Date: 11-09-2022
Location: ಬೆಂಗಳೂರು
ಜಾನಪದ ಹಾಡುಗಳಿಗೆ ತಕ್ಕಂತೆ ಅದ್ಭುತವಾದ ಕಂಠ ಸಿರಿಯನ್ನು ಹೊಂದಿರುವ ಕಾಳಮ್ಮ ಅವರ ಹಾಡಿಗೆ ತಲೆದೂಗದವರಿಲ್ಲ. ನಿಜಕ್ಕೂ ಇವರಿಗೆ ಒಳ್ಳೆಯ ಹಾಡುಗಾರಿಕೆ ಇದೆ, ತಂದೆಯಿಂದ ಬಂದ ಪ್ರತಿಭೆಯಿದೆ. ಆದರೆ ಅವಕಾಶ ಪಡೆಯುವ ಬಗೆ ಅವರಿಗೆ ಗೊತ್ತಿಲ್ಲ ಎನ್ನುತ್ತಾರೆ ಲೇಖಕಿ ಜ್ಯೋತಿ ಎಸ್. ಅವರು ತಮ್ಮ ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ಈ ಸಲ ಜಾನಪದ ಹಾಡುಗಾರ್ತಿ ವಿಜಯನಗರ ಜಿಲ್ಲೆ ಲೊಟ್ಟನಕೆರೆಯ ಹರಾಳು ಕಾಳಮ್ಮನವರ ಬಗ್ಗೆ ಬರೆದಿದ್ದಾರೆ.
ಭಾರತೀಯ ಸಾಹಿತ್ಯ ಪ್ರಕಾರಗಳಲ್ಲಿ ಜಾನಪದ ಸಾಹಿತ್ಯ ಅತ್ಯಂತ ಪ್ರಮುಖ ಮತ್ತು ಶ್ರೀಮಂತ ಸಾಹಿತ್ಯ ಪ್ರಕಾರವಾಗಿದೆ. ಸ್ಥಳೀಯ ಆಡುಭಾಷೆಗಳಲ್ಲಿ ಜನರು ಕಟ್ಟಿ ಬೆಳೆಸಿದ ಜನಾನುರಾಗಿ ಈ ಜಾನಪದ. ಇದನ್ನು ಕಲಿಯಲು ಯಾವುದೇ ವಿಶೇಷ ಪಾಂಡಿತ್ಯ, ಸಾಹಿತ್ಯಿಕ ಅರ್ಹತೆ ಬೇಕಾಗಿಲ್ಲ. ಇದು ಒಂದೆರಡು ವಿಧಗಳಿಗೆ ಸೀಮಿತವಾಗಿಲ್ಲ. ಕಥೆ, ಹಾಡುಗಳಂತಹ ಅನೇಕ ರೀತಿಯಲ್ಲಿ ಜಾತಿ, ಮತ, ಪಂಥ, ಸಿದ್ಧಾಂತಗಳನ್ನು ಮೀರಿ ಜನಸಾಮಾನ್ಯರಲ್ಲಿ ಹಾಸುಹೊಕ್ಕಾಗಿದೆ. ಅಲ್ಲಲ್ಲಿ ಕೆಲವರು ಇದನ್ನು ತಮ್ಮ ಜೀವನದ ಆದ್ಯತೆಯನ್ನಾಗಿಸಿಕೊಂಡು ಅದರ ಪರಿಚಾರಕರಾಗಿರುತ್ತಾರೆ. ಇವತ್ತಿನ ಅಂಕಣದಲ್ಲಿ ಜಾನಪದದ ಸ್ಥಳೀಯ ರಾಯಭಾರಿಯಾದ ವಿಜಯನಗರ ಜಿಲ್ಲೆಯ ಲೊಟ್ಟನಕೆರೆ ಊರಿನ ಹರಾಳು ಕಾಳಮ್ಮನವರನ್ನು ಪರಿಚಯಿಸುವ ಪುಟ್ಟ ಪ್ರಯತ್ನ.
