ವಿಶೇಶಣಗಳು

Date: 01-02-2023

Location: ಬೆಂಗಳೂರು


''ಒಂದು ನಾಮಪದದ ಹಿಂದೆ ಕೆಲವೊಮ್ಮೆ ಎರಡೆರಡು ವಿಶೇಶಣ ಪದಗಳು ಬರಬಹುದು. ಉದಾ. ದೊಡ್ಡ ಕೆಂಪು ಮನೆ. ಇದರಲ್ಲಿ ಯಾವುದು ಯಾವುದನ್ನು ಹೊಗಳುತ್ತಿದೆ ಎಂಬುದು ತುಸು ಕುತೂಹಲವೆನಿಸಬಹುದು. ಸಾಮಾನ್ಯವಾಗಿ ಇಂತಾ ಸಂದರ‍್ಬದಲ್ಲಿ ಮೊದಲಿಗೆ ಬಂದ ರೂಪವು ವಿಶೇಶಣವಾಗಿರುತ್ತದೆ'' ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ವಿಶೇಶಣಗಳು’ ವಿಚಾರದ ಕುರಿತು ಬರೆದಿದ್ದಾರೆ.

ಸಾಮಾನ್ಯವಾಗಿ ವಿಶೇಶಣ ಎಂದರೆ ಹೊಗಳುತ್ತವೆ ಎಂದೆ ಹೇಳಲಾಗುತ್ತದೆ. ದಿನಜೀವನದಲ್ಲಿ ಹೊಗಳುವುದು ಎಂದರೆ ಇರುವ ಅರ‍್ತದಲ್ಲಿಯೆ ವ್ಯಾಕರಣದ ವಿಶೇಶಣವನ್ನೂ ತೆಗೆದುಕೊಳ್ಳಬಾರದು. ದಿನಜೀವನದಲ್ಲಿ ಹಲವು ಬಾರಿ ಯೋಗ್ಯತೆ ಇಲ್ಲದಿದ್ದರೂ, ಗುಣವಿಲ್ಲದಿದ್ದರೂ ಹೊಗಳುವುದು ಸಾಮಾನ್ಯ ಕಂಡುಬರುತ್ತದೆ. ವ್ಯಾಕರಣದ ವಿಶೇಶಣ ಎಂಬ ಪದವರ‍್ಗ ಹೀಗೆ ಹೊಗಳುವ ಕೆಲಸ ಮಾಡುತ್ತದೆಯಾದರೂ ಗುಣವಿಲ್ಲದೆಯೂ ಹೊಗಳುವುದು ಎಂದಲ್ಲ. ಒಂದು ವ್ಯಕ್ತಿ ಇಲ್ಲವೆ ವಸ್ತುವಿನ ಗುಣಸ್ವಬಾವಗಳನ್ನು ಅದರ ಸಾಮಾಜಿಕ ಸಕಾರಾತ್ಮಕ ಇಲ್ಲವೆ ನಕಾರಾತ್ಮಕ ಗುಣವನ್ನು ಗಮನಿಸದೆ ಹೊಗಳುವ ಕೆಲಸವನ್ನು ಮಾಡುವುದು ವಿಶೇಶಣ.

ವಿಶೇಶಣ ಎನ್ನುವುದು ಜಗತ್ತಿನ ಹೆಚ್ಚಿನ ಬಾಶೆಗಳಲ್ಲಿ ಒಂದು ಪ್ರದಾನ ಪದವರ‍್ಗ. ನಾಮಪದ ಮತ್ತು ಕ್ರಿಯಾಪದಗಳ ನಂತರ ದೊಡ್ಡಪ್ರಮಾಣದಲ್ಲಿ ಇರುವ ಪದವರ‍್ಗ. ಕನ್ನಡದಲ್ಲಿ ಕೆಲವು ಮೂಲಬೂತವಾದ ವಿಶೇಶಣ ಪದಗಳು ಇವೆ. ಒಳ್ಳೆ, ಕೆಟ್ಟ, ದೊಡ್ಡ, ಸಣ್ಣ, ದೂರ, ಸಮೀಪ ಮೊದಲಾದವು. ಉದಾ. ಒಳ್ಳೆ ಪುಸ್ತಕ, ಕೆಟ್ಟ ಪುಸ್ತಕ, ದೊಡ್ಡ ಮನೆ, ಸಣ್ಣ ಮನೆ, ದೂರದ ಊರು, ಸಮೀಪದ ಊರು.

