ವಿಶ್ವರಂಗಭೂಮಿ ದಿನಾಚರಣೆ ಮತ್ತು  ಕುಸಿಯುತ್ತಿರುವ ರಂಗಮೌಲ್ಯಗಳು   

Date: 01-04-2023

Location: ಬೆಂಗಳೂರು


''ಜನಾಭಿರುಚಿ ಜಲಪಾತದಂತೆ ಜರ್ರನೆ ಜರಿದು ಪತನದ ಹಾದಿ ಹಿಡಿಯುವಲ್ಲಿ ಅವುಗಳ ಪಾತ್ರ ಹಿರಿದು. ಅದಕ್ಕಾಗೇ ಕೆಲವು ಮಾಧ್ಯಮಗಳು ಟೊಂಕಕಟ್ಟಿ ನಿತಾಂತ ನಿಂತಿರುವುದು ಅಷ್ಟೇನು ನಿಗೂಢವೇನಲ್ಲ. ವರ್ತಮಾನದ ರಂಗಭೂಮಿಯನ್ನು ನಿಚ್ಚಳ ಕಣ್ಣುಗಳಲ್ಲಿ ನೋಡುವ ಯತ್ನ,'' ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, “ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು” ಕುರಿತು ಲೇಖನವನ್ನು ಬರೆದಿದ್ದಾರೆ.

ಪ್ರತಿ ವರ್ಷವೂ ಮಾರ್ಚ್ ಇಪ್ಪತ್ತೇಳರಂದು ವಿಶ್ವಾದ್ಯಂತ ವಿಶ್ವರಂಗಭೂಮಿ ದಿನಾಚರಣೆ ಆಚರಿಸಲಾಗುವುದು. ಕನ್ನಡ ರಂಗಭೂಮಿ ಅದಕ್ಕೆ ಹೊರತಲ್ಲ. ಅದನ್ನು ಈ ವರುಷವೂ ಸರಕಾರದ ದಿನಾಚರಣೆಗಳಂತೆ ಆಚರಿಸಿ, ಒಂದು ನಾಟಕವಾಡಿ, ವಿಶ್ವರಂಗಭೂಮಿ ಸಂದೇಶ ಓದಿ, ಕಲಾವಿದರನ್ನು ಸತ್ಕರಿಸಿ ಸುಮ್ಮನಾಗುವುದು ಕ್ಷಣಭಂಗುರದ ಕ್ರಿಯೆಯಂತಾಗಿದೆ. ನಾಟಕ ಪ್ರದರ್ಶನಗಳನ್ನೇ ಕಾಯಕವಾಗಿಸಿಕೊಂಡ ನಮ್ಮ ಅನೇಕರು ರಂಗಸಂಸ್ಕೃತಿ ಕುರಿತು ಈ ದಿನವಾದರೂ ಗಂಭೀರ ಚಿಂತನೆಗೆ ತೊಡಗುವುದು ಬೇಡವೇ.?

ರಂಗಭೂಮಿ ಎಂದರೆ ಕೇವಲ ನಾಟಕಗಳ ಪ್ರದರ್ಶನ ಮಾತ್ರವಲ್ಲ. ಅದೊಂದು ಬಹುತ್ವ ಆಯಾಮಗಳ ಜೀವನ ಪ್ರೀತಿ ಹುಟ್ಟಿಸುವ ಜನಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮ. ರಂಗಮಂಚ ಪದ ಸೇರಿದಂತೆ ಬೇರೆ, ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಥಿಯೇಟರ್ ಅಸ್ಮಿತೆ ಗುರುತಿಸಲಾಗಿದೆ. ಆದರೆ ಕನ್ನಡದಲ್ಲಿ ಅದಕ್ಕೆ ವಿಶೇಷ ಸ್ಥಾನಮಾನ. ಅದು ಬರೀ ಕಲಾಪ್ರಕಾರವಾಗಿ ಪರಿಗಣಿತವಾಗದೇ ಅದನ್ನು 'ರಂಗಭೂಮಿ' ಎಂದು ಕರೆದು ಭೂಮತ್ವದ ಮಹತ್ವ ನೀಡಲಾಗಿದೆ. ಅದೊಂದು ವಿಭಿನ್ನ ರಂಗಸಂಸ್ಕೃತಿಯೂ ಆಗಿದೆ.

