“ಸಾಮನ್ಯರ ಜೀವನ ಕಥನವಾಗಿ, ಜಾನಪದ ಸಿದ್ಧಾಂತಗಳು ಹಾಗೂ ವ್ಯಕ್ತಿಪರಂಪರೆ ಇದರಲ್ಲಿ ಮಿಳಿತಗೊಂಡಿವೆ ಎಂಬುದನ್ನು ಗಮನಿಸಬಹುದು,” ಎನ್ನುತ್ತಾರೆ ಮನುಶ್ರೀ ಸಿದ್ದಾಪುರ. ಅವರು ಎಂ. ಮಂಜಣ್ಣ ಅವರ ‘ಸಿರಿಯಜ್ಜಿ ಸಂಕಥನ’ ಕೃತಿ ಕುರಿತು ಬರೆದ ವಿಮರ್ಶೆ.
ಸಿರಿಯಜ್ಜಿ ವಾಸಿಸುತ್ತಿದ್ದ ಹಳ್ಳಿ ಯಲಗಟ್ಟೆ ಗೊಲ್ಲರಹಟ್ಟಿಯು ನಮ್ಮೂರಿನಿಂದ 10-12 ಕಿ.ಮೀ ದೂರದಲ್ಲಿರುವ ಸಾಂಸ್ಕೃತಿಕ ಹಾಗೂ ಪಾರಂಪರಿಕ ತಾಣವಾಗಿತ್ತು. ಈಗ ಆಧುನಿಕತೆಯ ಗಾಳಿಯ ವೇಗಕ್ಕೆ ತತ್ತರಿಸಿ ಹಳ್ಳಿ ಪರಂಪರೆಯ ಉಳಿಸುವಿಕೆಗೆ ಹೆಣಗಾಡುತ್ತಿದೆ ಎಂಬುದು ಅಷ್ಟೇ ದಿಟ.
ಅಕ್ಷರ ಜ್ಞಾನದಿಂದ ಬಹುತೇಕ ದೂರವಾಗಿದ್ದ ಸಿರಿಯಜ್ಜಿಯು ತಮ್ಮ ಪ್ರಜ್ಞಾವಂತಿಕೆಯನ್ನು ತನ್ನ ಕಾವ್ಯಗಳ ಮುಖೇನ ಸಾಹಿತ್ಯ ವಲಯಕ್ಕೆ ಪರಿಚಿತವಾದ ಮಹಾಪ್ರತಿಭಾ ಚೇತನ ಎಂದೇ ಹೇಳಿದರೆ ತಪ್ಪಲ್ಲ. ಕಲಾವಿದರ ಕಾವ್ಯದೊಳಗೆ ಹುದುಗಿರುವ ಸಂವೇದನೆಗಳನ್ನು ಒಂದೆಡೆ ಸಂಕಥನಗೊಳಿಸಿರುವ ಚರಿತ್ರೆಯಿಲ್ಲದವರ ಚರಿತ್ರೆಯ ಕಥನವಾಗಿದೆ ಸಿರಿಯಜ್ಜಿ ಸಂಕಥನ ಕೃತಿ. ಸಾಮನ್ಯರ ಜೀವನ ಕಥನವಾಗಿ, ಜಾನಪದ ಸಿದ್ಧಾಂತಗಳು ಹಾಗೂ ವ್ಯಕ್ತಿಪರಂಪರೆ ಇದರಲ್ಲಿ ಮಿಳಿತಗೊಂಡಿವೆ ಎಂಬುದನ್ನು ಗಮನಿಸಬಹುದು. ಅಂದರೆ ಸಮುದಾಯದ ಅರಿವಿನೊಳಗೆ ಜೀವವಿರೋಧಿ ನಿಲುವುಗಳು ಮಹತ್ವ ಪಡೆಯದೇ ಮಾನವ ನೆಲೆಗಟ್ಟಿನೊಳಗೆ ಜೀವಪರವಾದ ನಿಲುವುಗಳೇ ಮುಖ್ಯ ಎಂಬ ಅಂಶಗಳನ್ನೊಳಗೊಂಡಿದೆ. ಇಡೀ ಕೃತಿಯ ಅವಲೋಕಿಸಿದಾಗ ಥಟ್ಟನೆ ಹೊಳೆವ ಅಂಶವೆಂದರೆ ವ್ಯಕ್ತಿಗತ ನೋವುಗಳನ್ನು ಪರಂಪರೆಯ ನೋವುಗಳಾಗಿ ಬಿಂಬಿಸುವ ಜೀವನಾನುಭವವಿದೆ.
