ವ್ಯಕ್ತಿ ಪೂಜೆ, ಸ್ಥಾನ ಪೂಜೆ

Date: 24-07-2022

Location: ಬೆಂಗಳೂರು


“ಯಾವುದೆ ಕಾರ್ಯಕ್ಕೂ ಚಲನೆ ಇರುತ್ತದೆ. ಯಾವುದೆ ಒಂದು ಕಾರ್ಯ ಆ ಕ್ಷಣಕ್ಕೆ ಅಳಿದಂತೆ ಕಂಡರೂ ಅದರ ಪರಿಣಾಮಕ್ಕೆ ಅಳಿವು ಇರುವುದಿಲ್ಲ. ಕಾರ್ಯದ ರೂಪಾಂತರಗಳಿಗೂ ಅಳಿವು ಇರುವುದಿಲ್ಲ. ಆದರೆ ಕರ್ತೃವಿಗೆ ಕಾಲ ಮೀರಿದ ಚಲನೆ ಸಾಧ್ಯವಿಲ್ಲ” ಎನ್ನುತ್ತಾರೆ ಲೇಖಕ ರಾಮಲಿಂಗಪ್ಪ ಟಿ ಬೇಗೂರು. ಅವರು ತಮ್ಮ ನೀರು ನೆರಳು ಅಂಕಣದಲ್ಲಿ ವ್ಯಕ್ತಿ ಪೂಜೆ ಕೂಡದು ಎಂದು ಬರೆದಿದ್ದಾರೆ.

1.

ಮೊನ್ನೆ ಟಿವಿ ನೋಡುತ್ತಿದ್ದಾಗ ಕಕಕಕಕ ಎಂಬ ಕಾರ್ಯಕ್ರಮ ಬರುತ್ತಿತ್ತು. ಅಲ್ಲಿ ಯಾವುದೋ ಒಂದು ಹುಡುಗಿ ಅಯ್ಯೋ ನಾನು ನೆನ್ನೆ ಬೀದಿಯಲ್ಲಿ ಹೋಗುತ್ತಿದ್ದೆ ಜನರೆಲ್ಲ ಏಯ್ ನೀನು ಕಕಕಕಕ ಹುಡುಗಿ ಅಲ್ವಾ ಎಂದು ಗುರ್ತಿಸುತ್ತಿದ್ದರು ಎಂದು ಹೆಮ್ಮೆಯಿಂದ ಹೇಳುತ್ತಿದ್ದಳು! ನಾನು ಈ ಕಾರ್ಯಕ್ರಮಕ್ಕೆ ಸೆಲೆಕ್ಟ್ ಆದದ್ದೆ ನನ್ನ ಜೀವನದ ಭಾಗ್ಯ, ನಾನು ಟಿವಿಯಲ್ಲಿ ಬರ್ತೀನಿ ಅನ್ನೋದೆ ನಮ್ಮವರಿಗೆಲ್ಲ ಒಂದು ದೊಡ್ಡ ಸಾಧನೆ ಅನ್ನಿಸಿದೆ, ನನಗಂತೂ ಖುಷಿ ತಡೆಯೋಕೇ ಆಗಲ್ಲ, ಈ ಕಕಕಕಕ ಟಿವಿಗೆ ನಾನು ಜೀವಮಾನ ಇಡೀ ಋಣಿಯಾಗಿ ಇರ್ತೀನಿ ಬೆಬೆಬೆಬೆ ಎಂದೆಲ್ಲ ಹೇಳುತ್ತಿದ್ದಳು. ಏಕೆ ಈ ಹೆಮ್ಮೆ? ಏಕೆ ಈ ಸಡಗರ?

ಯಾರಾದರೂ ನಮ್ಮನ್ನು ಗುರ್ತಿಸುವುದರಿಂದ ನಮಗೆ ಏನು ಪ್ರಯೋಜನ. ಜನರಿಗೆ ಸುಮ್ಮನೆ ನಾವು ಗುರುತಾಗುವುದರಿಂದ ಯಾರಿಗೆ ಏನು ಪ್ರಯೋಜನ? ಅದರಿಂದ ಸಮಾಜಕ್ಕಾಗಲೀ, ಸಮುದಾಯಕ್ಕಾಗಲೀ ಏನಾದರೂ ಉಪಯೋಗ ಇದೆಯೆ? ಪ್ರಖ್ಯಾತಿ ಪಡೆಯುವುದೆ ನಮ್ಮ ಗುರಿಯೊ? ಜನ ನಮ್ಮ ಕೆಲಸದಿಂದ ನಮ್ಮನ್ನು ಗುರುತಿಸಬೇಕೊ?