ವರ್ತಮಾನದ ರಂಗಭೂಮಿ, ಸಿನೆಮಾ, ಕಿರುತೆರೆ, ಸಾಮಾಜಿಕ ಜಾಲತಾಣ ಹೀಗೆ ಬಹುಪಾಲು ದೃಶ್ಯಮಾಧ್ಯಮಗಳು ಹೊರಳು ಹಾದಿಯಲ್ಲಿವೆ. ಅವು ಸಾಂಸ್ಕೃತಿಕ ಸ್ವಾಯತ್ತತೆ ಕಳಕೊಳ್ಳುತ್ತಿವೆ. ದುರಂತವೆಂದರೆ ಬೃಹತ್ ಬಂಡವಾಳದ ಅವನ್ನು ಅಭಿವ್ಯಕ್ತಿ ಮಾಧ್ಯಮದ ಕ್ರಾಂತಿಯಂತೆ ಬಿಂಬಿಸಲಾಗುತ್ತಿದೆ. ಜನಾಭಿರುಚಿ ಜಲಪಾತದಂತೆ ಜರ್ರನೆ ಜರಿದು ಪತನದ ಹಾದಿ ಹಿಡಿಯುವಲ್ಲಿ ಅವುಗಳ ಪಾತ್ರ ಹಿರಿದು. ಅದಕ್ಕಾಗೇ ಕೆಲವು ಮಾಧ್ಯಮಗಳು ಟೊಂಕಕಟ್ಟಿ ನಿತಾಂತ ನಿಂತಿರುವುದು ಅಷ್ಟೇನು ನಿಗೂಢವೇನಲ್ಲ. ವರ್ತಮಾನದ ರಂಗಭೂಮಿಯನ್ನು ನಿಚ್ಚಳ ಕಣ್ಣುಗಳಲ್ಲಿ ನೋಡುವ ಯತ್ನ.

ಒಂದು ಕಾಲದಲ್ಲಿ ಅವಿಭಜಿತ ಕುಟುಂಬ ಪ್ರೀತಿ, ಖರೇ ಖರೇ ದೇಶಭಕ್ತಿ, ಸಮಷ್ಟಿ ಗೌರವ, ರಸಾನುಭೂತಿ, ಅಂತಃಕರಣಗಳ ಭಾವಾಭಿವ್ಯಕ್ತಿಯಂತಿದ್ದ ಲೋಕಪ್ರಿಯ ನಾಟಕಗಳು ಹೃದಯಸ್ಪರ್ಶಿ ಸಂವೇದನೆಗಳನ್ನು ಕಳಕೊಂಡು ಸದಭಿರುಚಿ ಸಂಸ್ಕೃತಿಯಿಂದ ದೂರ ಸರಿದಿವೆ. ಅರ್ಥದ ಅಪಮೌಲ್ಯದಿಂದ ಅವುಗಳ ಆತ್ಮದ ಸ್ವರೂಪ ಸೊರಗಿ ಸುಣ್ಣವಾಗಿದೆ. ಅವಕ್ಕೆ ಅಸ್ಮಿತೆಯ ಸವಾಲು ಒಂದೆಡೆಯಾದರೆ, ಒಟ್ಟು ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಅವಲೋಕಿಸಿದಾಗ ಗ್ಲೋಬೀಕರಣದ ಘೋರ ಪರಿಣಾಮಗಳು ರಂಗಭೂಮಿಯನ್ನು ಧೃತಿಗೆಡಿಸಿರುವುದು ದೃಗ್ಗೋಚರ. ವಿದ್ಯುನ್ಮಾನ ಮಾಧ್ಯಮ 'ಷೋ'ಗಳ ಜತೆಗಿನ ಪೈಪೋಟಿಗಿಳಿದು ಡಿಜಿಟಲ್‌ ತಲ್ಲಣದ ಸುಂಟರಗಾಳಿಗೆ ಸಿಲುಕಿವೆ.

ಆ ಕುರಿತು ಅಧ್ಯಯನಗಳ ಅಗತ್ಯವಿದೆ. ಇದುವರೆಗೆ ಜರುಗಿದ ಅಧ್ಯಯನಗಳು ವೃತ್ತಿರಂಗ ಪ್ರಾಕಾರ (form) ಕುರಿತಾದ ಚಾರಿತ್ರಿಕ ಅಂಶಗಳು, ಬಯೋಪಿಕ್ ಮಾದರಿಯ ಕಥನಗಳು ಮಾತ್ರ. ವಿಶ್ಲೇಷಣಾತ್ಮಕ ಮತ್ತು ತಾರ್ಕಿಕ ಸಂವಾದಗಳು ಜರುಗಿಲ್ಲ. ವೃತ್ತಿ ರಂಗಭೂಮಿಯ 'ಜೀವಚೈತನ್ಯ' ಗುರುತಿಸುವ ವೈಜ್ಞಾನಿಕ ಅಧ್ಯಯನ ಆಗಿಲ್ಲ. ನಾನಾ ಜ್ಞಾನಸಾರ ಶಿಸ್ತುಗಳ ಚಾಳೀಸು ಮೂಲಕ ನೋಡುವುದು ದುಸ್ತರದ ಮಾತೇ ಸರಿ. ವಿಶ್ವವಿದ್ಯಾಲಯಗಳ ಪಿ. ಎಚ್ಡಿ. ಪ್ರಬಂಧಗಳು ನೌಕರಿಗೆ ಮೀಸಲಾದ ಅವಾರ್ಡುಗಳಷ್ಟೇ.