ವಿಶೇಶಣಗಳಲ್ಲಿ ನಾಮಪದವನ್ನು ಹೊಗಳುವ ಮತ್ತು ಕ್ರಿಯಾಪದವನ್ನು ಹೊಗಳುವ ಎರಡು ಬಗೆಯನ್ನು ಕಾಣಬಹುದು. ಕನ್ನಡದಲ್ಲಿ ಇವುಗಳ ಬಳಕೆಯನ್ನು ಅವಲೋಕಿಸಿ ಇವೆರಡನ್ನು ಪ್ರತ್ಯೇಕ ಗುಂಪುಗಳಾಗಿ ಮಾಡುವ ಅವಶ್ಯಕತೆ ಇಲ್ಲ ಎಂದು ಎರಡನ್ನೂ ವಿಶೇಶಣ ಎಂಬ ಒಂದೆ ಗುಂಪಿನಲ್ಲಿ ಗುರುತಿಸಲಾಗುತ್ತದೆ. ಅದರೊಳಗೆ ನಾಮಪದಗಳನ್ನು ಹೊಗಳುವ ನಾಮವಿಶೇಶಣ ಮತ್ತು ಕ್ರಿಯಾಪದಗಳನ್ನು ಹೊಗಳುವ ಕ್ರಿಯಾವಿಶೇಶಣಗಳನ್ನು ನೋಡಬಹುದು.

