Date: 31-12-1899
Location: ಬೆಂಗಳೂರು
ನಮ್ಮ ಸಮಾಜದ ಮತ್ತೊಂದು ಮಗ್ಗುಲಲ್ಲೇ ನೂರೆಂಟು ತಾಪತ್ರಯಗಳನ್ನು ಅನುಭವಿಸುತ್ತಲೇ ಬದುಕು ಕಟ್ಟಿಕೊಳ್ಳುವವರು, ಸಮಾಜಕ್ಕಾಗಿ ತಮ್ಮನ್ನು ತೇಯ್ದುಕೊಳ್ಳುವವರು, ಅವಿರತ ಸೇವೆಯಲ್ಲಿ ತೊಡಗಿರುವವರು ಇದ್ದಾರೆ. ಅಂಥವರ ಹೆಜ್ಜೆಯ ಜಾಡು ಹಿಡಿದು, ಅವರ ಬದುಕೇನು ಎಂದು ತೋರಿಸಹೊರಟಿದ್ದಾರೆ ಸಿಟಿಜನ್ ಜರ್ನಲಿಸ್ಟ್ ಜ್ಯೋತಿ ಎಸ್. ’ಬುಕ್ ಬ್ರಹ್ಮ’ದಲ್ಲಿ ಇನ್ನು ಪ್ರತಿ ಭಾನುವಾರ ಇವರ ಈ ಅಂಕಣವಿರುತ್ತದೆ. ಮೊದಲ ಕಂತಿನಲ್ಲಿ ಲೈನ್‌ಮ್ಯಾನ್‌ಗಳ ಬವಣೆಯನ್ನು ವಿವರಿಸುತ್ತ, ಅಂಥ ಒಬ್ಬ ಲೈನ್‌ಮ್ಯಾನ್ ಬದುಕಿನ ಕಥೆಯನ್ನು ಹೇಳಿದ್ದಾರೆ.
ಇಂದಿನ ಕಾಲದಲ್ಲಿ ಕರೆಂಟ್ ಅಥವಾ ಪವರ್ ಇಲ್ಲದಿದ್ದರೆ ನಮ್ಮ ಬಹುತೇಕ ವ್ಯವಸ್ಥೆ ನಿಂತುಬಿಡುತ್ತದೆ. ಮನೆಯಲ್ಲಿ ನೀರು ಕಾಯಿಸುವುದರಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳವರೆಗೆ ಎಲ್ಲದಕ್ಕೂ ಕರೆಂಟ್ ಬೇಕು. ಬೆಳಕು, ಅಡುಗೆ, ಮನರಂಜನೆ, ವಾಹನ ಚಾಲನೆಗೆ ಹೀಗೆ ವಿದ್ಯುತ್ ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಇನ್ನು ವಿದ್ಯುತ್ ಸರಬರಾಜು ಮಾಡುವ ಲೈನ್ಮ್ಯಾನ್ ಕೆಲಸ ಅಷ್ಟು ಸುರಕ್ಷಿತವಾದುದಲ್ಲ. ಸೈನಿಕರಂತೆಯೇ ಇವರೂ ಕೂಡ ನಮಗಾಗಿ ಅಪಾಯ ಮೈಮೇಲೆಳೆದುಕೊಂಡೇ ವೃತ್ತಿ ನಿರ್ವಹಿಸಬೇಕು. ನಮ್ಮ ಅನಿವಾರ್ಯತೆ ಪೂರೈಸಲು ಯಾವಾಗಲೂ ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡುವ ನಾಡಿನ ಈ ವಿದ್ಯುತ್ ಯೋಧರ ಜೀವನ ಪಯಣ ಇಂದಿನ ನಿಮ್ಮ ಓದಿಗೆ.