ವೃತ್ತಿ ರಂಗನಾಟಕಗಳನ್ನು ಪ್ರಯೋಗ - ಪ್ರದರ್ಶನಗಳಿಗೆ ಮಿತಿಗೊಳಿಸಿ ಅವುಗಳ ಮಹತ್ವ ನಿರ್ಧರಿಸಲಾಗದು. ಅದರಾಚೆ ಅವುಗಳಿಗೆ ಸಾಮಾಜಿಕವಾದ ಬಹುದೊಡ್ಡ ಆಯಾಮಗಳಿವೆ. ಸಾಂಸ್ಕೃತಿಕ ಅಂತರ್ ಸಂಬಂಧಗಳಿವೆ. ಜನಸಾಮಾನ್ಯರ ಬದುಕಿನೊಳಗೆ ಹಾಸುಹೊಕ್ಕಾದ ಪ್ರಜಾಸತ್ತಾತ್ಮಕ ಬಾಹುಳ್ಯದ ಪ್ರೀತ್ಯಾದರಗಳಿವೆ. ಲೋಕಸಂಸ್ಕೃತಿಯ ದಟ್ಟಪ್ರಭಾವದ ಬೇರುಗಳಿವೆ. ಅಂತಹ ಅಸ್ಮಿತೆಯ ಹುಡುಕಾಟ, ಸಂಶೋಧನೆಗಳ ಅಗತ್ಯವಿದೆ.

ವಚನ ಚಳವಳಿ ಕಾಲದ ಬಹುರೂಪಿ ಚೌಡಯ್ಯನ ಕಾಯಕವೇ ಬಹುರೂಪದ ರಂಗವೃತ್ತಿ. ಆತ ಪ್ರಪಂಚದ ಪ್ರಪ್ರಥಮ ವೃತ್ತಿ ರಂಗಕರ್ಮಿ. ಇಂತಹ ಬಹುಳ ಪ್ರಜ್ಞೆಯ ಕಾಯಕ ಪ್ರಕಾರವನ್ನು ರಂಗೇತಿಹಾಸಕಾರರು ಪ್ರಧಾನ ಸಂಸ್ಕೃತಿ ಧಾರೆಗೆ ನೇರ್ಪುಗೊಳಿಸಲಿಲ್ಲ. ವಿಸ್ತೃತ ಚರ್ಚೆಗಳು ಜರುಗಲಿಲ್ಲ. ಅಷ್ಟೇಯಾಕೆ ಕನ್ನಡದ ಸಮಗ್ರ ರಂಗಸಂಸ್ಕೃತಿಯ ಅರಿವು, ಆಲೋಚನೆಗಳನ್ನು ಕಟ್ಟುವ ಗಂಭೀರ ಚಿಂತನೆಗಳು ಇದುವರೆಗೂ ನಡೆದಿಲ್ಲ.

ಅಚ್ಚರಿಯೆಂದರೆ ಮೀಮಾಂಸಕರು ಅಂಥದ್ದೊಂದು ಸಾಂಸ್ಕೃತಿಕ ಚಿಂತನೆಯನ್ನೇ ಸಂದೇಹಿಸಿದರು. ಇನ್ನೊಂದೆಡೆ ಪ್ರಯೋಗಶೀಲ, ವೈಚಾರಿಕ ನೆಲೆಗಟ್ಟಿನ ಹೊಸ ಅಲೆಯ ಬಹುಪಾಲು ನಾಟಕಗಳು (ಎಲೈಟ್ ಮಂದಿಯ ತಲಸ್ಪರ್ಶಿ ಥಿಯೇಟರ್) ಬೌದ್ಧಿಕ ತಂತ್ರಗಳ ಸಾಹಚರ್ಯದಲ್ಲಿ ಕಳೆದು ಹೋದವು. ಜನಮಾನಸಕ್ಕೆ ಮುಟ್ಟದಿರುವುದೇ ಪ್ರಸ್ತಾಪಿತ ಅಧ್ಯಯನಗಳ ಅಗತ್ಯಗಳನ್ನು ಒತ್ತಿ ಹೇಳುತ್ತದೆ. ಇಂತಹ ಹತ್ತು ಹಲವು ಅಪಸವ್ಯಗಳ ನಡುವೆಯೂ ವೃತ್ತಿರಂಗಭೂಮಿ ಬಗ್ಗೆ ಗ್ರಾಮೀಣ ಜನಸಾಮಾನ್ಯರು ಉತ್ಕಟ ಪ್ರೀತಿ, ಭರವಸೆ ಉಳಿಸಿಕೊಂಡಿದ್ದಾರೆ. ಆದರೆ ಅದೊಂದು ಕಲಾರಂಗ ಪ್ರಾಕಾರವಾಗಿ ಸಾಂಸ್ಕೃತಿಕ ಸ್ವಾಯತ್ತತೆ ಕಳಕೊಂಡಿದೆ. ಡೈಲ್ಯೂಟ್ ಆಗುತ್ತಿರುವ ಸಾಧ್ಯತೆಯ ಕ್ಷಿತಿಜ ವಿಸ್ತಾರಗೊಳ್ಳುತ್ತಲಿದೆ.

