“ಹಾದಿ ತಪ್ಪಿದ ದಾರಿಯ ಬಗ್ಗೆ ಕೊರಗದೇ ಸಾಗುವ ಪಯಣದಲ್ಲಿ ಹೊಸದೊಂದು ಗೆಲುವನ್ನು ಕಾಣುವುದು ಯಶಸ್ವಿ ಸಾಧಕನ ಲಕ್ಷಣ,” ಎನ್ನುತ್ತಾರೆ ಶ್ರೀಧರ ಬನವಾಸಿ. ಅವರು ಎಸ್. ಡಿ. ಕುಮಾರ್ ಮತ್ತು ಅನಂತ ಕುಣಿಗಲ್ ಅವರ “ಲೈಫ್ 360” ಕೃತಿ ಕುರಿತು ಬರೆದ ವಿಮರ್ಶೆ.
ಕಣ್ಣಿಗೆ ಕಂಡಿದ್ದು, ಬದುಕಿಗೆ ದಕ್ಕುವ ಏಕಮುಖ ಅನುಭವಗಳು ಎಂದಿಗೂ ಸಾಧನೆಯ ದಿಗ್ದರ್ಶನಕ್ಕೆ ದಾರಿಗಳಲ್ಲ! ಇದ್ದರೂ ಅದು ಮಂದ ಬೆಳಕಿನಲ್ಲಿ ಸಾಗಿದಂತೆ. ಆದರೆ ಬದುಕಿನ ಸುತ್ತಲೂ ದಕ್ಕುವ ಅನುಭವಗಳು ಜೊತೆಯಾಗಿ ಒಳಗಣ್ಣಿನಿಂದ ಕಾಣುವ ಪ್ರಮೇಯಗಳು ಸದಾ ಬದುಕನ್ನು ಮುನ್ನಡೆಸಬಲ್ಲವು. ಯಶಸ್ವಿ ಲೇಖಕರಾದ ಎಸ್.ಡಿ. ಕುಮಾರ್ ಹಾಗೂ ಅನಂತ ಕುಣಿಗಲ್ ಅವರು ಈ ಮೂಲಕ ಸಾಧನೆಯ ಬದುಕಿಗೆ ನೂರು ದಾರಿಗಳನ್ನು ಹುಡುಕಾಟ ಮಾಡಿ, ಒಂದು ಸಫಲತೆಯ ಉತ್ತರದೊಂದಿಗೆ ನಮ್ಮೊಂದಿಗಿದ್ದಾರೆ. ಇವರು ರಚಿಸಿರುವ `ಲೈಫ್ 360' ಕೃತಿ ಹೇಳಲು ಹೊರಟಿರುವುದು ಬದುಕು ಮತ್ತು ಅದರಾಚೆಯ ಮಾನವನ ಅನ್ವೇಷಣೆಯ ಸತ್ವ ಮತ್ತು ಅದರ ಮಹತ್ವವನ್ನು.
ನಮ್ಮ ಹಿರಿಯರು, ಪೂರ್ವಜರು ಹೇಳಿಕೊಟ್ಟ ಅನುಭವದ ಬುತ್ತಿ ಎಲ್ಲರಿಗೂ ದಕ್ಕುವಂತಹುದಲ್ಲ! ಆದರೆ ನಾವೇನು ಸಾಧಿಸಿ, ಪ್ರಯತ್ನಿಸಿ ನಮ್ಮ ಅನುಭವಗಳನ್ನು ದಕ್ಕಿಸಿಕೊಂಡೆವು ಅಂತ ಕೇಳಿದರೆ ಎಲ್ಲರ ಉತ್ತರವು ಮೌನಕ್ಕೆ ಜಾರುತ್ತದೆ. ಲೇಖಕರು ಈ ಕೃತಿಯ ಮೂಲಕ ತಮ್ಮ ಅನುಭವಗಳು, ಗ್ರಹಿಕೆಗಳ ಜೊತೆ ನಮ್ಮ ಸುತ್ತಮುತ್ತಲಿನ ಜನರಾಡುವ ಹಿತನುಡಿಗಳನ್ನು ಗ್ರಹಿಸಿ, ಜಗತ್ತಿನ ಶ್ರೇಷ್ಠ ವಿಚಾರಗಳನ್ನೆಲ್ಲಾ ಆಯ್ದು ಸಂಗ್ರಹಿಸಿ ಓದುಗರ ಬದುಕಿಗೆ ಹೊನ್ನುಡಿಯಾಗಿಸಿ ಅವರ ಸಾಧನೆಗೆ ಬೆಳಕಾಗಿದ್ದಾರೆ. ಅಂತಹ ಶ್ರೇಷ್ಠ ವಿಚಾರಗಳ ಸಂಗ್ರಹ `ಲೈಫ್ 360’ ಕೃತಿಯಲ್ಲಿದೆ.
`ಒಂದು ಉದಾಹರಣೆ ನೂರು ಸಾಲುಗಳ ವಿವರಣೆಗೆ ಸಮ’ ಎಂಬ ಹಿರಿಯರ ಮಾತಿನಂತೆ ಲೇಖಕರು ತಾವು ಹೇಳಲಿಕ್ಕೆ ಹೊರಟಿರುವ ಪ್ರತಿ ವಿಚಾರಕ್ಕೂ, ಅದಕ್ಕೆ ಸಮತೂಕ ನೀಡುವ ಘಟನೆಗಳು, ಜಗತ್ತಿನ ಶ್ರೇಷ್ಠ ವ್ಯಕ್ತಿಗಳು ಹೇಳಿರುವ ನಾಣ್ನುಡಿಗಳನ್ನು ಸೇರಿಸಿ, ಬರೆದಿರುವುದು ಓದುಗರ ಗಮನ ಸೆಳೆಯುತ್ತದೆ. ಯುವ ಸಮುದಾಯಕ್ಕೆ ಅವಶ್ಯವಾಗಿ ಬೇಕಾದ ಎಲ್ಲಾ ಸ್ಫೂರ್ತಿದಾಯಕವಾದ ಮಾಹಿತಿ ಇದೆ. ಹದಿಹರೆಯದ ಯೌವ್ವನದ ದಿನಗಳಲ್ಲಿ ಬದುಕಿನಲ್ಲಿ, ಸುತ್ತಲಿನ ಸಮಾಜದ ಬಗ್ಗೆ ನೂರಾರು ಪ್ರಶ್ನೆಗಳು ಏಳುವುದು ಸಹಜ. ಮನೆಯಲ್ಲಿ ತಂದೆತಾಯಿಗಳು, ಹಿರಿಯರು, ಉತ್ತಮ ಗುರುಗಳ ಕೊರತೆ ಇದ್ದಾಗ ಬದುಕು ನಿಜಕ್ಕೂ ಗೊಂದಲಕ್ಕೆ ಈಡಾಗುವುದು ಸಹಜ. `ನಾನು ಮಾಡಿದ್ದೆಲ್ಲವೂ ಸರಿ; ಹೇಳಿದ್ದೆಲ್ಲವೂ ವೇದವಾಕ್ಯ’ ಎಂಬ ತಪ್ಪು ಭಾವನೆ, ಅಹಮಿಕೆ ಇದ್ದಾಗ ಜೀವನದ ಹಾದಿ ತಪ್ಪುವುದು ಸಹಜ. ಲೇಖಕರು ಮುಖ್ಯವಾಗಿ ಮಾನವನ ಅಸಹಜ ಚಿಂತನೆ, ತಪ್ಪು ಗ್ರಹಿಕೆಗಳ ಕುರಿತಾಗಿ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.
ಸೋಲು ಬದುಕಿನ ಸಹಜ ಸ್ಥಿತಿ. ಇದನ್ನು ಎಲ್ಲ ಸಾಧಕರ ಬದುಕಿನಲ್ಲಿಯೂ ಕಾಣಬಹುದು. ಯಶಸ್ಸು, ಗೆಲುವು, ಸಂಭ್ರಮ, ಮನಶ್ಯಾಂತಿ ಇವನ್ನು ಎಲ್ಲರೂ ಬಯಸುತ್ತಾರೆ. ಇದನ್ನು ಲೌಕಿಕ ಹಾಗೂ ಪಾರಮಾರ್ಥಿಕ ನೆಲೆಘಟ್ಟಿನಲ್ಲಿಯೂ ವಿಶ್ಲೇಷಿಸಬಹುದು. ಆದರೆ ಜನಸಾಮಾನ್ಯರಿಗೆ ಬೇಕಾದುದು ಸರಳ, ಹಿತಚಿಂತನೆಯ ನುಡಿಗಳು. ಅದರಂತೆ ಈ ಕೃತಿಯು ಧನಾತ್ಮಕ ವಿಚಾರಗಳ ಲೇಖನಮಾಲೆಗಳನ್ನೊಳಗೊಂಡು ನಮ್ಮ ಓದಿನ ಹಸಿವನ್ನು ಸಾರ್ಥಕಗೊಳಿಸುತ್ತದೆ. ಹಾಗಾಗಿಯೇ ಈ ಕೃತಿ ಈಗಿರುವ ಎಲ್ಲ ಸ್ಫೂರ್ತಿದಾಯಕ, ವ್ಯಕ್ತಿತ್ವ ವಿಕಸನ ಪುಸ್ತಕಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ.
ಕೊನೆಯದಾಗಿ ನಕಾರಾತ್ಮಕತೆ ಎಂದಿಗೂ ಬದುಕಿನ ವೈಫಲ್ಯದ ಲಕ್ಷಣವಲ್ಲ! ಅದೊಂದು ಬದುಕಿನ ನಿರಂತರ ಅನುಸಂಧಾನದ ಒಂದು ಋಣಾತ್ಮಕ ಕ್ರಿಯೆ ಅಷ್ಟೇ. ಒಳ್ಳೆಯತನದ ಪರಿಧಿಯಲ್ಲೇ ನಾವು ಗೆಲುವನ್ನು ಕಾಣಬೇಕು. ಅಂತೆಯೇ ಹಾದಿ ತಪ್ಪಿದ ದಾರಿಯ ಬಗ್ಗೆ ಕೊರಗದೇ ಸಾಗುವ ಪಯಣದಲ್ಲಿ ಹೊಸದೊಂದು ಗೆಲುವನ್ನು ಕಾಣುವುದು ಯಶಸ್ವಿ ಸಾಧಕನ ಲಕ್ಷಣ. ಗೆಲುವು ಪಡೆದ ವ್ಯಕ್ತಿಯ ಹಿಂದೆ ಇಂತಹ ಹಲವಾರು ನಡೆಗಳಿವೆ, ರಹಸ್ಯಗಳಿವೆ. ಕಠಿಣ ನಿರ್ಧಾರಗಳಿವೆ. ಅಂತಹವುಗಳನ್ನು ಲೇಖಕರು `ಲೈಫ್ 360’ ಕೃತಿಯಲ್ಲಿ ಅನ್ವೇಷಿಸಿದ್ದಾರೆ. ಸಾಧನೆಯ ದಾರಿಯಲ್ಲಿ ಗೆಲುವಿನ ಕನಸನ್ನು ಕಾಣುವ ಪ್ರತಿಯೊಬ್ಬರ ಬಳಿಯೂ ಈ ಕೃತಿ ಇರಲಿ ಎಂಬ ಒತ್ತಾಸೆ ನನ್ನದು. ಇಂತಹ ಉತ್ತಮ ಕೃತಿಯನ್ನು ರಚಿಸಿರುವ ಎಸ್ಡಿ ಕುಮಾರ್ ಹಾಗೂ ಅನಂತ ಕುಣಿಗಲ್ ಅವರನ್ನು ಅಭಿನಂದಿಸುತ್ತೇನೆ.
"ದ್ವೀಪವ ಬಯಸಿ ಕನ್ನಡದಲ್ಲಿ ಇದೊಂದು ವಿಶೇಷವಾದ ಕಾದಂಬರಿ. ಕನ್ನಡ ಸಾಹಿತ್ಯ ಲೋಕದಲ್ಲಿ ಕಾರ್ಪೊರೇಟ್ ಜಗತ್ತು ಕುರಿತ...
"ಇಲ್ಲಿ ಬಳಸುವ ಭಾಷೆಯಲ್ಲಿ ಕೂಡಾ ಈ ಪ್ರಾಂತ್ಯದ ಸೊಗಡು ದಟ್ಟವಾಗಿ ಓದುಗರಿಗೆ ತಗಲುತ್ತದೆ. ಹೆಂಗಸರ ಬೀದಿ ಜಗಳಗಳ ಭಾ...
"ಹಿತ ಎನ್ನುವ ಪದದಲ್ಲಿ ಒಂದು ನೆಮ್ಮದಿಯ ಅನುಭವವಿದೆ. ಚಳಿಗಾಲದಲ್ಲಿ ಕಂಬಳಿ ಸಿಕ್ಕರೆ ಬೆಚ್ಚನೆಯ ಹಿತದ ಅನುಭವವಾಗುತ...
©2025 Book Brahma Private Limited.