ಯಾರು ಹಿತವರು ನಿನಗೆ......?

Date: 20-11-2020

Location: .


ಅಂದಿನ ಲೇಖಕರ ಜನಪರ ಹಾಗೂ ಇಂದಿನ ಬಹುತೇಕ ಲೇಖಕರ ಜನಪ್ರಿಯ ಬರಹಗಳನ್ನು ಸಾಮಾಜಿಕ ಚಿಂತನೆಯ ಮೂಸೆಯಲ್ಲಿಟ್ಟು ಹಿರಿಯ ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್ ಅವರು ತಮ್ಮಆವುಗೆಯ ಕಿಚ್ಚು’ ಅಂಕಣದಲ್ಲಿ ವಿಶ್ಲೇಷಿಸಿದ್ದು ಹೀಗೆ;

ಇದು ಕಳೆದ ಕೆಲವು ದಿನಗಳಿಂದ ನಾನು ಕೇಳಿಕೊಳ್ಳುತ್ತಿರುವ ಪ್ರಶ್ನೆ. ಪತ್ತೇದಾರೀ ಕಾದಂಬರಿಗಳ ಎನ್‍. ನರಸಿಂಹಯ್ಯ, ಬಿ.ಕೆ. ಸುಂದರರಾಜ್, ಪೊಲೀಸ್ ನ್ಯೂಸ್, ರವಿ ಬೆಳಗೆರೆ ಮುಂತಾದವರೆಲ್ಲ ನಮ್ಮೊಳಗಡೆಯೇ ಇರುವವರಲ್ಲವೇ? ಇವರು ನಮ್ಮ ಮನಸ್ಸಿನ ಯಾವ ನೆಲೆಗಳಿಗೆ ಪೋಷಣೆ ನೀಡುತ್ತಾರೆ? ಇವರನ್ನು ಟೀಕೆ ಮಾಡಿ ನೈತಿಕ ಪರಿಶುದ್ಧತೆಯ ನಾಟಕವಾಡುವುದು ಸುಲಭ. ಅಂತಹ ಟೀಕೆಯ ಜೊತೆಗೆ ಸಾತ್ವಿಕ ಕೋಪವೂ ಇರಬಹುದು. ಆದರೆ ಎಲ್ಲರಿಗೂ ಕಾಣಿಸುವ ನಾವು, ನಮಗೆ ಮಾತ್ರ ಕಾಣಿಸುವ ನಾವು, ನಮಗೆ ಕಾಣಿಸುವ ಇತರರು. ಅವರ ಒಳಗು-ಹೊರಗು, ನಮ್ಮೆಲ್ಲರನ್ನೂ ರೂಪಿಸುವ ಕ್ಷಣಕ್ಷಣವೂ ಬದಲಾಗುತ್ತಿರುವ ಸಮಾಜ, ಸಮಾಜ-ಪುಸ್ತಕದ ಹಾಳೆಗಳನ್ನು ತಿರುಗಿಸುತ್ತಿರುವ ಕಾಲ.... ಇವೆಲ್ಲವನ್ನೂ ಹುಡುಕಿ ನೋಡಿದಾಗ ಕಾಣುವ ಸತ್ಯಗಳು ಯಾವ ಬಗೆಯವು? ಆಗ ‘ಬೆಳಗೆರೆಯವರ ಬದುಕು ಬರಹಗಳ ಪರಿಶೀಲನೆಯು ಕೇವಲ ಒಬ್ಬ ಲೇಖಕ/ಪತ್ರಿಕೋದ್ಯಮಿಯ ಜೀವನಕ್ರಮ ಹಾಗೂ ಲೇಖನ ಕ್ರಮಗಳ ಚರ್ಚೆಯಾಗಿ ಉಳಿಯುವುದಿಲ್ಲ. ಅದು ನಮ್ಮ ಬದುಕನ್ನು ಬೆಳೆಸುತ್ತಿರುವ, ಕೆಡಿಸುತ್ತಿರುವ ಸಂಗತಿಗಳನ್ನು ನೋಡುವ, ಅರ್ಥ ಮಾಡಿಕೊಳ್ಳುವ ಬಗೆಯೂ ಆಗುತ್ತದೆ. ಅವರನ್ನು ಸರಿಯಾದ ಕಾರಣಗಳಿಗಾಗಿ ವಿಮರ್ಶಿಸದೆ ‘ನಾನೇ ಸರಿತನ’ದ ನೆಲೆಯಿಂದ ನೋಡಿದರೆ ಅದು ಆತ್ಮವಂಚನೆಯಾಗುತ್ತದೆ.

