ಯಾರು ಅರಿಯದ ವೀರನ ತ್ಯಾಗ

Date: 31-10-2024

Location: ಬೆಂಗಳೂರು


"ಮಲೆನಾಡಿನ ದಟ್ಟ ಕಾನನದ ನಡುವೆ ತುಂಗೆಯ ತಟದಲ್ಲಿ ಜನಿಸಿದ ಕುವೆಂಪುರವರು ಕುಪ್ಪಳ್ಳಿ ಎಂಬ ಊರಿನಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ತಮ್ಮ ಪ್ರೌಢಿಮೆಯನ್ನು ಚಾಚಿದ ಖ್ಯಾತಿ ಕುವೆಂಪುರವರದು. ಈ ನಿಟ್ಟಿನಲ್ಲಿ “ಶ್ರೀ ರಾಮಾಯಣ ದರ್ಶನಂ” ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ರಾಷ್ಟ್ರಕವಿ, ಪದ್ಮಭೂಷಣ, ಪಂಪ ಪ್ರಶಸ್ತಿ, ಹೀಗೆ ಹಲವಾರು ಉನ್ನತ ಪ್ರಶಸ್ತಿಗಳನ್ನು ಗಳಿಸಿದ ಮಹಾಚೈತನ್ಯ ಕುವೆಂಪು," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ "ಅಂತರ್ ದೃಷ್ಟಿ" ಅಂಕಣದಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಆಯ್ದ ‘ಯಾರು ಅರಿಯದ ವೀರನ ತ್ಯಾಗ' ಕಥೆ ಬಗ್ಗೆ ವಿವರಿಸಿದ್ದಾರೆ.

ನವೋದಯ ಸಾಹಿತ್ಯ ಪರಂಪರೆಯ ಸಂದರ್ಭದಲ್ಲಿ ಕುವೆಂಪು ಅವರ ಸಾಹಿತ್ಯ ಕೃತಿಗಳು ಹಲವು ಆಯಾಮದ ನೆಲೆಗಟ್ಟಿನ ಮೇಲೆ ನಿಂತು ಇತರ ಕವಿಗಳ ಮೇಲೆ ಪ್ರಭಾವ ಬೀರಿರುವ ವಿಚಾರವು ಸಾಹಿತ್ಯ ವಲಯದಲ್ಲಿ ಇಂದಿಗೂ ಕಂಗಳಿಸುವಂತಾಗಿದೆ. ಅವರು ಕಾವ್ಯ, ಕಥೆ, ನಾಟಕ, ಕಾದಂಬರಿ, ವಚನ, ಮಹಾಕಾವ್ಯ, ಸಾಹಿತ್ಯ ವಿಮರ್ಶೆ ಇಂತಹ ಒಂದೊಂದು ಪ್ರಕಾರಗಳಲ್ಲೂ ಗಣನೀಯವಾದ ಕೊಡುಗೆ ಕುವೆಂಪುರವರು ನೀಡಿರುತ್ತಾರೆ. ನಾವು ಆಧುನಿಕ ಕನ್ನಡ ಸಾಹಿತ್ಯದ ಯಾವುದೇ ಪ್ರಕಾರಗಳನ್ನು ಅಧ್ಯಯನಶೀಲ ಮಾಡಬೇಕಾದಲ್ಲಿ ಕುವೆಂಪುರವರ ಕೃತಿಗಳನ್ನು ಹೊರತುಪಡಿಸಿದರೆ ನಮ್ಮ ಅಧ್ಯಯನ ಅಪೂರ್ಣ ಎನ್ನುವ ಅಷ್ಟರಮಟ್ಟಿಗೆ ಎಲ್ಲಾ ವಿಭಾಗಗಳನ್ನು ಗಟ್ಟಿ ಕಾಳುಗಳುಳ್ಳ ಕೃತಿಗಳನ್ನು ನಮ್ಮ ಕನ್ನಡ ಸಾಹಿತ್ಯಕ್ಕೆ ನೀಡಿರುವುದು ಗಮನಾರ್ಹ. ರಾಷ್ಟ್ರಮಟ್ಟದಲ್ಲಿ ಕನ್ನಡ ಸಾಹಿತ್ಯವನ್ನು ಕೊಂಡೊಯ್ದ ಹೆಗ್ಗಳಿಕೆ ಕುವೆಂಪುರವರಿಗೆ ಸಲ್ಲುತ್ತದೆ. ಮಲೆನಾಡಿನ ದಟ್ಟ ಕಾನನದ ನಡುವೆ ತುಂಗೆಯ ತಟದಲ್ಲಿ ಜನಿಸಿದ ಕುವೆಂಪುರವರು ಕುಪ್ಪಳ್ಳಿ ಎಂಬ ಊರಿನಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ತಮ್ಮ ಪ್ರೌಢಿಮೆಯನ್ನು ಚಾಚಿದ ಖ್ಯಾತಿ ಕುವೆಂಪುರವರದು. ಈ ನಿಟ್ಟಿನಲ್ಲಿ “ಶ್ರೀ ರಾಮಾಯಣ ದರ್ಶನಂ” ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ರಾಷ್ಟ್ರಕವಿ, ಪದ್ಮಭೂಷಣ, ಪಂಪ ಪ್ರಶಸ್ತಿ, ಹೀಗೆ ಹಲವಾರು ಉನ್ನತ ಪ್ರಶಸ್ತಿಗಳನ್ನು ಗಳಿಸಿದ ಮಹಾಚೈತನ್ಯ ಕುವೆಂಪು.

