“ಹೆಣ್ಣುತನವನ್ನು ಗಂಡುತನದ ದ್ವಂದ್ವವಾಗಿ ನೋಡಲಾಗುತ್ತದೆ. ಆದರೆ ನಿಜವಾದ ಭೇದಗಳಿವೆಯೇ ಎಂಬುದಕ್ಕೆ ಆಧ್ಯಾತ್ಮಿಕವಾಗಿ ಉತ್ತರ ಸಿಕ್ಕಿದೆ,” ಎನ್ನುತ್ತಾರೆ ಆರ್. ತಾರಿಣಿ ಶುಭದಾಯಿನಿ ಅವರು ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಕೃತಿಗೆ ಬರೆದ ಮುನ್ನುಡಿ.
ಚನ್ನಪ್ಪ ಅಂಗಡಿ ಅವರು ಕವಿ. ಕವಿಯಾದವನಿಗೆ ಒಳ್ಳೆಯ ಸದ್ದು, ರುಚಿ, ಸ್ಪರ್ಶ, ನೋಟ, ಗಂಧಗಳಿಗೆ ಸ್ಪಂದಿಸುವ ಗುಣವೇ ಪ್ರಧಾನವಾಗಿರುತ್ತದೆ ಎನ್ನುವುದು ಕಾವ್ಯ ಬಲ್ಲವರಿಗೆ ಗೊತ್ತು. ಆದರೆ ಕಾವ್ಯ ಎನ್ನುವುದು ಬರಿಯ ಇಂದ್ರಿಯ ವಿಹಾರಿಯೇ? ಎಂದರೆ ಅದನ್ನು ಮೀರಿದ ಇನ್ನೇನೊ ಇದೆ ಎನ್ನುವುದನ್ನು ಬೆನ್ನು ಹತ್ತುವುದು ಗೊತ್ತು. 'ರಸದೇವಗಂಗೆಯಲಿ ಮೀನಾಗುವ' ಎನ್ನುವ ಹಂಬಲ ಕವಿತೆಯದು. ನೆಲದವರಾಗಿ ನೆಲವ ಮೀರಿ ಹೋಗುವ ವಾಂಛ, ವ್ಯಾಮೋಹಗಳ ಈ ಪರಿಗೆ ಏನು ಹೇಳುವುದು? ಕವಿತೆ ಸುಳಿದಾಡುವ ಈ ಮೂರ್ತ ಮತ್ತು ಅಮೂರ್ತ ಲೋಕಗಳ ರೀತಿಯೇ ವಿಚಿತ್ರವಾದುದು. ಇದೊಂದು ಲೋಲಕ ಇದ್ದಂತೆ. ಮೂರ್ತದಿಂದ ಅಮೂರ್ತಕ್ಕೆ; ಅಮೂರ್ತದಿಂದ ಮೂರ್ತಕ್ಕೆ ಹೋಗುತ್ತಾ ಬರುತ್ತಾ ಇರುವುದು. ಕವಿಯಾದವನಿಗೆ ಈ ಎರಡೂ ವಾಸ್ತವಗಳನ್ನು ಹಿಡಿಯಬೇಕಾದ ಸವಾಲು ಇರುತ್ತದೆ. ಮುಕ್ಕಾಲು ಮೂರು ಪಾಲು ತುಂಬಿಕೊಂಡಿರುವ ಜಗತ್ತಿನ ಬಗ್ಗೆ ಮಾತ್ರ ಬರೆದರೆ ಅವನು ಬರಿಯ ಸಾಮಾಜಿಕ ಮಾತ್ರ ಆಗಿ ನಿಲ್ಲಬಲ್ಲ. ತಾನು ನೆಚ್ಚಿದ ಲಹರಿಯ ಹಿಂದೆ ಹೋದರೆ ಕಲ್ಪನಾಲೋಕದ ವಿಹಾರಿ ಮಾತ್ರ ಆಗಿ ಭಾವುಕನಾಗಿ ನಿಲ್ಲಬಲ್ಲ. ಈ ಸೂಕ್ಷ್ಮ ನಮ್ಮ ಕಾಲಘಟ್ಟದ ಕವಿಗಳಿಗೆ ಮತ್ತೊಮ್ಮೆ ಮಗದೊಮ್ಮೆ ಎದುರಾಗುವ ಸಂಗತಿ. ಪ್ರಸ್ತುತ ಸಮಾಜದಲ್ಲಿ ಸಾಮಾಜಿಕತೆಯು ಮಿತಿಮೀರಿ ನಮ್ಮೊಳಗನ್ನು ಪ್ರವೇಶಿಸಿ, ಪಟ್ಟಾಗಿ ಕೂತು ತೀರ ಹತ್ತಿರದಲ್ಲಿ ಹೆಡೆ ಎತ್ತಿರುವ ಅದರ ನಿಜವನ್ನು ಮನಗಾಣುವುದು ಮೊದಲ ಕೆಲಸ. ವಾಸ್ತವವನ್ನು ಅರಿಯುವ ತತ್ವಗಳು ಅಪಾರ ಸಂಖ್ಯೆಯಲ್ಲಿವೆ. ಬುದ್ಧ, ಅಲ್ಲಮ, ಬಸವ, ಗಾಂಧಿ ಹಾಗೂ ಇವರಲ್ಲದೆ ಅನೇಕ ತತ್ವಪದಕಾರರು ನಿಜ ಮತ್ತು ಭ್ರಮೆಗಳ ಈ ಅಪಾಯದ ಬಗ್ಗೆ ಎಚ್ಚರಿಸಿದ್ದಾರೆ. ಆದರೆ ಈ ತತ್ವದ ಪಾಕವನ್ನು ಹೇಗೆ ಕಂಡುಕೊಳ್ಳಬೇಕೆನ್ನುವುದು, ಹೊಸ ಅರಿವನ್ನು ಸಂಪಾದಿಸಿಕೊಳ್ಳುವುದು ಈ ಹೊತ್ತಿನ ತುರ್ತು. ಮುಂದುವರೆದು ಕವಿತೆಯ ಮೂಲಕ ಋಜುಮಾರ್ಗವನ್ನು ಕಂಡುಕೊಳ್ಳಬೇಕೆನ್ನುವ ಇಚ್ಛೆ. ಇದನ್ನು ಧ್ಯಾನಿಸುವಂತೆ ಚನ್ನಪ್ಪ ಅಂಗಡಿ ಅವರ ಪ್ರಸ್ತುತ ಸಂಕಲನದ ಕವಿತೆಗಳು ಬಂದಿವೆ. ನೇರವಾಗಿ ಕೇಳುವ ಪ್ರಶ್ನೆಗಳನ್ನು ಹೊತ್ತ ಸಾಲುಗಳು ಇಂತಿವೆ:
ಆಧ್ಯಾತ್ಮ ಅಡ್ಡಲಾಗಿ ಬರುವಲ್ಲಿ ತಾದಾತ್ಮ ತಕರಾರು ತೆಗೆಯುವಲ್ಲಿ ಬುದ್ದನೊಂದಿಗೆ ಗುದ್ದಾಡದೆ ಅಲ್ಲಮನೊಂದಿಗೆ ಲಲ್ಲೆಗರೆಯದೇ ಕವಿಯೆನ್ನಲುಂಟೆ? ಕವಿತೆಯಾಗಲುಂಟೆ? (ಶ್ರ