ಅಪರಾಧ ಮತ್ತು ಅಶ್ಲೀಲಗಳ ಮೂಲವು ಅಸಮಾನತೆ ಮತ್ತು ಮುಚ್ಚುಮರೆಗಳಲ್ಲಿಯೂ ಇದೆಯೆಂದು ತೋರುತ್ತದೆ. ಸಹಜವಾದುದನ್ನು ಅಸಹಜ ಚಪಲವೆಂದು ಕರೆಯುವ, ಐಂದ್ರಿಯಿಕವಾದುದೆಲ್ಲವನ್ನೂ ನಿರಾಕರಣೆಗೆ ಯೋಗ್ಯವೆಂದು ಭಾವಿಸುವ ಒಂದು ನಿಲುವು ನಮ್ಮ ಚಿಂತನ ಕ್ರಮದಲ್ಲಿ ಅದು ಹೇಗೋ ಸೇರಿಕೊಂಡಿದೆ. ಅದು ‘ಸನ್ಯಾಸ’ವೇ ಆದರ್ಶವೆಂದು ಹೇಳುತ್ತಾ ಎಲ್ಲ ಬಗೆಯ ಸುಖಗಳನ್ನೂ ಪಾಪವೆನ್ನುವ ಹಾಗೆ ನೋಡುತ್ತದೆ. ಸರಳತೆ ಮತ್ತು ಖಾಲಿತನಗಳು ಒಂದೇ ಎಂಬ ತಪ್ಪು ತಿಳಿವಳಿಕೆ ಇದಕ್ಕೆ ಕಾರಣ. ಸಮಾಜ ಮತ್ತು ಸಮುದಾಯಗಳು ರೂಪಿಸಿಕೊಂಡಿರುವ ಅನೇಕ ಕಟ್ಟುಪಾಡುಗಳು ನಮ್ಮ ಅಸ್ತಿತ್ವ ಮತ್ತು ಆರೋಗ್ಯಗಳ ದೃಷ್ಟಿಯಿಂದ ಅಗತ್ಯವಾದವು. ಆದರೆ, ಮೇಲುನೋಟಕ್ಕೆ ಅವುಗಳನ್ನು ಒಪ್ಪಿಕೊಳ್ಳುವ ನಮ್ಮ ಮನಸ್ಸು ಒಳಗೊಳಗೇ ಕದ್ದು ಮುಚ್ಚಿ ‘ಅನ್ಯ’ವನ್ನೇ ಧ್ಯಾನಿಸುತ್ತಿರುತ್ತದೆ. ನಿಯಂತ್ರಣದ ನಿಯಮಗಳಿಗೂ ವರ್ತನೆಯ ಬಗೆಗಳಿಗೂ ಉಂಟಾಗುವ ಬಹು ದೊಡ್ಡ ಬಿರುಕನ್ನು ವಿವರಿಸುವಾಗ ಈ ಅಂಶವನ್ನು ಗಮನಿಸಬೇಕು.

ಇಲ್ಲಿ ಇನ್ನೊಂದು ವಿಷಯವನ್ನೂ ಮರೆಯಬಾರದು. ಅಸಮಾನತೆಯೂ ಅಪರಾಧಕ್ಕೆ ಕಾರಣವೆಂದ ಕೂಡಲೇ ಬಡವರೇ ಅಪರಾಧಿಗಳು ಎಂಬ ಅಪ್ಪಟ ಸುಳ್ಳಿನ ಕಡೆ ಚಲಿಸಬಾರದು. ಶ್ರೇಣೀಕರಣದ ಕೆಳಗಿನ ಹಂತಗಳಲ್ಲಿ ಇರುವವರಿಗೆ ಅಪರಾಧ ಮಾಡುವ, ಮಾಡಿ ಬಚಾವಾಗುವ ಅವಕಾಶವೂ ಇರುವುದಿಲ್ಲ, ಅಪೇಕ್ಷೆಯೂ ಇರುವುದಿಲ್ಲ. ನೂರಕ್ಕೆ ತೊಂಬತ್ತರಷ್ಟು ಕಾನೂನುಗಳು ಪರಮ ನೀಚವಾದ ಶೋಷಣೆಯಲ್ಲಿ ನಿರತರಾಗಿರುವವರ ಪರವಾಗಿಯೇ ರೂಪಿತವಾಗಿರುತ್ತವೆ. ಅವುಗಳಲ್ಲಿ ಇನ್ನೆಷ್ಟೋ ಕೇವಲ ಕಾಗದದ ಮೇಲೆ ಬದುಕಿರುತ್ತವೆ. ಈಗ ಅದರ ಬಗ್ಗೆ ಮಾತಾಡದೆ ಅಶ್ಲೀಲತೆ ಮತ್ತು ಮುಚ್ಚುಮರೆಗಳ ಬಗ್ಗೆ ಯೋಚಿಸುತ್ತೇನೆ.

