“ಒಟ್ಟಿನಲ್ಲಿ ಕೆಂಪನಂಜಮ್ಮಣಿಯವರ ಜೀವನ ಸಾಧನೆ ಅಮೋಘವಾಗಿ ಮೂಡಿ ಬಂದಿದೆ. ಉತ್ತಮ ಕೃತಿ,” ಎನ್ನುತ್ತಾರೆ ಸಂಜಯ್ ಮಂಜುನಾಥ್. ಅವರು ಗಜಾನನ ಶರ್ಮ ಅವರ “ಕೆಂಪನಂಜಮ್ಮಣ್ಣಿ” ಕೃತಿ ಕುರಿತು ಬರೆದ ವಿಮರ್ಶೆ.
ಮೈಸೂರು ಎಂದ ತಕ್ಷಣ ಒಂದು ಆಪ್ತ ಭಾವ ಮೂಡುತ್ತದೆ. ಆ ಭಾವದ ಮೂಲಸೆಲೆ ಎಂದರೆ ಅಲ್ಲಿನ ಪಾರಂಪರಿಕ ವಾತಾವರಣ. ಅಂತಹ ವಾತಾವರಣದ ನಿರ್ಮಾತೃಗಳಲ್ಲಿ ಅಗ್ರಗಣ್ಯರಾದ ರಾಜಮಾತೆ ಕೆಂಪನಂಜಮ್ಮಣಿಯವರ ಜೀವನಗಾಥೆ ಈ ಕೃತಿಯಲ್ಲಿದೆ.
ನಮ್ಮ ರಾಷ್ಟ್ರಗೀತೆಯ ರಾಗರೂಪದ ಮೂಲ ಮೈಸೂರು ಸಂಸ್ಥಾನದ ನಾಡಗೀತೆಯಿಂದ ಪ್ರೇರಣೆ ಪಡೆದಿದ್ದು ಎಂಬ ಅಚ್ಚರಿಯ ಭಾವ ದೊಂದಿಗೆ ಶುರುವಾಗುವ ಕಾದಂಬರಿ, ಕ್ರಮೇಣ ಸಾಗುವುದು ಮೈಸೂರು ಸಂಸ್ಥಾನ ಬ್ರಿಟಿಷ್ ಇಂಡಿಯಾದಲ್ಲಿಯೇ ಹೇಗೆ ಅತ್ಯುತ್ತಮ ಸಂಸ್ಥಾನವಾಗಿ ಒಡ ಮೂಡಿತು ಎಂಬುದನ್ನ ಬಿತ್ತರಿಸುವುದರಲ್ಲಿ.
ಇದಕ್ಕೆಲ್ಲ ಮೂಲ ಕಾರಣ ಒಡೆಯರ್ ರವರ ಕನಸುಗಳು. ಆ ಕನಸುಗಳನ್ನು ಗಟ್ಟಿಯಾಗಿ ನೆಲೆಗೊಳ್ಳಲು ಕಾರಣರಾಗಿದ್ದು ರಾಜಮಾತೆ ಮತ್ತು ಅವರಿಗೆ ಒತ್ತಾಸೆಯಾಗಿದ್ದ ಶೇಷಾದ್ರಿ ಅಯ್ಯನವರು.
13ನೇ ವಯಸ್ಸಿಗೆಲ್ಲ ಮದುವೆಯಾಗಿ, 14ನೇ ವಯಸ್ಸಿನಲ್ಲಿ ಮಗುವನ್ನು ಹೆತ್ತು, 28ನೇ ವಯಸ್ಸಿಗೆ ಬರುವಷ್ಟರಲ್ಲಿ ಐದು ಮಕ್ಕಳ ತಾಯಿಯಾಗಿ, ಆತ್ಮಸಖನಂತಿದ್ದ ಪತಿಯನ್ನು ಕಳೆದುಕೊಳ್ಳುವ ರಾಜಮಾತೆಯವರು.. ಲೇಡಿ ಮೆಗ್ಗಾನ್, ವೆಂಕಟಕೃಷ್ಣಯ್ಯನವರು ಮತ್ತು ಮುಂತಾದ ವ್ಯಕ್ತಿಗಳ ಮಾತುಗಳಿಗೆ ಬೆಲೆ ಕೊಟ್ಟು, ಮಗನಾದ ಕೃಷ್ಣರಾಜರಿಗಾಗಿ ಮತ್ತು ಪ್ರಜೆಗಳ ಹಿತಕ್ಕಾಗಿ ರೀಜೆಂಟರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.
