Date: 28-04-2025
Location: ಬೆಂಗಳೂರು
"ಚರಿತ್ರೆಯ ಆತ್ಮವಿಮರ್ಶೆಯಂತೆಯೆ ಸಾಹಿತ್ಯದ ಆತ್ಮವಿಮರ್ಶೆಯೂ ನಮ್ಮಲ್ಲಿ ತೀರಾ ಕಡಿಮೆ. ಅಂದರೆ ನಾವು ನಮ್ಮ ರಾಜಮಹಾರಾಜರ ಗೆಲುವುಗಳ ಚರಿತ್ರೆಯನ್ನು ಕಟ್ಟಿಕೊಳ್ಳುವುದಕ್ಕೆ ಹೇಗೆ ಹೆಚ್ಚಿನ ಸಮಯವನ್ನು ವ್ಯಯಿಸಿದ್ದೇವೋ ಹಾಗೆಯೆ ನಮ್ಮ ಸಾಹಿತ್ಯಗಳ ಮೇಲ್ಮೆಯನ್ನು ಗುರ್ತಿಸಿಕೊಳ್ಳುವುದಕ್ಕೆ ಆಯ್ದ ಓದುಗಳನ್ನು ನಡೆಸಿದ್ದೇವೆ," ಎನ್ನುತ್ತಾರೆ ಡಾ. ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ಬರೆದಿರುವ ‘ಯಶೋಧರ ಚರಿತೆ ಓದು-2’ ವಿಮರ್ಶಾ ಸರಣಿ ನಿಮ್ಮ ಓದಿಗಾಗಿ..
ನಾವು ಆಧುನಿಕ ಸಂದರ್ಭದಲ್ಲಿ ಬಹುಪಾಲು ಪ್ರಾಚೀನ ಕನ್ನಡ ಸಾಹಿತ್ಯದ ಆಯ್ದ ಓದನ್ನು ನಡೆಸುತ್ತ ಬಂದಿದ್ದೇವೆ. ಸಮಗ್ರ ಓದುಗಳು ನಮ್ಮಲ್ಲಿ ಬಹಳ ಕಡಿಮೆ. ನಮ್ಮ ಶೈಕ್ಷಣಿಕ ಓದುಗಳಂತು ಇಂತಹ ಆಯ್ದ ಓದುಗಳಿಂದ ನಮ್ಮ ಕನ್ನಡ ಸಾಹಿತ್ಯದ ಮೇಲ್ಮೆಯನ್ನು ಕಟ್ಟಿಕೊಡುವ ಓದುಗಳೇ ಆಗಿವೆ. ಚರಿತ್ರೆಯ ಆತ್ಮವಿಮರ್ಶೆಯಂತೆಯೆ ಸಾಹಿತ್ಯದ ಆತ್ಮವಿಮರ್ಶೆಯೂ ನಮ್ಮಲ್ಲಿ ತೀರಾ ಕಡಿಮೆ. ಅಂದರೆ ನಾವು ನಮ್ಮ ರಾಜಮಹಾರಾಜರ ಗೆಲುವುಗಳ ಚರಿತ್ರೆಯನ್ನು ಕಟ್ಟಿಕೊಳ್ಳುವುದಕ್ಕೆ ಹೇಗೆ ಹೆಚ್ಚಿನ ಸಮಯವನ್ನು ವ್ಯಯಿಸಿದ್ದೇವೋ ಹಾಗೆಯೆ ನಮ್ಮ ಸಾಹಿತ್ಯಗಳ ಮೇಲ್ಮೆಯನ್ನು ಗುರ್ತಿಸಿಕೊಳ್ಳುವುದಕ್ಕೆ ಆಯ್ದ ಓದುಗಳನ್ನು ನಡೆಸಿದ್ದೇವೆ. ಇದರಿಂದಲೆ ನಮ್ಮಲ್ಲಿ ಸಾಕಷ್ಟು ಸಂಗ್ರಹಗಳು, ಸಂಪಾದನೆಗಳು ನಡೆದಿವೆ. ಇನ್ನಾದರೂ ನಮ್ಮ ಸಾಹಿತ್ಯ ಚರಿತ್ರೆಯ ಆತ್ಮವಿಮರ್ಶೆ ನಡೆಸುವುದು ಹೆಚ್ಚು ಸೂಕ್ತವಾದುದು.
ಈ ಹಿನ್ನೆಲೆಯಲ್ಲಿ ಯಶೋಧರಚರಿತೆಯನ್ನು ನೋಡುವುದಾದರೆ: ಇದು ನಮ್ಮ ಶೈಕ್ಷಣಿಕ ವಲಯದಲ್ಲಿ ಮತ್ತು ವಿಮರ್ಶಾ ವಲಯಗಳಲ್ಲಿ ಸಮಗ್ರ ಓದಿಗೆ ಗುರಿಯಾಗಿರುವುದು ತೀರಾ ಅತ್ಯಲ್ಪ. ಇದರ ಬಹುಪಾಲು ಓದುಗಳು ಅಷ್ಟಾವಂಕ ಮತ್ತು ಅಮೃತಮತಿಯರ ಪ್ರಸಂಗಕ್ಕೇ ಸೀಮಿತ ಆಗಿವೆ. ಅದನ್ನು ನಮ್ಮವರು ಅತಿ ಎನ್ನಿಸುವಷ್ಟು ಚರ್ಚಿಸಿದ್ದಾರೆ. ದಾಂಪತ್ಯ ಲೈಂಗಿಕ ನಿಷ್ಠೆಯನ್ನು ಹೆಣ್ಣಿಗೆ ಬೋಧಿಸುವ ಈ ಭಾಗ ಸರಿಸುಮಾರು ಧರ್ಮನಿರಪೇಕ್ಷ ಎನ್ನಿಸುವ ಭಾಗವಾದ್ದರಿಂದ ಮತ್ತು ಅದೊಂದು ಗಂಡು ಮೌಲ್ಯಗಳನ್ನು ಹೆಣ್ಣುಗಳ ಮೇಲೆ ಹೇರುವ ಭಾಗವಾದ್ದರಿಂದ ಅಥವಾ ಹೆಣ್ಣಿನ ಲೈಂಗಿಕ ಅಧೀನತೆಯೆ ಸೂಕ್ತವಾದ ಸಾಮಾಜಿಕ ಸ್ಥಿತಿ ಎಂಬಂತೆ ವ್ಯಾಖ್ಯಾನ ಮಾಡಲು ಸಾಧ್ಯವಿರುವ ಭಾಗ ಆಗಿರುವುದರಿಂದ ಇದರ ಚರ್ವಿತಚರ್ವಣ ಓದು ಮತ್ತೆ ಮತ್ತೆ ನಮ್ಮಲ್ಲಿ ನಡೆದಿದೆ. ಆದರೆ ಯಶೋಧರ ಚರಿತೆಗಿರುವುದು ಇದೊಂದೆ ಆಯಾಮವಲ್ಲ. ಇಲ್ಲಿ ಹಲವು ಆಯಾಮಗಳಿವೆ.
