Date: 13-10-2022
Location: ಬೆಂಗಳೂರು
ಕಥೆ ಹೇಳುವ ಕಲೆಗಾರಿಕೆ, ಓದುಗರ ಆಸಕ್ತಿಯನ್ನು ಕೆರಳಿಸಿ ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆ ಎಲ್ಲವೂ ಕಥೆಗಾರರಿಗೆ ಸಿದ್ಧಿಸಿದೆ ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ಸಿರಿ ಕಡಲು ಅಂಕಣದಲ್ಲಿ ಲಿಂಗರಾಜ ಸೊಟ್ಟಪ್ಪನವರ ಮಾರ್ಗಿ ಕಥಾ ಸಂಕಲನ ಕುರಿತು ಬರೆದಿದ್ದಾರೆ.
ಪುಸ್ತಕ- ಮಾರ್ಗಿ
ಲೇ - ಲಿಂಗರಾಜ ಸೊಟ್ಟಪ್ಪನವರ
ಪ್ರಕಾಶಕರು- ಪಲ್ಲವ ಪ್ರಕಾಶನ
ವರ್ಷ- 2021
ಗೋವಾ ಎನ್ನುವುದು ನನಗೆ ಎಡವಿ ಬಿದ್ದರೂ ತಲುಪಬಹುದಾದ ಸ್ಥಳ. ಸಣ್ಣ ಪುಟ್ಟ ಖುಷಿಗೆ ಮೀನೂಟ ಮಾಡಬೇಕೆಂದರೂ ಪೊಳೆಮ್‍ಗೆ ಹೋಗೋಣ ಎಂದು ಹೊರಟುಬಿಡುವಷ್ಟು, ದೂರದಿಂದ ಬಂದ ಸ್ನೇಹಿತರೂ ಒಂದು ಪಾರ್ಟಿ ಮಾಡಿಕೊಂಡು ಬರ್ತೇವೆ ಎಂದು ಹೋಗಿಬರುವಷ್ಟು ಹತ್ತಿರ. ನನ್ನ ಶಾಲೆಯ ಸಮೀಪದ ದೇವಭಾಗ್ ದಂಡೆಗೆ ಹೋದರೆ ‘ವೆಲ್ ಕಂ ಟು ಮಹಾರಾಷ್ರ ಆಂಡ್ ಗೋವಾ ನೆಟ್‍ವರ್ಕ’ ಎಂದು ಟಿಂವ್ಹ ಎಂದು ಮೆಸೆಜು ಬಂದುಬಿಡುವಷ್ಟು ನಿಕಟ. ಹತ್ತನೆ ತರಗತಿಯನ್ನು ಮುಗಿಸಿ ಹೋದ ಮಕ್ಕಳನ್ನು ಎರಡು ತಿಂಗಳು ಬಿಟ್ಟು ‘ಏನ್ ಮಾಡ್ತಿದ್ದೀರೋ?’ ಎಂದರೆ ಗೋವಾದಲ್ಲಿ ಐಟಿಐ ಮಾಡ್ತಿದ್ದೇವೆ.’ ಎಂದು ತೀರಾ ಸಹಜವಾಗಿ ಹೇಳಿಬಿಡುವಷ್ಟು ಅಚ್ಚರಿಗೊಳ್ಳದ ಸ್ಥಳ. ಕಾರವಾರದ ಜನರಿಗೆ ಗೋವಾ ಎನ್ನುವುದು ಕಾರವಾರದಷ್ಟೇ ಸಲೀಸು. ಹೆಚ್ಚಿನ ವಾಹನಗಳ ನಂಬರ್ ಪ್ಲೇಟ್‍ಗಳಲ್ಲಿ ಕೆ.ಎ-30 ಎಂದಿದ್ದರೂ ಚಿಕ್ಕದೊಂದು ‘ಗೋವಾ ರಾಜೆ’ ಎಂದು ಬರೆಸಿಬಿಡುವಷ್ಟು ಹುಕಿ. ಈ ಕಾರಣಕ್ಕಾಗಿಯೇ ಗೋವಾ ಮಂಚ್‍ನವರು ಕಾರವಾರ ನಮ್ಮದು ಎಂದು ಘೋಷಿಸಿಕೊಂಡೂ ಆರಾಮವಾಗಿ ಇಲ್ಲಿ ಅಡ್ಡಾಡುತ್ತಾರೆ.
ಅಂತಹ ಗೋವಾ ಒಂದು ಸಲ ಹೊರರಾಜ್ಯದವರೆಲ್ಲ ಬಂದು ತಮ್ಮ ರಾಜ್ಯದ ಜನತೆಗೆ ಉದ್ಯೋಗಾವಕಾಶಗಳು ಕಡಿಮೆಯಾಗಿಬಿಟ್ಟಿದೆ. ಹೀಗಾಗಿ ಉಳಿದ ರಾಜ್ಯಗಳಿಂದ ಬಂದವರನ್ನು ವಾಪಸ್ ಕಳುಹಿಸುವ ಕಾರ್ಯಾಚರಣೆ ಪ್ರಾರಂಭಿಸಿತ್ತು. ಆದರೆ ಅದರ ನೇರ ಪರಿಣಾಮ ಆಗಿದ್ದು ಮಾತ್ರ ಕರ್ನಾಟಕದವರ ಮೇಲೆ. ಇಲ್ಲಿನ ಬೀಚ್‍ಗಳಲ್ಲಿ ನಿರ್ಮಿಸಿದ ತಗಡಿನ ಮನೆಗಳಲ್ಲಿ ವಾಸಿಸುತ್ತಿದ್ದ ಉತ್ತರ ಕರ್ನಾಟಕದ ಬಹಳಷ್ಟು ಕಾರ್ಮಿಕರು ಅಕ್ಷರಶಃ ಬೀದಿಗೆ ಬಿದ್ದಂತಾಗಿದ್ದರು. ಆ ಸಮಯದಲ್ಲಿ ಕಾರವಾರದಲ್ಲೂ ಕ್ಯಾಂಡಲ್ ಲೈಟ್ ಮೆರವಣಿಗೆಯಾಗಿತ್ತು. ಇದನ್ನೆಲ್ಲ ಒಮ್ಮೆಲೆ ನೆನಪಾಗುವಂತೆ ಮಾಡಿದ್ದು ಲಿಂಗರಾಜ ಸೊಟ್ಟಪ್ಪನವರ ಮಾರ್ಗಿ ಕಥಾ ಸಂಕಲನ.
ಹೊಸದಾಗಿ ಬರೆಯುತ್ತಿರುವವರ ಕಥೆ ಕವನಗಳನ್ನು ಓದುವುದರಲ್ಲಿ ಒಂದು ವಿಶಿಷ್ಟ ಖುಷಿ ಇರುತ್ತದೆ. ಅಲ್ಲಿ ಒಂದು ರೀತಿಯ ತಾಜಾತನವಿರುತ್ತದೆ. ಹಿರಿಯ ರೇಖಕರಾದರೆ ಓದಲು ಪ್ರಾರಂಭಿಸಿದ ತಕ್ಷಣ ಇದು ಇಂಥವರದ್ದೇ ಎಂದು ನಿಖರವಾಗಿ ಹೇಳಲು ಸಾಧ್ಯವಾಗುವಂತಹ ಜಿಡ್ಡುತನ ಇಲ್ಲಿ ಇರುವುದಿಲ್ಲ. ಅಂತಹ ತಾಜಾ ಬಂಗುಡೆಯಂತಹ ಹೊಳೆಯುವ ಮಿಂಚು ಇಲ್ಲಿರುತ್ತದೆ. ಅದರಲ್ಲೂ ಹೊಸದಾದ ವಿಷಯವನ್ನು ಇಟ್ಟುಕೊಂಡು ಬರೆಯುತ್ತಿರುವ ಈ ತಲೆಮಾರಿನ ಕಥೆಗಾರರ ಹೊಸ ಕಥೆಗಳನ್ನು ಓದುವುದು ನಿಜಕ್ಕೂ ಒಂದು ಹೊಸ ಅನುಭವ. ಲಿಂಗರಾಜ ಸೊಟ್ಟಪ್ಪನವರ ಮಾರ್ಗಿ ಓದುವಾಗ ನನಗೆ ಅನ್ನಿಸಿದ್ದೂ ಕೂಡ ಇದೇ ಭಾವ.
