“ಈ ಕೃತಿಯಲ್ಲಿ ಕಾವ್ಯ, ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ, ಸಂಶೋಧನೆ, ಸಂಗೀತ, ವ್ಯಕ್ತಿಚಿತ್ರ ಮೊದಲಾದ ವಿಷಯಗಳು ಹರಡಿಕೊಂಡಿವೆ. ಅರ್ಧದಷ್ಟು ಬರಹಗಳು ಅನುವಾದಿತ ಕೃತಿಗಳಿಂದ ರೂಪುಗೊಂಡಿವೆ,” ಎನ್ನುತ್ತಾರೆ ಸುಭಾಷ್ ರಾಜಮಾನೆ ಅವರು ತಮ್ಮ “ಕಂಡದ್ದು ಕಾಣದ್ದು” ಕೃತಿಗೆ ಬರೆದ ಲೇಖಕರ ಮಾತು.
ಇಲ್ಲಿಯ ಲೇಖನಗಳು ನಾಲ್ಕು ವರ್ಷಗಳ ಹಿಂದೆಯೇ ಪ್ರತಿ ವಾರಕ್ಕೊಮ್ಮೆ 'ನ್ಯಾಯಪಥ' ಹಾಗೂ 'ನಾನು ಗೌರಿ ಡಾಟ್ ಕಾಮ್'ನಲ್ಲಿ ಪ್ರಕಟವಾದವು. ಈಗ ಇದೊಂದು ಮಿರಾಕಲ್ನಂತೆ ತೋರುತ್ತಿದೆ. ಪಟ್ಟುಹಿಡಿದು ನಿಯತವಾಗಿ ವಾರ ವಾರವೂ ಬರೆಯುವುದು ನನಗೆ ಹೊಂದುವುದಿಲ್ಲ ಎಂದುಕೊಂಡಿದ್ದೆ. ಅದಕ್ಕೆ ನನ್ನೊಳಗಿನ ಹಿಂಜರಿಕೆಯು ಕಾರಣವಾಗಿರಬಹುದು. ಗೆಳೆಯರಾದ ಆಕೃತಿ ಗುರುಪ್ರಸಾದ್ ಅವರು ಹಳೆಯ ಪುಸ್ತಕಗಳ ಬಗ್ಗೆ ಒಂದು ಅಂಕಣ ಬರೆಯಬೇಕೆಂದು ಆಗಾಗ ನನಗೆ ಹೇಳುತ್ತಲೇ ಇದ್ದರು. ಅವರು ಕೇಳಿದಾಗ ಆಗೊಮ್ಮೆ ಈಗೊಮ್ಮೆ ಲೇಖನಗಳನ್ನು ಬರೆದು ಕಳಿಸುತ್ತಿದ್ದೆ. ಆದರೆ ರೆಗ್ಯೂಲರ್ ಆಗಿ 'ಅಂಕಣ' ಬರೆಯಲು ಹಿಂದೇಟು ಹಾಕುತ್ತಲೇ ಇದ್ದೆ.
ಆಗಷ್ಟೇ ಗುರುಪ್ರಸಾದ್ರು 'ನ್ಯಾಯಪಥ' ಪತ್ರಿಕೆಗೆ ಕಾರ್ಯನಿರ್ವಾಹಕ ಸಂಪಾದಕರಾಗಿ ಹೊಸ ಜವಾಬ್ದಾರಿಯನ್ನು ಹೊತ್ತಿದ್ದರು. ಅವರ ಒತ್ತಾಯ ಹೆಚ್ಚುತ್ತಲೇ ಇತ್ತು. ನಾನು ಏನಾದರೊಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಲೇ ಇದ್ದೆ. ಹೀಗೆ ಒಂದು ದಿನ ಅವರ ವಿಶ್ವಾಸದ ಒತ್ತಾಸೆಗೆ ಮಣಿದು ಬರೆಯಲು ಒಪ್ಪಿಕೊಂಡೆ. ಈ ಬರಹಗಳಿಗೆ 'ಸುಗಂಧಿ ಬೇರು' ಎಂಬ ಶೀರ್ಷಿಕೆ ನೀಡಲಾಯಿತು. ಈ ಹೆಸರನ್ನು ಮಿತ್ರರಾದ ರಾಜಶೇಖರ ಹಳೆಮನೆಯರು ಸೂಚಿಸಿದ್ದರು. ಈ ಬರಹಗಳು ಸುಮಾರು ಇಪ್ಪತ್ತು ವಾರಗಳ ಕಾಲ 'ನ್ಯಾಯಪಥ'ದಲ್ಲಿ ಪ್ರಕಟಗೊಂಡವು. ಆಗ ಇವುಗಳನ್ನು ಓದಿದ ಸ್ನೇಹಿತರು, ಕೆಲವು ಓದುಗರು ತಂತಮ್ಮ ಅಭಿಪ್ರಾಯಗಳನ್ನು ನೀಡುತ್ತಿದ್ದರು. ಕೆಲವು ಹಿರಿಯ ಲೇಖಕರು, ವಿಮರ್ಶಕರು ಪ್ರತಿಕ್ರಿಯೆ ನೀಡುತ್ತಿದ್ದರು.