ಅವುಗಳಲ್ಲಿ ಜೈನ ಪಂಚಾಣುವ್ರತಗಳನ್ನು ಪಾಲಿಸಿರಿ ಎಂದು ಹೇಳುವುದು ಒಂದು ಆಯಾಮವಾದರೆ; ಬಲಿ ಪರಂಪರೆಯನ್ನು ಖಂಡಿಸಿ ಅಹಿಂಸೆಯನ್ನು ಪ್ರತಿಪಾದಿಸುವುದು ಮತ್ತು ಆ ಮೂಲಕ ಮಾಂಸಾಹಾರ ಪದ್ಧತಿಯನ್ನು ಅವಹೇಳನ ಮಾಡುವುದು ಇದರ ಇನ್ನೊಂದು ಆಯಾಮವಾಗಿದೆ. ಇದೂ ಅಲ್ಲದೆ ಇಲ್ಲಿ ಆತ್ಮವಾದ ಮತ್ತು ಅನಾತ್ಮವಾದದ ಚರ್ಚೆಗಳು ಬರುತ್ತವೆ. ಇಲ್ಲಿ ಅನಾತ್ಮವಾದವನ್ನು ತರ್ಕದ ಮೂಲಕ ನಿರಾಕರಿಸುವ ನಿರೂಪಣೆಗಳಿವೆ. ಹಾಗೆಯೆ ಇಲ್ಲಿ ಮಾರಿ ಹಬ್ಬದ ಆಚರಣೆಗಳು ಮತ್ತು ಜೈನ ನಂಬಿಕೆಗಳ ನಡುವಣ ಕರ್ಷಣಗಳು ನಿರೂಪಿತ ಆಗಿವೆ. ಜೊತೆಗೆ ಪುನರ್ಜನ್ಮ ಮತ್ತು ಭವಾವಳಿಗಳನ್ನು (ಜನ್ಮಜನ್ಮಾಂತರಗಳನ್ನು) ಪ್ರತಿಪಾದಿಸುವ ಸೈದ್ಧಾಂತಿಕ ನಿರೂಪಣೆಗಳು ಬರುತ್ತವೆ. ಅದೂ ಅಲ್ಲದೆ:
ನರಬಲಿ, ಪಶುಬಲಿಯ ಆಚಾರಗಳನ್ನು ಸೋಮದೇವಸೂರಿಯು 800 ಪದ್ಯಗಳಲ್ಲಿ ವರ್ಣಿಸಿದರೆ ಜನ್ನ ಅದನ್ನು ಕೇವಲ 20 ಪದ್ಯಗಳಲ್ಲಿ ಮುಗಿಸಿಬಿಡುತ್ತಾನೆ. ಹಾಗೆಯೆ ಪುಷ್ಪದಂತನ ಜಸಹರಚರಿವು ಗ್ರಂಥದಲ್ಲಿ ಕಾಪಾಲಿಕರ ಗುರು ಭೈರವಾನಂದನು ಮಾರಿದತ್ತನ ರಾಜಧಾನಿಯಲ್ಲಿ ತನ್ನ ಮತಪ್ರಚಾರ ನಡೆಸುವ ಚಿತ್ರಗಳು ಬಂದರೆ ಜನ್ನನಲ್ಲಿ ಈ ವಿವರಗಳನ್ನು ಕೈಬಿಡಲಾಗಿದೆ. ಜನ್ನ ಅನುಸರಿಸಿರುವುದು ವಾದಿರಾಜನನ್ನು. ಆದರೂ ಈತ ತನ್ನ ಹಿಂದಿನೆಲ್ಲ ಯಶೋಧರಚರಿತೆಗಳನ್ನು ಓದಿಕೊಂಡಂತೆ ಕಾಣುತ್ತದೆ. (ಹೆಚ್ಚಿನ ವಿವರಗಳಿಗೆ ನೋಡಿ: ಯಶೋಧರಚರಿತೆ ಪ್ರಸ್ತಾವನೆ: ಕ.ವೆಂ. ರಾಘವಾಚಾರ್) ಆದಾಗ್ಯೂ ಜನ್ನನ ಯಶೋಧರಚರಿತೆಯನ್ನು ಮತಾಂತರದ ಸಂಕಥನವಾಗಿ ನೋಡುವ ಸಾಧ್ಯತೆಯೂ ಇದೆ.
ಇದೊಂದು ಭವ್ಯಪ್ರಭು ಸಭೆಗೆ ನಿರೂಪಿಸಿದ ಕಾವ್ಯ. ಭವ್ಯಪ್ರಭು ಸಭೆ ಎಂದರೆ ಜೈನ ದೊರೆಯ ಸಭೆ ಎಂತಲೂ, ಜೈನ ವ್ರತಾಚಾರಿಗಳ ಗುಂಪು ಎಂತಲೂ ಅರ್ಥೈಸುವುದು ಸಾಧ್ಯವಿದೆ. ಭವ್ಯಜನರ ಅಂದರೆ ಜೈನರ ನಂಬಿಕೆಗಳನ್ನು ಶ್ರೇಷ್ಠವೆಂದು ಪ್ರತಿಪಾದಿಸುವ ಮತ್ತು ಅಭವ್ಯರ ಅಂದರೆ ಜೈನೇತರರ ನಂಬಿಕೆ, ಆಚಾರಗಳನ್ನು ವಿಸರ್ಜನಾರ್ಹ ಎನ್ನುವ ನಿರೂಪಣೆಗಳು ಇಲ್ಲಿವೆ. ಹೀಗಾಗಿ ಇದೊಂದು ಜೈನ ಕೋಮಿನ ಕೋಮುವಾದವನ್ನು ಪ್ರತಿಪಾದಿಸುವ ಹಾಗೂ ಭೀಕರವಾದ ನರಬಲಿ ಪದ್ಧತಿಯನ್ನು ಮಾನವೀಯ ನೆಲೆಯಲ್ಲಿ ವಿರೋಧಿಸುವ ಕಾವ್ಯವಾಗಿದೆ. ಈ ದೃಷ್ಟಿಯಿಂದ ಮಾನವೀಯತೆ ಹಾಗೂ ಜೈನಕೋಮುವಾದ ಎರಡನ್ನೂ ಹದವಾಗಿ ಬೆರೆಸಿರುವ ಕಾವ್ಯಪ್ರತಿಭೆ ಇಲ್ಲಿದೆ.