ಮೊದಲ ಕಥೆ ದೂರ ತೀರದ ಮೋಹ ಮೇಲೆ ಹೇಳಿದಂತೆ ಗೋವಾದ ಆಕರ್ಷಣೆ, ಅದರೊಳಗಿನ ತಲ್ಲಣ, ಮನೆ ಮರೆತು ಅಲ್ಲಿನ ಹೆಣ್ಣು ಎಣ್ಣೆಗೆ ಮಾರು ಹೋಗುವ ಅದೆಷ್ಟೋ ಸಂಸಾರವಂತರು ಇದೆಲ್ಲವನ್ನು ಹೇಳುತ್ತ ಮತ್ತೆ ಆ ಮಾಯೆಯಿಂದ ತಪ್ಪಿಸಿಕೊಳ್ಳುವುದನ್ನು ಹೇಳುತ್ತದೆ. ಮಾಯೆ ಎನ್ನುವುದು ಎಲ್ಲರ ಜೀವನದಲ್ಲೂ ಇರುವಂತಹುದ್ದೇ. ಅದರಿಂದ ತಪ್ಪಿಸಿಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ. ಅದು ಸಾಮಾನ್ಯ ಮನುಷ್ಯನಾಗಿರಬಹುದು, ಸರ್ವವನ್ನೂ ತ್ಯಜಿಸಿದ ಮಠದ ಸ್ವಾಮಿಯಾಗಿರಬಹುದು. ಮಾಯೆಯನ್ನು ಮೀರಲು ಸಾಧ್ಯವೇ ಇಲ್ಲ ಎನ್ನುವುದು ಪ್ರಸ್ತುತ ಸ್ಥಿತಿಗೆ ಕೈಗನ್ನಡಿಯಂತಿರುವ ಮಠ ಎನ್ನುವ ಕಥೆಯೊಂದು ಇಲ್ಲಿದೆ. ಈ ಮಠದ ಸ್ವಾಮಿ ಚಿಕ್ಕವಯಸ್ಸಿನಲ್ಲೇ ಮರಿ ಸ್ವಾಮಿಯಾಗಿ ಬಂದವನು. ಮಠದ ದೇಖರೇಖಿ ನೋಡಿಕೊಳ್ಳಲೆಂದು ಬಂದ ಕುಬೇರಯ್ಯ ಮಠವನ್ನೆಲ್ಲ ಆಕ್ರಮಿಸಿಕೊಂಡ ಹಾಗೆ ಅವನ ಹೆಂಡತಿ ಮಾದೇವಿ ಶ್ರೀಗಳನ್ನು ಆಕ್ರಮಿಸಿಕೊಂಡಳು. ಮಾಯೆಯ ಮಾಯೆಯೊಳಗೆ ಸಿಕ್ಕ ಸ್ವಾಮಿ ಅದರಿಂದ ಹೊರಬರಲಾರದೆ ವಿಷ ಕುಡಿದು ಸತ್ತರೂ ಮಠದ ಹೆಸರು ಕೆಡದಿರುವಂತೆ ಲಿಂಗೈಕ್ಯರಾದರೆಂದು ಅರಹುವುದು ಈ ಲೋಕದ ಇನ್ನೊಂದು ಮಾಯೆ.
ನಾವು ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ಪಡೆದೇ ಪಡೆಯುತ್ತೇವೆ ಎಂಬುದು ನಮ್ಮ ಗೀತೆ ಹೇಳಿರುವ ಮಾತು. ನಾವು ಮಾಡಿರುವ ಕರ್ಮದ ಫಲದಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲವೆಂದು ಅನಾದಿ ಕಾಲದಿಂದಲೂ ನಂಬಿಕೊಂಡು ಬಂದಿರುವುದಕ್ಕೆ ತಾಜಾ ಉದಾಹರಣೆಯೆಂಬಂತೆ ಕರ್ಮಣ್ಯೇವಾಧಿಕಾರಾಸ್ತೆ ಕಥೆಯನ್ನು ಹೆಣೆಯಲಾಗಿದೆ. ಹತ್ತನೆ ತರಗತಿಯಲ್ಲಿ ಫೇಲಾದ ವೈದ್ಯರ ಮಗ ತನ್ನ ಸ್ನೇಹಿತನ ಒತ್ತಾಸೆಯಿಂದ ಪಾಸಾಗಿ ನಂತರ ವೈದ್ಯನಾಗುವುದು, ಅದೇ ಗೆಳೆಯನ ಹೆಂಡತಿಗೆ ತನ್ನದೆ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ನೀಡುವುದು ಹಣದ ಆಸೆಗಾಗಿ ಇಲ್ಲದ ರೋಗಗಳ ಹೆಸರು ಹೇಳಿ ರೋಗಿಗಳನ್ನು ಹೆದರಿಸಿ ಹಣ ಮಾಡುವುದು, ಸ್ನೇಹಿತನ ಹೆಂಡತಿಯನ್ನೇ ರಿಲಾಕ್ಸೇಷನ್ ಎಂದು ಬಳಸಿಕೊಳ್ಳುವುದು ಈ ಮಾಯೆಯೊಳಗೆ ಹಣದ ಮಾಯೆ ಕೂಡ ಸೇರಿಕೊಂಡು ಇಡೀ ಕಥೆಗೊಂದು ರೋಚಕ ತಿರುವು ನೀಡುತ್ತದೆಯಾದರೂ ನಮ್ಮ ಮೂಲ ನಂಬಿಕೆಯಂತೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎನ್ನುವುದನ್ನು ನೇರವಾಗಿ ಹೇಳದಿದ್ದರೂ ಆ ಭಾವ ಬರುವಂತೆ ಕಥೆಯನ್ನು ನಿರೂಪಿಸಿದ ತಂತ್ರ ಗಮನ ಸೆಳೆಯುತ್ತದೆ.
