Date: 24-04-2023
Location: ಬೆಂಗಳೂರು
“ಮಾರಿ ಜಾತ್ರೆ ಎಂದಾಗೆಲ್ಲ ನೆನಪಿಗೆ ಬರುವುದು ಆಸಾದಿಗಳ ತೋತರಣೆ, ಮತ್ತು ಅವರು ಹಾಡುತ್ತಿದ್ದ ಕದರ-ಮಾರಿ ಕಥೆ. ಅವರು ನಿಜವಾಗಿಯೂ ಕಲಾವಿದರು. ಟಿಂಗ್‌ಟಿಂಗು, ಟಣಣಣಣ್, ಟುಬುಟುಬುಕ್ ಎಂದು ಕಿನ್ನುರಿ ಬಾರಿಸುತ್ತ ಕಿರಿದಾದ ಹೆಜ್ಜೆಗಳನ್ನು ಹಾಕುತ್ತ ಅವರು ತಾವು ನಿಂತಲ್ಲೆ ಕತೆ ಕಟ್ಟಿ ಹಾಡುತ್ತಿದ್ದರೆ, ಆಸಾದಿ ಕುಣಿತ ಆಡುತ್ತಿದ್ದರೆ ಎಲ್ಲರೂ ಕಿವಿ, ಬಾಯಿ ತೆರೆದು ಕೇಳುತ್ತಿದ್ದರು,'' ಎನ್ನುತ್ತಾರೆ ಅಂಕಣಕಾರ ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ‘ನೀರು ನೆರಳು' ಅಂಕಣದಲ್ಲಿ ‘ಯಾರದೊ ಅಜೆಂಡಾ ಮಾರಮ್ಮನ ಜಾತ್ರೆ' ವಿಚಾರದ ಕುರಿತು ಬರೆದಿದ್ದಾರೆ.
‘1980ಕ್ಕು ಮುಂಚೆ ನಮ್ಮ ಹಳ್ಳಿಗಳಲ್ಲಿ ಗಣೇಶನ ಹಬ್ಬ ಅಂದರೆ ಅಂತಹ ಅದ್ದೂರಿ ಏನೂ ಇರಲಿಲ್ಲ. ಉಳ್ಳಿ ಹೊಲಕು ಗೊಬ್ಬರವಾ ಒಕ್ಕಲಗಿತ್ತಿಗು ಸುಂಗಾರವಾ ಎಂದು ನಮ್ಮಲ್ಲಿ ಒಂದು ಗಾದೆ ಇತ್ತು. ಅಂದರೆ ಒಕ್ಕಲ ಮಕ್ಕಳಿಗೆ ಸ್ನಾನ, ಮಡಿ, ಹಬ್ಬ ಅಂದರೆ ಬಹಳ ದೂರ. ಮಣ್ಣಿನೊಂದಿಗೆ ಸದಾ ಬೆರೆಯಬೇಕಾದ ಕೆಲಸ ಇರುವಾಗ ಇವೆಲ್ಲ ನಿತ್ಯ ಸಾಧ್ಯವೆ? ಅವರಿಗೆ ಹಬ್ಬವೆಂದರೆ ವರ್ಷಕ್ಕೊಂದು ಉಗಾದಿ, ಮಾನೋಮಿಗಳು ಅಷ್ಟೆ. ಬಿಟ್ಟರೆ ಊರಿಗೊಂದು ಮಾರಿ ಹಬ್ಬ ಇರೋದು. ಅದನ್ನು ಮಾರಿ ಜಾತ್ರೆ, ಮಾರಿ ಪರಿಸೆ ಎಂದೂ ಕರೆಯುತ್ತಿದ್ದರು. ಆವಾಗೆಲ್ಲ ಗಣೇಶನ ಹಬ್ಬಕ್ಕೆ ಪ್ರಾಶಸ್ತ್ಯವೇ ಇರುತ್ತಿರಲಿಲ್ಲ. ಊರಲ್ಲಿ ಒಂದೇ ಒಂದು ಕಡೆ ಗಣೇಶನನ್ನು ಕೂರಿಸುತ್ತಿದ್ದರು. ಅದೂ ಯುವಕರು ಮಾತ್ರ ಗಣೇಶನನ್ನು ಕೂರಿಸುತ್ತಿದ್ದರು. ಆಮೇಲೆ ವಿಸರ್ಜನೆ ಮಾಡುತ್ತಿದ್ದರು. ಹಿರಿಯರಿಗೆ ಮಾರಿ ಹಬ್ಬ ಮಾತ್ರ ಅಚ್ಚುಮೆಚ್ಚು.