ಎರಡು ಬೃಹತ್ ಆಕಾರ ಹೊಂದಿದ ಕಾದಂಬರಿಗಳನ್ನು ನಮಗೆ ಕೊಟ್ಟ ಹಿರಿಮೆ ಅವರದು. “ಕಾನೂನು ಹೆಗ್ಗಡತಿ; ಮಲೆಗಳಲ್ಲಿ ಮದುಮಗಳು”. ಶೂದ್ರ ತಪಸ್ವಿ, ರಕ್ತಾಕ್ಷಿ, ಜಲಗಾರ, ಬಿರುಗಾಳಿ, ಬೆರಳಿಗೆ ಕೊರಳ್, ಸ್ಮಶಾನ ಕುರುಕ್ಷೇತ್ರ, ಇಂತಹ ಅತ್ಯುತ್ತಮ ನಾಟಕ ಕೃತಿಗಳನ್ನು ನೀಡಿದ ಕುವೆಂಪುರವರು ಹಲವಾರು ಕವನ ಸಂಕಲನಗಳ ಕೂಡ ನೀಡಿರುತ್ತಾರೆ. “ಕೊಳ್ಳಲು,ಕಲಾ ಸುಂದರಿ, ಪಕ್ಷಿಕಾಶಿ, ಪಾಂಚಜನ್ಯ, ಪ್ರೇಮ ಕಾಶ್ಮೀರ, ಕದರಡಕೆ, ಷೋಡಸಿ, ಚಂದ್ರಮಂಚಕ್ಕೆ ಬಾಚಕೋರಿ, ಸುಮಾರು 33 ಕ್ಕೂ ಹೆಚ್ಚು ಕವನ ಸಂಕಲನಗಳು ನೀಡಿರುವ ಅವರ ಕೊಡುಗೆ ಅನನ್ಯ. “ಸನ್ಯಾಸಿ ಮತ್ತು ಇತರ ಕಥೆಗಳು”, “ನನ್ನ ದೇವರು ಮತ್ತು ಇತರ ಕಥೆಗಳು”. ಈ ಎರಡು ಕಥಾ ಸಂಕಲನಗಳನ್ನು ನೀಡಿರುತ್ತಾರೆ.

ಕುವೆಂಪುರವರ ಬರೆದ ಕಥೆ ಅವರ “ಯಾರು ಅರಿಯದ ವೀರ” ದಲ್ಲಿ ಸಂಪೂರ್ಣ ಮಲೆನಾಡಿನ ಮಳೆಯ ವರ್ಣನೆ ಮಳೆಗಾಲದ ಹೊಯ್ದಾಟಗಳು ಜನರ ಜೀವನ ನಿರ್ವಹಣೆ ಸಂಕಷ್ಟಗಳನ್ನು ಎದುರಿಸುವ ರೀತಿ ಎಲ್ಲವೂ ಮಲೆನಾಡಿನ ಮಳೆಗೆ ಕೊಡೆ ಹಿಡಿದಂತೆ ಭಾಸವಾಗಿವೆ. ಲಿಂಗ ಎಂಬ ಒಬ್ಬ ಆಳುಮಗ “ಶಿವನೂರು ಸುಬ್ಬಣ್ಣ ಗೌಡರ” ಮನೆಯಲ್ಲಿ ಆಳಾಗಿರುವ ಲಿಂಗನು, ಮೊದಲು ಜೀತಕ್ಕಿದ್ದ ರಂಗ ನಾಯ್ಕರ ಮನೆಯಲ್ಲಿ ಆದ ಜಗಳದಿಂದಾಗಿ ಜೈಲಿಗೆ ಹೋಗಿ ಪಡಬಾರದ ಪಾಡನ್ನೆಲ್ಲ ಪಟ್ಟ ಲಿಂಗ ತನ್ನ ಹೆಂಡತಿಯನ್ನು ಕಳೆದುಕೊಂಡು ಮಗ ನಾಗನೊಂದಿಗೆ ಕೊನೆಗೆ ಶಿವನೂರು ಸುಬ್ಬಣ್ಣರ ಮನೆಯಲ್ಲಿ ಆಳಾಗಿ ದುಡಿದು ಸುಬ್ಬಣ್ಣರಿಗೆ ಬಲಗೈ ಬಂಟನಂತಿರುವ ಲಿಂಗನ ತ್ಯಾಗದ ಕಥೆಯೇ ಈ‌ ಯಾರು ಅರಿಯದ ವೀರ.

ಸುಮಾರು 25 ವರ್ಷಗಳ ಹಿಂದೆ ಬೀಳುತ್ತಿದ್ದ ಮಳೆ ಇಂದು ಮಲೆನಾಡಿನಲ್ಲಿ ಕಂಡುಬರುತ್ತಿಲ್ಲ. ಬಹುತೇಕ ಐವತ್ತು ವರ್ಷಗಳ ಹಿಂದೆ ಸುರಿಯುತ್ತಿದ್ದ ಮಳೆಯ ತೀವ್ರತೆ 25 ವರ್ಷ ನಂತರದಲ್ಲಿ ಕಡಿಮೆ ಆಗಿರುವ ಸಾಧ್ಯತೆ ಇದ್ದೆ ಇದೆ. “ಕುವೆಂಪುರವರ ಸಾಹಿತ್ಯ ಎಂದಾಕ್ಷಣ ಬರೀ ಪ್ರಕೃತಿ ಸೌಂದರ್ಯ ಹೊರತಾಗಿ ಬೇರೇನು ಇರುವುದಿಲ್ಲ” ಎಂಬ ವಿಮರ್ಶಕ ಕೀರ್ತಿನಾಥ್ ಕುರ್ತುಕೋಟಿ ಅಂತವರ ವಿಮರ್ಶೆಯ ಎದುರಿನಲ್ಲೂ ಸಹ ಕುವೆಂಪು ಸಾಹಿತ್ಯ ಇಂದಿಗೂ ಜೀವಂತ ಎನ್ನುವುದಕ್ಕೆ ಅವರ ಪ್ರತಿ ಬರಹದಲ್ಲೂ ನಾವು ಜೀವನದರ್ಶನವನ್ನು ಕಾಣಬಹುದಾಗಿದೆ. ಅಂತಹ ಜೀವನ ದರ್ಶನವನ್ನು ಕಾಣಬಹುದು ಈ “ಯಾರು ಅರಿಯದ ವೀರ” ನ ಕಥೆಯಲ್ಲಿ. ಇದರ ಜೊತೆಗೆ ಮಲೆನಾಡಿನ ಮಳೆಯ ಚಿತ್ರಣ, ಅದರ ಗಂಭೀರತೆ,ಮಳೆಯ ಕ್ರೌರ್ಯ ಇತ್ಯಾದಿ.