ಕಾಮ ಎನ್ನುವುದು ಈ ಲೋಕದ ಎಲ್ಲ ಮಾಯೆಗಳನ್ನೂ ನುಂಗಿ ಕುಳಿತ ಮಾಯೆ ಎಂದು ಬಲ್ಲವರು ಹೇಳಿದ್ದು ಸುಳ್ಳಲ್ಲ.ಇದರ ಜೊತೆಗೆ ಜಾತಿಯ ಅಮಲು ಸೇರಿ ಬಿಟ್ಟರಂತೂ ಅದು ಮಂಗನಿಗೆ ಹೆಂಡ ಕುಡಿಸಿದಂತೆ. ಸುಡು ಬೇಸಿಗೆಯ ಒಂದು ಹಗಲುಗನಸು ಕಥೆಯ ಸೀತಪ್ಪ ಸ್ವತಃ ತಾನು ಕೆಳ ದಲಿತ ವರ್ಗದಿಂದ ಬಂದಿದ್ದರೂ ತಾನು ದಲಿತರಲ್ಲೂ ಮೇಲ್ವರ್ಗಕ್ಕೆ ಸೇರಿದವನು ಎಂದು ಸಮಾಜದ ಮುಂದೆ, ತಾನು ಕೆಲಸ ಮಾಡುವ ಸಹೋದ್ಯೋಗಿಗಳ ಮುಂದೆ ಹೇಳಿಕೊಳ್ಳುತ್ತಲೇ ತನ್ನ ತಾಯಿ ಅಕ್ಕನ ಬೆನ್ನು ಕಾಣಿಸುತ್ತ ಜೋರಾಗಿ ಮಾತನಾಡುವ ಧಾಡಸಿತನಕ್ಕೆ ಹೇವರಿಸಿದವನು. ಅತ್ತ ಅಕ್ಕನ ಮಗಳನ್ನು ಮದುವೆಯಾಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ಗೊತ್ತಿದ್ದರೂ ಅನಿವಾರ್ಯವಾಗಿ ಮದುವೆಯಾದರೂ ಅವಳೊಂದಿಗೆ ಶಾರೀರಿಕ ಸಂಬಂಧ ಬೆಳೆಸಲಾಗದೆ ಕುಗ್ಗಿ ಹೋದವನು. ಇಲ್ಲಿ ಕಾಣುವ ಮಾಯೆ ಹಲವಾರು ಅಂಶಗಳನ್ನು ತನ್ನೊಳಗೆ ಸೇರಿಸಿಕೊಳ್ಳುತ್ತ ಕೊನೆಗೆ ಸೀತಪ್ಪನ ಕನಸು ವಿರಾಟರೂಪ ಪಡೆಯುವುದನ್ನು ಹೇಳುತ್ತ ಧ್ವನಿಸುವುದನ್ನು ಕಾಣಬಹುದು.