ಈ ಕಾವ್ಯದ ಕೊನೆಯಲ್ಲಿ ಸ್ವತಃ ಮಾರಿದತ್ತನ ಪೂಜೆಗೆ ಗುರಿಯಾದ ದೇವಿ ಮಾರಿಯೆ ಪ್ರತ್ಯಕ್ಷಳಾಗಿ ಮಾರಿದತ್ತ ಮತ್ತು ಜಾತ್ರೆಗೆ ನೆರೆದಿದ್ದ ಜನಸಮೂಹವನ್ನು ಉದ್ದೇಶಿಸಿ ಮಾತಾಡುತ್ತಾಳೆ. ಪ್ರಾಣಿಬಲಿಯನ್ನು ನಿರಾಕರಿಸಿ ʼಪ್ರಜೆಗಳೆಲ್ಲರೂ ಕೇಳಿ, ನೀರು ಗಂಧ, ಹೂಮಾಲೆ, ಅಕ್ಕಿ, ಧೂಪ, ಅನ್ನ, ತಾಂಬೂಲ ಇವುಗಳಿಂದಲೆ ನನ್ನ ಅರ್ಚೆನೆ ಮಾಡಿ. ಜೀವಜಾತದಿಂದ ಎನಗೆ ಬಲಿಯನಿತ್ತೊಡೆ ಮುನಿವೆಂʼ ಎನ್ನುತ್ತಾಳೆ! ಅಂದರೆ ಸ್ವತಃ ಮಾರಿಯಿಂದಲೆ ನೀವು ಪ್ರಾಣಿಬಲಿಯನ್ನು ನನಗೆ ನೀಡಬೇಡಿ ಎಂದು ಈ ಕಾವ್ಯ ಹೇಳಿಸುತ್ತದೆ. ಪೂಜೆಯ ವಿಧಾನಗಳನ್ನೂ ತಿಳಿಸಿ, ಜನರಿಗೆ ನೀವು ಹೀಗೆಯೆ ಮಾಡಿ ಎಂದು ಮಾರಿಯಿಂದಲೆ ಹೇಳಿಸುವ ಕೆಲಸವನ್ನು ಈ ಕಾವ್ಯವು ಮಾಡುತ್ತದೆ. (ನೋಡಿ: ೪-೭೩) ಆದಾಗ್ಯೂ ಸಾವಿರಾರು ವರ್ಷಗಳಿಂದ ನಮ್ಮಲ್ಲಿ ಬಲಿ ಪದ್ಧತಿ ಮತ್ತು ಮಾಂಸಾಹಾರ ಪದ್ಧತಿಗಳು ನಿಂತಿಲ್ಲ ಎಂಬುದು ಗಮನಾರ್ಹ.
ಇಲ್ಲಿ ಯಶೌಘ-ಚಂದ್ರಮತಿ; ಯಶೋಧರ –ಅಮೃತಮತಿ; ಯಶೋಮತಿ – ಕುಸುಮಾವಳಿ ಹಾಗೂ ಅಭಯರುಚಿ –ಅಭಯಮತಿ ಇವರ ನಾಲ್ಕು ತಲೆಮಾರುಗಳ ಕಥನ ಇದೆ. ಇಲ್ಲಿ ಬರುವ ಯಶೋಧರನ ಮಗನ ಹೆಂಡತಿ ಕುಸುಮಾವಳಿ ಸಂಬಂಧದಲ್ಲಿ ಮಾರಿದತ್ತನ ಸೋದರಿ. ಮಾರಿಗೆ ಬಲಿಕೊಡಲು ಚಂಡಕರ್ಮನ ಮೂಲಕ ಹಿಡಿದು ತರಿಸಿದ ಅಭಯರುಚಿ ಅಭಯಮತಿಗಳು ಅವನಿಗೆ ಸೋದರಳಿಯ ಮತ್ತು ಸೋದರ ಸೊಸೆಯೆ ಆಗಬೇಕು. ಅಂದರೆ ಇಲ್ಲಿ ಮಾರಿಯ (ಚಂಡಿಕೆಯ) ಜಾತ್ರೆ ಮಾಡುತ್ತಿರುವ ಮಾರಿದತ್ತನೂ ಜೈನ ಮತ್ತು ಇಲ್ಲಿರುವ ನಾಲ್ಕು ತಲೆಮಾರುಗಳೂ ಜೈನ ತಲೆಮಾರುಗಳೆ ಆಗಿವೆ. ಆದಾಗ್ಯೂ ಇವರಲ್ಲಿ ಜೈನ ಆಚಾರಗಳು ಪೂರ್ತಿಯಾಗಿ ನೆಲೆಗೊಂಡಿಲ್ಲ. ಈ ನೆಲೆಯಲ್ಲಿ ಪ್ರತಿಯೊಬ್ಬರೂ ಮತಾಂತರ ಆದರೆ ಸಾಲದು ಆ ಮತದ, ಧರ್ಮದ ಆಚಾರಗಳನ್ನು ಸಂಪೂರ್ಣ ನಂಬಿಕೆಗೆ, ಅಚಾರಕ್ಕೆ ತಂದುಕೊಳ್ಳಬೇಕು ಎಂಬುದನ್ನೆ ಈ ಕಥನ ಹೇಳುತ್ತದೆ. ಅಂದರೆ:
ಯಾವುದೆ ತಲೆಮಾರು ಒಂದು ಧರ್ಮಕ್ಕೆ ಮತಾಂತರ ಆದಾಗ ಅದು ತಕ್ಷಣ ತನ್ನ ಪರಂಪರೆಯ ಬೇರುಗಳನ್ನು ಸಂಪೂರ್ಣ ಕಡಿದುಕೊಳ್ಳಲು ಆಗುವುದಿಲ್ಲ. ಹೊಸ ಧರ್ಮದ ಉಡುಪು, ನಿತ್ಯದ ಅಭ್ಯಾಸಗಳು, ವಿವಿಧ ಹಬ್ಬ, ಆಚರಣೆಗಳು, ಆಹಾರ ಪದ್ಧತಿ ಇವುಗಳನ್ನು ಧುತ್ತನೆ ಅಳವಡಿಸಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಅದರದ್ದೆ ಸಮಯ ಬೇಕಾಗುತ್ತದೆ. ಕೆಲವೊಮ್ಮೆ ಪೂರ್ಣ ಪ್ರಮಾಣದಲ್ಲಿ ಮತಾಂತರ ಆಗಲು ಕೆಲವರಿಗೆ ಸಾಧ್ಯವೇ ಆಗದೆ ಹಳೆ ಆಚಾರ ಮತ್ತು ಮತಾಂತರವಾದ ಹೊಸ ಧರ್ಮದ ಆಚಾರಗಳ ಸಂಕರವೊಂದು ಸೃಷ್ಟಿಯಾಗಿ ಅದು ಪೂರ್ಣ ಧರ್ಮದ ಒಳಗೆ ಬೆರೆಯದೆ ತನ್ನದೇ ಪ್ರತ್ಯೇಕ ಕವಲಾಗುವ ಸಾಧ್ಯತೆಯೂ ಇರುತ್ತದೆ. ಇಲ್ಲಿ ನಾಲ್ಕು ತಲೆಮಾರುಗಳಲ್ಲಿ ಅಂತಹ ಹಳೇ ಆಚಾರಗಳನ್ನು ತೊರೆಯದ ಹೊಸ ಧರ್ಮದ ನಂಬಿಕೆ ಆಚಾರಗಳನ್ನು ಪೂರ್ಣ ಪಾಲಿಸಲಾಗದ ಸಂಘರ್ಷ ಇರುವುದನ್ನು ಕಾಣಬಹುದು. ಮುಂದಿನ ವಿವರಗಳಲ್ಲಿ ಇದನ್ನು ವಿಸ್ತರಿಸಲಾಗಿದೆ:
ಅಷ್ಟಾವಂಕನೊಂದಿಗಿನ ತನ್ನ ಹೆಂಡತಿಯ ಪ್ರೇಮಕಾಮಗಳನ್ನು ನೇರ ತಾಯಿ ಚಂದ್ರಮತಿಗೆ ಹೇಳಲು ಆಗದೆ ಮಗ ಯಶೋಧರ ಕನಸಿನ ರೂಪದಲ್ಲಿ ಹೇಳಿದಾಗ ಆಕೆ ಇದೇನೋ ಮುಂದಣ ಕೇಡನ್ನು ಸೂಚಿಸುವ ದುಸ್ವಪ್ನ; ಇದನ್ನು ಹೀಗೇ ಬಿಡಬಾರದು ಪ್ರಾಣಿಬಲಿ ನೀಡುವ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ಆಕೆಯಿನ್ನೂ ಬಲಿಯಾಚಾರದ ಪರಂಪರೆಯನ್ನು ಬಿಟ್ಟುಕೊಟ್ಟಿಲ್ಲದ ಸೂಚನೆ ಆಗಿದೆ. ಆದರೆ ಅದೇ ಯಶೋಧರನ ಸೊಸೆಯಾದ ಕುಸುಮಾವಳಿಯ ಅಣ್ಣ ಮಾರಿದತ್ತ ಕೂಡ ಜಾತ್ರೆಯಲ್ಲಿ ಪ್ರಾಣಿಬಲಿಯನ್ನು ಕೊಡುತ್ತಿರುತ್ತಾನೆ. ಅಂದರೆ ಇಲ್ಲಿನ ಕುಸುಮಾವಳಿಯ ಅಣ್ಣ ಮಾರಿದತ್ತ ಕೂಡ ಜೈನನೆ. ಅಂದರೆ ಇವರೆಲ್ಲರ ಮೂಲಕ ಇಲ್ಲಿ ಮತಾಂತರ ಆದ ಮೇಲೂ ಮೂರ್ನಾಲ್ಕು ಪೀಳಿಗೆಯವರೆಗು ತಮ್ಮ ಹಳೆ ಬೇರುಗಳನ್ನು ಕಡಿದುಕೊಂಡು ಜೈನ ಆಚಾರಗಳನ್ನು ಮೈಗೂಡಿಸಿಕೊಳ್ಳಲು ಆಗದಿರುವ ಮತ್ತು ಅವನ್ನು ಮೈಗೂಡಿಸಿಕೊಳ್ಳಬೇಕೆನ್ನುವ ಒತ್ತಡ ಇರುವ ಸಂಗತಿಯನ್ನೆ ಕಾವ್ಯ ಹೇಳುತ್ತಿದೆ.
ಇಲ್ಲಿನ ಕಥನದ ಗುಣಗಳಲ್ಲಿ ಬ್ರೀವಿಟಿಯೂ ಒಂದು. ಇಲ್ಲಿನ ಎಲ್ಲ ಪ್ರಸಂಗಗಳೂ ತುಂಬಾ ವೇಗವಾಗಿ ನಡೆಯುತ್ತವೆ. ಅಮೃತಮತಿ ಬದಗನನ್ನು ಪ್ರೇಮಿಸುವುದಂತೂ ಒಂದೊಂದೆ ಪದ್ಯಗಳಲ್ಲಿ ಮುಗಿದುಹೋಗುತ್ತದೆ. ನಾಲ್ಕೆ ಅವತಾರಗಳಲ್ಲಿ (ಸಂಧಿಗಳಲ್ಲಿ) ಕಾವ್ಯವು ಕೇವಲ ೩೧೦ ಪದ್ಯಗಳಲ್ಲಿ ಮುಗಿದುಹೋಗುತ್ತದೆ. ಪ್ರಕ್ಷಿಪ್ತಗಳು ಎಂದು ಹೇಳುವ ಹಲವು ಪ್ರತಿಗಳ ಹಲವು ಪದ್ಯಗಳು ಹೆಚ್ಚಿಗೆ ಇದ್ದರೂ ಅವನ್ನು ಸಂಪಾದಕರು ಕಾವ್ಯದ ಒಳಗೆ ಸೇರಿಸಿಲ್ಲ. ಹಾಗಾಗಿ ಇದೊಂದು ಆಧುನಿಕ ಸಣ್ಣ ಕತೆಗೆ ಸಮಾನವಾದ ಕಿರುಕಾವ್ಯ. ಪ್ರಸಂಗಗಳನ್ನು ವಿಸ್ತರಿಸಿದರೆ ಇದೊಂದು ಮಹಾಕಾವ್ಯ ಆಗಬಲ್ಲ ಸಾಧ್ಯತೆ ಇರುವ ಕಿರುಕಾವ್ಯ. ಎಷ್ಟೊ ಕಡೆ ಇನ್ನಷ್ಟು ವಿವರ, ವಿಸ್ತರಣೆಯ ಅಗತ್ಯವಿತ್ತು ಎನ್ನಿಸಿದರೂ ಅವು ಇಲ್ಲದ ಒಂದು ಕಿರುಕಾವ್ಯವಿದು. ಹಾಗಾಗಿ ನಿರೂಪಣೆಯ ಬ್ರೀವಿಟಿ ಇದರ ಒಂದು ಮುಖ್ಯ ಲಕ್ಷಣ.