ಇಂದಿನ ನಾಗರಿಕ ಜಗತ್ತಿನಲ್ಲಿ ಎಲ್ಲಾ ಮಾನವ ಚಟುವಟಿಕೆಗಳು, ಅವರ ಜೀವನೋಪಾಯ ಮತ್ತು ಆರ್ಥಿಕ ಬೆಳವಣಿಗೆಯು ವಿದ್ಯುತ್ತಿನಿಂದ ಆರಂಭವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರಿಗೂ 24×7 ವಿದ್ಯುತ್ ಅತ್ಯಗತ್ಯ. ಹಳ್ಳಿ, ಗುಡ್ಡಗಾಡು, ಉದ್ಯಮ, ಮಾಧ್ಯಮ, ಆಸ್ಪತ್ರೆ, ಪ್ರಿಂಟಿಂಗ್, ಪ್ಯಾಕೇಜಿಂಗ್, ಯಂತ್ರೋಪಕರಣಗಳು, ಹೋಟೆಲ್, ಕೃಷಿ ಮಾಡಲು ನಿರಂತರವಾಗಿ ಎಲ್ಲಾ ವರ್ಗದವರಿಗೂ ವಿದ್ಯುತ್ ಅತ್ಯಗತ್ಯ.
ಯಾರೇನೇ ನಿಂದಿಸಿದರೂ, ಕಷ್ಟವಾದರೂ, ಸುಖವಾದರೂ ನಾಡಿಗೆ ಬೆಳಕು ನೀಡುತ್ತಾ ಕಾಯಕ ಮಾಡುತ್ತಿರುವ ಲೈನ್‌ಮ್ಯಾನ್‌ಗಳಲ್ಲಿ ಒಬ್ಬರಾದ ಚೇತನ್ ಕುಮಾರ್ ಕೆ. ಇವರು ಮೂಲತಃ ನೆಲಮಂಗಲದ ಸಮೀಪ ಇರುವ ತಿರುಮಲಾಪುರ ಗ್ರಾಮದವರು. ಹೆಸರಿಗೆ ತಕ್ಕಂತೆ ಚೇತನವಾಗಿರುವ ಇವರ ಜೀವನ ಪರಿಚಯ ಮತ್ತು ನಿತ್ಯ ಹೋರಾಟದ ಬಗ್ಗೆ ಅವರ ಮಾತಿನಲ್ಲಿ ಓದಿಕೊಳ್ಳಿ…
*
ಅಮ್ಮ ಯಶೋಧ, ಅಪ್ಪ ಕೆಂಪರಾಜು ದಂಪತಿಗಳಿಗೆ ಇಬ್ಬರು ಮಕ್ಕಳು. ನಾನು ಮತ್ತು ನನ್ನ ತಂಗಿ. ನಾನು ಒಂಭತ್ತನೇ ತರಗತಿಯಲ್ಲಿ ಓದುವಾಗಲೇ ತಂದೆ ತೀರಿಕೊಂಡರು. ನಂತರ ನನ್ನ ಮತ್ತು ತಂಗಿಯ ಎಲ್ಲಾ ಜವಾಬ್ದಾರಿ ಅಮ್ಮನ ಮೇಲೆ ಬಿತ್ತು. ಅಮ್ಮ ಆ ಕಾಲಕ್ಕೆ ಹತ್ತನೇ ತರಗತಿಯವರೆಗೆ ಓದಿದ್ದರು. ಹಾಗಾಗಿ ಟಿ. ಬೇಗೂರು ಹತ್ತಿರ ಇರುವ ಫಾರ್ಮ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಆಗ ಅಮ್ಮನಿಗೆ ಬರುತ್ತಿದ್ದ ಸಂಬಳ 300/- ರೂಪಾಯಿಗಳು. ಬರುತ್ತಿದ್ದ ಸಂಬಳದಲ್ಲಿಯೇ ಅಮ್ಮ ಮನೆ ನಿಭಾಯಿಸಿಕೊಂಡು ಇದ್ದುದರಲ್ಲಿಯೇ ನಮ್ಮನ್ನು ತುಂಬ ಚೆನ್ನಾಗಿ ಬೆಳೆಸಿದಳು. ಕಷ್ಟ ಏನೂ ಅಂತ ಆಗಿನಿಂದಲೇ ತಿಳಿದುಕೊಂಡು ಬೆಳೆದ ನಾವು ಓದಿದ್ದು ಸರ್ಕಾರಿ ಶಾಲೆಯಲ್ಲಿ.