ಒಲುಮೆಯಿಂದಲೇ ಕಥೆಯೊಳಗೆ ಅಧಿಕಾರದ ಮಾಯೆಯಿದೆ. ಅಧಿಕಾರ ಹಾಗೂ ಹಣ ಎನ್ನುವುದು ಸಮಾಜವನ್ನು ತೀವ್ರವಾಗಿ ಅಲ್ಲಾಡಿಸುವ ಎರಡು ಧ್ರುವಗಳಿದ್ದಂತೆ. ಆದರೆ ದುರದೃಷ್ಟವಶಾತ್ ಈ ಎರಡೂ ಧ್ರುವಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಇರಬೇಕಾದವು ಒಂದೇ ನೇರದಲ್ಲಿ ನಿಂತು ಒಂದನ್ನೊಂದು ಒಳಗೊಂಡು ಇಡೀ ಸಮಾಜವನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ರಾಜಕೀಯದ ಗೆಲುವಿಗಾಗಿ ಎಂತಹ ಷಡ್ಯಂತ್ರಗಳನ್ನು ರೂಪಿಸಲೂ ಹಿಂಜರಿಯದ ಈ ಇವರ ಕುತಂತ್ರಗಳು ಯಾವ ರಣತಂತ್ರಕ್ಕೂ ಕಡಿಮೆಯಾದುದಲ್ಲ. ಇದನ್ನು ಸಂಕಲನದ ಶೀರ್ಷಿಕಾ ಕಥೆ ಮಾರ್ಗಿ ಕೂಡ ದೃಢಪಡಿಸುತ್ತದೆ. ಊರೊಳಗೆ ಎಲ್ಲರ ಜೊತೆ ಒಂಗಿದ್ದ ರಾಮಣ್ಣನನ್ನು ಎರಡು ಪಂಗಡಗಳು ಹಣಿದ ರೀತಿ ಇಲ್ಲಿ ಅಧಿಕಾರದ ಮಾಯೆಯನ್ನು ಮತ್ತೆ ಬಡಿದೆಬ್ಬಿಸುತ್ತದೆ. ತನ್ನ ಪಾಡಿಗೆ ತಾನು ಬಟ್ಟೆ ಮಾಡಿಕೊಂಡಿದ್ದ ರಾಮಣ್ಣನನ್ನು ಹುರಿದುಂಬಿಸಿ ಚುನಾವಣೆಗೆ ನಿಲ್ಲುವಂತೆ ಮಾಡಿದ ಊರ ಜನ ಅಧಿಕಾರದ ಮಾಯೆಗೆ ಬಿದ್ದವರ ಬಣ್ಣ ಬಣ್ಣದ ಮಾತಿನೊಳಗೆ ಮುಳುಗಿ ರಾಮಣ್ಣನನ್ನು ಸೋಲಿಸುವ ಪರಿ ಈ ಜಗದ ಧರ್ಮ ಹಾಗೂ ಜಾತಿಯ ಮಾಯೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತದೆ.
ಖಾಲಿ ಬಾಟ್ಲಿ ಕಥೆಯಲ್ಲಿ ಐಸ್ ಮಾರಲು ಬರುತ್ತಿದ್ದ ಬಿಲ್ಲಪ್ಪ ಮಕ್ಕಳಿಗೆ ಬಾಟಲಿ ಕೊಂಡು ಐಸ್ ನೀಡುತ್ತಿದ್ದನಾದರೂ ಆತ ಹೇಳುವ ಮಾತುಗಳು ಮಕ್ಕಳ ಮನಸ್ಸಿನಲ್ಲಿ ಮೂಡಿಸಿದ ಪ್ರಭಾವವನ್ನು ಕಾಣಬಹುದು. ಜಾತಿಯ ಕಾರಣಕ್ಕೆ ಸೆರೆಯೆಂಬ ಮಾಯೆಗೆ ಬಲಿಯಾದ ಕಾರಣಕ್ಕಾಗಿ ಮೂಲೆ ಹಿಡಿದ ಕೇರಿಯ ಮಕ್ಕಳು ಸಹಜವಾದ ಐಸ್‍ನ ಆಸೆಯನ್ನು ಮೀರಿ ಬಾಟ್ಲಿಯನ್ನು ಗೋಡೆಗೆ ಎಸೆದು ಫಳ್ ಎಂದು ಒಡೆಯುವ ಶಬ್ಧ ಪ್ರತಿಭಟನೆಯ ಸಾಂಕೇತಿಕ ರೂಪವಾಗಿ ಕಣ್ಣೆದುರಿಗೆ ನಿಲ್ಲುತ್ತದೆ. ಅವ್ವ ಮತ್ತು ರೊಟ್ಟಿ ಎಂಬುದು ಸ್ವಾತಂತ್ರ್ಯ ಹೋರಾಟದ ಕಾಲದ ಕಥೆ ಎನ್ನಿಸಿದರೂ ಅದರೊಳಗೆ ಕಾಡುವ ಜಾತಿಯ ಭೂತ ಹೊರತಾದುದಲ್ಲ. ಬಿಲ್ಲಪ್ಪ ತಮ್ಮ ಜಾತಿಯವನು ಎಂದು ಬಹಿರಂಗವಾಗಿ ಹೇಳಿಕೊಂಡರೆ ಅವನ ವ್ಯಾಪಾರ ಕಮ್ಮಿಯಾದೀತು ಎಂದು ಆತಂಕಪಡುವ ಹಿರಿಯರು ಅವ್ವ ಮತ್ತು ರೊಟ್ಟಿ ಕಥೆಯಲ್ಲೂ ಭೂಗದ ಯೋಧರಿಗೆ ರೊಟ್ಟಿ ನೀಡುವಾಗ ಜಾತಿ ಹೇಳಬಾರದು ಎಂಬ ಎಚ್ಚರಿಕೆಯನ್ನು ಪಾಲಿಸುವ ಮಕ್ಕಳು, ಮನೆ ಬೇಕಾಗಿದೆ ಕಥೆಯಲ್ಲಿ ಜಾತಿಯ ಕಾರಣಕ್ಕಾಗಿ ಮನೆ ಸಿಗದೆ ಒದ್ದಾಡಿ ಶಿವರುದ್ರ ದೇವರಿದ್ದಾನೆ ಎಂದು ನಂಬುವ ಮನೆಗೆ ಅನಿವಾರ್ಯವಾಗಿ ಹೋಗುವ ನಿರೂಪಕನವರೆಗೂ ಜಾತಿ ಕಾಡುವ ಮಾಯೆಯಾಗಿದೆ. ಇಲ್ಲಿ ಮೇಲ್ವರ್ಗದವನೊಬ್ಬ ಗಾಳೆಮ್ಮ ಮರಿಯಮ್ಮ ಎಂಬ ಕೆಳವರ್ಗದ ದೇವತೆ ಫೋಟೊವನ್ನು ಮನೆಯಲ್ಲಿಟ್ಟು ಪೂಜಿಸುವ ರೀತಿ ಅಚ್ಚರಿ ಹುಟ್ಟಿಸುತ್ತದೆ. ಷರತ್ತುಗಳು ಅನ್ವಯಿಸುತ್ತವೆ ಕಥೆಯಲ್ಲಿ ಬರುವ ಮಾಸಾಶನವನ್ನು ಎಟಿಎಮ್ ಕಾರ್ಡ್ ಮಾಡಿಸಿ ಕಳೆದುಕೊಳ್ಳುವ ಹಿರಿಯಜ್ಜಿಗೆ ಆಧುನಿಕ ತಂತ್ರಜ್ಞಾನಗಳು ಮಾಯೆಯಾಗಿ ಕಾಡಿದೆ.
ಕೊನಡೆ ಕಥೆಯಲ್ಲಿ ಬರುವ ಉಡುಚಿ, ರೂಪ್ಲಿ ಎಲ್ಲರೂ ಒಂದೊಂದು ಮಾಯೆಯಾಗಿ ಗಮನ ಸೆಳೆದರೆ ಮಾನವೀಯತೆಯ ನೆಲೆಯಲ್ಲಿ ನಿಂತು ರೂಪ್ಲಿಯ ಗಂಡ ಭರಮಲಿಂಗನನ್ನು ದಡ ಸೇರಿಸಲು ಒದ್ದಾಡುವ ಅತ್ತೆಯದ್ದು ಕಾಡಿನೊಳಗೆ ಬೆಸೆದುಕೊಂಡ ಮಾಯಾ ಸಂಬಂಧ. ಪರ್ಯವಸಾನ ಆದರ್ಶದ ಮಾಯೆಯಲ್ಲಿ ಪ್ರೇಮವನ್ನು ಬಿಟ್ಟು ಹೋದವನನ್ನು ಕುರಿತಾಗಿ ಹೇಳಿದರೆ ಬೇಲಿ ಮತ್ತು ಹೂವು ಕಥೆಯಲ್ಲಿ ಬರುವ ನಾಗಯ್ಯ ತನ್ನ ಜಾತಿ ಮಾಯೆಯನ್ನು ಕಳಚಿಕೊಂಡು ತನಗೆ ಎಲ್ಲಿ ಪ್ರೀತಿ ಮತ್ತು ಸುಖ ಸಿಗುತ್ತದೆಯೋ ಅದನ್ನು ಅವುಚಿಕೊಂಡು ಬದುಕಲು ನಿರ್ಧರಿಸುವುದು ಸಣ್ಣ ವಿಷಯವೇನಲ್ಲ. ಈ ಕಥೆಯಲ್ಲಿ ಮಿಲನದಲ್ಲಿ ಸೋಲುವ ಅವನನ್ನು ನೋಡಿ ನಗುವ ಹೆಂಡತಿಯನ್ನು ಸೋಲಿಸುವ ಉದ್ದೇಶದಿಂದಲೇ ಆತ ಹೇಮಿಯ ಬಳಿ ಹೋಗಿರಬಹುದು ಎಂದೆನಿಸಿದರೂ ಕಥೆಯ ಕೊನೆಯಲ್ಲಿ ಅದೊಂದು ನಿಜದ ಪ್ರೇಮವಾಗಿ ಮನಸ್ಸು ಚುರುಗುಟ್ಟುವಂತೆ ಮಾಡುತ್ತದೆ. ಅಮ್ಮ ಸಿಕ್ಕಿದ್ದಳು ಕಥೆಯಲ್ಲಿ ತನ್ನ ಕಾಮದ ತಣಿವಿಗಾಗಿ ವೈಬ್ರೇಟರ್ ಬಳಸುವ ಆದರೆ ಪ್ರೇಮಿಸಿ ತೀರಿಹೋದವನ ತಂದೆಯನ್ನು ಸಿಸ್ವಾರ್ಥವಾಗಿ ನೋಡಿಕೊಳ್ಳುತ್ತ ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನೂ ಮೀರಿ ನಿಂತ ಹೆಣ್ಣೊಬ್ಬಳನ್ನು ಎದೆಯೊಳಗೆ ಇಳಿಸಿಕೊಳ್ಳುವುದೂ ಒಂದು ಮಾಯೆಯಂತೆ ತೋರುತ್ತದಲ್ಲದೆ ಮತ್ತೇನೂ ಇಲ್ಲ.
ಇಡೀ ಸಂಕಲನದ ಕೇಂದ್ರ ಬಿಂದುವಿನಂತಿರುವುದುದು ದ್ಯಾಮಿ ಕಥೆ. ಇದರ ಮಾಯೆಯನ್ನು ವಿವರಿಸಲು ಶಬ್ಧಗಳಿಲ್ಲ. ಇಲ್ಲಿ ಕಾಮ, ಪ್ರೇಮ, ವಿರಹ ಎಲ್ಲವೂ ಮಾಯೆಯಾಗಿ ಕಾಡುತ್ತದೆ. ಸಮಾಜದ ದೃಷ್ಟಿಯಲ್ಲಿ ಸುಲಭವಾಗಿ ಹಾದರ ಎನ್ನಿಸಿಕೊಳ್ಳಬಹುದಾಗಿದ್ದ ವಿವಾಹೇತರ ಸಂಬಂಧವೊಂದು ಜನರ ಕುಹಕ, ತಿರಸ್ಕಾರ, ವ್ಯಂಗ್ಯದ ನಡುವೆಯೂ ಅದನ್ನೆಲ್ಲ ಮೀರಿ ನಿಂತು ಗೌರವ ಸ್ಥಾನವನ್ನು ಪಡೆದುಕೊಂಡುಬಿಟ್ಟಿತು ಎಂಬುದನ್ನು ಓದುವಾಗ ನಿಜಕ್ಕೂ ಅಚ್ಚರಿ ಎನ್ನಿಸುತ್ತದೆ. ಒಂದು ಸೈಕಲ್ಲು, ವೀಳ್ಯದ ಎಲೆ ಹೇಗೆ ಒಂದು ಸಮಾಜಬಾಹಿರ ಪ್ರೇಮಕ್ಕೆ ಸಂಕೇತವಾಗಿ ನಿಂತು ನಮ್ಮೊಳಗೆ ಒಂದು ತಲ್ಲಣವನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗುತ್ತದೆ ಎಂಬುದನ್ನು ಗಮನಿಸಿದರೆ ಕಥೆಗಾರರ ಬರವಣಿಗೆ ಸಶಕ್ತತೆ ಅರ್ಥವಾಗುತ್ತದೆ.