ಗೌಡಿಕೆ ದೌಲತ್ತು ಏನೇ ಇದ್ದರೂ ಮನುಷತ್ವವೂ ಇದ್ದೆ ಇರುವ ಮಲೆನಾಡಿನ ಪ್ರಾದೇಶಿಕತೆಯ ಒಳನೋಟ ಇಲ್ಲಿ ಕಾಣಸಿಗುವುದು. “ಯಾರು ಅರಿಯದ ವೀರನಾಗಿ ಕಂಡುಬರುವ ಲಿಂಗನು ಶಿವನೂರು ಸುಬ್ಬಣ್ಣ ಗೌಡರ ಮನೆ ಆಳು. ಈ ಆಷಾಡದ ಮಳೆಯೇ ಹಾಗೆ. ಬಂದರೆ ಬಂದ ಹಾಗೆ ಹಿಡಿದರೆ ಬಿಡದ ಹಾಗೆ ಎಂಬಂತೆ.” ಆಶ್ಲೇ ಮಳೆ ಹೊಡುದ್ರೆ ಸುಸ್ಲು ಗಟ್ಟ ಹತ್ತಾವೆ”. ಎಂಬ ನಾಣ್ಣುಡಿಗೆ ತಕ್ಕಂತೆ ಮಳೆಯ ತೀವ್ರತೆಯು ಬಹಳ ಜೋರಾಗಿ ಇರುತ್ತದೆ ಒಮ್ಮೊಮ್ಮೆ ಈಗಲೂ ಸಹ. “ನಿನ್ನೆ ಎಲ್ಲಿಯವರೆಗೆ ಏರಿತ್ತೋ ನೀರು”, ಎಂದ ಸುಬ್ಬಣ್ಣ ಗೌಡರ ಮಾತಿಗೆ, ಲಿಂಗ “ನಿನ್ನೆ ಇಷ್ಟು ನೀರು ಬಂದಿರಲಿಲ್ಲ ಎಂಟನೆಯ ಮೆಟ್ಟಲಲ್ಲಿಯೇ ಇತ್ತು”. ಎಂದವನನ್ನು ಅನುಸರಿಸಿ ಲಾಟೀನನ್ನು ಹಿಡಿದು ಹೊರಟೇ ಬಿಟ್ಟರು ಗೌಡರು.ಹೊಳೆಯ ಏರಿಳಿತವನ್ನು ನೋಡಲು. “ಅದೇನು ಲಿಂಗ!, ಲಾಟೀನನ್ನು ತೆಗೆದುಕೊಂಡು ಹೋಗಿದ್ದಾರಲ್ಲ ಹೊಳೆ ಬಹಳ ಬಂದಿದೆಯೇನೋ”. ಎಂದು ಸುಬ್ಬಣ್ಣ ಗೌಡರ ಹೆಂಡತಿ ನಾಗಮ್ಮ ಕೇಳಿದರು. 12 ವರ್ಷದ ಮಗ ತಿಮ್ಮ ಮತ್ತು ಮಗಳು ಸೀತ ಊಟ ಮಾಡುತ್ತಿದ್ದವರು ಕಣ್ಣರಳಿಸಿ ಕಿವಿ ನಿಮಿರಿಸಿ ಕೇಳುವುದನ್ನು ನೋಡಿ ಲಿಂಗ ಸುಮ್ಮನಾಗಿದ್ದ ಹೊಳೆ ಏರಿಳಿತವನ್ನು ಬಾಯಿ ಬಿಟ್ಟಿರಲಿಲ್ಲ. ಮಲೆನಾಡಿಗರಿಗೆ ಇದೇನು ಹೊಸತೇನಲ್ಲವಾದರೂ ಬಹಳ ಜೋರಾದರೆ ಹರಿವ ನೀರಿನ ರಭಸವು ಭೀಕರತೆಯನ್ನು ಸೃಷ್ಟಿಸಿ ಬಿಡುತ್ತದೆ. ಇಂತಹ ರೌದ್ರ ನರ್ತನಕ್ಕೆ ಮಲೆನಾಡು ಆಗಾಗ ತತ್ತರಿಸುವುದೇನು ಹೊಸತಲ್ಲ. ಮಲೆನಾಡು ಎಷ್ಟು ಸುಂದರತೆ ಸೊಬಗಿನ ತಾಣ ಹೊಂದಿದೇಯೊ ಅಷ್ಟೇ ಇಲ್ಲಿ ಭೀಕರತೆಯ ಸಮರವು ಇದೆ ಎಂಬುದನ್ನು ಹೊಳೆಯ ಏರುವಿಕೆಯ ಮೂಲಕ ಕಟ್ಟಿಕೊಟ್ಟಿದ್ದಾರೆ ಕುವೆಂಪು. ಅಲ್ಲೇ ಮರದಂಚಿಗೆ ಕಟ್ಟಿ ನಿಲ್ಲಿಸಿದ ಆಪತ್ಕಾಲದ ಬಂಧುವಾದ ದೋಣಿಯನ್ನು ಸಹ ಬಿಚ್ಚಿ ತರಲಾಗದಷ್ಟು ಹೊಳೆಯ ಉಬ್ಬರವು ಮನೆಯಂಚಿಗೆ ತಲುಪಿದ್ದು ಇನ್ನಷ್ಟು ಭಯಾನಕತೆಯನ್ನು ಸೃಷ್ಟಿಸಿತು. ಮಳೆಯ ಭೀಕರತೆ ನೀರಿನ ತೀವ್ರತೆ ಎಲ್ಲವನ್ನು ಕಂಡು ಲಿಂಗನ ಜೊತೆಗೂಡಿ ದೋಣಿಯನ್ನು ತೆಗೆದು ಹೊರಟೆ ಬಿಟ್ಟಿದ್ದರು ಗೌಡರ ಕುಟುಂಬದವರು. ದೋಣಿ ಭಾರ ತಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿಯೇ ತುಂಬಿದ ಜನರನ್ನು ಹೊತ್ತು ಸಾಗಲು ದೋಣಿ ತಕರಾರು ಮಾಡಿದಂತೆ ತೋರುತ್ತಿತ್ತು.ಆದರೂ ಹೇಗೋ ಸಂಭಾಳಿಸಿ ಎಲ್ಲರನ್ನೂ ದಡ ಮುಟ್ಟಿಸುವ ಪಣ ತೊಟ್ಟಿದ್ದ ಲಿಂಗ. ಹಿಂದೆ ಕಷ್ಟದ ಸಮಯದಲ್ಲಿ ಜೀವದಾನ ನೀಡಿ ಹೊಟ್ಟೆ ಬಟ್ಟೆಗೆ ಸೌಕರ್ಯ ಮಾಡಿದ್ದ ಸುಬ್ಬಣ್ಣ ಗೌಡರಿಗಾಗಿ ಲಿಂಗ ಎಂತ ತ್ಯಾಗಕ್ಕೂ ಸಿದ್ದನಿದ್ದ.