ಹೀಗೆ ಕವಿತೆ ಎನ್ನುವುದು ಮೊದಲು ಆಗಬೇಕಾದರೆ ಅರಿವಿನ ಸ್ಪರ್ಶ ಪಡೆದಿರಬೇಕು. ಇದು ಬುದ್ಧ ಮತ್ತು ಅಲ್ಲಮರಿಂದ ಪಡೆದುಕೊಂಡರೆ ಸಾಕು ಎನ್ನುವುದಲ್ಲ. ಬದಲಾಗಿ ಅರಿವಾಗುವುದಷ್ಟು ಸರಳವೆ? ಆಗುವುದಷ್ಟು ವಿರಳವೆ? ಜಗದಗಲ ಒಬ್ಬನೆ! ಅವನೊಬ್ಬನೇ ಏಕೆ?/ ಮತ್ತೊಬ್ಬನೇಕೆ? ಬುದ್ಧನೊಬ್ಬ ಸಾಕೆ?' (ಆಸವ) ಈ ಪ್ರಶ್ನೆ ಮುಖ್ಯವಾಗಿರುವಂತದ್ದು. ವ್ಯಕ್ತಿಯಾಗಿ ಬೆಳೆಯುವುದು ವೈಯಕ್ತಿಕ ಸಾಧನೆಯೇ ಎನ್ನುವುದನ್ನು ತಿಳಿಸುವಂತಿವೆ ಈ ಸಾಲುಗಳು. ಅಡಿಗರ 'ಈ ಸಾಮಾನ್ಯನಂತೆ ನಾನು' ವ್ಯಂಗ್ಯ ಅರ್ಥ ಮಾಡಿಕೊಂಡವರಿಗೆ ಇದನ್ನು ಬಿಡಿಸಿ ಹೇಳಬೇಕಿಲ್ಲ. ಚನ್ನಪ್ಪ ಅವರ ಈ ಸಂಕಲನದ ಬಹುತೇಕ ಕವಿತೆಗಳು ಹಿಂದಣ ಅರಿವನ್ನು ಕಡೆಗಣಿಸದೆ ತನ್ನ ಸತ್ವವನ್ನು ನಿರೂಪಿಸಿಕೊಳ್ಳಬೇಕಾದ ತಿಳಿವಳಿಕೆಯನ್ನು ನೆಚ್ಚಿಕೊಂಡಿವೆ. ಇದಕ್ಕೆ ಉಪಾಧಿಯಾದುದು ಅಹಂಕಾರ ಎನ್ನುವುದನ್ನು ಕವಿ ಕಂಡುಕೊಂಡಿದ್ದಾರೆ. ಹಳೆಯ ತಿಳಿವಳಿಕೆಯೇ ಮತ್ತೊಮ್ಮೆ ಮಗದೊಮ್ಮೆ ಇಲ್ಲಿ ಬರುತ್ತದೆ. ಹಿರಿಮೆಯೆಂಬುದು ಮಹತ್ತು ಎಂಬ ತಿಳಿವಳಿಕೆ ಮೂಢವಾದುದು. ಹಿರಿಮೆ ಎನ್ನುವುದು ಅಹಂಕಾರವನ್ನು ಬೆಳೆಸಬಲ್ಲುದಲ್ಲದೆ ಇನ್ನೇನನ್ನೂ ಅಲ್ಲ. (ಬಲವ ಹೇರಲು ಬಂದರೆ/ ಉದಾಸೀನಕೆ ವಾಸಿಯಾಗದ ರೋಗ: ಅಹಂಕಾರ),
ಕೀರ್ತಿಶನಿ ಅವಡುಗಚ್ಚಿ ಸಿದ್ಧಿಪ್ರಸಿದ್ದಿ ಕಿವಿಕಚ್ಚಿ ಹೆಸರು ಮಾಡುವ ತವಕದಲಿ ಕೆಸರಲಿ ಹೂತು ಇಂದ್ರಚಂದ್ರ ಉಪಾಧಿಗೆ ಮತ್ತೆಮತ್ತೆ ಸೋತು ಶ್ರೇಷ್ಠತೆಯ ವ್ಯಸನದಲಿ ಭ್ರಷ್ಟಗೊಂಡ ಬುದ್ದಿಯಲಿ ದೂರವಾದಂತೆಲ್ಲ ಬೆಳಕು ಲಂಬಿಸುವುದು ಕರಿನೆರಳು (ಸಂಚಭೂತಗಳು)