ಈ ಕಾವ್ಯದಲ್ಲಿ ಶ್ರಾದ್ಧದ ಎರಡು ಸಂದರ್ಭಗಳು ಬರುತ್ತವೆ. ಅದರಲ್ಲಿ ಒಂದರಲ್ಲಿ ಮೀನಿನ ಜೀವಶ್ರಾದ್ಧವೂ ಇನ್ನೊಂದರಲ್ಲಿ ಬ್ರಾಹ್ಮಣರು ಮಾಂಸಾಹಾರ ಸೇವನೆ ಮಾಡುವ ಪ್ರಸ್ತಾಪವೂ ಮತ್ತು ಅದರ ವಿಡಂಬನೆಯೂ ಬರುತ್ತದೆ. ಅಹಿಂಸೆಯ ಹೆಸರಿನಲ್ಲಿ ಮಾಂಸಾಹಾರವನ್ನು ತೊರೆಯಬೇಕು ಎಂಬ ಇಂಗಿತಾರ್ಥವೂ ಈ ಕಾವ್ಯವನ್ನು ಓದುವಾಗ ನಮಗೆ ಪ್ರತೀತಿ ಆಗುತ್ತದೆ.
ಯಶೋಧರನು ಮೀನಿನ ಜನ್ಮ ತಾಳಿದಾಗ ಆತನ ಮಗನೆ, ಅದೆ ಮೀನನ್ನೆ ಶ್ರಾದ್ಧಕ್ಕೆ ಬೇಯಿಸುತ್ತಾನೆ. ಜೀವಶ್ರಾದ್ಧ ಎಂಬುದೆ ಒಂದು ಹಿಂಸಾತ್ಮಕವಾದ ಪದ್ಧತಿ. ಬದುಕಿರುವ ಮೀನು, ಪ್ರಾಣಿಗಳನ್ನು ಹಾಗೆಯೆ ಜೀವಂತ ಬೇಯಿಸಿ ಅಡಿಗೆ ಮೂಲಕವೆ ಕೊಂದು ಮಾಡುವ ಶ್ರಾದ್ಧವೆ ಜೀವಶ್ರಾದ್ಧ. ಇಂತಹ ಶ್ರಾದ್ಧಕ್ಕೆ ಆತನು ಗುರಿಯಾಗುವಾಗ ಬ್ರಾಹ್ಮಣರು ಯಶೋಧರನು ಸ್ವರ್ಗದಲ್ಲಿ ಸುಖವಾಗಿರಲಿ ಎಂದು ʻಊಳಿಕ್ಕುತ್ತʼ ಇರುತ್ತಾರೆ. (ನೋಡಿ: ೩-೫೧, ೫೨)
ಇನ್ನೊಂದು ಪ್ರಸಂಗದಲ್ಲಿ ಯಶೋಮತಿಯು ಕೋಣವನ್ನು ಮಾರಿಗೆ ಬಲಿಕೊಟ್ಟು ನೈವೇದ್ಯ ಮಾಡುವ ಚಿತ್ರ ಬರುತ್ತದೆ. (ನೋಡಿ: ೩-೫೭) ಇಲ್ಲಿ ಮಾರಿಗೆ ಬಲಿಕೊಟ್ಟ ಕೋಣದ ಬಾಡನ್ನು ಒಮ್ಮೆಗೇ ತಿನ್ನಲಾಗದೆ ಒಣಗಿಸಲಾಗುತ್ತದೆ. ಹಾಗೆ ಒಣಗಿಸುವಾಗ ಅದು ಮುಗ್ಗಿ, ಹುಳುಬಿದ್ದು, ನಾಯಿ-ಕಾಗೆಗಳು ಮುಟ್ಟಿ ಅಶುದ್ಧಿ ಆಗುತ್ತದೆ. ಹಾಗೆ ಅಶುದ್ಧಿಯಾದ ಆ ಮಾಂಸವನ್ನು ಬ್ರಾಹ್ಮಣರು ಆಡಿನ ರಜಸ್ಸಿನಿಂದ ಶುದ್ಧಿ ಮಾಡಲು ಸಲಹೆ ನೀಡುತ್ತಾರೆ. ಆಗ ತಾನು ಬಾಣ ಬಿಟ್ಟಾಗ ಜಗುಳಿ ಬಿದ್ದಿದ್ದ ಹೋತವನ್ನೆ ಯಶೋಮತಿಯು ತರಿಸಿ ಕೊಂದು ಕೋಣನ ಬಾಡನ್ನು ಶುದ್ಧೀಕರಿಸಿ ಶ್ರಾದ್ಧ ಮಾಡಿಸುತ್ತಾನೆ. ಹಾಗೆ ಶುದ್ಧೀಕರಿಸಿದ ಕೋಣನ ಕೊರಬಾಡಿನ ಊಟವನ್ನು ಬ್ರಾಹ್ಮಣರು ಉಂಡು ತೃಪ್ತರಾಗುತ್ತಾರೆ. ಎದ್ದು ಹೋಗುವಾಗ ಯಶೋಧರ ಚಂದ್ರಮತಿಯರು ಸ್ವರ್ಗದಲ್ಲಿ ಸುಖವಾಗಿ ಇರುವರೇ ಎಂದರೆ ಹೌದು ಹೌದು ಎನ್ನುತ್ತಾರೆ. (ನೋಡಿ: ೩-೫೭ರಿಂದ ೬೨)