ಮೊನ್ನೆ ಯಾವುದೋ ಕಾರ್ಯಕ್ರಮದಲ್ಲಿ ಕವಿತೆ ಓದುವಾಗ ಗೆಳೆಯರೊಬ್ಬರು ಏನ್ ಸಖತ್ ಮಿಂಚಿಬಿಟ್ರಲ್ಲ ಸಾರ್. ನಿಮ್ಮನ್ನು ಜನ ಈಗ ಗುರ್ತಿಸ್ತಾರೆ ಸಾರ್ ಎಂದರು. ಅಂದರೇನು? ಇದರಿಂದ ಜನರಿಗೇನು ಪ್ರಯೋಜನ? ನನ್ನ ಕವಿತೆಯಿಂದ ಜನಕ್ಕೆ ಏನಾದರೂ ಮನರಂಜನೆಯೋ, ಆನಂದವೊ ಆಗುವುದಾದರೆ, ಜೀವನವನ್ನು ನೋಡುವ ಹೊಸ ದೃಷ್ಟಿ ಒಂದು ಲಭಿಸುವುದಾದರೆ ಅಷ್ಟರಮಟ್ಟಿಗೆ ನನ್ನ ಕವಿತೆಯಿಂದ ಪ್ರಯೋಜನ ಇದೆ. ನನ್ನ ಬಗ್ಗೆ ಸುಮ್ಮನೆ ಜನ ತಿಳಿಯುವುದರಿಂದ ಜನಕ್ಕೆ ಏನು ಪ್ರಯೋಜನ? ಕವಿತೆಯಿಂದ ಜನಕ್ಕೆ ಏನಾದರೂ ಸ್ವಲ್ಪ ವಿವೇಕ ಬಂದರೆ ಆಗ ಕವಿತೆಯಿಂದ ಜನಕ್ಕೆ ಉಪಯೋಗವೇ ವಿನಃ ನನ್ನಿಂದಲ್ಲ. ಹಾಗಾಗಿ ನಾವು ಮಾಡುವ ಕೆಲಸ, ನಮ್ಮ ಕೃತಿ ಮುಖ್ಯವೇ ವಿನಾ ನಾವಲ್ಲ. ವ್ಯಕ್ತಿಯನ್ನು ಕಟ್ಟಿಕೊಂಡು ಸಮಾಜಕ್ಕೆ ಏನಾಗಬೇಕಿದೆ? ಸಮಾಜಕ್ಕೆ ಬೇಕಾದುದನ್ನು ಪಡೆಯಲು ಮತ್ತು ಆ ಮೂಲಕ ಸಮಾಜಕ್ಕೆ ಮುಂದೆ ಸಾಗಲು ಕಾರ್ಯಗಳು ಮತ್ತು ಕೃತಿಗಳು ಬೇಕಾಗುತ್ತವೆ. ಅವನ್ನು ಸೃಷ್ಟಿಸಲು ವ್ಯಕ್ತಿ ಒಂದು ಸಾಧನ ಮಾತ್ರ.

ಯಾವುದೆ ಸೃಷ್ಟಿ ವಯಕ್ತಿಕ ಸೃಷ್ಟಿ ಅಲ್ಲ. ಎಲ್ಲವೂ ಸಾಮುದಾಯಿಕ ಅಥವಾ ಸಾಂಸ್ಕೃತಿಕ ಉತ್ಪನ್ನಗಳೇ; ವ್ಯಕ್ತಿ ಸಮಾಜವನ್ನು ಬಿಟ್ಟು ಹೊರತಾಗಿ ಸ್ವಯಂ ಆಗಿ ಬೆಳೆಯಲು ಸಾಧ್ಯವೆ? ಬದುಕಲು ಸಾಧ್ಯವೆ? ಏನನ್ನಾದರೂ ಸೃಷ್ಟಿಸಲು ಸಾಧ್ಯವೆ? ವ್ಯಕ್ತಿಯಾಗಿ ಯಾರೊಬ್ಬಾಕೆಯ ವ್ಯಕ್ತಿತ್ವ ಸಮಾಜದಿಂದ ರೂಪಗೊಂಡದ್ದೆ ಅಲ್ಲವೆ? ಆದರೂ ಕೆಲವರು ಎಲ್ಲ ನಾನೆ ಮಾಡಿದೆ ಎನ್ನುತ್ತಾರೆ! ಯಾವ ಕ್ಷಣವೂ ಸ್ವಯಂಭೂ ಅಲ್ಲ; ಹಾಗೆಯೆ ಯಾವ ಕಾರ್ಯವೂ ಸ್ವಯಂಭೂ ಅಲ್ಲ. ಯಾವುದೂ ವ್ಯಕ್ತಿ ಕೃತ ಅಲ್ಲ. ಅದರ ಹಿಂದೆ ಅನಂತ ಭೂತವೂ ಅನಂತ ಭವಿಷ್ಯತ್ತೂ, ಸುತ್ತಣ ಪ್ರದೇಶವೂ ಅಡಗಿರುತ್ತದೆ.

ಆದರೆ ಈ ಮೀಡಿಯಾಗಳಿಂದ ನಮಗೆ ಏನಾಗುತ್ತಿದೆ? ಮೀಡಿಯಾದಲ್ಲಿ ಹೇಗಾದರೂ ಸರಿ ಕಾಣಿಸಿಕೊಳ್ಳಬೇಕು; ಎಲ್ಲರಿಗೂ ನಾನು ಪರಿಚಯ ಆಗಬೇಕು, ಪ್ರಖ್ಯಾತ ಆಗಬೇಕು? ಜನರೆದುರು ನಾನು ಹೀರೋ ಆಗಬೇಕು, ಹೀರೋಯಿನ್ ಆಗಬೇಕು ಎಂಬ ರೋಗ ಬಡಕೊಳ್ಳುತ್ತಿದೆ. ಸಮಾಜದ ಏಳ್ಗೆಗೆ ನಾನು ಏನು ಮಾಡಬೇಕು, ನೀಡಬೇಕು ಎಂಬುದೆಲ್ಲ ಅಮುಖ್ಯವಾಗಿ ನಾನು ಪ್ರಖ್ಯಾತ ಆಗಬೇಕು ಎಂಬುದೇ ಮುಖ್ಯ ಆಗಿಬಿಟ್ಟಿದೆ. ಸಿನಿಮಾಗಳಂತೂ ಸಮುದಾಯವನ್ನು ಬಿಂಬಿಸುವ ಬದಲು ಹೀರೋ ವರ್ಶಿಪ್ಪನ್ನೆ ಬಿಂಬಿಸಿ ಬಿಂಬಿಸಿ ನಾವೆಲ್ಲರೂ ವ್ಯಕ್ತಿ ಪ್ರಚಾರ ಗಿಟ್ಟಿಸುವುದೆ ಮುಖ್ಯ ಎಂಬಂತೆ ಭಾವಿಸುತ್ತಿದ್ದೇವೆ. ಕಾರ್ಯಕ್ಕಿಂತ, ಕೃತಿಗಿಂತ ನಮ್ಮ ಎಲ್ಲ ಮಾದ್ಯಮಗಳಲ್ಲಿ ವ್ಯಕ್ತಿಯೆ ಕೇಂದ್ರ ಆಗುತ್ತಿದ್ದಾನೆ/ಳೆ. ಒಬ್ಬ ರಾಜ್‍ಕುಮಾರ್, ಒಬ್ಬ ವಿಷ್ಣುವರ್ಧನ್, ಒಬ್ಬ ಭಾರತಿ, ಒಬ್ಬ ಲೀಲಾವತಿ, ಇವರೆಲ್ಲ ಒಬ್ಬೊಬ್ಬರೇ ಸಿನಿಮಾ ತಯಾರಿಸಿದರೇ? ಅಲ್ಲೆಲ್ಲ ಒಂದೊಂದು ಟೀಮ್ ಕೆಲಸ ಮಾಡಿಲ್ಲವೆ? ಆದರೆ ನಮ್ಮಲ್ಲಿ ಸಮುದಾಯದ ಶ್ರಮಕ್ಕೆ ಬದಲಾಗಿ ವ್ಯಕ್ತಿಗೆ ಮನ್ನಣೆ ಸಿಗುತ್ತಿದೆ.

ರಾಜ್‍ಕುಮಾರ್ ಸಿನಿಮಾ ಸಮಾಜಕ್ಕೆ ಏನು ನೀಡಿದೆ ಎಂಬುದು ಮುಖ್ಯ ಆಗಬೇಕೋ, ರಾಜ್‍ಕುಮಾರ್ ಎಂಬ ವ್ಯಕ್ತಿಯ ಪೂಜೆ ಮುಖ್ಯ ಆಗಬೇಕೋ? ಕೃತಿಗೆ ಗೌರವ ಕೊಡುವುದನ್ನೆ ವ್ಯಕ್ತಿಗೆ ಗೌರವ ಕೊಡುವುದು ಎಂದು ತಪ್ಪಾಗಿ ನಾವು ಭಾವಿಸಿದ್ದೇವೆ. ಹಾಗಾಗಿಯೆ ನಮ್ಮ ಬಹುಪಾಲು ಚರ್ಚೆಗಳಲ್ಲಿ ಸಿನಿಮಾ ಆಗಲೀ ಸಾಹಿತ್ಯ ಆಗಲೀ ಮುಂಚೂಣಿಗೆ ಬರದೆ ವ್ಯಕ್ತಿಯೆ ಮುಂಚೂಣಿಗೆ ಬರುತ್ತಾನೆ/ಳೆ. ಅವರು ಮಾಡಿದರು, ಇವರು ಮಾಡಿದರು ಎನ್ನುವುದೇ ಮುನ್ನೆಲೆಗೆ ಬರುತ್ತದೆ. ಕೃತಿ, ಕಾರ್ಯ ಆನಂತರ ಬರುತ್ತದೆ! ನಮಗೆ ಆದಿಪುರಾಣಕ್ಕಿಂತ ಪಂಪನೆ ಮೊದಲು ನೆನಪಿಗೆ ಬರುವುದು!