ವಿಶೇಶಣಗಳು ಈ ಮೇಲೆ ಮಾತಾಡಿದಂತೆ ಸಾಮಾನ್ಯವಾಗಿ ವಸ್ತು, ವ್ಯಕ್ತಿ, ಪರಿಕಲ್ಪನೆಯೊಂದರ ಗುಣಸ್ವಬಾವಗಳನ್ನು ಪರಿಚಯಿಸುತ್ತವೆ. ಹೊಗಳುವುದು ಮೂಲಬೂತವಾಗಿ ವಿಶೇಶಣಗಳ ಕೆಲಸ. ಇದರ ಜೊತೆಗೆ ಇನ್ನೊಂದು ಮೂಲಬೂತವಾದ ಕೆಲಸವೂ ಇವಕ್ಕೆ ಇದೆ. ತಾನು ಹೊಗಳುವ ಪದದ ಅರ‍್ತವನ್ನು ಇದು ಮಿತಿಗೊಳಿಸುತ್ತದೆ. ಇದನ್ನು ಮುಂದೆ ಉದಾಹರಣೆಯೊಂದಿಗೆ ಮಾತಾಡಿದೆ. ಸಾಮಾನ್ಯವಾಗಿ ವಿಶೇಶಣವು ತಾನು ಹೊಗಳುವ ಪದಕ್ಕಿಂತ ಮೊದಲು ಬರುತ್ತದೆ. ಒಳ್ಳೆ ಹುಡುಗ, ಕೆಂಪು ಹೂ. ಇಲ್ಲಿ ಒಳ್ಳೆ ಮತ್ತು ಕೆಂಪು ಇವು ಕ್ರಮವಾಗಿ ಹುಡುಗ ಮತ್ತು ಹೂ ಎಂಬ ನಾಮಪದಗಳನ್ನು ಹೊಗಳುತ್ತಿವೆ. ಇಲ್ಲಿ ವಿಶೇಶಣ ಮೊದಲಿಗೆ ಬಂದು ಹೊಗಳಿಸಿಕೊಳ್ಳುವ, ವಿಶೇಶ್ಯ ಎಂಬ ಹೆಸರಿನಿಂದ ಪಾರಂಪರಿಕವಾಗಿ ಕರೆಸಿಕೊಳ್ಳುವ ನಾಮಪದ ಆನಂತರ ಬಂದಿದೆ. ಇವು ಹಿಂದುಮುಂದಾಗಿ ಬಳಕೆಯಾಗಲು ಸಾದ್ಯವಿಲ್ಲ. ಅಂದರೆ ಒಳ್ಳೆ ಹುಡುಗ ಎನ್ನುವುದು ಹುಡುಗ ಒಳ್ಳೆ ಎಂದು ಬಳಕೆ ಮಾಡಲು ಆಗದು. ಆದರೆ ಹಸಿರು ಗಿಳಿ ಇಂತ ಪದದಲ್ಲಿ ಗಿಳಿ ಹಸಿರು ಎಂದು ಬದಲಿಸಿ ಅರ‍್ತವತ್ತಾಗಿ ಬಳಸಲು ಸಾದ್ಯವಿದೆ. ಹಾಗೆ ಬಳಸಿದಾಗ ಒಂದು ಪಲ್ಲಟ ಕಾಣಿಸುತ್ತದೆ. ಹಸಿರು ಗಿಳಿ ಎಂಬ ಬಳಕೆಯಲ್ಲಿ ಮೊದಲಿಗೆ ಬಂದಿರುವ ಹಸಿರು ಇದು ತನ್ನ ಮುಂದಿನ ನಾಮಪದ ಗಿಳಿ ಇದನ್ನು ಹೊಗಳುತ್ತಿದೆ. ಹಾಗಾಗಿ ಇದು ವಿಶೇಶಣ. ಆದರೆ, ಇದನ್ನು ಗಿಳಿ ಹಸಿರು ಎಂದು ಬಳಸಿದಾಗ ಮೊದಲಿಗೆ ಬಂದಿರುವ ಗಿಳಿ ಇದು ತನ್ನ ಮುಂದೆ ಬಂದಿರುವ ಹಸಿರು ಇದನ್ನು ಹೊಗಳುತ್ತಿದೆ. ಅಂದರೆ, ಗಿಳಿ ಎನ್ನುವುದು ವಿಶೇಶಣದಂತೆಯೂ ಅದರ ನಂತರ ಬಂದಿರುವ ಮೂಲಬೂತವಾಗಿ ವಿಶೇಶಣವಾಗಿರುವ ಹಸಿರು ಎನ್ನುವುದು ನಾಮಪದವಾಗಿಯೂ ಇಲ್ಲಿ ವರ‍್ತಿಸುತ್ತವೆ. ಹಾಗಾಗಿ ವಿಶೇಶಣ ಮತ್ತು ವಿಶೇಶ್ಯ ಇವುಗಳ ಅನುಕ್ರಮವು ವಾಕ್ಯದಲ್ಲಿ ಎಲ್ಲಿಯೂ ಮುರುಗಡೆಯಾಗಲಾರದು.

