Date: 26-12-2024
Location: ಬೆಂಗಳೂರು
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎಂಬ ಸತ್ಯ ನನಗೆ ಗೋಚರಿಸಿದೆ” ಎಂದಿದ್ದಾರೆ ಎಂಬ ಮಾತನ್ನು ಸಹ ಜಿ.ಎಚ್ .ನಾಯಕ್ ಅವರು ಉಲ್ಲೇಖಿಸುತ್ತಾರೆ," ಎನ್ನುತ್ತಾರೆ ಅಂಕಣಗಾರ್ತಿ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಆಯ್ದ ತ.ರಾ.ಸು ಅವರ “೦-೦=೦" ಕಥೆಯಲ್ಲಿನ ಸಾವಿನ ಸೂಕ್ಷ್ಮ ನೋಟದ ಬಗ್ಗೆ ವಿಮರ್ಶಿಸಿದ್ದಾರೆ.
ಪ್ರಗತಿಶೀಲ ಸಾಹಿತ್ಯ ಸಂದರ್ಭದಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ತ.ರಾ.ಸು. ಅವರು 1920 ಏಪ್ರಿಲ್ 21ರಂದು ಚಿತ್ರದುರ್ಗ ಜಿಲ್ಲೆಯ ಮಲೆಬೆನ್ನೂರಿನಲ್ಲಿ ಜನಿಸಿದವರು. ಸಾಹಿತ್ಯ ಕುಟುಂಬದ ಹಿನ್ನೆಲೆಯಿಂದಲೇ ಜನಿಸಿದ ಇವರು ಕೌಟುಂಬಿಕ ವಾತಾವರಣ ಇವರಿಗೆ ಸಾಹಿತ್ಯದ ಒಂದು ಭಾಗವಾಗಿತ್ತು ಅಂತಹ ವಾತಾವರಣ ಇವರ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿದೆ.ಸಾಹಿತ್ಯದ ದಿಗ್ಗಜರೆಲ್ಲರೂ ಇವರ ಮನೆಗೆ ಭೇಟಿ ನೀಡುವುದು ಕೂಡ ಇವರ ಸಾಹಿತ್ಯ ಕೃಷಿಗೆ ಪೂರಕ ವಾತಾವರಣವನ್ನು ನೀಡಿತ್ತು.
ಅವರ ಹಲವು ಕೃತಿಗಳು ಚಲನಚಿತ್ರಗಳು ಸಹ ಆಗಿವೆ. ‘ಚಂದವಳ್ಳಿಯ ತೋಟ’, ಚಲನಚಿತ್ರವಾದ ಇವರ ಮೊದಲ ಕೃತಿ. ಹಾಗೂ ಚಂದನ ಗೊಂಬೆ, ಚಕ್ರತೀರ್ಥ, ಬಿಡುಗಡೆಯ ಬೇಡಿ, ಗಾಳಿಮಾತು, ನಾಗರಹಾವು, ಪುನರ್ಜನ್ಮ, ಇವೆಲ್ಲ ಸಿನಿಮಾಗಳು ಇವರ ಕೃತ ಆಧಾರಿತವಾದವುಗಳು. ಇವರ “ಹಂಸಗೀತೆ” ಬಸನ್ ಬಹಾರ್ ಎಂದು ಹಿಂದಿಯಲ್ಲಿ ತೆರೆಕಂಡು ರಾಷ್ಟ್ರಪ್ರಶಸ್ತಿಯನ್ನು ಸಹ ಗಳಿಸಿತು. ಇವರಿಗೆ ಹಲವಾರು ಪ್ರಶಸ್ತಿಗಳು ಕೂಡ ಲಭಿಸಿವೆ ಮರಣೋತ್ತರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಸುಮಾರು 70ಕ್ಕೂ ಹೆಚ್ಚು ಕಾದಂಬರಿಗಳನ್ನು ನಾಲ್ಕು ಕಥಾ ಸಂಕಲನಗಳು ಎರಡು ನಾಟಕ, ಎರಡು ಆತ್ಮಕಥೆಗಳು, ಜೀವನ ಚರಿತ್ರೆ, ಹೀಗೆ ಒಟ್ಟಾರೆ 96 ಕೃತಿಗಳನ್ನು ನೀಡಿದ ಇವರ ಸಾಹಿತ್ಯ ಮಾದರಿ ಭಿನ್ನವಾದದ್ದು. ಪ್ರಗತಿಶೀಲ ಧೋರಣೆಯನ್ನು ಇರಿಸಿಕೊಂಡು ತ.ರಾ. ಸು ಅವರು ಕ್ರಮೇಣ ಆ ನಿಟ್ಟಿನ ಕಥೆಗಳ ಗೋಜಿಗೆ ಹೋಗದೆ ಇರುವುದು ಅವರ ಉತ್ಸಾಹವನ್ನು ಕುಗ್ಗಿಸಿದೆ ಎಂಬುದಕ್ಕೆ ಸುಮಾರು 10 ವರ್ಷಗಳಲ್ಲಿ ಕೇವಲ ಎರಡು ಕಥೆಗಳು ಬರೆದಿರುವುದರ ಬಗ್ಗೆ ಜಿ.ಹೆಚ್ .ನಾಯಕ್ ಅವರು ಉಲ್ಲೇಖಿಸುತ್ತಾರೆ.
ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎಂಬ ಸತ್ಯ ನನಗೆ ಗೋಚರಿಸಿದೆ” ಎಂದಿದ್ದಾರೆ ಎಂಬ ಮಾತನ್ನು ಸಹ ಜಿ.ಎಚ್ .ನಾಯಕ್ ಅವರು ಉಲ್ಲೇಖಿಸುತ್ತಾರೆ.
ಇವರ ಕಥಾ ಸಂಕಲನದ ಮೂಲಕ 0-0=0 ಶೀರ್ಷಿಕೆಯುಳ್ಳ ಕಥೆಯನ್ನು ನಾವು ತೆರೆದ ಮನದಿಂದ ದಿಟ್ಟಿಸಬೇಕಿದೆ. ತ.ರಾ.ಸು ಅವರ ಈ ಕಥೆಯಲ್ಲಿ ಇದರ ಶೀರ್ಷಿಕೆಯಿಂದ ಹಿಡಿದು ಭಾಷಾ ಸೊಗಡು, ಭಾಷೆಯ ವೈವಿಧ್ಯತೆ, ಪಾತ್ರ ವರ್ಣನೆ, ಕಥೆಯ ಸಂವಿಧಾನ, ಕಥಾ ತಂತ್ರ, ಎಲ್ಲವೂ ಭಿನ್ನ ಮಾದರಿಯಲ್ಲಿ ಅಭಿವ್ಯಕ್ತಗೊಂಡಿದೆ. ಕನ್ನಡ ಸಣ್ಣ ಕಥೆಯ ತಂತ್ರದೃಷ್ಟಿಯಿಂದ ಇದೊಂದು ವಿಶೇಷವೇ ಇಲ್ಲಿ ಯಾವುದೇ ತೆರನಾದ ಪಾತ್ರವಿಲ್ಲ. ಇನ್ನು ಆ ಪಾತ್ರಗಳ ಪೋಷಣೆ ಎಲ್ಲಿಂದ ಬರಲು ಸಾಧ್ಯ. ಕೇವಲ ಒಂದು ಸನ್ನಿವೇಶವನ್ನು ಕಟ್ಟಿಕೊಡುವಂತೆ ಇಲ್ಲ. ಈ ಕಥೆಯಲ್ಲಿ ಕೇವಲ ಪ್ರತಿಮೆಗಳು ರೂಪಕಗಳ ಮೂಲಕ ಕಥೆಗಾರ ಮಾತನಾಡುತ್ತಾನೆ ವಿನಹ ಯಾವ ಪಾತ್ರಗಳು ಮಾತಾಡುವುದಿಲ್ಲ. ಮನುಷ್ಯ ಬದುಕಿನ ಸುತ್ತ, ಸಾವು ನೋವಿನ ಸುತ್ತ ಗಿರಿಕಿ ಹೊಡೆಯುತ್ತಲೇ ಮಾನವ ಬಾಳಿನ ಆಗುಹೋಗುಗಳ ಬಗ್ಗೆ ಚರ್ಚಿಸುತ್ತದೆ. ಜಿ.ಹೆಚ್ ನಾಯಕ್ ಅವರು ಈ ಕಥೆಯನ್ನು ಪ್ರಜ್ಞಾ ಪ್ರವಾಹ (Stream of Cansiousness) ತಂತ್ರವನ್ನು ಒಳಗೊಂಡ ಪ್ರಥಮ ಕಥೆ ಎನ್ನುತ್ತಾರೆ. ಈ ಕಥೆಯಲ್ಲಿ ಹೊಸತನವಿದೆ ನಿಜ ಆದರೆ ಆ ಹೊಸತನವನ್ನು ಜೀರ್ಣಿಸಿಕೊಳ್ಳುವ ಪಾಂಡಿತ್ಯಪೂರ್ಣ ಮನೋಭಾವನೆ ಎಷ್ಟಿದೆ ಎಂಬುದು ಕೂಡ ಪ್ರಶ್ನೆಯಾಗಿ ಉಳಿಯುತ್ತದೆ. ಮನುಷ್ಯ ಬದುಕನ್ನು ನೋಡುವುದು ಭಿನ್ನ-ಭಿನ್ನ ದೃಷ್ಟಿಕೋನಗಳಿಂದ ಇಲ್ಲಿ ನಗು ಅಳುವಿನ ಮಿಶ್ರಣ ಕಷ್ಟ ಸುಖಗಳ ಹೂರಣ ಕಥೆಗಾರ ಸಾವು ನೋವಿನ ವಿಚಾರವನ್ನೇ ರೂಪಕಗಳ ಪ್ರತಿಮೆಗಳ ಮೂಲಕ ವಿವರಿಸಲು ತೊಡಗುತ್ತಾರೆ. ಈ ನಶ್ವರ ಬದುಕು ಒಂದು ದಿನ ಸಾವಿಗಾಗಿ ಕಾಯುತ್ತಲೇ ಇರುತ್ತದೆ. ಆ ಒಂದು ದಿನದ ಸಾವು ಈ ಕಥೆಯಲ್ಲಿ ಕಾಣುವ ಗೋಡೆ ಮುರಿದ ಬಾವಿ, ಸಾವಿನ ಭಾವಿ, ಹೀಗೆ ತ.ರಾ.ಸು ಅವರು ಈ ಒಂದು ಭಾವಿ ಕಲ್ಪನೆಯನ್ನು ಇರಿಸಿ ಕೊಂಡು ಮೈದಾನದಲ್ಲಿ ಬಾವಿ, ಮನಸ್ಸಿನಲ್ಲಿ ಭಾವಿ, ಭೀಷಣ,,, ಆಕರ್ಷಕ,,, ಭೀಷಣ,,, ಆಕರ್ಷಣೆ,,, ಅರ್ಥಾತ್ ಸಾವು ಎನ್ನುವಂತದ್ದು ಈ ಕ್ಷಣವೂ ಸಹ ವಿಶೇಷವಾಗಿರತಕ್ಕದ್ದು. ಕಣ್ಣಿಗೆ ಕಾಣದಿದ್ದರೂ ಕತ್ತಲಿನ ಗೂಡನ್ನೇ ಮುಸುಕಿಕೊಂಡಿದ್ದರು, ಸಹ ಸಾವು ಎಂಬುದು ಕಲ್ಪನೆಯಲ್ಲ, ವಾಸ್ತವಿಕ ಸತ್ಯ, ಇಂದಲ್ಲ ನಾಳೆ ಆ ಸಾವು ಎಂಬ ಬೇಟೆ ನಮಗಾಗಿ ಕಾಯುತ್ತಲೇ ಇರುತ್ತದೆ. ಬೇಟೆಗೆ ಕುಳಿತ ಬೇಟೆಗಾರರಂತೆ ಮನುಷ್ಯನನ್ನು ಕೊಂಡೊಯ್ಯಲು ಹೊಂಚು ಹಾಕಿ ಕೂತಿರುವ ಆ ಸಾವಿನ ಭಾವಿ, ಕತ್ತಲೆಯ ಗೋಡೆಯನ್ನು ಪ್ರತಿನಿಧಿಸುತ್ತದೆ.