ಗೌರಿ-ಗಣೇಶನ ಹಬ್ಬದ ಹೊತ್ತಿಗೆ ಮಳೆ ಬಿದ್ದು ಹೊನ್ನೇರು ಹೂಡಿ ಒಂದು ಉಕ್ಕೆ ಉಳುಮೆ ಆಗಿರುತ್ತಿತ್ತು. ಕೆಲವೊಮ್ಮೆ ಮಳೆ ಬರುತ್ತಿರಲಿಲ್ಲ. ಆಗೆಲ್ಲ ಊರಿನ ಯುವಕರು ಗಣೇಶನನ್ನು ವಿಸರ್ಜನೆ ಮಾಡದೆ ಅವನನ್ನು ಮರಕ್ಕೆ ಕಟ್ಟಿ ಹೊಡೆಯುತ್ತಿದ್ದರು. ಹಾಗೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇತ್ತು. ಹುಡುಗರಿಗಂತು ಮರಕ್ಕೆ ಕಲ್ಲು ಬೀರಿ ಬೀರಿ ಗುರಿ ಇಟ್ಟು ಹೊಡೆಯುವುದೆ ಒಂದು ಆಟ. ಹಬ್ಬ. ಕೆಲವು ಸಲ ಗಣೇಶನಿಗೆ ಮರಕ್ಕೆ ಕಟ್ಟಿ ಕಲ್ಲಲ್ಲಿ ಹೊಡೆದಾಗ ಸಂಜೆಗಳಲ್ಲಿ ಮಳೆ ಬಂದಿದೆ. ಕೆಲವು ಸಲ ಎಷ್ಟು ಹೊಡೆದು ಗಣೇಶ ಚುಪ್ಪಂಚೂರಾದರೂ ಬಂದಿಲ್ಲ. ಆದರೆ ಯಾತಕ್ಕೆ ಈ ಥರ ನಂಬಿಕೆ ಹುಟ್ಟಿತ್ತೊ ಇನ್ನೂ ನಮಗೆ ಅರ್ಥವಾಗಿಲ್ಲ. ಮಳೆ ಬರದೆ ಬೆಳೆ ಒಣಗುವಾಗ ತಡೆಯಲಾಗದೆ; ಹೊಸ ದೇವರು ಗಣೇಶನಾದರೂ ಹಳ್ಳೀಗೆ ಮಳೆ ಬರಿಸುತ್ತಾನೇನೊ ಎಂಬ ಆಸೆಯಾದರೂ ಇರಬಹುದು.
ಮಾರಿ ಜಾತ್ರೆಗೂ ಗಣೇಶನ ಹಬ್ಬಕ್ಕು ಒಂದು ಸಾಮ್ಯ ಇದೆ. ಅದೇನೆಂದರೆ ಗಣೇಶನನ್ನೂ ಪೂಜೆ ಮುಗಿದ ಮೇಲೆ (ಬೆಸ ಸಂಖ್ಯೆಯ ದಿನಗಳ ಕಾಲ ಅಂದರೆ ಮೂರು, ಐದು, ಏಳು, ಒಂಬತ್ತು ದಿನ ಹೀಗೆ ಅವರ ಶಕ್ತ್ಯಾ ನುಸಾರ ಗಣೇಶನನ್ನು ಪೂಜಿಸಿ ಆಮೇಲೆ) ವಿಸರ್ಜಿಸುವುದು ವಾಡಿಕೆ. ಹಾಗೆಯೆ ಮಾರಿಯನ್ನೂ ಪೂಜಿಸಿದ ಮೇಲೆ ವಿಸರ್ಜಿಸುವುದು ಪಪ್ತಿ. ಗಣೇಶನ ಪೂಜೆಯಲ್ಲೂ ಊರೆಲ್ಲ ಒಂದಾಗಿ ಹಬ್ಬ ಮಾಡಿದರೆ ಮಾರಿಯ ಜಾತ್ರೆಯಲ್ಲೂ ಊರೆಲ್ಲ ಒಂದಾಗಿ ಜಾತ್ರೆ ಮಾಡುತ್ತಿದ್ದರು. ಮಾರಿ ಸೀಸನ್ನು ಮುಗಿದ ಮೇಲೆ ಗೌರಿ ಗಣೇಶ ಬರುತ್ತಾರೆ. ಆದರೆ ಒಂದೇ ಮುಖ್ಯವಾದ ವ್ಯತ್ಯಾಸವೆಂದರೆ. ಗಣೇಶನಿಗೆ ಯಾವ ಬಲಿಯೂ ಇಲ್ಲ. ಬಾಡಿನ ಊಟವೂ ಇಲ್ಲ. ಎಲ್ಲಾ ವೆಜ್ಜುಮಯ. ಮಾರಿಗೆ ಮಾಂಸದ ನೈವೇದ್ಯ, ಮರಿ, ಕೋಣ, ಕೋಳಿಗಳ ಬಲಿಗಂತೂ ಲೆಕ್ಕವಿಲ್ಲ. ಮಾರಿಗೆ ಬೇಕಿಲ್ಲದಿದ್ದರೂ ಬಾಡಿದ್ದ ಮೇಲೆ ಜನಕ್ಕೆ ತೀರ್ಥ ಇದ್ದೇ ಇರುತ್ತದಲ್ಲ. ಹಾಗಾಗಿ ಮಾರಿ ಜಾತ್ರೆ ಎಂದರೆ ಜನರಿಗೆ ನಿಜವಾಗಿಯೂ ಜಾತ್ರೆ. ಮಾರಿ ಜಾತ್ರೆಗೆ ಸುತ್ತ ಏಳೂರವರೂ ಬರುತ್ತಾರೆ, ನೆಂಟರಿಷ್ಟರೂ ಬರುತ್ತಾರೆ. ದೇವಾನುದೇವತೆಗಳಲ್ಲಿ ಮಾರಿಯ ಅಕ್ಕತಂಗಿಯರೂ ಅಣ್ಣತಮ್ಮರೂ ಬರುತ್ತಾರೆ. ಗಣೇಶನಿಗೆ ಗೌರಿ ಮಾತ್ರ. ಬೇರಾರೂ ಇಲ್ಲ. ಕೆಲವೊಮ್ಮೆ ಅವರಪ್ಪ ಶಿವಪ್ಪನೂ ಬರುವುದುಂಟು. ಆದರೆ ಈಗ ಊರಿಗೊಂದು ಗಣೇಶ ಎನ್ನುವುದು ಹೋಗಿ ಕೇರಿಗೊಂದು ಗಣೇಶ, ಬೀದಿಗೊಂದು ಗಣೇಶ, ಮನೆ ಮನೆಗೊಂದು ಗಣೇಶ ಎಂಬಂತೆ ಆಗಿದೆ. ಹೀಗೇಕಾಯಿತು? ಇದು ದೇವರ ಪೂಜೆಯ ವಿಕೇಂದ್ರೀಕರಣ ಏನೂ ಅಲ್ಲ. ದೇವರನ್ನು ಮುಟ್ಟುವ ಪ್ರತಿಷ್ಠಾಪಿಸುವ ‘ಭಾಗ್ಯ’ದ ವಿಕೇಂದ್ರೀಕರಣವೂ ಅಲ್ಲ. ಒಡೆದುಹೋಗಿರುವ ಊರು, ಕೇರಿ, ಕುಟುಂಬ, ಸಮಾಜಗಳ ಪ್ರತಿಬಿಂಬ ಇದು. ಊರುಗಳಲ್ಲಿ ಒಂದೊಂದು ಪಕ್ಷದವರು ಒಂದೊಂದು ಮಾರಿ ಜಾತ್ರೆ ಮಾಡುವ ಪ್ರಸಂಗಗಳೂ ಈಗೀಗ ಶುರುವಾಗಿವೆ. ಹಾಗೆಯೆ ನಾಮದ ಗಣೇಶ, ವಿಭೂತಿ ಗಣೇಶ ಇರುವಂತೆಯೆ ಇಂದು ಹಳ್ಳಿ ಪಟ್ಟಣಗಳ ಬೇಧ ಇಲ್ಲದೆ ಕಾಂಗ್ರೆಸ್ ಗಣೇಶ, ದಳ ಗಣೇಶ, ಬಿ.ಜೆ.ಪಿ. ಗಣೇಶ, ಬಿ.ಎಸ್.ಪಿ. (ಡಿಎಸ್‌ಎಸ್) ಗಣೇಶಗಳೂ ಇವೆ.
ಮಾರಿ ಜಾತ್ರೆ ಎಂದಾಗೆಲ್ಲ ನೆನಪಿಗೆ ಬರುವುದು ಆಸಾದಿಗಳ ತೋತರಣೆ, ಮತ್ತು ಅವರು ಹಾಡುತ್ತಿದ್ದ ಕದರ-ಮಾರಿ ಕಥೆ. ಅವರು ನಿಜವಾಗಿಯೂ ಕಲಾವಿದರು. ಟಿಂಗ್‌ಟಿಂಗು, ಟಣಣಣಣ್, ಟುಬುಟುಬುಕ್ ಎಂದು ಕಿನ್ನುರಿ ಬಾರಿಸುತ್ತ ಕಿರಿದಾದ ಹೆಜ್ಜೆಗಳನ್ನು ಹಾಕುತ್ತ ಅವರು ತಾವು ನಿಂತಲ್ಲೆ ಕತೆ ಕಟ್ಟಿ ಹಾಡುತ್ತಿದ್ದರೆ, ಆಸಾದಿ ಕುಣಿತ ಆಡುತ್ತಿದ್ದರೆ ಎಲ್ಲರೂ ಕಿವಿ, ಬಾಯಿ ತೆರೆದು ಕೇಳುತ್ತಿದ್ದರು. ಕಣ್ಣು ಕೀಲಿಸಿ ನೋಡುತ್ತಿದ್ದರು. ಅವರು ಮೊದಲಿಗೆ ತೋತರಣೆ (ಸ್ತೋತ್ರ) ಕಟ್ಟುವಾಗ ಊರಿನ ಮುಖಂಡರನ್ನೆಲ್ಲ ಅವರ ಸ್ಥಾನಮಾನಕ್ಕೆ ತಕ್ಕ ಹಾಗೆ ಹಾಡಿ ಹೊಗಳಿ ತಮ್ಮ ಹೆಂಡಕ್ಕೆ ಕಾಸು ಕೊಟ್ಟವರನ್ನು ಅವರ ಶಕ್ತಿಗೂ ಮೀರಿ ಹೊಗಳಿದ ನಂತರವೆ ಅವರಿಗೆ ಕತೆಗೆ ಪ್ರವೇಶ. ಮಾರಿಯ ಕತೆ ಸಂಕ್ಷಿಪ್ತವಾಗಿ ಹೀಗಿದೆ;
ಇದನ್ನು ಒಂದು ಕತೆಯಂತೆಯೆ ಹೇಳುತ್ತೇನೆ. ಒಂದೂರಲ್ಲಿ ಒಬ್ಬ ಕದರ ಎಂಬ ಅನಾಥ ಹುಡುಗ ಇದ್ದ. ಅವನು ಹೇಗೆ ಅನಾಥ ಆದ ಗೊತ್ತಿಲ್ಲ. ಆತ ಆ ಊರಿನ ಒಂದು ಬ್ರಾಹ್ಮಣರ ಮನೆಯಲ್ಲಿ ಚಾಕರಿಗೆ ಸೇರಿಕೊಂಡ. ಅವರ ಮನೆಯಲ್ಲಿ ಚಾಕರಿ ಮಾಡುತ್ತಲೆ ಅಕ್ಷರವಿದ್ಯೆಯನ್ನೂ ಕಲಿತುಕೊಂಡ. ದೊಡ್ಡವನಾದ ಮೇಲೆ ಅದೆ ಮನೆಯ ಹುಡುಗಿ ಶ್ರೀಬಾಲಗೌರಿಯನ್ನೆ ಪ್ರೀತಿಸಿ ಮದುವೆ ಆದ. ಅವನ ಜಾತಿ ಗೊತ್ತಿಲ್ಲದ ಮನೆಯವರು ಮೊದಲಿಗೆ ಮದುವೆಗೆ ವಿರೋಧ ಮಾಡಿದರೂ ಕೊನೆಗೆ ನಮ್ಮವನೆಂದೆ ಭಾವಿಸಿದರು. ಕದರ ಬೇರೆ ಮನೆ ಮಾಡಿದ. ಮಕ್ಕಳೂ ಆದುವು. ಸಂಸಾರ ಚೆನ್ನಾಗಿಯೆ ನಡೆದಿತ್ತು. ಹೀಗೇ ಇರುವಾಗ ಒಂದು ದಿನ ಕದರನನ್ನು ಕಳಕೊಂಡ ಅವನ ಅಮ್ಮ ನೋಡಿದಳು. ಮಾತನಾಡಿಸಿದಳು. ಅವನಿಗೆ ಅವಳೇ ತನ್ನ ತಾಯಿ ಎಂದು ತಿಳಿಯಿತು. ತಾನು ಹುಟ್ಟಿನಿಂದ ಮಾದಿಗ ಜಾತಿಯವನು ಎಂದೂ ತಿಳಿಯಿತು. ತಾಯಿ ಎಂಬ ಕಕ್ಕುಲಾತಿ ತಡೆಯದೆ ಆತ ಆನಂದದಿಂದ ಆಕೆಯನ್ನು ತನ್ನ ಮನೆಗೆ ಕರೆತಂದ. ಬರುವಾಗ ತನ್ನ ಮದುವೆ ವಿವರವನ್ನೆಲ್ಲ ಹೇಳಿದ. ತನ್ನ ಜಾತಿ ಯಾವ ಕಾರಣಕ್ಕು ಮನೆಯಲ್ಲಿ ಹೆಂಡತಿಗೆ ತಿಳಿಯದಂತೆ ಎಚ್ಚರ ವಹಿಸಲು ಹೇಳಿದ. ತಾಯಿಯೂ ಒಪ್ಪಿದಳು.
ಮನೆಗೆ ತಾಯಿಯನ್ನು ಕರೆತಂದ ಕದರ ಹೆಂಡತಿಗೆ ತಾನು ಯಾವ ಜಾತಿ ಎಂದು ಹೇಳಲಿಲ್ಲ. ಅವಳೂ ಕೇಳಲಿಲ್ಲ. ಅತ್ತೆಯನ್ನು ಚೆನ್ನಾಗಿಯೆ ಕಂಡಳು. ಹಾಗೇ ಸ್ವಲ್ಪ ದಿನ ಕಳೆಯಿತು. ಒಂದು ರಾತ್ರಿ ಊಟ ಮಾಡುತ್ತ ಇರುವಾಗ ಕದರನ ತಾಯಿ ಸಪ್ಪೆ ಪುಳಿಚಾರು ಊಟ ತಿಂದು ತಿಂದು ಬೇಜಾರಾಗಿ ‘ಏನೋ ಕದರ ಥೂ ಈ ಊಟ ಒಂದು ಕರಿನ ಕಾಲು ಕಡದಂಗೆ ಆಗಲಿಲ್ಲ’ ಅಂದುಬಿಟ್ಟಳು. ಆ ಮಾತು ಕೇಳಿಸಿಕೊಂಡ ಶ್ರೀಬಾಲಗೌರಿ ಅವಳ ಜಾತಿಯ ಬಗ್ಗೆ ಅನುಮಾನ ಬಂದು ವಿಚಾರಿಸಿದಳು. ಅವರು ಮಾದಿಗರೆಂದು ಆಕೆಗೆ ತಿಳಿಯಿತು. ಅವಳು ಅವಮಾನದಿಂದ ಕುದ್ದು, ಚಿತೆ ಏರ್ಪಡಿಸಿ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು. ಅದಕ್ಕೆ ಮುನ್ನ ‘ನೀನು ಜಾತಿ ತಿಳಿಸದೆ ಮೋಸದಿಂದ ನನ್ನನ್ನು ಮದುವೆ ಆಗಿದ್ದೀಯ. ಆದ್ದರಿಂದ ನೀನು ಮುಂದಿನ ಜನ್ಮದಲ್ಲಿ ಕೋಣನಾಗಿ ಹುಟ್ಟು, ನಾನು ಮಾರಿಯಾಗಿ ಹುಟ್ಟುತ್ತೇನೆ. ನಿನ್ನಿಂದ ನನಗೆ ಹುಟ್ಟಿರುವ ಮಕ್ಕಳು ಧೂಳು ಮರಿಯಾಗಿ, ಕೊಂಡದ ಮರಿಯಾಗಿ ಹುಟ್ಟಲಿ, ಎಲ್ಲರನ್ನೂ ನಾನು ಬಲಿ ತೆಗೆದುಕೊಳ್ಳುತ್ತೇನೆ’ ಎಂದು ಶಾಪ ಹಾಕಿದಳು.
ಮುಂದಿನ ಜನ್ಮದಲ್ಲಿ ಕದರನು ಒಮ್ಮೆ ಗಂಜಲ ಹುಯ್ದರೆ ಏಳು ಕೆರೆ ತುಂಬುವಂತಹ ಬಲಿಷ್ಠ ಕೋಣನಾಗಿ ಕೊಣವೇಗೌಡನ ಹಟ್ಟಿಯಲ್ಲಿ ಹುಟ್ಟಿದನು. ಅವನ ಮಕ್ಕಳೆಲ್ಲ ಮೇಕೆ, ಕುರಿ ಮರಿಗಳಾಗಿ, ಆಸಾದಿಗಳಾಗಿ ಹುಟ್ಟಿದರು. ಅದೆ ಊರಿನಲ್ಲಿ ಮಾರಿಯಾಗಿ ಜನಿಸಿದ ಶ್ರೀಬಾಲಗೌರಿಯು ಕೊಣವೇಗೌಡನಿಗೆ ಮತ್ತು ಊರಿಗೆ ಕೊಡಬಾರದ ಕಷ್ಟಗಳನ್ನೆಲ್ಲ ಕೊಟ್ಟು ಕೋಣವನ್ನೆ ಬಲಿಯಾಗಿಸಿದಳು. ಮರಿಗಳನ್ನೂ ಬಲಿ ತೆಗೆದುಕೊಂಡಳು. ಆಸಾದಿಗಳು ಇವಳ ಸ್ತೋತ್ರ ಮಾಡುವಂತೆ, ಕತೆ ಮಾಡುವಂತೆ, ತಮ್ಮ ತಂದೆ, ಸೋದರರ ಮಾಂಸವನ್ನೆ ತಿಂದು ಹಬ್ಬ ಮಾಡುವಂತೆ ಮಾಡಿದಳು!
ಇದು ನಡೆದದ್ದೋ ಬಿಟ್ಟದ್ದೋ ಆದರೆ ನಡೆದದ್ದು ಎಂಬಂತೆ ಕತೆ ಕಟ್ಟಿದ್ದಾರಲ್ಲ ಪುಣ್ಯಾತ್ಮರು ಆ ಬೇವಾರ್ಸಿಗಳನ್ನು ತಂಪು ಹೊತ್ತಿನಲ್ಲಿ ನೆನೆಯಬೇಕು ಕಣ್ರಿ! ಕತೆಯ ಮೂಲಕ ಸಮಾಜದಲ್ಲಿ ಭಯ-ಭಕ್ತಿ ಬೆಳೆಸಿ ಬೇಳೆೆ ಬೇಯಿಸಿಕೊಳ್ಳುವ ಇಂತಹ ಯಥಾಸ್ಥಿತಿವಾದಿ ಕವಿತ್ವವನ್ನು ಮಾತ್ರ ನೋಡಿ ಬೆರಗಾಗಲೇಬೇಕು! ಮಾತೃದೇವತಾ ಆರಾಧನೆಯಾದ ಮಾರಿ ಜಾತ್ರೆಯನ್ನು, ಆನಂತರದಲ್ಲಿ ಶಕ್ತಿಪೂಜಾ ಮಾರ್ಗವಾಗಿಯೂ, ತಂತ್ರಪಂಥದ ಆರಾಧನಾ ಮಾರ್ಗವಾಗಿಯೂ ಬದಲಿಸಿಕೊಂಡ ನಮ್ಮವರು ಕೊನೆಗೆ ಜಾತೀಯತೆಯ ಯಥಾಸ್ಥಿತಿವಾದವನ್ನು ಹೇರಲು ಬಳಸಿದ್ದಾರೆ! ಇಲ್ಲಿ ರೂಪಿಸಿಕೊಂಡಿರುವ ಆಚಾರಗಳಾದರೂ ಎಂಥವಂತೀರಿ. ಎಲ್ಲ ‘ಕಂಡ ಕಡಿ, ಹೆಂಡ ಕುಡಿ’, ‘ಲಂಗು ಲಗಾಮಿಲ್ದೆ ತಿಕ್‌ಮಕ್ ತಾರಾಮಾರಾ ಉಗಿ’, ಯೆಣ್‌ಯೆಂಗ್ಸು ಅನ್ದೆ ಯೆತ್ ತಾಯಿ ಅನ್ದೆ ಗುಪ್ತಾಂಗನೆಲ್ಲ ಬಹುರಂಗ ಆಗಿ ಬೈಯ್ಯಿ, ರಾತ್ರೆಲ್ಲ ತೋತರಣೆ ಕಟ್ಟಿ ಬಯ್ಯಿ, ಮೆರವಣಿಗೆ ಮಾಡಿ ಮೆರಿ, ಅರ್ಧರಾತ್ರೀಲಿ ಊರಾಚೆ ಬಯಲಲ್ಲಿ ಸೀರೆ ಬಿಚ್ಚಿ, ಒಡವೆ ಕಳಚಿ ಬತ್ತಲು ಮಾಡಿ ಹಿಂದಿರುಗಿ ನೋಡದೆ ವಿಸರ್ಜನೆ ಮಾಡಿ ಬಾ. ಇಂಥವೆ ಹತ್ತು ಹಲವು ಆಚಾರಗಳು!