ಕನ್ನಡದಲ್ಲಿ ಇನ್ನೊಂದು ವಿಶೇಶವೆಂದರೆ ಸಾಮಾನ್ಯವಾಗಿ ಯಾವುದೆ ನಾಮಪದ ವಿಶೇಶಣದಂತೆ ಬಳಕೆಯಾಗಬಲ್ಲದು. ಈ ಮೇಲಿನ ಉದಾಹರಣೆಯಲ್ಲಿ ಗಿಳಿ ಎಂಬ ನಾಮಪದ ವಿಶೇಶಣವಾಗಿ ಬಳಕೆಯಾಗಿರುವುದನ್ನು ಮಾತಾಡಿದೆವು. ಅದರೊಟ್ಟಿಗೆ ಕನ್ನಡದಲ್ಲಿ ವಿಶೇಶಣಗಳು ನಾಮಪದಗಳ ಹಾಗೆ ವರ‍್ತಿಸಬಲ್ಲವು. ಇದನ್ನೂ ಈ ಮೇಲಿನ ಉದಾಹರಣೆಯಲ್ಲಿ ಮೂಲಬೂತವಾಗಿ ವಿಶೇಶಣವಾಗಿರುವ ಹಸಿರು ಇದು ನಾಮಪದದ ಹಾಗೆ ಬಳಕೆಯಾಗಿರುವುದನ್ನು ನೋಡಿದೆವು. ನಾಮಪದಗಳು ವಿಶೇಶಣವಾಗಿ ಬಳಕೆಯಾಗುವುದಕ್ಕೆ ಒಂದೆರಡು ಉದಾಹರಣೆ ಇಲ್ಲವೆ ಸರಣಿಪ್ರಯೋಗದ ಉದಾಹರಣೆಯನ್ನು ಗಮನಿಸಬಹುದು. ಮನೆ ದೇವರು, ದೇವರ ಮನೆ. ಇವುಗಳಲ್ಲಿ ಎರಡರಲ್ಲಿಯೂ ಮೂಲಬೂತವಾಗಿ ನಾಮಪದಗಳಾಗಿರುವವೆ ಬಳಕೆಯಾಗಿವೆ. ಮೊದಲನೆಯದರಲ್ಲಿ ಮನೆ ಎನ್ನುವುದು ದೇವರು ಎನ್ನುವುದನ್ನು ಹೊಗಳುತ್ತಿದ್ದರೆ, ಎರಡನೆಯದರಲ್ಲಿ ದೇವರು ಇದು ಮನೆ ಇದನ್ನು ಹೊಗಳುತ್ತಿದೆ. ಇನ್ನು ಒಂದು ಸರಣಿಯನ್ನಾಗಿಸಿ ವಿಶೇಶಣ ಬಳಕೆಯ ವಿನ್ಯಾಸವನ್ನು ಗಮನಿಸೋಣ. ಕಾಡು ಬಳ್ಳಿ, ಬಳ್ಳಿ ಹೂ, ಹೂ ಬಣ್ಣ, ಬಣ್ಣದ ಮೆರುಗು ಹೀಗೆ ಸರಣಿ ದೊಡ್ಡದಾಗಿ ಬೆಳೆಯಬಹುದು.

ವಿಶೇಶಣಕ್ಕೆ ತಾನು ಹೊಗಳುವ ಪದದ ಅರ‍್ತವನ್ನು ಮಿತಿಗೊಳಿಸುವ ಲಕ್ಶಣ ಇದೆ ಎಂಬುದನ್ನು ಮೇಲೆ ಉಲ್ಲೇಕಿಸಲಾಯಿತು. ಅದನ್ನು ತುಸು ಗಮನಿಸೋಣ. ಈ ಮೇಲಿನ ಕೆಂಪು ಹೂ ಎಂಬ ಬಳಕೆಯನ್ನೆ ತೆಗೆದುಕೊಳ್ಳೋಣ. ಇದರಲ್ಲಿ ಬಳಕೆಯಾಗಿರುವ ನಾಮಪದ ಹೂ. ಸಾಮಾನ್ಯವಾಗಿ ಹೂ ಎಂಬ ನಾಮಪದವು ಯಾವುದೆ ಬಗೆಯ ಅಂದರೆ ಯಾವುದೆ ಬಣ್ಣದ, ಆಕಾರದ, ಗುಣದ, ವಾಸನೆಯ ಹೀಗೆ ಎಲ್ಲ ಬಗೆಯ ಹೂಗಳನ್ನೂ ಹೆಸರಿಸುತ್ತದೆ. ಆದರೆ, ಕೆಂಪು ಹೂ ಎಂದು, ಹೂ ಎಂಬುದಕ್ಕೆ ಕೆಂಪು ಎಂಬ ವಿಶೇಶಣವನ್ನು ತಂದು ಪೋಣಿಸಿದಕೂಡಲೆ, ಎಲ್ಲ ಬಣ್ಣದ ಹೂಗಳನ್ನೂ ಹೇಳುವ ಅರ‍್ತವನ್ನು ಹೊಂದಿದ್ದ ಹೂ ಎಂಬ ಪದವು ಈ ಬಳಕೆಯಲ್ಲಿ ಕೇವಲ ಕೆಂಪು ಬಣ್ಣದ ಹೂಗಳನ್ನು ಮಾತ್ರ ಹೇಳಲು ಬಳಕೆಯಾಗುತ್ತದೆ. ಅಂದರೆ, ಕೆಂಪು ಬಣ್ಣದವಲ್ಲದ, ಬೇರೆ ಬಣ್ಣದವುಗಳಾಗಿರುವ ಹೂಗಳನ್ನು ಕೆಂಪು ಹೂ ಎಂಬ ಬಳಕೆ ಒಳಗೊಳ್ಳುವುದಿಲ್ಲ. ಎಲ್ಲ ಬಣ್ಣದ ಹೂಗಳನ್ನೂ ಹೇಳುವ ಅರ‍್ತಸಾದ್ಯತೆಯನ್ನು ಮಿತಿಗೊಳಿಸಿ ಕೇವಲ ಕೆಂಪು ಬಣ್ಣದ ಹೂಗಳನ್ನು ಮಾತ್ರ ಹೇಳುವುದಕ್ಕೆ ಇಲ್ಲಿ ಅದು ಬಳಕೆಯಾಗುತ್ತದೆ. ಇದಕ್ಕೆ ಕಾರಣ, ಅದರ ಹಿಂದೆ ಅದನ್ನು ಹೊಗಳಲು ಬಳಕೆಯಾಗಿರುವ ವಿಶೇಶಣವೆ ಕಾರಣವಾಗಿದೆ.

