ಹಾದು ಬಂದ ದಾರಿಯ ಮೇಲೆ ಬೆಳಕು ಚೆಲ್ಲುತ್ತದೆ


"ಆ ಶಾಲೆಯ ಸಿಬ್ಬಂದಿಯೊಂದಿಗೆ ಅವಳು ತಾತ್ಕಾಲಿಕ ಸಂಬಂಧ ಉಂಟಾಗಿ, ಅದು ಊರಿನವರ ಮಾತುಕತೆಗೆ ಆಹಾರವಾಗುತ್ತದೆ. ಕಿಡಿಗೇಡಿಯು, ಸಮಯಸಾಧಕನೂ ಆದ ಅವನು, ಅವಳ ಜೊತೆ ಶಾಶ್ವತ ಸಂಬಂಧಕ್ಕೆ ಹಿಂಜರಿಯುತ್ತಾನೆ. ಇದರಿಂದಾಗಿ ಮತ್ತಷ್ಟು ಅವಳು ಎಲ್ಲರಿಗೂ ಸದರವಾಗುತ್ತಾಳೆ. ಹೀಗಾಗಿ ಅವಳು ಏಕಾಂಗಿಯಾಗಿಯೇ ಉಳಿಯಬೇಕಾಗಿ ಬರುತ್ತದೆ. ಮುಂದೆ ಶಾಲೆ ಬೆಳೆದು ಅವಳ ಶಿಕ್ಷಣ ವೃತ್ತಿಯಲ್ಲಿ ಪ್ರಗತಿಯಾದರೂ, ಅವಳ ವೈಯಕ್ತಿಕ ಜೀವನ ಯಥಾಸ್ಥಿತಿಯಲ್ಲಿಯೇ ಇರುತ್ತದೆ," ಎನ್ನುತ್ತಾರೆ ರಘುನಾಥ್ ಕೃಷ್ಣಾಮಾಚಾರ್. ಅವರು ಕೆ.ಸತ್ಯನಾರಾಯಣ ಅವರ ‘ಅಂಪೈರ್ ಮೇಡಂ’ ಕೃತಿ ಕುರಿತು ಬರೆದ ವಿಮರ್ಶೆ.

ತೊಂಬತ್ತರ ದಶಕದಲ್ಲಿ ಪ್ರಕಟವಾದ ಅವರ ಗೌರಿ ಕಾದಂಬರಿಯೊಂದಿಗೆ ಪ್ರಾರಂಭವಾದ, ಸ್ತ್ರೀ ಕೇಂದ್ರಿತ ಕಾದಂಬರಿಗಳ ಪಯಣದಲ್ಲಿ ,ಇದು ಇತ್ತೀಚೆಗೆ ಬರೆದ ಮೂರನೇ ಕಾದಂಬರಿ. ಗೌರಿ, ಮೊದಲ ಬಾರಿಗೆ ಕನ್ನಡ ಕಾದಂಬರಿಗಳಲ್ಲಿ, ಪಾತ್ರೆ ತೊಳೆಯುವ ಹೆಣ್ಣು ಕೇಂದ್ರಿತವಾದರೆ, ಅವರ ರಾಜಧಾನಿಯಲ್ಲಿ ಶ್ರೀಮತಿಯರು, ಅಂಗನವಾಡಿ ಕಾರ್ಯಕರ್ತೆಯರ ಸಮುದಾಯವನ್ನು, ಕೇಂದ್ರವಾಗಿಸಿಕೊಂಡ ಕಾದಂಬರಿ.