ಇಂತಹ ಮಾರಿ ಕತೆಯನ್ನು ಪ್ರತಿ ವರ್ಷವೂ ಹಾಡಿಸಿ, ಆಕೆಯನ್ನು ಪ್ರತಿ ವರ್ಷವೂ ಹೀನಾಮಾನಾ ಮಕ್ಕಳಿಂದಲೆ ಬೈಯಿಸಿ, ಊರಾಚೆ ವಿಸರ್ಜಿಸಿ, ಅವಳ ಒಡವೆ ಕಳಚಿ, ಸೀರೆ ಬಿಚ್ಚಿ ಭಂಗಿಸಿ ಬರುವ ಆಚರಣೆಯ ಹಿಂದಿನ ಉದ್ದೇಶವಾದರೂ ಏನು? ಅಂತರ್ಜಾತಿ ವಿವಾಹ ಅದರಲ್ಲು ಬ್ರಾಹ್ಮಣರ ಹುಡುಗಿಯನ್ನು ದಲಿತ ಹುಡುಗನೊಬ್ಬ ಪ್ರೀತಿಸಿ ಮದುವೆ ಆಗುವ ಸ್ಥೈರ್ಯವನ್ನು ನಮ್ಮ ಮನಸ್ಸುಗಳಿಂದ ಓಡಿಸುವ ಕೆಲಸವನ್ನು ಈ ಆಚರಣೆ ಉಗ್ರವಾಗಿ ಮಾಡುತ್ತದೆ. ಇಲ್ಲಿ ಕದರನಿಗೆ ಆತ ಕೋಣನಾಗಿ ಮರುಜನ್ಮ ಎತ್ತುವ ಅಕಾಶ ಮಾತ್ರ ಇದೆ! ತಾನು ಮಾಡಿದ ತಪ್ಪಿಗೆ (ಬ್ರಾಹ್ಮಣ ಹೆಣ್ಣು ಶ್ರೀಬಾಲಗೌರಿಯನ್ನು ಪ್ರೀತಿಸಿ ಮದುವೆ ಆದದ್ದೆ ತಪ್ಪಂತೆ!) ಅವನಿಗೆ ಕೋಣನಾಗಿ ತನ್ನ ಮಕ್ಕಳಿಂದಲೆ ಬಲಿ ಆಗುವುದೊಂದೆ ಗತಿ. ಅವನ ಮಕ್ಕಳೆ ಅವನ ಮಾಂಸವನ್ನು ಊಟ ಮಾಡುವ ಹಾಗೂ ತಮ್ಮ ತಾಯಿಯನ್ನೆ ಹೀನಾಮಾನಾ ಹಾದರಗಿತ್ತಿ ಅಂತ ಬಯ್ಯುವ ಆಚರಣೆಗಳೆಲ್ಲ ಏನು ಹೇಳುತ್ತವೆ? ಇರುವ ಜಾತಿ ವ್ಯವಸ್ಥೆಯನ್ನು ಮೀರದಂತೆ ಮತ್ತು ನಮ್ಮ ನಮ್ಮ ನಿಗಧಿತ ಚಾಕರಿಗಳನ್ನು ಮೀರದಂತೆ ನಮ್ಮನ್ನು ಇವು ಪ್ರತಿ ವರ್ಷ ತಾಕೀತು ಮಾಡುತ್ತವೆ. ಎಂತಹ ಬಾಡೂಟವನ್ನಾದರೂ ನೀಡಲಿ, ಹೆಂಡವನ್ನಾದರೂ ನೀಡಲಿ, ಎಂತಹ ಬಂಧು ಬಳಗದ ಸಂಗವನ್ನಾದರೂ ನೀಡಲಿ ಅಸಮಾನತೆಯನ್ನು ಅಭಿನಯಿಸುವ ಇಂತಹ ಆಚರಣೆಗಳು ನಮಗೆ ಬೇಕೆ? ಖಂಡಿತಾ ಬೇಡ.
ನಮ್ಮ ಜಾತಿ ಎಂತಹ ಜಾಡ್ಯವಾಗಿ ನಮ್ಮೊಳಗೆ ಆವರಿಸಿದೆ ಎಂದರೆ ಅದನ್ನು ಮೀರಲು ನಾವು ಹೊಸ ದಾರಿ ಕಂಡುಕೊಂಡಂತೆಲ್ಲ ಅದು ಹತ್ತು ಹನ್ನೊಂದು ಆಚರಣೆಗಳ ಮೂಲಕ ನಮ್ಮ ಪ್ರಜ್ಞೆಯನ್ನು ಅಪ್ರಜ್ಞೆ ಮಾಡಿ ಜಡಗೊಳಿಸುತ್ತ ಇರುತ್ತದೆ. ನಮಗೆ ಗೊತ್ತೆ ಇಲ್ಲದಂತೆ ಅದನ್ನು ನಾವು ಒಪ್ಪುವಂತೆ ಮಾಡುತ್ತ ಇರುತ್ತದೆ. ಇದಕ್ಕೆ ಬಹು ದೊಡ್ಡ ಚರಿತ್ರೆಯೆ ಇದೆ. ಮಾರಿ ಜಾತ್ರೆ ನಿರಂತರ ಜಾರಿಯಲ್ಲಿ ಇರುವ ಅಂತಹ ಒಂದೆ ಒಂದು ಹುನ್ನಾರದ ಉದಾಹರಣೆ ಅಷ್ಟೆ.
ಯಾರದೋ ಅಜೆಂಡಾ ಮಾರಮ್ಮನ ಜಾತ್ರೆ ಅಂತ ನಾವು ಆಚಾರ ಮಾಡುವುದಾದರೆ ನಮಗೆ ಆ ಬಗ್ಗೆ ಎಚ್ಚರ ಬೇಡವೆ? ಪ್ರತಿಯೊಂದು ಆಚರಣೆಯನ್ನೂ ವಿವೇಕದ ಮೂಸೆಗೆ ಹಾಕಿ ನೋಡದೆ, ನಮ್ಮ ಪ್ರಜ್ಞೆಯನ್ನು ಅವು ಹೇಗೆ ಪ್ರಭಾವಿಸಬಲ್ಲವು ಅಂತ ಚಿಂತಿಸದೆ ಸುಮ್ಮನೆ ಹಿರೀಕರು ಮಾಡುತ್ತಿದ್ದರು, ನಾವೂ ಮಾಡಬೇಕು ಎಂಬಂತೆ ಮಾಡುತ್ತ ಹೋದರೆ? ಇದರಿಂದ ನಾವು ಹೊಸ ಬದಲಾವಣೆಗೆ ಒಡ್ಡಿಕೊಳ್ಳದೆ ನಿರಂತರ ನಿಂತ ನೀರಾಗುತ್ತೇವೆ ಅಷ್ಟೆ.