ಸಾವು ಬರದಿರುವ ತನಕ ಜಗತ್ತಿನ ಬೆಳಕನ್ನೆಲ್ಲ ಮನುಷ್ಯ ನೋಡಿ ಆಸ್ವಾದಿಸಿ ಸಂಭ್ರಮಿಸಬಹುದು. ಆದರೆ ಒಮ್ಮೆ ಸಾವಿನ ಬಾವಿಯನ್ನು ಕಂದಕವನ್ನು ಪ್ರವೇಶಿಸಿದ ಮೇಲೆ ಅಲ್ಲಿ ಬರಿ ಕತ್ತಲೆಯ ಕೂಪವೇ, ಅಲ್ಲಿ ಯಾವ ಬೆಳಕನ್ನು ಬದುಕಿನ ವೈವಿಧ್ಯತೆಯನ್ನು ವೀಕ್ಷಣೆ ಮಾಡಲು ಸಾಧ್ಯವಿಲ್ಲ. ಹಾಗಾದರೆ ಈ ಸಾವಿನ ಬಗ್ಗೆ ಇರುವಂತಹ ಆತಂಕ ಭಯ ಗೊಂದಲ ಇವೆಲ್ಲವೂ ಸಹಜವೇ ಆದರೂ ಸಾವನ್ನು ಯಾವ ಮನುಷ್ಯನು ಹತ್ತಿಕ್ಕಲಾರ. ಆದರೆ ಈ ಒಂದು ಸತ್ಯದ ಶೋಧವನ್ನು ಈ ಕಥೆಯ ಮೂಲಕ ನಿರೂಪಿಸಿದಂತಾಗಿದೆ. ‘ಯಾರಾದರೂ ಸಾಯಬೇಕು ಮಾನವನ ಕಣ್ಣು ತೆರೆಸಲು ಮಾನವ ಸಾಯಬೇಕು ಒಂದರ ಅಂತ್ಯ ಇನ್ನೊಂದರ ಆರಂಭ ಎಂಬುದು ಧ್ವನಿಸುತ್ತದೆ’. ಇಂತಹ ಆರಂಭಕ್ಕೂ ಸಹ ಒಂದು ಅಂತ್ಯ ಇರಲೇಬೇಕು. ‘ಅಂತ್ಯ ಮತ್ತೊಂದಿರ ಆರಂಭ ಕೂಡ ಹೌದು’ . ಈ ಭೂಮಿಯ ಮೇಲೆ ಸಾವಿನ ಒಂದು ಖಚಿತತೆಯೊಂದಿಗೆ ಮನುಷ್ಯ ಹೋರಾಟ ನಡೆಸಲೇಬೇಕು. ಎಂತಹ ಬಿರುಗಾಳಿ ಬೀಸಿದರು ಕೂಡ ಎಡರು ತೊಡರುಗಳು ಕಾಲಿಗೆ ಅಡರಿ ಕೊಂಡಿದ್ದರು ಜೈಸಬೇಕು. ಬದುಕನ್ನು ಇಂತಹ ಸಾವು ಬದುಕಿನ ನಡುವೆ ಕಥೆಗಾರ ಕಥೆಯನ್ನು ಕಟ್ಟಿದ್ದರು ಸಹ ಯಾರಿಗೂ ಅರ್ಥವಾಗದಂತಹ ಗೊಜಲು ಗೊಜಲಾದ ಸಿಕ್ಕಿನ ನಡುವೆ ಕಥೆಯ ಆಶಯ ಉಸಿರುಗಟ್ಟಿ ನಿಂತಂತೆ ಭಾಸವಾಗಿದೆ.
