ್ಕೂ ಎದುರಾಗುತ್ತವೆ. ಬೇರೆ ಪ್ರದೇಶದವರಿಗೆ ಅವುಗಳ ವಿವರಣೆ ಇದ್ದರೆ ಉಪಯುಕ್ತವಾದೀತು. ಮುಂದಿನ ಮುದ್ರಣದಲ್ಲಿ ಅದರ ಬಗ್ಗೆ ಗಮನಹರಿಸಬಹುದು.

 

MORE FEATURES

ಕನ್ನಡದ ಆ ಧ್ವನಿ ಯಾರಿಗೆ ತಾನೇ ಗೊತ್ತಿಲ್ಲ..

17-04-2025 ಬೆಂಗಳೂರು

"ಇವತ್ತಿನ ನಮ್ಮ ಬದುಕಿನ ಅದೆಷ್ಟೋ ಗೊಂದಲಗಳಿಗೆ , ಪ್ರಶ್ನೆಗಳಿಗೆ, ನಿರಂತರವಾಗಿ ಬಾಧಿಸುವ ಸೋಲುಗಳಿಗೆ, ಮಾನಸಿಕ ವೇ...

ಪಾಟೀಲರು ಭಾಷೆಯ ಬಳಕೆಯಲ್ಲಿ ಅಪರೂಪವಾದ ಅನನ್ಯತೆಯನ್ನು ತೋರುತ್ತಾರೆ

17-04-2025 ಬೆಂಗಳೂರು

"ಇಡೀ ಸಂಕಲನದಲ್ಲಿ ಮತ್ತೆ ಮತ್ತೆ ಓದಿಸಿಕೊಳ್ಳುವ ಪ್ರಬಂಧ, ಅಹಂ ಬ್ರಹ್ಮಾಸ್ಮಿ. ಗಹನವಾದದ್ದನ್ನು ಸರಳವಾಗಿ ಹೇಳಿ, ಮ...

ಕೊನೆಗೆ ಎಲ್ಲರೂ ಸೇರುವುದು ಮಣ್ಣನ್ನೇ

16-04-2025 ಬೆಂಗಳೂರು

"ದ್ವೀಪವ ಬಯಸಿ ಕನ್ನಡದಲ್ಲಿ ಇದೊಂದು ವಿಶೇಷವಾದ ಕಾದಂಬರಿ. ಕನ್ನಡ ಸಾಹಿತ್ಯ ಲೋಕದಲ್ಲಿ ಕಾರ್ಪೊರೇಟ್ ಜಗತ್ತು ಕುರಿತ...