ನನ್ನ ಪಿಎಚ್.ಡಿ. ಸಂಶೋಧನ ಕೃತಿ 'ನಿರ್ದಿಗಂತವಾಗಿ ಏರಿ' 2017 ರಲ್ಲಿ ಪ್ರಕಟವಾದ ನಂತರದಲ್ಲಿ ಲೇಖನಗಳ ಪುಸ್ತಕವನ್ನು ಹೊರ ತರಲು ಆಗಿರಲಿಲ್ಲ. ಆರು ಅನುವಾದಿತ ಕೃತಿಗಳೇ ಹೊರಬಂದವು. ಈಗ ಮೊದಲ ಕೃತಿಯಾಗಿ 'ಕಂಡದ್ದು ಕಾಣದ್ದು' ಪ್ರಕಟವಾಗುತ್ತಿದೆ. ಇಲ್ಲಿಯ ಎಲ್ಲ ಬರಹಗಳು ಓದಿನ ಮುಖಾಂತರವೇ ಹುಟ್ಟಿಕೊಂಡವು. ನನಗೆ ಇಷ್ಟವಾದ ಒಂದಿಷ್ಟು ಹಳೆಯ ಪುಸ್ತಕಗಳ ಕಥನ ಇಲ್ಲಿದೆ
ಈ ಕೃತಿಯಲ್ಲಿ ಕಾವ್ಯ, ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ, ಸಂಶೋಧನೆ, ಸಂಗೀತ, ವ್ಯಕ್ತಿಚಿತ್ರ ಮೊ ಮೊದಲಾದ ವಿಷಯಗಳು ಹರಡಿಕೊಂಡಿವೆ. ಅರ್ಧದಷ್ಟು ಬರಹಗಳು ಅನುವಾದಿತ ಕೃತಿಗಳಿಂದ ರೂಪುಗೊಂಡಿವೆ. ಈ ಕೃತಿಯನ್ನು ಪ್ರಬಂಧ, ಲೇಖನ, ವಿಮರ್ಶೆ, ಅನುಭವ ಕಥನ ಇತ್ಯಾದಿಯಾಗಿ ಹಣೆಪಟ್ಟಿ ಹಚ್ಚಲು ಇಷ್ಟವಿಲ್ಲ. ಇವೆಲ್ಲ ಸಂಗತಿಗಳು ಒಂದರೊಳಗೊಂದು ಬೆರೆತುಕೊಂಡಿವೆ.
ಇಲ್ಲಿಯ ಬರಹಗಳ ಕಂತೆಯನ್ನು ಕನ್ನಡದ ಬಹುಶ್ರುತ ಚಿಂತಕರಾದ ಡಾ. ಕೆ.ವಿ. ನಾರಾಯಣ ಅವರಿಗೆ ಓದಲು ಕೊಟ್ಟೆ. ಅವರು ಈ ಕೃತಿಯ ಬಗ್ಗೆ ಬರೆದಿದ್ದು ನನಗೆ ತುಂಬ ಖುಷಿ ನೀಡಿದೆ. ಇದರ ಬಗ್ಗೆ ಮತ್ತೊಂದು ಬರಹ ಆಕಸ್ಮಿಕವಾಗಿ ಒಲಿದು ಬಂದಿತು. ಇತ್ತೀಚೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 12 ದಿನ ಆರ್ಸಿ ತರಬೇತಿಯಲ್ಲಿದ್ದೆ. ಅಲ್ಲೇ ಕಲ್ಯಾಣ ನಗರದಲ್ಲಿ ಇರುವ ಕನ್ನಡದ ಮಹಿಳಾ ದನಿಯಾಗಿ ಹೊಮ್ಮಿದ ಮಲ್ಲಿಕಾ ಘಂಟಿಯವರು ಮನೆಗೆ ಕರೆದರು. ಆಗ ಅನಸೂಯಾ ಕಾಂಬಳೆಯವರು ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದರು. ಮಲ್ಲಿಕಾ ಘಂಟಿಯವರ ಮನೆಯಲ್ಲಿ ನಡೆದ ಮಾತುಕತೆ ಆಪ್ತವಾಗಿದ್ದವು. ಯಾವುದೋ ಮಾತಿಗೆ ನನ್ನ ಬ್ಯಾಗಿನಲ್ಲಿದ್ದ ಈ ಕೃತಿಯ ಹಸ್ತಪ್ರತಿಯನ್ನು ಅವರಿಗೆ ತೋರಿಸಿದೆ. ತಕ್ಷಣಕ್ಕೆ ಕಣ್ಣಾಡಿಸಿದರು. ತಮಗೆ ಬಿಡುವಾದಾಗ ಓದಿ ಮತ್ತು ಏನಾದರು ಸಲಹೆ ಸೂಚನೆಗಳಿದ್ದರೆ ಕೊಡಿ ಎಂದು ಕೇಳಿಕೊಂಡೆ. ಅವರು ಅವತ್ತೇ ರಾತ್ರಿಯೆಲ್ಲ ಈ ಕೃತಿಯನ್ನು ಓದಿದ್ದಲ್ಲದೆ ಕೈಬರಹದ ಎರಡು ಪುಟಗಳನ್ನು ಬರೆದು ಒಂದು ಕವರಿನಲ್ಲಿಟ್ಟು ಮರುದಿನ ರಾತ್ರಿ ನನಗೆ ತಲುಪಿಸಿದ್ದರು. ಈಗಲೂ ಇದು ನನಗೊಂದು ಅಚ್ಚರಿಯ ಸಂಗತಿಯಾಗಿದೆ.