ಯಾಕಂದರೆ ಈ ಕಾವ್ಯದೊಳಗೆ ಕಾಣಸಿಗುವ ಸಾಂಸ್ಕೃತಿಕ ನಾಯಕರಾದ ಜುಜಪ್ಪ, ಎತ್ತಪ್ಪ, ಚಿತ್ತಪ್ಪ ಇವರು ಜೀವಪರ ಸಂವೇದನೆಗಳ ಜೊತೆಗಿದ್ದವರು. ವೈಯಕ್ತಿಕ ಕಥನಗಳಾಗಿರದೆ ಮನುಷ್ಯ ಮತ್ತು ಪ್ರಾಣಿ ಸಂಬಂಧಿತ ಬೆಸುಗೆಯು ಪ್ರಕೃತಿಯಲ್ಲಿ ಸರ್ವರಿಗೂ ಸಮಪಾಲು ಎಂಬ ಸಂದೇಶ ಸಾರುವ ಅಂಶವು ಮುಖ್ಯವಾಗಿ ಬಿಂಬಿತವಾಗಿದೆ. ಈ ಸಂಕಥನಗಳಲ್ಲಿ ವೈವಿಧ್ಯಮಯ ಜಗತ್ತು ತೆರೆದು ಕೊಂಡಿದ್ದು, ಯಾವುದೇ ಶಿಷ್ಟ ಕಥನಗಳಿಗೂ ಕಡಿಮೆಯಿಲ್ಲದಂತೆ ಸಂವೇದನಾಶೀಲತೆಯೊಂದಿಗೆ ಮೇಳೈಸಿಕೊಂಡಿದೆ. ಅಷ್ಟೇ ಅಲ್ಲ ಸ್ತ್ರೀ ಬದುಕಿನ ಸಂಕಟ-ತುಮಲಗಳು ಇದ್ದರೂ ತಾಯಿಸಹೃದಯತೆಯು ಕಾರಂಜಿ ರೂಪದಲ್ಲಿ ಪುಟಿದಿದೆ ಎಂಬ ಭಾವನೆ ವ್ಯಕ್ತಪಡಿಸುವಂತಿದೆ. ಇದೊಂದು ಸಿರಿಯಜ್ಜಿಯ ಸಾಂಸ್ಕೃತಿಕ ಬದುಕಿನ ಜೀವನೋತ್ಸಾಹದ ಚೈತನ್ಯ ಸ್ಪೂರ್ತಿಯ ಸಂಕಥನವಾಗಿದೆ ಎಂದು ಹೇಳಬಹುದಾಗಿದೆ.