ಬದಲಾದ ಕಾಲಘಟ್ಟದಲ್ಲಿ ವೃತ್ತಿರಂಗ ನಾಟಕಗಳ ಸ್ವರೂಪ, ವೃತ್ತಿಪರತೆ ಮತ್ತು ವೃತ್ತಿನಿರತೆ ಬದಲಾಗಿವೆ. ಈ ಬದಲಾವಣೆ ಸಾಂಸ್ಕೃತಿಕ ಸ್ಥಿತ್ಯಂತರವಲ್ಲ. ಬದಲಾಗಿ ಅದೊಂದು ಅಸ್ವಾಸ್ಥ್ಯ ಬೆಳವಣಿಗೆ. ಗಲ್ಲಾಪೆಟ್ಟಿಗೆ ಕೇಂದ್ರಿತ ಏಕ ಶಿಲಾಕೃತಿಯ ತೇಜೀ ಮಂದೀ ಪ್ರವಾಹದಾಟ. ಯಾವುದೇ ಕಲೆಗಳು ಕಮರ್ಸಿಯಲ್ ಆದಾಗ ಸಾಂಸ್ಕೃತಿಕ ಮಾಧುರ್ಯ, ಅಂತಃಸ್ಫುರಣದ ಸೃಜನಶೀಲತೆ ಕಳಕೊಳ್ಳುತ್ತವೆ. ಅವಕ್ಕೆ ಮಾರುಕಟ್ಟೆ ಕಲಬೆರಕೆಯ ಬೆರಕಿತನ ಪ್ರಾಪ್ತಿ. ಅಂತೆಯೇ ಅವೀಗ ಫುಲ್ ಕಾಮೆಡಿ ಟೈಟಲ್ ನಾಟಕಗಳು. ಸದಭಿರುಚಿ ಸಂಸ್ಕೃತಿಯ ಮನುಷ್ಯ ಸಂಬಂಧಗಳನ್ನು ತೆಳುವಾಗಿಸಿ, ವಿವೇಕ ಮತ್ತು ವಿನೋದ ಪ್ರಜ್ಞೆಯ ಜಾಗದಲ್ಲಿ ವಿಕೃತಿಯ ಪರಿಹಾಸ. ರಂಗಸೂಕ್ಷ್ಮತೆ, ಸಂವೇದನಾಶೀಲ ಕಲಾತ್ಮಕತೆ ನಾಪತ್ತೆ.

ವೃತ್ತಿರಂಗ ನಟಿಯೊಬ್ಬಳು ನಿರ್ದೇಶಿಸಿ, ನಟಿಸಿದ ಅರಿಶಿಣಗೋಡಿಯವರ ''ಬಸ್ ಕಂಡಕ್ಟರ್'' ಎಂಬ ಸಾಮಾಜಿಕ ಕಾಳಜಿಯ ಸುಂದರ ನಾಟಕವನ್ನು ಅವರು
ತಮ್ಮ ಶಕ್ತಿಮೀರಿ ವಿಕೃತಗೊಳಿಸಿದ್ದಾರೆ. ಸಖೇದಾಶ್ಚರ್ಯ ಎಂದರೆ ಖಾಸಗಿ ಸ್ಟುಡಿಯೋ ಇದರ ಕ್ಯಾಸೆಟ್ ತಯಾರಿಸಿ ಯಥೇಚ್ಛ ಹಣ ಗಳಿಸಿದೆ. ಇಂತಹ ಹತ್ತಾರು ನಿದರ್ಶನಗಳಿವೆ.