ದೋಣಿ ಭಾರ ತಾಳದೆ ತೊಳಲಾಡುತಿತ್ತು. ಕಗ್ಗತ್ತಲಿನ ನಡುವೆ ಲಾಟೀನಿನ ಮಿಣುಕು ದೀಪ ಹೊರತಾಗಿ ಭೋರ್ಗೇರೆದು ಕಿವಿಗಡಚ್ಚಿಕ್ಕುವ ಶಬ್ದದ ನಡುವೆ ಯಾರ ಉಸಿರು ಕೂಡ ಯಾರಿಗೂ ಕೇಳಿದಷ್ಟು ಭಯಂಕರತೆಯನ್ನು ಸೃಷ್ಟಿಸಿದ ನೀರಿನ ಸೆಳವಿನ ನಡುವೆ ನದಿಯಲ್ಲಿ ಹುಟ್ಟು ಹಾಕುತ್ತಿದ್ದ ಲಿಂಗ. ಸುಬ್ಬಣ್ಣ ಗೌಡರು ಅದುವರೆಗೂ ಮುಳುಗುವ ಹಂತಕ್ಕೆ ಬಂದಿದ್ದ ದೋಣಿ ಕೆಲ ಸಮಯಕ್ಕೆ ತಹ ಬದಿಗೆ ಬಂದಿದ್ದು ಕತ್ತಲಲ್ಲೇ ದೋಣಿಯ ಲಯವನ್ನು ಗುರುತಿಸಿದ ಸುಬ್ಬಣ್ಣ ಗೌಡರು “ಲಿಂಗ ದೋಣಿ ಸ್ವಲ್ಪ ಸರಾಗವಾಗಿ ಹೋಗುತ್ತಿದೆಯೋ,,ಭಗವಂತನ ದಯೆಯಿಂದ” ಎಂದರು. ಆದರೆ ಲಿಂಗನ ದಯೆಯಿಂದ ಎಂದು ಆ ಕ್ಷಣಕ್ಕೆ ಸುಬ್ಬಣ್ಣ ಗೌಡರ ಅರಿವಿಗೆ ಬರಲಿಲ್ಲ. ಇನ್ನೇನು ಮುಳುಗುತ್ತದೆ ಎನ್ನುವಾಗಲೇ ಲಿಂಗ ತನ್ನ ದಣಿಯ ಮನೆಯವರನ್ನು ತನ್ನ ಮಗ ನಾಗ ಎಲ್ಲರನ್ನೂ ಉಳಿಸುವ ಸಲುವಾಗಿ ಹೊಳಗೆ ಹಾರಿದ್ದ. ಮನೆ ಬಿಟ್ಟು ದೋಣಿ ಹತ್ತುವಾಗ ಆಗಲೇ ಸುಬ್ಬಣ್ಣ ಗೌಡರು ಈಡನ್ನು ಮೊಳಗಿಸಿದ್ದರು. ಸಾಮಾನ್ಯವಾಗಿ ಕೋವಿಯಿಂದ ಗುಂಡು ಹಾರಿಸುವುದು ಮಲೆನಾಡಿನಲ್ಲಿ ಹಿಂದಿನಿಂದಲೂ ವಾಡಿಕೆಯಾಗಿ ಬಂದಿರುವಂಥದ್ದು. ಕೃಷಿ ಕಾವಲಿಗೆ, ಭಯಕೆ, ಪ್ರಾಣಿಗಳ ಬೇಟೆಗೆ, ಇತ್ಯಾದಿ ಸಂದರ್ಭಗಳಲ್ಲಿ ತಮ್ಮ ಸಂಸ್ಕೃತಿ ನೆಲೆಯನ್ನು ಬಿಂಬಿಸುವುದರ ಮೂಲಕವಾಗಿ ಈ ರೀತಿಯಲ್ಲಿ ಶಬ್ದವನ್ನು ಹೊರ ಜಗತ್ತಿಗೆ ಸೂಚನೆ ನೀಡುತ್ತಿದ್ದರು. ಇದನ್ನರಿತೆ ಪಕ್ಕದೂರಿನ ನುಗ್ಗೆಹಳ್ಳಿಯ ರಾಮೇಗೌಡರು, ಸಿದ್ದೇಗೌಡರು, ಇನ್ನೊಂದು ದಡಕ್ಕೆ ಧಾವಿಸಿದ್ದರು. ಇಲ್ಲಿ ಬಹಳ ಗಂಭೀರವಾಗಿ ಗಮನಿಸಬೇಕಾದ ಅಂಶವೇನೆಂದರೆ, ಮಲೆನಾಡಿನ ಪ್ರತಿ ಶಬ್ದ ಸಂಜ್ಞೆಗೆ ತನ್ನದೇ ಆದ ಸಾಂಸ್ಕತಿಕ ಹಿನ್ನೆಲೆ ಇದೆ. ಅಂತಹ ಶಬ್ದವನ್ನು ಅನುಸರಿಸಿ ಉತ್ಸಾಹವೊ, ಶೋಕವೋ, ಸಡಗರವೋ, ಭಯವೋ, ಎಂಬುದನರಿತ ಮಲೆನಾಡಿನ ಜನರು ಧಾವಿಸುತ್ತಿದ್ದು ಅನಾದಿಯಿಂದ ನಡೆದುಕೊಂಡು ಬಂದ ಪದ್ಧತಿ. ಅಂತಹ ರೀತಿ ಇಂದಿಗೂ ಸಹ ಇರುವುದು ಪ್ರಕೃತಿ ಯೊಂದಿಗಿನ ಅವಿನಾಭಾವತೆ, ಸಂಸ್ಕೃತಿಯ ಚಿಹ್ನೆಯಾಗಿ ತಾದ್ಯಾತ್ಮತೆ ಪಡೆಯುವುದು ನಾವಿಲ್ಲಿ ವಿವೇಚಿಸಬೇಕಾದ ವಿಚಾರ.