ನಾಮಪದಗಳನ್ನು ಹೊಗಳುವ ವಿಶೇಶಣಗಳು ತಾನು ಹೊಗಳುವ ಗಟಕದ ಯಾವುದಾದರೂ ಗುಣವನ್ನು ಹೊಗಳಬಹುದು. ಅದು, ಒಳ್ಳೆ, ಕೆಟ್ಟ ಎಂದು ಗುಣವನ್ನು, ತಂಪು, ಬಿಸಿ ಎಂದು ಸ್ತಿತಿಯನ್ನು, ಕೆಂಪು, ಬಿಳಿ ಎಂದು ಬಣ್ಣವನ್ನು, ಎತ್ತರ, ಗಿಡ್ಡ ಎಂದು ಎತ್ತರವನ್ನು, ದೂರ, ಸಮೀಪ ಎಂದು ದೂರವನ್ನು, ದಪ್ಪ, ತೆಳು ಎಂದು ಅಳತೆಯನ್ನು, ಒಂದು, ಎರಡು ಎಂದು ಎಣಿಕೆಯನ್ನು ಹೀಗೆ ಹಲವು ಬಗೆಯಲ್ಲಿ ವಿಬಿನ್ನ ಗುಣಸ್ವಬಾವಗಳನ್ನು ವಿಶೇಶಣಗಳು ಹೊಗಳಬಹುದು.

ಇನ್ನು ಕ್ರಿಯಾಪದಗಳನ್ನು ಹೊಗಳುವ ಕ್ರಿಯಾವಿಶೇಶಣಗಳ ಬಗೆಗೆ ಒಂದೆರಡು ಮಾತನ್ನಾಡಬಹುದು. ಕ್ರಿಯೆಯನ್ನು ಹೊಗಳುವುದು ಇವುಗಳ ಕೆಲಸವಾದರೂ, ಸಾಮಾನ್ಯವಾಗಿ ಕ್ರಿಯೆಯನ್ನು ಹೊಗಳುವುದಕ್ಕೆಂದು ಬೇರೆ ಪದಗಳು ಇಲ್ಲ. ಸಣ್ಣ, ದೊಡ್ಡ ಇಂತ ವಿಶೇಶಣ ರೂಪಗಳ ಮೇಲೆ ಸಾಮಾನ್ಯವಾಗಿ –ಆಗಿ (ಆಗು+-ಇ) ಎಂಬ ರೂಪವನ್ನು ಸೇರಿಸಿ ಸಣ್ಣಾಗಿ, ದೊಡ್ಡದಾಗಿ ಎಂಬ ರೂಪಗಳನ್ನು ಸಾದಿಸಿ ಅವುಗಳನ್ನು ಕ್ರಿಯೆಯನ್ನು ಹೊಗಳಲು ಬಳಸಲಾಗುತ್ತದೆ. ಗಮನಿಸಿ, ಸಣ್ಣಾಗಿ ಕೇಳಿಸಿತು, ದೊಡ್ಡದಾಗಿ ಕಾಣಿಸಿತು. ಕೆಲವು ಪದಗಳು –ಆಗಿ ರೂಪವನ್ನು ಪಡೆದುಕೊಳ್ಳದೆ ಬಳಕೆಯಾಗಬಹುದು. ಕುತೂಹಲವೆಂದರೆ ಕನ್ನಡದಲ್ಲಿ ಹೀಗೆ ಕ್ರಿಯಾವಿಶೇಶಣವಾಗಿ ಬಳಕೆಯಾಗುವ ಹೆಚ್ಚಿನ ಸಂಕೆಯ ಪದಗಳು ಸಂಸ್ಕ್ರುತ, ಪರ‍್ಶಿಯನ್, ಇಂಗ್ಲೀಶು ಮೊದಲಾದ ಬಾಶೆಗಳಿಂದ ತೆಗೆದುಕೊಂಡಿರುವಂತವೆ ಆಗಿವೆ. ಉದಾ. ಶೀಗ್ರ, ಜಲ್ದಿ, ಪಾಸ್ಟ್. ಶೀಗ್ರ ಬಾ, ಜಲ್ದಿ ಬಾ, ಪಾಸ್ಟ್ ಬಾ. ಇವುಗಳನ್ನು ಶೀಗ್ರವಾಗಿ ಬಾ, ಪಾಸ್ಟಾಗಿ ಬಾ ಎಂದು ಬಳಸುವುದನ್ನು ಕಾಣಬಹುದು. ಜಲ್ದಿಯಾಗಿ ಬಾ ಎಂಬ ಬಳಕೆ ಸಾದ್ಯವಾದರೂ ಅಪರೂಪ.