ಲೋಕೋಪಯೋಗಿ ಸರಕಿನಂತೆ ಕ್ಯಾಸೆಟ್ಟುಗಳು ಹವ್ಯಾಸಿ ರಂಗಭೂಮಿಯ ಗ್ರಾಮೀಣರಿಗೆ ರೋಲ್ ಮಾಡೆಲ್. ಇಂತಹ ಹತ್ತಾರು ದುರ್ಚಾಳಿಯ ಮಾಡೆಲ್ಲುಗಳಿವೆ. ತನ್ಮೂಲಕ ಕವಿ ಮತ್ತು ರಂಗಸಂಸ್ಕೃತಿಗೆ ಅಪಚಾರ. ಈಗಲೂ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ವರ್ಷಕ್ಕೆ ಅಜಮಾಸು ಹದಿನೈದು ಸಾವಿರಕ್ಕೂ ಹೆಚ್ಚು ಇಂತಹ ರಂಗನಾಟಕಗಳ ಪ್ರದರ್ಶನ. ದುರಂತವೆಂದರೆ ಅದಕ್ಕಾಗಿ ಗ್ರಾಮೀಣ ಹವ್ಯಾಸಿ ಕಲಾವಿದರು ಸರ್ಕಾರದ ಕಿಲುಬು ಕಾಸಿಗೆ ಜೋತುಬೀಳದೇ ಸ್ವಂತ ಖರ್ಚಿನಲ್ಲೇ ಇಂತಹ ಸಡಗರ ಮೆರೆಯುತ್ತಾರೆ.

ಅಭಿನಯ, ರಂಗಸಂಗೀತ, ರಂಗಸಜ್ಜಿಕೆಯ ಪ್ರಮುಖ ಪರಂಪರೆಗೆ ಕೊಡಲಿಪೆಟ್ಟು. ಬದಲಿಗೆ ಚಲನಚಿತ್ರಗಳ ಅತಿರೇಕದ ಅನುಕರಣೆ. ಅಲ್ಲೆಲ್ಲೂ ಕಂದಪದ, ವೃತ್ತಪದ, ಸೀಸ ಪದದ ರಂಗಗೀತೆಗಳ ಸುಳಿವಿಲ್ಲ. ಅಧಿಕಾರಿಗಳ ಕೆಂಗಣ್ಣಿನಿಂದಾಗಿ ಐಟಂ ನೃತ್ಯಗೀತೆಗಳಿಲ್ಲವಷ್ಟೇ. ಆ ಕೆಲಸ ಸುಲಭದಲ್ಲೇ ಹಾಸ್ಯನಟಿಯೋ, ಇಲ್ಲವೆ ಹೀರೋಯಿನ್ ಅನಾಯಾಸ ನಿಭಾಯಿಸುತ್ತಾರೆ. ಕೆಟ್ಟ ಸಿನೆಮಾ ಹಾಡುಗಳ ಅಟ್ಟಹಾಸ. ಝಗಮಗಿಸುವ, ವರ್ಣರಂಜಿತ ರಂಗಸಜ್ಜಿಕೆಗಳ ವೈಭವ ಮೆರೆದ ಅದೀಗ ಅಲ್ಲಲ್ಲಿ ಫ್ಲೆಕ್ಸ್, ನೀಲಿ ಪರದೆಗೂ ನಿಲುಕುವಂತಾಗಿದೆ.

ಇಂತಹ ಅನೇಕಾನೇಕ ಸವಾಲುಗಳ ನಡುವೆಯೂ ಗದುಗಿನ ಗವಾಯಿಗಳ ಕಂಪನಿ, ಇನ್ನೂ ಒಂದೆರಡು ಕಂಪನಿಗಳು ಪರಂಪರೆಯ ದ್ಯೋತಕವಾಗಿವೆ. ಕೆಲವು ಜಾತ್ರೆಗಳ ಕ್ಯಾಂಪುಗಳಲ್ಲಿ ನಾಟಕ ಕಂಪನಿಗಳು ಪರಾಧೀನ. ಅಲ್ಲೆಲ್ಲ ಖಾಸಗಿ ಕಲ್ಚರಲ್ ಮಾಫಿಯಾಗಳದ್ದೇ ಕಪಿಮುಷ್ಟಿ. ಇದರಿಂದ ಕಂಪನಿಗಳಿಗೆ ತೀವ್ರ ಹಿನ್ನಡೆ. ಮುಖ್ಯವಾಗಿ ಕಲಾವಿದರ ಹೊಟ್ಟೆಪಾಡಿನ ಪ್ರಶ್ನೆ. ಹೀಗಿರುವಾಗ ಸಾಂಸ್ಕೃತಿಕ ಸ್ವಾಯತ್ತತೆ ಸಾಧ್ಯವೇ.? ಹೊಸ ಅಲೆಯ ಪ್ರಯೋಗಶೀಲ ರಂಗಭೂಮಿ, ಕಿರುತೆರೆ, ಸಿನೆಮಾಗಳು ಸಹಿತ ಸಾಂಸ್ಕೃತಿಕ ಸ್ವಾಯತ್ತತೆ ಉಳಿಸಿಕೊಳ್ಳಲಾಗಿಲ್ಲ.