ದೋಣಿ ಇಂದ ಇಳಿದಾಗಷ್ಟೆ ಲಿಂಗ ಕಾಣೆಯಾದ ವಿಷಯ ಗಮನಕ್ಕೆ ಬಂದಿದ್ದು. ವಿಷ್ಯ ಗಮನಕ್ಕೆ ಬಂದಾಗ ಇಡೀ ಕುಟುಂಬ ರೋಧಿಸುವುದು, ತಬ್ಬಲಿಯಾದ ನಾಗನನ್ನು ಸಂತೈಸುವುದು ಎಲ್ಲವೂ ಸಹ ಗೌಡಿಕೆಯ ನೆಲೆಗಟ್ಟಾದರೂ ಮನುಷ್ಯತ್ವದ ಮಾನವೀಯ ನೆರಳನ್ನು ನಾವು ಸುಪ್ಪಣ್ಣ ಗೌಡರ ಕುಟುಂಬದ ಮೂಲಕ ಕಾಣಬಹುದಾದ ಸಂಗತಿ. ತನಗೆ ಒಂದು ಕಾಲದಲ್ಲಿ ಊಟ ಉಪಚಾರ ನೀಡಿ ಜೀವಕ್ಕೆ ಜೀವನಕ್ಕೆ ಬೆಳಕಾದ ಸುಬ್ಬಣ್ಣ ಗೌಡರಿಗೆ ಲಿಂಗ ಮಾಡಿದ ತ್ಯಾಗ ಮಾತ್ರ ಅವಿಸ್ಮರಣೀಯ.

