"ಕವಿತೆಯೆಂದರೇನು ? ಕವಿಗಳೆಂದರೆ ಯಾರು ? ಕಬ್ಬಿಗನ ಗುರಿ ಏನು ? ಕಬ್ಬಗಳ ಉದ್ದೇಶವೇನು ? ಕವಿತೆಯೆಂದರೆ ತನಗೆ ತಾನೆ ಮಾಡಿಕೊಳ್ಳುವ ಒಂದು ಅಲೌಕಿಕ ವಿಚಿತ್ರವಾದ ಸ್ವಾರಾಧನೆ," ಎಂದಿದ್ದರು ಕುವೆಂಪು.
ಯುನೆಸ್ಕೋ ಪ್ರತೀ ವರ್ಷ ಮಾರ್ಚ್ 21ರಂದು ‘ವಿಶ್ವ ಕಾವ್ಯ ದಿನ’ವನ್ನು ಯಾಕೆ ಆಚರಿಸುತ್ತೆ? ಮೂಲ ಉದ್ದೇಶವೇನು? ಎನ್ನುವ ವಿಚಾರಗಳನ್ನೊಳಗೊಂಡ ಲೇಖನ ನಿಮ್ಮ ಓದಿಗಾಗಿ..
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ,
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ? ||ಪಲ್ಲ||
ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರು ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ ?
ಇಂತಹ ಅದ್ಭುತವಾದ ಕವಿತೆಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕವಿ ದ.ರಾ ಬೇಂದ್ರೆ. ಇಂತಹ ಸಾಲು ಸಾಲುಗಳನ್ನು ಕವಿಗಳನ್ನು ನೆನಪಿಸಿಕೊಳ್ಳುವ ದಿನವೇ ಮಾರ್ಚ್ 21.
ಯುನೆಸ್ಕೋ ಈ ದಿನವನ್ನು ಮುಖ್ಯವಾಗಿ ಕಾವ್ಯಾಭಿವ್ಯಕ್ತಿಯ ಮೂಲಕ ಭಾಷಾ ವೈವಿಧ್ಯತೆಯನ್ನು ಆಚರಿಸುವ ಸಲುವಾಗಿಯೇ ‘ವಿಶ್ವ ಕಾವ್ಯ ದಿನ’ವನ್ನಾಗಿ ಆಚರಿಸಲು ನಿರ್ಧರಿಸಿತು. ಪ್ಯಾರಿಸ್‌ನಲ್ಲಿ ನಡೆದ ತನ್ನ 30ನೇ ಅಧಿವೇಶನದಲ್ಲಿ, ಯುನೆಸ್ಕೋ ಸಾಮಾನ್ಯ ಸಮ್ಮೇಳನವು ಮೊದಲ ಬಾರಿಗೆ ಮಾರ್ಚ್ 21 ಅನ್ನು ವಿಶ್ವ ಕಾವ್ಯ ದಿನವೆಂದು ಗೊತ್ತುಪಡಿಸಿತು. ಇನ್ನು ಈ ದಿನಾಚರಣೆಯನ್ನು ಜಗತ್ತಿನೆಲ್ಲೆಡೆ ಆಚರಿಸಲು ಮುಖ್ಯ ಉದ್ದೇಶ, ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಉಳಿಸುವುದು ಮತ್ತು ರಾಷ್ಟ್ರ, ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾವ್ಯ ಚಳುವಳಿಗಳನ್ನು ಬೆಳೆಸುವುದಾಗಿತ್ತು.
‘ಕಾವ್ಯ ಎಂದರೇನು’ ಎನ್ನುವಂತಹ ಪ್ರಶ್ನೆಗೆ ಯಾರಿಂದಲೂ ನಿರ್ದಿಷ್ಟವಾದ ಉತ್ತರ ಕೊಡಲು ಸಾಧ್ಯವಿಲ್ಲ. ಏಕೆಂದರೆ ಕಾವ್ಯವೂ ಒಂದು ರೀತಿಯ ಧ್ಯಾನವಾಗಿದ್ದೂ, ಅಮೂರ್ತತೆ ಮತ್ತು ಪದಗಳ ಸೌಂದರ್ಯವನ್ನು ಆಚರಿಸುವ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದೆ. ಮನುಷ್ಯ ತನ್ನ ಭಾವನೆಗಳಿಗೆ ಕಾವ್ಯದ ಸೋಗು ನೀಡಿ, ಭಾಷೆಯ ಜೊತೆಗೆ ನಿರಂತರವಾದ ಅನುಸಂಧಾನವನ್ನು ನಡೆಸುತ್ತದೆ.
ಕವಿತೆಯ ಬಗ್ಗೆ ಕುವೆಂಪು ಅವರು 1928ರ ಡಿಸೆಂಬರ್ 15ರಂದು ವಿದ್ಯಾರ್ಥಿ ಕವಿ ಸಮ್ಮೇಳನದಲ್ಲಿ ಮಾಡಿದ ಭಾಷಣದ ಸಾಲುಗಳಿವು; ಕವಿತೆಯೆಂದರೇನು ? ಕವಿಗಳೆಂದರೆ ಯಾರು ? ಕಬ್ಬಿಗನ ಗುರಿ ಏನು ? ಕಬ್ಬಗಳ ಉದ್ದೇಶವೇನು ? ಕವಿತೆಯೆಂದರೆ ತನಗೆ ತಾನೆ ಮಾಡಿಕೊಳ್ಳುವ ಒಂದು ಅಲೌಕಿಕ ವಿಚಿತ್ರವಾದ ಸ್ವಾರಾಧನೆ.