ಮುಂದೆ ಕೋಣನ ಹಸಿಗೆ ಮಾಡುವ ಇನ್ನೊಂದು ಪ್ರಸಂಗವೂ ಈ ಕಾವ್ಯದಲ್ಲಿ ಬರುತ್ತದೆ. ಯಶೋಮತಿಯ ಬಾಣಕ್ಕೆ ಗುರಿಯಾಗಿ ಸತ್ತ ಆಡು (ಚಂದ್ರಮತಿ) ಮುಂದೆ ಕೋಣವಾಗಿ ಜನ್ಮತಾಳಿ ಒಬ್ಬ ವ್ಯಾಪಾರಿಯ ಬಳಿ ಇರುತ್ತದೆ. ಈತ ಅದನ್ನು ಕೊಂದು ಅದರ ಹಸಿಗೆ ಮಾಡಿಸುತ್ತಾನೆ. ಅದರ ಮುಂಗಾಲು ಹಿಂಗಾಲುಗಳಿಗೆ ದಸಿ ಹಾಕಿ, ಅಡಿಮೇಲಾಗಿ ನೇತಾಡಿಸಿ ಕೆಳಗಿಂದ ಬೆಂಕಿ ಉರಿಸಿ ಬೇಯಿಸುತ್ತಾರೆ. (೩-೬೯) ಅದರ ಆಸನದಿಂದಲೂ, ಬಾಯಿ ಕಡೆಯಿಂದಲೂ ಉಪ್ಪು ಮೆಣಸು ಸಾಸಿವೆಗಳನ್ನು ತುರುಕಿ ಲೇಸಾಗಿ ಬೇಸಿ ಅದರ ಮಾಂಸವನ್ನು ಅಮೃತಮತಿಗೂ ಕಳಿಸುತ್ತಾರೆ. (೩-೭೦) ಆ ಮಾಂಸದ ಸವಿಯುಂಡ ಅಮೃತಮತಿ ತನ್ನ ಮನೆಯಲ್ಲಿದ್ದ ಹೋತವನ್ನೂ ಕೊಂದು ತಿನ್ನುತ್ತಾಳೆ. ಇಂತಹ ವಿವರವಾದ ಕೋಣನ ಕೊರಬಾಡಿನ ಊಟದ ಮತ್ತು ಆಡಿನ ಮಾಂಸದ ಮತ್ತು ಮೀನೂಟದ ವರ್ಣನೆಗಳು ಇನ್ನಾವ ಹಳಗನ್ನಡ ಕಾವ್ಯಗಳಲ್ಲೂ ನಿರೂಪಣೆ ಆಗಿಲ್ಲ. ಹಾಗಾಗಿ ಮಾಂಸಾಹಾರವನ್ನು ಅವಹೇಳನ ಮಾಡಿದರೂ ಇದೊಂದು ಭಿನ್ನವಾದ ಬಾಡೂಟದ ವರ್ಣನೆ ಇರುವ ಕಾವ್ಯ.
ಇಲ್ಲಿ ಕಾವ್ಯದ ಹಲವು ಕಡೆ ಜೈನ ಪರಿವಾರವೆಲ್ಲ ಮಾಂಸಾಹಾರಿ ಪರಿವಾರ ಆಗಿರುವುದು ಕಾಣುತ್ತದೆ. ಅದರ ಕುರಿತ ವಿರೋಧವೂ ಕಾವ್ಯದಲ್ಲಿ ಎದ್ದು ಕಾಣುತ್ತದಾದರೂ ಶ್ರಾದ್ಧದಲ್ಲಿ ಬ್ರಾಹ್ಮಣರು ಕೋಣನ ಕೊರಬಾಡನ್ನು ಊಟ ಮಾಡುವುದು ಇಲ್ಲಿನ ವಿಶೇಷ. ಹಾಗೆ ಊಟ ಮಾಡುವುದನ್ನೂ ಇಲ್ಲಿ ವಿಡಂಬಿಸಲಾಗಿದೆ. ಅಂದರೆ ಇದೊಂದು ಬಹು ಪ್ರಾಚೀನವಾದ ಜೈನ, ಬ್ರಾಹ್ಮಣ, ಅನಾತ್ಮವಾದಿ ಪಾಂಥಿಕರೆಲ್ಲ ಮಾಂಸಾಹಾರಿಗಳಾಗಿದ್ದ ಕಾಲದ, ನರಬಲಿಯೂ ಬಹುವಾಗಿ ಚಾಲ್ತಿಯಲ್ಲಿದ್ದ ಕಾಲದ ಜನಪದ ಕಥನ ಆಗಿರಬಹುದು. ಆನಂತರ ಇದನ್ನು ಜೈನ ಪಂಚಾಣುವ್ರತಗಳಲ್ಲಿ ಒಂದಾದ ಅಹಿಂಸಾ ತತ್ವವನ್ನು ಪ್ರತಿಪಾದಿಸಲು ಬಳಸಿರಬಹುದು. ಇತ್ತೀಚೆಗೆ ನಮ್ಮವರಿದನ್ನು ಹೆಚ್ಚಾಗಿ ದಾಂಪತ್ಯ ಲೈಂಗಿಕ ನಿಷ್ಠೆಯನ್ನು ಹೆಣ್ಣುಗಳಲ್ಲಿ ಪ್ರತಿಷ್ಠಾಪಿಸಲು ಬಳಸುತ್ತಿದ್ದಾರಷ್ಟೆ.