“ನಮ್ಮ ಮನೆಯ ಒಂದು ಬೆಳಕು ಹೋಯಿತು” ಎಂದು ಹೇಳುತ್ತಾ ಕಣ್ಣೀರಿಡಿರುವ ಸುಬ್ಬಣ್ಣ ಗೌಡರ ಆಂತರ್ಯ ದನಿ ನಿಜಕ್ಕೂ ಹೃದಯವನ್ನು ಕಲುಕುವಂತದ್ದು. ಮಲೆನಾಡಿಗರ ಪ್ರೀತಿಯ ಔದಾರ್ಯದ ಸಂಕೇತವನ್ನು ಪ್ರತಿಬಿಂಬಿಸುವಂಥದ್ದು ಈ ಕಥೆ. “ಶೈಲಿಯಲ್ಲಿ ಭಾವಗೀತೆಯಂತಿದ್ದರೂ ಮಹಾಕಾವ್ಯದ ಸನ್ನಿವೇಶವೊಂದರ ಪ್ರಭಾವವನ್ನು ಈ ಕತೆ ಬೀರುತ್ತದೆ”. (ಕೀರ್ತಿನಾಥ ಕುರ್ತುಕೋಟಿ- ಯುಗಧರ್ಮ ಹಾಗೂ ಸಾಹಿತ್ಯ ದರ್ಶನ).ಆದರೆ ಈ ಕಥೆ ಭಾವನಾತ್ಮಕ ಸಂಬಂದದ ನೆಲೆಯನ್ನು ಹೊಂದಿರುವುದೇ ಹೊರತು ಶೈಲಿ ಭಾವಗೀತೆಯಂತೆ ಕಾಣುವುದಿಲ್ಲ. ಈ ಕತೆಯಲ್ಲಿ ಭಾವಗಳ ತುಮುಲತೆ ಇದೆ. ಮನುಷ್ಯ ಸಹಜ ಬಾಂದವ್ಯ, ಮನುಷ್ಯತ್ವದ ಮೌಲ್ಯದ ಅನಾವರಣ, ಮಲೆನಾಡಿನ ಬದುಕು ಸಂಬಂಧಗಳ ಬೆಸುಗೆ, ಸಾಂಸ್ಕೃತಿಕ ಹಿನ್ನೆಲೆ, ಮಳೆಯ ಕ್ರೂರತೆ, ಬದುಕಿನ ಅಸ್ಥಿರತೆ, ಇತ್ಯಾದಿಗಳ ಸಂಪೂರ್ಣ ಚಿತ್ರಣವನ್ನು ಕುವೆಂಪು ಅವರು ಕಟ್ಟಿಕೊಡುತ್ತಾರೆ.

