ಸ್ನೇಹಮಯಿ ಬದುಕಿನ ‘ಚುಂಬಕ ಗಾಳಿ’ 


“ಸಂಪನ್ಮೂಲ ಮತ್ತು ಸಂಪರ್ಕಗಳ ಮಿತಿಯ ಕಾರಣದಿಂದ ಕೇವಲ ಇಪ್ಪತ್ತೊಂದು ಬರೆಹಗಳನ್ನು ಮಾತ್ರ ಈ ಪುಸ್ತಕದಲ್ಲಿ ಸಂಕಲಿಸಲು ಸಾಧ್ಯವಾಗಿದೆ,” ಎನ್ನುತ್ತಾರೆ ಚಂದ್ರಕಾಂತ ವಡ್ಡು. ಅವರು ತಮ್ಮ “ಚುಂಬಕ ಗಾಳಿ” ಕೃತಿಗೆ ಬರೆದ ಪ್ರವೇಶ.

`ನಮ್ಮ ಪ್ರಕಾಶನದಿಂದ ಪ್ರಕಟಿಸಿರುವ ರಂಜಾನ್ ದರ್ಗಾ ಅವರ ‘ಬಸವ ಪ್ರಜ್ಞೆ', ‘ಬಸವಣ್ಣನವರ ದೇವರು', ‘ಬಸವ ಧರ್ಮದ ವಿಶ್ವ ಸಂದೇಶ' ಕೃತಿಗಳನ್ನು ಇಂದಿಗೂ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ [ರೂ.೧೫] ಒದಗಿಸುತ್ತಿದ್ದೇವೆ. ಇದರಿಂದ ಆರ್ಥಿಕ ನಷ್ಟ ಉಂಟಾಗುವುದು ನಿಜ, ಆದರೆ ವೈಚಾರಿಕ ಲಾಭ ಬಹಳ ದೊಡ್ಡದು! ನಾವು ಹಂಚುವುದು ಪ್ರಸಾದವೇ ಹೊರತು, ಪದಾರ್ಥವಲ್ಲವೆಂಬುದು ನನ್ನ ಭಾವನೆ'' -ಚನ್ನಬಸವಣ್ಣನವರ ಈ ಮಾತುಗಳಲ್ಲಿ ಅವರ ಪ್ರಕಾಶನ ಕಾಯಕದ ಸಮಗ್ರ ದರ್ಶನ ಅಡಗಿದೆ.

ಬಳ್ಳಾರಿಯ ಲೋಹಿಯಾ ಪ್ರಕಾಶನದ ಚನ್ನಬಸವಣ್ಣ ಅವರ ನಾಡು ನುಡಿಯ ಸೇವೆ ಸಹಜವಾಗಿಯೇ ಬಹುಜನರ ಒಲುಮೆಗೆ ಪಾತ್ರವಾಗಿದೆ. ಅವರು ನಿಜ ಅರ್ಥದಲ್ಲಿ ನಾಡಿನ ಸಾಕ್ಷೀಪ್ರಜ್ಞೆ. ಅಣ್ಣ ಬೆಳಕಿಗೆ ತಂದ ಲೇಖಕರನ್ನು, ಕೃತಿಗಳನ್ನು ಒಮ್ಮೆ ಅವಲೋಕಿಸಿದರೆ ಅವರು ನಂಬಿದ ಸಮಾಜವಾದ ಮತ್ತು ಬಹುತ್ವ ಸಂಸ್ಕೃತಿಯ ಸಾಕಾರರೂಪವೇ ಗೋಚರಿಸುತ್ತದೆ.

ಸಾಹಿತ್ಯ, ಸಂಸ್ಕೃತಿ, ಭಾಷೆ ಮತ್ತು ರಾಜಕೀಯದ ಆಗು ಹೋಗುಗಳನ್ನು ಕುರಿತು ಚನ್ನಬಸವಣ್ಣ ನಿಖರವಾಗಿ, ನಿರಂತರವಾಗಿ ಮಾತನಾಡುವುದನ್ನು ಗಮನಿಸಿದ್ದೇವೆ. ಇಂಥ ಅಪರೂಪದ, ವಿಶಿಷ್ಟ ವ್ಯಕ್ತಿತ್ವವನ್ನು ಕುರಿತು ನಾವು ಈಗಲಾದರೂ ಮಾತನಾಡದಿದ್ದರೆ ಹೇಗೆ...? ಒಂದು ದಿನ ನನ್ನ ಮನದೊಳಗೆ ಇಂತಹದೊಂದು ಪ್ರಶ್ನೆ ತಿವಿಯತೊಡಗಿದಾಗ ಸುಲಭ ಸಹ್ಯವೆನಿಸಲಿಲ್ಲ. ಭಾವಾವೇಶದಲ್ಲಿ ತಕ್ಷಣವೇ ಮಹತ್ವದ ತೀರ್ಮಾನ ತೆಗೆದುಕೊಂಡೇಬಿಟ್ಟೆ.