ಈಗ 'ಕಂಡದ್ದು ಕಾಣದ್ದು' ಕೃತಿಯನ್ನು ಗುರುಪ್ರಸಾದ್ ಅವರು 'ಆಕೃತಿ ಪುಸ್ತಕ'ದ ಮೂಲಕ ಪ್ರಕಟಿಸುತ್ತಿರುವುದು ನನಗೆ ಸಹಜವಾಗಿಯೇ ಸಂತೋಷವಾಗಿದೆ. ಗುರುಪ್ರಸಾದ್ ಅವರೊಳಗಿನ ಪುಸ್ತಕ ಪ್ರೀತಿಯನ್ನು ಹಾಗೂ ಪುಸ್ತಕ ಸಂಸ್ಕೃತಿಯ ಪರಿಚಾರಿಕೆಯನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ. ನನಗೆ ಮನೆಯಲ್ಲಿ ಬರೆಯುವ ವಾತಾವರಣವನ್ನು ಸೃಷ್ಟಿ ಕೊಡುತ್ತಿದ್ದ, ಒಮ್ಮೊಮ್ಮೆ ಶಾಪ ಹಾಕುತ್ತಿದ್ದ ಮಡದಿ ಶೋಭಾಳನ್ನು ಕೂಡ ಸ್ಮರಿಸುತ್ತೇನೆ; ಬರವಣಿಗೆಯ ಏಕಾಂತಕ್ಕೆ ಆಗಾಗ ಭಂಗ ತರುತ್ತಿದ್ದ ಕಿತಾಪತಿ ನನ್ನಗೆ ಭುವಿಷ್ ಮತ್ತು ಜೋರು ದನಿಯ ಮಗಳು ಮಿನಲ್ ಇವರನ್ನು ಸಹ ಅಕ್ಕರೆಯಿಂದಲೇ ನೆನಪಿಸಿಕೊಳ್ಳುತ್ತೇನೆ. ವಿಭಿನ್ನವಾದ ಮುಖಪುಟ ಮಾಡಿಕೊಟ್ಟ ವಿಷ್ಣುಕುಮಾರ್ ಅವರಿಗೆ ಮತ್ತು ಅಕ್ಷರ ದೋಷಗಳನ್ನು ಸರಿಪಡಿಸಿದ ಆಶಾ ಅವರಿಗೂ ಧನ್ಯವಾದಗಳು
- ಸುಭಾಷ್ ರಾಜಮಾನೆ
“ಇಲ್ಲಿರುವ ಮಗ ಮಗಳು ಪ್ರಯಾಣ ಪ್ರಯಾಸ ಭಯ ಸಂಭ್ರಮ ಓದುವ ನಿಮ್ಮವೂ ಆಗಬಹುದು. ಬರೆಯದ ಕಥೆಗಾರರೇ ನಮ್ಮ ನಡುವೆ ಹೆಚ್...
“ಸಂಕಲನದಲ್ಲಿ ಒಟ್ಟು ಹತ್ತೇ ಕಥೆಗಳು ಇದ್ದರೂ, ಅವು ನಮ್ಮ ನೆನಪುಗಳೊಡನೆ ಬೆರೆಸುವ ಭಾವನೆಗಳು ಜೀವಿಸುತ್ತಲೇ ಇರುತ್...
“ಮಾನವನ ಮಹತ್ವಾಕಾಂಕ್ಷೆ ಮತ್ತು ಆವಿಷ್ಕಾರದ ಶಕ್ತಿಯಿಂದ ಸ್ಫೂರ್ತಿಗೊಂಡ ಯಾರಿಗಾದರೂ ಸ್ಪಂದಿಸುವ ಚಿತ್ತಾಕರ್ಷಕ ನಿ...
©2025 Book Brahma Private Limited.