ಸಾರ್ವಜನಿಕ ಮಾಧ್ಯಮಗಳಲ್ಲಿ ಮತ್ತು ಈಚೆಗೆ ಜನಪ್ರಿಯವಾಗಿರುವ ಸಾಮಾಜಿಕ ಮಾಧ್ಯಮಗಳಲ್ಲಿ ಮಾತನಾಡುವವರ, ಬರೆಯುವವರ ಹೊಣೆಗಾರಿಕೆಯು ಹಲವು ಬಗೆಯದು. ಅವರ ಆಶಯಗಳೂ ಭಿನ್ನ ಭಿನ್ನವಾಗಿಯೇ ಇರಬಹುದು. ತನ್ನ ಬರವಣಿಗೆಯು ಹಲವರಿಗೆ ತಲುಪಬೇಕೆಂಬ ಆಸೆ ಪಡಲು ಬೇರೆ ಬೇರೆ ಬಗೆಯ ಕಾರಣಗಳಿರುತ್ತವೆ. ಕಲಾವಿದರೂ ಈ ಮಾತಿಗೆ ಅಪವಾದವಲ್ಲ. ಕುವೆಂಪು, ಕಾರಂತ, ತೇಜಸ್ವಿ, ಲಂಕೇಶ್, ಭೈರಪ್ಪ, ರವಿ ಬೆಳಗೆರೆ, ಮಾಸ್ಟರ್ ಹಿರಣ್ಣಯ್ಯ ಎಲ್ಲರೂ ಜನರ ಬಗ್ಗೆ ಬರೆದರು, ಜನರಿಗೆ ತಲುಪಬೇಕೆಂದು ಬರೆದರು. ಇವರು ಬರೆದಿದ್ದು ಜನಪರವಾಯಿತೋ ಜನಪ್ರಿಯವಾಯಿತೋ ಅವೆರಡೂ ಆಯಿತೋ ಎಂಬ ಪ್ರಶ್ನೆಗಳು ಬೇರೆ ಬಗೆಯವು. ಆದರೆ, ಇವರೆಲ್ಲರೂ ತಮ್ಮ ಮಾಧ್ಯಮವಾದ ಭಾಷೆಯನ್ನು ಬಳಸುವ ಬಗ್ಗೆ ತಮಗೆ ಸರಿಯೆನಿಸಿದ ತೀರ್ಮಾನಗಳನ್ನು ತೆಗೆದುಕೊಂಡು ಅದರಂತೆ ಬರೆದರು. ಇವರ ಬರವಣಿಗೆಯು ಓದುಗರ ಮೇಲೆ ಬೀರಿದ ಪ್ರಭಾವವು ಬೇರೆ ಬೇರೆ ಬಗೆಯವೆಂದು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ಈ ಹಿನ್ನೆಲೆಯಲ್ಲಿ, ಮನಸ್ಸನ್ನು ಅರಳಿಸುವ, ಬೆಳೆಸುವ ಬರವಣಿಗೆಗೂ ಅದನ್ನು ಕೆಡಿಸುವ, ಕೆರಳಿಸುವ ಬರವಣಿಗೆಗೂ ಇರುವ ವ್ಯತ್ಯಾಸ ಯಾವುದೆಂದು ನಾವು ಯೋಚಿಸಬೇಕಾಗಿದೆ.

