ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’

Date: 12-02-2023

Location: ಬೆಂಗಳೂರು


''ಅಪ್ಪ ಅಮ್ಮ ಇಬ್ಬರೂ ಓದಿಲ್ಲ. ನಮ್ಮದು ಹನ್ನೆರಡು ಮಕ್ಕಳ ದೊಡ್ಡ ಕುಟುಂಬ. ಜೊತೆಗೆ ಬಡತನ ಕೂಡ ಬೆಂಬಿಡದೆ ಬೆನ್ನು ಹತ್ತಿತ್ತು. ಹನ್ನೆರಡು ಮಕ್ಕಳಲ್ಲಿ ಆರು ಮಕ್ಕಳು ತೀರಿಕೊಂಡರು. ಈಗ ನಾಲ್ಕು ಹೆಣ್ಣುಮಕ್ಕಳು ಇಬ್ಬರು ಗಂಡುಮಕ್ಕಳು ಇದ್ದೇವೆ. ಯಾರ ನೆರವಿಲ್ಲದೆಯೂ ಕಷ್ಟದಲ್ಲೇ ನಮ್ಮನ್ನು ಸಾಕಿದರು ಅಪ್ಪ ಅಮ್ಮ. ಮನೆಯಲ್ಲಿ ಯಾರೂ ಓದಲಿಲ್ಲ. ನಾನೊಬ್ಬ ಓದಿನ ಹಂಬಲ, ತುಡಿತದಿಂದ ಸ್ನಾತಕೋತ್ತರ ಪದವಿಯನ್ನು ಮುಗಿಸಿದೆ,” ಎನ್ನುತ್ತಾರೆ ವಾಯ್. ಜೆ. ಮಹಿಬೂಬ. ಅವರ ಸಾಹಿತ್ಯದ ಪಯಣದ ಕುರಿತು ಲೇಖಕಿ ಜ್ಯೋತಿ ಎಸ್ ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ಕಟ್ಟಿಕೊಟ್ಟಿದ್ದಾರೆ.

ಸಾಹಿತ್ಯ ಪ್ರಕಾರಗಳಲ್ಲಿ ಗಜಲ್ ಒಂದು ವಿಶಿಷ್ಟ ಬಗೆಯ ಸಾಹಿತ್ಯ. ಬರವಣಿಗೆ ಬಲ್ಲ ಎಲ್ಲರಿಗೂ ಗಜಲ್ ಬರೆಯಲಾಗುವುದಿಲ್ಲ. ಗಜಲ್ ವಾಚನ ಕೇಳುವುದಂತೂ ವಿಶೇಷ ಅನುಭೂತಿ. ವಿರಳ ವಿಶಿಷ್ಟ ಗಜಲ್ ರಚನೆಕಾರರಲ್ಲಿ ಒಬ್ಬರಾದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದವರಾದ ವಾಯ್. ಜೆ. ಮಹಿಬೂಬ ಅವರು ತಾಯಿ ಸೈಪನಬಿ ತಂದೆ ಏತೀಮ ಸಾಹೇಬ ಅವರ ಕಿರಿಯ ಮಗನಾಗಿ ಹುಟ್ಟಿ ಬಡತನದಲ್ಲಿಯೇ ಬೆಳೆದು ಚಿಗುರಿದ ಅದ್ಭುತ ಪ್ರತಿಭೆ... ಯರಗಲ್ ನಂತಹ ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಬಡತನದಲ್ಲೇ ಓದುತ್ತಾ ತಮ್ಮ ಪ್ರೌಢ ಶಿಕ್ಷಣ ಕಾಲದಿಂದಲೇ ಕಾವ್ಯಾಸಕ್ತಿ ಬೆಳೆಸಿಕೊಂಡು ಪ್ರಾರಂಭದಲ್ಲಿ ಗ್ರಾಮೀಣ ಸೊಗಡಿನ ಡೊಳ್ಳು ಹಾಗೂ ಭಜನಾ ಗೀತೆಗಳನ್ನು ರಚಿಸುತ್ತ ಇದ್ದರು. ಯರಗಲ್ ಗ್ರಾಮದ ಹಿರಿಯ ಸಾಹಿತಿಗಳಾದ ಶ್ರೀ ಎಂ. ಎಂ. ಕಲಬುರ್ಗಿ ಅವರಿಂದ ಪ್ರೇರಣೆಗೊಂಡು ಧಾರವಾಡ ಸೇರಿ ಬಿ. ಎ. ಪದವಿ ಪಡೆದು ಕನ್ನಡದಲ್ಲಿ ಎಂ. ಎ. ಸ್ನಾತಕೋತ್ತರ ಪದವಿಯನ್ನು ಪಡೆದರು. ನಿರಂತರ ಓದು, ಬರವಣಿಗೆ ಹಾಗೂ ಸಾಹಿತ್ಯ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚು ಗಜಲ್ ಗಳನ್ನು ರಚಿಸಿದ್ದಾರೆ. ಇವರ ಕವಿತೆ, ಗಜಲ್, ಕತೆ ಹಾಗೂ ಚುಟುಕುಗಳು ಪ್ರಜಾವಾಣಿ, ಕುಂದಾನಗರಿ, ವಿಜಯವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ನಮ್ಮೊಂದಿಗಾಡಿದ ಅವರ ಮಾತುಗಳನ್ನು ಓದುವ ಬನ್ನಿ.

'ಅಪ್ಪ ಅಮ್ಮ ಇಬ್ಬರೂ ಓದಿಲ್ಲ. ನಮ್ಮದು ಹನ್ನೆರಡು ಮಕ್ಕಳ ದೊಡ್ಡ ಕುಟುಂಬ. ಜೊತೆಗೆ ಬಡತನ ಕೂಡ ಬೆಂಬಿಡದೆ ಬೆನ್ನು ಹತ್ತಿತ್ತು. ಹನ್ನೆರಡು ಮಕ್ಕಳಲ್ಲಿ ಆರು ಮಕ್ಕಳು ತೀರಿಕೊಂಡರು. ಈಗ ನಾಲ್ಕು ಹೆಣ್ಣುಮಕ್ಕಳು ಇಬ್ಬರು ಗಂಡುಮಕ್ಕಳು ಇದ್ದೇವೆ. ಯಾರ ನೆರವಿಲ್ಲದೆಯೂ ಕಷ್ಟದಲ್ಲೇ ನಮ್ಮನ್ನು ಸಾಕಿದರು ಅಪ್ಪ ಅಮ್ಮ. ಮನೆಯಲ್ಲಿ ಯಾರೂ ಓದಲಿಲ್ಲ. ನಾನೊಬ್ಬ ಓದಿನ ಹಂಬಲ, ತುಡಿತದಿಂದ ಸ್ನಾತಕೋತ್ತರ ಪದವಿಯನ್ನು ಮುಗಿಸಿದೆ. ಅಪ್ಪಾಜಿ 2016ರಲ್ಲಿ ಹೃದಯಾಘಾತದಿಂದ ತೀರಿಕೊಂಡರು. ನಾನು ಪಿ. ಯು. ಸಿ. ಓದುವ ಹೊತ್ತಿಗೆ ಒಂದು ಹಂತದ ಸಾಹಿತ್ಯವನ್ನು ಓದಿಕೊಂಡಿದ್ದೆ. ಎಂ. ಎಂ. ಕಲಬುರ್ಗಿ ಅವರು ನನ್ನ ತಂದೆಯವರ ಸ್ನೇಹಿತರಾಗಿರುವುದರಿಂದ ಬಾಲ್ಯದಿಂದಲೇ ಅವರ ಪ್ರೇರಣೆ ನನಗಿತ್ತು. ಸಾಹಿತ್ಯದೊಳಗೆ ಸೇವೆ ಮಾಡಿ ಸಾಕಷ್ಟು ಸಾಧನೆ ಮಾಡಿದವರು ಅವರು. ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದು ಎಂ. ಎಂ. ಕಲ್ಬುರ್ಗಿ ಮೊದಲಿಗರು. ನಾನು ಸಾಹಿತ್ಯ ಲೋಕಕ್ಕೆ ಬರುವ ಮುಂಚೆ ಪ್ರೌಢ ಶಿಕ್ಷಣ ಓದುತ್ತಿರುವಾಗ ಕೊಕ್ಕರೆ ಕೊಕ್ಕರೆ ಬಾಯಿ ತೆಗೆದು ನಕ್ಕರೆ ಹಾಕುವೆ ಸಕ್ಕರೆ... ಝಣ ಝಣ ಝಣ ಜೇಬು ತುಂಬ ಹಣ ಮೇಲಕೆತ್ತಿ ಬಿಡಲು ಸದ್ದು ಠಣ್ ಠಣಾ ಠಣಾ... ಈ ಪದ್ಯಗಳು ಇಷ್ಟು ಚೆನ್ನಾಗಿದೆಯಲ್ಲ ಹೆಂಗ್ ಬರೀತಾರೆ? ಇದಕ್ಕೆ ಏನಾದರೂ ಹಿನ್ನಲೆ ಇದೆಯಾ ಎನ್ನುವ ಪ್ರಶ್ನೆಗಳು ನನ್ನಲ್ಲಿ ಆಗಾಗ ಬರುತ್ತಿದ್ದವು. ಆ ವಿಚಾರಗಳನ್ನು ಅಮ್ಮನ ಜೊತೆಗೆ ಹಂಚಿಕೊಳ್ಳುತ್ತಿದ್ದೆ'.