ಎಸ್.ಎಸ್.ಎಲ್.ಸಿ.ಯಲ್ಲಿ ನನಗೆ 85% ಅಂಕಗಳು ಬಂದಿದ್ದವು. ಹತ್ತನೇ ತರಗತಿ ಮುಗಿದ ನಂತರವೇ ಡಿಪ್ಲೊಮೊ ಸೇರಿಕೊಳ್ಳಲು ಮನಸ್ಸು ಮಾಡಿದೆ. ಬೇಗ ಓದು ಮುಗಿಸಿ ಅಮ್ಮನ ಹೆಗಲ ಭಾರವನ್ನು ಕಡಿಮೆ ಮಾಡಬೇಕು ಅನ್ನಿಸಿ ಸರ್ಕಾರಿ ಪಾಲಿಟೆಕ್ನಿಕ್‌ಗೆ ಅರ್ಜಿ ಹಾಕಿದ್ದೆ. ಅದೃಷ್ಟವಶಾತ್ ಎಂಬಂತೆ ನನಗೆ ಸೀಟ್ ಸಿಕ್ಕಿತ್ತು. ಗವರ್ನಮೆಂಟ್ ಪಾಲಿಟೆಕ್ನಿಕ್ ಆದ್ದರಿಂದ ಫೀಸ್ ಕಡಿಮೆ ಇತ್ತು. ಅಷ್ಟು ಹೊತ್ತಿಗೆ ಅಮ್ಮನ ಸಂಬಳ 3500/- ರೂ ಆಗಿತ್ತು. ತುಮಕೂರಿನ ಗವರ್ನಮೆಂಟ್ ಪಾಲಿಟೆಕ್ನಿಕ್‌ನಲ್ಲಿ ಎಲೆಕ್ಟ್ರಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮ ಮುಗಿಸಿದೆ. ಡಿಪ್ಲೋಮ ಮುಗಿಸಿದ ನಂತರ ಇಂಜಿನಿಯರಿಂಗ್ ಮಾಡುವ ಕನಸು ಪ್ರಬಲವಾಗಿದ್ದರೂ ಮನೆಯ ಪರಿಸ್ಥಿತಿ ಅನುಕೂಲವಾಗಿರಲಿಲ್ಲ. ಹಾಗಾಗಿ ಅಮ್ಮ ಮಾಡುತ್ತಿದ್ದ ಕಂಪನಿಯಲ್ಲಿ ಸ್ವಲ್ಪ ದಿನ ಕೆಲಸ ಮಾಡಿದೆ. ನಂತರ 2016ರ ಆಗಸ್ಟ್ ನಲ್ಲಿ ಕ.ವಿ.ಪ್ರ.ನಿ.ನಿ. (KPTCL)ದಲ್ಲಿ ಅರ್ಜಿ ಹಾಕಿದ್ದೆ. ಐದು ಫಿಸಿಕಲ್ ಟೆಸ್ಟ್‌ಗಳು ಇರುತ್ತವೆ. ಕಂಬ ಹತ್ತುವುದು, 100 ಮೀ ಅನ್ನು 14ಸೆಕೆಂಡ್‌ಗಳಲ್ಲಿ ಓಡಬೇಕು. ಗುಂಡು ಎಸೆತದಲ್ಲಿ 8 ಮೀ ಎಸೆಯಬೇಕು. ಒಂದು ನಿಮಿಷಕ್ಕೆ 50 ಸ್ಕಿಪಿಂಗ್ ಆಡಬೇಕು. 800 ಮೀ.ನ್ನು 3 ನಿಮಿಷದಲ್ಲಿ ಓಡಬೇಕು. ಇದರಲ್ಲಿ ಮೂರರಲ್ಲಿ ಪಾಸ್ ಆಗಬೇಕು. ನಾನು ನಾಲ್ಕನ್ನು ಪಾಸ್ ಮಾಡಿದ್ದೆ. ಹಾಗಾಗಿ 2017ರಲ್ಲಿ ಜೂನಿಯರ್ ಪವರ್ ಮ್ಯಾನ್ ಕೆಲಸ ಸಿಕ್ತು. ನಂತರ ನಾನು ಕೆಲಸ ಮಾಡ್ತಾ ತಂಗಿಯನ್ನು ಇಂಜಿನಿಯರಿಂಗ್ ಓದಿಸುತ್ತಿದ್ದೇನೆ. ನಾ ಕಂಡ ಕನಸನ್ನು ತಂಗಿಯ ಮೂಲಕ ನನಸಾಗಿಸಿಕೊಳ್ಳುತ್ತಿದ್ದೇನೆ.