ಇತ್ತೀಚೆಗೆ ಮೇಲುಗೈ ಸ್ಥಾಪಿಸುತ್ತಿರುವ ಕಿರುತೆರೆಯ ಕೆಲವು ಕಾಮೆಡಿ ಶೋಗಳದು ಇಂಥದೇ ಮಲಿನ ಮಾತುಕತೆ. ಕಾಮೆಡಿ ಷೋಗಳ ಒಂದೆರಡು ಸ್ಯಾಂಪಲ್ ಆನುಷಂಗಿಕವಾಗಿ ಓದಲೇಬೇಕು :

ನಿಮ್ಮಣ್ಣ ನಿನಗ ಖರ್ಚಿಗೆ ಹಣ ಕೊಡ್ಲಿಲ್ಲಂತ, ನೀನು ಅವನ ಒಂದ್ ಕೈ ಕಟ್ ಮಾಡಿದಿ. ಅಕಸ್ಮಾತ್ತಾಗಿ ನಿಮ್ಮಣ್ಣಗ ಮಕ್ಕಳಾಗದಿದ್ರ ಏನ್ ಕಟ್ ಮಾಡ್ತಿದ್ದಿ.?

ಜಗ್ಗಣ್ಣ ಒಂದ್ ವಿಷಯ ಗೊತ್ತಾ.? ಮದುವಿಗಿಂತ ಮೊದ್ಲು ನನ್ ಬಂದೂಕು ಹೀಂಗ ನೆಟ್ಟಗ ನಿಂತ್ಕೊತಿತ್ತು ಅಂತ ಮುಷ್ಟಿ ಮಾಡಿದ ಮೊಳದುದ್ದ ಕೈ ನೆಟ್ಟಗೆ ನಿಲ್ಲಿಸಿ, ಮದುವಿ ಆದಮ್ಯಾಲ ನನ್ನ ಬಂದೂಕ ಠುಸ್ಸಂತ ಮಲಗಿತೆಂದು ನೆಟ್ಟಗಿನ ಮುಷ್ಟಿ ಕೆಳಗಿಳಿಸುತ್ತಾನೆ ಆ ಕಲಾವಿದ.
ಸಧ್ಯಕ್ಕೆ ಇವೆರಡೇ ಉದಾಹರಣೆ ಸಾಕು.

ನಾಟಕಕಾರನ ರಂಗಕೃತಿಯ ಮೂಲ ಆಶಯಗಳೆಲ್ಲ ಮಣ್ಣುಪಾಲಾಗುತ್ತಿವೆ. ಔಚಿತ್ಯವನ್ನೇ ಕಂಗೆಡಿಸುವ ಕೈಗಂಟು ಸಂಭಾಷಣೆಗಳ ಕಿಲುಬಾಟ. ಪಾತ್ರ ಮತ್ತು ಪೂರ್ಣಪ್ರಮಾಣದ ರಂಗಪಠ್ಯ ಆವಾಹನೆ ಮಾಡಿಕೊಂಡು ಅಭಿನಯ ಬದುಕುವುದನ್ನು ಅರಿಯದಿದ್ದರೆ ಅದು ನಟನೆ ಆಗಬಹುದೇ ಹೊರತು ಅಭಿನಯವಲ್ಲ. ಅಭಿನಯವೆಂಬುದು ನಟನು ವಿನಯವಂತನಾಗುವುದು. ಮತ್ತೊಂದು ಉಲ್ಲೇಖಾರ್ಹ ಕಮೆಂಟ್ ಏನೆಂದರೆ : ಯಾವುದೋ ಕಾಲದ ಸವಕಲಾಗಿರುವ ಹಳಸಲು ರಂಗಧಾತುಗಳ ಮರುಕಳಿಕೆ.

ಪ್ರತಿನಾಯಕನ ಬದಲಿಗೆ ಖಳನಾಯಕನ ಖದರ್. ಅತಿರೇಕದ ಆಗರ. ಅಬ್ಬಾ! ಅಲ್ಲಿ ಖಳನಾಯಕನ ಆಗಮನವೆಂದರೆ ಥೇಟ್ ಸಿನೆಮಾ ವಿಲನ್ ಎಂಟ್ರಿಯೇ. ತುಟಿಯಂಚಲಿ ಸಿಗರೇಟಂತೂ ಖಾಯಂ. ಅಪ್ಡೇಟ್ ಏನೆಂದರೆ ಇತ್ತೀಚಿನ ತೆಲುಗು, ಹಿಂದಿ ವಿಲನ್ ಸ್ಟೈಲ್. ಪ್ರೇಕ್ಷಕರ ಕಿವಿಗಡಚಿಕ್ಕುವ ವಾದ್ಯಗಳ ಕಿರುಚಾಟ. ಖಳನಾಯಕನ ದೇಹ ಮತ್ತು ಧ್ವನಿಗಳ ಕಲಾತ್ಮಕತೆ ನೆಗೆದು ಬಿದ್ದು ಹುಳಿಗಟ್ಟುವ ಆರ್ಭಟ.

