“ಕಥಾ ಬರಹವನ್ನು ಧ್ಯಾನದಂತೆ ತಾಳ್ಮೆ ಮತ್ತು ಶ್ರದ್ಧೆಯಿಂದ ಮಾಡಿ ಮಹತ್ವದ ಕಥೆಗಳನ್ನು ರಚಿಸಿದ ನಾಯಕ ಅವರ ಕಥೆಗಳಲ್ಲಿ ಬಳಸಿರುವ ಭಾಷೆ, ತಂತ್ರ , ವಸ್ತು, ಮತ್ತು ಕಥೆ ರಚನೆಯ ಕಸುಬುದಾರಿಕೆ ಸೊಗಸಾಗಿದೆ,” ಎನ್ನುತ್ತಾರೆ ಸಿ. ಎಸ್. ಆನಂದ. ಅವರು ಪ್ರೊ. ಕೃಷ್ಣ ನಾಯಕ ಅವರ “ಕ್ರೌಂಚ ಪ್ರಲಾಪ” ಕೃತಿ ಕುರಿತು ಬರೆದ ವಿಮರ್ಶೆ.
ನಮ್ಮ ಕಾಲದ ಬಹುಮುಖ್ಯ ಕಥನಕಾರರಾದ ಪ್ರೊ. ಕೃಷ್ಣ ನಾಯಕ ಅವರು ನಮ್ಮ ನಡುವಿನ ದಣಿವರಿಯದ ಕಥೆಗಾರರು. ಅವರು ಈವರೆಗೆ ಒಟ್ಟು ಐದು ಕಥಾಸಂಕಲನ ಹೊರತಂದಿದ್ದಾರೆ. ಈಗ ಆ ಎಲ್ಲ ಕಥೆಗಳನ್ನು ಒಟ್ಟುಗೂಡಿಸಿ "ಕ್ರೌಂಚ ಪ್ರಲಾಪ" ಎಂಬ ಶೀರ್ಷಿಕೆಯಲ್ಲಿ ಸಮಗ್ರ ಕಥಾಸಂಕಲನದ ಗುಚ್ಛವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸುತ್ತಿದ್ದಾರೆ. ಸಣ್ಣ ಕಥೆಯ ಜೀವಶಕ್ತಿಯ ಬಗ್ಗೆ ಗಾಢ ನಂಬಿಕೆಯಿರುವ ನಾಯಕ ಅವರಿಗೆ ಕಥೆಯೆಂದರೆ ಬದುಕು; ಕಥೆಯೆಂದರೆ ಪ್ರೀತಿ. ತಮ್ಮ ಪರಿಸರದ ಬದುಕಿನ ಅನೇಕ ವಿನ್ಯಾಸಗಳನ್ನು ನಾಯಕ ಅವರು ಇಲ್ಲಿಯ ಬಹುಪಾಲು ಕಥೆಗಳಲ್ಲಿ ತುಂಬಾ ದಟ್ಟವಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿಯ ಕಥೆಗಳ ಮೂಲಕ ನಾಯಕ ಅವರಿಗೆ ತಮ್ಮ ಸುತ್ತಲಿನ ಮನುಷ್ಯ ಜೀವನದ ಬಗೆಗಿರುವ ತವಕ- ತಲ್ಲಣ, ತಳಮಳ, ಆಸೆ, ಆಸಕ್ತಿ, ಮನುಷ್ಯತ್ವದ ಪ್ರೀತಿ ಆಳವಾದುದೆಂದು ವೇದ್ಯವಾಗುತ್ತದೆ. ನಾಯಕ ಅವರ ಗ್ರಾಮ ಬದುಕಿನ ಕುರಿತಾದ ಮನುಷ್ಯ ಸಂಬಂಧಗಳಲ್ಲಿ ಮಿಡಿಯುವ ಅಂತ:ಕರಣ, ನಿಕಟತೆ, ಒಳಹೊಕ್ಕು ನೋಡುವ, ಗ್ರಹಿಸುವ, ನಿರೂಪಿಸುವ ಪ್ರಕಟನಾಶಕ್ತಿ ಅವರ ಇಲ್ಲಿಯ ಎಲ್ಲ ಕಥೆಗಳ ಹಿಂದಿನ ಸಾಮಾನ್ಯ ಪ್ರೇರಣೆಯಾಗಿದೆ. ಈ ಕಥಾ ಸಂಕಲನದ ಕಥೆಗಳಲ್ಲಿ ಭೂತ ಮತ್ತು ವರ್ತಮಾನದ ಹಲವಾರು ವಿದ್ಯಮಾನಗಳು ಕಥೆಗಳ ವಸ್ತುಗಳಾಗಿವೆ. ಸಮಾಜದ ಬದುಕನ್ನು ಸೂಕ್ಷ್ಮ ಸಂವೇದನೆಯಿಂದ ನೋಡುವ ನಾಯಕ ಅವರ ಈ ಕಥೆಗಳು ನಮ್ಮೂರ ಜಾತ್ರೆಯಲ್ಲಿ ಮಾರಾಟಕ್ಕೆ ಇಟ್ಟ ಸುಂದರ ವಸ್ತುಗಳಂತೆ ಕಾಣಿಸುತ್ತವೆ. ಈ ಕಥೆಗಳಲ್ಲಿ ತೆರೆದು ತೋರಿಸಿರುವ ಮನುಷ್ಯ ಬದುಕು ಮತ್ತು ಪರಿಸರ ನಮ್ಮದು ಹಾಗೂ ನಮ್ಮ ಸುತ್ತಲಿನದ್ದು ಎಂದು ಖಂಡಿತ ಹೇಳಬಹುದು. ಕೊನೆಯ ಮಾತು, ಕಥಾ ಬರಹವನ್ನು ಧ್ಯಾನದಂತೆ ತಾಳ್ಮೆ ಮತ್ತು ಶ್ರದ್ಧೆಯಿಂದ ಮಾಡಿ ಮಹತ್ವದ ಕಥೆಗಳನ್ನು ರಚಿಸಿದ ನಾಯಕ ಅವರ ಕಥೆಗಳಲ್ಲಿ ಬಳಸಿರುವ ಭಾಷೆ, ತಂತ್ರ , ವಸ್ತು, ಮತ್ತು ಕಥೆ ರಚನೆಯ ಕಸುಬುದಾರಿಕೆ ಸೊಗಸಾಗಿದೆ. ಕೆಲವೇ ವಿವರಗಳಲ್ಲಿ ಪಾತ್ರಗಳನ್ನು ಕಟ್ಟುವ, ಕಠೋರವಾದ ವಾಸ್ತವವನ್ನು, ವೈಚಾರಿಕ ನೆಲೆಯನ್ನು, ವೈಜ್ಞಾನಿಕ ನಿಲುವನ್ನು, ಮುಗ್ಧ ಜನತೆಯ ಮೌಢ್ಯಗಳನ್ನು ತುಂಬಾ ಧ್ವನಿಪೂರ್ಣವಾದ ತಮ್ಮ ಸೀಮೆಯ ಭಾಷೆಯಲ್ಲಿ ಕಟ್ಟಿಕೊಟ್ಟಿರುವ ಈ ಕಥೆಗಳು ನಾಯಕ ಅವರಿಂದ ಕಟ್ಟಿದ ಕಥೆಗಳಾಗಿರದೆ ಸಹಜವಾಗಿ ಹುಟ್ಟಿದ ಯಶಸ್ವಿ ಕಥೆಗಳಾಗಿವೆ. ಆ ಕಾರಣಕ್ಕಾಗಿಯೇ ಈ ಕಥೆಗಳನ್ನು ಒಂದೇ ಸಿಟ್ಟಿಂಗ್ನಲ್ಲಿ ಓದಿ ಸಂಭ್ರಮಿಸಬಹುದಾಗಿದೆ ; ಇದು ಅವರ ಕಥೆಗಳ ಹೆಗ್ಗಳಿಕೆಯೂ ಆಗಿದೆ.ನನ್ನ ವಿದ್ಯಗುರಗಳಾದ ಪ್ರೊ . ಕೃಷ್ಣ ನಾಯಕ ಅವರ ಒಡನಾಟದಲ್ಲಿ ಇದ್ದು , ಬದುಕಿನ ಕುರಿತು,ಸಾಹಿತ್ಯದ ಕುರಿತು,ಕಥೆ ರಚನೆಯ ಕುರಿತು ಅನೇಕ ವಿಷಯಗಳನ್ನು, ಸಂಗತಿಗಳನ್ನು ಕಲಿತುಕೊಂಡಿರುವೆ . ಅದಕ್ಕೆ ನಾನು ಅವರಿಗೆ ಸದಾ ಋಣಿ. ಅವರು ತಮ್ಮ ಸಮಗ್ರ ಕಥಾ ಸಂಕಲನ ಪ್ರಕಟಿಸಿ ಓದುಗ ಪ್ರಿಯರಿಗೆ ಕೊಡುತ್ತಿರುವುದು ಖುಷಿ ಸಂಗತಿ. ಪ್ರೊ.ಕೃಷ್ಣ ನಾಯಕ ಅವರಿಗೆ ಸಂಪ್ರೀತಿಯ ಅಭಿನಂದನೆಗಳು.
"ಸಮಸ್ಯೆಗಳ ಕಾರಣಗಳು ಏನೇ ಇರಲಿ, ಆದರೆ ಪರಿಹಾರ ಒದಗಿಸುವ ಬೀಜಮಂತ್ರ ಒಂದೇ. ಅದು ಮಾತು. ಮಾತು ಮನೆ ಕೆಡಿಸೀತು ಅಂತಾ...
“ಈ ಪುಸ್ತಕ ತೇಜಸ್ವಿ ಅವರ ಬದುಕಿನ ಕೆಲವು ಸ್ವಾರಸ್ಯಕರ ಘಟನೆಗಳನ್ನು ನಮಗೆ ಕಟ್ಟಿಕೊಡುತ್ತದೆ. ಗೊತ್ತಿರುವ ಕೆಲವ...
“ಸುಮಾರು ಅರವತ್ತೆರೆಡು ಆಕರ ಗ್ರಂಥಗಳನ್ನು ಅಭ್ಯಸಿಸಿ ಈ ಕೃತಿಯನ್ನು ರಚಿಸಿದ ಡಾ. ಗಜಾನನ ಶರ್ಮರ ಕೆಲಸ ಸ್ತುತ್ಯಾರ...
©2025 Book Brahma Private Limited.