ಯಶೋಧರನೂ ಚಂದ್ರಮತಿಯೂ ಈ ಕಾವ್ಯದಲ್ಲಿ ಸಂಕಲ್ಪ ಹಿಂಸೆ ಮಾಡಿದ ಒಂದೇ ಕಾರಣಕ್ಕೆ ಏಳೇಳು ಜನ್ಮಗಳಲ್ಲಿ ತೊಳಲುತ್ತಾರೆ. ಅದರಲ್ಲೂ ಆ ಎಲ್ಲ ಜನ್ಮಗಳೂ ನಿಕೃಷ್ಟ ಪ್ರಾಣಿಜನ್ಮಗಳು. ಯಶೋಧರನು ನವಿಲಾಗಿ, ಮುಂಗುಸಿಯಾಗಿ, ಮೀನಾಗಿ, ಮಾದರ ಕೇರಿಯ ಹೊಲೆಯರ ಹೋತವಾಗಿ, ಕೋಳಿ ಹುಂಜವಾಗಿ ಆನಂತರ ಅಭಯರುಚಿಯಾಗಿ ಜನ್ಮ ಎತ್ತುತ್ತಾನೆ. ಅವನ ತಾಯಿ ಚಂದ್ರಮತಿಯು ನಾಯಾಗಿ, ಹಾವಾಗಿ, ಮೊಸಳೆಯಾಗಿ, ಹೊಲಗೇರಿಯ ಆಡಾಗಿ, ಕೋಣವಾಗಿ, ಕೋಳಿಯಾಗಿ ಆನಂತರ ಅಭಯಮತಿಯಾಗಿ ಜನ್ಮ ತಾಳುತ್ತಾಳೆ. ಜನ್ಮಜನ್ಮಾಂತರಗಳಲ್ಲಿ ಇವರಿಬ್ಬರೂ ಕೇವಲ ಸಂಕಲ್ಪಹಿಂಸೆಯ ಕಾರಣಕ್ಕಾಗಿ ತೊಳಲುವಾಗ ಮೀನು, ಆಡು, ಹೋತ, ಕೋಣ, ಕೋಳಿಗಳಾಗಿದ್ದಾಗ ತಮ್ಮ ಮಗ, ಸೊಸೆ, ಹೆಂಡತಿ ಪರಿವಾರದವರಿಗೇ ಆಹಾರವಾಗಿ ಒದಗುತ್ತಾರೆ. ಇನ್ನೂ ಅತಾರ್ಕಿಕವೆಂದರೆ ಇವರೆಲ್ಲ ಪರಿವಾರಕ್ಕೆ ಆಹಾರವಾಗಿ ತಮ್ಮ ಶ್ರಾದ್ಧಕ್ಕೆ ತಾವೇ ಬಲಿಯಾಗುವಾಗ ಇವರಿಗೆ ಪೂರ್ವಜನ್ಮದ ಸ್ಮರಣೆ ಬಂದು ಕೊರಗುತ್ತಾರೆ. ಹೆಣಗಳು ಹೇಗಾದರೂ ಕೊರಗಿಯಾವು!?
ಯಶೋಧರನೆ ಹೋತವಾಗಿ ಹುಟ್ಟಿದ್ದಾಗ ತನ್ನ ತಾಯಿ ಆಡಾಗಿ ಹುಟ್ಟಿರುತ್ತಾಳೆ. ಪ್ರಾಣಿಸಹಜ ಬೆದೆಭಾವದಿಂದ ತಾಯನ್ನೆ ಆತ ಸಂಭೋಗಿಸುತ್ತಾನೆ. ಆನಂತರ ಸ್ವಲ್ಪ ದಿನಗಳಲ್ಲೆ ಇನ್ನೊಂದು ಹೋತದಿಂದ ತಿವಿಸಿಕೊಂಡು ಸತ್ತು ಮತ್ತೆ ತಾನು ಸಂಭೋಗಿಸಿದ ತಾಯ ಗರ್ಭದಲ್ಲೆ ಹೋತದ ಮರಿಯಾಗಿ ಸೇರಿಕೊಳ್ಳುತ್ತಾನೆ. ಯಶೋಧರನ ಮಗ ಯಶೋಮತಿ ಇನ್ನೊಮ್ಮೆ ತಾನು ಬೇಟೆಗೆ ಹೋದಾಗ ಯಾವುದೆ ಪ್ರಾಣಿ ಸಿಗದೆ, ಊರಿನ ಹೊಲಗೇರಿಯಲ್ಲಿ ಆಡಾಗಿ ಬೆಳೆದಿದ್ದ ತನ್ನ ಅಜ್ಜಿಯನ್ನೆ ಬಾಣ ಬಿಟ್ಟು ಕೊಲ್ಲುತ್ತಾನೆ. ಆ ಆಡು ತನ್ನ ಅಜ್ಜಿಯೆ ಎಂಬುದು ಅವನಿಗೆ ತಿಳಿದಿಲ್ಲ. ಅದರ ಹೊಟ್ಟೆಯಲ್ಲಿ ಬೆಳೆದು ತನ್ನ ಮಗನ ಬಾಣದ ಗಾಯದಿಂದಲೆ ಉದುರಿ ಬಿದ್ದು ಹೋತವಾಗಿ ಹುಟ್ಟುತ್ತಾನೆ. (೩-೫೨ರಿಂದ ೫೬) ಹೀಗೆ ಇಲ್ಲಿ ಅತಾರ್ಕಿಕವಾದರೂ ಜನ್ಮಾಂತರಗಳ ತೊಳಲಾಟದ ಕಥನವನ್ನು ಪ್ರಾಣಿಬಲಿಯ ಪರಿಣಾಮ (ಹಿಂಸೆಯ ಪರಿಣಾಮ) ಎಂಬಂತೆ ನಿರೂಪಿಸಲು ಮತ್ತು ಅಂತಹ ಪ್ರಾಣಿಬಲಿ ಆಚಾರವನ್ನು ಮಾಡಿದರೆ ಅದು ನೋಡಿ ಇಂತಿಂಥ ಹೀನಸಾವು, ಅಪಥ್ಯಸೇವನೆ, ಅಗಮ್ಯಗಮನದ ಪಾಪಕರ್ಮಗಳಿಗೆ ನಿಮ್ಮನ್ನು ದೂಡುತ್ತದೆ ಎಂದು ನೀತಿ ಹೇಳಲು ಬಳಸಲಾಗಿದೆ.