ಸಾಹಿತ್ಯದ ಚರ್ಚೆ ನಡೆಯುವಾಗಲೂ ಯಾವ ಬಗೆಯ ಸಾಹಿತ್ಯ ಎಂಬುದಕ್ಕಿಂತ ಯಾರು ಬರೆದ ಸಾಹಿತ್ಯ ಎಂಬುದೇ ನಮ್ಮಲ್ಲಿ ಹೆಚ್ಚು ಗಣನೆಗೆ ಬರುತ್ತಿದೆ. ಏನನ್ನು ಹೇಳಲಾಗುತ್ತಿದೆ ಎಂಬುದಕ್ಕಿಂತ ಯಾರು ಹೇಳುತ್ತಿದ್ದಾರೆ ಎಂಬುದರ ಮೇಲೆ ಹೇಳಿದ ವಿಚಾರದ ತೂಕ ಗಣನೆಗೆ ಬರುತ್ತಿದೆ. ನಮ್ಮಲ್ಲಿ ಸ್ಥಾನಮಾನ, ಸಂಪತ್ತು, ಅಂತಸ್ತು, ಜಾತಿ, ಧರ್ಮಗಳು ಕೆಲವೊಮ್ಮೆ ಕೃತಿಗಿಂತ (ಕಾರ್ಯಕ್ಕಿಂತ) ಹೆಚ್ಚು ಗಣನೆಗೆ ಒಳಗಾಗುತ್ತಿವೆ. ಯಾವುದಕ್ಕೆ ನಾವು ಬೆಲೆ ಕೊಡಬೇಕು ಎನ್ನುವುದು ನಮ್ಮವರು ಎಂಬ ಭಾವದಿಂದ ನಿರ್ಧಾರ ಆಗುತ್ತದೆ! ಜಾತಿ. ಧರ್ಮ, ಪ್ರದೇಶ, ಭಾಷೆ ಇತ್ಯಾದಿಗಳಿಂದ ಈ ನಮ್ಮವರು ಮತ್ತು ಅನ್ಯರು ಎಂಬುದು ನಿರ್ಧಾರ ಆಗುತ್ತಿರುತ್ತದೆ. ವ್ಯಕ್ತಿಯ ಅನುಭವ ಮತ್ತು ಸಮುದಾಯದ ಅನುಭವ ಇವುಗಳಲ್ಲಿ ಸಮುದಾಯದ ಅನುಭವ ವ್ಯಕ್ತಿಯ ಅನಭವವನ್ನು ರೂಪಿಸುತ್ತಿರುತ್ತದೆ. ವಯಕ್ತಿಕ ಎನ್ನುವುದು ಇರುವುದಿಲ್ಲ. ಇರುವುದೆಲ್ಲವೂ ಸಾಮುದಾಯಿಕ ಮಾತ್ರ.

ಯಾವುದೆ ಕಾರ್ಯಕ್ಕೂ ಚಲನೆ ಇರುತ್ತದೆ. ಯಾವುದೆ ಒಂದು ಕಾರ್ಯ ಆ ಕ್ಷಣಕ್ಕೆ ಅಳಿದಂತೆ ಕಂಡರೂ ಅದರ ಪರಿಣಾಮಕ್ಕೆ ಅಳಿವು ಇರುವುದಿಲ್ಲ. ಕಾರ್ಯದ ರೂಪಾಂತರಗಳಿಗೂ ಅಳಿವು ಇರುವುದಿಲ್ಲ. ಆದರೆ ಕರ್ತೃವಿಗೆ ಕಾಲ ಮೀರಿದ ಚಲನೆ ಸಾಧ್ಯವಿಲ್ಲ. ಕಾಲ ಸ್ಥಳಗಳಿಂದ ಕಾರ್ಯ ರೂಪಗೊಳ್ಳುತ್ತದೆ. ಕಾಲಾತೀತ ಮತ್ತು ಸ್ಥಳಾತೀತ ಆಗಿಯೂ ಕಾರ್ಯ ರೂಪಾಂತರ ಆಗಬಹುದು. ಕಾರ್ಯದಿಂದಲೆ ಕರ್ತೃ, ಕರ್ತೃವಿನಿಂದ ಕಾರ್ಯವಲ್ಲ.

2.