ಹಾಗಾದರೆ ಇದಕ್ಕೆ ಉಪಾಯ ಏನು? ಅಹಂಕಾರ ನಿರಸನಕ್ಕೆ ದಾರಿ ಎಲ್ಲಿ? ಇದಕ್ಕೆ ಸಣ್ಣ ಸಂಗತಿಗಳಲ್ಲಿ ಹೊಳೆಯುವ ಹೊಳಹುಗಳೇ ಎಂದು ಕವಿತೆ ಅನ್ನಿಸುತ್ತದೆ. ಈ ಸಂಕಲನದಲ್ಲಿ 'ಹಮ್ಮಿಂಗ್ ಬರ್ಡ್' ಎನ್ನುವ ಕವಿತೆ ಕವಿಯ ನಿಲುವನ್ನು ಎತ್ತಿ ಹೇಳುವಂತಿದೆ. ಅನೇಕ ಬಾರಿ ದೊಡ್ಡದು ಸ್ಥಾವರ. ಪ್ರತಿ ಕ್ಷಣದಲ್ಲಿ ಆಗುವ ಜಂಗಮವೇ ತಿಳಿವಳಿಕೆ ಎನ್ನುವುದನ್ನು ಕವಿತೆ ಸೊಗಸಾಗಿ ಧ್ವನಿಸುತ್ತದೆ.
ಅರಿವು ಎನ್ನುವುದು ಈಗಾಗಲೇ ದತ್ತವಾಗಿರುವಂತೆ ಸಹಜ ಬದುಕು. ನಿಜಕ್ಕೆ ಅಂಟಿಕೊಂಡ ಮಾಯಾಕಟ್ಟುಗಳನ್ನು ಕಳಚಿ ನೋಡಲು ಸಾಧ್ಯವಾಗುವ ಒಳನೋಟವನ್ನು ರೂಢಿಸಿಕೊಳ್ಳುವುದು ಎಂದು ಇನ್ನೊಂದು ಬಗೆಯಲ್ಲಿ ಬಣ್ಣಿಸಬಹುದು. ಅಹಂಕಾರವನ್ನು ಪೂರೈಸುವ ಸಂಗತಿಗಳೆಲ್ಲವೂ ಒಂದಲ್ಲ ಒಂದು ರೀತಿ ವ್ಯಕ್ತಿತ್ವವನ್ನು ನಾಶ ಮಾಡುವಂತವು ಎನ್ನುವುದನ್ನು ಹೊಸಗಾಲದ ನುಡಿಗಟ್ಟುಗಳಲ್ಲಿ ಕಂಡುಕೊಳ್ಳುವುದನ್ನು ಈ ಸಂಕಲನದ ಕವಿತೆಗಳಲ್ಲಿ ಕಾಣಬಹುದು. ಈ ಸಾಲುಗಳನ್ನು ಗಮನಿಸಬಹುದು: ಸಹಜ ಬದುಕೆಂಬುದೊಂದಿದೆ ಎಂಬ ಮಾತೆಂದೋ ಮರೆತಾಗಿದೆ/ ಶಬ್ದವಿಲ್ಲದೆ ಅಂಕಿಸಂಖ್ಯೆ ಸಂಜ್ಞೆಗಳು ಮಾತಾಡಬಹುದು ಈ ತಾಣದಲ್ಲಿ/ ಸತ್ತ ಹೆತ್ತವ್ವನಿಗೂ ಇಮೋಜಿ ಮೋಕ್ಷ ತೋರಬಹುದು ಈ ತಾಣದಲ್ಲಿ (ಜಾಲತಾಣದಲ್ಲಿ).