ಜೀವನದ ಸುಖ, ದುಃಖ ; ಸೃಷ್ಟಿಯ ಸೌಂದರ್ಯ,ರಹಸ್ಯ ; ಸಮಸ್ತ ವಿಶ್ವದ ಹಿಂದಿರುವ ಒಂದು ಮಹಾ ಪವಿತ್ರ ವ್ಯಕ್ತಿತ್ವದಲ್ಲಿ ನಮಗುಂಟಾಗುವ ವೇದನಾಪೂರ್ವಕವಾದ ಪ್ರೇಮ, ಭಕ್ತಿ ; ಇವೇ ಮೊದಲಾದ ದಿವ್ಯಭಾವಗಳು ಪ್ರತಿಭಾ ಸಂಪನ್ನವಾದ ಕವಿಯ ಎದೆಯಲ್ಲಿ ಉದ್ರೇಕವಾದಾಗ, ಹಸುರು ನೆಲದಿಂದ ಉಕ್ಕಿ ನೆಗೆಯುವ ಬುಗ್ಗೆಯಂತೆ ನಿರಂತರವಾಗಿ, ನಿರಾಯಾಸವಾಗಿ ಚಿಮ್ಮಿ ಹೊಮ್ಮುವ ಭಾವನಾತ್ಮಕವಾಗಿ ಲಲಿತ ಪದಗಳ ಮನೋಹರವಾದ ಇಂಪಾದ ವಸಂತ ನೃತ್ಯವೆ, ಸುಗ್ಗಿಯ ಕುಣಿತವೆ ನಿಜವಾದ ಕವಿತೆ !
ಕವಿತೆಗೆ ಕಲ್ಪನಾ ಪ್ರತಿಭೆ ಬೇಕೇಬೇಕು. ಭಾವನೆ ಅದರ ಆತ್ಮ, ಶಬ್ದಗಳೇ ಅದರ ದೇಹ. ಅದು ಆತ್ಮವು ತನಗೆ ತಾನೆ ಆಡಿಕೊಳ್ಳುವ ಮಾತು. ಅದಕ್ಕೆ ಸದಸ್ಯರು ಬೇಕಿಲ್ಲ. ಅದು ಎಂದಿಗೂ ಉಪದೇಶಕ್ಕೆ ಹೊರಡದು. ಕೇಳುವವರನ್ನು ಮೈಮರೆಸಿ ವಶಮಾಡಿಕೊಳ್ಳುತ್ತದೆ. ಅದು ಬರಿಯ ಬುದ್ದಿಯ ಕಾರ್ಯವಲ್ಲ. ಪಾಂಡಿತ್ಯದಿಂದ ಅದು ಲಭಿಸುವುದಿಲ್ಲ. ಪೃಥಕ್ಕರಣದೃಷ್ಟಿ ಬುದ್ಧಿಯ ಕಾರ್ಯ ; ಏಕೀಕರಣದೃಷ್ಟಿ ಪ್ರತಿಭೆಯ ಕಾರ್ಯ. ಕವಿತೆ ಏಕಾಂತ ಧ್ಯಾನದಿಂದ ಹೊರಸೂಸುವ ಗಾನ. ಅದು ಹಳೆಯದನ್ನು ಹೊಸತು ಮಾಡಿ ನಮ್ಮ ಭಾವಗಳಿಗೆ ನಿತ್ಯಯೌವನವನ್ನು ದಾನಮಾಡುತ್ತದೆ. ಅದರ ತತ್ವವು ಸರ್ವಕಾಲ ಸರ್ವದೇಶಗತವಾದುದು.
"ಲೇಖಕರೇ ಹೇಳಿದಂತೆ ಇದು ಕ್ರೂರ, ಸ್ವಾರ್ಥಿ, ವಿವೇಚನಾರಹಿತ ಗಂಡಸರ ಕೈಯ್ಯಲ್ಲಿ ಸಿಕ್ಕಿಕೊಂಡ ಅನೇಕ ಹೆಣ್ಣುಮಕ್ಕಳ ಕ...
“ಕಥಾ ಬರಹವನ್ನು ಧ್ಯಾನದಂತೆ ತಾಳ್ಮೆ ಮತ್ತು ಶ್ರದ್ಧೆಯಿಂದ ಮಾಡಿ ಮಹತ್ವದ ಕಥೆಗಳನ್ನು ರಚಿಸಿದ ನಾಯಕ ಅವರ ಕಥೆಗಳಲ...
“ಸಂಪನ್ಮೂಲ ಮತ್ತು ಸಂಪರ್ಕಗಳ ಮಿತಿಯ ಕಾರಣದಿಂದ ಕೇವಲ ಇಪ್ಪತ್ತೊಂದು ಬರೆಹಗಳನ್ನು ಮಾತ್ರ ಈ ಪುಸ್ತಕದಲ್ಲಿ ಸಂಕಲಿಸ...
©2025 Book Brahma Private Limited.