ತಮ್ಮ 7 ವರ್ಷಗಳ ಅಧಿಕಾರಾವಧಿಯಲ್ಲಿ ಅವರು ಸಾಧಿಸಿದ ಕಾರ್ಯಗಳು ಅನೇಕ..
"ವಿಕ್ಟೋರಿಯಾ ಆಸ್ಪತ್ರೆ, ಮಾರೀಕಣಿವೆ ಅಣೆಕಟ್ಟು, ಹೊಸದಾಗಿ ನಿರ್ಮಿಸಿದ ಅರಮನೆ, ಶಿವನಸಮುದ್ರದ ವಿದ್ಯುತ್ ಸ್ಥಾವರ, ವಿಜ್ಞಾನ ಮಂದಿರದ ಪೂರ್ವ ತಯಾರಿ, ಬಾಲ್ಯ ವಿವಾಹ ಪದ್ದತಿ ರದ್ದುಗೊಳಿಸಿದ್ದು, ವಿದೇಶಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಕೆರೆಗಳ ನಿರ್ಮಾಣ, ರೈಲ್ವೆ ವಿಸ್ತರಣೆ. ಮಲೆನಾಡಿಗೆ ರೈಲು, ಪ್ಲೇಗ್ ನಿಯಂತ್ರಣಕ್ಕಾಗಿ ನಗರ ಪಟ್ಟಣಗಳ ನೈರ್ಮಲೀಕರಣ, ಬೆಂಗಳೂರು ಮೈಸೂರು ನಗರಗಳ ವಿಸ್ತರಣೆ, ಶಾಶ್ವತ ಕೊಳಾಯಿ ಕುಡಿಯುವ ನೀರು ಯೋಜನೆ."
ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಪ್ರಗತಿಪಥವನ್ನು ಸಾಧಿಸಿ ಮೈಸೂರಿನ ತಾಯಿಬೇರಾಗುತ್ತಾರೆ. ಇಷ್ಟೆಲ್ಲಾ ಸಾಧನೆಯ ನಡುವೆ ಮಕ್ಕಳ ಮೆಚ್ಚಿನ ತಾಯಿಯಾಗಿ, ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವುದಕ್ಕೆ ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ಸಮನ್ವಯದಲ್ಲಿ ಬೆಳೆಸುತ್ತಾರೆ.
ಲೇಡಿ ಮೆಗ್ಗಾನ್ ರೊಂದಿಗಿನಾ ಮಾತುಕತೆಗಳು, ಚಿನ್ನದ ಗಣಿಯ ವಿಚಾರದಲ್ಲಿ ವೆಂಕಟ ಕೃಷ್ಣಯ್ಯ ಅವರೊಂದಿಗೆ ನಡೆದ ಜಟಾಪಟಿ, ಬೈರಾಗಿಯ ಮಾತಿನ ಚುಚ್ಚುಮದ್ದುಗಳು, ಹೊನ್ನವ್ವೆಯ ತಾಯ್ತನದ ನುಡಿಗಳು..
ಈ ಮೇಲಿನ ಚಿತ್ರಗಳಲ್ಲಿ ಬರುವ ಸಂಭಾಷಣೆಯ ಸೊಗಸುಗಾರಿಕೆ ಅತ್ಯುತ್ತಮವಾದುದು.
ಒಟ್ಟಿನಲ್ಲಿ ಕೆಂಪನಂಜಮ್ಮಣಿಯವರ ಜೀವನ ಸಾಧನೆ ಅಮೋಘವಾಗಿ ಮೂಡಿ ಬಂದಿದೆ. ಉತ್ತಮ ಕೃತಿ.
ಪುಸ್ತಕ ಓದುವಾಗ ಸಿಕ್ಕಿದ ಕೆಲವು ಸಾಲುಗಳು
*ಫಲಿತಾಂಶ ಉತ್ತಮವಾಗಲು ಯಾವತ್ತೂ ದೊಡ್ಡ ಹೆಜ್ಜೆಗಳನ್ನೇ ಇಡಬೇಕಿಲ್ಲ. ಇಡುವ ಹೆಜ್ಜೆಗಳನ್ನು ತುಸು ಸೂಕ್ಷ್ಮವಾಗಿ ಗಮನಿಸಿ. ಸರಿ ದಾರಿಯಲ್ಲಿ, ಸರಿ ದಿಕ್ಕಿನಲ್ಲಿ ಇಟ್ಟರೆ ಸಾಕು.
