ಹಳ್ಳಿಯ ಬದುಕನ್ನು ಚಿತ್ರಿಸುವ ಕೆಲವು ಸುಂದರ ತುಣುಕುಗಳಿವೆ


“ಸಮಾಜೋ ಸಾಂಸ್ಕೃತಿಕ ಸಂರಚನೆಯನ್ನು ಆಳುತ್ತಿರುವ ಊಳಿಗಮಾನ್ಯ ಪದ್ಧತಿಯ ಪ್ರಜ್ಞೆ ಮತ್ತು ಅದರಲ್ಲಿ ಆಳವಾಗಿ ಬೇರೂರಿರುವ ವ್ಯಕ್ತಿಗಳು ಮತ್ತು ಆ ಸಮುದಾಯದ ಬದುಕಿನ ಝಲಕಗಳನ್ನು ಓದುಗರಿಗೆ ನೀಡುತ್ತವೆ,” ಎನ್ನುತ್ತಾರೆ ಪ್ರೊ. ಎನ್. ಮನು ಚಕ್ರವರ್ತಿ ಅವರು ಡಾ. ಶಿವರಾಜ ಬ್ಯಾಡರಹಳ್ಳಿ ಅವರ “ಒಂದು ತಲೆ ಚವುರದ ಕಥೆ” ಕೃತಿಗೆ ಬರೆದ ಆಶಯ ನುಡಿ.

ಶಿವರಾಜ ಬ್ಯಾಡರಹಳ್ಳಿಯವರ ಪ್ರಬಂಧ ಸಂಕಲನ ಸೂಕ್ಷ್ಮ ಸಂವೇದನೆಯಿಂದ ಬೆರಗುಗೊಳಿಸುತ್ತದೆ. ಇಲ್ಲಿನ ಪ್ರಬಂಧಗಳಲ್ಲಿ ಲೇಖಕರ ನೆನಪುಗಳು, ಅನುಭವಗಳು, ಭೂತಕಾಲದೊಂದಿಗಿನ ಅವರ ಮುಖಾಮುಖಿ ಎಲ್ಲವೂ ವರ್ತಮಾನದಲ್ಲಿ ಒಂದು ಮೂರ್ತರೂಪ ಪಡೆದುಕೊಂಡಿವೆ. ಜೊತೆಗೆ ಸಮಾಜೋ ಸಾಂಸ್ಕೃತಿಕ ಸಂರಚನೆಯನ್ನು ಆಳುತ್ತಿರುವ ಊಳಿಗಮಾನ್ಯ ಪದ್ಧತಿಯ ಪ್ರಜ್ಞೆ ಮತ್ತು ಅದರಲ್ಲಿ ಆಳವಾಗಿ ಬೇರೂರಿರುವ ವ್ಯಕ್ತಿಗಳು ಮತ್ತು ಆ ಸಮುದಾಯದ ಬದುಕಿನ ಝಲಕಗಳನ್ನು ಓದುಗರಿಗೆ ನೀಡುತ್ತವೆ. ಇದು ಚುಟುಕಾಗಿಯಾದರೂ ದಮನಕಾರಿ ಪ್ರವೃತ್ತಿಗಳನ್ನು ಯಶಸ್ವಿಯಾಗಿ ತಡವಿಕೊಳ್ಳಲು ಬೇಕಾದ ಶಕ್ತಿ ಮತ್ತು ಸಾಮರ್ಥ್ಯವನ್ನು ಹೇಗೋ ಉತ್ಪಾದಿಸುತ್ತದೆ. ಯಾಕೆಂದರೆ ದಮನಿತ ಸಮುದಾಯಗಳು ತಮ್ಮ ಕಲ್ಪನೆ, ಸೃಜನಶೀಲ ಶಕ್ತಿ ಮತ್ತು ಬಹುಮುಖ್ಯವಾಗಿ ತಮ್ಮ ಹಾಸ್ಯಗುಣದಿಂದ ಅದ್ಭುತ ಸಂಪನ್ಮೂಲಗಳನ್ನು ಉತ್ಪಾದಿಸುತ್ತ ಪುಷ್ಟಿಗೊಳ್ಳುತ್ತಿರುತ್ತವೆ.