ಅಧಿಕಾರದ ಸ್ಥಾನದಲ್ಲಿ ಇರುವವರು ಹೇಳಿದ್ದೆಲ್ಲ ವೇದ; ಅವರು ಕೆಮ್ಮಿದರೂ ಹೂಸಿದರೂ ಅದ್ಭುತ ಎಂಬ ಓಲೈಕೆ ಮನೋಧರ್ಮ ನಮ್ಮಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಭಾರತದ ಪ್ರಧಾನಿ, ಕರ್ನಾಟಕದ ಮುಖ್ಯಮಂತ್ರಿ ಇಂತಹ ಜವಾಬ್ದಾರಿಯ ಸ್ಥಾನಗಳು ಕೆಲವೊಮ್ಮೆ ವ್ಯಕ್ತಿಯ ಹೆಸರಿನಲ್ಲೆ ಮುಂಚೂಣಿಗೆ ಬರುತ್ತ ಇರುತ್ತವೆ. ಒಂದು ರಾಜ್ಯದ, ಒಂದು ದೇಶದ ಜವಾಬ್ದಾರಿಯುತ ಸ್ಥಾನ ವ್ಯಕ್ತಿಯ ಆರಾಧನೆಗೆ, ಪೂಜೆಗೆ ಕಾರಣ ಆಗುವುದು ಸರಿಯಲ್ಲ. ವರ್ತನೆಗಳ ಅನುಮೋದನೆ ಅಥವಾ ನಿರಾಕರಣೆಗಳು ಆಯಾ ವರ್ತನೆಯನ್ನು ತೋರಿದ ವ್ಯಕ್ತಿಯ ಸ್ಥಾನದಿಂದ ನಿರ್ಣಯ ಆಗುವುದು ಕೂಡ ಆರೋಗ್ಯಕರ ಸ್ಥಿತಿ ಅಲ್ಲ. ಈಗೀಗ ಇದೇ ಆಗುತ್ತಿದೆ.

ಅಂಬೇಡ್ಕರ್, ಗಾಂಧಿ, ಬುದ್ಧ, ಬಸವ, ಟಿಪ್ಪು, ಕುವೆಂಪು ಇಂತವರೆಲ್ಲ ಇಂದು ನಮಗೆ ಅವರು ಮಾಡಿರುವ ಕಾರ್ಯ ಮತ್ತು ಬಾಳಿರುವ ದಾರಿಗಳಿಂದ ಕಾಡುತ್ತಿಲ್ಲ. ಬದಲು ಅವರು ತಮ್ಮ ಜಾತಿಯಿಂದ, ಧರ್ಮದಿಂದ ಹೆಚ್ಚು ಕಾಡುತ್ತಿದ್ದಾರೆ! ಅದರಿಂದಾಗಿಯೆ ನಮ್ಮಲ್ಲಿ ಅವರೆಲ್ಲ ದೇವರ ಪಟಗಳಾಗಿ ಅವರ ಕಾರ್ಯ, ತತ್ವಗಳೆಲ್ಲ ಮೂಲೆ ಸೇರುತ್ತಿವೆ. ಅವರ ಕಾರ್ಯಗಳನ್ನು ನಿರಂತರ ಮತ್ತೆ ಮತ್ತೆ ಕೊಲ್ಲುವ ಕೆಲಸ ನಡೆಯುತ್ತಲೆ ಇದೆ! ವ್ಯಕ್ತಿಗಳನ್ನು ಪೂಜಿಸುವ, ಪುರಾಣೀಕರಣ ಮಾಡುವ, ಸ್ತುತಿ ಮಾಡುವ ಕೆಲಸ ನಡೆಯುತ್ತಲೆ ಇದೆ! ನಮ್ಮ ಗೆಳೆಯರೊಬ್ಬರು ಒಂದು ಕಾರ್ಯಕ್ರಮದ ಆಹ್ವಾನ ಪತ್ರ ಮಾಡಿಸುವಾಗ ‘ಏಯ್ ಕುವೆಂಪು ಕಾರ್ಯಕ್ರಮ ಕಣೋ, ಯಾರೂ ಏನೂ ಮಾಡಬೇಕಾಗಿಲ್ಲ; ಅವನೆ ಎಲ್ಲ ಮಾಡಿಸ್ಕತಾನೆ ಸುಮ್ನಿರು’ ಅಂತಿದ್ದರು! ಯಾಕೆ ಹೀಗೆ? ವ್ಯಕ್ತಿ ದೇವರಾಗಬೇಕೆ?