ಅರ್ಥಶಾಸ್ತ್ರದಲ್ಲಿ ‘ಕೆಟ್ಟ ಹಣವು ಒಳ್ಳೆಯದನ್ನು ಓಡಿಸಿಬಿಡುತ್ತದೆ’ ಎಂಬ ನಿಯಮವನ್ನು ಹೇಳುತ್ತಾರೆ. ಇದನ್ನು ‘ಗ್ರೀಶಾಮ್ಸ್ ಲಾ’ ಎಂದು ಕರೆಯಲಾಗಿದೆ. ಬರವಣಿಗೆಯ, ಅದರಲ್ಲಿಯೂ ಮಾಧ್ಯಮಗಳಲ್ಲಿ ಬರುವ ಬರವಣಿಗೆಯ ಹಣೆಯಬರಹವೂ ಹೀಗೆಯೇ ಎಂದು ಕಾಣುತ್ತದೆ. ಭಾಷೆಯನ್ನು ಹಣಕಾಸಿನ ಲಾಭದ ಆಸೆಯಿಂದ ಅಥವಾ ತನ್ನ ವೈಚಾರಿಕ ಅಜೆಂಡಾಗಳನ್ನು ಆಕ್ರಮಣಶೀಲವಾಗಿ ಹರಡುವ ಹಂಬಲದಿಂದ ಅಥವಾ ಸಮುದಾಯಗಳನ್ನು ಪ್ರಚೋದಿಸುವ ಉದ್ದೇಶದಿಂದ ಬಳಸಿದಾಗ ಅದು ನಿಜಕ್ಕೂ ‘ಅಶ್ಲೀಲ’ವಾಗುತ್ತದೆ. ಯಾವುದೇ ಸಂಗತಿಯ ವ್ಯಾಪಾರೀಕರಣವೇ ಬರವಣಿಗೆಯ ಅಶ್ಲೀಲತೆಗೆ ಮೂಲ ಕಾರಣ. ಇಲ್ಲಿ ಅಶ್ಲೀಲವೆಂದರೆ ಲೈಂಗಿಕ ವಿಷಯಗಳ ಪ್ರಸ್ತಾಪ ಮಾತ್ರ ಅಲ್ಲವೇ ಅಲ್ಲ. ಅದು ಮನುಷ್ಯರ ಕೆಳಮಟ್ಟದ ಭಾವನೆಗಳನ್ನು ಪ್ರಚೋದಿಸುವ ಮೂಲಕವೇ ಅವರನ್ನು ಪಶುಗಳಾಗಿ ಮಾಡುವ ಬುದ್ಧಿಪೂರ್ವಕವಾದ ಪ್ರಯತ್ನ. ಇಲ್ಲಿ ನಾನು ಪ್ರಾಣಿಗಳ ಬಗ್ಗೆ ಜಡ್ಜ್ ಮೆಂಟ್ ಕೊಡುತ್ತಿಲ್ಲ. ಬದಲಾಗಿ ಮನುಷ್ಯರೊಳಗಿನ ಮಾನವೀಯತೆಯನ್ನು ನಾಶಮಾಡುವ ಅ-ಮಾನವೀಕರಣದ ಬಗ್ಗೆ ಮಾತನಾಡುತ್ತಿದ್ದೇನೆ. ಇನ್ನೊಬ್ಬರನ್ನು ಕೊಲ್ಲಬಹುದೆಂದು ಹೇಳುವುದೆಲ್ಲವೂ, ಹಾಗೆ ಕೊಲ್ಲಲು/ಹಿಂಸಿಸಲು ಪ್ರಚೋದನೆ ನೀಡುವುದೆಲ್ಲವೂ ‘ಅಶ್ಲೀಲ’ವೇ. ಇಂಥ ಕಡೆ ಮಾತುಗಾರಿಕೆಯೂ ಮರುಳು ಮಾಡುವ ಸಾಧನವಾಗುತ್ತದೆ. ಒಂದರ ಮೇಲೆ ಒಂದರಂತೆ ಪೇರಿಸುವ ಅರೆಬರೆ ವಿವರಗಳು ಸರಳ ಸತ್ಯವನ್ನು ಹೇಳುವ ಬದಲು ಮರೆ ಮಾಚುತ್ತವೆ. ಆಗ ನಮ್ಮ ಕಡೆಯ ಸೈನಿಕರ ಆತ್ಮಾಹುತಿಯಾದರೆ ಅವರ ಕಡೆಯ ಸೈನಿಕರ ಬಲಿಯಾಗುತ್ತದೆ. ಒಂದು ಪ್ರಾಣಿ ‘ಮಾತೆ’ಯಾದರೆ ಇನ್ನೊಂದು ಪ್ರಾಣಿ ಮೃಗವೋ ಆಹಾರವೋ ಆಗುತ್ತದೆ. ಕ್ರಿಕೆಟ್ ಬಗ್ಗೆ ಬರೆಯುವಾಗ ಯುದ್ಧದ ಪರಿಭಾಷೆಯನ್ನು ಬಳಸುವುದು ಸಹಜವೆನಿಸುತ್ತದೆ. ಹೆಣ್ಣೊಬ್ಬಳು ಬುದ್ಧಿ, ಮನಸ್ಸು, ತಿಳಿವಳಿಕೆ ಎಲ್ಲವೂ ಇರುವ ಮನುಷ್ಯಳಾಗದೆ ‘ಮಾಂಸ’ವೋ, ಮೂಗುಬಟ್ಟೋ, ಐಟಮ್ಮೋ ಆಗುವುದೂ ಹೀಗೆಯೇ. ವ್ಯಂಗ್ಯ, ವಿಟ್, ಭಾವುಕತೆ, ಮೆಲೋಡ್ರಾಮಾ, ರೋಚಕತೆ ಮುಂತಾದ ಉಪಕರಣಗಳನ್ನು ದುರುದ್ದೇಶದಿಂದ ಬಳಸಿದಾಗ ಭಾಷೆಯು ಆಯುಧವಾಗುತ್ತದೆ. ಲೇಖಕರು ಇಂಥ ತಂತ್ರಗಳನ್ನು ಬಳಸುವ ಮೂಲಕ ಪಡೆಯುವ ಜನಪ್ರಿಯತೆಗೂ ಕಾರಂತ, ತೇಜಸ್ವಿಯಂಥವರ ಬರವಣಿಗೆಗೂ ಇರುವ ವ್ಯತ್ಯಾಸವನ್ನು ಗಮನಿಸಿದಾಗ, ನಮಗೆ ಯಾವುದು ಕಸ ಯಾವುದು ರಸ ಎಂದು ಗೊತ್ತಾಗುತ್ತದೆ. ಒಂದು ಕಾಲದಲ್ಲಿ ಪೋಷಕರು, ಶಿಕ್ಷಣ ಮತ್ತು ಸಮುದಾಯಗಳು ಈ ಬಗೆಯ ತಿಳಿವಳಿಕೆಯನ್ನು ಕೊಡುತ್ತಿದ್ದವು. ಈಚಿನ ಕೆಲವು ದಶಕಗಳಲ್ಲಿ ಇವೆರೆಲ್ಲರೂ ಈ ಹೊಣೆಗಾರಿಕೆಯಿಂದ ಕೈ ತೊಳೆದುಕೊಂಡಿದ್ದಾರೆ. ಶಿಕ್ಷಣ ಮತ್ತು ಮಾಧ್ಯಮಗಳು ಒಂದೇ ಬಗೆಯ ಬರವಣಿಗೆಯನ್ನು ಪ್ರೊಮೋಟ್ ಮಾಡತೊಡಗಿವೆ. ಇದರ ಹಿಂದೆ ಲಾಭ ಬಡುಕತನದ ರೋಗ ಇದೆ. ಇದರಿಂದ ‘ಅಭಿರುಚಿ ನಾಶ’ ಆಗುತ್ತದೆ. ಇದು ನಾವು ಈಗ ಗಮನಿಸುತ್ತಿರುವ ಬಹು ದೊಡ್ಡ ದುರಂತ. ಸಿನಿಮಾಗಳಲ್ಲಿ ಬಳಸುವ ಭಾಷೆಯು ಜನಪದೀಯತೆ, ಗ್ರಾಮೀಣತೆಗಳ ಶಕ್ತಿಯನ್ನು ಪಡೆಯುವ ಬದಲು, ಕೀಳು ಅಭಿರುಚಿಯನ್ನು ಪೋಷಿಸತೊಡಗಿ ದಶಕಗಳೇ ಕಳೆದವು. ಎಲ್ಲರಿಗೂ ಅರ್ಥವಾಗುವಂತೆ ಬರೆಯಬೇಕು, ಸೃಷ್ಟಿಸಬೇಕು ಎನ್ನುವುದೇ ಕಲಾವಿದರ ಗುರಿಯಾದಾಗ, ತನ್ನ ಮಾಧ್ಯಮದ ಅನನ್ಯತೆ ಹಾಗೂ ಅದರ ಸಾಧ್ಯತೆಗಳನ್ನು ವಿಸ್ತರಿಸುವ ಬಗ್ಗೆ ಒಂದಿಷ್ಟೂ ಯೋಚಿಸಿದ ಆಶಯನಿರತ ಕಲಾವಿದರು ಹುಟ್ಟಿಕೊಳ್ಳುತ್ತಾರೆ.