ಹೀಗೆ ಜನ್ಮಜನ್ಮಾಂತರಗಳಲ್ಲಿ ಹೀನಸಾವು, ಅಪಥ್ಯಸೇವನೆ, ಅಗಮ್ಯಗಮನಕ್ಕೆ ಗುರಿಯಾಗುವ ದುರ್ಗತಿ ಹಾಗು ತಮ್ಮ ಮಕ್ಕಳು ಮರಿ ಪರಿವಾರಕ್ಕೇ ತಾವು ಆಹಾರವಾಗಿ ಸಿಲುಕುವ ಗುರ್ಗತಿಗಳು ಭೀಕರ ಯಥಾಸ್ಥಿತಿವಾದಿ ಜನಪದ ಆಶಯಗಳ ರೀತಿಯಲ್ಲೆ ಇಲ್ಲಿ ಬಂದಿವೆ. ಇವೇ ಆಶಯಗಳು ಕರ್ನಾಟಕದ ಬಹುಪಾಲು ಕದರ-ಶ್ರೀಬಾಲಗೌರಿ ಹೆಸರಿನ ಮಾರಿ ಕಥನಗಳಲ್ಲು ಬರುತ್ತವೆ. ಯಶೋಧರನ ಪರಿವಾರದ ಶ್ರಾದ್ಧ ಕಥನವು ನಮಗೆ ಮತ್ತೆ ಮತ್ತೆ ನಮ್ಮ ನಮ್ಮ ಊರಿನ ಆಸಾದಿಗಳು ಹಾಡುವ ಮಾರಿ (ಶ್ರೀಬಾಲಗೌರಿ) ಕಥನವನ್ನೆ ನೆನಪಿಗೆ ತರುತ್ತದೆ. ಇಂಥ ಕಥನವು ನಮ್ಮ ಜಾತಿ, ಧರ್ಮಗಳ ಜಡ್ಡುಗಟ್ಟಿದ ವ್ಯವಸ್ಥೆಯನ್ನು ಸಮರ್ಥಿಸುವ ಕಥನಗಳಾಗಿದ್ದು, ಯಶೋಧರ ಚರಿತೆಯಲ್ಲು ಇದೇ ಆಶಯವೇ ಸ್ವಲ್ಪ ರೂಪಾಂತರವಾಗಿ ಮರುಪ್ರತ್ಯಕ್ಷ ಆಗುತ್ತದೆ.
ಈ ಕಾವ್ಯದಲ್ಲಿ ಪರಮತ ಕುರಿತ ಅಸಹನೆ ಮತ್ತು ದೂಷಣೆ ಸಾಕಷ್ಟಿದೆ. ʻಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರಧರ್ಮಮುಮಂ ಪರವಿಚಾರಮುಮಂʼ (ನಿಜವಾದ ಚಿನ್ನ, ಸಂಪತ್ತು – ಒಳ್ಳೆಯ ವರ್ತನೆ ಎಂದರೆ ಪರಧರ್ಮವನ್ನೂ ಪರವಿಚಾರವನ್ನೂ ಸೈರಿಸಿಕೊಳ್ಳುವುದು) ಎಂಬ ಜೈನ ತತ್ವಕ್ಕೆ ಈ ಕಾವ್ಯ ವಿರುದ್ಧವಾದುದು. ಜಾತಿ ಧರ್ಮ ಸಿದ್ಧಾಂತಗಳನ್ನು ಮೀರಿ ಮನುಷ್ಯರನ್ನು ಪ್ರೀತಿಸುವುದನ್ನು ಸಾಹಿತ್ಯ ಪ್ರೇರೇಪಿಸಬೇಕು. ಸಮಾನ ಘನತೆಯಿಂದ ಸೌಹಾರ್ದಯುತವಾಗಿ ಬದುಕುವುದನ್ನು ಸಾಹಿತ್ಯ ಕಲಿಸಬೇಕು. ಆದರೆ ಈ ಕೆಲಸವನ್ನು ಯಶೋಧರಚರಿತೆ ಮಾಡುವುದಿಲ್ಲ. ಹಾಗಾಗಿ ಅಹಿಂಸೆಯ ಹೆಸರಿನಲ್ಲಿ, ಉತ್ಪ್ರೇಕ್ಷಿತ ನರಬಲಿ ಆಚಾರದ ವಿರೋಧದ ಹೆಸರಿನಲ್ಲಿ ಜೈನತತ್ವಗಳನ್ನು ಬೋಧಿಸುವ ಮತ್ತು ಬಲಿಯಾಚರಣೆ ಉಳ್ಳ ಸಮಾಜವನ್ನು ವಿಡಂಬಿಸುವ ಕಾವ್ಯ ಇದಾಗಿದೆ.
ಪುನರ್ಜನ್ಮ ಮತ್ತು ಆತ್ಮ ಪರಮಾತ್ಮ ಚಿಂತನೆ ಕೂಡ ಇದರ ಒಂದು ಮುಖ್ಯ ಭೂಮಿಕೆ. ಹೀಗೆ ಈ ಕಥನವು ಹಲವು ವೈದಿಕ ನಂಬಿಕೆ ಮತ್ತು ಜೈನ ಧಾರ್ಮಿಕ ತತ್ವ - ನಂಬಿಕೆಗಳನ್ನು ಹೇರುವ ಕೆಲಸವನ್ನೇ ಮಾಡುತ್ತದೆ. ಇಂದಿಗೆ ಇಂಥ ಕಥನದ ಭಿನ್ನ ಪ್ರಸಂಗಗಳು ಅಷ್ಟು ಪ್ರಸ್ತುತ ಅಲ್ಲ. ಅದಕ್ಕೆಂದೇ ನಮ್ಮ ವಿಮರ್ಶಾ ಪರಂಪರೆ ನಿತ್ಯ ಅಷ್ಟಾವಂಕ ಅಮೃತಮತಿಯರ ಪ್ರಸಂಗಕ್ಕೇ ಹೆಚ್ಚಿನ ಗಮನ ಕೊಟ್ಟು ಮಿಕ್ಕದ್ದನ್ನೆಲ್ಲ ಅಲಕ್ಷ್ಯ ಮಾಡಿರಬಹುದು.
"ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದ ಉತ್ತರ ಕರ್ನಾಟಕದ ನಿಮಗೆಲ್ಲ " ಬೆಂಗಳೂರು ಹೊಟ್ಟೆಯ ಹಸಿವು ನೀಗಿಸುತ್ತ...
"ಇಂದು ಶಿಕ್ಶಣ ಅಕ್ಶರ ಕಲಿಯುವುದಕ್ಕೆ, ಬದುಕು, ಸಮಾಜವನ್ನು ತಿಳಿದುಕೊಳ್ಳುವುದಕ್ಕೆ, ಉದ್ಯೋಗ ಪಡೆಯುವುದಕ್ಕೆ ಹೀಗೆ...
"ಕಥೆಗಳ ಆಯ್ಕೆಯ ಕ್ರಮವನ್ನು ಹೀಗೆ ಹೇಳುತ್ತಾರೆ `ಕಥೆಗಳ ಆಯ್ಕೆ ಕೂಡ ವ್ಯಕ್ತಿಯ ಆಸಕ್ತಿ, ಅಭಿರುಚಿ ಮತ್ತು ಮನೋಧರ್ಮ...
©2025 Book Brahma Private Limited.