ಆದರೆ ಇತ್ತೀಚೆಗೆ ಜಾರಿಯಾಗಿರುವ ಈ ಕನ್ನಡ ರಾಜ್ಯೋತ್ಸವ, ಗಣೇಶ ಹಬ್ಬಗಳ ಸಾರ್ವಜನಿಕ ಆಚರಣೆಯಾದರೂ ಎತ್ತ ಸಾಗುತ್ತಿದೆ? ಇವುಗಳೆಲ್ಲ ಇಂದು ರೋಲ್‌ಕಾಲ್ ಹಬ್ಬಗಳಾಗುತ್ತಿವೆ. ಕೆಲವೆ ನಿರುದ್ಯೋಗಿ, ರೌಡಿ ಯುವಕರ ತಾತ್ಕಾಲಿಕ ದುಡಿಮೆಯ ಮತ್ತು ಮೋಜಿನ ಅವಕಾಶಗಳೆ ಆಗುತ್ತಿವೆ. ಇಂಥದ್ದಕ್ಕೆ ಕುಮ್ಮಕ್ಕು ಕೊಡುವ ರಾಜಕೀಯ ನಾಯಕರೂ ನಮ್ಮಲ್ಲಿದ್ದಾರೆ! ಸಾರ್ವಜನಿಕರಿಂದ ಸಂಗ್ರಹಿಸಿದ ಹಣಕ್ಕೆ ಎಲ್ಲರೂ ಸರಿಯಾದ ಲೆಕ್ಕವನ್ನು ಕೊಡುತ್ತಾರೆಯೆ? ಗಣೇಶನ ಹಬ್ಬದಲ್ಲಿ ನಾವು ರೂಡಿಸಿಕೊಂಡಿರುವ ಆಚರಣೆಗಳಾದರೂ
ಎಂಥವು? ಅವು ನಮ್ಮನ್ನೆಲ್ಲ ಒಂದುಗೂಡಿಸುವ ಆಚರಣೆಗಳೋ? ಗಣೇಶ ಧರ್ಮಾತೀತ, ಜಾತ್ಯಾತೀತ ದೇವರಾ? ಸಹಬಾಳ್ವೆಗೆ ಅವನ ಕೊಡುಗೆ ಏನು?
ಹಳೆಯದೆಲ್ಲಾ ಒಳ್ಳೆಯದು ಅಥವಾ ಹೊಸದು ಕೆಟ್ಟದ್ದು ಎಂದೇನೂ ಅಲ್ಲ. ಹಿಂದೆಯೂ ಈಗಲೂ ದೇವರ ಹೆಸರಿನಲ್ಲಿ ದೇವಸ್ಥಾನಗಳ ನಿರ್ಮಾಣದ ಹೆಸರಿನಲ್ಲಿ ಚಂದಾ ಎತ್ತಿ ‘ದೇವರ ಕೆಲಸ’ ಮಾಡುವ ‘ಸಮಾಜಸೇವಕರು’ ದುಡ್ಡು ನುಂಗಿ ಹಾಕುವುದು ಯಾವತ್ತಿನಿಂದಲೂ ನಡೆದು ಬಂದದ್ದೆ ಆಗಿದೆ. ನಮ್ಮ ಎಷ್ಟೋ ಹಳ್ಳಿಗಳಲ್ಲಿ ಜನರಿಗೆ ಸೋರುವ ಗುಡಿಸಲುಗಳು ಇರುತ್ತವೆ. (ಕೆಲವರಿಗೆ ಮನೆಯೆ ಇಲ್ಲ) ಆದರೆ ಊರಿನ ದೇವರಿಗೆ ಮಾತ್ರ ವೈಭವದ ಕಟ್ಟಡ ಇರುತ್ತದೆ. ಬಡವರ ದೇವರು ಬಡವರಾಗಿ ಇರುವುದಿಲ್ಲ. ಬಡವರ ದೇವರ ಕಮಿಟಿಯ ನಾಯಕರೂ ಸ್ಥಿತಿವಂತರೇ ಆಗಿರುತ್ತಾರೆ. ಭಕ್ತಿ ಹಲವರಿಗೆ ತಮ್ಮ ಜನಸಮುದಾಯದ ಸಂಘಶಕ್ತಿಯನ್ನು ಪ್ರದರ್ಶಿಸುವ ಅವಕಾಶ ಆಗಿದೆ. ಭಕ್ತಿ ಬಹುತೇಕರಿಗೆ ಲಾಭದ ವ್ಯಾಪಾರ. ಕೆಲವೆಡೆ ಅವು ಕೈಗಾರಿಕೆಗಳೇ ಆಗಿವೆ. ಗಣೇಶನ ಹಬ್ಬ, ರಾಜ್ಯೋತ್ಸವಗಳೂ ಇದಕ್ಕೆ ಹೊರತಲ್ಲ. ರಾಜಕೀಯಕ್ಕಂತು ಇವೆಲ್ಲ ಪಕ್ಷಸಂಘಟನೆಗಳಿಗೆ ಹೇಳಿ ಮಾಡಿಸಿದ ಸಾಧನಗಳು.