ಹಾಗೆಯೇ ಕುವೆಂಪು ಅವರು ಹೇಳಿದ ‘ಎದೆಯ ದನಿ’ಗೆ ಸಂಪೂರ್ಣವಾಗಿ ಕುರುಡಾದ ಅಪ್ರಾಮಾಣಿಕ ಬರವಣಿಗೆಯು ಅಶ್ಲೀಲತೆಯ ಮತ್ತೊಂದು ಮೂಲ. ನಾವೆಲ್ಲರೂ ಬೇರೆ ಬೇರೆ ಪ್ರಮಾಣದಲ್ಲಿ, ಇಂತಹ ಬರವಣಿಗೆಯಲ್ಲಿ ತೊಡಗಿಕೊಂಡಿದ್ದೇವೆ., ಸುಳ್ಳು ಹೇಳುತ್ತಿದ್ದೇವೆ. ಈ ಅನ್ಯವಂಚನೆ ಹಾಗೂ ಆತ್ಮವಂಚನೆಗಳ ಹಿಂದೆ ಹತ್ತಾರು ಬಗೆಯ ರಾಜಿ-ಕಬೂಲಿ-ಅವಕಾಶವಾದಗಳು ಇರುತ್ತವೆ. ಆತ್ಮರತಿಯ ಫಲವಾದ ಭಂಡತನವು ಹೀನಾಯವಾದ ‘ಸ್ವ-ಪ್ರಚಾರದಲ್ಲಿ ತೊಡಗಿಕೊಳ್ಳುತ್ತದೆ. ಹಿರಿಯ ಸಾಹಿತಿಗಳು ಈ ಬಗೆಯ ಅಶ್ಲೀಲವಾದ ಪರಸ್ಪರ ಬೆನ್ನುತಟ್ಟುವಿಕೆಯಲ್ಲಿ ಮಗ್ನರಾಗಿರುವುದನ್ನು ನಾವು ನೋಡುತ್ತಲೇ ಇದ್ದೇವೆ, ಸಹಿಸಿಕೊಳ್ಳುತ್ತಿದ್ದೇವೆ. ನಾವು ಬದುಕುವ, ಭಾವಿಸುವ, ವಿಚಾರ ಮಾಡುವ ರೀತಿಗೆ ಯಾವುದೇ ಸವಾಲು ಹಾಕದ ಇಂಥ ಬರವಣಿಗೆಯನ್ನು ನಾವು ಪ್ರಶ್ನಿಸದೆ ಒಪ್ಪಿಕೊಳ್ಳುತ್ತೇವೆ. ನಮ್ಮ ಪಠ್ಯಪುಸ್ತಕಗಳೂ ಇಂಥ ಕಸವನ್ನೇ ತುಂಬಿಕೊಂಡಾಗ, ನಮ್ಮ ಅಧ್ಯಾಪಕರೂ ಅದೇ ಅತ್ಯುತ್ತಮವೆಂದು ಹೇಳತೊಡಗಿದಾಗ ಮುಂದಿನ ಪೀಳಿಗೆಯ ಬಗ್ಗೆ ಹತಾಶರಾಗದೆ ಬೇರೆ ದಾರಿಯೇ ತೋರುವುದಿಲ್ಲ.

ಹಾಗಾದರೆ, ಈಗ ಒಳ್ಳೆಯ ಬರವಣಿಗೆ ಬರುತ್ತಲೇ ಇಲ್ಲವೇ, ಹಿಂದೆ ಬರೆದುದೆಲ್ಲ ಕಾಣೆಯಾಗಿದೆಯೇ ಎಂಬ ಪ್ರಶ್ನೆಯನ್ನು ಬದಿಗೆ ಸರಿಸಬಾರದು. ಮಾಧ್ಯಮಗಳಲ್ಲಿ ಸಾಮಾನ್ಯ ಮತ್ತು ಅಸಾಮಾನ್ಯಗಳ ಕೊಲಾಜ್ ಇರುತ್ತದೆ. ನಮ್ಮ ಪತ್ರಿಕೆಗಳು ಈ ಬಗೆಯ ‘ಮಿಸಲ್ ಭಾಜಿಯನ್ನು ನಮ್ಮ ಮುಂದೆ ಇಡುತ್ತವೆ. ಕೆಟ್ಟದ್ದರ ನಡುವೆ ಒಳ್ಳೆಯದು ಮರೆಯಾಗುತ್ತದೆ. ಓದುಗರ ಬಳಿ ಯಾವುದು ಕೆಟ್ಟದ್ದು ಯಾವುದು ಅಲ್ಲ ಎಂದು ಗುರುತಿಸುವ ಮಾನದಂಡಗಳೇ ಇರುವುದಿಲ್ಲ. ‘ಬರವಣಿಗೆ’ ಮತ್ತು ಚಿತ್ರಗಳ ಸಂಯೋಜನೆಯಾದಾಗ ಅವುಗಳ ಕೆರಳಿಸುವ ಗುಣ ಇನ್ನಷ್ಟು ಜಾಸ್ತಿಯಾಗುತ್ತದೆ. ಇದರ ಜೊತೆಗೆ ಜಾಹೀರಾತುಗಳ ಮಾಂತ್ರಿಕಲೋಕ್ಕೆ ಅದರದೇ ಆಕರ್ಷಣೆ ಇರುತ್ತದೆ.