ಒಂದು ಬಲಿಷ್ಠ ಜಾತಿ, ಭಾಷೆ, ಪ್ರದೇಶ ಹೀಗೆ ವ್ಯಕ್ತಿಯನ್ನು ಅವಕ್ಕೆ ಅಂಟಿಸಿದಾಗ ಆ ವ್ಯಕ್ತಿಯ ಕಾರ್ಯಕ್ಕಿಂತ ಅವರ ಹೆಸರಿನಲ್ಲಿ ನಾವು ನಡೆಸುವ ಬ್ಯುಸಿನೆಸ್ ನಿರಾತಂಕವಾಗಿ ನಡೆಯುತ್ತದೆ. ನಮಗೆ ತತ್ವ ಮುಖ್ಯವಲ್ಲ; ವ್ಯಕ್ತಿ ಮುಖ್ಯ. ನಮ್ಮಲ್ಲಿಂದು ಸಾಯಿಬಾಬಾ ಅಂತಹ ವ್ಯಕ್ತಿ ಯಾಕೆ ದೊಡ್ಡ ದೇವರಾಗಿದ್ದಾನೆ ಎಂದರೆ ಆತನ ದೇಗುಲಗಳಲ್ಲಿ ಬೇಜಾನ್ ಬ್ಯುಸಿನೆಸ್ ನಡೆಯುತ್ತದೆ. ಅದಕ್ಕೆ. ನಮ್ಮ ಸಮಾಜದಲ್ಲಿ ಇಂದು ಯಾವುದೆ ಸಂಗತಿಯ ಚಲಾವಣೆ ಅಥವಾ ಇತಿಹಾಸದ ಕಟ್ಟಾಣಿಕೆ ಉಪಯುಕ್ತ ಕಾರ್ಯದ ಬಳಕೆಗಾಗಿ ಅಗುತ್ತಿಲ್ಲ. ನಮಗೆ ವ್ಯಕ್ತಿಪೂಜೆಯಿಂದ ಆಗುವ ಪ್ರಯೋಜನಗಳಿಗಾಗಿ ಆಗುತ್ತಿದೆ! ಇಂದು ನಾವು ಪಡೆಯುವ ಲಾಭಕ್ಕೆ ಬಾಬಾ ದೇವರಾಗುತ್ತಾನೆ! ಒಬ್ಬರು ದೇವರಾದಾಗ ಅವರ ಹೆಸರಿನಲ್ಲಿ ನಡೆಯುವ ಯಾವುದೆ ಬ್ಯುಸಿನೆಸ್ ಪವಿತ್ರ ಆಗಿಬಿಡುತ್ತದೆ. ನಮ್ಮಲ್ಲಿ ದೇಗುಲ ಸಂಸ್ಕೃತಿ ಸೀಗೆಮೆಳೆಯಂತೆ ಬೆಳೆಯಲು ಅದರ ಸುತ್ತ ಪವಿತ್ರವಾಗಿ ಅಂಟಿಕೊಂಡಿರುವ ಲಾಭಗಳೆ ಕಾರಣ.

ಕೆಲವು ಸಂಬಂಧಗಳು ಏಣಿಶ್ರೇಣಿಯನ್ನು ಒಪ್ಪಿದ ಸಂಬಂಧಗಳಾಗಿ ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿ ಇವೆ. ಅಣ್ಣ, ಅಪ್ಪ, ಅಕ್ಕ, ತಾತ, ಅಜ್ಜಿ ಇಂತಹ ಸಂಬಂಧಗಳಲ್ಲಿ ದೊಡ್ಡವರು ಏನೇ ಹೇಳಿದರೂ ಚಿಕ್ಕವರು ಗೋಣು ಹಾಕಬೇಕು; ದೋಷ ಕಂಡರೂ ಪ್ರಶ್ನಿಸಬಾರದು ಎಂಬ ಆಚಾರ ನಮ್ಮಲ್ಲಿ ಚಾಲ್ತಿಯಲ್ಲಿ ಇದೆ. ಸಂಬಂಧಗಳಿಗೆ ಗೌರವ ಕೊಡುವುದು ಎಂದರೆ ದೊಡ್ಡವರು ಮಾಡಿದ ತಪ್ಪುಗಳನ್ನೆಲ್ಲ ಸಹಿಸಿಕೊಳ್ಳುವುದು ಅಥವಾ ಅನುಮೋದಿಸುವುದು ಎಂದಾಗಬಾರದಲ್ಲವೆ? ಆದರೆ ಮನೆಗಳಲ್ಲಂತು ಗಂಡು ಮತ್ತು ಹೆಣ್ಣುಗಳ ನಡುವೆ ಅದರಲ್ಲು ಅಪ್ಪ ಮತ್ತು ಹೆಣ್ಣುಮಕ್ಕಳ ನಡುವೆ ಎಂತಹ ಸಂಬಂಧ ಇರುತ್ತದೆ ಎಂದರೆ ದೊಡ್ಡವರು ಹೇಳುವುದೆಲ್ಲ ಒಳ್ಳೆಯದಕ್ಕೇ ಎಂಬ ನಂಬಿಕೆ ಜಾರಿಯಲ್ಲಿ ಇರುತ್ತದೆ. ಅವಳು ಏನು ತಿನ್ನಬೇಕು? ಏನು ಕುಡಿಯಬೇಕು? ಹೇಗೆ, ಎಷ್ಟು ನಗಬೇಕು? ಹೇಗೆ ನಡೆಯಬೇಕು? ಏನು ಓದಬೇಕು? ಎಲ್ಲಿಯವರೆಗೆ ಓದಬೇಕು? ಕೊನೆಗೆ ಅವಳು ಯಾರನ್ನು ಯಾವಾಗ ಮದುವೆ ಆಗಬೇಕು ಹೀಗೆ ಪ್ರತಿಯೊಂದನ್ನೂ ಹಿರಿಯರೇ ನಿರ್ಧರಿಸುತ್ತಾರೆ. ಇಲ್ಲೆಲ್ಲ ಮನೆಯ ಯಜಮಾನನದೆ ಅಂತಿಮ ತೀರ್ಪು. ಇದಕ್ಕೆ ಅಪವಾದಗಳು ಇರಬಹುದು. ಪ್ರತಿಯೊಂದಕ್ಕು ನಮ್ಮಲ್ಲಿ ಅಪವಾದಗಳು ಇರುತ್ತವೆ ಬಿಡಿ. ಆದರೆ ಸಂಬಂಧಗಳಲ್ಲಿ ಸಂಬಂಧದ ಸ್ಥಾನವೆ ನಮ್ಮನ್ನು ನಿಯಂತ್ರಿಸುತ್ತದೆ. ಸ್ಥಾನದ ಕಾರ್ಯನಿರ್ವಹಣೆ ಅಲ್ಲ.