ಸಮಾಜದಲ್ಲಿ ಅಶಾಂತಿ, ಗಲಾಟೆ, ಗದ್ದಲಗಳು ಉಂಟಾದಾಗ ಪೊಲೀಸ್‌ನವರಿಂದ ಕಂಟ್ರೋಲ್ ಮಾಡಲು ಸಾಧ್ಯವಾಗದಿದ್ದರೆ, ಆರ್ಮಿಯವರನ್ನು ಕರೆಸುತ್ತಾರೆ. ಸರ್ಕಾರಿ ಡಾಕ್ಟರ್‌ಗಳು ಸ್ಟ್ರೈಕ್ ಮಾಡಿದರೆ ಖಾಸಗಿ ಡಾಕ್ಟರ್‌ಗಳನ್ನು ಕರೆಸುತ್ತಾರೆ. ಸರ್ಕಾರಿ ಬಸ್ ಸ್ಟ್ರೈಕ್ ಮಾಡಿದರೆ ಖಾಸಗಿ ವಾಹನಗಳನ್ನು ಕರೆಸುತ್ತಾರೆ. ಆದರೆ ನಮ್ಮ ಪವರ್ ಮ್ಯಾನ್‌ಗಳು ಸ್ಟ್ರೈಕ್ ಮಾಡಿದರೆ ಇದಕ್ಕೆ ಇನ್ನೊಂದು ಮೀಸಲು ಪಡೆ ಅಂತ ಇಲ್ಲ. ಯಾವುದೊ ಒಂದು ವೈರ್ ಕಟ್ ಆಗಿದೆ ಅಂದಾಗ ನಮ್ಮ ಪವರ್ ಮ್ಯಾನ್‌ಗಳೇ ಹೋಗಬೇಕು. ಬೇರೆ ಯಾರನ್ನೂ ರಿಪ್ಲೇಸ್ ಮಾಡಲು ಸಾಧ್ಯವಿಲ್ಲ. ಮೇಣದ ಬತ್ತಿ ಹೇಗೆ ತನ್ನನ್ನು ತಾನು ಸುಟ್ಟುಕೊಂಡು ಇತರರಿಗೆ ಬೆಳಕನ್ನು ನೀಡುತ್ತದೆಯೋ ಹಾಗೆ ನಮ್ಮ ಪವರ್ ಮ್ಯಾನ್‌ಗಳ ಕೆಲಸ. ಯಾವ ಕ್ಷಣದಲ್ಲಿ ಬೇಕಾದರೂ ಪ್ರಾಣಪಕ್ಷಿ ಹಾರಿಹೋಗಬಹುದು.
ಹಲವು ರೀತಿಯಲ್ಲಿ ವಿದ್ಯುತ್ ತಯಾರಾಗುತ್ತದೆ. ಜಲ ವಿದ್ಯುತ್, ಗಾಳಿ ವಿದ್ಯುತ್, ಸೋಲಾರ್ ಪ್ಲಾಂಟ್ ಮತ್ತು ಕಲ್ಲಿದ್ದಲು ವಿದ್ಯುತ್‌ನ ಮೂಲಗಳಾಗಿವೆ. ಕೆಲವೊಮ್ಮೆ ನಾವು ರೀಡಿಂಗ್‌ಗೆ ಅಂತ ಹೋದಾಗ ಪವರ್ ಸ್ಟೇಷನ್ ಯಾರ್ಡ್‌ಗಳಲ್ಲಿ ಡಿಸ್ಸ್ಕ್‌ಗಳು ಫ್ಲ್ಯಾಶ್ ಓವರ್ ಆಗುತ್ತದೆ. ಆಗ ನೂರು ಇನ್ನೂರು ಮೀಟರ್‌ವರೆಗೂ ಡಿಸ್ಸ್ಕ್‌ಗಳು ಸಿಡಿಯುತ್ತದೆ. ಅದೇನಾದರೂ ತಲೆಗೆ ಸಿಡಿದರೆ ಆ ಕ್ಷಣದಲ್ಲೇ ಸತ್ತು ಹೋಗುತ್ತಾರೆ. ಇನ್ನೊಂದು ಬೇಸರದ ಸಂಗತಿ ಎಂದರೆ, ಕೋವಿಡ್ ಸಮಯದಲ್ಲಿ ಪೊಲೀಸರು ಆರೋಗ್ಯ ಸಿಬ್ಬಂದಿ, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು, ಡಾಕ್ಟರ್‌ಗಳು ಎಲ್ಲರಿಗೂ ಕರೋನ ವಾರಿಯರ್ಸ್ ಎಂದು ಸನ್ಮಾನ ಮಾಡಿದರು. ನಾವು ಒಂದು ಗಂಟೆ ಕರೆಂಟ್ ಕೊಟ್ಟಿಲ್ಲ ಅಂದಿದ್ರೆ ಯಾವ ಹಾಸ್ಪಿಟಲ್ ರಿಪೋರ್ಟ್‌ಗಳೂ ಬರುತ್ತಿರಲಿಲ್ಲ. ಯಾವ ಯಂತ್ರೋಪಕರಣಗಳೂ ಕೆಲಸ ಮಾಡುತ್ತಿರಲಿಲ್ಲ. ಆಗ ರಜೆ ತೆಗೆದುಕೊಳ್ಳದೆ ನಮ್ಮ ಪವರ್ ಮ್ಯಾನ್‌ಗಳು ಕೆಲಸ ಮಾಡಿದ್ದೇವೆ. ನಮ್ಮ ಇಲಾಖೆಯಲ್ಲಿ 70% ರಜೆ ಘೋಷಿಸಲಿಲ್ಲ. ಹೀಗೆ ಕೆಲಸ ಮಾಡಿದರೂ ನಮ್ಮನ್ನು ಯಾರೂ ಗುರುತಿಸಲಿಲ್ಲ.
ತುಂಬಾ ವರ್ಷಗಳಿಂದ ಲೈನ್ಮ್ಯಾನ್ ಅಂತಲೇ ಕರೆಯುತ್ತಿದ್ದರು. ಡಿ. ಕೆ. ಶಿವಕುಮಾರ್ ಅವರು 2017-2018ರಲ್ಲಿ ಲೈನ್ಮೆನ್ ಅಂತ ಕರೆಯುವುದಕ್ಕಿಂತ ಪವರ್ ಮ್ಯಾನ್(ಶಕ್ತಿ ಮಿತ್ರ)ಅಂತ ಮರುನಾಮಕರಣ ಮಾಡಿದರು. ಒಟ್ಟು 5 ನಿಗಮಗಳಿವೆ. ಬೆಂಗಳೂರಿನಲ್ಲಿ BESCOM, ಮೈಸೂರಿನಲ್ಲಿ CHESCOM, ಮಂಗಳೂರಿನಲ್ಲಿ MESCOM, ಗುಲ್ಬರ್ಗದಲ್ಲಿ GESCOM, ಹುಬ್ಬಳ್ಳಿಯಲ್ಲಿ HESCOM. ವಿದ್ಯುತ್ ಇಲ್ಲಿಂದ ಎಲ್ಲಾ ಕಡೆಗೆ ಸರಬರಾಜು ಆಗುತ್ತದೆ.
ಮಳೆಗಾಲದಲ್ಲಿ ಹೆಚ್ಚು ಸಮಸ್ಯೆಗಳು ಬರುತ್ತವೆ. ಮರಗಳು ಬೀಳುವುದು, ಕಂಬ ಮುರಿಯುವುದು ಹೆಚ್ಚಿರುತ್ತದೆ. ಸುರಕ್ಷಿತ ಸಾಧನಗಳನ್ನು ಸಂಸ್ಥೆ ಕೊಟ್ಟಿದ್ದರೂ ಅವಘಡಗಳು ಕಣ್ಮುಚ್ಚಿ ಬಿಡುವಷ್ಟರಲ್ಲಿ ಸಂಭವಿಸಿಬಿಡುತ್ತವೆ. ಒಂದು ಲೈನಿನಲ್ಲಿ 11ಕೆಬಿ ಯಿಂದ 15 ರಿಂದ 20 ಹಳ್ಳಿಗಳಿಗೂ ಹೋಗಿರುತ್ತದೆ. ನಮ್ಮಲ್ಲಿರುವುದು ಒಂದೇ ಲೈನ್. ಆದರೆ ಅದರಿಂದ 20 ಊರಿಗೆ ಪವರ್ ಹೋಗಿರುತ್ತದೆ.