ಈ ಕಾದಂಬರಿಯ ಅಂಪೈರ್ ಮೇಡಂ ಒಂಟಿ ಹೆಣ್ಣಾದ ಶಿಶುವಿಹಾರದ ಶಿಕ್ಷಕಿ ವಿಮಲಾ ಬಾಯಿ ಕೇಂದ್ರಿತ ಕಾದಂಬರಿ. ಈ ಮೂಲಕ ಅವರು ಅಲಕ್ಷ್ಯಕ್ಕೆ ಒಳಗಾದ ಹೆಣ್ಣು ಮಕ್ಕಳನ್ನು, ತಮ್ಮ ಕಾದಂಬರಿಗಳ ನಾಯಕಿಯರನ್ನಾಗಿಸಿ, ಅವರ ಪರಕಾಯ ಪ್ರವೇಶದ ಮೂಲಕ, ಅವರ ಅಂತರಂಗದ ಅನಾವರಣ ಮಾಡುವಲ್ಲಿ ಸಫಲರಾಗಿದ್ದಾರೆ ಎನ್ನುವುದು, ಅವರನ್ನು ಒಬ್ಬ ಸ್ತ್ರೀವಾದಿ ಬರಹಗಾರರಿಗಿಂತ ಮಿಗಿಲಾಗಿಸಿದೆ. ಏಕೆಂದರೆ ನನಗೆ ತಿಳಿದಂತೆ ಹೆಚ್ಚಿನ ಕನ್ನಡ ಲೇಖಕಿಯರು, ಇಂತಹ ಪಾತ್ರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಬರೆದ ಉದಾಹರಣೆ ಇಲ್ಲ. ಆದ್ದರಿಂದ ಕನ್ನಡದ ಕಾದಂಬರಿಕಾರರಲ್ಲಿ ಇವರ ಸ್ಥಾನ ವಿಶಿಷ್ಟವಾಗಿದೆ.

ಪ್ರಸ್ತುತ ಅಂಪೈರ್ ಮೇಡಂ ಕಾದಂಬರಿ, ಒಂಟಿ ಹೆಣ್ಣಿನ ಆತ್ಮಕಥನದ ರೂಪದಲ್ಲಿದೆ. ಅದರಲ್ಲಿ ಅವಳ ಬದುಕು ವಿವಿಧ ಹಂತಗಳಲ್ಲಿ, ಹಾದು ಬಂದ ದಾರಿಯ ಮೇಲೆ ಬೆಳಕು ಚೆಲ್ಲುತ್ತದೆ.