*
'ನಮ್ಮದು ನಾಲ್ಕು ಹೆಣ್ಣು, ನಾಲ್ಕು ಗಂಡು ಮಕ್ಕಳ ತುಂಬು ಕುಟುಂಬ. ನಾನು ಜನಪದ ಹಾಡು ಹೇಳುವುದನ್ನು ಕಲಿತದ್ದು ನನ್ನ ತಂದೆ ಮರಿಸ್ವಾಮಪ್ಪನವರಿಂದ. ನನ್ನ ತಂದೆ ನೃತ್ಯ ಮಾಡ್ತಾ ಕೋಲು ಪದಗಳನ್ನು ಹೇಳುತ್ತಿದ್ದರು. ಅವರಿಂದ ನಾನು ಪದಗಳಾಡೋದನ್ನು ಕಲಿತೆ. ಆಗೆಲ್ಲ, ಅವತ್ತೇ ಹಿಟ್ಟು ಬೀಸಿ ಅವತ್ತು ಊಟಮಾಡಬೇಕಿತ್ತು. ರಾಗಿ ಬೀಸುವಾಗ, ಜೋಳ ಬೀಸುವಾಗ ನಿದ್ರೆ ಬರಬಾರದು, ಬೇಸರವಾಗಬಾರದು, ಬೇಗ ಕೆಲಸ ಆಗಬೇಕು ಅಂತ ಹಾಡುಗಳನ್ನು ಹೇಳಿಕೊಂಡು ಕೆಲಸ ಮಾಡುತ್ತಿದ್ದೆವು. ಆಗ ನಿದ್ರೆ ಬರುತ್ತಿರಲಿಲ್ಲ. ಆಗೆಲ್ಲ ಜೋಳದ ಮುದ್ದೆ, ಜೋಳದ ರೊಟ್ಟಿ ಬಿಟ್ಟರೆ ಬೇರೆ ಏನಾದರೂ ಸಿಗೋದು ಕಷ್ಟವಾಗಿತ್ತು. ಒಂದು ದಿನ ಕೆಲಸಕ್ಕೆ ಹೋದರೆ 15 ರೂಪಾಯಿ ಕೂಲಿ. ನನಗೆ ಹತ್ತು ವರ್ಷ ತುಂಬುವ ಹೊತ್ತಿಗೆ ಹೊಲಕ್ಕೆ ಕೆಲಸಕ್ಕೆ ಹೋಗುತ್ತಿದ್ದೆ. ಕಳೆ ತೆಗೆಯುವುದು, ಹತ್ತಿ ಬಿಡಿಸುವುದು, ಜೋಳ, ಮೆಕ್ಕೆಜೋಳ, ಕಡಲೆಕಾಯಿ ಕೀಳಲು ಹೋದಾಗ ನನಗಿಂತ ವಯಸ್ಸಿನಲ್ಲಿ ದೊಡ್ಡವರು, ಅಜ್ಜಿಯಂದಿರೆಲ್ಲ ಪದಗಳನ್ನು ಹೇಳುತ್ತಿದ್ದರು. ಅದನ್ನು ನೆನಪಿಟ್ಟುಕೊಂಡು ಬಂದು ಕಲಿಯಬೇಕು ಅಂತ ರಾತ್ರಿ ಎಲ್ಲಾ ಬಾಯಿಪಾಠ ಮಾಡುತ್ತಿದ್ದೆ'.