*ಅಯ್ಯಾಜಿ, ಪಟ್ಟವೇರಿದ ಮೇಲೆ ಜವಾಬ್ದಾರಿ ಹೆಚ್ಚು ಮಗೂ, ಎಲ್ಲ ವಿಷಯಗಳ ಕುರಿತೂ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕಾಗುತ್ತದೆ. ಎಲ್ಲ ವಿಷಯಗಳನ್ನೂ ಗಮನಿಸಬೇಕಾಗುತ್ತದೆ. ಭೇಟಿಯಾಗಲು ಬಂದವರನ್ನು ಗೌರವ ದಿಂದ ಮಾತನಾಡಿಸಬೇಕು. ಅವರೊಡನೆ ಘನತೆಯಿಂದ ವರ್ತಿಸಬೇಕು. ಎತ್ತರದಲ್ಲಿ ಕುಳಿತವರನ್ನು ಎಲ್ಲರೂ ಗಮನಿಸುತ್ತಿರುತ್ತಾರೆ. ಸೌಜನ್ಯದಿಂದ ವರ್ತಿಸಿದರೆ ಮೆಚ್ಚಿಕೊಳ್ಳುತ್ತಾರೆ. ತುಸು ಒರಟಾಗಿ ವರ್ತಿಸಿದರೂ ದೂರುತ್ತಾರೆ. ಮೃದುವಾದ ಮಾತು. ವಿನಯದ ವರ್ತನೆ ಬಹಳ ಮುಖ್ಯ ವಿನಯವೇ ವ್ಯಕ್ತಿತ್ವಕ್ಕೆ ಭೂಷಣ. ನೆನಪಿಟ್ಟುಕೋ ಮಗೂ. ಒಮ್ಮೆ ಒರಟರೆಂಬ ಅಪಕೀರ್ತಿ ಹಬ್ಬಿದರೆ, ನಂತರ ಅದರಿಂದ ಬಿಡುಗಡೆ ಬಹುಕಷ್ಟ.
*ಅಮ್ಮನೆಂದರೆ ಎದೆಗೆ ಒದ್ದರೂ ಮಗುವನ್ನು ಎತ್ತಿ ಎದೆಗೊತ್ತಿಕೊಳ್ಳುವ ವಾತ್ಸಲ್ಯದ ಜೀವ, ಪ್ರಭುತ್ವ ನಡೆಸುವವರಿಗೆ ಪ್ರಜೆಗಳ ತಪ್ಪು ಒಪ್ಪುಗಳನ್ನು ಸಹನೆಯಿಂದ ತೂಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ತಾಯ್ತನ ಬೇಕು.
*ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ. ನಮ್ಮ ಪ್ರತಿ ಮಾತು, ವರ್ತನೆಗಳಿಗೆ ಸಮರ್ಥನೆ ಬೇಕಿಲ್ಲ. ಸಹಜವಾಗಿ ಎದೆಯೊಳಗೆ ಬದ್ಧತೆ ಮತ್ತು ಪ್ರಾಮಾಣಿಕತೆಗಳಿದ್ದರೆ ಸಾಕು. ಅಂತರಂಗ ಬಹಿರಂಗ ಎರಡಾಗದಿದ್ದರಾಯಿತು. ನಮ್ಮನ್ನು ನಾವೆಷ್ಟೇ ಒಳ್ಳೆಯವರೆಂದು ಭಾವಿಸಿಕೊಂಡರೂ, ಅಂತಿಮವಾಗಿ ನಾವೂ ಕೇವಲ ಮನುಷ್ಯರು. ಪರಿಪೂರ್ಣರಲ್ಲ.
"ಮಾನವೀಯ ಮೌಲ್ಯಗಳಿಗೆ ದನಿಯಾದ ಈ ಕಥೆಗಳಿಗೆ ಒಮ್ಮೆ ಜೀವ ಸವರಿ, ಝಲ್ಲೆನಿಸಿಬರುವ ಶಕ್ತಿಯಿದೆಯೆಂದರೆ ಅತಿಶಯೋಕ್ತಿಯಲ...
"ಗಿರೀಶ್ ಕಾರ್ನಾಡ್ ಅವರ "ಹೂವು" ನಾಟಕ ಅರ್ಚಕನೊಬ್ಬ ವೇಶ್ಯೆಗೆ ಒಲಿದು , ಹೂಗಳಿಂದ ಅವಳನ್ನು ಸಿಂಗರಿಸು...
"ಒಂದು ಜೀವಂತವಾದ, ಚಲನಶೀಲವೂ ಸಂವೇದನಾಶೀಲವೂ ಆದ ಸಂಸ್ಕೃತಿ, ಸಮುದಾಯ ಅಥವಾ ಸಿದ್ಧಾಂತವು ತನ್ನನ್ನು ತಾನೇ ತಿದ್ದಿಕ...
©2025 Book Brahma Private Limited.