ಲಿಂಗನ ಕಳೆದು ಕೊಂಡ ದುಃಖದಲ್ಲಿರುವಾಗಲೇ “ಲಿಂಗ ಬಂದ ಲಿಂಗ”,,, ಎಂಬ ದನಿಗೆ ಎಲ್ಲರ ಮನದಲ್ಲಿ ಹೂ ಅರಳುವುದು. ಲಿಂಗ ಆಗಲೇ ಬಳಲಿ ಕಂಗೆಟ್ಟಿದ್ದ ಆತನನ್ನು ಸುಬ್ಬಣ್ಣ ಗೌಡರು ಬೇರೆ ಬಟ್ಟೆ ಉಡಿಸಿ ಕಾಫಿ ಕುಡಿಸಿ ಮಲಗಿಸಿದರು. ಅವನ ಹಾಸಿಗೆ ಬಳಿ ಕೂತು “ಲಿಂಗ ಇದೇನು ಸಮಾಚಾರ?“ ಎಂದರು. ಆಗ ಲಿಂಗ ಕಿರುದನಿಯಲ್ಲೆ ಸುಳ್ಳು ಕಥೆ ಅರುಹಿದ. “ಹುಟ್ಟು ಹಾಕುತ್ತಾ ಇದ್ದೆ, ಒಂದು ಸಲ ದೋಣಿ ಕೆಳಗಾಗಲಿಲ್ಲವೇ? ಆಗ ಮುಗ್ಗರಿಸಿ ಬಿದ್ದೆ”. ದೋಣಿ ಹಿಡಿಯುವಷ್ಡರಲ್ಲಿ ಮುಂದಕ್ಕೆ ಹೋಯಿತು” ಎಂದ. “ಅಲ್ಲೋ ಹುಟ್ಟು ಹಾಕುತ್ತಿದ್ದವನು ಬಿದ್ದರೆ ಹುಟ್ಟು ದೋಣಿಗೆ ಬರುವುದು ಹೇಗೋ? ಎಂಬ ಗೌಡರ ನುಡಿಗೆ “ಏನೋ ಅಯ್ಯಾ ದೇವರಿಗೆ ಗೊತ್ತು!” ಎಂದು ಹೇಳಿದನೇ ಹೊರತು ನಿಮ್ಮೆಲ್ಲರನ್ನು ಬದುಕಿಸುವ ಸಲುವಾಗಿ ತನ್ನ ಪ್ರಾಣದ ಹಂಗು ತೊರೆದು ನಿಮ್ಮೆಲ್ಲರನ್ನುಳಿಸಿದೆ ಎಂದು ಲಿಂಗ ಹೇಳಲಿಲ್ಲ.

ಆತ ಗೌಡರ ಮೇಲಿಟ್ಟ ನಂಬಿಕೆ ಅನನ್ಯತೆಯನ್ನು ಪಡೆಯುತ್ತದೆ. ತಾನು ಸತ್ತರೂ ಸಹ ತನ್ನ ಮಗ ನಾಗನನ್ನು ಗೌಡರು ಕೈ ಬಿಡಲಾರರು ಎಂಬ ಅಚಲ ನಂಬಿಕೆಯಿಂದ ಮಾಡಿದ ಆತನ ತ್ಯಾಗ ನಿಜಕ್ಕೂ ಅಂತಃಕರಣ ಮಿಡಿಯುವಂತಹದ್ದು. ಲಿಂಗನ ಆ ಸಮಯದ ತ್ಯಾಗ ಇಂದು ಗೌಡರ ಕುಟುಂಬವನ್ನು ನಾಗನನ್ನು ಉಳಿಸಿತು. ಆದರೆ ಲಿಂಗನ ತ್ಯಾಗ ಯಾರು ಅರಿಯದ ವೀರನ ಪಾತ್ರವಾಗಿತ್ತು. ಈ ಕತೆಯಲ್ಲಿ ‌ಲಿಂಗನ ತ್ಯಾಗ, ‌ಗೌಡರ ಔದಾರ್ಯ, ಮನೆಯವರ ಕಳಕಳಿ, ಮನುಷ್ಯತ್ವದ‌ ನೆಲೆಯ ಚಿತ್ರಣವನ್ನು ಅನಾವರಣಗೊಳಿಸಲಾಗಿದೆ.

- ವಾಣಿ ಭಂಡಾರಿ

ಈ ಅಂಕಣದ ಹಿಂದಿನ ಬರಹಗಳು:
ಮಾಸ್ತಿಯವರ ಮೊಸರಿನ ಮಂಗಮ್ಮ
ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು
ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ

ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ

MORE NEWS

ತ.ರಾ.ಸು ಅವರ ೦-೦=೦ ಕಥೆಯಲ್ಲಿ ಸಾವಿನ ಸೂಕ್ಷ್ಮ ನೋಟ

26-12-2024 ಬೆಂಗಳೂರು

"ತ.ರಾ‌. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...

ಬರಹಗಾರ ವಸ್ತುನಿಷ್ಠವಾಗಿ ಹೇಳದೇ ಹೋದರೆ...

25-12-2024 ಬೆಂಗಳೂರು

"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...