ಎಲ್ಲೋ ಒಂದು ಕಡೆ ಕರೆಂಟ್ ಹೋದಾಗ 20 ಹಳ್ಳಿಗಳಲ್ಲೂ ಕರೆಂಟ್ ಇರುವುದಿಲ್ಲ. ಆ ಒಂದೇ ಸಮಯಕ್ಕೆ ನೂರಾರು ಫೋನ್ ಕಾಲ್ ಬಂದಿರುತ್ತದೆ. ಒಂದೇ ಮಾರ್ಗದಲ್ಲಿ ಲೈನ್ ಹೋಗಿರುತ್ತದೆ. ಯಾವುದೋ ತೋಟದಲ್ಲಿ ವೈರ್ ಕಟ್ ಆಗಿರುತ್ತದೆ, ಮರ ಬಿದ್ದಿರುತ್ತದೆ. ವೈರ್ ಕಟ್ ಆಗಿದೆ ಎಂದಾಗ ಯಾವ ಸಾರ್ವಜನಿಕರೂ ಕೂಡ ಹತ್ತಿರ ಬರುವುದಿಲ್ಲ. ಜನರನ್ನು ನಾವೇ ಕರೆಯಬೇಕು. ಇಲ್ಲ ಕರೆಂಟ್ ತೆಗೆದಿದ್ದೇವೆ ಬನ್ನಿ ಎಂದಾಗ ಯಾರೋ ಸಹಾಯ ಮಾಡುವ ಮನಸ್ಥಿತಿ ಇರುವ ಕೆಲವೊಬ್ಬರು ಬರುತ್ತಾರೆ. ಆಫೀಸ್‌ಗಳಲ್ಲಿ ಲೈನ್ ಕ್ಲಿಯರ್ ಅಂತ ತೆಗೆದುಕೊಂಡಿರಬೇಕು. ಅಚಾನಕ್ಕಾಗಿ ಆಗಿ ಲೈನ್ ಕ್ಲಿಯರ್ ಆಗದೆ ಪವರ್ ಆನ್ ಮಾಡಿದರೆ ದೇಹವೇ ಹತ್ತಿಕೊಂಡು ಉರಿಯುವ ಸಾಧ್ಯತೆ ಇರುತ್ತದೆ. ಹಾಗೂ ವೈರಿಂದ ವೈರ್ ಶಾರ್ಟ್ ಆದಾಗಲೂ ಕರೆಂಟ್ ಆಫ್ ಆಗಲಿಲ್ಲ ಅಂದಾಗಲೂ ದೇಹ ಹತ್ತಿಕೊಂಡು ಉರಿದು ತುಂಡು ತುಂಡಾಗಿ ಬೀಳುವ ಸಾಧ್ಯತೆಯೂ ಇರುತ್ತದೆ. ಎಲ್ಲೇ ಯಾವುದೇ ವೈರ್ ಕಟ್ ಆದಾಗಲೂ ಪವರ್ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳದೆ ಜನಸಾಮಾನ್ಯರು ಯಾರೂ ಲೈನ್ ಮುಟ್ಟಬಾರದು. ಸಹಾಯವಾಣಿ 1912ಗೆ ಕರೆ ಮಾಡಿದಾಗ ಸಂಬಂಧಪಟ್ಟ ಇಲಾಖೆಯವರು ತಕ್ಷಣ ಯಾವ ಏರಿಯಾ, ಯಾವ ಲೈನ್ ಹೋಗಿದೆ ಅಂತ ಆಫೀಸಿನವರು ತಿಳಿದುಕೊಂಡು ಲೈನ್ ಆಫ್ ಮಾಡುತ್ತಾರೆ.