ದಿವಂಗತ ರವಿ ಬೆಳಗೆರೆಯವರ ನೆನಪಿನಿಂದ ಶುರುವಾದ ಮಾತು ಹಲವು ದಿಕ್ಕುಗಳಲ್ಲಿ ಚಲಿಸಿತು. ಅವರ ಬರವಣಿಗೆಯನ್ನು ನಾನು ಮೊದಲ ದಿನಗಳಿಂದಲೂ ಗಮನಿಸಿದ್ದೇನೆ. ನಾನು ಅವರನ್ನು ಭೇಟಿಯಾಗಿಲ್ಲ, ಅವರೊಂದಿಗೆ ಮಾತನಾಡಿಲ್ಲ. ಆದರೆ, ಅವರ ಅನುವಾದಗಳು, ಸ್ವಂತ ಕೃತಿಗಳು ಮತ್ತು ಪತ್ರಿಕಾ ಬರಹಗಳನ್ನು ಸಾಕಷ್ಟು ಓದಿದ್ದೇನೆ. ದೂರದರ್ಶನದಲ್ಲಿ ಅವರು ಹುಟ್ಟು ಹಾಕಿದ ‘ವಿಶಿಷ್ಟ’ ಶಾರೀರ, ಶೈಲಿ ಮತ್ತು ರೋಚಕತೆಯ ಅಸಹಜ ಬಗೆಯು ನಂತರದ ಹಲವರಿಗೆ ಮಾದರಿಯಾದುದನ್ನು ವಿಷಾದದಿಂದ ಗಮನಿಸಿದ್ದೇನೆ. ಭಾವುಕತೆ, ಭಾವನೆ ಮತ್ತು ‘ಚಪ್ಪರಿಸಬಹುದಾದ’ ಶೈಲಿಯ ಮಿಶ್ರಣವು ಹುಟ್ಟು ಹಾಕುವ ಲಂಪಟ ಬರಹಗಳು ಜನರನ್ನು ಮಾದಕ ದ್ರವ್ಯದಂತೆ ಆವರಿಸಿದುದನ್ನು ಗಮನಿಸಿದ್ದೇನೆ. ಅದರ ನಡುವೆಯೇ ಜಯಂತ ಕಾಯ್ಕಿಣಿ, ಪ್ರತಿಭಾ, ‘ಜಾನಕಿ ಕಾಲಂ’ನ ಜೋಗಿ ಮುಂತಾದವರು ಅವರ ಪತ್ರಿಕೆಯಲ್ಲಿ ಬರೆದುದನ್ನೂ ಓದಿ ಇಷ್ಟ ಪಟ್ಟಿದ್ದೇನೆ. ಆದರೆ, ಅವರು ಬಯಸಿದ್ದು, ಹುಡುಕಿದ್ದು, ಪಡೆದಿದ್ದು, ಕೊನೆಗೆ ಹಾವುಕಚ್ಚಿ ಸಾಯುವುದನ್ನೇ ಕಾಯುತ್ತಿದ್ದ ಪರೀಕ್ಷಿತನಂತೆ ಹೋಗಿದ್ದು ಎಲ್ಲವನ್ನೂ ಗಮನಿಸಿದ್ದೇನೆ. ಯಾವುದೇ ಲೇಖಕನ ಸ್ವಂತ ಬದುಕು ಓದುಗರ ಆಸಕ್ತಿಯ ವಿಷಯ ಅಲ್ಲ, ಆಗಬಾರದು. ಮಾಧ್ಯಮಗಳಿಂದ ಮತ್ತು ಸ್ವತಃ ಲೇಖಕನಿಂದ ಹಾಗೂ ಅವನ ಗೆಳೆಯರಿಂದ/ಶತ್ರುಗಳಿಂದ ಅಂತಹ ಒತ್ತಾಯ, ಒತ್ತಡಗಳು ಬಂದರೂ ಅವುಗಳಿಗೆ ಓದುಗರು ವಶವಾಗಬಾರದು. ಆದರೆ, ಅವರ ಬರವಣಿಗೆಯು ನಮ್ಮೊಂದಿಗೆ ಇರುತ್ತದೆ. ಕೆಲವು ಸಲ ಬರವಣಿಗೆಯು ಬದುಕಿನ ಉಪ ಉತ್ಪನ್ನವಾಗಿರುತ್ತದೆ. ಪತ್ರಿಕೆಯಲ್ಲಿ ಬಂದ ಬರವಣಿಗೆ ಅದರೊಂದಿಗೇ ನಾಶವಾಗುತ್ತದೆ. ಒಂದು ವೇಳೆ ಅದು ಪುಸ್ತಕರೂಪದಲ್ಲಿ ಬಂದರೂ ಸಾಮಯಿಕವಾದುದು ಕಳೆದುಹೋಗಿ ಶಾಶ್ವತವಾದುದು ಕೆಲ ಕಾಲ ಉಳಿಯುತ್ತದೆ. ಕೇವಲ ಪುಸ್ತಕ ರೂಪದಲ್ಲಿ ಬಂದುದು ಕೂಡ ಬಹುಬೇಗ ಹೊರಟು ಹೋಗಿ ಅವುಗಳ ಜಾಗದಲ್ಲಿ ಅಂತಹುದೇ ಮತ್ತೊಂದು ಬಂದು ಕುಳಿತುಕೊಳ್ಳುತ್ತದೆ. ಅ.ನ.ಕೃ. ಅವರ ‘ನಗ್ನಸತ್ಯ’, ‘ಶನಿಸಂತಾನ’, ‘ಸಂಜೆಗತ್ತಲು’ ಮುಂತಾದ ‘ಹಸಿ-ಬಿಸಿ’ ಕಾದಂಬರಿಗಳ ಹೆಸರು ಕೂಡ ಈಗ ಓದುಗರ ನೆನಪಿನಲ್ಲಿ ಉಳಿದಿಲ್ಲ. ಆದರೆ, ಕಾರಂತರ ‘ಮೈಮನಗಳ ಸುಳಿಯಲ್ಲಿ’ ಹಲವು ಕಾಲ ಉಳಿಯುತ್ತದೆ. ಸಂಸ್ಕೃತಿಯು ತನಗೆ ಬೇಕಾದ ಸೂಕ್ತ ಆಯ್ಕೆಗಳನ್ನು ಮಾಡಿಕೊಳ್ಳುತ್ತದೆ.

ಆದರೆ, ದಿನದಿನವೂ ಬರುವ ವಿಷ ಸಮಾನ ಬರವಣಿಗೆ ಹಾಗೂ ದೃಶ್ಯಾವಳಿಗಳು ಅಂದಂದೇ ಗಾಯ ಮಾಡಿ, ಕಿರಿಯ ಮನಸ್ಸುಗಳನ್ನು ಹಾಗೂ ಅಭಿರುಚಿಯನ್ನು ಕೆಡಿಸುತ್ತದೆ. ಕೆಲವು ಮನಸ್ಸುಗಳು ಅವುಗಳಿಂದ ಹೊರಗೆ ಬಂದರೆ ಬೇರೆ ಹಲವು ಅಲ್ಲಿಯೇ ಉಳಿದು ಬಿಡುತ್ತವೆ. ಇದು ಕೇವಲ ಅಭಿರುಚಿಯ ನೆಲೆಯಲ್ಲಿ ಉಳಿಯದೆ ಸಮಾಜದ ಆರೋಗ್ಯವನ್ನು ಕೆಡಿಸುತ್ತಿರುವ ಇತರ ಶಕ್ತಿಗಳೊಂದಿಗೆ ಕೈ ಜೋಡಿಸುತ್ತವೆ. ಈ ಕೊಲೆಗೆಲಸವನ್ನು ಮೊಬೈಲು, ಯೂ ಟ್ಯೂಬುಗಳು ಬರವಣಿಗೆಗಿಂತ ಚೆನ್ನಾಗಿಯೇ ಮಾಡುತ್ತಿವೆ. ಇಂಥದಕ್ಕೆ ಪೂರ್ವಾಧಿಕಾರಿಗಳು ಹಾಗೂ ಉತ್ತರಾಧಿಕಾರಿಗಳು ಇರುವುದು ನಿಜವಾದರೂ ‘ವ್ಯಾಪಾರೀ ಮನೋಧರ್ಮ’ವು ಇಂದು ಎಂದಿಗಿಂತ ಜಾಸ್ತಿಯಾಗಿದೆ. ಇದನ್ನು ಎದುರಿಸುವ, ಮೀರುವ, ಸರಿಯಾದುದನ್ನು ಪೋಷಿಸುವ ಬಗೆಗಳನ್ನು ನಾವೆಲ್ಲರೂ ಕಂಡುಕೊಳ್ಳುವುದು ಅತ್ಯಗತ್ಯ.

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...