ಒಂದು ನಾಮಪದದ ಹಿಂದೆ ಕೆಲವೊಮ್ಮೆ ಎರಡೆರಡು ವಿಶೇಶಣ ಪದಗಳು ಬರಬಹುದು. ಉದಾ. ದೊಡ್ಡ ಕೆಂಪು ಮನೆ. ಇದರಲ್ಲಿ ಯಾವುದು ಯಾವುದನ್ನು ಹೊಗಳುತ್ತಿದೆ ಎಂಬುದು ತುಸು ಕುತೂಹಲವೆನಿಸಬಹುದು. ಸಾಮಾನ್ಯವಾಗಿ ಇಂತಾ ಸಂದರ‍್ಬದಲ್ಲಿ ಮೊದಲಿಗೆ ಬಂದ ರೂಪವು ವಿಶೇಶಣವಾಗಿರುತ್ತದೆ. ಅಂದರೆ ಈ ಮೇಲಿನ ಉದಾಹರಣೆಯಲ್ಲಿ ಮೊದಲಿಗೆ ಬಂದಿರುವ ದೊಡ್ಡ ಎಂಬುದು ವಿಶೇಶಣ. ಇದು ಯಾವುದನ್ನು ಹೊಗಳುತ್ತದೆ ಎಂದರೆ, ಕೆಂಪು ಮನೆ ಎಂಬ ನಾಮಪದವನ್ನು, ಸಮಾಸಪದವನ್ನು ಹೊಗಳುತ್ತದೆ. ಬದಲಿಗೆ ಅದು ಕೆಂಪು ಎಂಬುದನ್ನಾಗಲಿ, ಮನೆ ಎಂಬುದನ್ನಾಗಲಿ ಒಂಟಿಯಾಗಿ ಹೊಗಳಲಾರದು. ಕೆಂಪು ಮನೆ ಎಂದು ಮಾತ್ರ ಬಳಸಿದಾಗ ಕೆಂಪು ಎಂಬುದು ವಿಶೇಶಣ ಮತ್ತು ಅದು ಮನೆ ಎಂಬ ನಾಮಪದವನ್ನು ಹೊಗಳುತ್ತದೆ.

ಹೀಗೆ ವಿಶೇಶಣಗಳು ಬಾಶೆಯ ಬಳಕೆಯಲ್ಲಿ ವಿಶೇಶವಾದ ಪಾತ್ರವನ್ನು ಹೊಂದಿರುತ್ತವೆ ಮತ್ತು ಇವುಗಳ ಬಳಕೆಯ ವಿನ್ಯಾಸ ಬಹು ಕುತೂಹಲದಾಯವಾಗಿರುತ್ತದೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...