ವಿದ್ಯುತ್ ಇಲಾಖೆ ಎನ್ನುವುದೇ ಚಾಲೆಂಜ್. ಏಜನ್ಸಿ, ಹೊರ ಗುತ್ತಿಗೆ ಅಂತ ಕೆಲಸ ಮಾಡುವವರಿಗೆ ತುಂಬ ಕಷ್ಟ. ಪ್ರಾಣ ಪಣವಿಟ್ಟು ಎಷ್ಟೇ ವರ್ಷ ಕೆಲಸ ಮಾಡಿದರೂ ಪ್ರಯೋಜನವಾಗುವುದಿಲ್ಲ. ಸರ್ಕಾರದ ಅಧೀನದಲ್ಲಿ ಇರುವವರಿಗಾದರೆ ಆಕಸ್ಮಿಕವಾಗಿ ಏನಾದರೂ ಸತ್ತರೆ ಅವರ ಮನೆಯಲ್ಲಿ ಬೇರೆ ಯಾರಿಗಾದರೂ ಕೆಲಸ ಕೊಡುತ್ತಾರೆ. ಜಾಸ್ತಿ ಅನಾಹುತಗಳಾಗುವುದೇ ಕಂಬದ ಮೇಲಿಂದ ಬೀಳುವುದು. ಕರೆಂಟ್ ಹೊಡೆದಾಗ ಸೆಕೆಂಡಿನಲ್ಲಿ ಪ್ರಾಣ ಹಾನಿಯಾಗುತ್ತದೆ. ಕರೆಂಟ್ ಹೊಡೆದ ವ್ಯಕ್ತಿಯ ದೇಹದ ಯಾವುದಾದರೂ ಭಾಗದಿಂದ ವಿದ್ಯುತ್ ಹೊರಗೆ ಹೋದರೆ ವ್ಯಕ್ತಿ ಸ್ವಲ್ಪ ಪ್ರಮಾಣದಲ್ಲಿ ಬದುಕುಳಿಯುವ ಸಾಧ್ಯತೆಗಳಿರುತ್ತವೆ.
ಈ ಇಲಾಖೆಯಲ್ಲಿ ಸೀಮಿತ ಅವಧಿಯ ಕೆಲಸ ಇರುವುದಿಲ್ಲ. ದಿನದ 24 ಗಂಟೆಗಳಲ್ಲಿ ಯಾವಾಗ ಬೇಕಾದರೂ ಕೆಲಸಕ್ಕೆ ಹೋಗಬೇಕಾಗಿ ಬರಬಹುದು. ಇದೆ ಕಾರಣದಿಂದಲೇ ಆಗೆಲ್ಲ KEBಯಲ್ಲಿ ಕೆಲಸ ಮಾಡುವವರಿಗೆ ಹೆಣ್ಣು ಕೊಡೋದಿಲ್ಲ ಅಂತಿದ್ರಂತೆ. ಯಾವಾಗ ಬೇಕಾದರೂ ಅನಾಹುತ ಆಗತ್ತೆ ಅಂತ ಗೊತ್ತಿದ್ದರೂ ಖುಷಿಯಿಂದ ಕೆಲಸ ಮಾಡುತ್ತೇವೆ. ಯಾವುದೇ ಕಂಪನಿಗೆ ಹೋದ್ರೂ ಸ್ವಾಗತ, ಆಫೀಸ್ ರೂಮ್, ರೆಸ್ಟ್ ರೂಮ್, ಇತ್ಯಾದಿ ಅಂತ ನಾಮಪಲಕಗಳ ರೂಮುಗಳು ಇರುತ್ತವೆ. ಆದರೆ, ನಮ್ಮ ಇಲಾಖೆಯಲ್ಲಿ ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ ಅಂತಲೇ ಇರುತ್ತದೆ.
* * *
ಚೇತನ್ ಅವರು ತಮ್ಮ ಕೆಲಸದ ಜೊತೆ ಜೊತೆಗೆ ಆನಂದ್ ತಿಪಟೂರು ಅವರ ಸಾರಥ್ಯದಲ್ಲಿ ಅಮೃತ ಹಸ್ತ ತಂಡದ ಮೂಲಕ ಸರ್ಕಾರಿ ಶಾಲೆಯ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು, ಹಸಿದವರಿಗೆ ಅನ್ನ ಹಂಚುವುದು, ಆಶ್ರಮಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡುವುದು, ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ಇದ್ದವರಿಗೆ ರಕ್ತದಾನ ಮಾಡುವುದು. ಹೀಗೆ ಹಲವಾರು ರೀತಿಯ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪವರ್ ಮ್ಯಾನ್‌ಗಳು ಮೈ ಎಲ್ಲಾ ಕಣ್ಣಾಗಿದ್ದುಕೊಂಡು ಕೆಲಸ ಮಾಡಿ ನಮ್ಮ ನಿಮ್ಮ ಮನೆಗಳಿ೧ಗೆ ಬೆಳಕನ್ನು ನೀಡುತ್ತಿದ್ದಾರೆ.