'ಮನೆಯಲ್ಲಿ ಕಿತ್ತು ತಿನ್ನುವ ಬಡತನವಾದ್ದರಿಂದ ಶಾಲೆಗೆ ಹೋಗಲಿಲ್ಲ. ಆಗೆಲ್ಲ ಅನ್ನ ಸಿಕ್ಕರೆ ಸಾಕೆಂಬ ಪರಿಸ್ಥಿತಿ. ಅಪ್ಪನಿಗೆ ಹುಷಾರಿಲ್ಲದೆ ತೀರಿಕೊಂಡರು. ನಂತರ ಎಂಟು ಮಕ್ಕಳ ಜವಾಬ್ದಾರಿ ಅಮ್ಮನ ಮೇಲೆ ಬಿತ್ತು. ನಾವು ಅಕ್ಕತಂಗಿಯರೆಲ್ಲ ಅಮ್ಮನ ಜೊತೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆವು. ತಮ್ಮಂದಿರು ಕುರಿ ಕಾಯಲು ಹೋಗುತ್ತಿದ್ದರು. ಅಮ್ಮ ತಮ್ಮಂದಿರ ಒಬ್ಬೊಬ್ಬರದ್ದೇ ಕುರಿ ಮಾರಿ ಕೂಲಿ ಕೆಲಸ ಮಾಡಿ ಒಬ್ಬೊಬ್ಬರನ್ನು ಮದುವೆ ಮಾಡಿ ಕಳುಹಿಸುತ್ತಿದ್ದಳು. ನಾನು ಹನ್ನೆರಡು ವರ್ಷಕ್ಕೆ ಮೈನೆರೆದೆ. ಹದಿನೈದು ವರ್ಷಕ್ಕೆ ಮದುವೆ ಮಾಡಿದಳು. ನನ್ನ ಗಂಡನ ಹೆಸರು ಬಸಪ್ಪ. ನಮಗೆ ಮೂವರು ಗಂಡು ಮಕ್ಕಳು ಹುಟ್ಟಿದರು. ತವರುಮನೆಯಲ್ಲಿ ಕಷ್ಟವನ್ನುಂಡು ಬಂದವಳಿಗೆ ಇಲ್ಲೇನು ಹೊಸದಿರಲಿಲ್ಲ. ಏನೇ ಕಷ್ಟ ಬಂದರೂ ತವರುಮನೆಗೆ ಹೋಗಬಾರದೆಂದು ನಿರ್ಧಾರ ಮಾಡಿ ಬಡತನದಲ್ಲಿ ನಾನು ಹಸಿದರೂ ಮಕ್ಕಳ ಹೊಟ್ಟೆಯನ್ನು ತುಂಬಿಸುತ್ತಿದ್ದೆ. ಕೂಲಿಗೆ ಹೋದಾಗ ಎಲ್ಲರೂ ಚೆನ್ನಾಗಿ ಪದ ಹಾಡ್ತಿಯ ಹಾಡು ಎನ್ನುತ್ತಿದ್ದರು. ಆಗೆಲ್ಲ ಪದ ಹಾಡುತ್ತಿದ್ದೆ. ಇದ್ದವರು ಮೊಸರು, ಮಜ್ಜಿಗೆ ಊಟ ಕಟ್ಟಿಕೊಂಡು ಬರುತ್ತಿದ್ದರು. ಭಗವಂತ ನಮಗೆ ಯಾವಾಗ ಇಷ್ಟು ಕೊಡುತ್ತಾನೋ ಏನೋ ನನ್ನ ಮಕ್ಕಳಿಗೆಲ್ಲ ಇವರಂತೆಯೇ ಹೊಟ್ಟೆತುಂಬ ಊಟ ಹಾಕಬಹುದು ಅಂದುಕೊಳ್ಳುತ್ತಿದ್ದೆ. ಯಾರಾದರೂ ಮಿಕ್ಕುಳಿದ ಮೊಸರು ರೊಟ್ಟಿ ಏನಾದರೂ ಕೊಟ್ಟರೆ ನನ್ನ ಹಸಿವನ್ನು ತಡೆದು ಮಕ್ಕಳಿಗೆ ತರುತ್ತಿದ್ದೆ. ಹಸಿವು ಕಟ್ಟಿ ಕಟ್ಟಿ ನನ್ನ ಆರೋಗ್ಯ ಹಾಳಾಗುತ್ತಾ ಬಂತು. ಅಪ್ಪೆಂಡಿಕ್ಸ್ ಆಪರೇಷನ್ ಆಯ್ತು. ಗರ್ಭಕೋಶ ಕೂಡ ತೆಗೆದರು. ಹಾಗಾಗಿ ಈಗ ಹೆಚ್ಚು ಭಾರ ಹೊರಲು ಸಾಧ್ಯವಾಗುವುದಿಲ್ಲ. ನಮ್ಮದು ಒಂದು ಎಕರೆ ಭೂಮಿ ಇದೆ. ಅದರಲ್ಲಿ ಮೆಕ್ಕೆಜೋಳ ಬೆಳೆಯುತ್ತೇವೆ. ದೊಡ್ಡ ಮಗ ಗೊಣ್ಯಪ್ಪನಿಗೆ ಮದುವೆಯಾಗಿದೆ. ಎರಡನೇ ಮಗ ರಾಮಪ್ಪ ದುಮ್ಮಾಡಿ ಲೈನ್ಮನ್ ಕೆಲಸ ಮಾಡುತ್ತಾನೆ. ಕೊನೆಯ ಮಗ ಸಂದೀಪ್ ಕುರಿಕಾಯುತ್ತಾನೆ. ನಾನು ಅಡಿಗೆ ಮಾಡುವಾಗ ಹೇಳಿಕೊಳ್ಳುತ್ತಿದ್ದ ಹಾಡುಗಳನ್ನು ರಾಮಪ್ಪ ರೆಕಾರ್ಡ್ ಮಾಡಿ ನನಗೆ ಗೊತ್ತಿಲ್ಲದಂತೆ ಫೇಸ್ಬುಕ್ ವಾಟ್ಸಪ್ಗಳಲ್ಲಿ ಹಾಕಿದ್ದಾನೆ. ನಮಗೆಲ್ಲ ಅವು ಅಷ್ಟಾಗಿ ತಿಳಿಯುವುದಿಲ್ಲ. ನಂತರ ಅವ್ವ ನಿನ್ನ ಹಾಡನ್ನು ಇಷ್ಟು ಮಂದಿ ನೋಡಿದ್ದಾರೆ ಮೆಚ್ಚಿಕೊಂಡಿದ್ದಾರೆ. ನಿನ್ನ ಹಾಡನ್ನು ಇಷ್ಟು ಜನರು ಶೇರ್ ಮಾಡಿದ್ದಾರೆ ಎಂದು ಹೇಳುತ್ತಿದ್ದ. ನನ್ನನ್ನು ಮತ್ತಷ್ಟು ಹಾಡಲು ಹುರಿದುಂಬಿಸುತ್ತಿದ್ದ. ಸೋಬಾನೆಪದ, ಬೀಸುವ ಕಲ್ಲಿನಪದ, ಜೋಗುಳ, ಲಾವಣಿಪದ, ಮಳೆಹಾಡು, ಹೆಣ್ಣು ಮಕ್ಕಳು ಮೈ ನೆರೆದಾಗ ಹಾಡುವುದು ಹೀಗೆ ಸಾಕಷ್ಟು ಹಾಡುಗಳನ್ನು ಹಾಡುತ್ತೇನೆ. ನಾನು ಹಾಡುವುದನ್ನು ಗುರುತಿಸಿ ಕೊಟ್ಟೂರಿನಲ್ಲಿ ಎರಡು ಬಾರಿ ಸನ್ಮಾನವನ್ನು ಮಾಡಿದ್ದಾರೆ. ವಿಜಯನಗರ ಜಿಲ್ಲೆಯ ಕೊಟ್ಟೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಘಟಕದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರು ಸನ್ಮಾನ ಮಾಡಿದ್ದಾರೆ' ಎಂದು ನೆನೆದರು.
ಕೊಟ್ಟೂರಿನ ಖ್ಯಾತ ಪತ್ರಕರ್ತರು ಹಾಗೂ ಲೇಖಕರಾದ ಉಜ್ಜಿನಿ ರುದ್ರಪ್ಪನವರು ಸಂಗಮ ಶೀರ್ಷಿಕೆಯ ಜಾನಪದ ಹಾಡುಗಳ ಸಂಗ್ರಹ ಕೃತಿಯಲ್ಲಿ ಹರಾಳು ಕಾಳಮ್ಮ ಅವರು ಹಾಡುವ ಎಲ್ಲ ಹಾಡುಗಳನ್ನು ಸಂಗ್ರಹಿಸಿದ್ದಾರೆ. ಕಾಳಮ್ಮನವರಿಗೆ ಒಮ್ಮೆ ಟಿವಿಯಲ್ಲಿ ಬರಬೇಕು, ಬಂದು ಹಾಡನ್ನು ಹಾಡಬೇಕು ಎಂಬ ಆಸೆಯಿದೆ. ಜಾನಪದ ಹಾಡುಗಳಿಗೆ ತಕ್ಕಂತೆ ಅದ್ಭುತವಾದ ಕಂಠ ಸಿರಿಯನ್ನು ಹೊಂದಿರುವ ಕಾಳಮ್ಮ ಅವರ ಹಾಡಿಗೆ ತಲೆದೂಗದವರಿಲ್ಲ. ನಿಜಕ್ಕೂ ಇವರಿಗೆ ಒಳ್ಳೆಯ ಹಾಡುಗಾರಿಕೆ ಇದೆ, ತಂದೆಯಿಂದ ಬಂದ ಪ್ರತಿಭೆಯಿದೆ. ಆದರೆ ಅವಕಾಶ ಪಡೆಯುವ ಬಗೆ ಅವರಿಗೆ ಗೊತ್ತಿಲ್ಲ.
ಅಕ್ಷರ ಕಲಿಯದ ಜನರ ಬಾಯಿಂದ ಬಾಯಿಗೆ ಹಾಡಾಗಿ ಕಥೆಗಳಾಗಿ ಹರಿದುಬಂದ ಈ ಜಾನಪದ ಸಾಹಿತ್ಯ ನಮ್ಮ ಜನರ ಬದುಕು ಬವಣೆ ಬಿಂಬಿಸುತ್ತ ಸಾಮಾನ್ಯರ ಆಗುಹೋಗುಗಳನ್ನು ಒಳಗೊಂಡ ಸರಳ ಶ್ರೀಮಂತ ಕಲಾಪ್ರಕಾರ. ಆದರೆ ಇತ್ತೀಚೆಗೆ ಕೆಲವು ಅಸಂಬದ್ಧ ಸಿನಿಮಾ ವಿಷಯ, ಅಶ್ಲೀಲ, ಅನರ್ಥ ಸಾಹಿತ್ಯದತ್ತ ಒಂದಷ್ಟು ಯುವಪೀಳಿಗೆ ಆಕರ್ಷಿತರಾಗಿ ನಮ್ಮ ಶುದ್ಧ ಸಾಹಿತ್ಯವನ್ನು, ಜಾನಪದದಂತಹ ನಮ್ಮ ಕಲೆಗಳನ್ನು ಮರೆಯುತ್ತಿರುವುದು ದುರಂತ. ಈ ಮೂಲಕ ಅದರಲ್ಲಿನ ಮೌಲ್ಯಗಳಿಂದ ವಿಮುಖರಾಗುತ್ತಿರುವುದು ಆತಂಕದ ಸಂಗತಿ. ಹಾಗಂತ ಈ ಜಾನಪದ ಪೂರ್ತಿಯಾಗಿ ನಶಿಸುತ್ತಿದೆಯೆಂದು ಹೇಳಲಾಗುವುದಿಲ್ಲ. ಏಕೆಂದರೆ ಕಾಲ ಕಾಲಕ್ಕೆ ಪರಿಸ್ಥಿತಿಗೆ ತಕ್ಕಂತೆ ತನ್ನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತ ಬೆಳೆಯುತ್ತಿದೆ.
ಶಾಲೆಯ ಮೆಟ್ಟಿಲನ್ನೇ ಹತ್ತದೆ ಅವರಿವರ ಹಾಡುಗಳನ್ನು ಕೇಳಿ ಕಂಠಪಾಠ ಮಾಡಿ ಪದಗಳನ್ನು ಹಾಡುತ್ತ ನಮ್ಮ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ನಿರತರಾಗಿರುವ ಹರಾಳು ಕಾಳಮ್ಮನವರಂತಹ ಎಲೆಮರೆಯ ಕಾಯಿಯಂಥ ಪ್ರತಿಭೆಗಳನ್ನು ಪ್ರೋತ್ಸಾಹಿಸೋಣ. ಈ ಕಲೆಗಳ ಮೌಲ್ಯಗಳನ್ನು ಮತ್ತು ಈ ಕಲೆಗಳು ಹೇಳುವ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ದಾಟಿಸೋಣ.
-ಜ್ಯೋತಿ ಎಸ್.
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...
©2024 Book Brahma Private Limited.