ಇದನ್ನು ಐದು ಅಧ್ಯಾಯಗಳಲ್ಲಿ ಲೇಖಕರು ಸೆರೆಹಿಡಿದಿದ್ದಾರೆ. ಇದು ಏಕಕಾಲಕ್ಕೆ ಭೂತ ವರ್ತಮಾನಗಳಲ್ಲಿ ಚಲಿಸುತ್ತದೆ. ಮೊದಲ ಅಧ್ಯಾಯ ಅವರ ಮರಾಠಿ ಸಮುದಾಯಕ್ಕೆ ಸೇರಿದ, ಮೈಸೂರು ಅರಮನೆಗೆ ಹತ್ತಿರವಾದ ಕುಟುಂಬಕ್ಕೆ ಸೇರಿದ, ಹೆಣ್ಣಿನ ಚಿತ್ರವಿದೆ. ಅವಳ ಅಣ್ಣಂದಿರು ಅಕ್ಕಂದಿರಿಗೆ ಮದುವೆಯಾದ ಮೇಲೆ, ಇವಳಿಗೆ ಮದುವೆ ಮಾಡಲು ಯಾರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡದ್ದರಿಂದ, ಇವಳು ಏಕಾಂಗಿಯಾಗಿ ಉಳಿಯಬೇಕಾಗಿ ಬಂದು, ತಂದೆ ತಾಯಿ ಇಬ್ಬರೂ ತೀರಿಕೊಂಡ ಮೇಲೆ ತಬ್ಬಲಿತನವನ್ನು, ಅವರ ಮನೆಯಲ್ಲಿ ಅನುಭವಿಸಬೇಕಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳಲು, ಅವಳು ಕಲಿತಿದ್ದ ವಿದ್ಯೆ ಅವಳ ನೆರವಿಗೆ ಬರುತ್ತದೆ. ದೂರದ ಹಳ್ಳಿಯಲ್ಲಿ ಒಂದು ಶಿಶುವಿಹಾರಕ್ಕೆ ಶಿಕ್ಷಕರು ಬೇಕು, ಎಂಬ ಪತ್ರಿಕಾ ಪ್ರಕಟಣೆ ಅವಳ ಗಮನ ಸೆಳೆದು, ಸ್ವಾವಲಂಬನೆಯ ಹಾದಿಯ ಹುಡುಕಿಕೊಂಡು ಹೋಗಿ, ಅದನ್ನು ಆ ಊರಿನ ಪ್ರಮುಖರ ಸಹಾಯದಿಂದ ಪಡೆದುಕೊಳ್ಳುವಲ್ಲಿ ಸಫಲಲಾಗುತ್ತಾಳೆ. ಅವರು ಕೊಟ್ಟ ಸಂಬಳದ ಕೆಲಸಕ್ಕೆ ತನ್ನನ್ನು ಪ್ರಾಮಾಣಿಕವಾಗಿ ತೆತ್ತು ಕೊಳ್ಳುತ್ತಾಳೆ. ಶಾಲಾ ಸಮಿತಿಯವರಿಂದ ಮೊದಲುಗೊಂಡು ಅಲ್ಲಿನ ಸಿಬ್ಬಂದಿಯವರೆಗೆ, ಇವಳನ್ನು ಕಂಡರೆ ಒಂದು ಬಗೆಯ ಸದರ. ಅದಕ್ಕೆ ಕಾರಣ ಅವಳ ಒಂಟಿತನ. ಆ ಶಾಲೆಯ ಸಿಬ್ಬಂದಿಯೊಂದಿಗೆ ಅವಳು ತಾತ್ಕಾಲಿಕ ಸಂಬಂಧ ಉಂಟಾಗಿ, ಅದು ಊರಿನವರ ಮಾತುಕತೆಗೆ ಆಹಾರವಾಗುತ್ತದೆ. ಕಿಡಿಗೇಡಿಯು, ಸಮಯಸಾಧಕನೂ ಆದ ಅವನು, ಅವಳ ಜೊತೆ ಶಾಶ್ವತ ಸಂಬಂಧಕ್ಕೆ ಹಿಂಜರಿಯುತ್ತಾನೆ. ಇದರಿಂದಾಗಿ ಮತ್ತಷ್ಟು ಅವಳು ಎಲ್ಲರಿಗೂ ಸದರವಾಗುತ್ತಾಳೆ. ಹೀಗಾಗಿ ಅವಳು ಏಕಾಂಗಿಯಾಗಿಯೇ ಉಳಿಯಬೇಕಾಗಿ ಬರುತ್ತದೆ. ಮುಂದೆ ಶಾಲೆ ಬೆಳೆದು ಅವಳ ಶಿಕ್ಷಣ ವೃತ್ತಿಯಲ್ಲಿ ಪ್ರಗತಿಯಾದರೂ, ಅವಳ ವೈಯಕ್ತಿಕ ಜೀವನ ಯಥಾಸ್ಥಿತಿಯಲ್ಲಿಯೇ ಇರುತ್ತದೆ.

ಅವಳ ಮನೆಯಿಂದ ಮೊದಲುಗೊಂಡು, ಅವರ ಸಮುದಾಯ ಮತ್ತು ಸಮಾಜದಲ್ಲಿ ಅವಳ ಸ್ಥಾನ ಪಲ್ಲಟವಾಗುವುದಿಲ್ಲ. ಈ ಮರುಭೂಮಿಯಂತಹ ಅವಳ ಬದುಕಿನಲ್ಲಿ ಚಿಲುಮೆಗಳು ಎಂದರೆ ಇಬ್ಬರು. ಅವರು ಅವಳು ಶಿಶುವಿಹಾರಕ್ಕೆ ತನ್ನನ್ನು ಕೊಟ್ಟುಕೊಂಡ ಪರಿಯನ್ನು ಅವಳ ನಿವೃತ್ತಳಾದ ಮೇಲೆ ಮೆಚ್ಚಿದ, ಶ್ಲಾಘಿಸಿದ ಅದೇ ಊರಿನ ಹುಡುಗ ಶ್ರೀನಿವಾಸ.( ಗೌರಿ ಕಾದಂಬರಿಯಲ್ಲಿ ಮನೆಕೆಲಸದವರ ಸಂಘಟಕನಾಗಿ ಅವಳಲ್ಲಿ ಎಚ್ಚರ ಮೂಡಿಸುವವನ ಹೆಸರು ಕೂಡ ಶ್ರೀನಿವಾಸ )ಇನ್ನೊಬ್ಬರು ಸುಂದರಮ್ಮ ಮತ್ತು ಅವಳ ಮಗಳು ರತ್ನ.