ಎಲ್ಲಾದರೂ ಲೈನ್ ಮೇಲೆ ಮರ ಬಿದ್ದಾಗ, ಇಲ್ಲ ವೈರ್ ಕಟ್ಟಾದಾಗ, ಕಂಬ ನೆಲಕ್ಕುರುಳಿದಾಗ ಹೀಗೇನಾದರೂ ಆಗಿದ್ದರೆ ಅಸಡ್ಡೆ ತೋರದೆ ಸಂಬಂಧಪಟ್ಟ AE/ JE ಅಥವಾ ಪವರ್ ಮ್ಯಾನ್‌ಗಳಿಗೆ ತಿಳಿಸಿ. ಇಲ್ಲದಿದ್ದರೆ ಯಾರೋ ಗೊತ್ತಿಲ್ಲದ ಅಮಾಯಕರು, ದಾರಿಹೋಕರು, ದನ ಕಾಯುವವರು, ವೈರ್ ಬಿದ್ದಿದೆಯಲ್ಲ ಅಂತ ಮುಟ್ಟಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಯಾರದಾದರೂ ಗಮನಕ್ಕೆ ಇಂತಹ ತೊಂದರೆಗಳು ಕಂಡುಬಂದಾಗ ಸಹಾಯವಾಣಿ 1912ಕ್ಕೆ ಕರೆಮಾಡಿ ಸಂಬಂಧಪಟ್ಟ ಇಲಾಖೆಯವರಿಗೆ ಮಾಹಿತಿ ತಿಳಿಸಿದರೆ ಅನಾಹುತಗಳನ್ನು ತಪ್ಪಿಸಬಹುದು ಎನ್ನುತ್ತಾರೆ ಚೇತನ್. ಎಷ್ಟೋ ಸಲ ಪವರ್ ಮ್ಯಾನ್‌ಗಳು ಕಂಬಗಳಲ್ಲಿ ಕ್ಷಣಮಾತ್ರದಲ್ಲಿ ಹೊತ್ತುರಿಯುವುದನ್ನು ನೋಡಿದ್ದೇವೆ. ಇವರು ಕೆಲಸಕ್ಕೆ ಹೋದಾಗ ವಾಪಸ್ ಬರುವವರೆಗೆ ಇವರ ತಾಯಂದಿರ, ಹೆಂಡತಿ, ಮಕ್ಕಳ ಸಂಕಟ ಹೇಳತೀರದು. ಯಾವುದೇ ಹಬ್ಬವಿರಲಿ ಜಾತ್ರೆಯಿರಲಿ ಇವರು ಕೆಲಸದಲ್ಲಿರುತ್ತಾರೆ. ಕಾಡುಗಳಲ್ಲಿ, ಬಯಲು ಪ್ರದೇಶಗಳಲ್ಲಿ ಕೆಲವೊಮ್ಮೆ ಊಟ, ಕುಡಿಯಲು ನೀರು ಸಹ ಸಿಗುವುದಿಲ್ಲ. ಬಿಸಿಲಿದ್ದರೂ ಮಳೆಗಾಲದಲ್ಲಿ ತೊಯ್ದು ತೊಪ್ಪೆಯಾಗಿ, ಗುಡುಗು ಸಿಡಿಲುಗಳಿದ್ದರೂ, ಪ್ರವಾಹವಿದ್ದರೂ ತಮ್ಮ ಕರ್ತವ್ಯ ನಿರ್ವಹಿಸುವ ಇವರೂ ಕೂಡ ಗಡಿಯಲಿರುವ ಯೋಧನಷ್ಟೇ ಗೌರವಕ್ಕೆ ಅರ್ಹರು. ಆದರೆ ನಾವು ಇವರನ್ನು ನಡೆಸಿಕೊಳ್ಳುವ ಬಗೆ ಎಂತು... ನಮ್ಮ ಸಮಾಜ ನೋಡುವ ಅಮಾನವೀಯ ರೀತಿ, ಮಾತುಗಳನ್ನು ಬಿಟ್ಟು ಅವರೂ ಮನುಷ್ಯರು ಎಂಬ ಭಾವನೆಯಿಂದಾದರೂ ಗೌರವಿಸೋಣ.
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...
©2024 Book Brahma Private Limited.