ಅರಿವು ಎನ್ನುವುದು ತನ್ನೊಳಗೊ? ಅಥವಾ ಹೊರಗೊ? ಎನ್ನುವ ಪ್ರಶ್ನೆ ಸದಾ ಜ್ವಲಂತವಾಗಿರುವಂತದ್ದು. ಅರಿವು ಎನ್ನುವುದನ್ನು ಸಾಮಾಜಿಕ, ಮಾನಸಿಕ ಎಂದೆಲ್ಲಾ ವಿಂಗಡಣೆ ಮಾಡುವುದು ತಪ್ಪು ಎನ್ನಿಸುತ್ತದೆ. 'ಹಿಂದ್ ಸ್ವರಾಜ್'ನಲ್ಲಿ ಗಾಂಧಿ ಹೇಳುವಂತೆ ವಸಾಹತುಶಾಹಿ ಎನ್ನುವುದು ಒಳಗು ಮತ್ತು ಹೊರಗಿನದೆರಡೂ. ಹೀಗಿರುವಾಗ ಪ್ರಸ್ತುತ ವರ್ತಮಾನದ ರಾಜಕಾರಣವು ಎರಡರದೂ. ರಾಜಕಾರಣ ಎನ್ನುವುದು ಈ ಮುನ್ನುಡಿಯಲ್ಲಿ ಮೊದಲೇ ಪ್ರಸ್ತಾಪಿಸಿದ ಮೂರ್ತ ಮತ್ತು ಅಮೂರ್ತ ಎರಡೂ ಆಗಿರುವಂತದ್ದು. ಅದು ಮೇಲ್ನೋಟಕ್ಕೆ ಕಾಣುವ ಶುಚಿತ್ವದ ಪ್ರಶ್ನೆಯಷ್ಟೆ ಅಲ್ಲ, ಅದು ಅಂತರಂಗದ ಶಲಾಕೆಯ ಸಂಗತಿಯೂ ಆಗಿದೆ. ಹಾಗಾಗಿ ಪ್ರಭುತ್ವವನ್ನು ಜಾಡಿಸಿದ ಕನ್ನಡ ಸಾಹಿತ್ಯದ ಪ್ರಜ್ಞೆ ಈ ಕವಿಯಲ್ಲೂ ಕೆಲಸ ಮಾಡಿದೆ. ವಚನಕಾರರ ಚುಂಗು ಹಿಡಿದು ಹೊರಡುವ ಕವಿ ಪ್ರಭುತ್ವವನ್ನು ಅದರ ಬಹಿರಂಗಶುದ್ಧಿ ಹಾಗೂ ಅಂತರಂಗಶುದ್ದಿಗಳಿಗೆ ಒಡ್ಡಿಕೊಳ್ಳಬೇಕೆಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ. ಈ ಆಶಯವಾದರೋ ಒಮ್ಮೊಮ್ಮೆ ನೇರವಾಗಿ ಒಮ್ಮೊಮ್ಮೆ ಕೆಳವ್ಯಂಗ್ಯದ ಧಾಟಿಯಲ್ಲಿ ಪ್ರಕಟವಾಗುತ್ತದೆ. ಈ ಸಂಕಲನದ ಹೆಸರಾಗಿರುವ 'ಇನ್ನು ಕೊಟ್ಟೆನಾದೊಡೆ' ಕವಿತೆ ರಾಜಕಾರಣದ ಭ್ರಷ್ಟತೆಯನ್ನು ವಿರೋಧಿಸುವಂತದ್ದು. ಹಾಗೂ ಕಾಯಕಕ್ಕೆ ಬೇಕಾದ ಪ್ರಾಮಾಣಿಕತೆಯನ್ನು ಮಿಥಿಕದ ಮೂಲಕ ನಿರೂಪಿಸುವಂತದ್ದು. ಆದರೆ ಆದರ್ಶದ ಮರೆವೆಯಲ್ಲಿ ಮೈಮರೆಯದೆ ಅದರೊಳಗಿರುವ ಬಿರುಕುಗಳ ಬಗ್ಗೆ ಕುರುಡಾಗಬಾರದು ಎನ್ನುವ ಧೋರಣೆ ಹೊಂದಿದೆ ('ಸಂದಿಗೊಂದಿಗಳ ಬಿರುಕಿನಲಿ ಕೀರಲುಗುಟ್ಟುವ ಕ್ಷುದ್ರಕೀಟ' (ಆಸವ); 'ಕ್ರಿಯೆ ಶೀಲವಾದಾಗ ಪ್ರತಿಕ್ರಿಯೆಯ ತೆವಲೇಕೆ?' (ಇನ್ನು ಕೊಟ್ಟೆನಾದೊಡೆ), 'ಶಸ್ತ್ರಾಗಾರದ ತುಂಬೆಲ್ಲ ಸುರಿಯುತ್ತದೆ ಆಮ್ಲಮಳೆ/ ಹುಳುಹತ್ತಿದ ತೂತಿನೊಳಗೂ ತೂರುತ್ತದೆ ಜ್ವಾಲೆ' ('ನುಡಿಕಾರಣ'). ಈ ಸಂಕಲನದ ಕವಿತೆಗಳ ಶಕ್ತಿ ಇರುವುದೇ ಇಂತಹ ಲೋಕವಿಮರ್ಶೆಯು ಆತ್ಮವಿಮರ್ಶೆಯ ಸೆಳಕನ್ನು ಹೊಂದಿರುವುದರಲ್ಲಿ. ಹಾಗಾಗಿ ರಾಜಕಾರಣದ ಬಗ್ಗೆ ಬರೆದರೂ ಏರುದನಿ ಕೇಳುವುದಿಲ್ಲ.
ಷೇಕ್ಸ್‌ಪಿಯರನ 'ಕೊರಿಯೊಲೇನಸ್' ನಾಟಕದಲ್ಲಿ ಒಂದು ದೃಶ್ಯ ಬರುತ್ತದೆ. ನಾಯಕ ಕೊರಿಯೊಲೇನಸ್‌ನನ್ನು ಅವನು ಈ ರಾಜಕೀಯದ ದೇಹಕ್ಕೆ ಮಾರಕ, ಕೊಯ್ದು ಹಾಕಿ ಎನ್ನುವ ಅರ್ಥದ ಸಾಲುಗಳಿವೆ. ರೋಗಗ್ರಸ್ತವಾಗಿರುವ ವ್ಯವಸ್ಥೆಯನ್ನು ಸರಿಪಡಿಸಬೇಕೆಂದರೆ ಕಠಿಣವಾದ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಎಂಬುದನ್ನು ಹೇಳುವ ಸಾಲುಗಳು ಇಲ್ಲಿವೆ:
ದಿಕ್ಕೆಟ್ಟ ರಾಜ್ಯದಲಿ ಅರಾಜಕತೆಯ ದರ್ಬಾರು ಇಂತಪ್ಪ ಚರಿತೆಯಲಿ ಒಂದು ಬೆರಳನು ಕತ್ತರಿಸಿ ತೆಗೆಯುವುದು ಅನಿವಾರ್ಯವೆಂಬ ದವಾಖಾನೆ ವರದಿ. ಈಗಲೂ ಮನಸ್ಸು ಮಾಡದಿದ್ದರೆ.... ಕೈಯನ್ನೇ.... ಇದೆಲ್ಲ ಇದ್ದದ್ದೇ ಬಿಡಿ, ಅದರಲ್ಲಿ ಅಂಥದ್ದೇನಿಲ್ಲ!! (ದಾಟಿ ಹೋಗುವ ಸುದ್ದಿ)