ಆಗ ಅವಳಿಗೆ ತನ್ನ ಬದುಕಿನ ಸಾರ್ಥಕತೆಯ ಅನುಭವವಾಗುತ್ತದೆ. ಈ ಪಾತ್ರವನ್ನು ತಮ್ಮ ಕಾದಂಬರಿಯ ನಾಯಕಿಯನ್ನಾಗಿ ಮಾಡಿಕೊಂಡು, ಒಂಟಿ ಹೆಣ್ಣಿನ ಕುರಿತು, ಸಮಾಜದ ವಿಭಿನ್ನ ಸ್ತರಗಳಲ್ಲಿನ ಪೂರ್ವಾಗ್ರಹಗಳನ್ನು , ಮತ್ತು ಏಕಕಾಲಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯ ಭ್ರಷ್ಟಾಚಾರವನ್ನು, ಅನಾವರಣ ಮಾಡಿದ ಶ್ರೇಯಸ್ಸು, ಲೇಖಕರಿಗೆ ಸಲ್ಲಬೇಕು.

- ರಘುನಾಥ್ ಕೃಷ್ಣಾಮಾಚಾರ್

MORE FEATURES

ಅಕ್ಷರಗಳ ಸಖ್ಯ ನಿತ್ಯ ಸಿಗುವಂತೆ ವಿಧಿ ಹರಸಲಿ

04-01-2025 ಬೆಂಗಳೂರು

“ಇಲ್ಲಿರುವ ಮಗ ಮಗಳು ಪ್ರಯಾಣ ಪ್ರಯಾಸ ಭಯ ಸಂಭ್ರಮ ಓದುವ ನಿಮ್ಮವೂ ಆಗಬಹುದು. ಬರೆಯದ ಕಥೆಗಾರರೇ ನಮ್ಮ ನಡುವೆ ಹೆಚ್...

ಮೌನಂ ನ ಸಮ್ಮತಿ ಲಕ್ಷಣಂ

04-01-2025 ಬೆಂಗಳೂರು

“ಸಂಕಲನದಲ್ಲಿ ಒಟ್ಟು ಹತ್ತೇ ಕಥೆಗಳು ಇದ್ದರೂ, ಅವು ನಮ್ಮ ನೆನಪುಗಳೊಡನೆ ಬೆರೆಸುವ ಭಾವನೆಗಳು ಜೀವಿಸುತ್ತಲೇ ಇರುತ್...

ಬೆಂಗಳೂರು ಸಹಾನುಭೂತಿಯ ಬಂಡವಾಳಶಾಹಿಯ ಶಕ್ತಿಗೆ ಜೀವಂತ ಸಾಕ್ಷಿಯಾಗಿದೆ

04-01-2025 ಬೆಂಗಳೂರು

“ಮಾನವನ ಮಹತ್ವಾಕಾಂಕ್ಷೆ ಮತ್ತು ಆವಿಷ್ಕಾರದ ಶಕ್ತಿಯಿಂದ ಸ್ಫೂರ್ತಿಗೊಂಡ ಯಾರಿಗಾದರೂ ಸ್ಪಂದಿಸುವ ಚಿತ್ತಾಕರ್ಷಕ ನಿ...