ಇನ್ನು ಶಾಲಾ ಕಾಲೇಜುಗಳಲ್ಲಂತು ಶ್ರೇಣೀಕರಣ ಬಹಳ ಢಾಳಾಗಿ ಕಾಣುತ್ತಿರುತ್ತದೆ. ಸಾಮರ್ಥ್ಯಕ್ಕಿಂತ, ಪ್ರತಿಭೆಗಿಂತ ಸ್ಥಾನಕ್ಕೆ ಹೆಚ್ಚು ಬೆಲೆ. ಗುರುಗಳು ಹೇಳುವ ಸ್ಥಾನದಲ್ಲು ಶಿಷ್ಯರು ಕೇಳುವ ಸ್ಥಾನದಲ್ಲು ಇರುತ್ತಾರಾಗಿ ಗುರುಗಳು ಏನಾದರೂ ಹೇಳಿದರೆ ಅದನ್ನು ಪ್ರಶ್ನಿಸದೆ ಪಾಲಿಸಬೇಕು ಎಂಬಂತಹದೆ ಅಲಿಖಿತ ನಿಯಮ ನಮ್ಮಲ್ಲಿ ಜಾರಿಯಲ್ಲಿ ಇದೆ. ಅದೆ ಸದಾಚಾರ ಎಂಬ ನಂಬಿಕೆ ನಮ್ಮಲ್ಲಿ ಚಲಾವಣೆಯಲ್ಲಿ ಇದೆ. ಕೆಲವೊಮ್ಮೆ ದರಿದ್ರವಾದ ಯಾರೊ ಒಬ್ಬ ಶಿಕ್ಷಕರಿಗಿಂತ ಅದೆ ಶಾಲೆಯ ಒಬ್ಬ ವಿದ್ಯಾರ್ಥಿ ಹೆಚ್ಚು ಪ್ರತಿಭಾವಂತ ಇರಬಹುದು. ಆದರೆ ಅಲ್ಲಿ ಸ್ಥಾನವೇ ನಿರ್ಣಾಯಕ ಆಗಿರುತ್ತದೆ. ಆಡಳಿತಾಂಗ, ನ್ಯಾಯಾಂಗಗಳಲ್ಲು ಇದೇ ಸ್ಥಿತಿ ಇರುವುದನ್ನು ನಾವು ಕಾಣಬಹುದು. ಇಲ್ಲೆಲ್ಲ ವ್ಯಕ್ತಿಗಿಂತ ಸ್ಥಾನವೆ ಮುಖ್ಯ ಪಾತ್ರ ವಹಿಸುತ್ತದೆ. ಸ್ಥಾನಕ್ಕೆ ಅಧಿಕಾರ ತಗಲಿಕೊಂಡರೆ ಸಾಕು ಅಲ್ಲಿ ಭಟ್ಟಂಗಿಗಳು ಹುಟ್ಟಿಕೊಳ್ಳುತ್ತಾರೆ. ಕೆಮ್ಮಿದರೂ, ಕ್ಯಾಕರಿಸಿದರೂ ಅದ್ಭುತ ಅದ್ಭುತ ಎನ್ನುತ್ತ ಆ ಭಟ್ಟಂಗಿಗಳು ಆ ಸ್ಥಾನದ ವ್ಯಕ್ತಿಯ ಮನಸ್ಸಾಕ್ಷಿ, ಆತ್ನಸಾಕ್ಷಿಗಳನ್ನೆ ಕೊಂದುಬಿಡುತ್ತಾರೆ. ವಿವೇಕವನ್ನೆ ನಾಶ ಮಾಡಿ ಕೇವಲ ಬಕೀಟು ಹಿಡಿಯುವವರು ಮಾತ್ರ ಸುತ್ತ ಮುತ್ತ ಇರುವಂತೆ ಆಗುತ್ತದೆ. ರಾಜಕೀಯ ಅಧಿಕಾರದ ಸ್ಥಾನಗಳಲ್ಲಂತು ಇದು ಸರ್ವೇಸಾಮಾನ್ಯ.