ರಾಜಕಾರಣದ ಬಗ್ಗೆ ಬರೆದರೆ ಅದು ಸಾಮಾಜಿಕ; ಬರೆಯದಿದ್ದರೆ ಸಾಂಪ್ರದಾಯಿಕ ಎನ್ನುವ ದ್ವಂದ್ವದಲ್ಲಿ ನಿಂತಿರುವವರಿಗೆ ಏನು ಹೇಳುವುದು? ಈ ದ್ವಂದ್ವದ ಬಗ್ಗೆಯೂ ಈ ಸಂಕಲನದ ಕವಿತೆಗಳಲ್ಲಿ ವಿಷಾದ ಅಭಿವ್ಯಕ್ತವಾಗಿದೆ ಈ ಸಂಕಲನದ ಇನ್ನೊಂದು ದಿಟ್ಟ ಧೋರಣೆಯೆಂದರೆ ಕವಿ ತಳೆಯುವ ಹೆಣ್ಣನ ಗಂಡಸ್ತನಗಳ ಅಸ್ಮಿತೆಗಳ ಬಗೆಗಿನ ನಿಲುವು. ರಾಜಕಾರಣದ ರಣಾಂಗಣವಾಗಿರುವ ಹೆಣ್ಣಿನದ ಆಸ್ಥಿತೆಯ ಸಂಗತಿಯನ್ನು ಕವಿ ನಿರ್ವಹಿಸಿರುವ ರೀತಿ ಚೆನ್ನಾಗಿದೆ. ಹಸಿ ಹಸಿ ಪದಗಳಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವುದಕ್ಕಿಂತ ಅವರು ಗಮನ ಹರಿಸಿರುವುದು ಕವಿಮನ ಎನ್ನುವುದು ಹೆಣ್ಣನದ ದೀಕ್ಷೆ ಪಡೆಯಬೇಕು ಎನ್ನುವುದರತ್ತ,
ಬದುಕು ಬರೆಯಿಸಿದ ಅಕ್ಷರ, ಕವಿಯ ಪಟ್ಟ-'ಪಾಡು' ಹುಳಿ, ಸಿಹಿ, ಒಗರು, ಅದಕೂ ಒಂದು ರುಚಿ ಹಣ್ಣಾಗದಿರೆ ಬಿಡಿ ಸ್ವಾಮಿ, ಹೆಣ್ಣಾಗದಿದ್ದರೆ ಹೇಗೆ? (ಕಾವ್ಯಕೇಳಿ)
ಹೆಣ್ಣುತನದ ದೀಕ್ಷೆ ಪಡೆದುಕೊಳ್ಳದಿದ್ದರೆ ಬದುಕಾಗಲೀ ಕವಿತೆಯಾಗಲೀ ಬಾಳಿ ಬದುಕದು. ಹೆಣ್ಣುತನವನ್ನು ಗಂಡುತನದ ದ್ವಂದ್ವವಾಗಿ ನೋಡಲಾಗುತ್ತದೆ. ಆದರೆ ನಿಜವಾದ ಭೇದಗಳಿವೆಯೇ ಎಂಬುದಕ್ಕೆ ಆಧ್ಯಾತ್ಮಿಕವಾಗಿ ಉತ್ತರ ಸಿಕ್ಕಿದೆ. ಆದರೆ ಸಾಮಾಜಿಕವಾಗಿ ಇನ್ನೂ ಹೊಯ್ದಾಡುತ್ತಲೇ ಇದ್ದೇವೆ ('ಗಂಡಸರಪ್ಪಾ ಗಂಡಸರು!/ ಮಾಡುವರೊಂದೇ ಹಬ್ಬ.. ಗಂಡಸ್ತನದ ಹಬ್ಬ' (ರತಿವಿಲಾಪ) ಎನ್ನುವ ಸಾಲುಗಳು ಚೆನ್ನಾಗಿವೆ). ಹೆಣ್ಣನದ ಮೇರು ವ್ಯಕ್ತಿತ್ವ ಎಂದು ಹೊಗಳುವ ಅಕ್ಕಮಹಾದೇವಿಯ 'ಕಾಣೆಯಾದವಳ ರಗಳೆ'-ಕವಿತೆಯು ಇದಕ್ಕೆ ಉತ್ತರವಾಗಿ ಬಂದಿದೆ ಎನ್ನಿಸುತ್ತದೆ.