ನಾಡಿನ ಬಗೆಗೆ ಅಷ್ಟೊಂದು ಮಾತನಾಡುವ `ಅಣ್ಣ'ನ ಬಗೆಗೆ ನಾಡು ಇಷ್ಟಾದರೂ ಇನ್ನಾದರೂ ಮಾತನಾಡಬೇಕು ಎಂಬ ಕನಸು ಹೊತ್ತು ಸಹಮನದ ಸ್ನೇಹವಲಯವನ್ನು ಸಂಪರ್ಕಿಸಿದೆ. `ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ ಈ ನಿಟ್ಟಿನ ಪ್ರಯತ್ನಕ್ಕೆ ಕೈಹಾಕಿದ್ದೇನೆ. ಚನ್ನಬಸವಣ್ಣ ಅವರ ವ್ಯಕ್ತಿತ್ವದ ಗುಣವಿಶೇಷ ಮತ್ತು ಮಹತ್ವವನ್ನು ಒಂದು ಪುಟ್ಟ ಪುಸ್ತಕದಲ್ಲಿ ಕಟ್ಟಿಕೊಡುವುದು, ದಾಖಲಿಸುವುದು ನನ್ನ ಉದ್ದೇಶ' ಎಂದಾಗ ನಾನೇ ಅಚ್ಚರಿಪಡುವಷ್ಟು ಮೆಚ್ಚುಗೆ ವ್ಯಕ್ತವಾಯಿತು.

`ನೀವು ಕಂಡ ಚನ್ನಬಸವಣ್ಣನನ್ನು ಕುರಿತು ದಯವಿಟ್ಟು ೧೦೦೦ ಪದಗಳ ಒಂದು ಲೇಖನವನ್ನು ಬರೆದುಕೊಡಿ' ಎಂದು ಸಂಕ್ಷಿಪ್ತ ವಾಟ್ಸಾಪ್ ಸಂದೇಶ ಕಳಿಸಿದೆ. ಜೊತೆಗೆ, `ಈ ಪುಸ್ತಕದ ಪ್ರಕಟಣೆಯ ವಿಷಯ ಯಾವುದೇ ಕಾರಣಕ್ಕೂ ಚನ್ನಬಸವಣ್ಣನ ಕಿವಿಗೆ ಬೀಳದಂತೆ ರಹಸ್ಯವಾಗಿ ಮಾಡಬೇಕೆಂಬುದು ನನ್ನ ಇಂಗಿತ. ಆದ್ದರಿಂದ ದಯವಿಟ್ಟು ಈ ಬಗ್ಗೆ ಯಾರೊಂದಿಗೂ ಮಾತನಾಡಬೇಡಿ. ಲೋಹಿಯಾ ಅವರ ಜನ್ಮದಿನವಾದ ಮಾರ್ಚ್ ೨೩ರಂದು ಅಣ್ಣನಿಗೆ ಪುಸ್ತಕ ಅರ್ಪಿಸುವ ಮೂಲಕ ನಾಡಿನ ಜನರ ಪರವಾಗಿ ಕೃತಜ್ಞತೆ ಸಲ್ಲಿಸೋಣ' ಎಂದು ಸೇರಿಸಿದ್ದೆ.

ಇದೆಲ್ಲಾ ನಡೆದಿದ್ದು ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ. ೨೦೨೪ರ ಮಾರ್ಚ್ ೨೩ರ ಲೋಹಿಯಾ ಜನ್ಮದಿನದಂದು ಪುಸ್ತಕ ಹೊರತರುವ ಯೋಚನೆ-ಯೋಜನೆ ನನ್ನ ವೃತ್ತಿ ಒತ್ತಡಗಳ ಕಾರಣದಿಂದ ವಿಳಂಬವಾಗುತ್ತಲೇ ಸಾಗಿತು. ಕೆಲವೊಮ್ಮೆ ತೀರಾ ಹಚ್ಚಿಕೊಂಡು ಮಾಡಲು ಹೊರಟ ಕಾರ್ಯಗಳನ್ನು ಅತಿಯಾದ `ಪರಿಪೂರ್ಣತೆ ಪ್ರಜ್ಞೆ' ಕಚ್ಚಿ ಕಾಡುವುದುಂಟು. ಬೆರಳೆಣಿಕೆಯ ಲೇಖಕರು ತಮ್ಮ ಬರೆಹ ಕಳಿಸಲು ಇಂದು-ನಾಳೆ ಎಂದು ಮೀನಮೇಷ ಎಣಿಸಿದ್ದನ್ನು ಗುರಾಣಿಯಾಗಿ ಬಳಸುವ ಅವಕಾಶ ಇದ್ದರೂ ನಾನು ಹಾಗೆ ಮಾಡುವುದಿಲ್ಲ.