'ಬಂಡಾಯ ಸಾಹಿತ್ಯ ನನಗೆ ಬಹಳಷ್ಟು ಪ್ರಭಾವ ಬೀರಿದ್ದು. ಸಿದ್ದಲಿಂಗಯ್ಯನವರ ಗ್ರಾಮದೇವತೆ, ಒಡಲಾಳ ನನಗೆ ಹೆಚ್ಚು ಆಪ್ತ ಅನ್ನಿಸಿದವು. ನಾನು ಕೂಡ ಸಾಹಿತಿ ಆಗಬೇಕು ಅನ್ನಿಸಿದ್ದು ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಬಿ. ಎ. ಮೊದಲನೆ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವಾಗ. ನಾನು ಏಳನೇ ತರಗತಿಯಿಂದಲೇ ಸಣ್ಣ ಸಣ್ಣ ಕವಿತೆಗಳನ್ನು ಬರೆದು ಬರೆದು ನನ್ನಲ್ಲೇ ಇಟ್ಟುಕೊಳ್ಳುತ್ತಿದ್ದೆ. ಡೊಳ್ಳಿನ ಪದಗಳನ್ನು ಹೆಚ್ಚು ಕೇಳುತ್ತಿದ್ದೆ. ನಮ್ಮೂರಲ್ಲಿ ಒಬ್ಬರು ಮಹಾಲಿಂಗರಾಯ ಭಾಸ್ಕಿ ಎಂಬ ಡೊಳ್ಳಿನ ಕಲಾವಿದರಿದ್ದರು. ಅವರು ಕೂಡ ಬರೀತಾ ಇದ್ದರು. ಮಹಿಬೂಬ ಹೀಗೆ ಬರೆಯಬೇಕು ಅಂತ ನನಗೆ ಹೇಳಿ ಕೊಡುತ್ತಿದ್ದರು. ಇವರು ಬರೆಯುತ್ತಾರಲ್ಲ, ನಾನು ಯಾಕೆ ಪ್ರಯತ್ನಿಸಬಾರದು ಅಂತ ಗಜಾನನ ಸ್ತುತಿಗಳಿಂದ ಬರೆಯಲು ಪ್ರಾರಂಭಿಸಿದೆ. ಧಾರವಾಡಕ್ಕೆ ಹೋದಾಗ ನನಗೊಂದು ವೇದಿಕೆ ಸಿಕ್ತು. ಅಲ್ಲಿ ಚೆನ್ನವೀರ ಕಣವಿ ಅವರ ಮುಖಾಮುಖಿ ಪರಿಚಯವಾಯ್ತು. ಇವರೆಲ್ಲ ಪರಿಚಯ ಆದ ಮೇಲೆ ನನಗೆ ಒಂದು ಹಂತದ ಸಾಹಿತ್ಯ ಗೊತ್ತಾಗಿ ಬಿಡ್ತು. ವೀಣಾ ಶಾಂತೇಶ್ವರ್ ಅವರ ಮುಳ್ಳುಗಳು, ಗಂಡಸರು ಪುಸ್ತಕಗಳು ನನ್ನ ಮೇಲೆ ತುಂಬ ಪ್ರಭಾವ ಬೀರಿದವು. ಪುಸ್ತಕದಲ್ಲಿ ಬರುವ ಕ್ರೋಧ, ಹೆಣ್ಣಿನ ನೋವುಗಳ ವಿಚಾರಗಳು ಸಾಕಷ್ಟು ಇದ್ದವು. ಮಹಿಳೆಯರು ಪುರುಷರ ಬಗ್ಗೆ ಯಾಕೆ ಈ ರೀತಿ ಬರೆಯುತ್ತಾರೆ ಎನ್ನುವ ಆಲೋಚನೆಗಳು ನನ್ನನ್ನು ಚಿಂತೆಗೆ ಒಳಪಡಿಸಿದವು. ಆಗ ವಿಜಯ್ ದಬ್ಬೆ, ಮಲ್ಲಿಕಾ ಘಂಟಿ ಅವರ ಸಾಹಿತ್ಯವನ್ನು ಓದಿಕೊಂಡೆ. ಜೊತೆ ಜೊತೆಗೆ ಅವರ ಜೀವನ ಕೂಡ ಒಂದು ಸಾಹಿತ್ಯವೇ ಅನ್ನಿಸುತ್ತಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ದೇವಾಲಯ ಪ್ರವೇಶ ಮಾಡಿದ್ರೆ ರಕ್ತ ಕಾರಿಕೊಂಡು ಸಾಯ್ತಾರೆ ಅಂತ ಹೇಳಿ ಅವರನ್ನು ದೂರ ಇಟ್ಟಿದ್ರು. ಆಗ ಮಲ್ಲಿಕಾ ಘಂಟಿ ಮೇಡಂ ನೇರವಾಗಿ ಸತ್ತರೆ ನಾನು ಸಾಯ್ತಿನಿ ಅಂತ ದ್ಯಾವಮ್ಮನ ಗುಡಿ ಪ್ರವೇಶ ಮಾಡಿದರು. ಅವರ ಜೊತೆಗೆ ಐವತ್ತು ಮಂದಿ ಪ್ರವೇಶ ಮಾಡಿದ್ದು ದೊಡ್ಡ ಸ್ಫೂರ್ತಿಯಾಗಿ ಕಾಣಿಸಿತ್ತು. ಆಗ ನನಗನ್ನಿಸಿದ್ದು ಮಹಿಳೆಯರೂ ಈ ತರ ಗಟ್ಟಿ ಧ್ವನಿಯಾಗಿ ನಿಲ್ಲಬಹುದಲ್ಲ ಅಂತ ಹೇಳಿ ಈ ಮಹಿಳಾಪರ ಗಜಲ್ ಗಳನ್ನು ರಚಿಸಲು ಪ್ರಾರಂಭಿಸಿದೆ. ಆಗ ಬಂಡಾಯ ಗೀತೆಗಳು ಎನ್ನುವ ಕವನ ಸಂಕಲನವನ್ನು ಬರೆದೆ. ಅದರಲ್ಲಿ ಮಹಿಳೆಯರಿಗೆ ಸಂಬಂಧಪಟ್ಟ ಹಾಗೆ ಹೆಚ್ಚು ಕವಿತೆಗಳಿವೆ. ಗಂಡಸರೇಕೆ ಹೀಗೆ, ಮುಳ್ಳಿನ ಮೇಲೆ ನಿಂತಿದ್ದೇನೆ, ನಾನು ನೋಡುವ ಎಲ್ಲಾ ಲೋಕವೂ ಗರ್ಭವಾಗಿದೆ ಮುಂತಾದವು. ನನ್ನ ಎಲ್ಲಾ ಭಾವನೆಗಳು ನನ್ನ ಸಾಹಿತ್ಯವನ್ನು ಮತ್ತೂ ಜಾಗೃತಗೊಳಿಸಿದವು'.

