“ಒಬ್ಬ ಲೇಖಕನ ಸಮಗ್ರ ಸಾಹಿತ್ಯ ಒಂದೆಡೆ ಲಭ್ಯವಿರುವುದು ಮತ್ತು ಬೇಕಿದ್ದನ್ನು ಬೇಕಾದಾಗ ಓದಬಹುದಾದುದು ಸಮಗ್ರದಲ್ಲಿ ಸಿಗುವ ಲಾಭ,” ಎನ್ನುತ್ತಾರೆ ಮೋಹನ್ ಕುಮಾರ್ ಡಿ ಎನ್. ಅವರು ಗಿರೀಶ ಕಾರ್ನಾಡ ಅವರ “ಸಮಗ್ರ ನಾಟಕ” ಕೃತಿ ಕುರಿತು ಬರೆದ ವಿಮರ್ಶೆ.
‘ಬಲಿ ಅಥವಾ ಹಿಟ್ಟಿನ ಹುಂಜ’ ನಾನು ಓದಿದ ಗಿರೀಶ ಕಾರ್ನಾಡ ಅವರ ಮೊದಲ ನಾಟಕ. ಅಷ್ಟಾವಕ್ರನ ಬಗೆಗಿನ ನಾಟಕವದು. ಇಷ್ಟವಾಗಿತ್ತು. ಅವರ ಸಮಗ್ರ ನಾಟಕ ಪ್ರಕಟವಾಗಿರುವುದರ ಬಗ್ಗೆ ಮಾಹಿತಿ ಇರಲಿಲ್ಲ. ಯಾವ ಲೇಖಕರದೇ ಆಗಿರಲಿ; ನನಗೆ ಅವರ ಸಮಗ್ರ ಇಷ್ಟವಾಗುತ್ತೆ. ಅದನ್ನು ಹೊರುವುದು ಭಾರ, ಹೆಬ್ಬೊತ್ತಿಗೆ ಎನ್ನುವ ಆರೋಪ ಪಕ್ಕಕ್ಕಿರಲಿ. ಒಬ್ಬ ಲೇಖಕನ ಸಮಗ್ರ ಸಾಹಿತ್ಯ ಒಂದೆಡೆ ಲಭ್ಯವಿರುವುದು ಮತ್ತು ಬೇಕಿದ್ದನ್ನು ಬೇಕಾದಾಗ ಓದಬಹುದಾದುದು ಸಮಗ್ರದಲ್ಲಿ ಸಿಗುವ ಲಾಭ. ಇದಕ್ಕೂ ಮೊದಲು ನಾಟಕಗಳ ಬಗ್ಗೆ ನನಗೆ ನನ್ನದೇ ಆದ ಅಂದಾಜಿತ್ತು. ಹೀಗಾಗಿ ನಾಟಕಗಳ ಓದನ್ನು ಇಷ್ಟಪಡುತ್ತಿರಲಿಲ್ಲ. ನಾಟಕದ ಬಗ್ಗೆ ಇತರರ ಅಭಿಪ್ರಾಯಗಳನ್ನು ಕೇಳಿದ ಮೇಲೂ ಅದರ ಬಗ್ಗೆ ಮೂಗು ಮುರಿಯುತ್ತಿದ್ದುದೇ ಹೆಚ್ಚು. ಈ ಮುನ್ನ ಟಿ. ಪಿ. ಕೈಲಾಸಂ ಅವರ ನಾಟಕ ‘ಪೋಲಿ ಕಿಟ್ಟಿ’ ಓದಿದ್ದೆ.