ಸುದೀರ್ಘ ವಿಳಂಬದ ಪಾಪದ ಕೊಡವನ್ನು ಹೊರಲು ನನ್ನ ಹೆಗಲುಗಳು ಸದೃಢವಾಗಿವೆ. ಹಾಗೇನಾದರೂ ಹೆಚ್ಚುಕಡಿಮೆಯಾದರೆ ಪಾಪದ ಭಾರ ಇಳಿಸಿಕೊಳ್ಳಲು ಮುಂದಿನ ಕುಂಭಮೇಳಕ್ಕೆ ಹೋದರಾಯಿತು ಎಂಬ ತಿಂಗಳೇಶನ ಉಚಿತ ಸಲಹೆಯೂ ಜೊತೆಗಿದೆ! ಅಂತೂ ಈ ವರ್ಷದ ಲೋಹಿಯಾ ಹುಟ್ಟಿದ ದಿನವಾದರೂ ಪುಸ್ತಕ ಕೈಸೇರಿತು ಎಂಬ ಸಂಭ್ರಮದಲ್ಲಿ ಲೇಖಕರು ವಿಳಂಬದ ನನ್ನ ತಪ್ಪನ್ನು ಮನ್ನಿಸದಿದ್ದರೂ, ಮರೆಯುವ ಔದಾರ್ಯ ತೋರುವರೆಂದು ನಂಬುತ್ತೇನೆ.

ವಾಸ್ತವವಾಗಿ ಅಣ್ಣನ ಒಡನಾಟದ ರುಚಿಯನ್ನು ಸವಿಯುವ ಸೌಭಾಗ್ಯ ಪಡೆದವರ ಸಂಖ್ಯೆ ಬಹಳ ದೊಡ್ಡದು. ಆದರೆ ಸಮಯ, ಸಂಪನ್ಮೂಲ ಮತ್ತು ಸಂಪರ್ಕಗಳ ಮಿತಿಯ ಕಾರಣದಿಂದ ಕೇವಲ ಇಪ್ಪತ್ತೊಂದು ಬರೆಹಗಳನ್ನು ಮಾತ್ರ ಈ ಪುಸ್ತಕದಲ್ಲಿ ಸಂಕಲಿಸಲು ಸಾಧ್ಯವಾಗಿದೆ. ಒಟ್ಟಾರೆ, ಚನ್ನಬಸವಣ್ಣ ಎಂಬ ಸ್ನೇಹಮಯಿ ಬದುಕಿನ ಚುಂಬಕ ಗಾಳಿಯು `ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಬೀಸುತಿರಲಿ, ಸೂರ್ಯನ ಬಿಂಬಕೆ ಚಂದ್ರನ ಬಿಂಬವು ರಂಜಿಸಿ ನಗೆಯಲಿ ಮೀಸುತಿರಲಿ...' ಎಂಬ ಗುಂಗಿನಲ್ಲಿ ನಮಿಸುವೆ, ವಿರಮಿಸುವೆ.

MORE FEATURES

ಕನ್ನಡ ಆಧುನಿಕ ಕಥನ ಸಾಹಿತ್ಯವು ಪ್ರಾರಂಭದಲ್ಲಿ ಹೊಂದಿದ್ದ ವೈವಿಧ್ಯ ಈಗ ಕಾಣಿಸುತ್ತಿಲ್ಲ

23-03-2025 ಬೆಂಗಳೂರು

"ಲೇಖಕರ ಹಾಸ್ಯ, ವ್ಯಂಗ್ಯಗಳು ಮತ್ತು ಕುತೂಹಲ ಉಳಿಸಿಕೊಳ್ಳುವ ನಿರೂಪಣೆ ಈ ಕತೆಗಳ ವೈಶಿಷ್ಟ್ಯ. ಕತೆಗಳು ಒಂದು ಒಂದೂವ...

ಪ್ರಕೃತಿ ಸಹಜವಾದ ಆಕರ್ಷಣೆಯ ಆದರ್ಶ ಜೀವನ ಎಲ್ಲರಿಗೂ ಬೇಕು

23-03-2025 ಬೆಂಗಳೂರು

"ಜಲಪಾತ ಹೆಸರೇ ಸೂಚಿಸುವಂತೆ ನಿರಂತರ ಹರಿಯುತ್ತಿರುವ ಪ್ರಕೃತಿಯ ಶಕ್ತಿಯ ಅಗಾಧತೆಯನ್ನು ಬಿಂಬಿಸುವ ಪ್ರಾಕೃತಿಕ ಸೃಷ್...

ಒಂದು ಐತಿಹಾಸಿಕ ಸಮ್ಮೇಳನಕ್ಕೆ ಹಾಜರಾದ ಸಾರ್ಥಕತೆ

23-03-2025 ಬೆಂಗಳೂರು

"ನಗಲು ತೆರೆದ ಬಾಯನ್ನು ಮುಚ್ಚಲಾಗದಷ್ಟು ಪರಿಚಿತ ಮುಖಗಳು ಸಿಕ್ಕು ತವರಿನ ಕಾರ್ಯಕ್ರಮಕ್ಕೆ ಹೋದಂತೆನಿಸಿತು. ಕವಿಗೋಷ...