'ಮುಕುಂದ ಲಮಾಣಿಯವರು ಕೆ. ಸಿ. ಡಿ. ಕಾಲೇಜಿನ ಭಾವ ಸಂಗಮ ವೇದಿಕೆಯ ಅಧ್ಯಕ್ಷರಾಗಿದ್ದರು. ಕಲೆ, ಭಿತ್ತಿಪತ್ರ, ಪೇಪರ್ ಕಟ್ಟಿಂಗ್ಸ್ ಗಳನ್ನು ವಾರ್ಷಿಕ ಪತ್ರಿಕೆಯಾದ ನಿನಾದದಲ್ಲಿ ಬರೆಯುತ್ತಿದ್ದರು. ನಾನು ಬಿ. ಎ. ಮೊದಲನೆ ವರ್ಷದಲ್ಲಿ ಓದುತ್ತಿದ್ದಾಗ ನಿನಾದ ಅಂತಲೇ ಹೆಸರು ಕೊಟ್ಟು ನಿನಾದ ಕೇವಲ ನನ್ನೊಳಗಿನ ನಾದವಲ್ಲ ಇದು ಈ ಕೆ ಸಿ ಡಿ ಕಾಲೇಜಿನ ನಾದ ಎಂಬ ಕವಿತೆಯನ್ನು ಬರೆದಿದ್ದೆ. ಅದು ನಿನಾದದಲ್ಲಿ ಪ್ರಕಟವಾದ ಮೇಲೆ ಕಾಲೇಜಿನ ಪ್ರಾಂಶುಪಾಲರಿಗೆ ಗೊತ್ತಾಗಿ ಅವರಿಗೆ ಹೆಚ್ಚು ಆಪ್ತವೆನಿಸಿತ್ತು. ಆಗಿನಿಂದ ಅವರು ನನಗೆ ಹೆಚ್ಚು ಪ್ರೋತ್ಸಾಹಿಸುತ್ತಿದ್ದರು. ಕತೆ, ವಿಮರ್ಶೆ, ಬಂಡಾಯ ಗೀತೆಗಳನ್ನು ಮೂರು ವರ್ಷದಿಂದಲೂ ಬರೆಯುತ್ತಿದ್ದೇನೆ. ಆಜಾದ್ ಎಂಬ ಕಾವ್ಯ ನಾಮದಿಂದ ಸಾವಿರಕ್ಕೂ ಹೆಚ್ಚು ಗಜಲ್ ಗಳನ್ನು ರಚಿಸಿದೆ. ಜೊತೆಗೆ ಆಜಾದ್ ನಾಮ, ಅಕ್ಬರ್ ನಾಮ, ಮಹಿಮೆ ಆತು ಎಂಬ ಪದ್ಯಗಳನ್ನು ಬರೆಯುತ್ತೇನೆ. ಕಬೀರ್ ರವರ ದೋಹೆಗಳಂತೆ ಇವು ಎರಡು ಸಾಲಿನ ಪದ್ಯಗಳಿವು. ದೈನಂದಿನ ಜೀವನ ಸಾಗಲು ಸಾಹಿತ್ಯ ನನಗೆ ರೂಪು ರೇಷೆಗಳನ್ನು ಕೊಡುತ್ತದೆ. ನೋವಾದಾಗಲು ಖುಷಿಯಾದಾಗಲು ಕಾವ್ಯವನ್ನು ಬರೆಯುತ್ತೇನೆ ಇಲ್ಲವೇ ಓದುತ್ತೇನೆ. ನೋವಾದಾಗ ಮಾತ್ರ ಕಾವ್ಯ ಹುಟ್ಟುವುದಿಲ್ಲ. ಖುಷಿಯಾದಾಗಲೂ ಕಾವ್ಯ ಹುಟ್ಟುತ್ತದೆ. ಆಜಾದಿ ಗಜಲ್ ಅಂದರೆ ಬಂಡಾಯಕ್ಕೆ ಸಂಬಂಧಪಟ್ಟ ಗಜಲ್ ಗಳನ್ನು ಹೆಚ್ಚು ಬರೆಯುತ್ತೇನೆ. ಉದಾ: 'ಸತ್ತವರ ಮನೆಯ ಮುಂದೆ ಅತ್ತು ಹೋಗಲು ಬಂದಿದ್ದೀರಿ, ಅತ್ತವರಿಗೆ ಸತ್ತವರೆದುರು ಸುಳ್ಳು ಹೊಗಳಲು ಬಂದಿದ್ದೀರಿ, ಕತ್ತಲಿಗೆ ನಿನ್ನ ಗಲೀಜುಗಳು ಗೊತ್ತಾಗಬಹುದೇನೋ, ಬೆಳಕಿನಲಿ ನಿಮ್ಮ ಭಸ್ಮವನ್ನು ಹರಡಲು ಬಂದಿದ್ದೀರಿ' ಮುಂತಾದವು. ನಾನು ಇಷ್ಟ ಪಡುವ ಗಜಲ್ ಕವಿಗಳು ಅಲ್ಲಾಮ ಇಕ್ಬಾಲ, ಮಿರ್ಜಾ ಗಾಲಿಬ್, ನಸ್ರತ್ ಪತೆ ಅಲಿ ಖಾನ್'.