ಹಾಗೆ ನೋಡಿದರೆ ಇಲ್ಲಿನ ಸಂಕಲನ ಎಲ್ಲಾ ಕಥೆಗಳು ಒಂದೊಂದು ಮಾಯೆಯ ಹಿಡಿತದಲ್ಲಿರುವುದನ್ನು ಚಿತ್ರಿಸಲಾಗಿದೆ. ಕಥೆ ಹೇಳುವ ಕಲೆಗಾರಿಕೆ, ಓದುಗರ ಆಸಕ್ತಿಯನ್ನು ಕೆರಳಿಸಿ ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆ ಎಲ್ಲವೂ ಕಥೆಗಾರರಿಗೆ ಸಿದ್ಧಿಸಿದೆ. ಅಗಾಧವಾದ ವಿಷಯಗಳನ್ನು ಹರವಿಟ್ಟುಕೊಂಡು ಗುಟುಕು ನೀಡುವ ಹಕ್ಕಿಯಂತೆ ಲಿಂಗರಾಜ ಕಾಣುತ್ತಾರೆ. ಹಾಗೆ ನೋಡಿದರೆ ಈ ಕಥಾ ಸಂಕಲನದ ವಿಷಯ ವ್ಯಾಪ್ತಿ ವಿಸ್ತಾರವಾದುದು. ಒಂದು ಸೂತ್ರವನ್ನಿಟ್ಟುಕೊಂಡು ಸುತ್ತಲೂ ಹೆಣೆಯುವ ಮಂಡಲದ ಹೆಣಿಗೆಗಾರರಂತೆ ಕಥೆಗಾರ ಇಲ್ಲಿನ ಕಥೆಗಳನ್ನು ನೀಟಾಗಿ ಆಯ್ಕೆ ಮಾಡಿ ಹೆಣೆದು ಓದುಗರಿಗೆ ರಸವತ್ತಾಗಿ ನೀಡಿದ್ದಾರೆ. ಈ ಕಥೆಗಳ ವಿಸ್ತಾರವನ್ನು ಗಮನಿಸಿದರೆ ಮುಂದೊಂದು ದಿನ ಇವರೊಳಗಿನ ಕಥೆಗಳ ಕಣಜ ಹೊರಚೆಲ್ಲಿದರೆ ಎಂತೆಂತಹ ಗಟ್ಟಿ ಕಾಳು ದಕ್ಕಬಹುದು ಎಂಬುದೊಂದು ಕುತೂಹಲ ನನ್ನಲ್ಲಿ ಉಳಿದುಕೊಂಡಿದೆ. ಕೆಲವೊಂದು ಕಥೆಗಳು ಇನ್ನಷ್ಟು ವಿಸ್ತಾರತೆಯನ್ನು ಪಡೆಯುವ ಅವಕಾಶವಿದ್ದಾಗಲೂ ಹಠಾತ್ ಆಗಿ ನಿಲ್ಲಿಸಿದ್ದನ್ನು ಕಾಣಬಹುದು. ಕೆಲವೆಡೆ ಈ ತಂತ್ರ ಕಥೆಯ ಕುರಿತಾದ ಕುತೂಹಲವನ್ನು ಕಾಪಿಟ್ಟರೆ ಕೆಲವೆಡೆ ಸಣ್ಣ ನಿರಾಶೆಯೊಂದನ್ನು ಹುಟ್ಟುಹಾಕುತ್ತದೆ. ಆದರೂ ಒಟ್ಟಾರೆ ಕಥೆ ಹೊಸತಲೆಮಾರಿನಲ್ಲಿ ಕಥೆ ಕಟ್ಟುತ್ತಿರುವವರ ಮೇಲುಗೈಯಂತೆ ಯಶಸ್ವಿಯಾಗಿದೆ.
ಈ ಅಂಕಣದ ಹಿಂದಿನ ಬರಹಗಳು:
ಅಚ್ಚರಿಗೆ ನೂಕುವ ಹೊಳಹುಗಳು
ಗಜಲ್ ಕಡಲಲ್ಲಿ ಹಾಯಿದೊಣಿಯಲ್ಲೊಂದು ಸುತ್ತು
ಹಲವು ಜಾತಿಯ ಹೂಗಳಿಂದಾದ ಮಾಲೆ
ನಮ್ಮೊಳಗೆ ಹೆಡೆಯಾಡುವ ಕಥೆಗಳು
ವೈಕಂ ಮಹಮ್ಮದ್ ಬಶೀರರ ’THE MAN’ - ಮನುಷ್ಯ ಸ್ವಭಾವಗಳಿಂದ ಹೊರತಾಗದ ಕೇವಲ ಮನುಷ್ಯ
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...
"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
©2024 Book Brahma Private Limited.