ಕಥೆಯನ್ನು ನಿರೂಪಿಸಲಾಗಿದೆಯೇ ಹೊರತು ಪಾತ್ರಗಳು ಇಲ್ಲ ಹಾಗೂ ಮಾತನಾಡಿಲ್ಲ ಪಾತ್ರ ತಂತ್ರವೇ ಇಲ್ಲದಿದ್ದ ಮೇಲೆ ಪಾತ್ರಗಳನ್ನು ಕಥೆಗಾರ ಮಾತಾಡಿಸುವ ಬಗೆಯಾದರೂ ಹೇಗೆ? ಕಥೆಯಲ್ಲಿ ಪಾತ್ರಗಳಿರದ ಮೇಲೆ ಪ್ರೇಮ, ಪಣಯ, ಪ್ರೀತಿಯಾದರೂ ಹೇಗೆ ಬಿಂಬಿಸುತ್ತಾರೆ ಯಾರ ಮೂಲಕ ಹೇಳಿಸುತ್ತಾರೆ, ಕೇವಲ ರೂಪಕ ಪ್ರತಿಮೆಗಳೆ ಕಥೆ ಹೇಳುವಂತಾಗದೆ.ಹಾಗಾಗಿ ಪಾತ್ರಗಳ ಅಗತ್ಯತೆ ಇಲ್ಲವಾಗಿಸಿದೆ.ಎಂದೋ ಬರುವ ಸಾವಿಗೆ ಮನುಷ್ಯನೆಂದು ಕಾದು ಕುಳಿತಿರಲಾರ.ಕಾದು ಕುಳಿತಿರುವ ಮನದಲ್ಲಿ ನಿರೀಕ್ಷೆಗೂ ಮೀರಿದ ತಲ್ಲಣ ತಳಮಳ ಇದ್ದೇ ಇರುತ್ತದೆ. ಸಾವಿಲ್ಲದ ಮನೆಯ ಸಾಸಿವೆಯನ್ನು ಹೇಗೆ ತರಲು ಸಾಧ್ಯವಿಲ್ಲವೋ ಹಾಗೆ ಹೊಯ್ದಾಟಗಳಿರದ ಬಾಳನ್ನು ನೋಡಲು ಸಾಧ್ಯವಿಲ್ಲ. ಮಾನವ ಸಹಜ ಪ್ರೀತಿ ಪ್ರೇಮ ಪ್ರಣಯಗಳು ಮೂರ್ತ ಅಮೂರ್ತ ಭಾವ ಸಂಕೇತಗಳಲ್ಲಿ ಕಳೆದುಳಿದು ನಂತರ ಉಳಿಯುವ ಸಾವಿನ ಸಂಕೇತವಾಗಿ ಈ ಕಥೆಯಲ್ಲಿ ಭಾವಿಯು ಒಂದು ರೂಪಕವಾಗಿ ಗೋಚರಿಸುತ್ತದೆ. ಕಥೆ ಏನನ್ನು ದ್ವನಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಈ ಕಥೆ ಪೂರ್ಣಗೊಂಡಿರುತ್ತದೆ.
“ಬಯಲು,, ಬಯಲನೆ, ಕೂಡಿ ಬಯಲಾಗಿತ್ತು” ಎನ್ನುತ್ತಾ ಕಥೆ ಪೂರ್ಣಗೊಳ್ಳುತ್ತದೆ. ಬದುಕನ್ನು ಆಧ್ಯಾತ್ಮಿಕ ನಿಲುವಿನಲ್ಲಿ ನೋಡುವ ಕ್ರಮ ಹಾಗೂ ಪದ ಲಾಲಿತ್ಯಗಳ ಒಂದು ಸೊಬಗು ಕಾಣುತ್ತೇವೆ. ಮನುಷ್ಯ ಬದುಕಿನ ಸಾವು ನೋವಿನೊಂದಿಗೆ ಬೆಳಕು, ಬೆಳಕಿನೊಂದಿಗೆ ಮತ್ತೆ ಕತ್ತಲು ಹೀಗೆ ಓದುಗರನ್ನು ಕಾಡುತ್ತದೆ. “ಸಂಕೇತ ಪ್ರತಿಮೆ ಇತ್ಯಾದಿ ಅಭಿವ್ಯಕ್ತಿ ಪರಿಕರಗಳ ಗಜಿಬಿಜಿ ಇಂದಾಗಿ ಒಂದಕ್ಕೊಂದಕ್ಕೆ ಒಳ ಸಂಬಂಧ ಏರ್ಪಡದೆ ಕೇಳಿಸಬೇಕಾದ ತಾತ್ವಿಕ ಧ್ವನಿಯಲ್ಲಿ ನರಳುವಿಕೆ ಉಂಟಾಗಿದೆ”-(ಜಿಹೆಚ್ ನಾಯಕ್) ಈ ಕಥೆಯಲ್ಲಿ ಭಿನ್ನ ಮಾದರಿಯ ತಂತ್ರಗಳನ್ನು ಅಳವಡಿಸಿದ್ದರು ಸಹ ಸಾಮಾನ್ಯ ಓದುಗನಿಗೆ ನಿಲುಕದ ವಸ್ತು ವಿಷಯ ಹಾಗೂ ಅರ್ಥಸ್ಮರಣೆಗೆ ಗ್ರಹಿಕೆಗೆ ದಕ್ಕಿಸಿಕೊಳ್ಳಲಾರದ ಕಥಾ ಸಂವಿಧಾನ ಎನ್ನಬಹುದಾಗಿದೆ.
- ವಾಣಿ ಭಂಡಾರಿ
"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
©2024 Book Brahma Private Limited.