ಸಕಾರಾತ್ಮಕವಾದ ಸಾಂಸ್ಕೃತಿಕ ಸ್ಥಿತ್ಯಂತರಗಳ ಕೊರತೆ ಢಾಳಾಗಿ ಕಾಣುತ್ತಿದೆ. ಆದರೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಪೌರಾಣಿಕ ನಾಟಕಗಳು ಸೃಜನಶೀಲತೆ ಮತ್ತು ರಂಗಶಿಸ್ತು ಕಾಪಿಟ್ಟುಕೊಂಡಿರುವುದು ಖಂಡಿತಾ ಶ್ಲಾಘನೀಯ.

ವೃತ್ತಿನಾಟಕಕಾರರೆಂದರೆ ಕರುಳಿನ ಕಥೆಗಾರರು. ಅಂತೆಯೇ ಅವರನ್ನು ಕವಿಗಳೆಂದು ಕರೆಯಲಾಯಿತು. ಅವರು ವೃತ್ತಿರಂಗಭೂಮಿಯ ಪೂರ್ವಸೂರಿಗಳು. ಅವರ ಗಂಭೀರ ಓದು ಮತ್ತು ಸಾಹಿತ್ಯಾಧ್ಯಯನ ಸಮಕಾಲೀನ ಕವಿಗಳಲ್ಲಿ ಇಲ್ಲವೇ ಇಲ್ಲ.

ಹೀಗಾಗಿ ಇಂದಿನವರು ಸಿದ್ಧಸಾಹಿತ್ಯ ಸೂತ್ರದ ನಾಟಕಕಾರರು. ಕುವೆಂಪು, ಅನಕೃ, ತರಾಸು, ಬೇಂದ್ರೆ, ಬೀಚಿಯಂತಹ ವಾಙ್ಮಯ ಲೋಕದ ಪ್ರಾಜ್ಞರು, ವಿದ್ವಜ್ಜನರು, ಸಾಹಿತಿಗಳು ವೃತ್ತಿ ನಾಟಕಗಳಿಗೆ ಮುಖಾಮುಖಿಗೊಂಡು ಪರಂಪರೆಯನ್ನು ಪ್ರೀತಿಸಿ ಪೊರೆದ ಕಾಲವಿತ್ತು. ಈಗ ಯಾಕಿಲ್ಲವೆಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

ಹಳೆಯ ನಾಟಕಗಳಿಂದ ಚೂರುಪಾರು ಎತ್ತಿಕೊಂಡು, ಉಳಿದಂತೆ ತೆಳುಹಾಸ್ಯವೆಲ್ಲ ಕಲಾವಿದರ ಕೈಗಂಟು ಕೊಡುಗೆ. ಇದು ಸಮಕಾಲೀನ ಕೆಲವರ ನಾಟಕ ರಚನೆಯ ತಂತ್ರಗಾರಿಕೆ. ಇಷ್ಟಕ್ಕೆ ಸಮಾಧಾನಗೊಳ್ಳದೆ, ಹಳೆಯ ನಾಟಕಗಳಿಗೇ ಕೆಟ್ಟ ಕೆಟ್ಟದಾದ ಹೊಸ ಹೆಸರಿಡುವ ಪೊಗರಿನ ಪರಿಪಾಟ.

ಮಾವ ಮಂದ್ಯಾಗ ಸೊಸೆ ಸಂದ್ಯಾಗ, ನೋಡ್ಯಾಳ ರೊಕ್ಕ ಬಂದಾಳ ಪಕ್ಕ, ಹೆಣ್ಣಿಗೆ ಹಟ ಗಂಡಿಗೆ ಚಟ, ಹೌದಲೇ ರಂಗಿ ಊದಲೇನ ಪುಂಗಿ, ನಿಶೆ ಏರಿಶ್ಯಾಳ ನವರಂಗಿ, ಮಬ್ಬ ಹಿಡಿಸ್ಯಾಳ ಮದರಂಗಿ, ಸರಾಯಿ ಅಂಗಡಿ ಸಂಗವ್ವ... ಇವು ಕೆಲವು ಹೊಸ ನಾಟಕಗಳ ಹೊಸ ಹೆಸರುಗಳು. ಈ ಹೆಸರುಗಳಲ್ಲಿ ಅಕ್ಷರಶಃ ಬಳಕೆಗಮ್ಯ ಗ್ರಾಹಕತ್ವದ ಗುಣವಿದೆ. ನಾಟಕದ ಹೆಸರಲ್ಲೇ ಹೆಣ್ಣಿನ ಶೋಷಣೆಯ ಧ್ವನಿ ಇದೆ. ಹೆಣ್ಣಿನ ಹೆಸರನ್ನು ಸರಕಿನಂತೆ ಬಳಸುತ್ತಿರುವುದು ಖಂಡನೀಯ. ಅತಿರೇಕಗಳ ಭಾರಕ್ಕೆ ಥಿಯೇಟರ್ ಎಥಿಕ್ಸ್ ಕುಸಿಯುತ್ತಿದೆ. ಸಹಪಾತ್ರಗಳಿಗೆ ಅವಕಾಶವಿಲ್ಲದ ಹಾಸ್ಯಪಾತ್ರಗಳ ಪುರುಷಾಧಿಪತ್ಯ.