'ಇಲ್ಲಿಯವರೆಗೆ ಇಪ್ಪತ್ತೈದು ಕವನ ಸಂಕಲನಗಳ ವಿಮರ್ಶೆ ಮಾಡಿದ್ದೇನೆ. ವಿಮರ್ಶೆ ಎನ್ನುವುದಕ್ಕಿಂತ ವಿಶ್ಲೇಷಣೆ ಅನ್ನಬಹುದು. 'ಚಿಮಣಿ, ಬೆಳಕಿನ ಬುಡಕಿನ ಕತ್ತಲು, ದೇವರಮಗ' ನನ್ನ ಕಥಾ ಸಂಕಲನಗಳು. ಈಗ '1776' ಎಂಬ ಐತಿಹಾಸಿಕ ಕಾದಂಬರಿ ಬರೆಯುತ್ತಿದ್ದೇನೆ. 1776 ಎನ್ನುವುದು ಮೈಲುಗಲ್ಲು ಕರ್ನಾಟಕದ ಹುಡುಗ 1776 ಕಿ. ಮೀ. ನಡೆದುಕೊಂಡು ಹೋಗಿ ಅಷ್ಟು ದೂರ ಸಾಗಿದ ಮೇಲೆ ಪಾಕಿಸ್ತಾನದ ಮುಸ್ಲಿಂ ಹುಡುಗಿಯ ಜೊತೆಗೆ ಪ್ರೇಮಾಂಕುರವಾಗುತ್ತದೆ. ಕೊನೆಗೆ ಇಬ್ಬರು ಒಬ್ಬರನ್ನೊಬ್ಬರು ಅಗಲಿ ಬದುಕಿರಲಾರದಷ್ಟು ಪ್ರೀತಿ ಗಾಢವಾಗಿರುತ್ತದೆ. ಆ ಸಂದರ್ಭದಲ್ಲಿ ಸ್ವಾತಂತ್ರ್ಯ ಸಿಕ್ಕು ದೇಶ ವಿಭಜನೆಯಾಗುತ್ತದೆ. ಹುಡುಗಿ ಪಾಕಿಸ್ತಾನಕ್ಕೆ ಹೋಗುತ್ತಾಳೆ. ಈತ ಭಾರತದಲ್ಲಿಯೇ ಉಳಿದುಕೊಂಡು ಬಿಡುತ್ತಾನೆ. 1776 ರಲ್ಲಿ ಅವನು ಸತ್ತು ಹೋಗುತ್ತಾನೆ. ಅದರ ಮೈಲಿಗಲ್ಲು ಇನ್ನೂ ಇದೆ ಎಂಬ ಕಲ್ಪನೆ ಆಧಾರಿತ ಇದರ ಸುತ್ತ ಹೆಣೆದ ಕಾದಂಬರಿ. ನನ್ನ ನೋವು, ನಲಿವು ಎಲ್ಲಕ್ಕೂ ಕಾವ್ಯದ ಮುಖಾಂತರ ಪರಿಹಾರ ಕಂಡುಕೊಳ್ಳುತ್ತೇನೆ. ದಲಿತರ ಮೇಲೆ, ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ, ಕಂದಾಚಾರ, ಅತ್ಯಾಚಾರಗಳು ನನ್ನನ್ನು ತುಂಬ ಕಾಡುತ್ತವೆ. ಮಹಿಳೆಯರ ನೋವಿಗೆ ನನ್ನೊಳಗಿನ ಜೀವ ಹೆಚ್ಚು ಮಿಡಿಯುತ್ತದೆ. ಆಗ ಕವಿತೆಗಳು ಹುಟ್ಟುತ್ತವೆ. ಓದುಗದೊರೆ, ಸುದ್ದಿದಿನ, ಗೋವರ್ಧನ, ಜನ ಮಿಡಿತ ಪತ್ರಿಕೆಗಳಲ್ಲಿ ನನ್ನ ಕವಿತೆಗಳು, ಕತೆಗಳು, ವಿಮರ್ಶೆಗಳು ಪ್ರಕಟವಾಗುತ್ತವೆ. ಕೊನೆಯವರೆಗೆ ಸಾಹಿತ್ಯ ಸೇವೆ ಮಾಡಬೇಕು ಎನ್ನುವ ಆಲೋಚನೆಯಿದೆ' ಎಂಬ ಮಾತುಗಳನ್ನಾಡುತ್ತಾರೆ.