ಮೊನ್ನೆ ನಮ್ಮ ಪ್ರೌಢಶಾಲೆಯಲ್ಲಿ ಮುಖ್ಯೋಪಾದ್ಯಾಯರು ‘ನನಗೆ ಬೆಲೆ ಕೊಡದಿದ್ದರೆ ಹೋಗಲಿ ನನ್ನ ಕುರ್ಚಿಗಾದರು ಬೆಲೆ ಕೊಡಬೇಡವೇನ್ರೀ’ ಎಂದು ಕೂಗಾಡುತ್ತಿದ್ದರು. ಅಂದರೆ ವ್ಯಕ್ತಿಗಿಂತ, ವ್ಯಕ್ತಿಯ ಸಾಮರ್ಥ್ಯಕ್ಕಿಂತ ಕೆಲವೊಮ್ಮೆ ಆ ವ್ಯಕ್ತಿಯ ಸ್ಥಾನಕ್ಕೆ ಒಂದು ನಿರ್ದಿಷ್ಟವಾದ ಗೌರವ, ಮರ್ಯಾದೆ ಇರಬೇಕೆಂದು; ಅವರು ಕೂರುವ ಕುರ್ಚಿಗೆ ಒಂದು ನಿರ್ದಿಷ್ಟ ಮರ್ಯಾದೆ ಇರಬೇಕೆಂದು ಅಪೇಕ್ಷಿಸಲಾಗುತ್ತದೆ. ‘ಏಯ್ ಈ ಛೇರಿಗೆ ಅವಮಾನ ಮಾಡಬೇಡ್ರಿ’ ಎಂದೂ ಕೆಲವರು ಕೆಲವೊಮ್ಮೆ ಹೇಳುವುದುಂಟು. ಸರ್ಕಾರಿ ವ್ಯವಸ್ಥೆಯಲ್ಲಿ ಇದನ್ನೆ ನಾವು ಪ್ರೊಟೋಕಾಲ್ ಎನ್ನುತ್ತೇವೆ. ಕೆಲವು ಸ್ಥಾನಗಳಿಗೆ ಅವುಗಳದ್ದೆ ಆದ ಮರ್ಯಾದೆ ಇರುತ್ತದೆ. ಇದು ರೂಢಿಯಿಂದಲು ಬಂದಿರಬಹುದು; ನಿಯಮಗಳಿಂದಲು ಉಂಟಾಗಿರಬಹುದು. ಕೆಲವೊಮ್ಮೆ ಆಹ್ವಾನ ಪತ್ರಿಕೆ ಮುದ್ರಿಸುವಾಗ ಇವರ ಹೆಸರು ಮೇಲೆ ಬಂತು ಇವರ ಹೆಸರು ಕೆಳಗೆ ಬಂತು ಎಂಬ ಕಾರಣಕ್ಕೆ ಜಗಳ ಆಗಿರುವುದುಂಟು. ಇಲ್ಲೆಲ್ಲ ವ್ಯಕ್ತಿಗಿಂತ ಆ ವ್ಯಕ್ತಿಯ ಸ್ಥಾನ ಮುಖ್ಯ ಆಗಿರುತ್ತದೆ.

ಎಷ್ಟೋ ವೇಳೆ ಕೆಲವು ಸ್ಥಾನಗಳಿಗೆ ಕೆಲವು ವ್ಯಕ್ತಿಗಳು ನಾಲಾಯಕ್ ಆಗಿರುತ್ತಾರೆ. ಅಂದರೆ ಕೆಲವೊಂದು ಸ್ಥಾನಗಳಿಗೆ ಅವುಗಳದ್ದೆ ಆದ ಕೆಲವು ನಿರೀಕ್ಷೆಗಳು ಇರುತ್ತವೆ. ಆ ನಿರೀಕ್ಷೆಗಳನ್ನು ನಿಭಾಯಿಸಬಲ್ಲ ಸಾಮರ್ಥ್ಯ ಆ ಸ್ಥಾನದಲ್ಲಿನ ವ್ಯಕ್ತಿಗೆ ಇಲ್ಲದಾಗ ಆ ಸ್ಥಾನಕ್ಕು ಬೆಲೆ ಇರುವುದಿಲ್ಲ; ಆ ವ್ಯಕ್ತಿಗೂ ಬೆಲೆ ಇರುವುದಿಲ್ಲ. ಹಾಗಾದಾಗ ವ್ಯಕ್ತಿಯಿಂದ ಸ್ಥಾನಕ್ಕೆ ಅಗೌರವ ಉಂಟಾಗುತ್ತದೆ. ಏನೇ ಆಗಲಿ ನಮಗೆ ವ್ಯಕ್ತಿಪೂಜೆಯೂ ಕೂಡದು, ಸ್ಥಾನಪೂಜೆಯೂ ಕೂಡದು. ಗೌರವ ಅಥವಾ ಅಗೌರವ ಎರಡೂ ಅವರವರು ಮಾಡುವ ಕಾರ್ಯಗಳಿಗೇ ಸಲ್ಲಬೇಕು; ಅಲ್ಲವೆ?

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...