ಹಾಸ್ಯ ಋಷಿಗಳ ಕಾಲಬೇಡ. ನಮ್ಮ ಕಾಲಮಾನದ ಮಾಸ್ಟರ್ ಹಿರಣ್ಣಯ್ಯ, ತೀರ್ಥಹಳ್ಳಿ ಶಾಂತಕುಮಾರ್, ವರವಿ ಫಕೀರಪ್ಪ, ಬಿ. ಓಬಳೇಶ್ ಅಂಥವರು ನಿರಂತರ ಓದಿನಿಂದ ಆರ್ಜಿಸಿಕೊಂಡ ರಾಜಕೀಯ ಪ್ರಜ್ಞೆಯ ಮೊನಚು ಮರೆಯಲುಂಟೇ.? ಅಂದಂದಿನ ಸಮಾಜೋಧಾರ್ಮಿಕ, ರಾಜಕೀಯ ಸಂಗತಿಗಳ ಮೇಲೆ ಅವರ 'ಕ್ಷ' ಕಿರಣ, ಕುಟುಕುವ ವಿಡಂಬನೆ, ಹಾಸ್ಯದ ಚುರುಕುತನವಿತ್ತು.

ಕೊರೊನಾ ದುರಿತಕಾಲದ ಸಂಕಟಗಳು, ದಿಲ್ಲಿಯ ಐತಿಹಾಸಿಕ ರೈತ ಚಳವಳಿ, ಬಹುತ್ವ ಭಾರತದ ಇತರೆ ಸಂಗತಿಗಳ ಕುರಿತು ಸದಭಿರುಚಿಯ ಸತ್ವಯುತ ನಾಟಕಗಳು ಹುಟ್ಟಬೇಕೆಂದರೆ ನಾಟಕಕಾರನಿಗೆ ವರ್ತಮಾನದ ವೃತ್ತಾಂತಗಳ ಅರಿವು, ಸಾಮಾಜಿಕ ಎಚ್ಚರ, ಜನಚಳವಳಿಗಳ ಅಧ್ಯಯನ, ಅನುಸಂಧಾನಗಳಾಗಬೇಕು. ಮಹಾನ್ ನಾಟಕಕಾರರ ಪ್ರತಿಭೆಯ ಕಡಲು ಆಗಿದ್ದ ಅದೀಗ ಬತ್ತಿದ ಒಡಲಾಗಿದೆ. ಸೋಜಿಗವೆಂದರೆ ವೃತ್ತಿರಂಗದಲ್ಲಿ ಪ್ರತಿಭಾಶಾಲಿ ಕಲಾವಿದರಿದ್ದಾರೆ. ಅಂತಹ ಪ್ರತಿಭೆಗಳ ಸದ್ಬಳಕೆಗೆ ತೋರಬೇಕಾದ ವಿವೇಕ, ನುರಿತ ನಿರ್ದೇಶನದ ತೀವ್ರಕೊರತೆ. ಇಂತಹ ಬಿಕ್ಕಟ್ಟುಗಳಿಗೆ ಸೂಕ್ತ ಪರಿಹಾರ ದೊರಕಿಸಬೇಕಿದ್ದ ದಾವಣಗೆರೆ ವೃತ್ತಿರಂಗಾಯಣ ಮೂರು ವರ್ಷಗಳಿಂದ ಗಡದ್ದಾಗಿ ಉಂಡು ನೆಮಲು ಹಾಕುತ್ತಾ ಮಲಗಿದೆ.

ಮಲ್ಲಿಕಾರ್ಜುನ ಕಡಕೋಳ
ದೂರವಾಣಿ ಸಂಖ್ಯೆ: 9341010712

ಈ ಅಂಕಣದ ಹಿಂದಿನ ಬರಹಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...