ಈಚೀಚೆಗೆ ಸಿಟಿಗಳಲ್ಲು ಗಣೇಶನನ್ನು ಕೂರಿಸುವುದು ಮತ್ತು ರಾಜ್ಯೋತ್ಸವ ಮಾಡುವುದು ಹೆಚ್ಚಾಗುತ್ತಿದೆ. ಇದು ನಮ್ಮ ಸಂಸ್ಕೃತಿಯನ್ನು ಉಳಿಸುವ-ಬೆಳೆಸುವ ಕೆಲಸವೋ? ನಾಡು-ನುಡಿಯನ್ನು ಕಟ್ಟುವ ಕೆಲಸವೋ? ಮೇಲ್ನೋಟಕ್ಕೆ ಹಾಗೆ ಕಾಣುತ್ತದೆ. ಆದರೆ ಇದೆಲ್ಲವೂ ಬಹುಪಾಲು ನಾಡು ನುಡಿಯ ಹೆಸರಿನಲ್ಲಿ ಭಕ್ತಿಯ ಹೆಸರಿನಲ್ಲಿ ನಡೆಯುವ ರೋಲ್‌ಕಾಲ್. ಗಣೇಶನ ಉತ್ಸವ ಮತ್ತು ರಾಜ್ಯೋತ್ಸವಗಳಲ್ಲಿ ಕೆಲವೆಡೆ ಸಾಂಸ್ಕೃತಿಕ ಕರ‍್ಯಕ್ರಮಗಳನ್ನು ಆಯೋಜಿಸುವುದುಂಟು. ಇಲ್ಲು ಕೂಡ ನಗೆಹಬ್ಬ, ಸಂಗೀತ ಸಂಜೆ, ಮ್ಯಾಜಿಕ್ ಇವೆ ಕರ‍್ಯಕ್ರಮಗಳು ಜಾಸ್ತಿ. ಸಿನೆಮಾ-ಕಿರುತೆರೆಯ ಜನಪ್ರಿಯ ಸೆಲೆಬ್ರಿಟಿಗಳನ್ನು ಮಾತ್ರ ಸಮಾಜದ ಗಣ್ಯರೆಂದು ಬಿಂಬಿಸುವ, ನಗೆ, ಸಿನಿಮಾ ಸಂಗೀತಗಳ ಮರು ಉತ್ಪಾದನೆಯನ್ನು ಮಾತ್ರ ಸಂಸ್ಕೃತಿಯೆಂದು ಬಿಂಬಿಸುವ ಕೆಲಸವೆ ಇಲ್ಲಿ ಹೆಚ್ಚು ನಡೆಯುತ್ತದೆ. ಮನರಂಜನೆ ಆಧರಿಸಿದ ಕಾರ‍್ಯಕ್ರಮಗಳನ್ನು ಆಯೋಜಿಸುವುದು ಮಾತ್ರ ಸಂಸ್ಕೃತಿಯೊ? ಇದಕ್ಕು ಭಕ್ತಿಗು ಏನು ಸಂಬಂಧ? ಇಷ್ಟಕ್ಕು ಗಣೇಶನಾಗಲೀ ಕನ್ನಡಮ್ಮನಾಗಲೀ ಜನರನ್ನು ಒಂದು ಮಾಡುತ್ತಿದ್ದಾರೋ ಒಡೆಯುತ್ತಿದಾರೋ? ಮಾರಿ ಜಾತ್ರೆಯ ಹಿಂದಿನ ಪುರೋಹಿತ ಶಕ್ತಿಗಳ, ಯಥಾಸ್ಥಿತಿವಾದಿಗಳ, ಯಜಮಾನವಾದಿಗಳ ಸಾಧನಗಳಂತೆ ಇವೂ ಬಳಕೆ ಆಗುತ್ತಿವೆಯಷ್ಟೆ!
ನಮ್ಮ ಸಮುದಾಯಿಕ ಹಬ್ಬಗಳು ಎಂದೊ ಒಮ್ಮೆ ರೂಪಗೊಂಡು ನಿಂತ ನೀರಾದ ಆಚಾರಗಳಲ್ಲ. ಸದಾ ರೂಪಗೊಳ್ಳುತ್ತಲೇ ಇರುವ ಆಚಾರಗಳು. ಇವನ್ನು ನಮ್ಮ ಆಧುನಿಕ ಸಂವಿಧಾನದ ಆಶಯಗಳಿಗೆ, ಪ್ರಜಾಪ್ರಭುತ್ವದ ಆಶಯಗಳಿಗೆ ತಕ್ಕ ಹಾಗೆ ರೂಪಾಂತರಿಸದೆ ಬಳಸಿದರೆ ಅದರಿಂದ ನಮಗೇ ಹಾನಿ. ಸಮಸಮಾಜದ ನಿರ್ಮಾಣದ ಕಡೆಗೆ ಅವೆಲ್ಲವೂ ದುಡಿಯುವಂತೆ ಅವನ್ನು ರೂಪಾಂತರಿಸಲೆಬೇಕು. ಸಮಾಜದ ಯಾವುದೆ ಹಬ್ಬ-ದೈವತಗಳ ಸುತ್ತ ಹಬ್ಬಿದ ಆಚರಣೆಗಳ ಹಿಂದೆ ಕೆಲವು ಸದುದ್ದೇಶಗಳು ಇರುತ್ತವೆ. ಅವನ್ನು ಬಲಿಷ್ಠ ಜಾತಿಗಳು, ವರ್ಗಗಳು, ಪಕ್ಷಗಳು ತಮ್ಮ ಹಿಡನ್ ಅಜೆಂಡಾ ಜಾರಿಯ ಅನುಕೂಲಕ್ಕೆ ತಕ್ಕಂತೆ ಬಳಸಬಹುದು. ಇವನ್ನೆಲ್ಲ ಕುರುಡಾಗಿ ಒಪ್ಪದೆ, ಯಥಾಸ್ಥಿತಿಯಲ್ಲಿ ಪಾಲಿಸದೆ ನಾವೆಲ್ಲ ನಮ್ಮ ನಮ್ಮ ಸಮತೆಯ ಪ್ರಜ್ಞೆಗೆ ಹಾನಿ ಆಗದಂತೆ ಅವನ್ನು ಮತ್ತೆ ಮತ್ತೆ ಮರುಕಟ್ಟುವ ಕೆಲಸ ಅಗತ್ಯವಾಗಿ ಆಗಬೇಕಿದೆ.
ಡಾ. ರಾಮಲಿಂಗಪ್ಪ ಟಿ. ಬೇಗೂರು.
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.