ಶಿವರಾಜು ತಾವು ನಿರ್ದಿಷ್ಟವಾಗಿ ಪ್ರತಿನಿಧಿಸುವ ದಲಿತ ಸಮುದಾಯದ ಹಲವು ಸಮಸ್ಯೆಗಳ ಕಡೆ ಹೊರಳಿದ್ದಾರೆ. ಜೊತೆಗೆ ಒಂದು ಕಾಲದಲ್ಲಿ ದಲಿತ ವರ್ಗವನ್ನು ನೋವು, ಅಪಮಾನ ಮತ್ತು ಲಜ್ಜೆಗೆ ಗುರಿಮಾಡುತ್ತಿದ್ದ ಬೈಗುಳ, ದೈಹಿಕವಾಗಿ ಶೋಷಿಸುವುದು - ಈ ಎಲ್ಲವುಗಳನ್ನು ತಮ್ಮ ದೃಢತ್ವ ಮತ್ತು ಭಿನ್ನಾಭಿಪ್ರಾಯಗಳಿಂದ ಮೀರಿರುವ ಬಗೆಯನ್ನು ಕಾಣಿಸಿದ್ದಾರೆ. ಈ ಸಂಕಲನದ ಶೀರ್ಷಿಕೆಯೂ ಆಗಿರುವ 'ಒಂದು ತಲೆ ಚವುರದ ಕಥೆ' ಎನ್ನುವ ಪ್ರಬಂಧ ದಲಿತ ಪಂಗಡ ತಮ್ಮ ತಲೆಗೂದಲನ್ನು ತಮ್ಮದೇ ರೀತಿ ನೀತಿಗಳಲ್ಲಿ ಚವುರ ಮಾಡಿಸಿಕೊಳ್ಳುವ ಬಗೆಯನ್ನು ಕಾಣಿಸುತ್ತದೆ.

* ಈ ಪ್ರಬಂಧ ಒಂದೊಳ್ಳೆ ಸಣ್ಣಕಥೆಯ ಹಾಗೆ ಓದಿಸಿಕೊಳ್ಳುತ್ತ ದಲಿತರ ಅಂತರಂಗದ ಬದುಕಿನ ಕಡೆಗೆ ಕರೆದೊಯ್ಯುತ್ತ ಕೇವಲ ಅವಕಾಶ ಮತ್ತು ಅದೃಷ್ಟದ ನೆರವಿನಿಂದ ಮೇಲ್ವರ್ಗದಲ್ಲಿ ಹುಟ್ಟಿರುವ ಕುಟುಂಬಗಳಿಗೆ ನಿಲುಕದ ಕೆಲವು ಅನನ್ಯ ಅನಿಸುವ ಅನುಭವಗಳನ್ನ ತೆರೆದಿಡುತ್ತಾ ಸಾಗುತ್ತದೆ. ಶಿವರಾಜು ಅವರ ಸಂಭಾವಿತ ವ್ಯಂಗ್ಯ ಮತ್ತು ಮಧುರ ಹಾಸ್ಯ ಎಂಥ ಕಹಿಯನ್ನೂ ತೊಡೆದುಹಾಕುವಷ್ಟು ಶಕ್ತವಾಗಿದೆ. ಇಲ್ಲದಿದ್ದರೆ ಅವರ ಕಥನಗಳಲ್ಲಿ ಸುಲಭವಾಗಿ ಹಾಸ್ಯವಿಲ್ಲದ ಜಿಗುಟುಭಾವ ನುಸುಳಿಬಿಡುತ್ತಿತ್ತು. ಶಿವರಾಜು ಅವರು ತಮ್ಮ ಕಥನಗಳ ನಿರೂಪಣೆಯನ್ನು ಎಷ್ಟು ಮೃದು ಮತ್ತು ನಯವಾದ ಭಾವದಲ್ಲಿ ಹೆಣೆದಿದ್ದಾರೆಂದರೆ ಅದು ಅವರಿಗೆ ಕಲೆಗಾರಿಕೆಯ ಮೇಲಿರುವ ಪ್ರಭುತ್ವವನ್ನು ಕಾಣಿಸುತ್ತದೆ. ಅದರಲ್ಲಿ ಅಭಿವ್ಯಕ್ತಿಯ ಭಾಷಾವೈವಿಧ್ಯತೆ ಇದ್ದು ತಮ್ಮ ಕತ್ತಲ ಭೂತಕಾಲವನ್ನು ಚಿತ್ರಿಸುವುದರ ಬದಲಿಗೆ ಸಂಯಮದ ಕಡೆಗೆ ದೃಷ್ಟಿ ಹರಿಸಿದ್ದಾರೆ. ಹಳ್ಳಿಯ ಬದುಕನ್ನು ಚಿತ್ರಿಸುವ ಕೆಲವು ಸುಂದರ ತುಣುಕುಗಳಿವೆ. ಉದಾಹರಣೆಗೆ ಉಪ್ಪಾರಿನ ಬಗ್ಗೆ ಲೇಖಕರು ಹರ್ಷ ವ್ಯಕ್ತಪಡಿಸುವುದು.

ಇದು ಇಲ್ಲದಿದ್ದರೆ ಊಟದ ಬಗೆಗಿನ ಸೌಂದರ್ಯ ಅಪೂರ್ಣ ಅನಿಸಿಬಿಡುತ್ತವೆ. ಮತ್ತು ಸಂತೋಷ ಮತ್ತು ತೃಪ್ತಭಾವವನ್ನು ತಂದುಕೊಡುವುದಿಲ್ಲ. ಹಳ್ಳಿಯ ಬದುಕಿನ ಕೆಲವು ಅನಿವಾರ್ಯತೆಗಳ ಬಗ್ಗೆ ಬರೆಯುವಾಗ ಶಿವರಾಜು ಅವರ ಹಾಸ್ಯ ಓತಪ್ರೋತವಾಗಿ ಹರಿಯುತ್ತದೆ. 'ಹಾವು ಹೊಡೆಯುವುದು ಅಂದರೆ', 'ಇಲಿ ಬೇಟೆ' ಮತ್ತು 'ನಾ ನಿಲ್ಲುವುದಿಲ್ಲ' ಪ್ರಬಂಧಗಳು ಖುಷಿ, ದುಃಖ ಹಾಗೂ ಸಮಚಿತ್ತತೆಗಳನ್ನು ಒಳಗುಮಾಡಿಕೊಂಡಿರುವ ಬಗೆ ಲೇಖಕರ ಭಾವನಾತ್ಮಕ ಪ್ರಬುದ್ಧತೆಯನ್ನು ಕಾಣಿಸುತ್ತದೆ. 'ಕುಂತರೆ ಸ್ವರ್ಗ, ನಿಂತರೆ ನರಕ' ಪ್ರಬಂಧದಲ್ಲಿನ ತುಣುಕುಗಳು ತುಂಬ ನಿರ್ಣಾಯಕ ಅನಿಸುತ್ತವೆ. ಇದರಲ್ಲಿ ಶಿವರಾಜು ಅವರು ನಗರ ಬದುಕಿನ ಬಗೆಗೆ, ಹಾಗೂ ತಮ್ಮ ಅಸ್ತಿತ್ವಕ್ಕಾಗಿ ನಗರ ಬದುಕನ್ನು ಅನಿವಾರ್ಯವಾಗಿ ಆರಿಸಿಕೊಳ್ಳುವವರ ಬಗ್ಗೆ ಬೆಳಕು ಚೆಲ್ಲಿದ್ದಾರೆ.