ಮೆಹಬೂಬ್ ಅವರ ಸಾಹಿತ್ಯ ಸೇವೆಗೆ ಕರುನಾಡ ಸಿರಿ ರತ್ನ ರಾಜ್ಯ ಪ್ರಶಸ್ತಿ, ತ ರಾ ಸು ರತ್ನ ರಾಜ್ಯ ಪ್ರಶಸ್ತಿ ಸೇರಿದಂತೆ ಸನ್ಮಾನ ಪುರಸ್ಕಾರಗಳು ಸಂದಿವೆ. ಪ್ರೊಫೆಸರ್ ವೃತ್ತಿಯಲ್ಲೇ ಮುಂದುವರೆಯುತ್ತಾ ಕನ್ನಡದಲ್ಲಿ ಪಿ. ಹೆಚ್. ಡಿ. ಮಾಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಅದೆಲ್ಲ ಆದಷ್ಟು ಬೇಗ ಈಡೇರಲಿ. ಬರವಣಿಗೆ ನಿರಂತರವಾಗಿರಲಿ. ಇವರ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ ಎಂದು ಈ ಯುವ ಗಜಲ್ ಕವಿ, ಸಾಹಿತಿ ವಾಯ್. ಜೆ. ಮೆಹಬೂಬ ಅವರು ಇನ್ನೂ ಉನ್ನತ ಮಟ್ಟದ ಸಾಧನೆಗೈಯಲಿ ಎಂದು ಹಾರೈಸೋಣ.

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

MORE NEWS

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...

ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

01-12-2024 ಬೆಂಗಳೂರು

"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...

‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ

27-11-2024 ಬೆಂಗಳೂರು

"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...