ಹಿಂದಿನಕ್ಕಿಂತ ವಾಸ್ತವದ ವಿದ್ಯಮಾನದಲ್ಲಿ ಜಾನಪದ ಅಧ್ಯಯನವು ಪ್ರತ್ಯೇಕ ಹಾಗೂ ಅಧ್ಯಯನ ಶಿಸ್ತಾಗಿ ವ್ಯಾಪ್ತಿಯ ವಿಸ್ತರಣೆಯೊಂದಿಗೆ ಮಹತ್ವ ಪಡೆದುಕೊಳ್ಳುವ ಮುಖೇನ ಅಧ್ಯಯನದ ಆಸಕ್ತಿಯನ್ನು ಹೆಚ್ಚಿಸುತ್ತಿದೆ .ಅಂದರೆ ಈವರೆಗೂ ಅಷ್ಟೇನೂ ಪ್ರಾಮುಖ್ಯವಲ್ಲ ಎಂಬ ಮನೋಭಾವದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಈ ಜಾನಪದ ವಲಯವು ಇತ್ತೀಚಿಗೆ ಸಾಹಿತ್ಯದ ಮುಖೇನ ಒಂದು ಚರಿತ್ರಾರ್ಹ ಪರಂಪರೆಯನ್ನು ಸೃಷ್ಟಿಸುವತ್ತ ಬೆಳವಣಿಗೆಯ ಸೂಚನೆ ಕಾಣಿಸುತ್ತಿದೆ. ಈ ಹಿನ್ನೆಲೆಯಿಂದ ಗಮನಿಸಿದಾಗ ಬಹುತೇಕ ವಿಶ್ವವಿದ್ಯಾಲಯಗಳು ಜಾನಪದ ಅಧ್ಯಯನ ಕೇಂದ್ರ ಹಾಗೂ ಸಂಶೋಧನಾತ್ಮಕ ಕೇಂದ್ರಗಳ ಸ್ಥಾಪನಗೆ ದೂರದೃಷ್ಟಿಯ ಆಲೋಚನೆಗಳಿಂದ ಕಾರ್ಯಪ್ರವೃತ್ತವಾಗುತ್ತಿವೆ. ಪ್ರಸ್ತುತ ವಿದ್ಯಮಾನದಲ್ಲಿ ಜಾನಪದ ಸಾಹಿತ್ಯ ವಲಯದಲ್ಲಿ ಸಿರಿಯಜ್ಜಿ ಸಂಕಥನವು ಒಂದು ವಿಶಿಷ್ಟ ಆಕರಗ್ರಂಥವಾಗಲಿದೆ ಎನ್ನಬಹುದು
ಒಟ್ಟಿನಲ್ಲಿ ಸಿರಿಯಜ್ಜಿ ಕುರಿತಾದ ಜಾನಪದ ಕಾವ್ಯಗಳನ್ನು ಜಾನಪದ ಸಿದ್ಧಾಂತಗಳೊಂದಿಗೆ ತುಲನಾತ್ಮಕ ಅಧ್ಯಯನ ಮಾಡುವ ಮೂಲಕ ತಮ್ಮದೇ ಆದ ಓದಿನ ಅರಿವಿನೊಳಗೆ ಈ ವಿಶಿಷ್ಟ ಸಂಕಥನವನ್ನು ತರುವಲ್ಲಿ ಗೆಳೆಯರಾದ ಡಾ.ಮಂಜಣ್ಣನವರ ಕ್ರಿಯಾಶೀಲತೆಯನ್ನು ತುಂಬು ಹೃದಯದಿಂದ ಅಭಿನಂದಿಸುತ್ತ ಶುಭ ಕೋರುವೆ..
- ಮನುಶ್ರೀ ಸಿದ್ದಾಪುರ.
“ಸಮಾಜೋ ಸಾಂಸ್ಕೃತಿಕ ಸಂರಚನೆಯನ್ನು ಆಳುತ್ತಿರುವ ಊಳಿಗಮಾನ್ಯ ಪದ್ಧತಿಯ ಪ್ರಜ್ಞೆ ಮತ್ತು ಅದರಲ್ಲಿ ಆಳವಾಗಿ ಬೇರೂರಿ...
"ಆ ಶಾಲೆಯ ಸಿಬ್ಬಂದಿಯೊಂದಿಗೆ ಅವಳು ತಾತ್ಕಾಲಿಕ ಸಂಬಂಧ ಉಂಟಾಗಿ, ಅದು ಊರಿನವರ ಮಾತುಕತೆಗೆ ಆಹಾರವಾಗುತ್ತದೆ. ಕಿಡಿಗ...
“ಈ ಕೃತಿಯಲ್ಲಿ ಕಾವ್ಯ, ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ, ಸಂಶೋಧನೆ, ಸಂಗೀತ, ವ್ಯಕ್ತಿಚಿತ್ರ ಮೊದಲಾದ ವಿಷಯಗಳ...
©2025 Book Brahma Private Limited.