ಈ ವಿಪ್ಲವಕ್ಕೆ ಆತ್ಯಂತಿಕವಾಗಿ ಏನು ಉತ್ತರ ಇರಬಹುದು? 'ಶಬ್ದ ನಿಶ್ಯಬ್ದವಾಗುವ ಕಿವಿಯ ಲಾಳಿಕೆಯೊಂದು ಬೇಕಿದೆ' (ಕಾವ್ಯಕೇಳಿ) ಎಂಬ ಕವಿಯ ಬಯಕೆ ತಕ್ಕ ಉತ್ತರವಾಗಬಲ್ಲದೇ? ಕಡೆಗೂ ಸಮುದಾಯದ ವ್ಯಕ್ತಿಯ ಒಳಗಿನ ಅರಿವಿನಿಂದ ಬದುಕು ಕಟ್ಟಿಕೊಳ್ಳಬಹುದೇ? ಪ್ರಾಯಶಃ ಕವಿಯ ಎದೆಯಾಳದಲ್ಲಿ ಇದಕ್ಕೆ ಉತ್ತರ ಸಿಕ್ಕಿದೆ ಎನ್ನಿಸುತ್ತೆ. ಕೂಡಿಯಾಡಿ ಹಾಡಿನಲಿದ ಜಾನಪದ-ಧಮ್ಮಪದ/ ಎದೆಯಿಂದೆದೆಗೆ ತಿಳಿನೀರು ಹರಿದು ನದಿಯೊಡಲ ಜ್ಞಾನಪದ' (ಆಸವ). ಎಲ್ಲ ಬಗೆಯ ವಿಷಾದಗಳನ್ನು ಮೀರಿ ಈ ಅರಿವಿನ ದಾರಿಯ ನೆಚ್ಚಿ ನಡೆವುದೇ ವಚನಕಾರರ ವಿವೇಕದ ದಾರಿಯಾಗಿ, ಅಂದು ಇಂದು ಮುಂದು ಎಲ್ಲದಕ್ಕೂ ಸಲ್ಲುವ ದಾರಿಯಾಗಿ ನಿಲ್ಲುತ್ತದೆ. ಆ ಅರಿವು ಜಂಗಮ ಸ್ವರೂಪಿ. ನಿರಂತರವಾಗಿ ಆಗುವಿಕೆಯಲ್ಲಿ ಅಸ್ತಿತ್ವದ ಸುಖವಿದೆ ಎನ್ನಿಸುತ್ತದೆ.
“ಈ ಕೃತಿಯನ್ನು ಪ್ರಕಟಿಸುವ ವಿಚಾರ ಬಂದಾಗ ಅದು ನನಗೆ ಅಷ್ಟು ಸೂಕ್ತವಾಗಿ ತೋರಲಿಲ್ಲ. ಹೀಗಾಗಿ ಇದರ ಮೂಲ ಕಥಾ ಸ್ವರೂ...
“ಕೃಷ್ಣನ ಬಾಲ್ಯವನ್ನು ಕುರಿತೇ ಹೆಚ್ಚಾಗಿ ಬರೆದಿದ್ದರೂ, ಅವನ ಸಂಪೂರ್ಣ ವ್ಯಕ್ತಿತ್ವದ ದೃಷ್ಟಿಯಿಂದ ಕೃಷ್ಣಾವತಾರದಲ...
ಡಾ. ಬಿ. ಜನಾರ್ದನ ಭಟ್ ಅವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ ಅವರು ಸ...
©2025 Book Brahma Private Limited.