ಒಟ್ಟಾರೆಯಾಗಿ ನಾಟಕ ಏನನ್ನು ಹೇಳುತ್ತಿದೆ ಎಂದು ಅರ್ಥವಾದರೂ, ಅವರ ಇಂಗ್ಲಿಷ್ ಮಿಶ್ರಿತ ಕನ್ನಡ ಕಬ್ಬಿಣದ ಕಡಲೆಯಾಗಿತ್ತು. ಹೀಗಾಗಿ ನಾಟಕದ ಓದನ್ನು ತ್ಯಜಿಸಿದ್ದೆ. ಇದಾಗಿ ಸುಮಾರು ವರ್ಷಗಳ ತನಕ ನಾಟಕದತ್ತ ತಿರುಗಿಯೂ ನೋಡಿರಲಿಲ್ಲ. ಗಿರೀಶ ಕಾರ್ನಾಡ ಅವರ ನಾಟಕಗಳ ಬಗ್ಗೆ ಕೇಳಿಬರುತ್ತಿದ್ದ ಪ್ರತಿಕ್ರಿಯೆಗಳು ಅವರ ನಾಟಕದತ್ತ ಹೊರಳಿಸಿ, ಅದರಲ್ಲೇನಿದೆ ನೋಡಿಯೇ ಬಿಡೋಣ ಎನಿಸುವಂತೆ ಮಾಡಿತ್ತು. ಅದಕ್ಕೆಂದೇ ಅವರ ನಾಟಕಗಳ ಬಿಡಿ ಪ್ರತಿಯನ್ನು ಖರೀದಿಸುತ್ತಿದ್ದುದು. ಪ್ರಸ್ತುತ ಪುಸ್ತಕಲ್ಲಿನ ಮೊದಲ ನಾಟಕವಾದ ‘ಯಯಾತಿ’ಯಿಂದ ಆರಂಭಗೊಂಡ ಓದು, ಕೊನೆಯ ನಾಟಕವಾದ ‘ಮದುವೆಯ ಆಲ್ಬಂ’ ತನಕ ನಿರಂತರವಾಗಿ ಸಾಗಿ ಬಂತು. ‘ರಾಕ್ಷಸ-ತಂಗಡಿ’ ಅವರ ಕೊನೆಯ ನಾಟಕ, ಅದಿಲ್ಲಿ ಇಲ್ಲ. ಗಿರೀಶ ಕಾರ್ನಾಡ ಅವರ ನಾಟಕಗಳ ಓದು ನನ್ನ ಕಣ್ಣು ತೆರೆಸಿತು, ಅದ್ಭುತವಾದ ಜಾದೂ ಮಾಡಿತು ಅಂತೆಲ್ಲ ಹೇಳಲಾರೆ. ಒಟ್ಟಾರೆಯಾಗಿ ನಾಟಕದ ಬಗ್ಗೆ ನನ್ನಲ್ಲಿದ್ದ ಅನುಮಾನಗಳನ್ನು, ಪೂರ್ವಾಗ್ರಹಗಳನ್ನು ದೂರ ಮಾಡಿತು.
ಮುಖ್ಯವಾಗಿ, ಒಬ್ಬ ಓದುಗನಾಗಿ, ಈ ಸಮಗ್ರ ನಾಟಕದ ಓದು ಸಂತೋಷವನ್ನೇ ನೀಡಿತು. ಇಲ್ಲಿನ ನಾಟಕಗಳ ಬಗ್ಗೆ ನಾನು ವಿಮರ್ಶೆ ಮಾಡಲಾರೆ. ಅದನ್ನು ಹಲವರು ಅನೇಕ ವರ್ಷಗಳಿಂದ ಮಾಡಿದ್ದಾರೆ. ನಾನು ಹೇಳೋದಿಷ್ಟು; ಎಲ್ಲವನ್ನೂ ಓದಬೇಕು. ಏನು ಬೇಕು ಅದನ್ನು ತೆಗೆದುಕೊಳ್ಳಬೇಕು. ಮಿಕ್ಕಿದ್ದರ ಚಿಂತೆ ನಮಗ್ಯಾಕೆ ಬೇಕು? ಹನ್ನೊಂದು ನಾಟಕಗಳಲ್ಲಿ ಒಂಬತ್ತು ನಾಟಕಗಳು; ಯಯಾತಿ, ತುಘಲಕ್, ಹಯವದನ, ಅಂಜುಮಲ್ಲಿಗೆ, ಬಲಿ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಟಿಪೂ ಸುಲ್ತಾನ ಕಂಡ ಕನಸು - ನನ್ನ ಪ್ರಕಾರ ಕನ್ನಡ ಸಾಹಿತ್ಯದಲ್ಲಿ ಮಸ್ಟ್ ರೀಡ್; ಓದಲೇಬೇಕು. ಇಷ್ಟು ಮಾತ್ರ ಹೇಳಬಲ್ಲೆ.
“ಹಾದಿ ತಪ್ಪಿದ ದಾರಿಯ ಬಗ್ಗೆ ಕೊರಗದೇ ಸಾಗುವ ಪಯಣದಲ್ಲಿ ಹೊಸದೊಂದು ಗೆಲುವನ್ನು ಕಾಣುವುದು ಯಶಸ್ವಿ ಸಾಧಕನ ಲಕ್ಷಣ,...
“ಎಲ್ಲೇ ಹೋದರೂ ಹಿಂದಿಂದೆ ಸುತ್ತಿ ಬರುವ ಚಂದ್ರನಂತೆ, ಕಳೆದುಹೋದ ಅಜ್ಜ ಊರುಗೋಲು ಹುಡುಕುವಂತೆ, ಇದೇ ಇರಬಹುದಾದ ಈ ...
“ನಮ್ಮ ದೇಶದ ಈಶಾನ್ಯ ಭಾಗದಲ್ಲಿರುವ ಹಾಗೂ ಬಾಂಗ್ಲಾದೇಶ ಚೀನಾ ಮಯನ್ಮಾರ್ ಮತ್ತು ಭೂತಾನ ದೇಶಗಳೊಡನೆ ಗಡಿಗಳನ್ನು ಹೊ...
©2025 Book Brahma Private Limited.