'ಗುರುವೇ ನಮಃ' ಪ್ರಬಂಧ ಶಿವರಾಜು ಅವರ ಜೀವನ ಪಯಣ ಹಾಗೂ ಅವರ ವಿಕಾಸವನ್ನು ಚಿತ್ರಿಸುತ್ತದೆ. ಜೊತೆಗೆ ಹೊಸ ಪ್ರಚಂಚಕ್ಕೆ ಕಣ್ಣೆರೆಯಲು ಬೇಕಾದ ಶಿಕ್ಷಣದ ಪಾತ್ರವನ್ನು ಕಾಣಿಸುತ್ತದೆ. ಜ್ಞಾನವಿಲ್ಲದಿದ್ದರೆ ಯಾವೊಬ್ಬ ಕೂಡ ಕರಣಾಜನಕ ಪರಿಸ್ಥಿತಿಯಿಂದ ಮೇಲೇಳುವುದು ಕಷ್ಟ. ಅಂಥವರ ಬದುಕು ನಿಂದನೆಗೆ ಗುರಿಯಾಗುತ್ತ ಕೊನೆಗಾಣದ ದುಃಖ ಮತ್ತು ಹತಾಶೆಯಲ್ಲೇ ಕಳೆದುಹೋಗುತ್ತದೆ ಎನ್ನುವುದನ್ನು ಪ್ರಬಂಧ ಚಿತ್ರಿಸುತ್ತದೆ. ಒಬ್ಬನಲ್ಲಿನ ನಂಬಿಕೆಯನ್ನು ಶಿಕ್ಷಣ ಉತ್ಪಾದಿಸುತ್ತದೆ. ಹಾಗೆನೋಡಿದರೆ ಈ ಸಂಕಲನದಲ್ಲಿರುವ ಪ್ರಬಂಧಗಳು ನಾವು ಕಾಣದ, ಮತ್ತು ಸಮಾಜದ ಉನ್ನತ ವರ್ಗಗಳು ಸಾಧಾರಣವಾಗಿ ಗುರುತಿಸದ ಬದುಕುಗಳನ್ನು ಆಳವಾಗಿ ದಾಖಲಿಸಿವೆ.

– ಪ್ರೊ. ಎನ್. ಮನು ಚಕ್ರವರ್ತಿ

 

MORE FEATURES

ಅಕ್ಷರಗಳ ಸಖ್ಯ ನಿತ್ಯ ಸಿಗುವಂತೆ ವಿಧಿ ಹರಸಲಿ

04-01-2025 ಬೆಂಗಳೂರು

“ಇಲ್ಲಿರುವ ಮಗ ಮಗಳು ಪ್ರಯಾಣ ಪ್ರಯಾಸ ಭಯ ಸಂಭ್ರಮ ಓದುವ ನಿಮ್ಮವೂ ಆಗಬಹುದು. ಬರೆಯದ ಕಥೆಗಾರರೇ ನಮ್ಮ ನಡುವೆ ಹೆಚ್...

ಮೌನಂ ನ ಸಮ್ಮತಿ ಲಕ್ಷಣಂ

04-01-2025 ಬೆಂಗಳೂರು

“ಸಂಕಲನದಲ್ಲಿ ಒಟ್ಟು ಹತ್ತೇ ಕಥೆಗಳು ಇದ್ದರೂ, ಅವು ನಮ್ಮ ನೆನಪುಗಳೊಡನೆ ಬೆರೆಸುವ ಭಾವನೆಗಳು ಜೀವಿಸುತ್ತಲೇ ಇರುತ್...

ಬೆಂಗಳೂರು ಸಹಾನುಭೂತಿಯ ಬಂಡವಾಳಶಾಹಿಯ ಶಕ್ತಿಗೆ ಜೀವಂತ ಸಾಕ್ಷಿಯಾಗಿದೆ

04-01-2025 ಬೆಂಗಳೂರು

“ಮಾನವನ ಮಹತ್ವಾಕಾಂಕ್ಷೆ ಮತ್ತು ಆವಿಷ್ಕಾರದ ಶಕ್ತಿಯಿಂದ ಸ್ಫೂರ್ತಿಗೊಂಡ ಯಾರಿಗಾದರೂ ಸ್ಪಂದಿಸುವ ಚಿತ್ತಾಕರ್ಷಕ ನಿ...